Saturday, July 25, 2009

ಗ್ರಹಣರಹಸ್ಯ

“ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಹಾಗೂ ಶನಿ ಇವರು ಆಕಾಶದಲ್ಲಿ ಸಂಚರಿಸುವ ದೇವತೆಗಳು ; ರಾಹು ಹಾಗೂ ಕೇತು ಇವರು ರಾಕ್ಷಸರು. ಇವರಲ್ಲಿ ಒಬ್ಬನಿಗೆ ರುಂಡ ಮಾತ್ರ ಇದೆ. ಮತ್ತೊಬ್ಬನಿಗೆ ಮುಂಡ ಮಾತ್ರ ಇದೆ. ಗ್ರಹಣಕಾಲದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ಈ ರಾಕ್ಷಸರಲ್ಲಿ ಒಬ್ಬನು ಹಿಡಿದುಕೊಳ್ಳುತ್ತಾನೆ ಎನ್ನುವ ಪಾರಂಪರಿಕ ನಂಬಿಕೆ ಭಾರತೀಯರಲ್ಲಿ ಇದೆ.”
ಆದುದರಿಂದ ಭಾರತೀಯರು ಮೂಢರು ಎನ್ನುವ ಒಂದು ಗ್ರಹಿಕೆ ಪಾಶ್ಚಾತ್ಯರಲ್ಲಿ ಹಾಗೂ ಅನೇಕ ಭಾರತೀಯರಲ್ಲಿ ಇದೆ. ಆದರೆ ಈ ಗ್ರಹಿಕೆ ಪೂರ್ವಾಗ್ರಹಪೀಡಿತವಾದಂತಹ ಗ್ರಹಿಕೆ.

ಭಾರತೀಯರ ಈ ನಂಬಿಕೆಯನ್ನು ಸ್ವಲ್ಪ ಲಕ್ಷ್ಯಗೊಟ್ಟು ಪರೀಕ್ಷಿಸಿರಿ. ಗ್ರಹಣಸಮಯದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ರಾಹು ಅಥವಾ ಕೇತು ಎನ್ನುವ ರಾಕ್ಷಸನು ಹಿಡಿಯುತ್ತಾನೆ ಎನ್ನುವದು ಇಲ್ಲಿರುವ ನಂಬಿಕೆ. ಭಾರತೀಯರಲ್ಲಿ ಮೂಢನಂಬಿಕೆಯೆ ಇದ್ದರೆ, ಒಬ್ಬನೇ ರಾಕ್ಷಸನು ಇವರನ್ನು ಬೆನ್ನಟ್ಟಬಹುದಿತ್ತಲ್ಲ? ಇಬ್ಬರು ಯಾಕೆ ಬೇಕು ಎನ್ನುವ ಪ್ರಶ್ನೆ ಬರುತ್ತದೆ. ಅಲ್ಲದೆ, ಯಾವ ಗ್ರಹಣದಲ್ಲಿ ಯಾವ ರಾಕ್ಷಸನು ಈ ಬೆನ್ನಟ್ಟುವ ಕಾರ್ಯ ಮಾಡುತ್ತಾನೆ, ಅವನು ರಾಹುವೊ ಅಥವಾ ಕೇತುವೊ ಎನ್ನುವದನ್ನು ಭಾರತೀಯ ಪಂಚಾಂಗಗಳಲ್ಲಿ ನಿಖರವಾದ ಕಾಲಮಾನದೊಡನೆ ಹೇಳಲಾಗುತ್ತದೆ. ಅರ್ಥಾತ್ ಭಾರತೀಯರಿಗೆ ಈ ರಾಕ್ಷಸರು ಯಾರು ಅನ್ನುವ ಕಲ್ಪನೆ ಸ್ಪಷ್ಟವಾಗಿತ್ತು.

ಖಗೋಲಶಾಸ್ತ್ರವು ಸಾವಿರಾರು ವರ್ಷಗಳಷ್ಟು ಹಳೆಯದು. ಭೂಮಿ ಹಾಗೂ ಇತರ ಗ್ರಹಗಳು ಸೂರ್ಯನ ಸುತ್ತಲೂ ಪರಿಭ್ರಮಿಸುತ್ತವೆ ಎನ್ನುವ ಮಾತನ್ನು ಮೊದಲು ದಾಖಲಿಸಿದವನು ಮೊದಲನೆಯ ಆರ್ಯಭಟನು (ಕ್ರಿ.ಶ. ೪೭೬-೫೫೦). ಭೂಮಿಯ ಸುತ್ತಳತೆ ಹಾಗೂ ಸೂರ್ಯನಿಂದ ಭೂಮಿಯ ದೂರವನ್ನು ಆರ್ಯಭಟನು ಅತ್ಯಂತ ನಿಖರವಾಗಿ ತಿಳಿಸಿದ್ದಾನೆ.
ಆರ್ಯಭಟನ ನಂತರ ಒಂದು ಸಾವಿರ ವರ್ಷಗಳ ಬಳಿಕ ಕೋಪರ್ನಿಕಸ್(ಕ್ರಿ.ಶ. ೧೪೭೩- ಕ್ರಿ.ಶ. ೧೫೪೩) ಎನ್ನುವ ಪೋಲ್ಯಾಂಡಿನ ಶಾಸ್ತ್ರಜ್ಞನು ಭೂಮಿಯ ಪರಿಭ್ರಮಣವನ್ನು ಯುರೋಪಿನಲ್ಲಿ ಸಾರಿದನು.

ಖಗೋಲಶಾಸ್ತ್ರದ ವಿದ್ಯಾರ್ಥಿಗಳಿಗೆಲ್ಲ ಗೊತ್ತಿರುವಂತೆ, ಚಂದ್ರನು ಭೂಮಿಯ ಸುತ್ತಲೂ ತಿರುಗುವ ಕಕ್ಷೆಯು, ಭೂಮಿಯು ಸೂರ್ಯನ ಸುತ್ತಲೂ ತಿರುಗುವ ಕಕ್ಷೆಯನ್ನು, ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಇವೆರಡೂ ಕಾಲ್ಪನಿಕ ಬಿಂದುಗಳು. ಪರಿಭ್ರಮಣೆ ಮುಂದುವರೆದಂತೆಲ್ಲ, ಈ ಬಿಂದುಗಳೂ ಸಹ ಸರಿಯುತ್ತಲೆ ಹೋಗುತ್ತವೆ. ಭೂಮಿಯು ಸೂರ್ಯನ ಸುತ್ತಲೂ ತಿರುಗುವ ದಿಕ್ಕಿಗೆ ವಿರುದ್ಧವಾದ ದಿಕ್ಕಿನಲ್ಲಿ ಈ ಬಿಂದುಗಳು ಸರಿಯುತ್ತವೆ.

ಈಗ ಈ ಬಿಂದುಗಳಲ್ಲಿ ಮೊದಲನೆಯ ಬಿಂದುವಿಗೆ ನಮ್ಮ ಶಾಸ್ತ್ರಜ್ಞರು ಕೊಟ್ಟ ಹೆಸರು ರಾಹು ; ಎರಡನೆಯ ಬಿಂದುವಿನ ಹೆಸರು ಕೇತು. ‘ಈ ಬಿಂದುಗಳು ರಾಕ್ಷಸರು ಏಕೆ?’ ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಉತ್ತರವನ್ನು ಹುಡುಕುವ ಮೊದಲು ನಾವು ಇನ್ನಿಷ್ಟು ಮಾಹಿತಿಗಳನ್ನು ಗಮನಿಸೋಣ.

ಮೊದಲನೆಯದಾಗಿ ಈ ಬಿಂದುಗಳ ಹೆಸರುಗಳನ್ನು ಪರೀಕ್ಷಿಸೋಣ. ಮೊದಲನೆಯ ಬಿಂದುವಿಗೆ ರಾಹು ಎಂದು ಕರೆದಿದ್ದಾರೆ. ರಾಹು ಈ ಪದದ ಅರ್ಥ Lock. ಗ್ರಹಣಸಮಯದಲ್ಲಿ ಈ ಬಿಂದುವಿನಲ್ಲಿ ಸೂರ್ಯ ಅಥವಾ ಚಂದ್ರರ ಚೈತನ್ಯಕ್ಕೆ ತಡೆ ಬೀಳುವದರಿಂದ ಈ ಬಿಂದುವಿನ ಹೆಸರು Lock ಅಥವಾ ರಾಹು.
ಎರಡನೆಯ ಬಿಂದುವಿನ ಹೆಸರು ಕೇತು. ಕೇತು ಅಂದರೆ Flag. ಮೊದಲನೆಯ ಬಿಂದುವಿಗೆ Flag ಎಂದು ಕರೆಯದೆ ಎರಡನೆಯ ಬಿಂದುವಿಗೆ Flag ಎಂದು ಕರೆಯುವ ಕಾರಣವೇನು? ಯಾಕೆಂದರೆ, ಈ ಬಿಂದುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವದರಿಂದ, ಮೊದಲನೆಯ ಬಿಂದು ಹಿಂದಿನಿಂದ ಚಲಿಸುತ್ತದೆ ಹಾಗೂ ಎರಡನೆಯ ಬಿಂದು ಮುಂದಿನಿಂದ ಚಲಿಸುತ್ತದೆ. ಎರಡನೆಯ ಬಿಂದುವೇ ಇಲ್ಲಿ Flag bearer. ಆದುದರಿಂದ ಇದರ ಹೆಸರು ಕೇತು ಅರ್ಥಾತ್ Flag!
ಮತ್ತೊಂದು ವಿಷಯವೆಂದರೆ ರಾಹುವಿಗೆ ರುಂಡವಿಲ್ಲ ಹಾಗೂ ಕೇತುವಿಗೆ ಮುಂಡವಿಲ್ಲ. ಈ ಎರಡೂ ಬಿಂದುಗಳು ಒಂದರ್ಥದಲ್ಲಿ Supplementary ಬಿಂದುಗಳು. ಆದುದರಿಂದಲೇ ಇವು ಅರ್ಧದೇಹಿಗಳು.

ಪಾಶ್ಚಾತ್ಯರಿಗಿಂತ ಸಾವಿರ ವರ್ಷಕ್ಕೂ ಮೊದಲೇ ಭಾರತೀಯ ಖಗೋಲವಿಜ್ಞಾನಿಗಳು ತಿಳಿದ ವಿಷಯ ಇದು. ಆದರೆ, ಯುರೋಪ ಖಂಡವು ಏಶಿಯಾ ಖಂಡವನ್ನು ತನ್ನ ಆಳ್ವಿಕೆಗೆ ಒಳಪಡಿಸಿದ್ದರಿಂದ, ಭಾರತೀಯ ಖಗೋಲಶಾಸ್ತ್ರಜ್ಞರ ಜ್ಞಾನಕ್ಕೆ ಮನ್ನಣೆ ಸಿಗದೆ, ಈ ದೇಶವನ್ನು ಗೆದ್ದವರೇ ಪಂಡಿತರಾಗಿ ಮನ್ನಣೆ ಪಡೆದದ್ದು ಅನಿವಾರ್ಯವಾಯಿತು.

ಈ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನವನ್ನು ನೀಡಿದ ವಿಷಯ ಯಾವದು ಎಂದು ಕೇಳಿದರೆ ಪಾಶ್ಚಾತ್ಯರು ಒಕ್ಕೊರಲಿನಿಂದ ಐನ್‌ಸ್ಟೈನನ ಸಾಪೇಕ್ಷವಾದವೆಂದು ಘೋಷಿಸುತ್ತಾರೆ. ಆದರೆ ಅಂಕಗಣಿತದಲ್ಲಿಯ Place value position ಹಾಗೂ ಶೂನ್ಯಸಂಕೇತ ಇವೇ ಅತ್ಯಂತ ಮಹತ್ವದ ಜ್ಞಾನಗಳು. ಇದರ ಸಂಶೋಧಕರು ಭಾರತೀಯರು. ಆದರೆ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನ ನೀಡಿದ ಸಂಶೋಧನೆ ಎಂದು ಇವಕ್ಕೆ ಯಾರೂ ಕರೆಯುವದಿಲ್ಲ. ಒಂದು ವೇಳೆ ಭಾರತೀಯ ಗಣಿತಜ್ಞರು ಶೂನ್ಯಸಂಶೋಧನೆಯನ್ನು ಮಾಡಿರದಿದ್ದರೆ, ವಿಜ್ಞಾನದ ಪ್ರಗತಿಯು ಸಾಧ್ಯವಿರಲಿಲ್ಲ.

ಇವತ್ತು ಯಾವುದೇ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೆ, “ನೂರು-ಐವತ್ತು” ಎಂದು ಕೇಳಿದರೆ (೧೦೦-೫೦) ಎಂದು ಬರೆದುಕೊಂಡು ೫೦ ಎನ್ನುವ ಉತ್ತರವನ್ನು ಥಟ್ಟನೆ ನೀಡುತ್ತಾನೆ. ಆದರೆ ಭಾರತೀಯ ಗಣಿತವು ಯುರೋಪಿಗೆ ತಲುಪುವ ಮೊದಲು “ನೂರು-ಐವತ್ತು” ಇದನ್ನು ಅಲ್ಲಿಯ ಗಣಿತ ಪಂಡಿತರು “C-L” ಎಂದು ಬರೆದುಕೊಳ್ಳುತ್ತಿದ್ದರು. ಆ ಬಳಿಕ ಒಂದುನೂರು ಗುಂಡುಗಳನ್ನು ಎಣಿಸಿ ತೆಗೆದುಕೊಂಡು, ಅದರಲ್ಲಿ ಐವತ್ತು ಗುಂಡುಗಳನ್ನು ಎಣಿಸಿ ಪಕ್ಕಕ್ಕಿಡುತ್ತಿದ್ದರು. ಬಳಿಕ ಉಳಿದ ಗುಂಡುಗಳನ್ನು ಎಣಿಸಿ, ಐವತ್ತು ಎನ್ನುವ ಉತ್ತರವನ್ನು ಕೊಡುತ್ತಿದ್ದರು.

ವಿಜ್ಞಾನದಲ್ಲಿ ಇಷ್ಟೆಲ್ಲ ಮುಂದುವರಿದಿದ್ದ ಭಾರತೀಯರು ರಾಹು ಹಾಗೂ ಕೇತು ಎನ್ನುವ ಬಿಂದುಗಳನ್ನು ರಾಕ್ಷಸರು ಎಂದು ಕರೆದಿದ್ದೇಕೆ? ಇದಕ್ಕೆ ಉತ್ತರ ಬಹುಶಃ ಹೀಗಿರಬಹುದು. ನಮ್ಮ ವಿಜ್ಞಾನಿಗಳು ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸಿದ್ದರು. ಈ ದೇವತೆಗಳನ್ನು ಮರೆಮಾಡುವಂತಹ ವಸ್ತು ಯಾವುದೇ ಇದ್ದರೂ ಅದು ರಾಕ್ಷಸಸಮಾನ. ಆದುದರಿಂದ ಈ ಬಿಂದುಗಳು ರಾಕ್ಷಸರು.

ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸುವದು ತಪ್ಪೆನ್ನುತ್ತೀರಾ? ಭೌತಿಕ ಅರ್ಥದಲ್ಲಿ ಅದು ತಪ್ಪಾಗಿರಬಹುದು. ಆದರೆ ಪುರಾತನ ಭಾರತೀಯರು ಅತ್ಯಂತ ಧಾರ್ಮಿಕ ಮನೋಭಾವದವರಾಗಿದ್ದರು. ಈ ಸೃಷ್ಟಿಯಲ್ಲಿಯ ಪ್ರತಿಯೊಂದು ವಸ್ತುವೂ ಭಗವಂತನ ರೂಪವೇ (form) ಆಗಿದೆ. ಇತರರಿಗೆ ಒಳ್ಳೆಯದನ್ನು ಮಾಡುತ್ತಿದ್ದರೆ ಅದೊಂದು ದೇವತೆ ; ದೇವತೆಗೆ ವಿರೋಧವಾಗಿರುವದು ರಾಕ್ಷಸ. ಇದು ನಮ್ಮ ಪುರಾತನರ ಭಾವನೆ.

ಆದುದರಿಂದಲೇ ಅವರು ಸೂರ್ಯ ಹಾಗು ಚಂದ್ರರನ್ನು ದೇವತೆಗಳೆಂದು ಭಾವಿಸಿದರು ; ರಾಹು ಹಾಗು ಕೇತು ಎನ್ನುವ ಕಾಲ್ಪನಿಕ ಖಗೋಲ ಬಿಂದುಗಳನ್ನು ರಾಕ್ಷಸರೆಂದು ಕರೆದರು. ತಮ್ಮ ಖಗೋಲ ಜ್ಞಾನದ ಮೂಲಕ ಗ್ರಹಣದ ಸಮಯ ಹಾಗೂ ಅವಧಿಯನ್ನು ಕಂಡು ಹಿಡಿಯುತ್ತದ್ದಿಂತೆಯೇ, ಆ ಅವಧಿಯಲ್ಲಿ ನದಿಯಲ್ಲಿ ಮುಳುಗು ಹಾಕಿ ದೇವರ ಧ್ಯಾನವನ್ನು ಮಾಡುತ್ತಿದ್ದರು! ಇದು ಅವರ ಪ್ರಾಮಾಣಿಕ ಮನೋಧರ್ಮ. ಇದರಲ್ಲಿ ಯಾವುದೇ ವಿರೋಧಾಭಾಸ ಇಲ್ಲ!

37 comments:

ಮಲ್ಲಿಕಾರ್ಜುನ.ಡಿ.ಜಿ. said...

ನಮ್ಮ ಭಾರತೀಯರ ಜ್ಞಾನ ಪರಂಪರೆಯನ್ನು ಚೆನ್ನಾಗಿ ಬರೆದಿರುವಿರಿ ಸರ್. ಕೆಲವೊಂದು ಮೂಢ ಆಚರಣೆಗಳಿಗೆ ಗಮನ ಹರಿಸದೆ ನಮ್ಮವರ ಸಾಧನೆಗಳನ್ನು ಗಮನಿಸಬೇಕು. ಗ್ರಹಣದ ಸಮಯದಲ್ಲಿ ನಡೆಸುವ ಆಚರಣೆಗಳನ್ನೂ ಹೀಗೆ ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಚೆನ್ನ ಅಲ್ವಾ?

shivu.k said...

ಸುನಾಥ್ ಸರ್,

ಗ್ರಹಣವಿಚಾರವನ್ನು ಎಷ್ಟು ಚೆನ್ನಾಗಿ ವಿವರಿಸಿದ್ದೀರಿ. ನಮ್ಮವರ ಜ್ಞಾನವನ್ನು ಪಾಶ್ಚಾತ್ಯರು ಆಗ ನಿರಾಕರಿಸಿದರೇನಂತೆ. ಈಗ ಎಲ್ಲರಿಗೂ ನಾವೇ ಬೇಕಲ್ಲವೇ ಸರ್. ಗಣಿತದಲ್ಲಿ ಮುಂದುವರಿದ ನಮ್ಮವರು ಯಾರಿಗೇನು ಕಮ್ಮಿಯಿಲ್ಲ. ವೈಜ್ಞಾನಿಕವಾಗಿ ಮತ್ತು ಆಚರಣೆಯುಕ್ತ ಗ್ರಹಣವನ್ನು ನೀವು ವಿವರಿಸಿರುವ ರೀತಿಯನ್ನು ನನ್ನ ಶ್ರೀಮತಿಗೆ ಓದಿ ಹೇಳಿದೆ. ಅವಳಿಗೂ ಖುಷಿಯಾಯಿತು. ನಮ್ಮಿಬ್ಬರ ಕಡೆಯಿಂದ ನಿಮಗೆ ಧನ್ಯವಾದಗಳು.

ಚಿತ್ರಾ said...

ಕಾಕಾ,
ಗ್ರಹಣವನ್ನು ಭಾರತೀಯ ಖಗೋಳ ಜ್ಞಾನದ ಹಿನ್ನೆಲೆಯಲ್ಲಿ ಬಹು ಚೆನ್ನಾಗಿ ವಿಶ್ಲೇಷಿಸಿದ್ದೀರಿ .ಭಾರತೀಯ ವಿಜ್ಞಾನ ಕ್ಷೇತ್ರ ಪುರಾತನ ಜಗತ್ತಿನಲ್ಲಿ ಎಲ್ಲರಿಗಿಂತ ಮುಂದುವರೆದಿತ್ತು. ಆದರೆ , ಕಾರಣಾಂತರಗಳಿಂದ ಆ ಹೆಮ್ಮೆಯನ್ನು ಉಳಿಸಿಕೊಳ್ಳದೆ, ಪಾಶ್ಚಾತ್ಯ ಜಗತ್ತಿಗೆ ಪಟ್ಟಕಟ್ಟಿದ ಕೀರ್ತಿ(?) ಯು ನಮ್ಮದೇ ಆಗಿದೆ ! ಪಾಶ್ಚಾತ್ಯರಲ್ಲೂ ಗ್ರಹಣಗಳ ಕುರಿತು ಬಹಳಷ್ಟು ಮೂಢ ನಂಬಿಕೆಗಳಿದ್ದವು ಎಂದು ಓದಿದ್ದೇನೆ. ಹೀಗಿರುವಾಗಲೂ , ಅವರು ನಮ್ಮ ಮೂಢ ನಂಬಿಕೆಗಳ ಬಗ್ಗೆ ಮಾತನಾಡುವುದು ಎಂಥಾ ವಿಪರ್ಯಾಸಅಲ್ಲವೇ?

sunaath said...

ಮಲ್ಲಿಕಾರ್ಜುನ,
ನಮ್ಮ ಪೂರ್ವಿಕರ ಸಾಧನೆಯನ್ನು ತಿಳಿದುಕೊಂಡು ಅವರಿಗೆ ತಕ್ಕ ಗೌರವ ಕೊಡುವದು ನಮ್ಮ ಕರ್ತವ್ಯ. ಅವರನ್ನು ನಾವು ಮರೆತಿದ್ದೇವೆ. ನಮ್ಮ ಆಚರಣೆಯಲ್ಲಿಯ ತಪ್ಪು ಹಾಗೂ ಒಪ್ಪುಗಳನ್ನು ವಿಶ್ಲಷಿಸಿ, ತಪ್ಪುಗಳನ್ನು ತ್ಯಜಿಸಿ, ಒಳಿತಾದದ್ದನ್ನು ಇಟ್ಟುಕೊಳ್ಳುವದು ಸರಿಯಾದ ಮಾರ್ಗ!

sunaath said...

ಶಿವು,
‘ಗ್ರಹಣ’ ಲೇಖನವನ್ನು ನಿಮ್ಮ ಶ್ರೀಮತಿಯವರ ಜೊತೆಗೆ share ಮಾಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಲ್ಲಿಯ ಸಾಮರಸ್ಯವನ್ನು ಇದು ಸೂಚಿಸುತ್ತದೆ. ಇದೀಗ ‘ಪಾಣಿಗ್ರಹಣ’!

sunaath said...

ಚಿತ್ರಾ,
ರಶಿಯಾ, ಚೀನಾ ಮೊದಲಾದ ದೇಶಗಳು ತಮ್ಮ ಶಾಲಾಪಠ್ಯಗಳಲ್ಲಿ ವೈಜ್ಞಾನಿಕ ಪ್ರಗತಿಯ ಬಗೆಗೆ ಬರೆಯುವಾಗ, ತಮ್ಮ ದೇಶದ ವಿಜ್ಞಾನಿಗಳ ಸಂಶೋಧನೆಗಳ ಬಗೆಗೆ ಒತ್ತು ಕೊಟ್ಟು ಬರೆಯುತ್ತಾರೆ. ಆದರೆ, ಭಾರತದಲ್ಲಿ ಮಾತ್ರ ವಿದೇಶಿ ವಿಜ್ಞಾನಿಗಳಿಗೇ ಮನ್ನಣೆ. ಇದು Colonisation Effect! ಸ್ವಾತಂತ್ರ್ಯ ಸಿಕ್ಕು ೬೨ ವರ್ಷಗಳು ಕಳೆದರೂ ಸಹ ನಾವು ಈ Effectನಿಂದ ಹೊರ ಬಂದಿಲ್ಲವಲ್ಲ!
ಮಾವೋ ಝುಡಾಂಗನು ಭಾರತೀಯ ರಾಜಕೀಯ ಧುರೀಣರ ಬಗೆಗೆ-(ಅಂದರೆ ಗಾಂಧಿ,ನೆಹರೂ ಇತ್ಯಾದಿ)-ಹೇಳಿದ ಮಾತು ನೆನಪಾಗುತ್ತದೆ:
"ಅವರು ತಪ್ಪು ಶಿಕ್ಷಣವನ್ನು ಪಡೆದಿದ್ದಾರೆ!"

ಸಂದೀಪ್ ಕಾಮತ್ said...

ಸುನಾಥ್ ಜಿ,

ತುಂಬಾ ಒಳ್ಳೆಯ ಲೇಖನ.

ಹಿತ್ತಲ ಗಿಡ ಮದ್ದಲ್ಲ ಅನ್ನೋ ಗಾದೆ ನಮಗೆಲ್ಲಾ ಸರಿಯಾಗೇ ಹೊಂದುತ್ತೆ.

umesh desai said...

ಸುನಾಥ ಸರ್ ಧನ್ಯವಾದಗಳು ನಮ್ಮ ವಾಡೆದ ಅಂಗಳದಾಗ ಕೂತು ಚಂದ್ರಗ್ರಹಣ ನೋಡುವಾಗ ಸುತ್ತಲಿದ್ದ ಹಿರ್ಯಾರು ಹೇಳುತ್ತಿದ್ದರು "ರಾಹು ಕೇತು ಚಂದಪ್ಪನ್ನ ತಿಂತಾರ..." ಹೈಸ್ಕೂಲ ಮುಟ್ಟುವವರೆಗೂ ಇದ ನಂಬಿಕಿ ಇತ್ತು ಮುಂದ ಪರೀಕ್ಷಾದಾಗ
ಗ್ರಹಣದ ರೇಖಾ ಚಿತ್ರ ಬಿಡಿಸಬೇಕಾಗಿ ಬಂತು. ಈಗ ನಿಮ್ಮ ಲೇಖ ಓದಿ ಇನ್ನಷ್ಟು ತಿಳೀತು ಆದ್ರೂ ಯಾಕೋ ನಾವು ಇನ್ನೂ ಮೂಢನಂಬಿಕೆ ಬಿಟ್ಟಿಲ್ಲ ಯಾಕ್ ಅಂದ್ರ ಮೊನ್ನೆ ಗ್ರಹಣದ ದಿನ ಗಿಜಿಗುಡುವ ಬೆಂಗಳೂರು ಶಾಂತವಾಗಿತ್ತು...!

sunaath said...

ಹೌದು, ಸಂದೀಪ! ನಾವು ನಮ್ಮ ಪುರಾತನ ಜ್ಞಾನವನ್ನು, ವಿಜ್ಞಾನಿಗಳನ್ನು ಮರೆತು ಕೇವಲ ಕಂದಾಚಾರವನ್ನಷ್ಟೇ ಉಳಿಸಿಕೊಂಡಿದ್ದೇವೆ!

sunaath said...

ದೇಸಾಯರ,
ಇದs ನೋಡರಿ ವಿಪರ್ಯಾಸ. ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಹೇಳೇ ಹೇಳ್ತಾರ: ಭಾರತ knowledge
society ಆಗಲಿ ಅಂತ.
ನಾವು ನಮ್ಮಲ್ಲಿ ಇದ್ದಂತಹಾ ಎಲ್ಲಾ knowledgeಅನ್ನು
ರಾಹು ಕೇತುಗಳಿಗೆ ಅರ್ಪಿಸಿಬಿಟ್ಟೇವಿ!

Prabhuraj Moogi said...

ಸರ ನಮ್ಮ ಭಾರತೀಯ ನಳಂದ ವಿಶ್ವವಿದ್ಯಾಲಯ ಭಾರೀ ಪ್ರಖ್ಯಾತವಾಗಿತ್ತು, ಇಲ್ಲಿಂದ ಬ್ರಿಟೀಶರು ಹೋಗುವಾಗ ಬರೀ ಬಂಗಾರ ಮಾತರ್ ಅಲ್ಲದೆ ಅಲ್ಲಿನ್ ಪುಸ್ತಕಗಳನ್ನೂ ಹೊತ್ತೊಯ್ದರಂತೆ. ಹೀಗ್ ಎಷ್ಟೊ ಜ್ಞಾನ ಕೊಳ್ಳೆಯಾಗಿದೆ. ಗ್ರಹಣ ಮಾಹಿತಿ ಬಹಳೆ ಚೆನ್ನಾಗಿತ್ತು, ಬಹಳಶ್ಟು ವಿಷ್ಯಗಳು ಗೊತ್ತೇ ಇರಲಿಲ್ಲ.

sunaath said...

ಪ್ರಭುರಾಜ,
ತುರ್ಕಸ್ತಾನ, ಅಫಘಾನಿಸ್ತಾನ ಹಾಗೂ ಇರಾಣದಿಂದ ಬಂದ ಆಕ್ರಮಣಕಾರರು ನಲಂದಾವನ್ನು ಹಾಗೂ ಇತರ ಜ್ಞಾನಭಂಡಾರಗಳನ್ನು ಸುಟ್ಟು ಹಾಕಿದರು. ಅಳಿದುಳಿದ
ಗ್ರಂಥಗಳನ್ನು ಬ್ರಿಟಿಶರು ತಮ್ಮ ಮ್ಯೂಜಿಯಮ್‍ಗಳಿಗೆ ಸಾಗಿಸಿದರು!

Santhosh Rao said...

Sir

ತುಂಬಾ ವಿಷಯಗಳು ಗೊತ್ತಿರಲಿಲ್ಲ , ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

sunaath said...

ಸಂತೋಷ,
ಸಂತೋಷ ನನ್ನದು!

rj said...

ಸ್ವಲ್ಪ complicated ಲೇಖನ ಅನಿಸ್ತು.ವಿಜ್ನಾನದ ವಿಷಯಗಳೇ ಹಾಗೆ.ಹಿಂದಿನ ವಾಕ್ಯದ ಜೊತೆಗೆ ಮುಂದಿನ ವಾಕ್ಯವನ್ನು bridge ಮಾಡಬೇಕಾಗುತ್ತದೆ.ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ.
ಹಾಗೆಯೇ ನಮ್ಮ ಪೂರ್ವಜರ ತಾಕತ್ತು ನಮಗೆ ಈಗೀಗ ಅರ್ಥವಾಗುತ್ತಿದೆ.ಅವರಿಟ್ಟಿದ್ದ ಕೆಲವೊಂದು ಹೆಸರು ಬದಲಾಗಿವೆ,ಫಾರ್ಮುಲಾ ಬದಲಾಗಿವೆ;end result ಮಾತ್ರ ಅವರು ಹೇಳಿದ್ದನ್ನೇ ನಾವೂ ಹೇಳುತ್ತಿದ್ದೇವೆ..
atleast,ಅವರು ಹೇಳಿದ್ದನ್ನೇ ನಾವು ದೄಢೀಕರಿಸುತ್ತಿದ್ದೇವೆ...

-ರಾಘವೇಂದ್ರ ಜೋಶಿ.

sunaath said...

rj,
ಲೇಖನ complicated ಆಗಿದ್ದರೆ, ತಪ್ಪು ನನ್ನದೇ ಎನ್ನಿಸುತ್ತದೆ. ಸರಳವಾಗಿ ವಿವರಿಸಲು ಸಾಧ್ಯವಾಗಿಲ್ಲ ನನಗೆ.
ಇನ್ನು ನಮ್ಮ ಪೂರ್ವಜರ ಜ್ಞಾನದ ಬಗೆಗೆ ಹೇಳುವದಾದರೆ, ಗಣಿತದಲ್ಲಿಯ ಅನೇಕ ಆಧುನಿಕ ಸೂತ್ರಗಳನ್ನು ನಮ್ಮವರು ತಮ್ಮದೇ ರೀತಿಯಲ್ಲಿ ಯಾವಾಗಲೋ ಆವಿಷ್ಕರಿಸಿದ್ದರು! ನಮ್ಮ ಶಿಕ್ಷಣಪಠ್ಯದಲ್ಲಿ ಈ ಮಾಹಿತಿಯನ್ನು ತಪ್ಪದೇ ತಿಳಿಸಬೇಕು ನಾವು.
ಇಲ್ಲದಿದ್ದರೆ, ನಮ್ಮ ಯುವಪೀಳಿಗೆಯು ನಮ್ಮ ಪೂರ್ವಜರನ್ನು
ಮಡ್ಡರೆಂದು ಭಾವಿಸೀತು!

Anonymous said...

ಕಾಕಾ,

ಗ್ರಹಣರಹಸ್ಯವನ್ನು ನಮ್ಮ ಭಾರತೀಯ ವಿಜ್ಞಾನ ಪರಂಪರೆಯ ಜೋತೆಗೆ ಸಾಮಾನ್ಯರಿಗೂ ಅರ್ಥವಾಗುವಂತೆ ವಿಶ್ಲೇಷಿಸಿದ್ದಿರಿ. ನಮ್ಮ ಯುವಪೀಳಿಗೆಗೆ ಕೊಡಬೇಕಾದ ಶಿಕ್ಷಣ ಹೀಗಿರಬೇಕಿತ್ತು, ಆದರೆ ಈ ದೇಶದ ದುರಂತವೆಂದರೆ ನಮ್ಮ ಅಂತರಾತ್ಮಗಳಿನ್ನೂ ಪಾಷ್ಚಾತ್ಯ ದಾಸ್ಯದಿಂದ ಇನ್ನೂ ಸ್ವತಂತ್ರಗೊಂಡಿಲ್ಲ.

-ಶೆಟ್ಟರು

PARAANJAPE K.N. said...

ಒ೦ದು ಸ೦ಕೀರ್ಣ ವಿಷಯವನ್ನು ಸ೦ಕ್ಷಿಪ್ತವಾಗಿ ಆದರೆ ನಿಖರತೆಯೊ೦ದಿಗೆ ವಿಶ್ಲೇಷಣೆ ಮಾಡಿದ್ದೀರಿ. ನೀವು ಹೇಳುವುದು ನಿಜ. ಈ ಸತ್ಯಗಳನ್ನು ಇ೦ದಿನ ಪೀಳಿಗೆಗೆ ತಿಳಿಹೇಳಬೇಕಾದ ಮತ್ತು ಪಠ್ಯಗಳಲ್ಲಿ ದಾಖಲಿಸಬೇಕಾದ ಅಗತ್ಯವಿದೆ.

sunaath said...

ಶೆಟ್ಟರ,
ಬೀಜಮಾತು ಹೇಳಿದಿರಿ. ನಮ್ಮ ಅಂತರಾತ್ಮಗಳs ಇನ್ನೂ (ಪಾಶ್ಚಾತ್ಯರ) ದಾಸ್ಯದಾಗ ಅವ.
ಸ್ವಲ್ಪ ಕಾಲದ ಹಿಂದ ನಮ್ಮ ಘನತೆವೆತ್ತ ಪ್ರಧಾನಮಂತ್ರಿಯವರು
ಇಂಗ್ಲಂಡಿಗೆ ಹೋದಾಗ,"ಬ್ರಿಟಿಶ್ ಆಳಿಕೆಯಿಂದ ನಮಗ ಭಾಳಾ ಉಪಯೋಗ ಆಗೇದ" ಅಂತ ಹೇಳಿಬಂದದ್ದು ನೆನಪದನೋ, ಇಲ್ಲೊ?

sunaath said...

ಪರಾಂಜಪೆಯವರೆ,
ನಮ್ಮ ಶಿಕ್ಷಣತಜ್ಞರು ಭಾರತೀಯ ಸಾಧನೆಗಳನ್ನು ಹೇಳೋದಕ್ಕ ಮುಜುಗರ ಪಡ್ತಾರ. ಇದು ಇವರ ರಾಷ್ಟ್ರಾಭಿಮಾನ!

ಗೋಪಾಲ್ ಮಾ ಕುಲಕರ್ಣಿ said...

ಬಹಳ ಮಹತ್ವದ ವಿಚಾರವನ್ನು ಚೆನ್ನಾಗಿ ವಿವರಿಸಿದ್ದೀರಿ.

sunaath said...

ಕುಲಕರ್ಣಿಯವರೆ,
ಧನ್ಯವಾದಗಳು.

ಅಂತರ್ವಾಣಿ said...

ಅಂಕಲ್,
ಒಂದು ಸಂದೇಹವಿದೆ. ರಾಹು ಹಾಗು ಕೇತುಗಳನ್ನು ನೀವು ’ಬಿಂದು’ ಎಂದು ಹೇಳಿದ್ದೀರ. ಆದರೆ ಅವುಗಳು ಈ ನವಗ್ರಹಗಳಿಗಿಂತ ದೂರದಲ್ಲೆಲ್ಲೋ ಇವೆ ಹಾಗು ಅವುಗಳ ನೆರಳಿನ ಆಧಾರದ ಮೇಲೆ ಅವುಗಳು ಗ್ರಹಗಳು ಎಂಬುದನ್ನು ನಾನು ತಿಳಿದಿದ್ದೇನೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ದಯವಿಟ್ಟು ತಿಳಿಸಿ.

Harsha Bhat said...

uttama baraha. pashimada neralalli kaLedu hooguttiruvavarige ondu buddi matinantide.

sunaath said...

ಜಯಶಂಕರ,
ರಾಹು ಮತ್ತು ಕೇತು ಗ್ರಹಗಳಲ್ಲ.
ಈಗ ನೋಡಿ: ಭೂಮಿ ಸೂರ್ಯನ ಸುತ್ತಲೂ ತಿರುಗುವ ಕಕ್ಷೆ ಇದೆ. ಅದರಂತೆ ಚಂದ್ರ ಭೂಮಿಯ ಸುತ್ತಲೂ ತಿರುಗುವ ಕಕ್ಷೆ ಇದೆ. ಈ ಕಕ್ಷೆಗಳನ್ನು ಖಗೋಲದಲ್ಲಿ ಕಲ್ಪಿಸಿಕೊಳ್ಳಿ. ಈ ಕಕ್ಷೆಗಳು ಎರಡು ಬಿಂದುಗಳಲ್ಲಿ ಛೇದಿಸುತ್ತವೆ. ಈ ಬಿಂದುಗಳು ನಿರಂತರವಾಗಿ ಹಿಮ್ಮುಖವಾಗಿ ಸರಿಯುತ್ತಲೇ ಇರುತವೆ. ಈ ಬಿಂದುಗಳನ್ನೇ ರಾಹು ಹಾಗು ಕೇತು ಎಂದು ಕರೆಯಲಾಗಿದೆ.
ಸೂರ್ಯಗ್ರಹಣ ಸಮಯದಲ್ಲಿ ಚಂದ್ರನು ರಾಹು ಅಥವಾ ಕೇತು ಬಿಂದುವಿನ ಮೂಲಕ, ಭೂಮಿ ಹಾಗೂ ಸೂರ್ಯನ ನಡುವೆ ಬರುತ್ತಾನೆ. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯು ಸೂರ್ಯ ಹಾಗೂ ಚಂದ್ರರ ನಡುವೆ ರಾಹು ಅಥವಾ ಕೇತು ಬಿಂದುವಿನ ಮೂಲಕ ಪ್ರವೇಶಿಸುತ್ತದೆ. ಆದುದರಿಂದ ಈ ಗ್ರಹಣಗಳಿಗೆ ರಾಹುಗ್ರಸ್ತ ಅಥವಾ ಕೇತುಗ್ರಸ್ತ ಎಂದು ಕರೆಯುತ್ತಾರೆ.
ನಾವು ಸೂರ್ಯ, ಚಂದ್ರ, ಮಂಗಳ ಇತ್ಯಾದಿ ಆಕಾಶಕಾಯಗಳ
ಜೊತೆಜೊತೆಗೇ ರಾಹು ಹಾಗು ಕೇತುಗಳ ಹೆಸರು ತೆಗೆದುಕೊಳ್ಳುವದರಿಂದ ಅವೂ ಸಹ ಆಕಾಶಕಾಯಗಳೇ ಎನ್ನುವ ಭಾವ ನಮ್ಮಲ್ಲಿ ಉಂಟಾಗಿದೆ, ಅಷ್ಟೇ.

sunaath said...

ಹರ್ಷ,
ಹಿನ್ನೋಟ ಹಾಗೂ ಮುನ್ನೋಟ ಎರಡೂ ಇರಬೇಕು. ಆದರೆ ಭಾರತೀಯರಿಗೆ ವರ್ತಮಾನದ ನೋಟ ಒಂದೇ ಇರುವಂತಿದೆ!

ಸುಪ್ತದೀಪ್ತಿ said...

ಕಾಕಾ, ಉತ್ತಮ ಮಾಹಿತಿಯುಳ್ಳ ಬರಹ ಕೊಟ್ಟಿದ್ದಕ್ಕೆ ಧನ್ಯವಾದಗಳು.

ನಾನು ತಿಳಿದಿರುವಂತೆ, ಗ್ರಹಣಕಾಲದಲ್ಲಿ, ಅದರಲ್ಲೂ ಸೂರ್ಯಗ್ರಹಣದ ಸಮಯದಲ್ಲಿ ಭೂಮಿಯ ವಾತಾವರಣದಲ್ಲಿ ಅನೇಕ ಬ್ಯಾಕ್ಟೀರಿಯಾ, ವೈರಸ್ ಕೀಟಾಣುಗಳು ಹೆಚ್ಚುತ್ತವೆ (ಅವುಗಳನ್ನು ಸ್ವಲ್ಪ ಮಟ್ಟಿಗಾದರೂ ನಾಶಪಡಿಸುವ ಸೂರ್ಯನ ಪ್ರಖರ ಬೆಳಕು ಇರುವುದಿಲ್ಲವಾದ್ದರಿಂದ). ಅದಕ್ಕಾಗಿಯೇ ನಮ್ಮ ಹಿರಿಯರು ಆ ಸಮಯದಲ್ಲಿ ಮನೆಯೊಳಗೇ ಇರಬೇಕು ಎಂದರು. ಅದಕ್ಕೊಂದು ಕಟ್ಟಳೆಯನ್ನು ಮಾಡಿ, ಸ್ನಾನ ಮಾಡಿ ಶುದ್ಧ ಮನೋದೇಹದಿಂದ ದೇವರ ಧ್ಯಾನ ಮಾಡಿರೆಂದು ಆದೇಶಿಸಿದರು. ಗ್ರಹಣಗಳಲ್ಲಿ ಭೇದ ಯಾಕೆನ್ನುವ ಪ್ರಶ್ನೆಯನ್ನು ಉತ್ತರಿಸಲು ಸೂರ್ಯ-ಚಂದ್ರ ಗ್ರಹಣಗಳೆರಡರಲ್ಲೂ ಧ್ಯಾನ ಮಾಡಿದರೆ ಪಾಪ ಪರಿಹಾರ ಎನ್ನುವ ಧಾರ್ಮಿಕ ಆಚರಣೆ ಹುಟ್ಟಿಸಿದರು. ವೈಚಾರಿಕತೆಯಿಂದ ಪ್ರಶ್ನೆಗಳು ಏಳುತ್ತವೆ; ಪಾಪಭಯದಿಂದಲ್ಲ. ಅದನ್ನವರು ಚೆನ್ನಾಗಿಯೇ ತಿಳಿದವರಾಗಿದ್ದರು. ಇದೇ ರೀತಿಯ ಇನ್ನೂ ಅನೇಕ ಸಿದ್ಧಾಂತಗಳಿಂದ ಅವರು ಜನರೆಲ್ಲ ಸುರಕ್ಷಿತರಾಗಿರುವಂತೆ ನೋಡಿಕೊಂಡರು. ಅವರ ವೈಚಾರಿಕ ಹಿನ್ನೆಲೆ ಕಳೆದು ಹೋಗಿ ಆಚರಣೆಗಳು ಮಾತ್ರ ಉಳಿದುಕೊಂಡು ಮೂಢನಂಬಿಕೆಗಳೆಂದು ಹಣೆಪಟ್ಟಿ ಕಟ್ಟಿಕೊಂಡು ಮೂಲೆಗುಂಪಾಗಿವೆ.

ಇವೆಲ್ಲ ನನ್ನ ಆಲೋಚನೆಗಳು, ತರ್ಕಗಳು; ತಪ್ಪಾಗಿದ್ದರೂ ಇರಬಹುದು. ಕ್ಷಮಿಸಬೇಕು.

sunaath said...

ಜ್ಯೋತಿ,
ಗ್ರಹಣಗಳಂತಹ ವಿಶೇಷ ಸಮಯದಲ್ಲಿ ಪರಿಸರದಲ್ಲಿ ಬದಲಾವಣೆಯಾಗುವದು ಅತ್ಯಂತ ಸಂಭವನೀಯ ಸಂಗತಿ. ನಮ್ಮ ಜೀವವಿಜ್ಞಾನಿಗಳು ಈ ವಿಷಯದಲ್ಲಿ ಸಂಶೋಧನೆಗಳನ್ನು ಮಾಡಲೇ ಬೇಕು. ಅದರಿಂದಾಗಿ, ಮೂಢನಂಬಿಕೆಗಳೆಂದು ಈಗಿನವರು ಜರೆಯುವ ಪದ್ಧತಿಗಳ ಹಿಂದಿನ ತರ್ಕ ತಿಳಿದೀತು.
ಎರಡನೆಯದಾಗಿ ಪಾರಮಾರ್ಥಿಕ ಶ್ರದ್ಧೆ. ಕೇವಲ ಲೌಕಿಕ ನೋಟ ಬೆಳೆಯಿಸಿಕೊಂಡ ಈಗಿನವರಿಗೆ, ಆ ನೋಟ ಅರ್ಥವಾಗುವದೆ?
ಕೊನೆಯದಾಗಿ, ‘ಕ್ಷಮಿಸಬೇಕು’ ಎಂದು ನೀನು ಹೇಳುವದೇಕೆ?
ವಾದ ವಿವಾದಗಳು ಇದ್ದಾಗಲೇ ತಾನೆ ಜ್ಞಾನ ಹೊಳೆಯುವದು? ಇದು ಭಾರತೀಯ ಸತ್ಸಂಪ್ರದಾಯವೂ ಹೌದು.

ಶ್ರೀನಿವಾಸ ಮ. ಕಟ್ಟಿ said...

ಭಾರತದಲ್ಲಿ ಎಲ್ಲ ವಿಷಯಗಳನ್ನು ಸಾಂಕೇತಿಕವಾಗಿಯೇ ಹೇಳಿದ್ದಾರೆ. ನಮ್ಮ ದೇಶದಲ್ಲಿ ಯಾವದೇ ಜ್ಞಾನವೂ ಮಾರಾಟದ ವಸ್ತುವಾಗಿರಲಿಲ್ಲ ಅದಕ್ಕೆ "ಪೇಟೆಂಟ್" ನ ಪೆಡಂಭೂತವೂ ನಮ್ಮಲ್ಲಿರಲಿಲ್ಲ.

sunaath said...

ಕಟ್ಟಿಯವರೆ,
ನಿಜವನ್ನು ಹೇಳಿದಿರಿ. ಜ್ಞಾನವು ಮಾರಾಟದ ಸರಕಾಗಿದ್ದು ಪಾಶ್ಚಿಮಾತ್ಯ ಸಂಸ್ಕೃತಿಯ ಮೂಲಕ. ಈಗ ನಮ್ಮಲ್ಲಿಯ ಪುರಾತನ ಜ್ಞಾನಕ್ಕೂ ಪಾಶ್ಚಿಮಾತ್ಯರ ಪೇಟೆಂಟ್ ಲಾಗೂ ಆಗಿದೆ!

Unknown said...

ಸುನಾತರೆ,

ನನಗೆ ಈ ಕೇಳ್ಮೆಗಳು ಕಾಡುತ್ತಿವೆ?
೧. ಬಾರತೀಯರಿಗೆ ಯುರೋಪಿಯನ್ನರಿಗಿಂತ ಮೊದಲೆ ಗ್ರಹಣದ/ವಿಗ್ನಾನದ ಬಗ್ಗೆ ಗೊತ್ತಿದ್ದರೆ ಯಾಕೆ ಅದನ್ನ ಪಸರಿಸಲಿಲ್ಲ.
೨. ಮಾದರಿಗಳಿಂದ/ಪುರಾವೆಗಳಿಂದ ಅದನ್ನ ಯಾಕೆ ತೋರಿಸಿಕೊಡಲಿಲ್ಲ(prove)?
೩. ಬರೀ ದೇವ-ರಕ್ಕಸದ ಹೋಲಿಕೆಗಳು ಯಾಕೆ?

ಕೋಪರ್ನಿಕಸ್, ನ್ಯೂಟನ್ ಇವರೆಲ್ಲ ಪ್ರಯೋಗಗಳನ್ನು ಮಾಡಿ ತೋರಿಸಿ ತಮ್ಮ ಹೇಳಿಕೆಗಳಿಗೆ ಒತ್ತಾಸೆ ಒದಗಿಸಿದರು. ಇವರುಗಳ ದುಡಿಮೆಗೆ ನಾವು ಬೆಲೆ ಕೊಡಲೇಬೇಕಲ್ಲವೆ?

sunaath said...

ಭರತರೆ,
ಆ ಕಾಲದಲ್ಲಿ ಜ್ಞಾನದ ವಿಸ್ತಾರ ಪ್ರಸಾರಕ್ಕಿದ್ದ ದೊಡ್ಡ ಅಡಚಣೆ ಎಂದರೆ printing convenience ಇರಲಿಲ್ಲ.
ಎಲ್ಲ ಜ್ಞಾನವನ್ನು ಕೇವಲ ಶ್ರುತಿ ಹಾಗೂ ಸ್ಮೃತಿಯಿಂದ ಸಂಕಲಿಸಬೇಕಾಗುತ್ತಿತ್ತು.

ಪುರಾವೆಗಳನ್ನು ಅವರು ಕೊಟ್ಟಿಲ್ಲವೆಂದು ನೀವು ಹೇಳುವದು ಸರಿಯಲ್ಲ.ಆರ್ಯಭಟನ ಪುಸ್ತಕವನ್ನು ಓದಿರಿ.
ದೇವ-ರಕ್ಕಸ ಇದು ಹೋಲಿಕೆಗಾಗಿ ಅಲ್ಲ. ಇವು ಸಂಕೇತಗಳು.

ಕೊಪರ್ನಿಕಸ್ಸನ ಸಂಶೋಧನೆಗೆ ಖಂಡಿತವಾಗಿಯೂ ಬೆಲೆ ಇದೆ. ಅವನಿಗಿಂತ ಮೊದಲು ಸಂಶೋಧನೆಯನ್ನು ಮಾಡಿದ ಭಾರತೀಯನ ಹೆಸರನ್ನು ಸಹ ಭಾರತೀಯ ಪಠ್ಯಪುಸ್ತಕಗಳಲ್ಲಿ ತೋರಿಸುವದು ಸರಿಯಾದದ್ದು.

Guruprasad said...

ಸುನಾಥ ಸರ್,,,
ಸೂರ್ಯಗ್ರಹಣದ ದಿನ ದಿನ ಪತ್ರಿಕೆ ನಲ್ಲಿ ಇದರ ಒಂದು ವಿಚಾರ ನೋಡಿ....ನಮ್ಮ ಜೋತಿಷಿಗಳು ಇನ್ನು ಯಾಕೆ ಹೀಗೆ ಆಡುತ್ತಾರೋ ಅಂತ ಅಂದುಕೊಂಡ ಇದ್ದೆ .. ಆದರೆ ನಿಮ್ಮ ಈ ಲೇಖನ ನೋಡಿದ ಮೇಲೆ..ಹಿಂದಿನ ಕಾಲದ ನಮ್ಮ ಪಂಡಿತರು ಯಾವುದೊ ಒಂದು ತರ್ಕಬದ್ದ ವಿಚಾರ ಮಾಡಿ ಹೀಗೆ ಹೇಳಿರುವುದು ಅಂತ ಅನ್ನಿಸತೊಡಗಿದೆ.....
ಗಣಿತ ದಲ್ಲಿ ನಮ್ಮ ಆರ್ಯಭಟ ರ caluculation .. ಹಾಗೆ ಗ್ರಹಣ ಇಂತ ದಿನನೇ ಸಂಭವಿಸುತ್ತದೆ ಎನ್ನುವ ಜೋತಿಷ್ಯ ಎಲ್ಲವನ್ನು ಒಪ್ಪಿಕೊ ಬೇಕಿದೆ..
ಒಳ್ಳೆಯ ಲೇಖನ,,,ಓದುತ್ತ ನನ್ನ ಮನಸಿಗೂ ಒಳ್ಳೆ ಕೆಲಸ ಕೊಟ್ಟಿತು,,, :-)
Guru

sunaath said...

ಗುರು,
ನಮ್ಮ ಪುರಾತನ ಸಂಪ್ರದಾಯದಲ್ಲಿ ಒಳ್ಳೆಯ ಹಾಗು ಕೆಡುಕಿನ ವಿಷಯಗಳೆರಡೂ ಇದ್ದೇ ಇವೆ. ನಾವು ನಿಷ್ಪಕ್ಷಪಾತಿಯಾಗಿ ಸಂಶೋಧಿಸಿದಾಗ ಒಳ್ಳೆಯ ಪದ್ಧತಿಗಳ ಹಿಂದಿನ ತರ್ಕವು ಹೊಳೆಯದೇ ಇರದು.

ಚಂದ್ರಕಾಂತ ಎಸ್ said...

ಸುನಾಥ್ ಸರ್

ಅನೇಕ ದಿನಗಳ ನಂತರ ಬ್ಲಾಗ್ ಲೋಕಕ್ಕೆ ಮತ್ತೆ ಬಂದಾಗ ನಿಮ್ಮ ಈ ಲೇಖನ ಕಾಣಿಸಿತು. ಎಂದಿನಂತೆ ನಿಮ್ಮ ಬರಹವನ್ನು ನಿಧಾನವಾಗಿ ಓದಬೇಕೆಂದು ನಿರ್ಧರಿಸಿ ಈ ದಿನ ಪ್ರತಿಕ್ರಿಯಿಸಿರುವೆ.

ಅಡಿಗರನ್ನು ಇಷ್ಟೊಂದು ಸಮರ್ಪಕವಾಗಿ ವಿಶ್ಲೇಷಣೆ ಮಾಡುವವರು ತುಂಬಾ ಕಡಿಮೆ. ನೀವು ಸಾಹಿತ್ಯದ ವಿದ್ಯಾರ್ಥಿಯೇ ?ಅಡಿಗರು ಕಟ್ಟುವೆವು ನಾವು ಸಂಕಲನದಿಂದ ಬೆಳೆಯುತ್ತಾ ಹೋದದ್ದು ತಿಳಿದ ವಿಷಯವೇ. ಅವರ ಭೂತ ಮತ್ತು ವರ್ಧಮಾನ ಕವನಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿವೆ. ಮುಂದೊಂದು ದಿನ ನೀವು ವರ್ಧಮಾನದ ಬಗ್ಗೆಯೂ ಬರೆಯಬೇಕು.ಹಾಗೆ ನೋಡಿದರೆ ಅಡಿಗರ ‘ ಇಂದು ನಮ್ಮೀ ನಾಡು’ ಕಟ್ಟುವೆವು ನಾವು, ... ಮುಂತಾದ ಕವನಗಳನ್ನು ನಿಮ್ಮ ಲೇಖನದಲ್ಲಿ ಮೂಡಿ ಬರುವುದನ್ನು ಓದಲು ಕಾತರಳಾಗಿರುವೆ.

ನಾವು ಭಾರತೀಯರು ಗುಲಾಮಿತನದಲ್ಲೇ ಸಂತೃಪ್ತಿ ಕಾಣುವವರು. ಬ್ರಿಟಿಷರಿದ್ದಾಗ ಇರಲಿ ಈಗಲೂ ನಾವು ನಮ್ಮ ದೇಶದ ಹಿರಿಮೆ ಗುರುತಿಸಲು ಹಿಂಜರಿಯುವುದು ದುಃಖಕರ ವಿಚಾರವೇ ಸರಿ.

ಉತ್ತಮ ವೈಜ್ಞಾನಿಕ ವಿಶ್ಲೇಷಣೆಗಾಗಿ ಧನ್ಯವಾದಗಳು.

sunaath said...

ಚಂದ್ರಕಾಂತಾ,
ನೀವು ಅಡಿಗರ ಕವನಗಳನ್ನು ಮೆಚ್ಚುತ್ತಿರುವದನ್ನು ಓದಿ ಖುಶಿಯಾಯಿತು. ನಾನೂ ಸಹ ಅಡಿಗರ fan. ಅವರ ಇನ್ನೊಂದಿಷ್ಟು ಕವನಗಳನ್ನು ಚರ್ಚಿಸೋಣ.

Anonymous said...

Thank you kaakaa.