Friday, July 3, 2009

ಚೋಳ ಕಡಿತು, ನನಗೊಂದು ಚೋಳ ಕಡಿತು

‘ಚೋಳ ಕಡಿತು, ನನಗೊಂದು ಚೋಳ ಕಡಿತು’ – ಇದು ಶರೀಫರು ರಚಿಸಿದ ಗೀತೆ.
ಸಾಮಾನ್ಯವಾಗಿ ಕುಂಡಲಿನಿ ಶಕ್ತಿಯನ್ನು ಅಂದರೆ ಮನುಷ್ಯನಲ್ಲಿ ನಿಹಿತವಾದ ದೈವಿ ಶಕ್ತಿಯನ್ನು ಸರ್ಪರೂಪವಾಗಿ ಕಲ್ಪಿಸುತ್ತಾರೆ. ಈ ಕವನದಲ್ಲಿ ಶರೀಫರು ತಮ್ಮ ಬದುಕನ್ನು ಬದಲಾಯಿಸಿದ ಘಟನೆಯನ್ನು, ಅದಕ್ಕೆ ಕಾರಣವಾದ ಶಕ್ತಿಯನ್ನು ಚೋಳಿನ ರೂಪದಲ್ಲಿ ಬಣ್ಣಿಸಿದ್ದಾರೆ. ಶರೀಫರ ಗೀತೆಯ ಪೂರ್ಣಪಾಠ ಹೀಗಿದೆ:

ಚೋಳ ಕಡಿತು ನನಗೊಂದು ಚೋಳ ಕಡಿತು
ಕಾಳಕತ್ತಲದೊಳಗೆ ಕೂತಿತ್ತು, ನನಕಂಡ ಬಂತು ||ಪಲ್ಲ||

ಎಷ್ಟು ದಿನದ ಸಿಟ್ಟು ಇಟ್ಟಿತ್ತು, ತೀರಿಸಿ ಬಿಟ್ಟಿತು
ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು
ಹುಟ್ಟಿದ ಮಗಳ ಕಂಡಿದ್ದಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ||೧||

ಮೂರು ದೇಹದೊಳಗ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳೆದಿತ್ತ
ಸಾರಿಬಂದು ಎನ್ನ ನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು ||೨||

ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು
ಕಲಿಕರ್ಮ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು, ಹುಚ್ಚು ಹಿಡಿದಂಗಾತು ||೩||

ಆಧ್ಯಾತ್ಮಪಥದಲ್ಲಿ ಸಾಗಿದವರ ಜೀವನದಲ್ಲಿ ನಡೆಯುವ ಒಂದೆರಡು ಘಟನೆಗಳಿಂದಾಗಿ ಅವರ ಜೀವನವೇ ಬದಲಾಗಿ ಬಿಡುತ್ತದೆ. ಇಂತಹ ಸಂದರ್ಭವನ್ನು ಅನೇಕ ಸಾಧಕರು ಕಾವ್ಯದ ಮೂಲಕ ವರ್ಣಿಸಿದ್ದೂ ಉಂಟು.
ತಮ್ಮ ಬದುಕಿನಲ್ಲಿಯ ಇಂತಹ ಘಟನೆಯೊಂದನ್ನು ಶರೀಫರು “ಚೋಳ ಕಡಿತು ನನಗೊಂದು ಚೋಳ ಕಡಿತು”.
ಎನ್ನುವ ಚಿಕ್ಕ ಗೀತೆಯಲ್ಲಿ ಬಣ್ಣಿಸಿದ್ದಾರೆ.

ಯಾವ ಜೀವಿಗೂ ತನ್ನ ಮುಂದಿನ ಕ್ಷಣದ ಭವಿಷ್ಯದ ಅರಿವಿರುವದಿಲ್ಲ. ಭವಿಷ್ಯವೆಂದರೆ ಕಪ್ಪುಕತ್ತಲೆಯೇ ಸೈ. ಇಂತಹ ಕಪ್ಪು ಕತ್ತಲೆಯಲ್ಲಿ ತನ್ನ ಬಲಿಯನ್ನು ಜಪ್ಪಿಸಿಕೊಂಡು ಈ ಚೋಳು ಕೂತಿರುತ್ತದೆ. ಬಲಿಗೆ ಚೋಳು ಕಾಣಲಿಕ್ಕಿಲ್ಲ. ಆದರೆ ಚೋಳಿಗೆ ಬಲಿಯು ಸುಸ್ಪಷ್ಟ.
ಆದುದರಿಂದ ಇದನ್ನು “ಕಾಳಕತ್ತಲದೊಳಗೆ ಕೂತಿತ್ತು, ನನಕಂಡ ಬಂತು” ಎಂದು ಶರೀಫರು ಬಣ್ಣಿಸುತ್ತಾರೆ.

ಈ ಚೋಳು ಅಕಸ್ಮಾತ್ತಾಗಿ ಶರೀಫರನ್ನು ಕಂಡದ್ದಲ್ಲ. ಅದು ಎಷ್ಟೋ ದಿನದಿಂದ ಇವರ ಮೇಲೆ ಸಿಟ್ಟು ಇಟ್ಟುಕೊಂಡು ಕಾಯುತ್ತ ಕೂತಿದೆ. ಆದುದರಿಂದಲೇ ಚೋಳು ಕಚ್ಚಿಸಿಕೊಂಡ ಬಳಿಕ ಶರೀಫರು ವಿಸ್ಮಯಗೊಳ್ಳುತ್ತಾರೆ. “ಎಷ್ಟು ದಿನದ ಸಿಟ್ಟು ಇಟ್ಟಿತ್ತು, ಈಗ ತೀರಿಸಿ ಬಿಟ್ಟಿತು”, ಎನ್ನುತ್ತಾರೆ.
ಈ ಚೋಳಿಗೆ ಶರೀಫರ ಮೇಲೆ ದೀರ್ಘಕಾಲದ ಸಿಟ್ಟು ಯಾಕೆ ಎನ್ನುವ ಪ್ರಶ್ನೆ ಬರುತ್ತದೆ.
ಶರೀಫರ ಜನ್ಮಾಂತರಗಳ ಕರ್ಮಫಲವೇ ಈ ಚೋಳು. ಆದುದರಿಂದ ಅದರ ಸಿಟ್ಟು ಎಷ್ಟೋ ಜನ್ಮಗಳ ಸಿಟ್ಟು. ಈ ಚೋಳು ಕಡಿದ ಸಂಗತಿಯನ್ನು ಅಥವಾ ಅದರ ನೋವನ್ನು ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ, ಕರ್ಮಫಲವನ್ನು ಬದಲಿಸಲು ಯಾರೂ ತಮಗೆ ಸಹಾಯ ಮಾಡಲಾರರು ಎನ್ನುವದು ಶರೀಫರ ಮನಸ್ಸಿಗೆ ಅನುಭವವಾಗುತ್ತದೆ. ಅದಕ್ಕೇ ಸ್ವಗತದಲ್ಲಿ ಎಂಬಂತೆ ಶರೀಫರು ನುಡಿಯುತ್ತಾರೆ:
“ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು”.

ಚೋಳಿನ ಕಡಿತದಷ್ಟು ಶರೀಫರ ಮನಸ್ಸಿಗೆ ಆಘಾತ ಕೊಡುವ ಯಾವ ಘಟನೆ ನಡೆದಿರಬಹುದೆನ್ನುವ ಸೂಚನೆ ಮುಂದಿನ ಸಾಲಿನಲ್ಲಿ ಸಿಗುತ್ತದೆ:
“ಹುಟ್ಟಿದ ಮಗಳ ಕಂಡಿದ್ದಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ”

ಶರೀಫರ ಮೊದಲ ಹಾಗೂ ಒಂದೇ ಸಂತತಿಯಾದ ಹೆಣ್ಣು ಕೂಸು, ಅವರ ಹೆಂಡತಿಯ ತವರು ಮನೆಯಲ್ಲಿ ಜನಿಸಿ, ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತದೆ. ಇದೊಂದು ತೀವ್ರ ದುಃಖದ ಅನುಭವ. ಅದಕ್ಕೇ ‘ಇದರ ಕಷ್ಟ ಶಿವನೇ ಬಲ್ಲ’ ಎಂದು ಶರೀಫರು ದುಃಖದಿಂದ ಹೇಳುತ್ತಾರೆ. ಇದು ಎದೆಯಲ್ಲಿ ಮುಳ್ಳು ಚುಚ್ಚಿದಂತಹ ಅನುಭವವಾಗಿರಬೇಕು. ಆ ಸಮಯದಲ್ಲಿ ಅಧ್ಯಾತ್ಮದ ಕಡೆಗೆ ಹೆಚ್ಚೆಚ್ಚಾಗಿ ತಿರುಗಿದ ಶರೀಫರು ‘ಮಾಯವಾಗಿ ಹೋತು’ ಎಂದು ಹೇಳುತ್ತಾರೆ.

ಈ ‘ಮಾಯವಾಗಿ ಹೋತು’ ಎನ್ನುವ ವಾಕ್ಯ ಅನೇಕ ಅರ್ಥಗಳಿಂದ ಕೂಡಿದೆ. ಇದೀಗ ಹುಟ್ಟಿದ ಕೂಸು ಕೆಲವೇ ದಿನಗಳಲ್ಲಿ ಮಾಯವಾಗಿ ಹೋಯಿತು ಎನ್ನುವದು ಒಂದು ಅರ್ಥ. ಚುಚ್ಚಿದ ಮುಳ್ಳು ಮಾಯವಾಗಿ ಹೋಯಿತು ಎಂದು ತಿಳಿದರೆ ಸಂಸಾರದಲ್ಲಿ ಯಾವದೂ ಶಾಶ್ವತವಲ್ಲ; ಸುಖ ಹಾಗೂ ದುಃಖಗಳು ಬರುತ್ತವೆ ಹಾಗೂ ಹೋಗುತ್ತವೆ ಎನ್ನುವದು ಮತ್ತೊಂದುಅರ್ಥ. ಸಂಸಾರದಲ್ಲಿ ಮುಳುಗಿದ ಶರೀಫರಿಗೆ ಕವಿದ ಮೋಹದ ಮಾಯೆ ಮಾಯವಾಗಿ ಹೋಯಿತು ಎನ್ನುವದು ಮೂರನೆಯ ಅರ್ಥ.

ಇಂತಹ ದುಃಖದ ಅನುಭವದ ನಂತರ ಶರೀಫರು ಇದೀಗ ಕಣ್ಣು ತೆರೆದ ವ್ಯಕ್ತಿ. ಹೀಗಾಗಿ ಆ ಚೋಳನ್ನು ಕೇವಲ ಆಘಾತ ನೀಡುವ ಕರ್ಮಫಲವೆಂದು ತಿಳಿಯದೆ, ಜ್ಞಾನದ ಬೆಳಕು ನೀಡುವ ಶಕ್ತಿಯೆಂದು ಅವರು ಭಾವಿಸುತ್ತಾರೆ. ಈ ಚೋಳು ಕೇವಲ ಕಷ್ಟ ಕೊಡುವ ಚೋಳಲ್ಲ, ಕಷ್ಟದ ಮೂಲಕ ಪರಮಜ್ಞಾನದ ಕಡೆಗೆ ಮನಸ್ಸನ್ನು ತಿರುಗಿಸುವ ಚೋಳು ಎನ್ನುವದು ಅವರಿಗೆ ಅರಿವಾಗುತ್ತದೆ. ಅದರ ನಿಜಸ್ವರೂಪ ಅವರಿಗೆ ಈಗ ನಿಚ್ಚಳವಾಗತೊಡಗಿದೆ. ಈ ಗೂಢಾರ್ಥ ಅವರ ಮುಂದಿನ ನುಡಿಗಳಲ್ಲಿ ಸ್ಪಷ್ಟವಾಗಿದೆ.

“ಮೂರು ದೇಹದೊಳಗ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳೆದಿತ್ತ
ಸಾರಿಬಂದು ಎನ್ನ ನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು”

ಈ ಚೋಳು ಇರುವ ಮೂರು ದೇಹಗಳು ಅಂದರೆ ಸ್ಥೂಲ ಶರೀರ, ಸೂಕ್ಷ್ಮ ಶರೀರ ಹಾಗೂ ಕಾರಣಶರೀರಗಳು. ಸ್ಥೂಲಶರೀರವೆಂದರೆ ಯಾವುದೇ ಒಂದು ಜನ್ಮದಲ್ಲಿ ನಮಗಿರುವ ದೇಹ. ಸೂಕ್ಷ್ಮಶರೀರವೆಂದರೆ ವಾಸನಾಶರೀರ. ಇದು ಸ್ಥೂಲಶರೀರವು ನಾಶವಾದ ನಂತರವೂ ಉಳಿದಿರುವ ವಾಸನೆಗಳ ಹಾಗೂ ಕರ್ಮಫಲಗಳ ಶರೀರ. ಕಾರಣಶರೀರವೆಂದರೆ ಆತ್ಮವು ದೇಹವನ್ನು ಧರಿಸಲು ಬೇಕಾಗುವ ಮೂಲ ಪ್ರೇರಣಾ ಶರೀರ. ಈ ಮೂರೂ ದೇಹಗಳಲ್ಲಿ ಈ ಚೋಳು ಇರುತ್ತದೆ ಎಂದು ಶರೀಫರು ಹೇಳುತ್ತಾರೆ. ಅಂದರೆ, ಈ ಚೋಳು ನಮಗೆ ಹೊರಗಿನದಲ್ಲ, ನಮ್ಮಲ್ಲೇ ಸದಾಕಾಲ ಇರುವಂಥಾದ್ದು. ನಮ್ಮನ್ನು ತಪ್ಪು ಮಾರ್ಗದಿಂದ ಬಿಡಿಸಿ ಸನ್ಮಾರ್ಗಕ್ಕೆ ಹಚ್ಚುವಂಥಾದ್ದು. ಈ ಚೋಳಿಗೆ ಇರುವ ಸ್ವಭಾವ ಯಾವುದು ಎಂದರೆ ‘ಪರಮಾತ್ಮನಾದದೊಳು ತಾನು ಬೆಳೆದಿತ್ತ’.
ಯಾವಾಗಲೂ ಪರಮಾತ್ಮನನ್ನು ಚಿಂತಿಸುತ್ತ ಅದೇ ನಾದದಲ್ಲಿ, ಅದೇ ಧ್ಯಾನದಲ್ಲಿ ಇರುವ ಜೀವಿ ಇದು. ಹಾಗಿದ್ದರೆ ಇದಕ್ಕೆ ನೋವು ಕೊಡುವ ಕೊಂಡಿ ಏಕೆ ಇದೆ ಎಂದು ಕೇಳಬಹುದು. ಮನುಷ್ಯನಿಗೆ ನೋವಿನ ಅನುಭವವಾಗದೇ ಅವನ ಮನಸ್ಸು ಪರಮಾರ್ಥದ ಕಡೆಗೆ ಹೊರಳದು. ಆದುದರಿಂದ ನಮ್ಮ ಒಳಗೇ ಇರುವ ಈ ಜ್ಞಾನಶಕ್ತಿಯು ಚೋಳಿನ ರೂಪ ಧರಿಸಿರುತ್ತದೆ. ಸಕಾಲದಲ್ಲಿ ನೋವಿನ ಕೊಂಡಿಯಿಂದ ಚುಚ್ಚಿ, ನಮ್ಮನ್ನು ಎಚ್ಚರಕ್ಕೆ ತರುತ್ತದೆ. ಸರಿಯಾದ ಸಮಯದಲ್ಲಿ ಇದು ಸಾರಿ ಬಂದು ಅಂದರೆ ಧಾವಿಸಿ ಬಂದು, ಶರೀಫರನ್ನು ನೋಡಿತು. ಆ ಚೋಳು ನೋಡಿದ್ದೇ ಒಂದು ಅನುಗ್ರಹ! ಆ ಚೋಳಿನಲ್ಲಿರುವ ಬೆಳಕು ಎಂತಹದಂದರೆ, ಮೂರು ಲೋಕಗಳನ್ನೂ ಬೆಳಗುವ ಬೆಳಕು ಅದು. ಮೂರು ಲೋಕಗಳೆಂದರೆ ಸ್ವರ್ಗ, ಮರ್ತ್ಯ ಹಾಗೂ ಪಾತಾಳ. ಆತ್ಮವು ತನ್ನ ವಿವಿಧ ಅವಸ್ಥೆಗಳಲ್ಲಿ ಈ ಲೋಕಗಳಲ್ಲಿ ವಾಸಿಸುತ್ತದೆ. ಯಾವುದೇ ಲೋಕದಲ್ಲಿರಲಿ, ಅಲ್ಲಿ ಈ ಎಚ್ಚರಿಕೆ ನೀಡುವ ಚೋಳು ಆತ್ಮವನ್ನು ದಿಟ್ಟಿಸುತ್ತಲೇ ಇರುತ್ತದೆ. ಹಾಗು ಈ ಮೂರೂ ಲೋಕಗಳ ಮೇಲಿರುವ ಉನ್ಮನಿ ಅವಸ್ಥೆಯಲ್ಲಿ ಈ ಚೋಳು ಹಾರಿ ಐಕ್ಯವಾಗುತ್ತದೆ. (ಉನ್ಮನಿ ಅವಸ್ಥೆ ಎಂದರೆ ಸಾಧನೆಯ ಒಂದು ಅವಸ್ಥೆ. ಈ ಅವಸ್ಥೆಯಲ್ಲಿ ಸಾಧಕನ ಪ್ರಜ್ಞೆಯು ಲೋಕಸಾಮಾನ್ಯ ಸ್ಥಿತಿಯಲ್ಲಿ ಇರುವದಿಲ್ಲ. ಹೀಗಾಗಿ ಆ ವ್ಯಕ್ತಿಯು ಜನರ ಕಣ್ಣಿಗೆ ಹುಚ್ಚನಂತೆ ಕಾಣಬಹುದು. ರಾಮಕೃಷ್ಣ ಪರಮಹಂಸರು ಈ ಅವಸ್ಥೆಯಲ್ಲಿ ಇದ್ದಾಗ ಹುಚ್ಚರಂತೆ ವರ್ತಿಸುತ್ತಿದ್ದರು ಎಂದು ಹೇಳಲಾಗುತ್ತದೆ.)

ಈಗಿನ ಆಧುನಿಕ ಮನೆಗಳಲ್ಲಿ ಚೋಳು ಕಾಣಸಿಗುವದಿಲ್ಲ. ಆದರೆ ಮೊದಲು ಹಳ್ಳಿಗಳಲ್ಲಿ ಕಟ್ಟಿರುತ್ತಿದ್ದ ಮಣ್ಣಿನ ಮನೆಗಳಲ್ಲಿ ಇವು ಸಾಮಾನ್ಯವಾಗಿರುತ್ತಿದ್ದವು. ಮನೆಯ ಕೋಣೆಗಳ ಮೂಲೆಗಳಲ್ಲಿ ಇವು ಸಿಗುತ್ತಿದ್ದವು. ಶರೀಫರು ತಮ್ಮ ಈ ಚೋಳು ದೇವರ ಕೋಣೆಯ ಮೂಲೆಯೊಳಗಿತ್ತು ಎಂದು ಹೇಳುತ್ತಾರೆ. ಅಂದರೆ ಈ ಚೋಳನ್ನು ನೀವು ಕಾಣಬೇಕಾದರೆ ಅಥವಾ ಈ ಚೋಳಿನಿಂದ ಕಡಿಸಿಕೊಳ್ಳಬೇಕಾದರೆ, ದೇವರ ಕೋಣೆಯೊಳಗೆ ನೀವು ಪ್ರವೇಶಿಸಬೇಕು ಅರ್ಥಾತ್ ನಿಮ್ಮ ಮನಸ್ಸು ಪರಮಾತ್ಮದ ಕಡೆಗೆ ತಿರುಗಬೇಕು! ದೇವರ ಮನೆ ಎಂದರೆ ಮನುಷ್ಯನ ಮನಸ್ಸು ಎಂದೂ ಅರ್ಥವಾಗಬಹುದು. ಅಲ್ಲಿ ಈ ಚೋಳು ಆಧಾರ ಹಿಡಿದು ಕೊಂಡಿಯನ್ನು ಮೇಲ್ಮುಖವಾಗಿ ಮಾಡಿಕೊಂಡಿತ್ತು.
“ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು
ಕಲಿಕರ್ಮ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು, ಹುಚ್ಚು ಹಿಡಿದಂಗಾತು ”

ಶರೀಫರು ಈ ಸಾಲಿನಲ್ಲಿ ಯೋಗಸಾಧನೆಯ ಪರಿಭಾಷೆಯನ್ನು ಬಳಸುತ್ತಾರೆ. ಆಧಾರ ಎಂದರೆ ಮೂಲಾಧಾರ ಚಕ್ರ. ಅಲ್ಲಿ ಈ ಚೋಳು ಊರ್ಧ್ವಮುಖಿಯಾಗಿತ್ತು ಅಂದರೆ ಇದರ ಗಮನ ಮೂಲಾಧಾರದ ಮೇಲಿರುವ ಚಕ್ರಗಳತ್ತ ಇದೆ. (ಮೂಲಾಧಾರದ ಮೇಲಿನ ಚಕ್ರಗಳು ಹೀಗಿವೆ: ಸ್ವಾಧಿಸ್ಠಾನ, ಮಣಿಪೂರ, ಅನಾಹತ, ವಿಶುದ್ಧಿ ಹಾಗೂ ಆಜ್ಞಾಚಕ್ರ.) ಸಾಧಕನನ್ನು ಮೇಲ್ಮುಖವಾಗಿ ಕರೆದೊಯ್ಯುವ ಶಕ್ತಿ ಇದು. ತನ್ನ ಸಮಯ ಬರುವವರೆಗೆ ಇದು ಸ್ಥೂಲದೇಹದಲ್ಲಿ ಅಂದರೆ ಜ್ಞಾನವಿಹೀನ ದೇಹದಲ್ಲಿ ನಿದ್ರಿಸುತ್ತಿರುತ್ತದೆ. (ಕುಂಡಲಿನಿ ಶಕ್ತಿಯು ಮೂಲಾಧಾರದಲ್ಲಿ ಸರ್ಪರೂಪದಲ್ಲಿ ಮಲಗಿರುತ್ತದೆ ಎನ್ನುವದು ಯೋಗಶಾಸ್ತ್ರದ ಪರಿಭಾಷೆ.) ಹಾಗೂ ಕಲಿಕರ್ಮವನ್ನು ಅಂದರೆ ದುಷ್ಕರ್ಮಗಳನ್ನು ನುಂಗುತ್ತ ತಕ್ಕ ಸಮಯಕ್ಕಾಗಿ ಕಾಯುತ್ತಿತ್ತು. ಸಮಯ ಬರುವ ವರೆಗೂ ಈ ಚೋಳು ಪರಮಾತ್ಮನ ಧ್ಯಾನದಲ್ಲಿಯೇ ಮಗ್ನವಾಗಿತ್ತು. ಅರ್ಥಾತ್ ಪರಮಾತ್ಮನ ಹೊರತಾಗಿ ಈ ಶಕ್ತಿಗೆ ಮತ್ತೇನೂ ಬೇಕಾಗಿಲ್ಲ. ಅಂತಹ ಚೈತನ್ಯ ವು ಕುಟುಕಿದಾಗ, ಶರೀಫರು ತಮಗೆ ಎಚ್ಚರಾಯಿತು, ಅಷ್ಟೇ ಅಲ್ಲ ಹುಚ್ಚು ಹಿಡಿದ ಹಾಗಾಯಿತು ಎಂದು ಹೇಳುತ್ತಾರೆ.
ಪರಮಾರ್ಥದ ಜ್ಞಾನ ದೊರೆತ ಬಳಿಕ ಜೀವಿಯು ಪರಮಾತ್ಮನ ಹುಚ್ಚಿನಲ್ಲಿ ಮುಳುಗುವದು ಸಹಜವೇ ಆಗಿದೆ!

[ಟಿಪ್ಪಣಿ:
ಪರಮಾರ್ಥದ ಜ್ಞಾನಕ್ಕಾಗಿ ನೋವಿನ ಅನುಭವ ಅನಿವಾರ್ಯವೇನೊ? ಕರ್ನಾಟಕದ ಇನ್ನಿಬ್ಬರು ಸಂತರ ಬಾಳಿನಲ್ಲಿಯೂ ಇಂತಹ ವಿಷಾದಕರ ಘಟನೆಗಳು ನಡೆದಿವೆ. ಮೊದಲನೆಯವರು ಬಸವಣ್ಣ. ತಮ್ಮ ಮಗ ಸಂಗಬಸವಣ್ಣ ನಿಧನ ಹೊಂದಿದಾಗ ಅವರು ಉದ್ಗರಿಸಿದ ವಚನ ಹೀಗಿದೆ:
“ಪಕ್ವವಾದ ಫಲವಿರಲು ಕಸುಕಾಯನೆತ್ತಿಕೊಂಡನು ಶಿವನು”.
ಪರಮಾತ್ಮನು ವಯಸ್ಸಾದ ತನಗೆ ಸಾವು ಕೊಡುವ ಬದಲು ಚಿಕ್ಕ ಬಾಲಕನಿಗೆ ಸಾವು ಕೊಟ್ಟನಲ್ಲ ಎನ್ನುವ ಈ ವಚನದಲ್ಲಿ ವ್ಯಕ್ತವಾಗುವ anguish ಹಾಗೂ resignation to God’s will ಇವು ಬೇರೆ ಯಾವ ಭಾಷೆಯ ಸಾಹಿತ್ಯದಲ್ಲೂ ಸಿಗಲಿಕ್ಕಿಲ್ಲ.
ಎರಡನೆಯವರು ಪುರಂದರದಾಸರು. ತಮ್ಮ ಮಗನ ಮರಣದ ಸಂದರ್ಭದಲ್ಲಿ ಇವರು ಹಾಡಿದ ಗೀತೆಯೂ ಸಹ ಶೋಕರಸದ ಅನನ್ಯ ಗೀತೆಯಾಗಿದೆ:
“ಗಿಳಿಯು ಪಂಜರದೊಳಿಲ್ಲ
ಬರಿದೆ ಪಂಜರವಾಯಿತಲ್ಲ!”]

31 comments:

Anonymous said...

ಸುನಾಥ್
ಅದ್ಬುತವಾದ ವಿಶ್ಲೇಷಣೆ. ನೀವೇ ಶರೀಫರ ಜೊತೆಯಲ್ಲಿದ್ದು ಅನುಭವಿಸಿದಂತೆ ಬರೆದಿದ್ದೀರಿ. ತುಂಬಾ ಇಷ್ಟವಾಯಿತು. ನೀವು ಬಹುಶಃ ಆದ್ಯಾತ್ಮ ಸಾಧನೆಯನ್ನು ಮಾಡುತ್ತಿರಬೇಕು ಇಲ್ಲ ತುಂಬಾ ಪುಸ್ತಕಗಳನ್ನು ಓದುತ್ತೀರಿ ಎಂದು ಕಾಣುತ್ತೆ. ಇಂತಹ ವಿಶ್ಲೇಷಣೆಯನ್ನು ನೀಡಿದಕ್ಕೆ ಧನ್ಯವಾದಗಳು.
ಹರ್ಷ

Ittigecement said...

ಸುನಾಥ ಸರ್....

ಶಿಶುನಾಳ ಷರೀಫರ ಆಧ್ಯಾತ್ಮ ಜ್ಞಾನ ಅದ್ಭುತವಾಗಿತ್ತು....

ಅವರ ಹಾಡುಗಳಲ್ಲಿ ಈ ಥರಹ ಪಾರಮಾರ್ಥಿಕ
ಅರ್ಥಗಳನ್ನು ತಿಳಿಸಿದ ನಿಮಗೆ ಅನಂತ ಕ್ರ್‍ಅತಜ್ಞತೆಗಳು...

ಸರ್...
ನೀವು ಸಿವಿಲ್ ಇಂಜನೀಯರ್ ಆಗಿ ಆಧ್ಯಾತ್ಮ ಪುಸ್ತಕ ಓದಿದ್ದೀರಾ...?

ನೀವೂ ಸಹ ಗ್ರೇಟ್....!

ನಿಮ್ಮ ಆಳವಾದ ಅಧ್ಯನಕ್ಕೆ..
ನಮನಗಳು..
ಅಭಿನಂದನೆಗಳು...

sunaath said...

ಹರ್ಷ,
ನಾನು ಸಾಧಕನೂ ಅಲ್ಲ, ಸಾಧು ಮನುಷ್ಯನೂ ಅಲ್ಲ. ಆದರೆ
ಪುಸ್ತಕ ಓದೋ ಚಟವಿದ್ದವನು,ಅಷ್ಟೇ!

sunaath said...

ಪ್ರಕಾಶ,
ನೀವೂ ಸಹ ಸಿವಿಲ್ ಇಂಜನಿಯರ ಆಗಿದ್ದು, ಎಷ್ಟು ಸುಂದರ ವಿನೋದಮಯ ಲೇಖನ ಬರೀತೀರಲ್ಲ! ನಾನು ನಿಮಗೇ ಗ್ರೇಟ್ ಎಂದು ಕರೆಯಬೇಕು!

umesh desai said...

ಶರೀಫರು ಹಾವುತುಳದಿದ್ದರ ಮ್ಯಾಲ ಬರದಾರ ಆದ್ರ ಚೋಳಿನಮ್ಯಾಲೂ ಬರದಾರ ಅಂತ ನಿಮ್ಮ ಲೇಖನ ಒದಿದಮ್ಯಾಲನ
ಗೊತ್ತಾಗಿದ್ದು . ಎಂದಿನಂತೆ ನಿಮ್ಮ ವಿಶ್ಲೇಷಣಾ ದಾದ್ ಕೊಡಲೇಬೇಕು . ನಿಜ ಮನುಷ್ಯ ಮಾಡುವ ವೃತ್ತಿಗೂ ಅವನ ಖಯಾಲಿಗಳಿಗೂ ಹೋಲಿಕಿ ಇರೂದಿಲ್ಲ. ಮತ್ತ ಹೇಳ್ತೀನಿ " ಉಘೆ ಉಘೇ "

sunaath said...

ಉಮೇಶ,
ಶರೀಫರು ಬರೇ ಹಾವು, ಚೋಳಿನ ಮ್ಯಾಲ ಅಷ್ಟs ಯಾಕ, ಕಪ್ಪಿ ಮ್ಯಾಲ ಬರದಾರ, ತಗಣಿ ಮ್ಯಾಲ ಬರದಾರ;ಮಂಗ್ಯಾ, ಕೋಳಿ, ನಾಯಿ, ನರಿ ಇವೆಲ್ಲಾದರ ಮ್ಯಾಲೂ ಶರೀಫರ ಕವನ ಅವ.

shivu.k said...

ಸುನಾಥ್ ಸರ್,

ಶರೀಪರ ಹಾಡಿನಲ್ಲಿ ಇಂಥದೊಂದು ಸೊಗಸಾದ ಒಳಾರ್ಥವುಳ್ಳ ಅಧ್ಯಾತ್ಮ ತತ್ವ ಅಡಗಿರುವುದನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ...

"ಮನುಷ್ಯನಿಗೆ ನೋವಿನ ಅನುಭವವಾಗದೇ ಅವನ ಮನಸ್ಸು ಪರಮಾರ್ಥದ ಕಡೆಗೆ ಹೊರಳದು. ಆದುದರಿಂದ ನಮ್ಮ ಒಳಗೇ ಇರುವ ಈ ಜ್ಞಾನಶಕ್ತಿಯು ಚೋಳಿನ ರೂಪ ಧರಿಸಿರುತ್ತದೆ. ಸಕಾಲದಲ್ಲಿ ನೋವಿನ ಕೊಂಡಿಯಿಂದ ಚುಚ್ಚಿ, ನಮ್ಮನ್ನು ಎಚ್ಚರಕ್ಕೆ ತರುತ್ತದೆ".

ಈ ಸಾಲಂತು ಎಷ್ಟು ಸತ್ಯವಲ್ಲವೇ...

ಅಧ್ಯಾತ್ಮ ವಿಚಾರಗಳೆಂದರೆ ನನಗೆ ಸ್ವಲ್ಪ ಹೆಚ್ಚು ಇಷ್ಟ. ssy ಕಾರ್ಯಕ್ರಮಕ್ಕೆ ಹೋಗುತ್ತಿರುತ್ತೇನಾದ್ದರಿಂದ ಅಲ್ಲಿಯೂ ಸ್ವಲ್ಪ ಕಲಿಯುವ ಅವಕಾಶವಾಗಿದೆ. ನೀವು ಹೇಳಿದಂತ ಚಕ್ರಗಳ ಬಗ್ಗೆ ತಿಳಿದಿತ್ತು. ಅದರ ಅಲ್ಪಸ್ವಲ್ಪ ಅನುಭವವನ್ನು ಮಾಡಿಸಿದ್ದಾರೆ.

ಶರೀಫರ ಹಾಡಿನಿಂದ ಬೇರೆ ರೀತಿಯ ತಿಳಿವಳಿಕೆ ಮೂಡಿಸಿದ್ದೀರಿ...ಧನ್ಯವಾದಗಳು..

sunaath said...

ಶಿವು,
ಈ ದುಃಖದ ಅನುಭವ ಶರೀಫರಿಗೆ ವೈಯಕ್ತಿಕ ರೂಪದಲ್ಲಿ ಆಯಿತು. ಆದರೆ, ರಾಜಕುಮಾರ ಸಿದ್ಧಾರ್ಥನು ಜಗತ್ತಿನಲ್ಲೆಲ್ಲ ಹರಡಿದ ನೋವನ್ನು ಕಂಡು, ಮನಗಂಡು ಬುದ್ಧನಾದ. ಒಟ್ಟಿನಲ್ಲಿ ದುಃಖವೇ ಶಿಕ್ಷಕ!

ಚಿತ್ರಾ said...

ಸುನಾಥ್ ಕಾಕಾ,

ಖಾಯಂ ಆಗಿ ಓದುತ್ತಿದ್ದರೂ ಬಹಳ ದಿನಗಳಿಂದ ಅಭಿಪ್ರಾಯ ಬರೆಯಲಾಗಿರಲಿಲ್ಲ. ನಿಮ್ಮ ವಿಶ್ಲೇಷಣೆಯ ರೀತಿಗೆ ಪ್ರತಿಸಲವೂ ಬೆರಗಾಗುತ್ತೇನೆ.
ಶರೀಫರ ಸರಳ ಕವಿತೆಗಳ ಹಿಂದಿನ ಗೂಢಾರ್ಥವನ್ನು ಅದ್ಭುತವಾಗಿ ಬಿಡಿಸಿಡುವ ನಿಮ್ಮ ವೈಖರಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು.

Prabhuraj Moogi said...

ಚೇಳಿನ ಕವನ ಬಹಳ ಚೆನ್ನಾಗಿದೆ, ಸ್ವತ: scorpion (ಜನ್ಮರಾಷಿ)ಆಗಿರುವ ನನಗೇ ಮೊದಲೇ ಚೇಳಿನ ಬಗ್ಗೆ ಆಸಕ್ತಿ, ಅಮ್ಮ ಮನೆಯಲ್ಲಿ ಚೇಳು ಕಡಿಸಿಕೊಂದು ನರಳಿದ್ದು ಕೇಳಿದರೆ ಈಗಲೂ ನಡುಕ... ಯಾವುದೊ ಘಟನೆ ಹೇಗೆ ಹೇಗೆ ಅರ್ಥ್ ಬರುವಂತೆ ಬರೆಯುತ್ತಿದ್ದರಲ್ಲ ಅವರು ಅದರ ಅರ್ಥ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು... ಶರೀಫರ ಕವನಗಳ ಅರ್ಥದ ಪುಸ್ತಕವನ್ನೇಕೆ ಮಾಡಬಾರದು ನಿಮ್ಮಲ್ಲಿ ಎಲ್ಲ ಕವನಗಳ ಮಾಹಿತಿಯಿದೆ, ವಿಚಾರಮಾಡಿ.

sunaath said...

ಚಿತ್ರಾ,
ನನ್ನ ಲೇಖನಗಳು ನಿನಗೆ ಖುಶಿ ಕೊಟ್ಟರೆ, ನನಗೆ ಅದೇ ಸಂತೋಷ.

sunaath said...

ಪ್ರಭುರಾಜ,
ವೃಶ್ಚಿಕ ರಾಶಿಯವರಿಗೆ ಚೋಳು ಕಡಿಯುವದಿಲ್ಲವೆಂದು ಕೇಳಿದ್ದೇನೆ. That way, ನೀವು safeಉ ಕಣ್ರೀ!

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಶಿಶುನಾಳರನ್ನು ಹೊಸ ರೀತಿಯಲ್ಲಿ ತೋರಿಸಿಕೊಟ್ಟಿದ್ದೀರಿ. ಒಳಾರ್ಥಗಳನ್ನು ಚೆನ್ನಾಗಿ ಅರ್ಥೈಸಿಕೊಟ್ಟಿದ್ದೀರಿ. ಧನ್ಯವಾದಗಳು.

PARAANJAPE K.N. said...

ಶರೀಫರ ಹಾಡಿನ ಒಳಹೂರಣವನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಿರಿ. ಅಭಿನ೦ದನೆಗಳು

sunaath said...

ಮಲ್ಲಿಕಾರ್ಜುನ,
ಶರೀಫರ ಹಾಡು, ಅದರ ಒಳಗಿನ ಸೊಬಗು ನಿಮಗೆ ಖುಶಿ ಕೊಟ್ಟರೆ, ನಾನು ಕೃತಾರ್ಥ.

sunaath said...

ಪರಾಂಜಪೆ,
ಕಡಬು ಹಾಗೂ ಅದರ ಒಳಗಿನ ಹೂರಣ ಎಲ್ಲಾ ಶರೀಫರದೆ.
ನಾನು ಬಡಸಿದಾತ ಅಷ್ಟೆ!

rj said...

ಶರೀಫರು ಇಂಥದ್ದೊಂದು ಹಾಡು ಬರೆದಿದ್ದೇ ಗೊತ್ತಿರಲಿಲ್ಲ.
ಸಿಲ್ಲಿ ಸಿಲ್ಲಿಯಾದ ಸಂಗತಿ,ವಿಕ್ಷಿಪ್ತ ಘಟನೆಗಳ ಮೂಲಕ ಏನೆಲ್ಲ ಹೇಳುತ್ತ ಹೋಗುತ್ತಾರೆ ಶರೀಫರು!
ಚೇಳಿನ ಬಗ್ಗೆ ಓದುತ್ತ ಓದುತ್ತ ಚಿಕ್ಕಂದಿನಲ್ಲಿ ಕಿವಿಗೆ ಚೇಳು ಕಚ್ಚಿದ್ದು,ರಾತ್ರಿಯೆಲ್ಲಾ ಮನೆಮಂದಿಯನ್ನು (ಸಕ್ಕರೆ-ಪುಠಾಣಿಗಾಗಿ!) ಗೋಳುಹೊಯ್ದುಕೊಂಡಿದ್ದು,ಅಕ್ಕ ಚೇಳಿನ ಮೇಲೆ ರುಬ್ಬುಗುಂಡು ಹೇರಿದ್ದು-ಎಲ್ಲ ನೆನಪಾದವು..
ಚೇಳಿಗೇನು ಸ್ವಾಮಿ? ಕನ್ಯಾ ಆದರೇನು,ವೄಶ್ಚಿಕರಾದರೇನು ಮಾಡೊ ಕೆಲಸ ಮಾಡೋದೆ..
ಸ್ಕಾರ್ಪಿಯನ್ ಆದ ನನ್ನನ್ನೂ ಬಿಡಲಿಲ್ಲ!
:-(

-ರಾಘವೇಂದ್ರ ಜೋಶಿ.

kanasu said...

ka ka...

nanage ee padya swalpanu arthane agirlilla...tumba chennada vivarane neediddiri..
thank you so much :)

ಜಲನಯನ said...

ಸುನಾಥ್ ಸರ್, ಶರೀಫರ ನಿಜ ಜೀವನದ ವಿಪರ್ಯಾಸಗಳ ಪರಿವರ್ಣನೆ, ಕೊಂಕುಗಳನ್ನು ಬಿಂಕಬಿಡದೇ ಕನ್ನಡಿ ಹಿಡಿಯುವ ಜಾಣ್ಮೆ, ಎಲ್ಲದಕ್ಕೂ ಮಿಗಿಲಾಗಿ ಜನಸಾಮಾನ್ಯನಿಗೆ ಮನಮುಟ್ಟಿಸುವ ಪದಬಳಕೆ...ಇವರ ಕೃತಿಗಳು ಜನಜನಿತವಾಗಲು ಕಾರಣ ಎನ್ನಬಹುದೇ...?? ಕೋಡಗನ ಕೋಳಿ ನುಂಗಿತ್ತಾ...ವಿಪರ್ಯಾಸದ ಬಣ್ಣನೆ ನಿಜ ಜೀವನಕ್ಕೆ ಹೋಲಿಸಿರುವುದು...
ಈಗ ಈ ನಿಮ್ಮ ವಿವರಗಳೊಂದಿಗೆ ಬ್ಲಾಗಿಸಿರುವ ಕೃತಿ...
ಪ್ರಕಾಶ್ ಹೇಳಿದ್ದು ನಿಜ...ನಿಮಲ್ಲಿ ಕೃತಿಗಳನ್ನು ಓದುವ, ಅರಗಿಸಿಕೊಳ್ಳುವ ಮತ್ತು ವಿಶ್ಲೇಷಿಸುವ ಅಪೂರ್ವ ಗುಣವಿಶೇಷವಿದೆ...ಇಂಜಿನಿಯರ್ ಗೆ ಈ ಮಟ್ಟದ ಆಳಕ್ಕೆ ಕರೆದುಕೊಂಡು ಹೋಗುವುದು ಆತನ ಇಚ್ಛಾ ಶಕ್ತಿ ಮತ್ತು ಆಸಕ್ತಿ...ಹೀಗೆ..ಮತ್ತೂ ನಿರೀಕ್ಷಿಸೋಣವೇ,,,??

Godavari said...

ಸುನಾಥ್ ಅವರೇ,

ಬಹಳ ಸುಂದರವಾಗಿ ಮತ್ತು ಅಷ್ಟೇ ವಿವರವಾಗಿ ಶರೀಫರ ಪದ್ಯಗಳನ್ನು ಓದಲು ನೀಡುತ್ತಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು. ಇಂತಹ ಆಧ್ಯಾತ್ಮ ಜಗತ್ತಿಗೆ ಸಂಬಂಧಿಸಿದ ಪದ್ಯಗಳು ನಮ್ಮನ್ನು ಬೇರೊಂದು ಜಗತ್ತಿಗೇ ಕೊಂಡೊಯ್ಯುತ್ತವೆ.

ಈ 'ಚೋಳ ಕಡಿತು ನನಗೊಂದು ಚೋಳ ಕಡಿತು' ಪದ್ಯ ಒಂದು ರಹಸ್ಯಾತ್ಮಕ ಸಂವೇದನೆಯ ಪದ್ಯದಂತೆ ನನಗೆ ತೋರುತ್ತದೆ. ತಮ್ಮನ್ನು ಕಡಿದ ಚೇಳು 'ದೇವರಾ ಮನೆಯ ಮೂಲೆಯೊಳಗೆ ಇದ್ದದ್ದು', 'ಕಾಲ ಕತ್ತಲೆಯೊಳಗೆ ಕೂತದ್ದು' ಎಂದು ಶರೀಫರು ಹೇಳುತ್ತಾರೆ. ಅದು ಕಚ್ಚಿದೊಡನೆ ಎಚ್ಚರವಾಗಿ ಹೋಯಿತು, ಹುಚ್ಚೇ ಹಿಡಿಯಿತು ಎನ್ನುತ್ತಾರೆ. ತನಗೇ ಅರಿವಿಲ್ಲದಂತೆ ಮನದ ಆಳ ಕತ್ತಲಿನಲ್ಲಿ ಅಡಗಿ ಕೂಳಿತಿದ್ದ ಆ ಆಧ್ಯಾತ್ಮಿಕತೆ ಫಕ್ಕನೆ ಹೊರಗೆ ಹರಿದು ಲೌಕಿಕ ಬದುಕನ್ನು ಯಾತನಾಮಯವಾಗಿಸಿದರೂ ಲೌಕಿಕ ಜಗತ್ತಿನಿಂದ ಅದೇ ಕಾಪಾಡಿತು ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೇನೋ ಅನ್ನಿಸುತ್ತದೆ.

ಈ ಪದ್ಯವನ್ನು ಓದುತ್ತ, ಅಡಿಗರ ಹಿಮಗಿರಿ ಕಂದರದಲ್ಲಿ ಬರುವ 'ರತಿಮಾಲಚ್ಛಾಯೆಯಲ್ಲಿ ಬಿಚ್ಚಿತು ಬೋಧಿವೃಕ್ಷದಗ್ನಿಯ ಛತ್ರಿ' ಎಂಬ ಪ್ರತೀಕ ನನಗೆ ಇಲ್ಲಿ ನೆನೆಪಾಯಿತು. ಆ ಜಾಗ್ರತಿಯ 'ಅಗ್ನಿ ಛತ್ರಿ' ಸುಡುತ್ತಲೇ ಕಾಪಾಡುತ್ತದೆ. ಮತ್ತೊಂದು ಇಂಥದೇ ಪ್ರಯೋಗ ಎಲಿಯಟ್ಟ ಕವಿಯ ' Four Quartets' ಎಂಬ ಕವಿತೆಯಲ್ಲಿ ಬರುವ ರಕ್ತ ಸಿಕ್ತ ಹಸ್ತದ ಶಸ್ತ್ರ ಹಿಡಿದ ವೈದ್ಯ, ರೋಗಿಯನ್ನು ನೋಯಿಸುತ್ತಲೇ ಅವನನ್ನು ರಕ್ಷಿಸುವ ಚಿತ್ರಣ. ಈ ಆಧ್ಯಾತ್ಮದ ಜಾಗೃತಿ, ದೇವರ ಮನೆಯ ಮೂಲೆಯೊಳಗಿನ ಚೇಳಾಗಿ ಬಂದು ಕಡಿದು ಎಚ್ಚರಿಸಿ ಲೌಕಿಕತೆಯಿಂದ ಹೊರಬರುವಂತೆ ಮಾಡಿತು ಎನ್ನುವುದನ್ನು ಶರೀಫರು ಹೇಳಿದ್ದಾರೋ ಎನ್ನಿಸುತ್ತದೆ.

ಧನ್ಯವಾದಗಳು,
ಗೋದಾವರಿ

sunaath said...

rj,
ಚೋಳು ಕಡಿದರೂ ಸಕ್ಕರೆ-ಪುಠಾಣಿ ಸಿಕ್ಕಿತಲ್ಲ! ಲುಕ್ಸಾನ ಏನೂ
ಆಗಲಿಲ್ಲ,ಅಂತೀರಾ?

sunaath said...

ಕನಸು,
ಮೂಲೆಯಲ್ಲಿದ್ದ ಶರೀಫರ ಚೋಳನ್ನು ಹೊರಗೆಳೆದ ನಿಮಗೂ
ಧನ್ಯವಾದಗಳು ಸಲ್ಲುತ್ತವೆ.

sunaath said...

ಜಲನಯನ,
ನೀವು ಹೇಳುವದು ಸರಿ. ಜನಸಾಮಾನ್ಯರ ಮಾತುಗಳಲ್ಲಿಯೇ, ಜನಸಾಮಾನ್ಯರ ಧಾಟಿಯಲ್ಲಿಯೇ ತತ್ವಜ್ಞಾನ ಸಾರಿದ ಶರೀಫರ
ಹಾಡುಗಳು ಜನಪ್ರಿಯವಾದದ್ದರಲ್ಲಿ ಆಶ್ಚರ್ಯವಿಲ್ಲ.

sunaath said...

ಗೋದಾವರಿ,
ಅಡಿಗರ ಹಾಗೂ ಈಲಿಯಟ್ ಕವಿಯ ಕವನಗಳಲ್ಲಿ ಬರುವ ರೂಪಕಗಳಿಗೆ ಹಾಗೂ ಶರೀಫರ ಹಾಡುಗಳಲ್ಲಿಯ ರೂಪಕಗಳಿಗೆ
ಇರುವ ಸಾಮ್ಯವನ್ನು ತೋರಿಸಿದ್ದಕ್ಕಾಗಿ ನಾನು ನಿಮಗೆ ಋಣಿಯಾಗಿದ್ದೇನೆ.
ಧನ್ಯವಾದಗಳು.

Anonymous said...

ಸರ್,
ತುಂಬ ಚೆನ್ನಾಗಿ ಈ ಪದವನ್ನು ವಿವರಿಸಿದ್ದೀರಿ.

ನನಗನ್ನಿಸುತ್ತದೆ, ತಮಗಾದ ತುರೀಯದ ಅನುಭವವನ್ನು ಚೇಳು ಕಡಿದಿದ್ದಕ್ಕೆ ಹೋಲಿಸುತ್ತಿದ್ದಾರೆ ಎಂದು.

ಒಂದು ಕಡೆ, ಬಾಹ್ಯಮುಖಿಯಾಗಿ ಮನಸು ಮಾಯಾಲೋಕದ ಹಂಬಿಸುತ್ತ ಇಹದ ಬಲೆಯಲ್ಲಿ ಕೆಡವಿದರೆ, ಮತ್ತು ಆಂತರ್ಯದಲ್ಲಿ ನಿತ್ಯಜ್ಯೋತಿಯಾಗಿ ಉರಿಯುವ ಸುಜ್ಞಾನ (ಅಥವಾ ಸ್ವಜ್ಞಾನ) ಸಾಕ್ಷಾತ್ಕಾರಗೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಆ ಸುಜ್ಞಾನವೇ ಚೇಳಿನ ರೂಪದಲ್ಲಿ ಪ್ರತಿಯೊಬ್ಬನನ್ನೂ ಕಡಿಯಲು ಕಾಯುತ್ತಿರುತ್ತದೆ, ಮತ್ತು ಹೇಗೋ ಶರೀಫರು ಪಾಪ ಸಿಕ್ಕುಬಿಟ್ಟಿದ್ದಾರೆ ಅದರ ಕೊಂಡಿಗೆ!!

ಆ ಚೇಳು ಯಾವಾಗ ಯಾರನ್ನು ಕಡಿಯುತ್ತದೋ ಯಾರಿಗೆ ಗೊತ್ತು? ಪೂಜಾ ಮಂದಿರದಲ್ಲಿರುವ ಪಂಡಿತನನ್ನೋ, ದನಗಾಹಿಯನ್ನೋ. ಯಾರು ಸುಲಭಕ್ಕೆ ಸಿಕ್ಕರೂ ಅವರನ್ನೂ! ಕಡಿಯಲಿ ಎಂದು ಕಾಯುವವರನ್ನು, ಹಂಬಲಿಸುವವರನ್ನು ನೋಡಿ ಮುಸಿ ನಗುತ್ತಿರಬೇಕು ಅದು!!

sunaath said...

ರಾಘವೇಂದ್ರ,
ಬಹಳ ಚೆನ್ನಾಗಿ ಹೇಳಿದಿರಿ:"ಕಡಿಯಲಿ ಎಂದು ಕಾಯುವವರನ್ನು, ಹಂಬಲಿಸುವವರನ್ನು ನೋಡಿ ಮುಸಿ ನಗುತ್ತಿರಬೇಕು ಅದು!!"

‘ಬಲ್ಲವನೆ ಬಲ್ಲ ಬೆಲ್ಲದ ಸವಿಯ’ ಅನ್ನುವ ಗಾದೆಮಾತನ್ನು
‘ಬಲ್ಲವನೆ ಬಲ್ಲ ಚೋಳಿನ ಕಡಿತ’ ಅಂತ ಬದಲಾಯಿಸಿಕೊಳ್ಳಬಹುದಲ್ಲವೆ?

ಧರಿತ್ರಿ said...

ಸುನಾಥ್ ಅಂಕಲ್..
ಒಂದು ತಿಂಗಳ ಹಿಂದೆ ಬ್ಲಾಗಿಗೆ ಮತ್ತೆ ಮರಳುತ್ತಿದ್ದೇನೆ...ಕೆಲಸದೊತ್ತಡದಿಂದ ಓದೋಕೆ ಆಗಲಿಲ್ಲ.
ಶರೀಫರ ಹಾಡುಗಳ ಕುರಿತು ತುಂಬಾ ಚೆನ್ನಾಗಿ ವಿಶ್ಲೇಷಣೇ ಮಾಡಿದ್ದೀರಿ. ವಂದನೆಗಳು ಅಂಕಲ್. ಮತ್ತೆ ಬರುವೆ.
-ಧರಿತ್ರಿ

sunaath said...

ಧರಿತ್ರಿ,
ಧನ್ಯವಾದಗಳು. ಮತ್ತೆ ಮತ್ತೆ ಬರುತ್ತಿರಿ.
-ಕಾಕಾ

ಶ್ರೀನಿವಾಸ ಕಟ್ಟಿ said...

ಶರೀಫರ ಈ ಕವಿತೆ ಓದಿರಲಿಲ್ಲ. ಅದ್ಭುತವಾಗಿದೆ. ಮುಸ್ಲಿಮ್ ಸಂಪ್ರದಾಯದಲ್ಲಿ ಬೆಳೆದ ಶರೀಫರು ಪುನರ್ಜನ್ಮದಲ್ಲಿ ವಿಶ್ವಾಸ ಇಟ್ಟಿರುವದು ಆಶ್ಚರ್ಯ !

Vinay said...

sir, sharifhara padhagala arthavannu bahala sogasagi thilisi kottiddakke dhanyavadagalu.
avara innodu padha: sawaalonda ninna myala(santha shisunal sharif movie title song) .... edara artha thilisidare, i will be very thankful to you.

Unknown said...

ಶಾಹಿರಕೆ ಪದದ ಅರ್ಥ ತಿಳಿಸಿ ಯಾರದರು ಶರೀಫರ ಹಾಡುಗಳಲ್ಲಿ ಒಂದು