Monday, August 2, 2010

ಕರಿಯ ಸಾಹೇಬರು

೧೮೩೫ರಲ್ಲಿ ಬ್ರಿಟನ್ನಿನ ಮೆಕಾಲೆ ಸಾಹೇಬರು ಹಿಂದುಸ್ತಾನವೆನ್ನುವ ತಮ್ಮ ವಸಾಹತುವಿನ ಬಗೆಗೆ ಕಂಡ ಕನಸುಹೀಗಿದೆ:

It is impossible for us, with our limited means, to attempt to educate the body of the people. We must at present do our best to form a class who may be interpreters between us and the millions whom we govern; a class of persons, Indian in blood and colour, but English in taste, in opinions, in morals, and in intellect. To that class we may leave it to refine the vernacular dialects of the country, to enrich those dialects with terms of science borrowed from the Western nomenclature, and to render them by degrees fit vehicles for conveying knowledge to the great mass of the population.
(-Minute on Indian Education)

ಹಿಂದುಸ್ತಾನವೆನ್ನುವ ತಮ್ಮ ವಸಾಹತುವಿನ ಬಗೆಗೆ ಬ್ರಿಟಿಶರಿಗೆ ಕೀಳು ಅಭಿಪ್ರಾಯವಿರುವದು ಸಹಜವೇ ಆಗಿದೆ. ಹೀಗಾಗಿ ಮೆಕಾಲೆ ಸಾಹೇಬರು ಹಿಂದುಸ್ತಾನದಲ್ಲಿ ‘ಕರಿಯ ಸಾಹೇಬ’ರನ್ನು ಹುಟ್ಟುಹಾಕಿ, ಈ ವಸಾಹತುವಿನ ಉದ್ಧಾರ ಮಾಡಬೇಕೆಂದು ಚಿಂತಿಸಿದ್ದರೆ, ಅದರಲ್ಲಿ ತಪ್ಪೇನೂ ಇರಲಿಕ್ಕಿಲ್ಲ. ಬ್ರಿಟಿಶ್ ಆಳಿಕೆಯಿದ್ದ ಅವಧಿಯಲ್ಲಿ, ಅನೇಕ ಹಿಂದುಸ್ತಾನಿಗಳೂ ಇದೇ ಅಭಿಪ್ರಾಯದವರು ಇದ್ದಿದ್ದಾರು.

ಕಾಲಾಂತರದಲ್ಲಿ ಬ್ರಿಟಿಶರಿಗೆ ತಮ್ಮ ತಪ್ಪು ಕಲ್ಪನೆಯ ಅರಿವಾಗಿರಬಹುದು. ಭಾರತೀಯ ಸಂಸ್ಕೃತಿಯ ಉದಾತ್ತ ಪ್ರತೀಕರಾದ ಸ್ವಾಮಿ ವಿವೇಕಾನಂದ, ಭಾರತೀಯ ಭಾಷೆ ಹಾಗು ಸಾಹಿತ್ಯದ ಶ್ರೇಷ್ಠತೆಯನ್ನು ಜಗತ್ತಿಗೆ ತೋರಿಸಿದ ಕವಿ ರವೀಂದ್ರನಾಥ ಠಾಕೂರ, ಶ್ರೇಷ್ಠ ವಿಜ್ಞಾನಿ ಜಗದೀಶಚಂದ್ರ ಬೋಸ ಇವರನ್ನಲ್ಲದೆ ಭಾರತಕ್ಕಾಗಿ ಜೀವ ಹಾಗು ಜೀವನವನ್ನೇ ಮುಡುಪಿಟ್ಟ ಚಂದ್ರಶೇಖರ ಆಜಾದ, ಭಗತ್ ಸಿಂಗ, ಲೋಕಮಾನ್ಯ ತಿಲಕ, ಸುಭಾಷಚಂದ್ರ ಬೋಸ, ಮಹಾತ್ಮಾ ಗಾಂಧಿ ಇವರನ್ನೆಲ್ಲ ಕಂಡ ಬ್ರಿಟಿಶರಿಗೆ ಮೆಕಾಲೆಯ ಮೂರ್ಖ ಅಹಂಕಾರದ ಅರಿವಾಗಿರಬಹುದು.

ಆದರೆ ಸ್ವತಂತ್ರ ಭಾರತದಲ್ಲಿಯೇ ಹುಟ್ಟಿದಂತಹ ಅನೇಕ ಭಾರತೀಯರು ಈಗಲೂ ಮೆಕಾಲೆಯ ವಂಶಸ್ಥರಂತೆ ವರ್ತಿಸುತ್ತಿರುವದು ಆಶ್ಚರ್ಯಕರವಾಗಿದೆ. ಈ ಆಂಗ್ಲವ್ಯಾಮೋಹಿಗಳನ್ನು ಕರಿಯ ಸಾಹೇಬರು ಎಂದು ಕರೆಯಬಹುದೆ? ಯಾಕೆಂದರೆ, ಇವರಿಗೆ ಪರದೇಶಿ ಜೀವನಶೈಲಿ, ಪರದೇಶಿ ಭಾಷೆ ಅಂದರೆ ಪ್ರಾಣಪ್ರಿಯ. ತಮ್ಮ ಮಟ್ಟಿಗೆ ಈ ವ್ಯಾಮೋಹ ಸೀಮಿತವಾಗಿದ್ದರೆ, ಇವರನ್ನು ಉದಾಸೀನ ಮಾಡಬಹುದಾಗಿತ್ತು. ಆದರೆ ಇವರು ಪ್ರತಿಭಾವಂತ ವ್ಯಕ್ತಿಗಳು, ಜನರನ್ನು ಪ್ರಭಾವಿಸಬಲ್ಲ ಉದ್ಯಮಗಳಲ್ಲಿ ಅಂದರೆ ಪತ್ರಿಕೋದ್ಯಮದಲ್ಲಿ ಹಾಗು ಇತರ ಸಾರ್ವಜನಿಕ ಮಾಧ್ಯಮ‌ದ ಉದ್ಯಮಗಳ ಉಚ್ಚಸ್ಥಾನಗಳಲ್ಲಿ ಇರುವಂಥವರು.
ಇದು ಭಾರತದ ದುರ್ದೈವವೆನ್ನಬಹುದು.

ಕನ್ನಡದಲ್ಲಿ ಅತಿ ಹೆಚ್ಚಿನ ಪ್ರಸಾರವುಳ್ಳದ್ದೆಂದು ಹೇಳಲಾದ ಸಮಾಚಾರ ಪತ್ರಿಕೆಯೊಂದರ ಸಂಪಾದಕರು ತಮ್ಮ ಪತ್ರಿಕೆಯಲ್ಲಿ ಇತ್ತೀಚೆಗೆ ಲೇಖನವೊಂದನ್ನು ಬರೆದಿದ್ದರು. ವಿದೇಶಗಳಲ್ಲಿ ಪಾಯಖಾನೆಗಳು ಎಷ್ಟು ಸ್ವಚ್ಛ ಹಾಗು ಕಲಾತ್ಮಕವಾಗಿರುತ್ತವೆ; ಅಲ್ಲಿ ಒಳಹೊಕ್ಕರೆ ಹೊರಗೆ ಬರುವ ಮನಸ್ಸೇ ಆಗುವದಿಲ್ಲ ಇತ್ಯಾದಿಯಾಗಿ ವಿದೇಶಿ ಪಾಯಖಾನೆಗಳನ್ನು ವರ್ಣಿಸಿದ್ದರು. ಅಲ್ಲದೆ, ವಿದೇಶೀಯರು ಎಷ್ಟು ಸುಸಂಸ್ಕೃತರಾಗಿದ್ದಾರೆಂದರೆ ಅವರು ತಮ್ಮ ಪಾಯಖಾನೆಗಳಿಗೆ ‘ವಿಶ್ರಾಂತಿಸ್ಥಳ’ ಎಂದು ಕರೆಯುತ್ತಾರೆ ಎಂದು ಅವರನ್ನು ಹೊಗಳಿ ಹೊಗಳಿ ಹೊನ್ನಶೂಲಕ್ಕೆ ಏರಿಸಿದ್ದರು.

ಇಲ್ಲಿ ಮೂರು ಅಂಶಗಳನ್ನು ಗಮನಿಸಬೇಕು:
(೧) ಓರ್ವ ವ್ಯಕ್ತಿಯ ಸುಸಂಸ್ಕೃತ ನಾಗರಿಕತೆ ಕೇವಲ ಅವನ ಪದಸಂಪತ್ತಿನ ಮೇಲೆ ಅವಲಂಬಿತವಾಗುವದಿಲ್ಲ. ಯಹೂದಿಗಳ ಮಾರಣಹೋಮ ಮಾಡಿದ ಹಿಟ್ಲರನ ಪದಕೋಶವೇನು ಕಡಿಮೆಯದಾಗಿತ್ತೆ? ಬಾಂಗ್ಲಾದಲ್ಲಿ ಘೋರ ಅತ್ಯಾಚಾರಕ್ಕೆ ಕಾರಣನಾದ ಝುಲ್ಫಿಕರ ಅಲಿ ಭುಟ್ಟೋನ ಪದಸಂಪತ್ತು ಕಳಪೆಯಾಗಿತ್ತೆ? ಇವರೂ ಸಹ ‘ವಿಶ್ರಾಂತಿಸ್ಥಳ’ಗಳನ್ನು ಬಳಸುವ ದೊಡ್ಡ ನಾಗರಿಕರೇ ಆಗಿದ್ದರು. ಪಾಯಖಾನೆ ಪದವನ್ನು ಬಳಸಿದ ಮಾತ್ರಕ್ಕೆ ಓರ್ವ ವ್ಯಕ್ತಿ ಅಸಂಸ್ಕೃತನಾಗುವದಿಲ್ಲ. ಹಾಗೆ ನೋಡಿದರೆ ಹಿಂದುಸ್ತಾನದ ಅನೇಕ ಬಾದಶಾಹರು ಪಾಯಖಾನೆಗಳನ್ನೇ ಬಳಸುತ್ತಿದ್ದರು. (‘ಪಾಯ’ ಅಂದರೆ ಕಾಲು; ‘ಖಾನಾ’ ಎಂದರೆ ಕೋಣೆ. ಪಾಯಖಾನಾ ಅಂದರೆ ಕಾಲೂರುವ ಸ್ಥಳ!)

(೨) ಈ ನಮ್ಮ ‘ಬಡೇ ಲೋಗ’ ಸಂಪಾದಕರು ಮಾರು ಹೋದಂತಹ ಪಾಯಖಾನೆಗೆ (-- ಯಾವುದೇ ಹೆಸರಿನಿಂದ ಕರೆದರೂ ಸಹ, ಈ ಸ್ಥಳವು ಬಳಸಿದ ವ್ಯಕ್ತಿಯ ವಾಸನೆಯನ್ನೇ ಹೊರಹಾಕುತ್ತದೆ!--) ಸಂಗಮರವರಿ ಕಲ್ಲಿನ ಹಾಸು ಇರಬಹುದು. ಮೂಲೆಗಳಲ್ಲಿ ಹೂದಾನಿ ಇರಬಹುದು. ಒಂದು ಸಲ ಬಳಸಿದ ಮೇಲೆ ಎರಡು ಬಕೆಟ್ ಶುದ್ಧ ನೀರನ್ನು ತೊಳೆಯಲು ಬೇಡಬಹುದು. ಆದರೆ, ಇದೆಲ್ಲಕ್ಕಾಗಿ ಮಾಡಬೇಕಾಗುವ ಖರ್ಚು ಎಷ್ಟು ಸ್ವಾಮಿ? ಭಾರತದ ಒಬ್ಬ ದಿನಗೂಲಿಯ ದಿನದ ದುಡಿಮೆಗಿಂತ ಇದು ಎಷ್ಟು ಪಟ್ಟು ಹೆಚ್ಚು ಹೇಳಿ? ಈ ಎಲ್ಲ ಅಂಶಗಳನ್ನು ಲೆಕ್ಕಿಸದೆ, ನೀವು ಭಾರತದ ಪಾಯಖಾನೆಗಳು ನರಕಸದೃಶವಾಗಿರುತ್ತವೆ, ಸ್ವರ್ಗಸದೃಶ ವಿದೇಶಿ ‘ವಿಶ್ರಾಂತಿಸ್ಥಳ’ಗಳ ಗಮ್ಮತ್ತೇ ಗಮ್ಮತ್ತು ಎಂದು ಹಾಡಿದರೆ ನಿಮಗೆ ಕರಿಯ ಸಾಹೇಬರೆಂದು ಕರೆಯುವದೇ ಸರಿಯಲ್ಲವೆ?

ಭಾರತದಲ್ಲಿ ಇದೀಗ ಅನೇಕರು ಕೋಟ್ಯಾಧೀಶ್ವರರಾಗುತ್ತಿದ್ದಾರೆ. ಇವರೆಲ್ಲರ ಹೆಗ್ಗಳಿಕೆ ಏನೆಂದರೆ ಭಾರತದ ಆಂತರಿಕ ಸಂಪತ್ತಿನ ಹೆಚ್ಚಳಕ್ಕೆ ತಮ್ಮದು ದೊಡ್ಡ ಕೊಡುಗೆ  ಎಂದು.
ನಾನು ಕೇಳುತ್ತೇನೆ: “ಸ್ವಾಮಿ, ಭಾರತದ ಆಂತರಿಕ ದಾರಿದ್ರ್ಯದ ಹೆಚ್ಚಳಕ್ಕೆ ನಿಮ್ಮ ಕೊಡುಗೆ ಎಷ್ಟು?”
ನೋಡ ಬನ್ನಿ, ಈ ಕೋಟ್ಯಾಧೀಶ್ವರ ಉದ್ಯೋಗಪತಿಗಳು  ಸ್ಥಾಪಿಸಿದ ಕಾರಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ರೇಲವೆ ಹಳಿಗಳ ಪಕ್ಕದಲ್ಲಿಯೇ ಮಲವಿಸರ್ಜನೆ ಮಾಡಿ, ಅಲ್ಲಿಯೇ ತಮ್ಮ ಗುಡಿಸಲುಗಳಲ್ಲಿ ರೊಟ್ಟಿ ಬೇಯಿಸಿಕೊಳ್ಳುತ್ತಾರೆ. ಈ ದರಿದ್ರರ ಎದುರಿಗೆ ಶ್ರೀಮಂತರ ಪಾಯಖಾನೆಯ ವರ್ಣನೆಯನ್ನು ಕವಿತೆ ಮಾಡಿ ಹಾಡುವ ಹೊಗಳು-ಭಟ್ಟರೇ  ಇಂದು ಪತ್ರಿಕಾಮಾಧ್ಯಮದ ಪ್ರತಿಭಾವಂತ ಸಂಪಾದಕರಾಗಿದ್ದಾರೆ !

ಭಾರತದಲ್ಲಿರುವ ರೈತಕಾರ್ಮಿಕರಲ್ಲಿ ಹಾಗು ಕಾರಖಾನೆಗಳ ಕಾರ್ಮಿಕರಲ್ಲಿ ಅನೇಕರು ನಿರಕ್ಷರಿಗಳೇ ಆಗಿದ್ದಾರೆ. ಸಾಕ್ಷರರಿದ್ದರೂ ಸಹ ಅವರಿಗೆ ಪತ್ರಿಕೆ ಎನ್ನುವದು ಒಂದು ಐಷಾರಾಮಿ ವಸ್ತುವೇ ಆಗಿರುತ್ತದೆ.  ಆದುದರಿಂದ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಲು ಇಂಥವರು ನಿರುಪಯೋಗಿಗಳು. ಪತ್ರಿಕೆಯನ್ನು ಓದುವ ಶ್ರೀಮಂತವರ್ಗಕ್ಕೆ ಶ್ರೀಮಂತಜೀವನಶೈಲಿಯ ಪತ್ರಿಕೆಗಳು ಬೇಕು. ಓದುಗರು ಮಧ್ಯಮವರ್ಗದವರಾಗಿದ್ದರೆ, ಅಂಥವರಿಗೆ ಶ್ರೀಮಂತಜೀವನಶೈಲಿಯ ಭ್ರಮೆಗಳನ್ನು ಉಣ್ಣಿಸುವಂತಹ ಪತ್ರಿಕೆಗಳು ಬೇಕು. ಆದುದರಿಂದಲೇ ಈ ಮನೋಧರ್ಮದ ದುರ್ಬಳಕೆ ಮಾಡುವ ಉದ್ದೇಶದಿಂದ ನಮ್ಮಲ್ಲಿ ಶ್ರೀಮಂತಜೀವನಶೈಲಿಯನ್ನು ಪ್ರದರ್ಶಿಸುವ ಪತ್ರಿಕೆಗಳು ವೃದ್ಧಿಸುತ್ತಿವೆ. ನುಣುಪಾದ ಪುಟಗಳು, ಅರೆನಗ್ನ ಹೆಣ್ಣುಗಳ ಚಿತ್ರಗಳು, ಕೊಳ್ಳುಬಾಕ ಸಂಸ್ಕೃತಿಯ ಜಾಹೀರಾತುಗಳು ಇಷ್ಟಿದ್ದರೆ ಸಾಕು, ಆ ಪತ್ರಿಕೆಯ ಪ್ರಸಾರ ಪುಟಿದೇಳುತ್ತದೆ.

(೩) ಇಷ್ಟೇ ಆಗಿದ್ದರೆ, ಇಂತಹ ಪತ್ರಿಕೆಗಳನ್ನು ಓದದೆ ನಮ್ಮಷ್ಟಕ್ಕೆ ನಾವು ಸುಮ್ಮನಿರಬಹುದಿತ್ತು. ಆದರೆ, ಈ ಪತ್ರಿಕೋದ್ಯಮಿಗಳ ಆಂಗ್ಲಮೋಹದಿಂದಾಗಿ ಕನ್ನಡಕ್ಕೆ ಅಪಚಾರವಾಗುತ್ತಿದೆಯಲ್ಲ ಎಂದು ತಳಮಳವಾಗುತ್ತದೆ. ಮೆಕಾಲೆ ಸಾಹೇಬನಿಗೆ ಭಾರತೀಯ ಭಾಷೆಗಳ ಶ್ರೀಮಂತಿಕೆ ಗೊತ್ತಿರಲಿಲ್ಲ. ಅದಕ್ಕಾಗಿಯೇ ಆ ಅಜ್ಞಾನಿ ಮನುಷ್ಯ ಹೀಗೆ ಹೇಳಿದ:

…To that class we may leave it to refine the vernacular dialects of the country, to enrich those dialects with terms of science borrowed from the Western nomenclature, and to render them by degrees fit vehicles for conveying knowledge to the great mass of the population.

ಈ ನಮ್ಮ ಆಂಗ್ಲವ್ಯಾಮೋಹಿ ಸಂಪಾದಕರು ಮೆಕಾಲೆಯ ಮಾತುಗಳನ್ನು ಶಿರಸಾವಹಿಸಿ ಪಾಲಿಸುತ್ತಿರಬಹುದು. ಏಕೆಂದರೆ ಮೆಕಾಲೆಯ ಈ ಚೇಲಾಗಳು ಭಾರತದ ದೇಶಭಾಷೆಗಳಲ್ಲಿ ಇಂಗ್ಲಿಶ್ ಪದಗಳನ್ನು ನೇರವಾಗಿ ತುಂಬುತ್ತಿದ್ದಾರೆ. ಇದರಿಂದಾಗಿ ಮೆಕಾಲೇನ ಆತ್ಮಕ್ಕೆ ಸಂತೃಪ್ತಿ ಸಿಕ್ಕಿರಬಹುದು. ಆದರೆ, ಕನ್ನಡಕ್ಕೆ  ಪತ್ರಿಕಾಪದಗಳನ್ನು ಹಾಗು ಪತ್ರಿಕಾಭಾಷೆಯನ್ನು ನೀಡಿದಂತಹ ಕನ್ನಡ ಪತ್ರಿಕೆಗಳ ಪ್ರಾರಂಭದ ದಿನಗಳ ಸಂಪಾದಕರ ಆತ್ಮಗಳು ಸಂತಪ್ತವಾಗಿವೆ ಎನ್ನುವದರಲ್ಲಿ ಸಂಶಯವೇ ಇಲ್ಲ. ಅದೇನೋ ಹೇಳುತ್ತಾರಲ್ಲ: ‘ಕುಂಬಾರನಿಗೆ ಒಂದು ವರುಷ; ಡೊಣ್ಣೆಗೆ ಒಂದು ನಿಮಿಷ !” ಈ ಆಂಗ್ಲವ್ಯಾಮೋಹಿ ಪತ್ರಿಕೋದ್ಯಮಿಗಳಿಂದಾಗಿ ನಮ್ಮ ಪತ್ರಿಕಾಪೂರ್ವಜರ ಭಾಷಾಪರಿಶ್ರಮವೆಲ್ಲ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ವ್ಯರ್ಥವಾಗಿ ಹೋಗಿದೆ.

ಶ್ರೀಮಂತಜೀವನಶೈಲಿಯ ಈ ಸಂಪಾದಕರುಗಳಿಗೆ ಭಾರತದ ಸಮಸ್ಯೆಗಳು ಗೊತ್ತಿವೆಯೆ? ಭಾರತದ ಬಡ ರೈತನಿಗೆ ಬೇಕಾಗಿರುವದು ಒಂದು ತಗಡಿನ ಚಪ್ಪರವೆ ಹೋರತು ಸುಸಜ್ಜಿತ ‘ವಿಶ್ರಾಂತಿಸ್ಥಳ’ವಲ್ಲ. ಬಡರೈತನು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕರೆ ಸಾಕು, ಆತ ನೇಣಿಗೆ ಶರಣಾಗುವದಿಲ್ಲ. ಎಲ್ಲೆಲ್ಲಿಯೊ ಸಾಲ ಮಾಡಿ ಆತ ತನ್ನ ಜಮೀನಿನಲ್ಲಿ ಬೆಳೆ ತೆಗೆಯುತ್ತಾನೆ. ಬೆಳೆ ಚೆನ್ನಾಗಿ ಬಂದಾಗ ಧಾರಣಿ ಕುಸಿಯುತ್ತದೆ. ಧಾರಣಿ ಚೆನ್ನಾಗಿದ್ದಾಗ ಬೆಳೆ ಇರುವದಿಲ್ಲ. ಈ ಎರಡೂ ಸಂದರ್ಭಗಳಲ್ಲಿ ಫಾಯದೆ ಮಾಡಿಕೊಳ್ಳುವವನು ಮಧ್ಯಸ್ಥನಾದ ವ್ಯಾಪಾರಸ್ಥ. ಲಂಚ ಕೊಡಲಾಗದ ನಮ್ಮ ರೈತನಿಗೆ ನೇರವಾಗಿ ಸಬ್ಸಿಡಿ ಕೊಡಲು ನಮ್ಮ ಮಂತ್ರಿಗಳಿಗೆ ಮನಸ್ಸಿಲ್ಲ. ಒಂದು ವೇಳೆ ನಮ್ಮ ಸರಕಾರ ಕೊಡಬಯಸಿದರೂ ಅದಕ್ಕೆ ಜಾಗತಿಕ ಬ್ಯಾಂಕು ಅಡ್ಡಿ ಮಾಡುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಎರಡು ಲಕ್ಷಕ್ಕೆ ಹತ್ತಿರವಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೇಸಾಯದಿಂದ ಹೊಟ್ಟೆ ತುಂಬಿಸಲಾರದ ಈ ಪರಿಸ್ಥಿತಿಯಲ್ಲಿಯೇ, ಉದ್ದಿಮೆಗಳು ಸಹ ಬೆಳೆಯಲಾರದಂತಹ ಸ್ಥಿತಿ ಭಾರತದಲ್ಲಿದೆ. ಒಂದು ಉದ್ದಿಮೆಗೆ ಬೇಕಾಗುವ ಮೂಲಭೂತ ಸೌಕರ್ಯಗಳು ನಮ್ಮಲ್ಲಿಲ್ಲ. ಅರ್ಥಾತ್ ನಮ್ಮಲ್ಲಿ ನಿರುದ್ಯೋಗ ನಿವಾರಣೆಗೆ ಯಾವುದೇ ಉಪಾಯವಿಲ್ಲ. ಇದರ ಮೇಲೆ ಹೆಚ್ಚುತ್ತಿರುವ ಜನಸಂಖ್ಯೆ. ಇದು ಯಾವದೂ ತನಗೆ ಸಂಬಂಧಿಸಿದ ಸಮಸ್ಯೆಯೇ ಅಲ್ಲ ಎಂದು ಕಣ್ಣು ಮುಚ್ಚಿ ಕುಳಿತಿರುವ ಸರಕಾರಗಳು !

ಇಂತಹ ಸಮಸ್ಯೆಗಳೆಲ್ಲ ನಮ್ಮನ್ನು ಕಾಡುತ್ತಿರುವಾಗ ನಮ್ಮ ‘ಹೈ-ಫೈ’ ಸಂಪಾದಕರಿಗೆ ಇರುವ ಏಕಮೇವ ಚಡಪಡಿಕೆ ಎಂದರೆ ಭಾರತದಲ್ಲಿ ಇವರು ಸಂಚರಿಸುವ ಸ್ಥಳಗಳಲ್ಲಿ ಸುಸಜ್ಜಿತ ಪಾಯಖಾನೆಗಳಿಲ್ಲ ಎನ್ನುವದು ! 

54 comments:

Subrahmanya said...

ತಾವು ಬರೆದದ್ದನ್ನೆಲ್ಲ ಜನ ಒಪ್ಪುತ್ತಾರೆ ಎಂಬ ಭ್ರಮೆಯಲ್ಲಿರುವಂತಿದೆ ಪತ್ರಿಕಾ ಸಂಪಾದಕರುಗಳು. ಅಂತೂ ಮೆಕಾಲೆಯ ’ದೂರದರ್ಶಿತ್ವ’ ಈಗಲೂ ವರ್ಕ್ ಆಗ್ತಾ ಇದೆಯಲ್ಲಾ , ಅದಕ್ಕೆ ಹೇಳೊದು ನಮ್ಮ ಭಾರತ ಮಹಾನ್ ಅಂತ. ಆಗಾಗ್ಗೆ ನೀವು ಈ ರೀತಿ ಚಾಟಿ ಬೀಸುತ್ತಿದ್ದರೆ ಒಳ್ಳೆಯದು. ಕನಿಷ್ಠ ಆತ್ಮಸಾಕ್ಷಿಯನ್ನು ಕೇಳಿಕೊಳ್ಳುತಾರೇನೋ ಅಂತ !.

ಮನದಾಳದಿಂದ............ said...

ನಿಜ,
ಸುಬ್ರಮಣ್ಯ ಸರ್ ಅಭಿಪ್ರಾಯ ಸರಿಯಾಗೇ ಇದೆ.
ಒಬ್ಬ ಬಡ ರೈತನಿಗೆ ಒಂದಿನಿತು ಸಹಾಯವಾದರೂ ಬಹಳ ಹರ್ಷಗೊಲ್ಲುತ್ತಾನೆ, ಆಗತಾನೆ ನಮ್ಮ ದೇಶ ಸಂಪದ್ಬರಿತವಾಗಲು ಸಾಧ್ಯ. ದೇಶದ ಬೆನ್ನೆಳುಬೆ ಬಾಗಿದರೆ ಇನ್ನೆಲ್ಲಿಯ ಅಭಿವೃದ್ಧಿ?
ಈ ವಿಷಯಗಳೆಲ್ಲ ದೊಡ್ಡವರ ನಡುವೆ ಹವಾನಿಯಂತ್ರಿತ ಕೊಠಡಿಗಳಲ್ಲಿ ದೊಡ್ಡವರಾಗೆ ಬದುಕುವ ಈ ಸಂಪಾದಕರುಗಲಿಗೆಲ್ಲಿ ಅರ್ಥವಾಗಬೇಕು?

Dr.D.T.Krishna Murthy. said...

ಕನ್ನಡ ಬರುತ್ತಿದ್ದರೂ,ತಪ್ಪು ಇಂಗ್ಲೀಷಿನಲ್ಲೇ ಮಾತಾಡುತ್ತಾ ಅದನ್ನು ಹೆಚ್ಚುಗಾರಿಕೆ ಎಂದುಕೊಂಡಿರುವ,ಕನ್ನಡದಲ್ಲಿ ಮಾತನಾಡಿದರೆ ಇಂಗ್ಲಿಷಿನಲ್ಲೇ ಉತ್ತರ ಕೊಡುವ ಇಂಗ್ಲೀಶ್ ಗುಲಾಮರು ಸಾಕಷ್ಟು ಜನ ಇದ್ದಾರೆ.ಅಮ್ಮ ಅಪ್ಪ ಎನ್ನುವ ಮಗುವನ್ನು ಹೊಡೆದೂ ,ಬಡಿದೂ, ಮಮ್ಮಿ ಡ್ಯಾಡಿ ಅನ್ನು ಎಂದು ಹೇಳಿಕೊಡುವ ತಂದೆ ತಾಯಂದಿರನ್ನು ನೋಡಿದರೆ ಮೈ ಉರಿಯುತ್ತದೆ.

ತೇಜಸ್ವಿನಿ ಹೆಗಡೆ said...

ಕಾಕಾ,

ನಮ್ಮಲ್ಲಿ ಸಾವಿರ ಕೊರತೆಗಳಿರಬಹುದು. ವಿದೇಶದಲ್ಲಿ ಸಾವಿರ ಸವಲತ್ತುಗಳೇ ತುಂಬಿರಬಹುದು. ನಾವಿರಬೇಕಾದ್ದು ಇಲ್ಲೇ. ಹಾಗಿರುವಾಗ ಇಲ್ಲಿರುವ (ಉಳಿದಿರುವ) ಸಂಪತ್ತನ್ನು ವೃದ್ಧಿಸಿ.. ಬಳಸಿಕೊಂಡು ಹೇಗೆ ಕೆಳವರ್ಗದಿಂದ ಮೇಲ್‌ವರ್ಗಕ್ಕೆ ಸವಲತ್ತುಗಳನ್ನು ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕು... ಜನರೂ ಚಿಂತಿಸಬೇಕು. ಇವರಿಬ್ಬರ ನಡುವೆ ಮಾಧ್ಯಮವಾಗಿರುವ ಮಹಾನ್ ಮಾಧ್ಯಮ ಯಾವುದೇ ಒಂದು ಕಡೆ ವಾಲದೇ ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸಬೇಕು. ತನ್ನ ಮಗು ಫೇಲ್ ಆಗಿದೆ... ಪಕ್ಕದ ಮನೆಯ ಮಗು ಫಸ್ಟ್ ಬಂದಿದೆ ಎಂದು... ತನ್ನ ಮಗುವನ್ನು ಹಳಿದು, ಜರೆದು ದೂರಮಾಡಿ ಆ ಮಗುವನ್ನೇ ಹೊಗಳುತ್ತಾ ಕುಳಿತರೇನು ಬಂತು ಭಾಗ್ಯ? ಯಾರೆಷ್ಟು ಹೇಳಿದರೂ ನಮ್ಮ ಸರಕಾರ, ಸಮಾಜ, ಪತ್ರಿಕೆ ಸುಧಾರಿಸದೇನೋ. ಜನ ಜಾಗೃತಿಯಾಗದೇ ಯಾವ ವ್ಯವಸ್ಥೆಯೂ ಸರಿಯಾಗದು.

ಬಾಲು said...

ಪ್ರಿಯ ಸುನಾಥ ರೆ,

ಭಟ್ಟರ ಲೇಖನವನ್ನು ತಾವು ಸರಿಯಾಗಿ ಅರ್ಥೈಸಿಕೊ೦ಡಿಲ್ಲವೆನಿಸುತ್ತದೆ. ನಮ್ಮ ನಗರಗಳ ಅಷ್ಟೇ ಯಾಕೆ ಸಣ್ಣ ಪಟ್ಟಣಗಳಸಾರ್ವಜನಿಕ ಶೌಚಾಲಯಗಳಿಗೆ ಹೊಕ್ಕು ಹೊರ ಬ೦ದರೆ ಮೂರು ದಿನ ಊಟ ಸೇರುವುದಿಲ್ಲ, ಅಷ್ಟೊ೦ದು ಗಬ್ಬುನಾತ ಬೀರುತ್ತಿರುತ್ತದೆ. ಭಟ್ಟರು ಹಲವಾರು ಬಾರಿ ವಿದೇಶ ಪ್ರವಾಸ ಮಾಡಿ ಬಂದು ಅಲ್ಲಿನ ಶುಶುಭ್ರ ಶೌಚಾಲಯಗಳ ಅನುಭವದಿ೦ದ ಉಲ್ಲಸಿತರಾಗಿ, ಇಲ್ಲಿಯೂ ಅಂತಹ ವ್ಯವಸ್ಥೆ ಮತ್ತು ಅವನ್ನು ಬಳಸುವ ಜನರ ಮನಸ್ಥಿತಿ ಬದಲಾಗ ಬೇಕು ಎನ್ನುವ ಸದುದ್ದೇಶದಿ೦ದ ಈ ಲೇಖನ ಬರೆದಿರಬಹುದು. ನಿಮ್ಮ ಲೇಖನ ಓದಿದ ಮೇಲೆ ಬಹುಶಃ ನೀವು ಸಾರ್ವಜನಿಕ ಶೌಚಾಲಯ ದರ್ಶನ ಮಾದಿಲ್ಲವೆನಿಸುತ್ತದೆ, . ಇವು ಸಕಲ ರೋಗಗಳ ಜನ್ಮಸ್ಥಾನ ಅನ್ನಿಸುವಷ್ಟು ಕೊಳಕಾಗಿವೆ. "ಕೊಳಕು" ಅನ್ನುವುದಕ್ಕೆ ಒ೦ದು ಅನ್ವರ್ಥಕ ಪದವೇ ನಮ್ಮ ಸಾರ್ವಜನಿಕ ಶೌಚಾಲಯ ಗಳು. ಹೀಗಿರುವಾಗ ನೀವು ಅ೦ಗ್ಲ ವ್ಯಾಮೋಹ, ಕರಿಸಾಹೆಬ, ಶ್ರೀಮ೦ತ ಜೀವನ ಶೈಲಿ, ಎ೦ಬೆಲ್ಲ ವ್ಯಾಖ್ಯಾನ ಮಾಡಿ, ಅನಾವಶ್ಯಕವಾಗಿ ಮೆಕಲೆಯನ್ನು ಎಳೆತ೦ದು, ರೈತರ ಆತ್ಮಹತ್ಯೆ, ಮೂಲಭೂತ ಸೌಕರ್ಯ ಕೊರತೆ ಹೀಗೆಲ್ಲ ಗೋಜಲು ಗೋಜಲಾಗಿ ಬರೆದಿದ್ದೀರಿ. ನೀವು ಭಟ್ಟರನ್ನು ತೆಗಳುವ ಭರದಲ್ಲಿ ವಸ್ತುವಿಷಯದ ಬಗ್ಗೆ ಆಳವಾಗಿ ಆಲೋಚಿಸಿಲ್ಲ ಎ೦ಬುದು ಸ್ಪಷ್ಟವಾಗುತ್ತಿದೆ. ಬೆ೦ಗಳೂರಿನಲ್ಲಿ ಇನ್ಫೋಸಿಸ್ ನವರು ಕಟ್ಟಿಸಿಕೊಟ್ಟ ನಿರ್ಮಲ ಶೌಚಾಲಯ ಇ೦ದು ಎಷ್ಟು ನಿರ್ಮಲವಾಗಿದೆ, ನಾವು ಹಣ ತೆತ್ತು ಉಚ್ಚೆ ಹೊಯ್ಯುತ್ತಿದ್ದರೂ ಅಲ್ಲಿಯೂ ಗಬ್ಬುನಾತದ ಅನುಭವ ಆಗಿಯೇ ಆಗುತ್ತದೆ. ಇವತ್ತು ಶುಭ ಶೌಚಾಲಯ ಕೇವಲ ಹೈ-ಫೈ ಜನರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ಬೇಕು, ನನ್ನ ಪ್ರಕಾರ ಶುಭ್ರತೆಯ ಮೊದಲ ಪಾಠ ಶೌಚಾಲಯ ದಿ೦ದ ಲೇ ಆರ೦ಭವಾಗಬೇಕು.

"ಕನ್ನಡದಲ್ಲಿ ಅತಿ ಹೆಚ್ಚಿನ ಪ್ರಸಾರವುಳ್ಳದ್ದೆಂದು ಹೇಳಲಾದ ಸಮಾಚಾರ ಪತ್ರಿಕೆಯೊಂದರ" - ಈ ಅನಗತ್ಯ ವ್ಯಂಗ್ಯ ಬೇಕಿತ್ತೆ? ವಿಜಯ ಕರ್ನಾಟಕ ಅತಿ ಹೆಚ್ಚು ಪ್ರಸಾರ ಉಳ್ಳ ಪತ್ರಿಕೆ ಎಂದು ಸತ್ಯ. ಈ ತರದ ವ್ಯಂಗ್ಯ ವೇಕೆ? ನೇರವಾಗಿ ವಿಜಯ ಕರ್ನಾಟಕ ಅಂತ ಬರೆಯ ಬಹುದಲ್ಲವೇ?

"ಈ ನಮ್ಮ ‘ಬಡೇ ಲೋಗ’ ಸಂಪಾದಕರು" - ಮತ್ತದೇ ವ್ಯಂಗ್ಯ! ಅವರ ಲೇಖನಿಯನ್ನು ಬೈಯಿರಿ ಅದನ್ನು ಬಿಟ್ಟು ವ್ಯಕ್ತಿ ಗತ ನಿಂದನೆ ಏಕೆ? ನೀವು ಹಿಂದೊಮ್ಮೆ ಭಟ್ಟರ "ಭಾರತದ ಜನಸ೦ಖ್ಯೆ ಸಮಸ್ಯೆ ಲೇಖನಕ್ಕೂ ವೈಯಕ್ತಿಕ ವಾಗಿ ನಿಂದಿಸಿದ್ದಿರಿ, ಅದು ಸರಿಯೇ? "ನಿಮ್ಮ ಲೇಖನದ ಕೊನೆಯ ಸಾಲುಗಳನ್ನ ಬೇಕಿದ್ದರೆ ಓದಿ ಓದಿರಿ.

ಅಂದ ಹಾಗೆ ನಾನೇನು ಭಟ್ಟರ ಅಭಿಮಾನಿಯೂ ಅಲ್ಲ, ಅ ಪತ್ರಿಕೆಯ ಕಾಯಂ ಓದುಗನು ಅಲ್ಲ. ನಿಮ್ಮ ವಿಮರ್ಶೆಯ ಕಾಯಂ ಓದುಗ ನಾದ ನನಗೆ ನಿಮ್ಮ ಈ ಲೇಖನವು ದಿಗ್ಮೂಡ ನ್ನನ್ನಾಗಿ ಮಾಡಿತು. ಅದಕ್ಕಾಗಿ ಈ ಪ್ರತಿಕ್ರಿಯೆ.

PARAANJAPE K.N. said...

ಸುನಾಥ ಜೀ,
ನಾನು ಭಟ್ಟರ ಲೇಖನ ಓದಿದ್ದೇನೆ. ಹೌದು, ವಿದೇಶಗಳಲ್ಲಿನ ಶುಭ್ರ ರೆಸ್ಟ್ ರೂಂ ಗಳಲ್ಲಿ ವಿಹರಿಸಿ ಬ೦ದ ಸ೦ಪಾದಕರು ಇಲ್ಲೂ ಅಂತಹ ವ್ಯವಸ್ಥೆ ಬೇಕು ಅ೦ತ ಆಶಿಸುವುದರಲ್ಲಿ ತಪ್ಪಿಲ್ಲ ಅನಿಸುತ್ತದೆ. ಏಕೆ೦ದರೆ ನಮ್ಮ ಸಾರ್ವಜನಿಕ ಶೌಚಾಲಯ ಗಳು ಅಷ್ಟೊ೦ದು ಕೊಳಕಾಗಿವೆ, ನಮಗೆ ಶುಭ್ರತೆ ಬಗ್ಗೆ ಎಳ್ಳಷ್ಟೂ ಕಾಳಜಿಯೇ ಇಲ್ಲ. ನಮ್ಮಲ್ಲಿ ಕೆಲವರಿಗೆ ಆ೦ಗ್ಲವ್ಯಾಮೋಹ ಇರಬಹುದು, ಮೆಕಾಲೆಯ ವ೦ಶಸ್ತರ೦ತೆ ಅವರು ವರ್ತಿಸಬಹುದು, ದೇಶದ ಬಗ್ಗೆ ಅವಹೇಳನಕಾರಿ ಬರಹ ಭಾಷಣ ಕೊರೆದು ತಾವು ಕೂಡ ಅದರ ಒ೦ದು ಭಾಗ ಎ೦ಬುದನ್ನು ಮರೆಯುವ ಜಾಯಮಾನದ ಹಲವರು ಇರಬಹುದು. ನಾನು ಭಟ್ಟರ ಅಭಿಮಾನಿ ಖ೦ಡಿತ ಅಲ್ಲ, ನೀವು ಉಲ್ಲೇಖಿಸಿರುವ ಅ೦ಶಗಳನ್ನೂ ನಾನು ಸಮರ್ಥಿಸುವುದಿಲ್ಲ. ವಸ್ತುಸ್ಥಿತಿಯ ನೆಲೆಯಲ್ಲಿ ಕೆಲವೊ೦ದು ವಿಚಾರ ಹೇಳುತ್ತೇನೆ, ರೈತರ ಆತ್ಮಹತ್ಯೆ, ಮೂಲಭೂತ ಸೌಕರ್ಯದ ಕೊರತೆ, ಶ್ರೀಮ೦ತ ಜೀವನ ಶೈಲಿ - ಇವೆಲ್ಲ ಯಾಕೋ ಇಲ್ಲಿ ಒ೦ದಕ್ಕೊ೦ದು relate ಆಗುತ್ತಿಲ್ಲ ಎ೦ಬುದು ನನ್ನ ಅನಿಸಿಕೆ. ಹೈ-ಫೈ ಅಲ್ಲದಿದ್ದರೂ ಶುಭ್ರವಾದ ಶೌಚ ವ್ಯವಸ್ಥೆ ಇಂದಿನ ಪ್ರಾಥಮಿಕ ಅಗತ್ಯ. ಆ ನಿಟ್ಟಿನಲ್ಲಿ ಭಟ್ಟರ ಅನಿಸಿಕೆ ತಪ್ಪಲ್ಲವೆ೦ದು ನನ್ನಭಾವನೆ.

Subrahmanya said...

@ ಬಾಲು,
ಪರಾಂಜಪೆ,

ಹಿಂದೊಮ್ಮೆ ಈಗಿನ ಪ್ರವಾಸೋದ್ಯಮ ಸಚಿವರು, ಕರ್ನಾಟಕದ ಪ್ರಸಿದ್ದ ಪ್ರವಾಸಿ ಸ್ಥಳಗಳಿಗೆ "ಹೆಲಿ ಟ್ಯೂರಿಸಂ" ವ್ಯವಸ್ಥೆ ಮಾಡುತ್ತಿರುವುದಾಗಿ ಘೋಷಿಸಿದರು. ಆಗ ಅಮೇರಿಕೆಯ ವ್ಯಕ್ತಿಯೊಬ್ಬರು "ಹೆಲಿಕಾಪ್ಟರ್ ಹಾರಿಸುವ ಮೊದಲು ಅಂತಹ ಸ್ಥಳಗಳಲ್ಲಿ ಒಳ್ಳೆಯ ಶೌಚಾಲಯದ ವ್ಯವಸ್ಥೆ ಮಾಡಿ" ಎಂದು ಪ್ರತಿಕ್ರಿಯೆ ನೀಡಿದ್ದರು. ಅವರು ಹೇಳಿದ್ದು ಅತಿಶಯೋಕ್ತಿಯೇನಲ್ಲ. ನಾನೇ ನೋಡಿದ್ದೇನೆ...ನಮ್ಮ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಳ್ಳೆಯ ಶೌಚಾಲಯಗಳು ಇಲ್ಲ. (’ಸುಸಜ್ಜಿತ’ ಬಿಟ್ಠ್ಹಾಕಿ).

ಈ ನಿಟ್ಟಿನಲ್ಲಿ ಭಟ್ಟರು ಒಳ್ಳೆಯ ಶೌಚಾಲಯಗಳು ಬೇಕು ಎಂದಿರುವುದು ಸರಿಯೆನಿಸುತ್ತದೆ.

ಭಟ್ಟರಿಗೆ ಚಿಂತನೆ ಮಾಡಲು ನಮ್ಮ ದೇಶದ ಹಲವು ಜ್ವಲಂತ ಸಮಸ್ಯೆಗಳೂ ಇವೆ ಎನ್ನುವುದು ಸತ್ಯ..ಅಲ್ಲವೆ ?

shridhar said...

ಕಾಕಾ ,
ಇದು ಭಾರತದಲ್ಲಿನ ಜ್ವಲಂತ ಸಮಸ್ಯೆ .. ಹಳ್ಳಿಗಳಲ್ಲಿ ಈಗಲೂ ಶೌಚಾಲಯದ ಕೊರತೆ ಇದೆ ..
ಚಿಂತನೆ ಅಗತ್ಯವಾಗಿದೆ .. ಒಳ್ಳೆಯ ಬರಹ

ಮನಸು said...

ಅವರವರ ನಿಟ್ಟಿನಲ್ಲಿ ಅವರುಗಳಿಗೆ ಸರಿ ಎನಿಸುತ್ತೆ..... ನಾನು ಭಟ್ಟರು ಬರೆದ ಲೇಖನ ಓದಿದ್ದೇನೆ.... ಶೌಚಾಲಯಗಳು ಇರಬೇಕು ಅವು ಸ್ವಚ್ಚವಾಗಿದ್ದರೆ ನಮಗೇ ಒಳ್ಳೆಯದು ಎಂದು ಆ ಶೌಚಾಲಯಗಳನ್ನು ಬಳಸುವ ನಾವುಗಳು ತಿಳಿದುಕೊಳ್ಳದ ಮೇಲೆ ಯಾರು ಎಷ್ಟು ಏನು ಹೇಳಿದರೂ ಒಂದೇ.......
ಹೊರದೇಶಕ್ಕೆ ಕಂಪೇರ್ ಮಾಡುವುದಕ್ಕಿಂತ ನಾವು ನಮ್ಮ ಸುತ್ತ ಮುತ್ತ ಸ್ವಚ್ಚತೆ ಕಾಪಾಡಿಕೊಳ್ಳುವುದು ಸೂಕ್ತ ಇದನ್ನು ನಾವುಗಳೆಲ್ಲರೂ ತಿಳಿಯಬೇಕು.

sunaath said...

ಪುತ್ತರ್,
ಧನ್ಯವಾದಗಳು.

sunaath said...

ಪ್ರವೀಣ,
ಧನ್ಯವಾದಗಳು.

sunaath said...

ಕೃಷ್ಣಮೂರ್ತಿಯವರೆ,
ಧನ್ಯವಾದಗಳು.

sunaath said...

ತೇಜಸ್ವಿನಿ,
ಧನ್ಯವಾದಗಳು.

manjunath said...

britisharu banda mele banda olle amshagalu kelavive.

Plz read "Social changes in modern india by M N Srinivas"

M N Srinivas is India's finest Socialogist of the century.

sunaath said...

ಬಾಲು,
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ವಿಶ್ವೇಶ್ವರ ಭಟ್ಟರ ಲೇಖನವು ನನಗೆ ವ್ಯಥೆಗೀಡು ಮಾಡಿದ ಕಾರಣ ಹೀಗಿದೆ: ವಿದೇಶಗಳಲ್ಲಿ ಶೌಚಾಲಯಗಳು ಶುಭ್ರವಾಗಿರುತ್ತವೆ; ನಮ್ಮಲ್ಲಿ ಹಾಗಿಲ್ಲ ಎನ್ನುವದು ಭಟ್ಟರ ಕೊರಗು. ಅಸ್ವಚ್ಛ ಶೌಚಾಲಯಗಳು ರೋಗದ ಲಕ್ಷಣವೆನ್ನುವದನ್ನು ಅರಿಯಬೇಕು. ಹಾಗಿದ್ದರೆ ರೋಗ ಎಲ್ಲಿದೆ? ರೋಗವಿರುವದು ನಮ್ಮ ಬಡತನ ಹಾಗು ನಮ್ಮ ಅನಕ್ಷರಸ್ಥತೆಯಲ್ಲಿ. ಇದಕ್ಕೆ ಕಾರಣಗಳೇನು? ನಮ್ಮ ತಪ್ಪು ರಾಜಕೀಯ ಹಾಗು ಆರ್ಥಿಕ ಧೋರಣೆಗಳೇ ಇದಕ್ಕೆ ಕಾರಣವಾಗಿವೆ. ಭಟ್ಟರು ಈ ಸಮಸ್ಯೆಗಳ ಬಗೆಗೆ ಬರೆಯದೇ ಕೇವಲ ಶೌಚಾಲಯಗಳ ಪರಿಸ್ಥಿತಿಯ ಬಗೆಗೆ ಬರೆದರೆ, ರೋಗವನ್ನು ಗ್ರಹಿಸದ ವೈದ್ಯನು ಜ್ವರವನ್ನು ಟೀಕಿಸಿದದಂತಾಗುತ್ತದೆ. ಇದು ನನ್ನ ಅಭಿಪ್ರಾಯ.
ವಿಜಯ ಕರ್ನಾಟಕ ಹಾಗು ವಿಶ್ವೇಶ್ವರ ಭಟ್ಟರ ಹೆಸರನ್ನು ನಾನು ನೇರವಾಗಿ ಹೇಳದೆ, ಅಪ್ರತ್ಯಕ್ಷವಾಗಿ ಸೂಚಿಸಿದ್ದೇನೆ; ಇದು ತಪ್ಪು ಎನ್ನುವದು ನಿಮ್ಮ ಅಭಿಪ್ರಾಯ. ನನ್ನ ಟೀಕೆಯು ವ್ಯಕ್ತಿಗತವಾಗಿದ್ದರೆ ನಾನು ಅಂಥವರ ಹೆಸರನ್ನು ನೇರವಾಗಿ ಬರೆಯಬಹುದು. ಈ ಲೇಖನವು ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿರಲಿ, ಅದನ್ನು ಯಾರೇ ಬರೆದಿರಲಿ, ನಾನು ಟೀಕಿಸದೆ ಬಿಡುತ್ತಿರಲಿಲ್ಲ. ಉದಾಹರಣೆಗೆ ನಮ್ಮ ವಿದೇಶ ನೀತಿಯನ್ನು ಟೀಕಿಸುವಾಗ, ನಾನು ಪ್ರಧಾನಿ ಎಂದು ಬರೆಯುತ್ತೇನೆ ವಿನಃ ಮನಮೋಹನ ಸಿಂಗ ಎಂದು ಬರೆಯುವದಿಲ್ಲ. ವೈಯುಕ್ತಿಕವಾಗಿ ನನಗೆ ವಿಶ್ವೇಶ್ವರ ಭಟ್ಟರ ಬಗೆಗೆ ತುಂಬ ಗೌರವವಿದೆ. ಅವರನ್ನು ಪ್ರತಿಭಾವಂತ ಸಂಪಾದಕ ಎಂದು ಪ್ರಶಂಸಿಸಿದ್ದನ್ನು ನೀವು ದಯವಿಟ್ಟು ಗಮನಿಸಬೇಕು. ನನಗೆ ವಿರೋಧವಿರುವದು ಅವರ ಕೆಲವೊಂದು ಧೋರಣೆಗಳ ಬಗೆಗೆ. ಆ ಧೋರಣೆಗಳು ಅವರ ಪತ್ರಿಕೆಯಲ್ಲಿ ವ್ಯಕ್ತವಾದಾಗ, ನಾನು ಪ್ರತಿಲೇಖಿಸದೆ ಸುಮ್ಮನಿರಲು ಆಗದು. ದಯವಿಟ್ಟು ನೀವು ತಪ್ಪು ತಿಳಿಯಬೇಡಿ.

sunaath said...

ಪರಾಂಜಪೆಯವರೆ,
ಯಾವ ಲೇಖನದ ಬಗೆಗೆ ನಾನು ಇಲ್ಲಿ ಬರೆದಿದ್ದೇನೆಯೊ, ಆ ಲೇಖನವು ಒಂದು ಮನೋಧರ್ಮದ ಅಭಿವ್ಯಕ್ತಿಯಾಗಿದೆ. ಆ ಮನೋಧರ್ಮವನ್ನು ನಾನು ಟೀಕಿಸಿದ್ದೇನೆ. ಆದುದರಿಂದ ನನ್ನ ಪ್ರತಿಲೇಖನದ ಅಂಶಗಳನ್ನು ಆ ಬೆಳಕಿನಲ್ಲಿ ನೋಡಿರಿ.

sunaath said...

ಪುತ್ತರ್,
ಒಳ್ಳೆಯ ಶೌಚಾಲಯಗಳು ಬೇಕು. ಆದರೆ ನಮ್ಮ ಸಮಾಜದ ಯಾವ ಅಂಶಗಳು ಸುಧಾರಿಸಿದರೆ, ಒಳ್ಳೆಯ ಶೌಚಾಲಯಗಳು ಸಾಧ್ಯವಾಗಬಹುದು? ಮಹಾನಗರಗಳಲ್ಲಿ ಮಲಗಲು ಜಾಗವಿಲ್ಲದೆ, ರಸ್ತೆ ಬದಿಗಳಲ್ಲಿ ಮಲಗಿಕೊಂಡು ಅಲ್ಲಿಯೇ ಸಂಸಾರ ಸಾಗಿಸುವ ಕುಟುಂಬಗಳು ನಮ್ಮಲ್ಲಿ ಇರುವಾಗ, ಯಾವದು ರೋಗ, ಯಾವದು ರೋಗಲಕ್ಷಣ ಎನ್ನುವದನ್ನು ಅರಿಯುವ ತಿಳಿವಳಿಕೆ ನಮ್ಮ ಮಾಧ್ಯಮಪ್ರಭುಗಳಿಗೆ ಬರಬೇಕು.

sunaath said...

ಶ್ರೀಧರ,
ಧನ್ಯವಾದಗಳು.

sunaath said...

ಮನಸು,
ಧನ್ಯವಾದಗಳು.

sunaath said...

ಮಂಜುನಾಥ,
ಸಲಹೆಗಾಗಿ ಧನ್ಯವಾದಗಳು.ನೀವು ಸೂಚಿಸಿದ ಪುಸ್ತಕವನ್ನು ಓದುವೆ.

prabhamani nagaraja said...

'ಶೌಚಾಲಯ'ದ ಸುತ್ತ ನಡೆಯುತ್ತಿರುವ ಈ ಚರ್ಚೆ ಬಹಳ ಗಮನಾರ್ಹವಾಗಿದೆ. ೨೦೦೬ರ 'ನಿರ್ಮಲ ಯೋಜನೆ'ಯಲ್ಲಿ ಪ್ರತಿಶಾಲೆಗೂ ಶೌಚಾಲಯವನ್ನು ಕಡ್ದಾಯಗೊಳಿಸಿದಾಗ ಮುಖ್ಯ ಶಿಕ್ಷಕಳಾಗಿದ್ದ ನಾನೂ ನಮ್ಮ ಶಾಲೆಗೆ ಶೌಚಾಲಯ ಕಟ್ಟಿಸುವ ಕಾರ್ಯ ನಿರ್ವಹಿಸಿದ್ದೆ. ಈಗ ಶಾಲಾ ಭೇಟಿ ನೀಡುವಾಗ .ಶೌಚಾಲಯ ಇದೆಯೇ? ಸುಸ್ಥಿತಿಯಲ್ಲಿದೆಯೇ? ಎನ್ನುವುದನ್ನು ಗಮನಿಸುತ್ತೇವೆ. ಈಗ ಗ್ರಾಮ ನೈರ್ಮಲ್ಯ ಯೋಜನೆಯಲ್ಲಿ ಹಳ್ಳಿಯ ಎಲ್ಲಾ ಮನೆಗಳಲ್ಲಿಯೂ ಶೌಚಾಲಯ ಇದೆಯೇ? ಸುಸ್ಥಿತಿಯಲ್ಲಿದೆಯೇ? ಎನ್ನುವ ಬಗ್ಗೆ ಸರ್ವೇ ನಡೆಯುತ್ತಿದೆ. ೧೦/೦೭/೨೦೧೦ರ ವಿ. ಕ. ಪತ್ರಿಕೆಯಲ್ಲಿ (ಲವಲvk ) ನಿರ್ಮಲ ಸಮುಚ್ಚಯದ ಬಗ್ಗೆ ಒ೦ದು ಲೇಖನ ಬ೦ದಿದೆ. ನಿಮ್ಮ ಲೇಖನ ಉತ್ತಮ ಕಳಕಳಿಯಿ೦ದ ಕೂಡಿದೆ. ಚಿ೦ತನಯೋಗ್ಯವಾಗಿದೆ. ಧನ್ಯವಾದಗಳು. ನೀವು ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಒಮ್ಮೆ ಭೇಟಿ ನೀಡಿ.

ಸಾಗರಿ.. said...

ವರ್ಷಕ್ಕೊಂದು ಪ್ರವಾಸ ಹೋಗುವುದು ನಮ್ಮ ಪದ್ಧತಿ,, ಕೇರಳ, ತಮಿಳುನಾಡು, ಆಂಧ್ರಪ್ರದೆಶಗಳಿಗೆ ಹೋದಾಗ ಅಲ್ಲಿನವರೊಂದಿಗೆ ವ್ಯವಹರಿಸುವುದು ಬಹಳ ಕಷ್ಟವಾಯ್ತು. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಇರುವಷ್ಟು ಇಂಗ್ಲೀಷು ಭಾಷೆಯ ಗೀಳು ಅಲ್ಲಿನವರಿಗಿಲ್ವಲ್ಲ ಅದಕ್ಕಾಗಿ.. ಅಲ್ಲಿನವರಿಗೆ ಅವರ ಭಾಷೆಯ ಮೆಲೆ ಅಪಾರ ಪ್ರೇಮ ಮತ್ತು ಗೌರವ,, ಅದು ನಮ್ಮಲ್ಲಿ ಬಹಳ ಕಡಿಮೆ ಇದೆ. ತಮ್ಮ ಲೆಖನ ಬಹಳ ಚೆನ್ನಾಗಿದೆ

ವಿ.ರಾ.ಹೆ. said...

ನಿಜ, ವಿದೇಶವಾಗಲಿ ಮತ್ತೆಲ್ಲೇ ಆಗಲಿ, ಅಲ್ಲಿನ ಒಳ್ಳೆಯದನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎಂಬುದರಲ್ಲಿ ತಪ್ಪಿಲ್ಲ. ಆದರೆ ಇಲ್ಲಿ ಆ ಕೊರತೆಯ ಮೂಲವನ್ನೂ ಕೂಡ ಹುಡುಕಬೇಕಾಗುತ್ತದೆ. ಬರೀ ಟೀಕಿಸುವುದು, ದೂರುವುದು ಸರಿಯಲ್ಲ್ಲ.

Unknown said...

ಸುನಾಥರೆ,
ನಿಮ್ಮಲೇಖನ ಓದಿ ತುಂಬ ನಿರಾಶೆಯಾಯಿತು. ಬೇಂದ್ರೆಯವರ ಕವನಗಳ ಬಗೆಗೆ ಬರೆದ ಲೇಖನಗಳಲ್ಲಿ ಕಂಡು ಬರುವ ನಿಮ್ಮ ವಿದ್ವತ್ತು, ಈ ಲೇಖದಲ್ಲಿ ಮಾಯವಾಗಿ ಕೇವಲ ಪೊಳ್ಳು ಟೀಕೆ ಮಾತ್ರ ಕಾಣಿಸುತ್ತದೆ. ವಿದೇಶಗಳಲ್ಲಿ ಇರುವಂತಹ ಒಳ್ಳೆಯ ಸಂಗತಿಗಳು ನಮ್ಮಲ್ಲಿಯೂ ಬರಲಿ ಎನ್ನುವ ಸದುದ್ದೇಶದಿಂದ ಬಂದಂತಹ ಈ ಲೇಖನವು ಎಲ್ಲರಲ್ಲಿಯೂ ಒಂದು hygieneದ ಅರಿವನ್ನು ಮೂಡಿಸುತ್ತದೆ. ಈ ಅರಿವು ಯಾವುದೇ ಮಾಧ್ಯಮದಿಂದ ಪ್ರಸಾರವಾದರೂ ನಾವು ಸ್ವಾಗತಿಸಿ ಅಳವಡಿಸಿಕೊಳ್ಳಬೇಕೆನ್ನುವದು ತಪ್ಪಲ್ಲ. ಆರ್ಥಿಕವಾಗಿ ಕೆಳಮಟ್ಟದಲ್ಲಿ ಇರುವವರು ಹೇಗೆ ಶುಚಿಯಿಂದ ಇರಲು ಸಾಧ್ಯ ಎಂದು ನೀವು ಕೇಳುತ್ತಿದ್ದೀರಿ. ಆದರೆ, ಆರ್ಥಿಕವಾಗಿ ಸಬಲವಾಗಿರುವ ಹಾಗು ಸಾರ್ವಜನಿಕ ಪ್ರಜ್ಞೆ ಇರುವಂತಹ ಪ್ರಜೆಗಳಿಗಾದರೂ ಇಂತಹ ಅರಿವು ಬೇಕಲ್ಲವೆ? ಆ ಕೆಲಸವನ್ನು ಶ್ರೀ ವಿಶ್ವೇಶ್ವರ ಭಟ್ಟರ ಲೇಖನವು ಸಮರ್ಥವಾಗಿ ಮಾಡಿದೆ. ನಿಮ್ಮ ಟೀಕೆಗೆ ನನ್ನ ವಿರೋಧವಿದೆ.

sunaath said...

ಪ್ರಭಾಮಣಿಯವರೆ,
ಸರಕಾರದ ವೆಚ್ಚದಲ್ಲಿ ಗ್ರಾಮನೈರ್ಮಲ್ಯ ಕಾರ್ಯಕ್ರಮಗಳು ಹಾಗು ಶೌಚಾಲಯ ನಿರ್ಮಾಣಗಳು ನಡೆಯುತ್ತಿರುತ್ತವೆ. ಆದರೆ ಹಣದ ಅಭಾವದಿಂದಾಗಿ ನಿರ್ವಹಣೆಯು ಕಷ್ಟಕರವಾಗುತ್ತದೆ ಎಂದು ನನಗೆ ಅನಿಸುತ್ತದೆ. ನಿಮ್ಮ ‘ಉಡುಗೊರೆ-೧’ ಓದಿದ್ದೇನೆ. ಪ್ರತಿಕ್ರಿಯಿಸಲು ಆಗಿರಲಿಲ್ಲ. ಎರಡನೆಯ ಭಾಗವನ್ನು ಇನ್ನೀಗ ಓದಬೇಕಾಗಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

sunaath said...

ಸಾಗರಿ,
ಕರ್ನಾಟಕದ ಹೊರಗೆ, ದಕ್ಷಿಣ ಭಾರತದಲ್ಲೇ ಆಗಲಿ, ಉತ್ತರ ಭಾರತದಲ್ಲೇ ಆಗಲಿ, ಅಲ್ಲಿಯ ದೇಶೀಯ ಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನು ಆಡುವ ಮನೋಧರ್ಮ ಅಲ್ಲಿಯವರಿಗೆ ಇಲ್ಲ ಎನ್ನುವದು ನನ್ನ ಅನುಭವ. ಕರ್ನಾಟಕದಲ್ಲಿ ಮಾತ್ರ ಕನ್ನಡೇತರರ ಭಾಷೆಯಲ್ಲಿಯೇ ನಾವು ಮಾತನಾಡಿ ಅವರಿಗೆ ನೆರವು ನೀಡುತ್ತೇವೆ. ನಮ್ಮದು ಒಳ್ಳೆಯ ಗುಣವೊ, ಕೆಟ್ಟ ಗುಣವೊ ತಿಳಿಯದಾಗಿದೆ.

sunaath said...

ವಿ.ರಾ.ಹೆ.,
ನಿಮ್ಮ ಅಭಿಪ್ರಾಯ ಸರಿಯಾಗಿದೆ. ವಿದೇಶದಲ್ಲಿರುವ ಒಳ್ಳೆಯ ಸಂಗತಿಗಳು ನಮ್ಮಲ್ಲಿಯೂ ಬೇಕು. ಆದರೆ ಅದಕ್ಕೂ ಮೊದಲು ಪ್ರಾಥಮಿಕ ವಿಷಯಗಳನ್ನು ನಾವು ಸರಿಪಡಿಸಿಕೊಳ್ಳಬೇಕು.

sunaath said...

ವನಮಾಲಾ,
ಸಾರ್ವಜನಿಕ ಆರೋಗ್ಯಪ್ರಜ್ಞೆ ಎಲ್ಲರಿಗೂ ಬೇಕು. ಉಳ್ಳವರಿಗೂ ಬೇಕು, ಇಲ್ಲದವರಿಗೂ ಬೇಕು. ಈ ಆರೋಗ್ಯಪ್ರಜ್ಞೆಯನ್ನು ನಮ್ಮ ನಾಗರಿಕರಲ್ಲಿ ಹೇಗೆ ಮೂಡಿಸುತ್ತೀರಿ, ಮೇಡಮ್? ‘ಥಳುಕಿನ ವಿಶ್ರಾಂತಿಸ್ಥಳ’ ಇರುವ ಹಾಗು ಆರೋಗ್ಯಪ್ರಜ್ಞೆಯುಳ್ಳ ನಾಗರಿಕರು ಎಲ್ಲಿ ಬೇಕಲ್ಲಿ ಸಿಗರೇಟು ಬಿಸಾಡುವದನ್ನು ಅಥವಾ ಉಗುಳುವದನ್ನು ನೀವು ನೋಡಿಲ್ಲವೆ? ಇಂತಹದು ತಪ್ಪು ಎನ್ನುವ ಅರಿವನ್ನು ಮೂಡಿಸುವ ಲೇಖನವು ಪ್ರಕಟವಾದರೆ ಅದಕ್ಕೆ ನನ್ನ ಹೃತ್ಪೂರ್ವಕ ಸ್ವಾಗತವಿದೆ. ಆದರೆ, ನಾವು ಚರ್ಚಿಸುತ್ತಿರುವ ಲೇಖನದಲ್ಲಿರುವದು ವಿದೇಶಗಳಲ್ಲಿ ಇರುವ ಥಳುಕಿನ ಶೌಚಾಲಯಗಳ ಬಗೆಗಿನ ಹೊಗಳಿಕೆ ಮತ್ತು ವಿದೇಶಿ ಜೀವನಶೈಲಿಯ ವ್ಯಾಮೋಹ.

ಮಹಾತ್ಮಾ ಗಾಂಧಿಯವರು ತಮ್ಮ ಆಶ್ರಮದ ಶೌಚಾಲಯಗಳನ್ನು ತಾವೇ ಸ್ವಚ್ಛಗೊಳಿಸುತ್ತಿದ್ದರು. ಆದರೆ ಅವರು ಥಳುಕಿನ ಶೌಚಾಲಯಗಳ ಬಗೆಗೆ ಬೆರಗಿನ ಮಾತುಗಳನ್ನು ಆಡಲಿಲ್ಲ. ಬಡ ಭಾರತೀಯನಿಗೆ ಅರೆಬರೆ ಉಡುಪೂ ಸಹ ದೊರೆಯುವದಿಲ್ಲ ಎನ್ನುವ ಕಾರಣಕ್ಕಾಗಿ, ತಾವೂ ಸಹ ಅರೆಬರೆ ಉಡುಪನ್ನೇ ತೊಟ್ಟರು. ನಮ್ಮ ಪತ್ರಿಕಾಸಂಪಾದಕರಾಗಿದ್ದರೆ, “ ನೋಡ್ರಯ್ಯ, ವಿದೇಶದಲ್ಲಿ ಥಳುಕಿನ ಸೂಟು, ಬೂಟು ಧರಿಸುತ್ತಾರೆ; ನೀವಾದರೋ ಕೊಳಕು ಧೋತಿ ಉಡುತ್ತೀರಿ” ಎಂದು ಟೀಕಿಸುತ್ತಿದ್ದರೇನೊ? ಗಾಂಧೀಜಿಯವರಿಗಿದ್ದ ಮಾನವ-ಸಂವೇದನೆ ಎಲ್ಲರಲ್ಲಿಯೂ ಎಲ್ಲಿ ಬಂದೀತು?

ನಿಮ್ಮ ವಿರೋಧಕ್ಕೆ ನನ್ನ ಮನಃಪೂರ್ವಕ ಸ್ವಾಗತವಿದೆ.

ದಿನಕರ ಮೊಗೇರ said...

sunaath sir,
nimma blog nalli ondallaa ondu uttama vichaara charche idde iaratte.... ee saari kooda ade aagide.... Bhattara aasahaya olleyade.... nimma kaLakaLi kooda sariye....

ಬಸವರಾಜ said...

ನೀವು ಹೇಳಿದ್ದು ನಿಜ ಸರ್!
ಶೌಚಾಲಯಗಿಂತ ಜಲ್ವಂತ ಸಮಸ್ಯೆ ನಮ್ಮಲಿವೆ.
ಆದ್ರೆ ನಮ್ಮ ಸಾರ್ವಜನಿಕ ಶೌಚಾಲಯಗಳ ಬಗ್ಗೆ
ಯೋಚನೆ ಮಾಡಿದ್ರೆ..

ಶ್ರೀನಿವಾಸ ಮ. ಕಟ್ಟಿ said...

ನಮ್ಮ ದೇಶದ ಬಹು ಜನರಿಗೆ ದಾಸ್ಯ ಪೃವೃತ್ತಿಯಲ್ಲಿಯೇ ಸುಖ ಕಾಣುವ ಮನೋಭಾವ. ಇದು ೧೦೦೦ ವರ್ಷಗಳಿಂದಲೂ ಪರಕೀಯರ ಅಧೀನದಲ್ಲಿದ್ದ ಪರಿಣಾಮವೂ ಇರಬಹುದು. ಭಾರತ ಸ್ವತಂತ್ರವಾದ ಮೇಲೂ, ನಮ್ಮ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಜನ್ಮತಃ ಭಾರತೀಯರಾದರೂ, ಮಾನಸಿಕವಾಗಿ ಇಂಗ್ಲಿಷ್ ಸಂಸ್ಕೃತಿಯ ದಾಸರೇ ಆಗಿದ್ದರು. ನಮ್ಮ ನಾಯಕರು ನಮ್ಮ ಸ್ವಂತಿಕೆಯ ಕುರಿತು ಸ್ವಾಭಿಮಾನವನ್ನು ಜನರಲ್ಲಿ ತುಂಬಲೇ ಇಲ್ಲ. ನಾವೆಷ್ಟೇ ಭಾರತೀಯರೆಂದುಕೊಂಡರೂ, ನಮ್ಮ ತನು, ಮನಗಳಲ್ಲಿ ಇಂಗ್ಲಿಷ್ ಸಂಸ್ಕೃತಿಯು ಆಳವಾಗಿ ಬೇರೂರಿದೆ. ಅದು ಈಗ ನಮ್ಮ ಗ್ರಾಮೀಣ ಪ್ರದೇಶದಲ್ಲಿಯೂ ವ್ಯಾಪಿಸ ಹತ್ತಿದೆ. ಇಡೀ ಕರ್ನಾಟಕದಲ್ಲಿ, ಯಾವದೇ ಭಾಗವಿರಲಿ, ನಮ್ಮ ಹಿಂದಿನ ಪೀಳಿಗೆಯವರು ಆಡುತ್ತಿದ್ದ ಭಾಷೆ ಲುಪ್ತಗೊಂಡು, ಕಂಗ್ಲಿಷ್ ಭಾಷೆ ಅದರ ಸ್ಥಾನದಲ್ಲಿ ಪ್ರತಿಷ್ಟಾಪಿತವಾಗುತ್ತಿದೆ. ನಮ್ಮತನವನ್ನು ಉಳಿಸಿಕೊಳ್ಳುವ ಷಕ್ತಿಯಾಗಲಿ, ಇಚ್ಚೆಯಾಗಲಿ ಬಹುಶಃ ನಮ್ಮಲಿಇ ಉಳಿದಿಲ್ಲ.

ರೋಹಿಣಿಪತಿ said...

ಸುನಾಥರೆ, ಮೋಹನದಾಸ ಕರಮಚಂದ ಗಾಂಧಿಯವರಿಗೆ ಮಾನವ ಸಂವೇದನೆ ಇತ್ತು ಎನ್ನುತ್ತಿರಾ ? ನನಗೆ ಸಂಶಯ ! ಅವರಿಗೆ ನಿಜವಾಗಿ ದೇಶಭಕ್ತಿ ಇದ್ದಿದ್ದರೆ, ಪ್ರಜಾಪ್ರಭುತ್ವದಲ್ಲಿ ನಂಬುಗೆ ಇದ್ದಿದ್ದರೆ, ವಲ್ಲಭಭಾಯಿಯವರಿಗೆ ಪ್ರಥಮ ಪ್ರಧಾನಿಯಾಗಲು ಬಹುಮತವಿದ್ದಾಗ್ಗೂ, ಅವರನ್ನು ಹಿಂದೆ ಸರಿಸಿ ನೆಹರು ಅವರನ್ನು ಪ್ರಧಾನಿ ಮಾಡುತ್ತಿರಲಿಲ್ಲ. ಸುಭಾಷ್ ಚಂದ್ರ ಬೋಸರು ಬಹುಮತದಿಂದ ಕಾಂಗ್ರೆಸ್ಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದರೂ, ಅವರನ್ನು ಕಾಂಗ್ರೆಸ್ಸಿನಿಂದ ಹೊರಹಾಕುವ ಹುನ್ನಾರ ಮಾಡುತ್ತಿರಲಿಲ್ಲ. ಅವರು ಭಗತ್ ಸಿಂಹ, ರಾಜಗುರು, ಸುಖದೇವ್ ಅವರಿಗೆ ಮರಣ ದಂಡನೆ ತಪ್ಪಿಸಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ ! ಅವರನ್ನು ದಾರಿ ತಪ್ಪಿದ ಉಗ್ರಗಾಮಿಗಳೆಂದು ಕರೆದರು. ಅಝಾದ್ ಹಿಂದ್ ಫೌಜ್ ನ ವಿರುದ್ಧ ಹೋರಾಡಲು ಕರೆ ಕೊಟ್ಟರು. ಅವರೊಬ್ಬ ಪ್ರವೀಣ ರಾಜಕೀಯ ಮುತ್ಸದ್ದಿಯಾಗಿದ್ದರು. ತ ರಾಜಕೀಯ ಬೇಳೆ ಬೇಯಿಸಿಕೊಳ್ಳುವದರಲ್ಲಿ ಅವರಿಗೆ ಯಾವ ದಾರಿಯೂ ಸರಿಯಾಗಿಯೇ ಇರುತ್ತಿತ್ತು. ಇದು ಗಾಂಧಿಯ ಹೆಸರಿನಲ್ಲಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವವರಿಗೆ ಅಪಥ್ಯವಾಗುವದು. ಆದರೆ ಇದ್ಯ್ ಸತ್ಯ ತಾನೆ ?

ಪ್ರ. ಭೀ. ಸತ್ಯಪ್ಪ said...

ನಿಮಗೆ ವಿಶ್ವೇಶ್ವರ ಭಟ್ಟ, ಭೈರಪ್ಪ, ಕುವೆಂಪು ಅವರ ಬಗ್ಗೆ ಇಷ್ಟೊಂದು ಅಲರ್ಜಿ ಯಾಕೆ ?

sunaath said...

ದಿನಕರರೆ,
ಧನ್ಯವಾದಗಳು.

sunaath said...

ಬಸವರಾಜರೆ,
ನಮ್ಮ ಸಾರ್ವಜನಿಕ ಶೌಚಾಲಯಗಳು ಥಳುಕಿನ ವಿಶ್ರಾಂತಿಸ್ಥಳಗಳಾಗಿ ಬದಲಾಗಬೇಕಾದರೆ, ಏನು ಮಾಡಬೇಕು ಹೇಳಿ?

sunaath said...

ಕಟ್ಟಿಯವರೆ,
ನೀವು ಹೇಳುವದು ನಿಜ. ಭಾರತೀಯರು ಮಾನಸಿಕ ದಾಸ್ಯದಲ್ಲಿ ಮುಳುಗಿದ್ದಾರೆ. ನಮ್ಮ ಪ್ರಧಾನಿಗಳು ಕಣ್ಣು ಮುಚ್ಚಿಕೊಂಡು ಜಾಗತಿಕ ಬ್ಯಾಂಕಿನ ಕರಾರುಗಳಿಗೆ ಸಹಿ ಹಾಕುತ್ತಿರುವದು ಈ ದಾಸ್ಯಭಾವನೆಗೆ ನಿದರ್ಶನವಾಗಿದೆ.

sunaath said...

ರೋಹಿಣಿಪತಿಯವರೆ,
ಗಾಂಧೀಜಿಯವರ ಮಾನವೀಯ ಸಂವೇದನೆಗಳ ನಿದರ್ಶನಗಳು ನಮ್ಮೆದುರಿಗೆ ಇವೆ. ಕನಿಷ್ಠ ಉಡುಪು ಹಾಗು ಕನಿಷ್ಠ ಆಹಾರವನ್ನು ಅವರು ಬಳಸತೊಡಗಲು ಅವರ ಮಾನವೀಯ ಸಂವೇದನೆಯೇ ಕಾರಣ. ಇನ್ನು ಮಾನವಮಾತ್ರರಾದ ಎಲ್ಲರೂ ತಪ್ಪು ಮಾಡುತ್ತಾರೆ. ಗಾಂಧೀಜಿಯವರೂ ಮಾಡಿರಬಹುದು. ಆದರೆ ಅವರು ಅಪ್ರಾಮಾಣಿಕರಾಗಿದ್ದರು ಎಂದು ನನಗೆ ಅನ್ನಿಸುವದಿಲ್ಲ.

sunaath said...

ಸತ್ಯಪ್ಪನವರೆ,
ನಾನು ಸತ್ಯವನ್ನೇ ಹೇಳುತ್ತೇನೆ: ವಿಶ್ವೇಶ್ವರ ಭಟ್ಟ, ಭೈರಪ್ಪ ಹಾಗು ಕುವೆಂಪು ಇವರ ಬಗೆಗೆ ನನಗೆ ಯಾವ ಅಲರ್ಜಿಯೂ ಇಲ್ಲ. ಭಟ್ಟರು ಪ್ರತಿಭಾವಂತ ಸಂಪಾದಕರು ಎಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ. ಅಷ್ಟೇ ದೃಢವಾಗಿ ಅವರ ಕನ್ನಡಾಂಗ್ಲೋ ಭಾಷೆಯನ್ನು ಹಾಗು ಶ್ರೀಮಂತಜೀವನಶೈಲಿಯನ್ನು ಪ್ರತಿಪಾದಿಸುವ ಪತ್ರಿಕಾಧೋರಣೆಯನ್ನು ಟೀಕಿಸುತ್ತೇನೆ. ಭೈರಪ್ಪನವರ ಕಾದಂಬರಿಗಳಲ್ಲಿಯ ಕಥಾನಕದ ವಿಸ್ತಾರ ಹಾಗು ಸಂಕೀರ್ಣತೆಯನ್ನು ಮೆಚ್ಚಿಕೊಳ್ಳುತ್ತೇನೆ. ಅದರ ಜೊತೆಗೇ ಅವರು ಪುರುಷಶ್ರೇಷ್ಠತೆಯ ಪ್ರತಿಪಾದಕರು ಎಂದು ಬೇಜಾರು ಪಡುತ್ತೇನೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕನ್ನಡದ ಒಂದು classic ಎಂದು ಹೇಳುತ್ತೇನೆ. ಆದರೆ ಅವರ ಕವನಗಳನ್ನು ನಾನು ಮೆಚ್ಚಿಕೊಳ್ಲಲಾರೆ.

Anonymous said...

ಭಟ್ಟರ ಲೇಖನ ಮತ್ತು ನಿಮ್ಮ ತಕರಾರುಗಳು
ತಮ್ಮ ತಮ್ಮ ನೆಲೆಯಲ್ಲಿ ಸರಿಯಾಗಿವೆ.
ಇದರ ಬಗ್ಗೆ ಜಾಸ್ತಿ ಏನೂ ಹೇಳಲಾರೆ.
ಆದರೆ,ನಮ್ಮ ಶಾಸಕರು,ಎಂಪಿಗಳು ಈ ವಿಷಯವಾಗಿ
ಕೊಂಚ practical ಆಗಿ ಯೋಚಿಸಬೇಕಾಗಿದೆ.
ಕೇವಲ ಜನರನ್ನು ಮೆಚ್ಚಿಸಲು ಸಿಕ್ಕಸಿಕ್ಕಲ್ಲಿ ದೇವಸ್ಥಾನ,
ಸಮುದಾಯ ಭವನದಂಥ ಕಟ್ಟಡಗಳನ್ನು ನಿರ್ಮಿಸದೇ
ಕೆಲವೊಂದಿಷ್ಟು ಗಾಳಿ,ಬೆಳಕು,ನೀರಿಗೆ ಕೊರತೆಯಿರದ
ಸುಸಜ್ಜಿತ (ಹೈಫೈ ಅಲ್ಲ!) ಶೌಚಾಲಯಗಳನ್ನು ಕಟ್ಟಿಸಿಕೊಡುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ..
-RJ

sunaath said...

RJ,
ಶುಚಿಯಾದ ಸಾರ್ವಜನಿಕ ವಾತಾವರಣಕ್ಕಾಗಲಿ, ಶೌಚಾಲಯಗಳಿಗಾಗಲಿ, ನಾನೇನು ವಿರೋಧಿಯಾಗಿದ್ದೇನೆಯೆ?
ನನ್ನ ವಿರೋಧವಿರುವದು ಶ್ರೀಮಂತಶೈಲಿಯ ವಿಶ್ರಾಂತಿಸ್ಥಳಗಳ ವೈಭವೀಕರಣಕ್ಕೆ ಮಾತ್ರ.

ಪ್ರ, ಭೀ. ಸತ್ಯಪ್ಪ said...

ಭೈರಪ್ಪನವರು ಪುರುಷ ಶ್ರೇಷ್ಠತೆಯ ಪ್ರತಿಪಾದಕರು ಎಂಬುದು ಮಿಥ್ಯಾಪವಾದ. ಅವರ ಎಲ್ಲ ಕಾದಂಬರಿಗಳನ್ನೂ, ಮತ್ತು ಭಿತ್ತಿಯನ್ನೂ ಇನ್ನೊಮ್ಮೆ, ಯಾವದೇ ಪೂರ್ವಾಗ್ರಹವಿಲ್ಲದ್, ಓದಿ ನೋಡಿ. ಭೈರನ್ಪ್ವರ್ ಕಾದಂಬರಿಗಳಲ್ಲಿ ಪುರುಷ ಅಥವಾ ಸ್ತ್ರೀ ಶ್ರೇಷ್ಠತೆಯ ಸಮ್ಸ್ಯೆಯೇ ಇಲ್ಲ. ಅವರ ಪರ್ವದಲ್ಲಿ, ಕೃಷ್ಣನನ್ನು ಬಿಟ್ಟರೆ, ಕುಂತಿ ಮತ್ತು ದ್ರೌಪದಿಯರೇ ಶ್ರೇಷ್ಠರು. ಗೃಹಭಂಗದಲ್ಲಿ ಮತ್ತು ಭಿತ್ತಿಯಲ್ಲಿ ಅವರ ತಾಯಿಯ ಪಾತ್ರವೇ ಕಥೆಯ ಜೀವಾಳ. ಪೃಕೃತಿಯಲ್ಲಿ ಪುರಿಷ ದೈಹಿಕವಾಗಿ ಶ್ರೇಷ್ಠನಾದರೂ, ಬೌದ್ಧಿಕವಾಗಿ ಸ್ತ್ರೀ ಶ್ರೇಷ್ಠಳು. ಇದು ಭೈರಪ್ಪನವರ ಎಲ್ಲ ಕಾದಂಬರಿಗಳಲ್ಲಿ ವ್ಯಕ್ತವಾಗಿ ಮತ್ತು ಅವ್ಯಕ್ತವಾಗಿ ಧ್ವನಿತವಾಗಿದೆ.

ಇನ್ನು ಕುವೆಂಪುರವರ ಕಾವ್ಯ. ಬೇಂದ್ರೆ ವರಕವಿ. ಆದರೆ ಕುವೆಂಪು ಕೂಡ ಮಹಾಕವಿ ಎಂಬುದರಲ್ಲಿ ಯಾವದೇ ಸಂಶಯವಿಲ್ಲ. ಕುವೆಂಪುರವರ ಕಾವ್ಯದ ಹರಹು(spectrum) ಬೇಂದ್ರೆಯವರಿಗಿಂತಲೂ ಬಹಳೇ ವಿಸ್ತಾರವಾದುದು. ಇದನ್ನು ನೀವು ಒಪ್ಪದಿರಬಹುದು. ಅದಕ್ಕೆ ಕಾರಣವನ್ನು ನೀವೆ ಹುಡುಕಿಕೊಳ್ಳಿ. ಅವರ ರಾಮಾಯಣವನ್ನು ಇನ್ನೊಮ್ಮೆ ಸಮಗ್ರವಾಗಿ ಓದಿ ನೋಡಿರಿ. ಅಲ್ಲದೇ ಅವರ ಎಲ್ಲ ಕವನಗಳನ್ನೂ ಓದಿ ನೋಡಿರಿ. ಅಲ್ಲದೇ ಅವರ ಕುರುಕ್ಷೇತ್ರ ನಾಟಕವನ್ನೂ ಓದಿರಿ.

ನನ್ನ ಈ ಕಾಗದ ನಿಮ್ಮ ಮನಸ್ಸಿಗೆ ನೋವು ತಂದಿದ್ದರೆ ಕ್ಷಮೆ ಇರಲಿ.

V.R.BHAT said...

ಬಡತನ ಮತ್ತು ಅನಕ್ಷರಸ್ಥ ಸ್ಥಿತಿ ಈ ಎರಡು ಪ್ರಮುಖ ಕಾರಣಗಳು ನಾನು ಆವತ್ತು ಬರೆದಂತೆ ನಾವಿನ್ನೂ 'ಮಲಹೊರುವರು' ಎಂದು ಹೇಳಲು ಕಾರಣ! ಕೆಟ್ಟ ರಾಜಕೀಯದವರು ಸದ್ಯ ಅದನ್ನು ಬದಲಾಗಗೊಡುವುದಿಲ್ಲ, ಬುದ್ಧಿವಂತರೆನಿಸಿಕೊಂಡಂತ ಭಟ್ಟರ ಥರದ ಜನ ತಮಗೆ ಅನುಕೂಲವಾದ ಹಾಗೇ ಪೇಪರ್ ತುಂಬಿಸುವಲ್ಲಿ ಮತ್ತು ತತ್ಕಾಲಕ್ಕೆ ಜನರ ಮನಸ್ಸನು ಸೂರೆಗೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಎಲ್ಲೋ ಕೆಲವು ನಮ್ಮಂಥವರು ಬರಿದೇ ಇಲ್ಲಿ ಬಡಬಡಿಸುತ್ತೇವೆ, ನಡೆಯುವುದು ನಡೆದೇ ಇದೆ-ಯಾವುದೇ ಬದಲಾವಣೆ ಇಲ್ಲದೇ- ಬದಲಾವಣೆ ಇದೆ ಒಂದರಲ್ಲೇ-ಬೆಲೆಯಲ್ಲಿ-ಅದು ಏರುತ್ತಲೇ ಹೋಗುತ್ತದೆ ಎಲ್ಲಿಯವರೆಗೆ ? ಯಾರಿಗೂ ಅರಿವಿಲ್ಲ ! ನಿಮ್ಮ ಲೇಖನ ಬಹಳ ಹಿಡಿಸಿತು, ಧನ್ಯವಾದಗಳು

sunaath said...

ಪ್ರಿಯ ಸತ್ಯಪ್ಪನವರೆ,
ನನ್ನ ಸಾಹಿತ್ಯಕ ಅಭಿಪ್ರಾಯಗಳು ನನ್ನ ಅಧ್ಯಯನವನ್ನು ಆಧರಿಸಿದ ಅಭಿಪ್ರಾಯಗಳೇ ಆಗಿವೆ. ಕುವೆಂಪುರವರ ವಿಚಾರವಿಸ್ತಾರವನ್ನು ನಾನು ಖಂಡಿತವಾಗಿಯೂ ಮೆಚ್ಚುತ್ತೇನೆ. ಆದರೆ ಅವರ ಕಾವ್ಯರಚನೆಯ ಬಗೆಗೆ ನಿಮ್ಮ ಹಾಗು ನನ್ನ ಅಭಿಪ್ರಾಯಗಳು ಬೇರೆಯಾಗಿರುವಂತೆ ತೋರುತ್ತದೆ. ಇನ್ನು ಭೈರಪ್ಪನವರು ಪುರುಷಪ್ರಧಾನ ವಿಚಾರವುಳ್ಳವರು ಎನ್ನುವದೇ ನನ್ನ ಅಭಿಪ್ರಾಯವಾಗಿದೆ. ಅವರ ಕಾದಂಬರಿಗಳಲ್ಲಿ ಸ್ತ್ರೀಯು ಪಡುವ ಯಾತನೆ, ಅವಳು ಅದೆಲ್ಲವನ್ನು ಎದುರಿಸಿ ನಿಲ್ಲುವ ರೀತಿ ಇವು ಬಹುಶ: ಬೇರೆ ಸಾಹಿತಿಗಳ ಕಾದಂಬರಿಗಳಲ್ಲಿ ಕಂಡು ಬರಲಿಕ್ಕಿಲ್ಲ. ಆದರೆ, ಇವೆಲ್ಲ ಕಾದಂಬರಿಗಳಲ್ಲಿ ಸ್ತ್ರೀಯ ಪಾತ್ರವು ಪುರುಷನಿಗೆ subordinate ಆಗಿ ವರ್ತಿಸುತ್ತದೆ. ಇದಕ್ಕೆ ಅಪವಾದವೆಂದರೆ ‘ಸಾರ್ಥ’ ಕಾದಂಬರಿ. ಅಲ್ಲಿ ನಾಯಕಿಯದೇ ಮೇಲುಗೈ.
ಭೈರಪ್ಪನವರ ಕಾದಂಬರಿಗಳಲ್ಲಿ ‘ಕಾಮ’ವು ಪುರುಷ ಶಕ್ತಿಯ ವಿಜೃಂಭಣೆಗಾಗಿ, ವೈಭವೀಕರಣಕ್ಕಾಗಿ ಬರುತ್ತದೆ ಎನ್ನುವದನ್ನು ನಾನು ಹಳೆಯ ಒಂದು ಲೇಖನದಲ್ಲಿ ಬರೆದಿದ್ದೇನೆ. ದಯವಿಟ್ಟು ಈ link ನೋಡಿರಿ:
(http://sallaap.blogspot.com/2008/12/super-male-fantasy.html).

ಮನಸ್ಸಿಗೆ ನೋವಾದರೆ ಕ್ಷಮಿಸಿ ಎಂದಿದ್ದೀರಿ. ಇಲ್ಲಿ ನಡೆಯುತ್ತಿರುವದು ವಿಚಾರಗಳ ತಾಕಲಾಟ. ‘ವಾದೇ ವಾದೇ ಜಾಯತೇ ತತ್ವವಿಚಾರ:’, ಅಲ್ಲವೆ? ವಿಭಿನ್ನ ದೃಷ್ಟಿಕೋನಗಳನ್ನು ನೋಡಿದಾಗ, ಮನಸ್ಸು ಪುಳುಕಿತವಾಗುತ್ತದೆಯೇ ಹೊರತು, ಖಿನ್ನವಾಗುವದಿಲ್ಲ.

sunaath said...

ಭಟ್ಟರೆ,
ಭಾರತದಲ್ಲಿ ಪ್ರಾಥಮಿಕ ಸೌಲಭ್ಯಗಳ ಕೊರತೆಯೇ ಇರುವಾಗ,
ಅತ್ಯಾಧುನಿಕ ಸೌಲಭ್ಯಗಳ ಬಗೆಗೆ ಭಾಯಿ ತೆರೆಯುವದು ಸರಿ ಕಾಣಿಸುವದಿಲ್ಲ. ನಿಮ್ಮ ಲೇಖನದಲ್ಲಿಯೂ ಸಹ ಈ ಚರ್ಚೆ ಇದೆ.
ಧನ್ಯವಾದಗಳು.

ಪ್ರ. ಭೀ. ಸತ್ಯಪ್ಪ said...

ಪುರುಷ ದೈಹಿಕವಾಗಿ ಸ್ತ್ರೀಗಿಂತಲೂ ಶ್ರೇಷ್ಠ ಎಂಬುದು ನಿರ್ವಿವಾದ. ಇದು ಪೃಕೃತಿಯ ನಿಯಮ. ನೀವು ಯಾವದೇ ಪ್ರಾಣಿಯನ್ನು ಉದಾಹರಣೆಗೆ ತೆಗೆದುಕೊಂಡರೂ ಈ ನಿಯಮ ಸರ್ವಕಾಲಿಕ. ಅಲ್ಲದೇ ಪೃಕೃತಿಯು ಸಂತಾನೋತ್ಪತ್ತಿಯ ವಿಷಯದಲ್ಲಿ ಸ್ತ್ರೀಗೆ ಹೆಚ್ಚಿನ ಹೊಣೆ ಹೊರಿಸಿದೆ. ಅದಕ್ಕೆ ಕನ್ನಡದಲ್ಲಿ " ಹುಡುಗ ಬಯಲು ಬಂಗಾರ" ಎಂಬ ನಾಣ್ಣುಡಿ ಹುಟ್ಟಿರಬಹುದು. ಭೈರಪ್ಪನವರ್ ಕಾದಂಬರಿಗಳಲ್ಲಿ ಈ ತಥ್ಯ ಧ್ವನಿತವಾಗಿದೆ. ಲೈಂಗಿಕವಾಗಿ ವಿಝ್ರಂಬಿಸುವದರ ಅರ್ಥ ನನಗಾಗಲಿಲ್ಲ. ಲೈಂಗಿಕ ಕ್ರಿಯೆ ಸಮಾನವಾದುದು. ಇದರಲ್ಲಿ ಭಾಗಿಯಾದ ಸ್ತ್ರೀ-ಪುರುಷರಿಬ್ಬರಿಗೂ ಸಿಗುವದು ಸಮಾನ ಸುಖ ಮತು ಸಮಾನ ತೃಪ್ತಿ. ಇದರಲ್ಲಿ ಒಬ್ಬರು ಇನ್ನೊಬ್ಬರಿಗೆ ಅನಿವಾರ್ಯ. ಹೀಗಿದ್ದಾಗ ಇಬ್ಬರಲ್ಲಿ ಒಬ್ಬರು ಶ್ರೇಷ್ಠ ಹೇಗಾಗುತ್ತಾರೆ ? ಭೈರಪ್ಪನವರ ಯಾವ ಕಾದಂಬರಿಯಲ್ಲಿಯೂ ಪುರುಷನೇ ಶ್ರೇಷ್ಠ ಎಂಬ ಚಿತ್ರಣ ಬರುವದಿಲ್ಲ.

ಇನ್ನು ಕುವೆಂಪುರವರ ಕಾವ್ಯ ! ಬೇರೆ ಬೇರೆ ಕವಿಗಳದ್ದು ಬೇರೆ ಬೇರೆ ಶೈಲಿ. ಕುಮಾರವ್ಯಾಸ, ಚಾಮರಸ, ರಾಘವಾಂಕ, ಕುಮಾರ ವಾಲ್ಮೀಕಿ, ರನ್ನ, ಪಂಪ, ಬೇಂದ್ರೆ, ಕುವೆಂಪು, ಅಡಿಗ, ನಿಸ್ಸಾರ, ಕರ್ಕಿ, ಎಲ್ಲರ ಕಾವ್ಯ ಶೈಲಿ ಬೇರೆ ಬೇರೆ ಅಲ್ಲವೆ ! ಎಲ್ಲರ ಕಾವ್ಯದಲ್ಲಿಯೂ ಅವರವರದೇ ಸೌಂದರ್ಯವಿದೆ, ಮಾಧುರ್ಯವಿದೆ ಅಲ್ಲವೆ ? ಬೇಂದ್ರೆ ಕುವೆಂಪು ಆಗಲಾರರು. ಕರ್ಕಿ ಅಡಿಗಲಾಗರಾರರು. ನಾವು ಅಂದರೆ ಓದುಗರು ಅವರವರ ಶೈಲಿಯನ್ನೇ ರಸಸ್ವಾದನೆ ಮಾಡಬೇಕಲ್ಲವೆ ? ಒಬ್ಬರಿಗೆ ಇನ್ನೊಬ್ಬರನ್ನು ಹೋಲಿಸುವದೇಕೆ ? ಹೋಳಿಗೆಯ ರುಚಿ ಹೋಳಿಗೆಗೆ, ಪಾಯಸದ್ ರುಚಿ ಪಾಯಸಕ್ಕೆ. ಹೋಳಿಗೆಯಲ್ಲಿ ಪಾಯಸದ ರುಚಿಯನ್ನು ಏಕೆ ಹುಡುಕಬೇಕು ?

sunaath said...

ಸತ್ಯಪ್ಪನವರೆ,
ನಮ್ಮ ನಡುವಿನ ಚರ್ಚೆಯಿಂದ ವ್ಯಕ್ತವಾಗುವದೇನೆಂದರೆ, ಒಬ್ಬರಿಗೆ ಒಂದು ತೆರನಾಗಿ ಕಂಡದ್ದು ಮತ್ತೊಬ್ಬರಿಗೆ ಮತ್ತೊಂದು ತೆರನಾಗಿ ಕಾಣಬಹುದು ಎಂದು.
ಏನೇ ಆದರೂ ಸ್ವಾರಸ್ಯಪೂರ್ಣ ಚರ್ಚೆಗಾಗಿ ಧನ್ಯವಾದಗಳು.

ರೋಹಿಣೀಪತಿ said...

ಮಾನವೀಯ ಸಂವೇದನೆಯನ್ನು ವ್ಯಕ್ತ ಮಾಡುವದಕ್ಕಾಗಿ ಶ್ರೀ ಮೋ.ಕ.ಗಾಂಧಿಯವರು ಅತ್ಯಂತ ಕಡಿಮೆ ವಸ್ತ್ರ ಧರಿಸಿ, ಜೀವನಕ್ಕೆ ಅವಶ್ಯವಿದ್ದಷ್ಟು ಮಾತ್ರ ಭೋಜನ ಮಾಡುತ್ತಿದ್ದರೆಂದು ನಿಮ್ಮ ಅಭಿಪ್ರಾಯ. ಅದನ್ನೊಂದು ರಾಜಕೀಯ ಅಸ್ತ್ರವಾಗಿ ಬಳಸಿದರೆಂಬುದು ಐತಿಹಾಸಿಕ ತಥ್ಯ. ಗಾಂಧೀಯವರ ಜೀವನ ಶೈಲಿಯ ಬಗ್ಗೆ ಅವರ ಅನುಯಾಯಿ ಶ್ರೀಮತಿ ಸರೋಜಿನಿ ನಾಯ್ಡು ಗಾಂಧೀಯವರಿಗೆ ಏನು ಹೇಳಿದ್ದರು ಗೊತ್ತೆ ? "ಬಾಪೂ, ನಿಮ್ಮನ್ನು ಬಡತನದಲ್ಲಿಡಲು ಭಾರತ ಸರಕಾರ ಮಾಡುತ್ತಿರುವ ವೆಚ್ಚದ ಕಲ್ಪನೆ ನಿಮಗಿದೆಯೆ ?" ಏನಿದರ ಅರ್ಥ ? ಹೇಳುವಿರಾ ?

ಸಾಗರದಾಚೆಯ ಇಂಚರ said...

sir

tumbaa satya maatu nimmadu

olleya lekhana

sunaath said...

ರೋಹಿಣೀಪತಿಯವರೆ,
ಗಾಂಧೀಜಿಯವರು ಅರೆಬಟ್ಟೆ ಧರಿಸಲು ಪ್ರಾರಂಭಿಸಿದ ಅನೇಕ ವರ್ಷಗಳ ಬಳಿಕ, ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಸರೋಜಿನಿ ನಾಯಡುರವರು ಈ ಜೋಕನ್ನು ಮಾಡಿದ್ದಾರೆ.
ಗಾಂಧೀಜಿಯವರ ಬಗೆಗೆ ನಮ್ಮಿಬ್ಬರ ದೃಷ್ಟಿಕೋನಗಳು ಬೇರೆಯಾಗಿರುವದು ಸುವ್ಯಕ್ತವಾಗಿದೆ. ಆದುದರಿಂದ ಈ ಚರ್ಚೆಯನ್ನು ಇಲ್ಲಿಗೇ ಮುಗಿಸೋಣ..

sunaath said...

ಗುರುಮೂರ್ತಿಯವರೆ,
ನಿಮಗೆ ಧನ್ಯವಾದಗಳು.

ಮನಸಿನಮನೆಯವನು said...

ಉತ್ತಮ ಬರಹ..

shivu.k said...

ಸುನಾಥ್ ಸರ್,

ಪತ್ರಿಕೆಯ ಸಂಪಾದಕರುಗಳು ತಾವು ಬರೆದಿದ್ದೆಲ್ಲಾ ವೇದವಾಕ್ಯವೆಂದುಕೊಂಡಿದ್ದಾರೆ. ನಾನು ಒಂದು ಲೇಖನದಲ್ಲಿ ಅವರ ಯೋಗ್ಯತೆ ಹೊಗಳಿದ್ದೇನೆ. ಬರೆಯುವ ಮುನ್ನ ಅವರು ತಮ್ಮ ಆತ್ಮಸಾಕ್ಷಿಯನ್ನಾದರೂ ಕೇಳಿಕೊಳ್ಳಬೇಕು.

ಸೀತಾರಾಮ. ಕೆ. / SITARAM.K said...

uyttama baraha. jotege uttama pratikriyegalu jotege tamma puraka maru uttaragalu. chintanege hachchuva lekhana. tadavaagi odiddakke hella sikkittu.
nanna abhipraayadalli gaandhiji maanava savendanaasheela vyakti mattu shakti, badatana daaridraya nammalli tolagi shubrate barabeku, bhaashe-sanskrutiya gourava beku, patrikegalu bhaashe-samskruti belesuvalli tamma paatra vahisi saamajika anishtategalannu todeyabebeku.
kannadadalli typisalaaraddakke kshame irali.

Ittigecement said...

ಸುನಾಥ ಸರ್...

ನಿಮ್ಮ ಲೇಖನ ನನಗೆ ಓದಲು ಆಗ್ತಾ ಇಲ್ಲ..

ಕನ್ನಡದಂತೆ ಕಾಣುತ್ತದೆ..
ಓದಲು ಬರುತ್ತಿಲ್ಲ..

ಏನು ಕಾರಣ?