Saturday, June 13, 2009

ಸೋರುತಿಹದು ಮನಿಯ ಮಾಳಿಗಿ

ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ಸಾಧಕರು, ತಾವು ಈ ದರ್ಶನಕ್ಕೆ ಅರ್ಹರೊ ಎಂದು ತಮ್ಮನ್ನೆ ಪರೀಕ್ಷಿಸಿಕೊಳ್ಳುವದು ಸಹಜ. ಕನ್ನಡ ನಾಡಿನಲ್ಲಿ ಬಾಳಿದ, ಇಲ್ಲಿಯ ನಾಡಿಗರ ಮನಸ್ಸನ್ನು ಬೆಳಗಿದ ಇಬ್ಬರು ಅನುಭಾವಿಗಳಾದ ಬಸವಣ್ಣ ಹಾಗೂ ಶರೀಫರು ಇಂತಹ ಭಾವನೆಗಳನ್ನು ತಮ್ಮ ವಚನ ಹಾಗೂ ಹಾಡಿನಲ್ಲಿ ವ್ಯಕ್ತಪಡಿಸಿದ್ದಾರೆ.

ಇವರಲ್ಲಿ ಮೊದಲಿಗರಾದ ಬಸವಣ್ಣನವರ ವಚನವನ್ನೇ ಗಮನಿಸಿರಿ:

“ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ
ಕೂಡಲಸಂಗಮ ದೇವಾ!”

ಬಸವಣ್ಣನವರು ತಮ್ಮ ತನು ಹಾಗೂ ಮನವನ್ನು ಮನೆಗೆ ಹೋಲಿಸಿ, ಈ ಮನೆಯಲ್ಲಿ ಕೇವಲ ಕಸ ಕಡ್ಡಿ ತುಂಬಿಕೊಂಡಿದೆ; ಈ ಮನೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಒಡೆಯನು ಇಲ್ಲವಲ್ಲ ಎಂದು ವಿಷಾದಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸುವ ಒಡೆಯ ಅಂದರೆ ತಿಳಿವನ್ನು ಪಡೆದ ಆತ್ಮ ಅಥವಾ ಪರಮಾತ್ಮ.

ಇದರಂತೆಯೆ, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬಾಳಿದ ಶರೀಫರು ಸಹ ಮನೆಯನ್ನು ಮನಸ್ಸಿಗೆ ಅಥವಾ Selfಗೆ ಹೋಲಿಸಿ ಹಾಡಿದ್ದಾರೆ. ಶರೀಫರ ಹಾಡು ಹೀಗಿದೆ:

ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ
ಸೋರುತಿಹದು ಮನಿಯ ಮಾಳಿಗಿ ||ಪಲ್ಲ||

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||೧||

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||೨||

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||೩||

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||೪||

ಶರೀಫರು ಜೀವಿಸಿದ್ದ ಬೆಳವಲ ನಾಡಿನಲ್ಲಿ ಮಳೆ ಕಡಿಮೆ. ಆದುದರಿಂದ ಮನೆಯ ಮೇಲ್ಭಾಗವು (roof) ಮಣ್ಣಿನದಾಗಿರುತ್ತಿತ್ತು. ಇದಕ್ಕೆ ಮೇಲ್ಮುದ್ದಿಯ ಮನೆ ಎಂದು ಹೇಳುತ್ತಾರೆ. ಈ ಮೇಲ್ಮುದ್ದಿಗೆ ಆಧಾರ ಎಂದು ಕೆಳಭಾಗದಲ್ಲಿ ಕಟ್ಟಿಗೆಯ ತೊಲೆ ಹಾಗೂ ಜಂತಿಗಳನ್ನು ಬಳಸಿರುತ್ತಾರೆ.
ಮಣ್ಣಿನ ಮೇಲ್ಮುದ್ದಿಯಾಗಿರುವದರಿಂದ, ಇಲ್ಲಿ ಹುಲ್ಲು ಬೆಳೆಯುವದು ಸ್ವಾಭಾವಿಕ. ತೇವಾಂಶದಿಂದಾಗಿ ತೊಲೆ ಹಾಗೂ ಜಂತಿಗಳು ಕೆಡುವದೂ ಸಹ ಸ್ವಾಭಾವಿಕ. ಇದರಿಂದಾಗಿ ಮನೆಯ ಮಾಳಿಗೆ ಸೋರಲು ಪ್ರಾರಂಭವಾಗುತ್ತದೆ.
ಈ ಮೇಲ್ಮುದ್ದಿಯನ್ನು ಮಳೆಗಾಲಕ್ಕಿಂತ ಮೊದಲೇ ದುರಸ್ತು ಮಾಡಬೇಕಾಗುತ್ತದೆ.

ಈ ಹಾಡಿನಲ್ಲಿ ಶರೀಫರು ತಮ್ಮ self ಅಥವಾ ಮನಸ್ಸನ್ನು ಒಂದು ಮನೆಗೆ ಹೋಲಿಸಿ ಹಾಡಿದ್ದಾರೆ. ಈ ಮನೆಯ ಮಾಳಿಗೆ ಗಟ್ಟಿಯಾಗಿ ಉಳಿದಿಲ್ಲ, ಅದೀಗ ಸೋರುತ್ತಿದೆ. ಸೋರುವಿಕೆಗೆ ಅಜ್ಞಾನವೇ ಕಾರಣವೆಂದು ಶರೀಫರು ಮೊದಲಿನಲ್ಲಿಯೇ ಸಾರಿ ಬಿಡುತ್ತಾರೆ. ಈ ಅಜ್ಞಾನದ ಸ್ವರೂಪವೇನು? ಆತ್ಮಜ್ಞಾನವಿಲ್ಲದಿರುವದೇ ಅಜ್ಞಾನ! ಸೋರುವಿಕೆ ಎಂದರೇನು? ಮನೆಯನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲದಂತೆ, ಹೊರಗಿನ ಕಸಕಡ್ಡಿ, ಹುಳಹುಪ್ಪಡಿ ಇವೆಲ್ಲ ಮನೆಯ ಒಳಗೆ ಪ್ರವೇಶ ಪಡೆಯುವದು ಅಂದರೆ ವಿಕಾರಗಳು ಮನಸ್ಸನ್ನು ಪ್ರವೇಸಿಸುವದು.

ಹಾಗಾದರೆ, ಈ ಮಾಳಿಗೆಯನ್ನು ಸರಿಪಡಿಸಲು ಶರೀಫರಿಗೆ ಇರುವ ತೊಂದರೆ ಏನು? ಈ ಹಾಡಿನ ಮೊದಲನೆಯ ನುಡಿಯಲ್ಲಿ ಶರೀಫರು ತಮ್ಮ ಅಸಹಾಯಕತೆಯನ್ನು ವಿವರಿಸಿದ್ದಾರೆ:

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||

ಸೋರುತ್ತಿರುವ ಮನೆಯ ಮಾಳಿಗೆಯ ದಾರು(=ಮರ=timber)ಅನ್ನು ಗಟ್ಟಿ ಮಾಡುವವರು ಯಾರೂ ಇಲ್ಲ. ಮನೆಯನ್ನು ಕಾಳಕತ್ತಲೆಯು ಆವರಿಸಿರುವದರಿಂದ, ಮೆಟ್ಟಲು ಹತ್ತಿ, ಮಾಳಿಗೆಯನ್ನು ಏರಲು ಶರೀಫರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಇವರು ಮೇಲೆ ಏರುವದು ಹೇಗೆ? ಮೇಲ್ಮುದ್ದಿಯ ತೊಲೆ ಹಾಗೂ ಜಂತಿಗಳನ್ನು ಸರಿಪಡಿಸುವದು ಹೇಗೆ?

ಎರಡನೆಯ ನುಡಿಯಲ್ಲಿ ಶರೀಫರು ಈ ಮಾಳಿಗೆಯು ಎಷ್ಟರಮಟ್ಟಿಗೆ ನಾದುರಸ್ತ ಆಗಿದೆ ಎನ್ನುವದನ್ನು ವರ್ಣಿಸಿದ್ದಾರೆ:

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||

ಈ ಮನೆಯ ಮಾಳಿಗೆಯ ತೊಲೆ ಮುರಿದಿದೆ; ಜಂತಿಗೆ ಹುಳುಕು ಹತ್ತಿದೆ; ಹುಳ ಕೊರೆದದ್ದರಿಂದ ಜಂತಿ ಹಾಗೂ ತೊಲೆಗಳನ್ನು ಜೋಡಿಸುವ ಕೀಲಗಳು ಸಡಿಲುಗೊಂಡಿವೆ.ಅವುಗಳ ಮೇಲೆ ಹೊದಿಸಿದ ಚಪ್ಪರ ಹರಿದಿದೆ. ಬೆಳಕು ಬರಲೆಂದು ನಿರ್ಮಿಸಲಾದ ಜೀರುಗಿಂಡಿಯು (=ಸಣ್ಣ ಬೆಳಕಿಂಡಿಯು) ಹಾಳಾಗಿ ಹೋಗಿದೆ. ಅರ್ಥಾತ್ ಮಾಳಿಗೆ ಪೂರ್ಣವಾಗಿ ನಾದುರಸ್ತ ಆಗಿದೆ.
ಮಾಳಿಗೆಯ ಸಂಕೇತದ ಮೂಲಕ ಶರೀಫರು ತಮ್ಮ ಮನಸ್ಸೂ ಸಹ ಈ ಮಾಳಿಗೆಯಂತೆ ನಾದುರಸ್ತ ಆಗಿದೆ. ತಮ್ಮ ಮನಸ್ಸಿಗೆ ಬೆಳಕನ್ನು ಕೊಡುವ ಬೆಳಕಿಂಡಿ ಹಾಳಾಗಿ ಹೋಗಿದ್ದರಿಂದ ಒಳಗೆಲ್ಲ ಕತ್ತಲೆ ಕವಿದಿದೆ ಎಂದು ಹೇಳುತ್ತಿದ್ದಾರೆ. ಆದರೇನು, ಶರೀಫರಿಗೆ ದುರಸ್ತಿಗಾಗಿ ಮೇಲಕ್ಕೆ ಹತ್ತುವದೇ ಅಸಾಧ್ಯವಾಗಿದೆ.
ಈ ರೀತಿಯಾಗಿ ಮಾಳಿಗೆಯು ನಾದುರಸ್ತ ಆಗಿದ್ದರ ಪರಿಣಾಮವೇನು ಎನ್ನುವದನ್ನು ಶರೀಫರು ಮೂರನೆಯ ನುಡಿಯಲ್ಲಿ ಹೀಗೆ ವರ್ಣಿಸಿದ್ದಾರೆ:

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||

ಮೇಲ್ಮುದ್ದಿಯು ಕೆಟ್ಟು ಹೋಗಿ, ತೇವಾಂಶ ಜಾಸ್ತಿಯಾಗಿದ್ದರಿಂದ ಅಲ್ಲಿ ಕರಕಿ ಹುಲ್ಲು ಬೆಳೆದು ಬಿಟ್ಟಿದೆ. ಕರಕಿಯು ಬಹಳ ಗಟ್ಟಿಯಾದ ಹುಲ್ಲಿನ ಜಾತಿ. ಎಷ್ಟು ಕಿತ್ತಿ ಒಗೆದರೂ ನಿರ್ಮೂಲವಾಗುವದಿಲ್ಲ. ಅದೇ ರೀತಿಯಾಗಿ, ಶರೀಫರ ಮನಸ್ಸಿನಲ್ಲಿಯೂ ಸಹ ವಿಷಯಗಳೆಂಬ ವಿಕಾರಗಳು ಕರಕಿ ಹುಲ್ಲಿನಂತೆ ಗಟ್ಟಿಯಾಗಿ ಬೆಳೆದು ನಿಂತಿವೆ. (‘ಕಸವು ಹತ್ತಿ’ ಎನ್ನುವದನ್ನು ‘ಗಟ್ಟಿಯಾಗಿ’ ಅಥವಾ ‘ಕಸಕಡ್ಡಿ ಬೆಳೆದು’ ಎನ್ನುವ ಎರಡೂ ಅರ್ಥಗಳಲ್ಲಿ ತಿಳಿಯಬಹುದು.) ಇಂತಹ ವಿಕಾರಗಳು ಇದ್ದಲ್ಲಿ ಈ ಭವದ ದುರಿತಗಳು ಅಂದರೆ ಸಂಸಾರದ ಕೇಡುಗಳು, ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಳ್ಳುತ್ತವೆ. ಕಸವನ್ನು ತೆಗೆದು ಹಾಕದ ಹೊರತು, ಇರುವೆಗಳು ಹೋಗುವದಿಲ್ಲ. ಇರುವೆಗಳು ಮುತ್ತಿದ್ದರಿಂದ ಮೇಲ್ಮುದ್ದಿಯ ಮಣ್ಣೆಲ್ಲ ಏಕರೂಪವಾಗಿ ಬಿಟ್ಟಿದೆ. ಅದೇ ರೀತಿಯಾಗಿ, ಸಂಸಾರದ ಕೇಡುಗಳಿಂದ ಶರೀಫರ ಮನೋದ್ರವ್ಯವೆಲ್ಲ ಏಕರೂಪವಾಗಿ ವಿಕಾರಗೊಂಡಿದೆ.

ಆದರೆ, ಶರಿಫರು ಎದೆಗುಂದಿಲ್ಲ. ಅವರಿಗೆ ಗುರುಕರುಣೆಯು ಲಭಿಸುವ ಧೈರ್ಯವಿದೆ. ತಮ್ಮ ಗೆಳೆತಿಗೆ ಶರೀಫರು ಈ ಭರವಸೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||

ಶರೀಫರು ಯಾರಿಗೆ ‘ಕಾಂತೆ’ ಎಂದು ಹೇಳುತ್ತಿದ್ದಾರೆ? ಅವರ ಅನೇಕ ಕವನಗಳು ಈ ಕಾಂತೆಗೆ ಸಂಬೋಧಿತವಾಗಿವೆ. ಕಾಂತೆ ಎಂದರೆ ಆಪ್ತ ಗೆಳತಿ ಎಂದು ತಿಳಿಯಬಹುದು. ತಮ್ಮ ಮನದ ಮಾತುಗಳನ್ನು ಯಾರಿಗೆ ಹೇಳಬಹುದೊ ಅಂತಹ confidante ಈ ಕಾಂತೆ. ತಮ್ಮ ಅಂತರಾತ್ಮಕ್ಕೇ ಶರೀಫರು ಕಾಂತೆ ಎಂದು ಕರೆಯುತ್ತಿದ್ದಾರೆ ಎನ್ನಬಹುದು.
ಹುಬ್ಬಿ ಮಳೆಯು ಶ್ರಾವಣ ಮಾಸದಲ್ಲಿ ಬರುತ್ತದೆ. ಶ್ರಾವಣ ಮಾಸವೆಂದರೆ ಮಳೆ ಧೋಧೋ ಎಂದು ಸುರಿಯುವ ಕಾಲ. ಗುರುಕಾರುಣ್ಯವೂ ಸಹ ಶರೀಫರಿಗೆ ಪೂರ್ಣವಾಗಿ ಒಲಿದು ಬರಲಿದೆ ಎನ್ನುವದರ ಸೂಚನೆಯನ್ನು ಶರೀಫರು ಇಲ್ಲಿ ನೀಡುತ್ತಿದ್ದಾರೆ. ಅದರ ಪೂರ್ವಸೂಚನೆಯಾಗಿ ಶಿಶುವಿನಾಳ ಗ್ರಾಮಕ್ಕೆ ಮೋಡಗಳು ಒಲಿದು ಬಂದಿವೆ ಎಂದು ಶರೀಫರು ಹೇಳುತ್ತಿದ್ದಾರೆ.

ಈ ರೀತಿಯಾಗಿ ಶರೀಫರ ಈ ಹಾಡು ಸತ್-ವಿಶ್ವಾಸದೊಂದಿಗೆ ಮುಕ್ತಾಯವಾಗಿದೆ.

54 comments:

Ittigecement said...

ಸುನಾಥ ಸರ್....

ಶರೀಫರ ಈ ಹಾಡು ನನ್ನ ಬಳಿ ಇದೆ .. ಕೇಳುತ್ತಿರುತ್ತೇನೆ
ಆಗಾಗ....
ಅಶ್ವತ್ಥರ ಧ್ವನಿಯ ಈ ಹಾಡು
ನನಗೆ ಬಲು ಮೆಚ್ಚು...
ಅದರ ಹಾಡಿನ ರಾಗದಿಂದಾಗಿ... ಗಾಯಕರ ಧ್ವನಿಯಿಂದಾಗಿ....

ಇದರ ಅರ್ಥ ಇಷ್ಟು ಸೊಗಸಾಗಿದೆ ಅಂತ ತಿಳಿದಿರಲಿಲ್ಲ...

ಮನ, ತನುವನ್ನು...
ಮನೆಗೆ ಹೋಲಿಸಿ ಎಷ್ಟು ಚಂದದ ತತ್ವಜ್ಞಾನದ ಹಾಡು ಇದು....!!

ಈಗ ಇದರ ಅರ್ಥದಿಂದಲೂ ಇನ್ನಷ್ಟು ಇಷ್ಟವಾಗುತ್ತಿದೆ...

ಸರ್...
ಶರೀಫರ ಇನ್ನಷ್ಟು ಹಾಡಿನ ಅರ್ಥ ತಿಳಿಸಿರಿ...

ತುಂಬಾ .. ತುಂಬಾ ... ಧನ್ಯವಾದಗಳು...

ಬಿಸಿಲ ಹನಿ said...

ಶರೀಫರ ಒಂದೊಂದು ಪದವೂ ಅಗಾಧ ತತ್ವವೊನ್ನೊಳಗೊಂಡಿವೆ. "ಸೋರುತಿಹದು ಮನಿಯ ಮಾಳಿಗಿ" ಕವನದ ಬಗ್ಗೆ ಅಲ್ಪ ಸ್ವಲ್ಪ ತಿಳಿದಿತ್ತು. ನಿಮ್ಮ ಲೇಖನದಿಂದಾಗಿ ವಿವರವಾಗಿ ತಿಳಿಯುವಂತಾಯಿತು. ಮಾಹಿತಿಗೆ ಧನ್ಯವಾದಗಳು

ಚಂದ್ರಕಾಂತ ಎಸ್ said...

ಸುನಾಥ್ ಸರ್

ಈ ಬಾರಿ ನಿಮ್ಮ ಲೇಖನ ಬಂದ ಕೂಡಲೇ ಕುಳಿತು ಓದಿ ಪ್ರತಿಕ್ರಿಯಿಸುತ್ತಿದ್ದೇನೆ.

ನೀವು ಧಾರವಾಡದ ಕಡೆಯವರಾದ್ದರಿಂದ ನಿಮಗೆ ಬೇಂದ್ರೆ , ಷರೀಫರ ಕವನಗಳ ಪ್ರತಿಯೊಂದು ಪದವೂ ಅದರ ಒಳ ಅರ್ಥವೂ ಕರತಲಾಮಲಕವಾಗಿದೆ. ಜೊತೆಗೆ ನಿಮ್ಮ ವಿಮರ್ಶಾ ಗುಣವು ಸೇರಿ ಉತ್ತಮ ವಿಮರ್ಶೆಗಳು ನಿಮ್ಮಿಂದ ಮೂಡಿಬರುತ್ತಿವೆ.

ನೀವು ವಿಶ್ಲೇಷಿಸಿರುವ ಸೋರುತ್ತಿರುವ ಮನೆಯ ಚಿತ್ರಣ ಅದ್ಭುತವಾಗಿದೆ. ಇಲ್ಲಿ ಷರೀಫರು ಬಳಸಿರುವ ‘ ಗೆಳತಿ’ ಪದದ ಬಗ್ಗೆ ನನ್ನದೊಂದು ವಿವರಣೆ. ತನ್ನ ಅನುಭವವನ್ನು ತಾನೇ ಹೇಳಿಕೊಳ್ಳುವುದಕ್ಕಿಂತ (ಸ್ವಗತ) ವರದಿ ಮಾಡುವುದಕ್ಕಿಂತ , ನಮ್ಮ ಆತ್ಮೀಯರಿಗೆ ಹೇಳುತ್ತಿದ್ದೇವೆ ಎಂದು ಕಲ್ಪಿಸಿಕೊಂಡರೆ ಹೇಳುವ ಮಾತುಗಳು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಅದನ್ನು ಅನೇಕ ಕವಿಗಳು ಮಾಡಿದ್ದಾರೆ. ಬಸವಣ್ಣನವರು ‘ಅಕ್ಕ’ ಎಂಬುದನ್ನು ಬಳಸುತ್ತಾರೆ, ಅದೇ ರೀತಿ ಇಲ್ಲಿ ಗೆಳತಿ ಎಂಬುದನ್ನು ಬಳಸಿರುವುದರಿಂದ ಕವನ ಆಳವಾಗಿ ಮನಸ್ಸಿಗೆ ನಾಟುತ್ತದೆ.

ಮುಂದೊಂದು ದಿನ ಷರೀಫರ ‘ ಕೋಡಗನ ಕೋಳಿ ನುಂಗಿತ್ತಾ ...’ ಕವನಕ್ಕೆ ನಿಮ್ಮ ವಿವರಣೆಯನ್ನು ಕೇಲಲು ಕಾಯುತ್ತಿರುವೆ.

shivu.k said...

ಸುನಾಥ ಸರ್.,

ಶರೀಫರ ಈ ಹಾಡು ನನ್ನ ಮೆಚ್ಚಿನ ಹಾಡು. ಇದನ್ನು ಅಧ್ಬುತವಾಗಿ ಹಾಡಿರುವ ಸಿ.ಅಶ್ವತ್‌ರವರ ವಿಶಿಷ್ಟ ಶೈಲಿಯ ದ್ವನಿಯಿಂದಾಗಿ ಮತ್ತಷ್ಟು ಸೊಗಸಾಗಿ ಮೂಡಿಬಂದಿದೆ. ನಾನು ಇದನ್ನು ಆಗಾಗ ಕೇಳುತ್ತಿರುತ್ತೇನೆ.

ಇದರ ಅರ್ಥ ನೀವು ಹೇಳಿದಷ್ಟು ತಿಳಿದಿರಲಿಲ್ಲ. ಈಗ ನೀವು ಸಂಫೂರ್ಣವಾಗಿ ತಿಳಿಸಿರುವುದು ಮತ್ತೆ ಅದೇ ಹಾಡನ್ನು ಕೇಳುತ್ತಾ ಇನ್ನಷ್ಟು ತನ್ಮಯನಾಗಿ ಆನಂದಿಸಬಹುದು..ಅನ್ನಿಸುತ್ತೆ...

ತುಂಭಾ ಖುಷಿಯಾಗುತ್ತಿದೆ. ಧನ್ಯವಾದಗಳು..

sunaath said...

ಪ್ರಕಾಶ,
ಶರೀಫರ ತತ್ವಜ್ಞಾನದ ಹಾಡುಗಳು ಬಲು ಸೊಗಸಾಗಿರುತ್ತವೆ.
ಹಾಡುವವರು ಸರಿಯಾದ ಧಾಟಿಯಲ್ಲಿ ಹಾಡಿದರೆ ಇನ್ನಷ್ಟು
ಸೊಗಸಾಗಿರುತ್ತದೆ.

sunaath said...

ಉದಯ,
ಶರೀಫರ ಜೀವನವೇ ಒಂದು ತತ್ವಪದದಂತಿದೆ. ಅಂದಮೇಲೆ ಅವರ
ಪದಗಳಲ್ಲಿ ತತ್ವ ಹುದುಗಿರುವದು ಸಹಜವಾಗಿದೆ.

sunaath said...

ಚಂದ್ರಕಾಂತಾ,
ಕೋಡಗನ್ನ ಕೋಳಿ ನುಂಗಿತ್ತಾ ಹಾಡಿನ ಬಗೆಗೆ ಈಗಾಗಲೇ ಒದು ಲೇಖನ ಬರೆದಿದ್ದೇನೆ. ಅದು ನಿಮಗೆ http://sallaap.blogspot.com/2008/10/blog-post_07.htmlದಲ್ಲಿ ಸಿಗುವದು.

ಶರೀಫರು ಮತ್ತು ಬಸವಣ್ಣ ಮೊದಲಾದವರು ತಮ್ಮ ಆಪ್ತ ಗೆಳತಿಗೆ ಸಂಬೋಧಿಸಿದಂತೆ ಹೇಳುವದಕ್ಕೆ ನೀವು ನೀಡಿರುವ ವಿವರಣೆ
ಸೊಗಸಾಗಿದೆ.
ಧನ್ಯವಾದಗಳು.

sunaath said...

ಶಿವು,
ಶರೀಫರ ಹಾಡುಗಳು ಖುಶಿ ಕೊಡುವ ಹಾಡುಗಳು. ಅವುಗಳನ್ನು ಸೊಗಸಾಗಿ ಹಾಡಿದಾಗ ಕೇಳುವ ಖುಶಿ ಅನನ್ಯ.

ಸಂದೀಪ್ ಕಾಮತ್ said...

ಸುನಾಥ್ ಜಿ,

’ಸೋರುತಿಹುದು ಮನಿಯ ಮಾಳಿಗಿ’ ಹಾಡನ್ನು ರಘು ದೀಕ್ಷೀತ್ ಕೂಡಾ ಹಾಡಿದ್ದಾರೆ.ಬಹಳ ಚೆನ್ನಾಗಿದೆ ಹಾಡು.
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು.

sunaath said...

ಸಂದೀಪ,
ರಘು ದೀಕ್ಷಿತರ ಬಗೆಗೆ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ಅವರ ಧ್ವನಿಮುದ್ರಣ-ತಟ್ಟೆ ಸಿಗುವದೇನೊ ಎಂದು ನೋಡುವೆ.

Prabhuraj Moogi said...

ಮೇಲ್ಮುದ್ದಿ ಮನೆ ಅಂತ ಹೇಳಿದ್ದು ನಮ್ಮನೆ ನೆನಪಿಸಿಬಿಟ್ಟಿತು, ನಮ್ಮ ಊರಲ್ಲಿ ಮೇಲ್ಮುದ್ದಿ ಮನೆಯೆ, ಅದೂ ಸೋರುತ್ತದೆ, ಮುನ್ನೂರು ವರ್ಷ ಹಳೆಯದು ಅಂದ್ರೆ ನಂಬುತ್ತೀರಾ.
ಮನೆ, ಮನದ ಪ್ರತೀಕ, ಮನೆಯಲ್ಲೇ ಮನ:ಶಾಂತಿ ಸಿಗೋದು ಅಂತಾರಲ್ಲ ಅದೇ ಇದು.

umesh desai said...

ಸುನಾಥ ಸರ್ ನಾ ಸದಾ ಹಾಡುವ ಈ ಹಾಡು ನಾ ತಪ್ಪು ಹಾಡತಿದ್ದೆ "ಯಾರು ಗಟ್ಟಿ ಮಾಳ್ಪರಿಲ್ಲ" ಅಂತ ನೀವು ಸರಿ ದಾರಿ ತೋರಿದಿರಿ .ಧನ್ಯವಾದಗಳು ಶಿಶುವಿನಹಾಳ್ ದಾಗ ಅವರ ಸಮಾಧಿಗೆ ಹೋಗಿದ್ದೆ ಆವಾಗ ಅಲ್ಲಿ ಜಾತ್ರಿ ಇತ್ತು ಕಡಬಿನ ಕಾಳಗ
ಮಜಾ ಇತ್ತು....

ಸಂದೀಪ್ ಕಾಮತ್ said...

ಸುನಾಥ್ ಜಿ,

ತಗೊಳ್ಳಿ ರಘು ದೀಕ್ಷಿತ್ ತಟ್ಟೆಯ ಕೊಂಡಿ.

http://www.musicyogi.com/asp/idpndDetails.asp?albId=ALB7190

ಇಲ್ಲೇ ನೀವು ಸ್ಯಾಂಪಲ್ ಹಾಡನ್ನೂ ಕೇಳಬಹುದು.

PARAANJAPE K.N. said...

ಸ೦ತ ಶಿಶುನಾಳ ಶರೀಫರ ತತ್ವಪದದ ಅರ್ಥವನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿ ಬರೆದಿದ್ದೀರಿ. ನಾನು ಎ೦ದೂ ಹೇಳುವ೦ತೆ ನಿಮ್ಮ ಬರಹ ಸ೦ಗ್ರಹಯೋಗ್ಯ, ಓದಿ ಮರೆತು ಬಿಡುವ೦ಥಾ ದ್ದಲ್ಲ. ಚೆನ್ನಾಗಿದೆ.

sunaath said...

ಪ್ರಭುರಾಜ,
ನಿಮ್ಮದು ಮೂರುನೂರು ವರ್ಷಗಳಷ್ಟು ಹಳೆಯ ಮನೆ ಎಂದು ಕೇಳಿ ಭಾರೀ ವಿಸ್ಮಯವಾಯಿತು. Anyway ಹಳೆಯ ಮೇಲ್ಮುದ್ದಿಯ ಮನೆಯಲ್ಲಿ ಸಿಗುವ air-conditioning ಹಾಗೂ intimate feeling ಈಗಿನ RCC ಮನೆಗಳಲ್ಲಿ ಸಿಗುವದಿಲ್ಲ.

ಶರೀಫರಿಗೆ ತಮ್ಮ ಮನೆ ದುರಸ್ತಿ ಮಾಡುವದು ಕಷ್ಟವಾದರೂ ಸಹ, ನಿಮಗೆ ನಿಮ್ಮ ಮನೆಯ ದುರಸ್ತಿ ಕಷ್ಟವಾಗಿಲ್ಲ ಎಂದುಕೊಳ್ಳುತ್ತೇನೆ!

sunaath said...

ಉಮೇಶ,
ಒಬ್ಬರಿಗೊಬ್ಬರು ದಾರಿ ತೋರಿಸುತ್ತ ಮುನ್ನಡೆಯೋಣ, ಏನಂತೀರಿ?

sunaath said...

ಸಂದೀಪ,
ನೀವು ಕೊಟ್ಟ ಕೊಂಡಿಗಾಗಿ ತುಂಬಾ thanks.
ರಘು ದೀಕ್ಷಿತರ ಹಾಡುಗಳು ಸುಶ್ರಾವ್ಯವಾಗಿವೆ.

sunaath said...

ಪರಾಂಜಪೆ,
"ಕಲ್ಲುಸಕ್ಕರೆಯಂಥ ನಿಮ್ಮೆದೆಯು ಕರಗಿದರೆ,
ಆ ಸವಿಯ ಹಣಿಸಿ ನನಗೆ."

Prabhuraj Moogi said...

ನೀವು ಹೇಳಿದ್ದು ನೂರಕ್ಕೆ ನೂರು ನಿಜ, ಆ ಹಳೆ ಮನೇ air-conditioning ಬಹಳ ಚೆನ್ನಗಿರ್ತದೆ, ಆಗಿನ ಕಾಲದಲ್ಲಿ ಆ ಮನೆ ಕಟ್ಟುವ ವೆಚ್ಚ ಸಾವಿರದ ಒಂದು ಅಣೆ ಆಗಿತ್ತಂತೆ ನಮ್ಮಜ್ಜಿ ಹೇಳ್ತಾ ಇದ್ದರು, ಈಗ ಹಳೆ ಮನೆ ರಿಪೇರಿ ಬಹಳೆ ಕಷ್ಟ ಸರ್, ಅಮ್ಮ ಯಾವಾಗ ಮನೆ ಬಗ್ಗೆ ಹೇಳಿದರೂ ಶರೀಫರ ಹಾಡೇ ಹಾಡುತ್ತಾಳೆ ಅನಿಸುತ್ತೆ ನನಗೆ. ಅಂಥಾ ಮನೆ ಶರೀಫರು ಮನಕ್ಕೆ ಹೋಲಿಸಿದ್ದರಲ್ಲಿ ಯಾವ ಅತಿಶಯೊಕ್ತಿಯೂ ಇಲ್ಲ.

Keshav.Kulkarni said...

ಶರೀಫಸಾಹೇಬರ ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದು. ಉತ್ತರ ಕರ್ನಾಟಕದ ಕನ್ನಡ ಅರ್ಥವಾಗದವರಿಗೆ ಎಲ್ಲ ಪದಗಳನ್ನೂ ಚೆನ್ನಾಗಿ ವಿವರಿಸಿದ್ದೀರಿ.

ಶಾಂತಲಾ ಭಂಡಿ (ಸನ್ನಿಧಿ) said...

ಸುನಾಥ್ ಅಂಕಲ್...
ಚೆಂದದ ಹಾಡಿಗೆ ಅಂದದ ವಿವರಣೆ.
ಧನ್ಯವಾದ ನಿಮಗೆ.
ನಿಮ್ಮ ಬರಹಗಳನ್ನು ಓದುತ್ತಿದ್ದರೆ ಮನೆಯೊಳಗಿರದ ಆ ಒಡೆಯನೂ ಮನೆ ಒಳವ ಹೊಕ್ಕುತ್ತಾನಲ್ಲದೆ, ಸೋರುತ್ತಿರುವ ಮನೆಯ ಮಾಳಿಗೆ ರಿಪೇರಿಯೂ ಆಗಿಬಿಡುತ್ತದೆ.
ನಂಗಿಷ್ಟ ನಿಮ್ಮ ಬರಹಗಳು.

sunaath said...

ಪ್ರಭುರಾಜ,
ಶರೀಫರ ಹಾಡನ್ನು ನೆನಪಿಸಿಕೊಳ್ಳಲು ಇದು ಯೋಗ್ಯ ಕಾರಣ!

ಮನಸು said...

super sir!!! oLLeya haadu naanu yavagalu keluttaliruttene..

chennagi artha madisiddeeri

sunaath said...

ಕೇಶವ,
ಕರ್ನಾಟಕದ ವಿಭಿನ್ನ ಆಡುನುಡಿಗಳಿಂದಾಗಿ ಪ್ರಾದೇಶಿಕ ಸಾಹಿತ್ಯದ
ಅರ್ಥಗ್ರಹಣ ಸ್ವಲ್ಪ ಕಷ್ಟವಾಗುವದು ಸಹಜ. ಆದುದರಿಂದ ಪ್ರಾದೇಶಿಕ ಸಾಹಿತ್ಯವು ಕರ್ನಾಟಕದಲ್ಲಿ ಹೆಚ್ಚು ಹೆಚ್ಚಾಗಿ ಹರಡುವದು ಅವಶ್ಯವಾಗಿದೆ.ಅಲ್ಲವೆ?

sunaath said...

ಶಾಂತಲಾ,
ಧನ್ಯವಾದಗಳು.
ಮನೆಯೊಡೆಯನ ದರ್ಶನ ಶರೀಫರಿಗಷ್ಟೇ ಸಾಧ್ಯ!

sunaath said...

ನಗಿಸು,
ಧನ್ಯವಾದಗಳು. ಹಾಡೇ ಚೆನ್ನಾಗಿರುವಾಗ ವಿವರಣೆ ಕಷ್ಟವಲ್ಲ, ನೋಡಿ!

Shiv said...

ಸುನಾಥ್ ಅವರೇ,

ಒಂದು ಅದ್ಭುತ ಹಾಡಿಗೆ ಎಂತಹ ಸುಂದರ ವಿವರಣೆ ಕೊಟ್ಡಿದೀರಿ ! ತುಂಬಾ ಧನ್ಯವಾದಗಳು

ನಾನು ತಿಳಿದ ಪ್ರಕಾರ ಶರೀಫರಿಗೆ ಲಗ್ನವಾಗಿತ್ತು. ’ಕಾಂತೆ’ ಅವರ ಪತ್ನಿ ಇರಬಹುದೇ ?

ಶಿವಪ್ರಕಾಶ್ said...

ನಾನು ಚಿಕ್ಕವನಾಗಿದ್ದಾಗ ನಮ್ಮ ಹಳೆಯ ಮನೆ, ಮಣ್ಣಿನ ಮನೆಯಾಗಿತ್ತು.
ಮಳೆಗಾಲ ಬಂದಾಗ ಮನೆಯ ಮೇಲೆ ಬೆಳೆದ ಹುಲ್ಲನ್ನು ಕಿತ್ತುತ್ತಿದ್ದೆವು.
ತುಂಬಾ ಕುಶಿಯಿಂದ ಹುಲ್ಲು ಕೀಳುತ್ತಿದ್ದೆವು.
ನನ್ನ ನೆನಪಿನ ಪುಟವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು..

ಶಿಶುನಾಳ್ ಶರೀಫರ ಎಲ್ಲ ಹಾಡುಗಳು ನನಗೆ ಇಷ್ಟ.
ಒಂದ್ಸರಿ ಶಿಶುವಿನಾಳ ಗ್ರಾಮಕ್ಕೆ ಹೋಗಿಬರಬೇಕು ಎನ್ನುವ ಆಸೆ ಇದೆ.
ಈ ಹಾಡಿನ ಅರ್ಥ ಹೀಗಿದೆ ಎಂದು ನನಗೆ ತಿಳಿದಿರಲಿಲ್ಲ, ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

Sushrutha Dodderi said...

ಇದನ್ನ ಓದ್ತಿರಬೇಕಾದ್ರೆ ಅಶ್ವತ್ಥ್ ಅನುರಣಿಸ್ತಿದ್ದರು ಕಿವಿಯಲ್ಲಿ.. ಇನ್ನೂ ಗುಂಗು.

Anonymous said...

ಕಾಕಾ,

"ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ
ಸೋರುತಿಹದು ಮನಿಯ ಮಾಳಿಗಿ"

ಈ ಸಾಲು ಬಿಟ್ಟು ಮುಂದಿಂದೆಲ್ಲಾ ಸುಮ್ಮನೆ ಅರ್ಥ ತಿಳಿದ ಕೇಳತಿದ್ಯಾ, ಈಗ ಅರ್ಥ ತಿಳಿದದ ಇವತ್ತು ಮನಿಗೆ ವಾಪಸ್ಸು ಹೋಗಬೇಕಾದರ ಮೋಬಾಯಿಲನ್ಯಾಗಿನ ಶರಿಪಜ್ಜನ ಹಾಡಾ ಕೇಳೊದೆ.

ಒಳ್ಳೆಯ ಪದಾ, ಒಳ್ಳೆ ಅರ್ಥ ಜೋತಿಗಿ ನಿಮ್ಮ ಒಳ್ಳೆ ವ್ಯಾಖ್ಯಾನ, ನನಗ ಈ ಪದಾ ಮತ್ತ ಮತ್ತ ಕೇಳುವಂಗ ಗುಂಗ ಹಿಡಿಸೈತಿ.

-ಶೆಟ್ಟರು

sunaath said...

ಶಿವ,
ಶರೀಫರಿಗೆ ಮದುವೆಯಾಗಿತ್ತು. ತಮ್ಮ ಹೆಂಡತಿಯ ಬಗೆಗೆ ತುಂಬು
ಪ್ರೀತಿ ಹಾಗೂ ಗೌರವದಿಂದ ಅವರು ಹಾಡಿದ ಹಾಡು ಹೀಗಿದೆ:
"ನನ್ನ ಹೇಣ್ತೆ ನೀ
ನನ್ನ ಹೇಣ್ತೆ
ನಿನ್ನ ಹೆಸರೇನ್ಹೇಳಲೆ ಗುಣವಂತೆ
.................."

ಆದರೆ ಮೊದಲ ಹೆರಿಗೆಯ ಬಳಿಕ ಹುಟ್ಟಿದ ಹೆಣ್ಣು ಮಗು ಕೆಲವೇ
ದಿನಗಳ ಬಳಿಕ ತೀರಿಕೊಳ್ಳುತ್ತದೆ. ಅವರ ಹೆಂಡತಿಯೂ ಸಹ ಸ್ವಲ್ಪೇ ಕಾಲದಲ್ಲಿ ತೀರಿಕೊಳ್ಳುತ್ತಾರೆ. ಶರೀಫರು ಹೆಂಡತಿಯ ಅಂತ್ಯಕ್ರಿಯೆಗೂ ಸಹ ಹೋಗುವದಿಲ್ಲ. ಆ ಸಮಯದಲ್ಲಿ ಅವರು ಹಾಡಿದ ಹಾಡು ಹೀಗಿದೆ:
"ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ಯಾಕೋ!
..................."

ಶರೀಫರು ‘ಶರಣ ಸತಿ, ಲಿಂಗ ಪತಿ’ ಎನ್ನುವ ಭಾವನೆಯುಳ್ಳವರಲ್ಲ. ಅವರ ಹಾಡುಗಳಲ್ಲಿ ಬರುವ
‘ಕಾಂತೆ’ ಎನ್ನುವ ಸಂಬೋಧನೆ ಅವರ ಆಧ್ಯಾತ್ಮಿಕ selfಗೆ
ಅಂದರೆ ಅಂತರಾತ್ಮಕ್ಕೆ ಸಂಬೋಧಿತವಾಗಿರಬಹುದು.

sunaath said...

ಶಿವಪ್ರಕಾಶ,
ಬಾಲ್ಯದ ನೆನಪುಗಳು ಖುಶಿಯ ನೆನಪುಗಳು.
ಶಿಶುವಿನಹಾಳಕ್ಕೆ ಹೋಗಬೇಕಾದರೆ, ನೀವು ಹುಬ್ಬಳ್ಳಿಗೆ ಬಂದು, ಅಲ್ಲಿಂದ rural bus ಹಿಡಿದು ಹೋಗಬಹುದು.

sunaath said...

ಸುಶ್ರುತ,
ಶರೀಫರ ಹಾಡುಗಳು ಖ್ಯಾತಿ ಪಡೆದಿದ್ದೇ ಅಶ್ವತ್ಥರಿಂದ ಎಂದು ನನ್ನ ಭಾವನೆ.

sunaath said...

ಶೆಟ್ಟರ,
ಮೊಬೈಲಿನೊಳಗೂ ಶರೀಫ ಅಜ್ಜನ್ನ ಇಟಗೊಂಡೀರಿ? ನಿಮಗ ಅವರು ಏನೇನು ಕಿವಿಮಾತು ಹೇಳ್ತಿರ್ತಾರ?!

ಅನಂತ said...

ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನನ್ನ ಮೆಚ್ಚಿನ ಗೀತೆ ಗಳಲ್ಲೊಂದಿದು..

ಒಂದು ಸಂದೇಹ.. ಅಶ್ವಥ್ ಅವರು ಇದನ್ನ ಹೀಗೆ ಹಾಡ್ತಾರೆ. "ಕಾಂತೆ ಕೇಳೇ ಕರುಣದಿಂದ, ಬಂತು ಕಾಣೆ ಹುಬ್ಬಿ ಮಳೆಯು, ಎಂತೊ ಶಿಶುನಾಳಧೀಶ ತಾನು ನಿಂತು ಪೊರೆವೆನೆಂದು ನಂಬಿದೆ" (ಕೆಲವೊಂದು ಶಬ್ದಗಳು ತಪ್ಪಿರಬಹುದು). ನನ್ನಲ್ಲಿರುವ ಒಂದು ಶರೀಫರ ಗೀತೆಗಳ ಪುಸ್ತಕದಲ್ಲಿ ನೀವು ಬರೆದಂತೆಯೆ ಇದೆ.. ಯಾವುದು ಸರಿ? ರಾಗಕ್ಕಾಗಿ ಅಶ್ವಥ್ ಅವರು ಇದನ್ನ ಬದಲಾಯಿಸಿದಾರಾ?

Archu said...

ಕಾಕಾ,
ನಿಮ್ಮ ಮುಂಚಿನ ಕೆಲವು ಲೇಖನಗಳನ್ನು,ಇದನ್ನೂ ಇನ್ನೊಮ್ಮೆ ಓದಿದೆ. ನನಗಸಿದ್ದು. ನೀವು ಬೇಂದ್ರೆಯವರ, ಶಿಶುನಾಳರ ಕವಿತೆಗಳ ಅರ್ಥವನ್ನು ಹೇಳುವ ಒಂದು ಪುಸ್ತಕ ಬರೀಬೇಕು ಅಂತ !
ಪ್ರೀತಿಯಿಂದ,
ಅರ್ಚನಾ

sunaath said...

ಅನಂತ,
ನಾನು ಶಿವಾನಂದ ಗುಬ್ಬಣ್ಣವರ ಸಂಕಲನ ("ಬರಕೊ ಪದಾ ಬರಕೊ")ದಿಂದ ಈ ಪಾಠವನ್ನು ಎತ್ತಿಕೊಂಡಿದ್ದೇನೆ. ಅಶ್ವತ್ಥರ ಪಾಠದ ಮೂಲ ನನಗೂ ಗೊತ್ತಿಲ್ಲ. ಹೀಗಾಗಿ ಅವರು ತಾವೇ ಬದಲಾಯಿಸಿಕೊಂಡಿದ್ದಾರೊ ಎನ್ನುವದು ತಿಳಿಯದು. Anyway ಪಾಠಾಂತರವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು.

sunaath said...

ಅರ್ಚು,
ಬ್ಲಾ‍^ಗಿನಲ್ಲಿ ಬರೆಯುವದೂ ಸಹ ಒಂದು ಥರಾ ಪುಸ್ತಕ ಬರದ್ಹಂಗೇ ಅಲ್ವಾ?

Umesh Balikai said...

ಸುನಾಥ ಸರ್,

ಶರೀಫಜ್ಜನ ತತ್ವಪದವನ್ನು ಎಳೆ ಎಳೆಯಾಗಿ ಚೆನ್ನಾಗಿ ವಿವರಿಸಿದ್ದೀರಿ. ಅಜ್ಜನ ಪದಾ ಕೇಳೋದೇ ಒಂಥರಾ ಖುಷಿ ನಮಗೆಲ್ಲ. ಮಾಧುರ್ಯದ ಜೊತೆಗೆ ಜೀವನದ ಪಾಠವನ್ನೂ ಕಳಿಸುತ್ತವೆ.
ಈ ಪದ್ಯದಲ್ಲಿ ಶರೀಫರು ತಮ್ಮ ಹೆಂಡತಿಯನ್ನೇ 'ಕಾಂತೆ' ಎಂದು ಸಂಭೋದಿಸಿರಬಹುದಲ್ಲವೇ?

- ಉಮೇಶ

sunaath said...

ಉಮೇಶ,
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಶರೀಫರ ಹೆಂಡತಿ ಬೇಗನೇ ತೀರಿಕೊಂಡರು. ಅವರ ನಿಧನದ ನಂತರವೇ, ಶರೀಫರು ಊರೂರು ತಿರುಗುತ್ತ, ತತ್ವಪದಗಳನ್ನು ಹಾಡುತ್ತ ತಿರುಗಿದರು. ತಮ್ಮ ಹೆಂಡತಿಯನ್ನು ಸಂಬೋಧಿಸಿ ಅವರು ‘ಕಾಂತೆ’ ಎಂದು ಹೇಳಿದರ,ಅದು ಮೃತ ವ್ಯಕ್ತಿಯನ್ನು ಸಂಬೋಧಿಸಿದಂತಾಗುವದು. ಆದರೆ ಇದು ಅಸಂಭಾವ್ಯವೇನೂ ಅಲ್ಲ.
Anyway, ಇಲ್ಲಿ ಕಾಂತೆ ಎಂದರೆ ಆಪ್ತಸಖಿ. ಆ ಆಪ್ತಸಖಿ ಶರೀಫರ ಹಾಡಿನ ಅನುಕೂಲಕ್ಕಾಗಿ, ಹಾಡಿನ ಮಟ್ಟಿಗೆ ಇರಬಹುದು ಅಥವಾ ಶರೀಫರು ತಮ್ಮ ಅಂತರಾತ್ಮಕ್ಕೆ ಸಂಬೋಧಿಸಿ ಹೇಳಿರಲೂ ಬಹುದು.

sritri said...

ಕಾಕಾ, ಇದನ್ನು ಹಾಡಿನ ರೂಪದಲ್ಲಿ ಕೇಳಿದಾಗ ಕೆಲವು ಪದಗಳ ಅರ್ಥವಾಗಿರಲಿಲ್ಲ, ಧನ್ಯವಾದಗಳು.

sunaath said...

ತ್ರಿವೇಣಿ,
Pleasure is mine!

kanasu said...

kaa kaa,..

nanna bali shareefara haadugalu ive...adannu sadaa keluttiruttene..bhava tumba hidisittu...eega adu innashtu aalavaagi arthavaaitu..
thank you :)
ide reethi "chola kadita" haadannu vistarisutteera plss?! :)

sunaath said...

ಕನಸುಗಾತಿ,
ಶರೀಫರಿಗೆ ಕಡಿದ ಚೋಳನ್ನು ಹಿಡಿಯಲು ಪ್ರಯತ್ನಿಸುವೆ!

ಗೋಪಾಲ್ ಮಾ ಕುಲಕರ್ಣಿ said...

ತುಂಬಾ ಚೆನ್ನಾಗಿದೆ ನಿಮ್ಮ ಲೇಖನ.. ಶರೀಫರ ಹಾಡು ಸೊಗಸಾಗಿದೆ. ಹೀಗೆ ನಿಮ್ಮ ಪ್ರಯತ್ನ ನಡಿಯಲಿ. ದಾಸರಪದಗಳ ಅರ್ಥವನ್ನು ತಿಳಿಸಲು ಪ್ರಯತ್ನಿಸಿ.

ದುರಹಂಕಾರಿ said...

ಸರ್,ಕಾಳಕತ್ತಲೆಯೊಳಗೆ ನಾನು ಮೆಲಕೇರಿ ಮೆಟ್ಟಲಾರೆ/ಹೋಗಲಾರೆ -ಎಂದರೆ ಎಂದರೆ ಮನದಲ್ಲಿ ಕತ್ತಲೆ ಇರುವಾಗ, ಬ್ರಹ್ಮ ರಂಧ್ರವನ್ನ ಭೇಧಿಸಿ, ಸಹಸ್ರಾರಕ್ಕೆ ಹೋಗಲಾರೆ, ಸಮಾಧಿ-ಸಾಧನಾ ಅಸಾಧ್ಯ ಎಂದರ್ಥ. --ಅಲ್ಲವೇ?

Kiran said...

ಸರ್ ಯಾಕೆ ಬಡಿದಾಡತಿ ತಮ್ಮ್ ಹಾಡಿನ ಸಾರಾಂಶ ತಿಳಿಸಿ

sunaath said...

ಕಿರಣರೆ, ನಾನ್ಯಾಕೆ ಬಡಿದಾಡಲಿ? ಹಾಗೇನಾದರೂ ಅನಿಸಿದರೆ ಕ್ಷಮಿಸಿ. ಶರೀಫರ ಎಲ್ಲ ಹಾಡುಗಳ ಸಾರಾಂಶವೆಂದರೆ, ಈ ಲೌತಿಕ ಜಗತ್ತಿನ ಮೋಹಗಳಿಗೆ ಮರುಳಾಗದೆ, ಪರಮಾತ್ಮನನ್ನು ಒಲಿಸಿಕೊಳ್ಳಿರಿ ಎನ್ನುವುದೇ ಆಗಿದೆ!

JAGADEESH. said...

ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ ಧನ್ಯವಾದಗಳು

sunaath said...

ಧನ್ಯವಾದಗಳು, ಜಗದೀಶರೆ!

Unknown said...

ಹಾಡಿನ ಅರ್ಥವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು

sunaath said...

Unknownರೆ, ಧನ್ಯವಾದಗಳು, ಸsರ್.

JAMPictures said...

ತುಂಬಾ ಅರ್ಥಗರ್ಭಿತವಾದ ನುಡಿಗಳು ಬದುಕಿಗೆ..🙏

sunaath said...

ಧನ್ಯವಾದಗಳು,JAMPictures!