Thursday, August 19, 2010

"ಇದು ನಿನ್ನದೇ ಮನೆ !". . . . . ಸುಶೀಲಾ ಬಾಪಟ

ಮದುವೆಯ ನಂತರ ಮೊದಲ ಸಲ, ಅತ್ತೆಯ ಮನೆಗೆ ಹೊರಡಲು ಸಿದ್ಧಳಾದ ಮಗಳನ್ನು ಬೀಳ್ಕೊಡುವಾಗ, ಅವಳ ತಾಯಿಯ ಮನಸ್ಸಿನಲ್ಲಿ ಮೂಡುವ ಭಾವನೆಗಳು ಹೇಗಿರಬಹುದು? ಇಂತಹ ಪ್ರಸಂಗವನ್ನು ವರ್ಣಿಸುವ ಕವನವೊಂದನ್ನು ಮರಾಠಿಯ ಪ್ರಸಿದ್ಧ ಕವಯಿತ್ರಿ ಸುಶೀಲಾ ಬಾಪಟ ಎನ್ನುವವರು ಸುಮಾರು ಐವತ್ತು ವರ್ಷಗಳ ಹಿಂದೆ ರಚಿಸಿದರು.
ಈ ಕವನದ ಒಂದು ಪ್ರತಿ ಇತ್ತೀಚೆಗೆ ನನ್ನ ತಂಗಿ ಶ್ರೀಮತಿ ಅರುಣಾ ಗಲಗಲಿ ಇವಳಿಗೆ ಲಭ್ಯವಾಯಿತು. ಅದರ ಮೊದಲ ಭಾಗದ ಸ್ವಲ್ಪಾಂಶ ನಷ್ಟವಾಗಿತ್ತು. ಕವನದಿಂದ ಪ್ರಭಾವಿತಳಾದ ಅರುಣಾ ಆ ಕವನದ ಪ್ರತಿಯೊಂದನ್ನು ನನಗೆ ಕಳುಹಿಸಿಕೊಟ್ಟಳು. ಈ ಕವನವನ್ನು ಕನ್ನಡಕ್ಕೆ ಅನುವಾದಿಸಿ ಕೊಡಲು ನಾನು ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ ಇವರಿಗೆ ಬಿನ್ನವಿಸಿದೆ. ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ ಇವರು ಕನ್ನಡ ಹಾಗು ಮರಾಠಿ ಎರಡೂ ಭಾಷೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದವರು. ಮರಾಠಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದವರು. ರಾಧಾ ಹಾಗು ಶ್ಯಾಮರಾವ ದಂಪತಿಗಳು ಧಾರವಾಡದ ನಿವಾಸಿಗಳು, ಇಬ್ಬರೂ ಸಾಹಿತ್ಯಪ್ರಿಯರು ಹಾಗು ಲೇಖಕರು. ನನ್ನ ವಿನಂತಿಗೆ ಮನ್ನಣೆ ಕೊಟ್ಟು, ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ ತ್ವರಿತವಾಗಿ ಕವನದ ಭಾವಾನುವಾದವನ್ನು ಮಾಡಿಕೊಟ್ಟರು. ಅವರಿಗೆ ನನ್ನ ಅನೇಕ ಧನ್ಯವಾದಗಳು. ಅದರಂತೆ ಈ ಸುಂದರ ಕವನವನ್ನು ನನಗೆ ಒದಗಿಸಿದ ತಂಗಿ ಅರುಣಾಳಿಗೂ ಅನೇಕ ಧನ್ಯವಾದಗಳು.
‌‌‌‌‌‌‌‌‌‌‌‌‌‌‌‌‍^^^^^^^^^^^^^^^^^^^^^^^^^^^^^^^^^^^^^^^^^
ಈ ಕವನವನ್ನು ಮೊದಲು ಮೂಲ ಮರಾಠಿಯಲ್ಲಿ, ಬಳಿಕ ಕನ್ನಡ ರೂಪದಲ್ಲಿ ಕೆಳಗೆ ಕೊಡಲಾಗಿದೆ.

ಮರಾಠಿ ಮೂಲ: ‘ಹೇ ಘರ ತುಝsಚ ಆಹೆ !’
. . . . . . . . . . . . . . . . . . . . . . . . .
ಛಾಲ್ಯಾವರ ಮೋಠೆ ಪಣ್ಯಾಚ ನಾವ ಘೇವೂನ
ಪಣ ಕಧೀ ಲಹಾನ ವ್ಹಾವೇಸೆ ವಾಟಲೇ ನಾ
ತರ ಯೇ, ಹೇ ಘರ ತುಝsಚ ಆಹೆ!.

ಆಜ ತೂ ವೇಗಳೀಚ ದಿಸತೇ ಆಹೇಸ,
ಡೋಳ್ಯಾ⁰ತ ಸ್ವಪ್ನೇ ತರಳತ ಆಹೇತ,
ಏಕ ನವೀನ ಘರ ಆಪಲೇಸೆ ಕರಣ್ಯಾಚೀ,
ಪತ್ನೀ, ಸೂನ, ನಾತಸೂನ, ವಹಿನೀ……
ನವ್ಯಾ ನಾತ್ಯಾ⁰ಚಾ ನವ್ಯಾ ಭೂಮಿಕಾ,
ತನ್ಮಯತೇನೆ ಸಾಕಾರಣಾರ ಆಹೇಸ.
ಪಣ ಕಧೀ ವಾಟಲೇ ತುಲಾ
ಕೀ ಫಕ್ತ ಏಕ ಲಹಾನ ಮುಲಗೀ ವ್ಹಾವೇ
ತರ ಯೇ, ಹೇ ಘರ ತುಝsಚ ಆಹೆ!.

ಏಕ ನವೇ ವಿಶ್ವ ತುಲಾ ಖುಣಾವತೇ ಆಹೇ
ತಿಥೇ ನವೀ ಆಹ್ವಾನೇ ಆಹೇತ
ಪರಿಶ್ರಮಾನಿ ಫುಲಣಾರ ಸೌಖ್ಯಾಚೇ ಮಳೇ ಆಹೇತ
ಯಾ ನವನವ್ಯಾ ಕ್ಷಿತಿಜಾಕಡೇ ವಾಟಚಾಲ ಕರತಾನಾ
ಕ್ಷಣಭರ ಥಂಬಕೂನ ಆಯೀಚ್ಯಾ ಕುಶೀತ ಶಿರಾವೇಸೆ ವಾಟಲೇ ನಾ
ತರ ಯೇ, ಹೇ ಘರ ತುಝsಚ ಆಹೆ!.

ತೂ ಹೋಯೀಲ ಸ್ವಾಮಿನೀ ಕುಣಾಚ್ಯಾ ಹೃದಯಾಚೀ
ಪುರವಶೀಲ ಕೋಡಕೌತುಕ, ಲಾಡ, ಹಟ್ಟ ಅನೇಕಾ⁰ಚೇ
ಪೂರ್ಣ ಕರಶೀಲ ಕರ್ತವ್ಯೇ ಆಣಿ ಕಾಮನಾ ಸಾಜ್ಯಾ⁰ಚಾ
ಪಣ ತುಲಾಚ ಕಧೀ ವಾಟಲೇ ಕೀ ಹಟ್ಟ ಕರಾವಾ ಥೋಡಾಸಾ…
ತರ ಯೇ, ಹೇ ಘರ ತುಝsಚ ಆಹೆ!.

ತೂ ಹಿಂಡಶೀಲ ಕಿತೀತರೀ ದೇಶವಿದೇಶ
ಚಾಖೂನ ಬಧಶೀಲ ನಾನಾ ಪರೀಚ್ಯಾ
ಪಂಚತಾರಾಂಕಿತ ಪಾಕಕೃತೀ
ಪಣ ಕಧೀತರೀ ವಾಟಲೇ ಕೀ ಖಾವಾ
ಕುಣೀತರೀ ಕಾಲವೂನ ದಿಲೇಲಾ ವರಣಭಾತ
ತರ ಯೇ, ಹೇ ಘರ ತುಝsಚ ಆಹೆ!.

ನವ್ಯಾ ಘರಾಚ್ಯಾ ಉಂಬರಠ್ಯಾವರಚೇ
ಮಾಪ ಓಲಾಡತಾನಾ ಆಠವಣ ಠೇವ. . . . .
ಕೀ ಏಕ ಜುನೇ ಘರ ತುಝ್ಯಾ ವಾಟೇಕಡೇ
ನೇಹಮೀಚ ಡೋಳೇ ಲಾವೂನ ಬಸಲೇಲೆ ಆಹೇ!

ಕನ್ನಡ ಅನುವಾದ: ‘ಇದು ನಿನ್ನದೇ ಮನೆ !’

“. . . . . . . . . . . . . . . . .
ನೋಡನೋಡುತ್ತ ದೊಡ್ಡ ಹೆಸರು !
ದೊಡ್ಡವಳಾಗಿದ್ದಿ ಇಂದು !!
ಯಾವತ್ತಾದರೂ ಎನಿಸಿದರೆ ನಿನಗೆ
‘ಮತ್ತೊಮ್ಮೆ ಚಿಕ್ಕ ಹುಡುಗಿಯಾಗಬೇಕು’ ಎಂದು 
ಬಾ ಇಲ್ಲಿ, ಇದು ನಿನ್ನದೇ ಮನೆ!

ಇಂದು ನೀ ಬೇರೆಯೇ ಕಾಣುತ್ತಿರುವಿ,
ತೇಲುತ್ತಿವೆ ಕಣ್ಣಲ್ಲಿ ಕನಸುಗಳು!
ಒಂದು ಹೊಸ ಗೂಡನ್ನು
ತನ್ನದಾಗಿಸುವ ತವಕ. .
ಪತ್ನಿ, ಸೊಸೆ, ಕಿರಿಸೊಸೆ, ವೈನಿ;
ಹೊಸ ಸಂಬಂಧಗಳು,ಹೊಸ ಪಾತ್ರಗಳು
ತನ್ಮಯತೆಯಲ್ಲಿ ಸಾಕಾರಗೊಳಿಸಲಿಹೆ. . .
ಆದರೆ ಅನಿಸಿದರೆ ನಿನಗೆ ಯಾವಾಗಲಾದರೂ
ಚಿಕ್ಕ ಹುಡುಗಿಯಾಗಬೇಕು ಮೊದಲಿನಂತೆ,
ಬಾ ಇಲ್ಲಿ, ಇದು ನಿನ್ನದೇ ಮನೆ !

ಒಂದು ಹೊಸ ವಿಶ್ವ ನಿನಗೆ ಮಾಡುತಿದೆ ಸನ್ನೆ,
ಹೊಸ ಆಹ್ವಾನಗಳಿವೆ ಅಲ್ಲಿ,
ಸಂತಸದಿ, ಪರಿಶ್ರಮದಿ ಅರಳಿದ ಹೂದೋಟಗಳು !!
ಆ ಹೊಸ ಕ್ಷಿತಿಜದತ್ತ ಸಾಗುವಾಗ ದಣಿದು
ವಿರಮಿಸಬೇಕೆನಿಸುತ್ತದೆಯೆ ಒಂದು ಕ್ಷಣ?
ತಾಯ ಮಡಿಲಲ್ಲಿ?
ಬಾ ಇಲ್ಲಿ, ಇದು ನಿನ್ನದೇ ಮನೆ !

ನೀನಿಂದು ಒಡತಿ ಬೇರೊಂದು ಹೃದಯಕೆ,
ಪೂರೈಸುವೆ ಅವರ ಆಶೆ, ಆಕಾಂಕ್ಷೆ, ಹಠ, ಅಪೇಕ್ಷೆಗಳ
ಎಲ್ಲರ ಮನೋಕಾಮನೆಗಳ, ಕರ್ತವ್ಯಗಳ ಪೂರ್ತಿಗೊಳಿಸುತ
ಅನಿಸಬಹುದಲ್ಲವೆ ನಿನಗೂ
ಹಠ ಮಾಡಬೇಕೆಂದು ಸ್ವಲ್ಪ?
ಬಾ ಆಗ, ಇದು ನಿನ್ನದೇ ಮನೆ !

ಹಾಯಾಗಿ ಹಾರಾಡುವಿ ದೇಶ ವಿದೇಶಗಳ,
ಸವಿಯುತ್ತ ಪಂಚತಾರಾ ಹೊಸ ರುಚಿಗಳ.
ಎಂದಾದರೂ ಅನಿಸಿದರೆ ನಿನಗೆ ಉಣಬೇಕೆಂದು
ಯಾರಾದರೂ ಕಲಿಸಿಕೊಟ್ಟ ಕೈಬುತ್ತಿಯನ್ನು
ಬಾ ಇಲ್ಲಿ, ಇದು ನಿನ್ನದೇ ಮನೆ !

ಹೊಸ ಮನೆಯ ಹೊಚ್ಚಲಲಿ ಪಡಿಯನ್ನು ಚಿಮ್ಮುತ್ತ
ಹೆಜ್ಜೆಯನು ಇಡುವಾಗ ಒಳಗೆ,
ನೆನಪಿಟ್ಟುಕೊ, ಇಲ್ಲಿದೆ ಒಂದು ಹಳೆಯ ಮನೆ
ತನ್ನ ಕಣ್ಣುಗಳ ಅನವರತ
ನಿನ್ನದೇ ದಾರಿಯಲಿ ನೆಟ್ಟು!
‌‌‌‌‌‌‌‌‌‌^^^^^^^^^^^^^^^^^^^^^^^^^^^^^^^^^^^
ಮೂಲ ಲೇಖಕಿ: ಶ್ರೀಮತಿ ಸುಶೀಲಾ ಬಾಪಟ
ಭಾವಾನುವಾದ: ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ
^^^^^^^^^^^^^^^^^^^^^^^^^^^^^^^^^^^^^^

53 comments:

Ittigecement said...

ಸುನಾಥ ಸರ್...

ಬಹಳ ಅರ್ಥ ಪೂರ್ಣವಾದ ಹಾಡು.. !!

ತಾಯಿ ಇದ್ದರೆ ತವರು ..
ಆ ತಾಯಿಯ ಹೃದಯ ಹೇಗಿರುತ್ತದೆ ಅನ್ನಲಿಕ್ಕೆ ಈ ಕವನ !

ಅರ್ಥ ಪೂರ್ಣ ಹಾಡು ನಮಗೆಲ್ಲ ಉಣ ಬಡಿಸಿದ್ದಕ್ಕೆ ಧನ್ಯವಾದಗಳು..

ನಿಮ್ಮ ಅನುವಾದವೂ ಚೆನ್ನಾಗಿದೆ,,...

Unknown said...

ಕಾಕಾ,

ಒಂದು ಸುಂದರ ಕವಿತೆಯನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
ಭಾವ ಪೂರ್ಣವಾಗಿದೆ ಕವಿತೆ!

shaamala said...

ಹೌದು ಮತ್ತೊಮ್ಮೆ ಚಿಕ್ಕ ಹುಡುಗಿಯಾಗಬೇಕಾದರೆ, ನಿರಮ್ಮಳವಾಗಿ ಎರಡು ಕ್ಷಣ ಕಳೆಯಬೇಕೆಂದರೆ ಅದು ಅಮ್ಮನ ಮಡಿಲಲ್ಲಿ ಮಾತ್ರ!

ಸುಂದರವಾದ ಕವನ ಹಾಗೂ ಭಾವಾನುವಾದ!

ಧನ್ಯವಾದಗಳು

ಶಾಮಲ

ದಿನಕರ ಮೊಗೇರ said...

thank you sir..
sundara haadina parichaya maaDisiddakke....

sunaath said...

ಪ್ರಕಾಶ,
ಅನುವಾದವನ್ನು ಮಾಡಿದವರು ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ. ಅವರಿಗೆ ನಮ್ಮೆಲ್ಲರ ಕೃತಜ್ಞತೆಗಳು.

sunaath said...

ಮಧು,
ಕವನವನ್ನು ನನಗೆ ಒದಗಿಸಿದ ತಂಗಿ ಅರುಣಾಳಿಗೆ ಹಾಗು ಕನ್ನಡಿಸಿದ ಶ್ರೀಮತಿ ರಾಧಾ ಅವರಿಗೆ ನಮ್ಮ ಕೃತಜ್ಞತೆಗಳು.

sunaath said...

ಶ್ಯಾಮಲಾ,
ತಾಯಿ ಎಂದರೆ ಮಮತೆಯ ಮಡಿಲು. ಅವಳು ಕೊಡುವ ಪ್ರೀತಿಯನ್ನು ಯಾಅರು ಕೊಟ್ಟಾರು?

sunaath said...

ದಿನಕರ,
ನಿಮ್ಮ ಧನ್ಯವಾದಗಳನ್ನು ಶ್ರೀಮತಿ ಅರುಣಾ ಹಾಗು ಶ್ರೀಮತಿ ರಾಧಾ ಇವರಿಗೆ ತಲುಪಿಸುತ್ತೇನೆ. ನಿಮಗೂ ಸಹ ಧನ್ಯವಾದಗಳು.

V.R.BHAT said...

ಎಲ್ಲೆಲ್ಲಿಂದ ಹುಡುಕಿ ನಮಗಾಗಿ ತರುತ್ತೀರಿ ಸ್ವಾಮೀ, ನಿಮ್ಮ ತಾಳ್ಮೆಯ ಹುಡುಕುವಿಕೆಗೆ ನಿಜಕಾರಣ ನಮನ, ಮತ್ತು ನಿಮ್ಮ ಲೇಖನಿಯಿಂದ ವ್ಯುತ್ಪತ್ತಿಗೆ ನಮಸ್ಕಾರ, ಕಾವ್ಯ ಬಹಳ ಅರ್ಥವತ್ತಾಗಿದೆ, ತಾಯಿಯ ಹೃದಯವೇ ಹಾಗಲ್ಲವೇ ?

ಶಿವಪ್ರಕಾಶ್ said...

like aytu sir :)

balasubramanya said...

ಸುನಾಥ್ ಸರ್ ನಿಮ್ಮ ಪ್ರಯತ್ನ ತುಂಬಾ ಅರ್ಥ ಪೂರ್ಣ ವಾಗಿದೆ.ಒಂದು ಅಪರೂಪವಾದ ಸುಂದರ ಅರ್ಥ ಭರಿತ ಕವಿತೆ . ನಿಮಗೆ ಕವಿತೆ ಒದಗಿಸಿದ ಅರುಣ ರವರಿಗೆ,ಕವಿತೆ ಬರೆದ ಸುಶೀಲಾ ಬಾಪಟ ರವರಿಗೆ, ಅನುವಾದ ಮಾಡಿದ ಶ್ರೀಮತಿ ರಾಧಾ ರವರಿಗೆ, ಹಾಗು ಪ್ರಕಟಿಸಿದ ನಿಮಗೆ ನನ್ನ ಪ್ರೀತಿಯ ನಮನಗಳು.ಭಾಷೆ ಯಾವುದಾದರೇನು ಇಂತಹ ಕವಿತೆಗಳನ್ನು ಓದಲು ಖುಷಿಯಾಗುತ್ತೆ.

ಮನಮುಕ್ತಾ said...

ಕಾಕಾ,
ತು೦ಬಾ ಚೆ೦ದದ ಹಾಡು..ನನ್ನಮ್ಮನಿಗೆ ನನ್ನನ್ನು ಕಳಿಸುವಾಗ ಹಾಗೇ ಅನ್ನಿಸಿದೆ..ಮು೦ದೆ ನನ್ನ ಮಕ್ಕಳನ್ನು ಬೀಳ್ಕೊಡುವಾಗ ನನಗೂ ಹಾಗೆಯೇ ಅನ್ನಿಸುತ್ತದೆ....ಮಗಳು ಯಾವಾಗಲು ಅಪ್ಪ ಅಮ್ಮ ನಿಗೆ ಮಗುವೇ ಆಗಿರುತ್ತಾಳೆ ಅಲ್ಲವೇ?
ಎಕ್ ಜುನೆ ಘರ್ ತುಝ್ಯಾ ವಾಟೇಕಡೆ ನೆಹಮೀಚ ಡೋಳೇ ಲಾವುನ ಬಸಲೇಲೆ ಆಹೆ!ಈ ವಾಕ್ಯ ತವರಿನ ಪ್ರೀತಿಯನ್ನು ನೆನಪಿಸಿ ಕಣ್ಣಲ್ಲಿ ನೀರೂರಿಸಿತು.ಕವನವನ್ನು ಬರೆದವರಿಗೆ, ಅನುವಾದಿಸಿದವರಿಗೆ ಹಾಗು ನಿಮಗೆ ನನ್ನ ಪ್ರೀತಿಪೂರ್ವಕ ವ೦ದನೆಗಳು.

ಸಾಗರದಾಚೆಯ ಇಂಚರ said...

ಸರ್

ತುಂಬಾ ಅರ್ಥಗರ್ಭಿತ ಹಾಡು

ಶೈಲಿ ಸೊಗಸಾಗಿದೆ

sunaath said...

ಭಟ್ಟರೆ,
ನಾನು ಹುಡುಕಿದ್ದಲ್ಲ ಇದು. ಗೆಳತಿಯೊಬ್ಬಳು ಹಾಡಿದ್ದನ್ನು ಕೇಳಿದ ನನ್ನ ತಂಗಿ, ಇದನ್ನು ನನಗಾಗಿ ಬರೆಯಿಸಿಕೊಂಡು ತಂದು ಕೊಟ್ಟಳು. It is our good luck to get it, ಅಷ್ಟೇ!

ಸೀತಾರಾಮ. ಕೆ. / SITARAM.K said...

ತಾಯಿ ಮನೆಯ ಬಿಟ್ಟು ಬರುವ ಹೆಣ್ಣುಗಳು ಗಂಡನ ಮನೆಯಲ್ಲಿ ಹೊಸವಾತಾವರಣದಲ್ಲಿ ಹೊಸ ಜವಾಬ್ದಾರಿಯೊಡನೆ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡು, ನಡುನಡುವೆ ತವರಿಗೆ ಹೋಗಿ ಮಗುವಾಗಿ ಇರುವ ಭಾವ ಕಲ್ಪನೆ ತುಂಬಾ ಸುಂದರ. ಶ್ರಮ ಪಟ್ಟು ಮರಾಠಿ ಹಾಡೊಂದನ್ನು ಸಂಗ್ರಹಿಸಿ ಅನುವಾದಿಸಿ ನಮಗೆಲ್ಲಾ ಉಣಬಡಿಸಿದ್ದಿರಾ...
ಮೂಲಲೇಖಕರಿಗೂ, ಅನುವಾದಕರಿಗೂ ಮತ್ತು ಸಂಗ್ರಹಿಸಿದ ಅಣ್ಣ-ತಂಗಿಯರಿಗೂ ವಂದನೆಗಳು.

sunaath said...

ಶಿವಪ್ರಕಾಶ,
ನೀವು ಕವನವನ್ನು ಮೆಚ್ಚಿಕೊಂಡರೆ, ನನಗದೇ ಸಂತೋಷ.

sunaath said...

ಬಾಲು,
ನಿಮ್ಮ ದೃಷ್ಟಿಕೋನವನ್ನು ಮೆಚ್ಚಿಕೊಂಡೆ. ಎಲ್ಲಿ ಅರಳಿದ ಹೂವಾದರೇನು? ಅದರ ಕಂಪು ನಮಗೆ ಸುಖ ಕೊಡದೆ ಇದ್ದೀತೆ?
ಓದಿ ಖುಶಿಪಟ್ಟ ನಿಮಗೂ ಧನ್ಯವಾದಗಳು.

sunaath said...

ಮನಮುಕ್ತಾ,
ತಾಯಿ-ಮಕ್ಕಳ ನಿರಂತರ ಬಾಂಧವ್ಯವಿದು. ವಾತ್ಸಲ್ಯದ ಈ ಸ್ರೋತವು ನಿಮ್ಮ ತಾಯಿಯಿಂದ ನಿಮಗೆ, ನಿಮ್ಮಿಂದ ನಿಮ್ಮ ಮಕ್ಕಳಿಗೆ .....ಹರಿಯುತ್ತಲೇ ಇರುವಂತಹದು!

sunaath said...

ಗುರುಮೂರ್ತಿಯವರೆ,
ಹೃದಯದಿಂದ ಬಂದ ಹಾಡಿದು. ಹೀಗಾಗಿ ಶೈಲಿ ಅನೂಪವಾಗಿದೆ.

sunaath said...

ಸೀತಾರಾಮರೆ,
ಧನ್ಯವಾದಗಳು. ಇದರಲ್ಲಿ ಶ್ರಮಪಟ್ಟವರೆಂದರೆ, ಮೂಲಲೇಖಕರು, ಸಂಗ್ರಹಿಸಿದ ನನ್ನ ತಂಗಿ ಹಾಗು ಅನುವಾದಿಸಿದ ಶ್ರೀಮತಿ ರಾಧಾ ಫಡನೀಸ ಮಾತ್ರ. ನನ್ನ role ಅತ್ಯಲ್ಪ!

ಅಪ್ಪ-ಅಮ್ಮ(Appa-Amma) said...

ಎಂದಾದರೂ ಅನಿಸಿದರೆ ನಿನಗೆ ಉಣಬೇಕೆಂದುಯಾರಾದರೂ ಕಲಿಸಿಕೊಟ್ಟ ಕೈಬುತ್ತಿಯನ್ನುಬಾ ಇಲ್ಲಿ, ಇದು ನಿನ್ನದೇ ಮನೆ !

ಎಂತಹ ಅದ್ಭುತ ಸಾಲುಗಳು !

ಈ ಸುಂದರ ಕವನದ ಮೂಲ ಲೇಖಕಿ ಸುಶೀಲಾ ಅವರಿಗೆ, ಅನುವಾದಿಸಿದ ರಾಧಾ ಅವರಿಗೆ, ನಿಮ್ಮ ಸೋದರಿ ಅರುಣಾ ಅವರಿಗೆ ಮತ್ತು ನಮಗೆಲ್ಲಾ ಸಾಹಿತ್ಯದ ಸವಿಯೂಟ ಬಡಿಸುತ್ತಿರುವ ನಿಮಗೆ ವಂದನೆಗಳು

Unknown said...

ತುಂಬಾ ಚೆನ್ನಾಗಿದೆ... ಬ್ಲಾಗ್ ಗೆ ಹಾಕಿ ನಮಗೂ ಓದಿಸಿದ್ದಕ್ಕೆ ಧನ್ಯವಾದಗಳು...

sunaath said...

ಶ್ರೀಮತಿ & ಶ್ರೀ ಶಿವಶಂಕರ,
ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.

sunaath said...

ರವಿಕಾಂತ,
ನಿಮಗೂ ಅನೇಕ ಧನ್ಯವಾದಗಳು!

Narayan Bhat said...

ಈ ಕವನದಲ್ಲಿ ತಾಯಿಯ ಮಮತೆ ವ್ಯಕ್ತವಾದ ರೀತಿ ಅನನ್ಯವಾದದ್ದು...ಇಂಥ ಉತ್ತಮ ಕವನವನ್ನು ನಮಗೆ ಪರಿಚಯಿಸಿದ್ದಕ್ಕೆ ಕೃತಜ್ಞತೆಗಳು.

umesh desai said...

ಕಾಕಾ ನನಗೆ ಚೂರುಪಾರು ಮರಾಠಿ ಬರತದ ಹಿಂಗಾಗಿ ಕವಿತಾದ ಪೂರ್ಣ ಆನಂದ ಸಿಕ್ತು ಅನುವದಿಸಿದ ಶ್ರೀಮತಿ
ಫಡಣವೀಸ ಅವರಿಗೆ ಅಭಿನಂದನೆಗಳು. ಸಾಲು ಎದೆಗೆ ತಟ್ಟುತ್ತವೆ.,

sunaath said...

ಭಟ್ಟರೆ,
ಮಾತೃವಾತ್ಸಲ್ಯವನ್ನು ತೆರೆದಿಡುವ ಈ ಕವನ ನಿಜಕ್ಕೂ ಅನನ್ಯವಾಗಿದೆ. ಈ ಕವನ ದೊರೆತಿದ್ದು ನನಗೂ ತುಂಬ ಸಂತೋಷವನ್ನು ತಂದಿದೆ.

sunaath said...

ದೇಸಾಯರ,
ಮೂಲಕವನದಾಗಿರೊ tone, ಅನುವಾದದಾಗ ಬರೋದು ಕಠಿಣ. ಇದಕ್ಕ ಅಪವಾದ ಅಂದರ ಬೇಂದ್ರೆಯವರು ಮಾಡಿದ ಅನುವಾದಗಳು.
ವಿವೇಕಾನಂದರ ಕವನವೊಂದನ್ನು ಬೇಂದ್ರೆ ಕನ್ನಡಕ್ಕೆ ಅನುವಾದ ಮಾಡ್ಯಾರ from English. ಕನ್ನಡ ಅನುವಾದದ ಎದುರಿಗೆ ಇಂಗ್ಲಿಶ್ ಕವನ ಏನೂ ಅಲ್ಲ!

Unknown said...

ಸುನಾಥರೆ,
ನನಗೆ ಮರಾಠಿ ಬರುವದಿಲ್ಲ. ಆದರೆ ರಾಧಾ ಅವರ ಅನುವಾದ ಓದಿದೆ; ಕವನ ತುಂಬಾ ಹಿಡಿಸಿತು. ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸಿ ಕೊಟ್ಟ ಮೇಲೆ, ನನ್ನಲ್ಲೂ ಸಹ ಇಂತಹ ಭಾವನೆಗಳು ಮೂಡಿದವು.
ಇದು ತಾಯಿಗೆ ಸಹಜವಾದ ಭಾವನೆ.
ಶ್ರೀಮತಿ ಸುಶೀಲಾ ಬಾಪಟ, ರಾಧಾ ಫಡನೀಸ, ಅರುಣಾ ಗಲಗಲಿ ಹಾಗು ನಿಮಗೆ ಸುಂದರ ಕವನವೊಂದನ್ನು ಓದುವ ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು.

sunaath said...

ವನಮಾಲಾ,
ಕವನವನ್ನು ಮೆಚ್ಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

yashwanth said...

ಅರ್ಥಪೂರ್ಣ ಅನುಭವದ ಹಾಡು ಸುಂದರವಾದ ಅನುವಾದ

sunaath said...

ಯಶವಂತರೆ,
ಪ್ರತಿಯೊಬ್ಬ ತಾಯಿಯ ಅನುಭವಕ್ಕೆ ಶ್ರೀಮತಿ ಸುಶೀಲಾ ಬಾಪಟ
ದನಿ ಕೊಟ್ಟಿದ್ದಾರೆ ಎನ್ನಬಹುದು.

ಮನಸಿನಮನೆಯವನು said...

ಅದೆಷ್ಟು ಸುಂದರವಾಗಿ ಹೊಸೆದಿದ್ದಾರೆ..
"‘ಮತ್ತೊಮ್ಮೆ ಚಿಕ್ಕ ಹುಡುಗಿಯಾಗಬೇಕು’ ಎಂದು
ಬಾ ಇಲ್ಲಿ, ಇದು ನಿನ್ನದೇ ಮನೆ!" ಸುಂದರವಾದ ಸಾಲುಗಳು..

prabhamani nagaraja said...

ಕವನ ಅದ್ಭುತವಾಗಿದೆ ಸರ್, ಮಾತೃ ವಾತ್ಸಲ್ಯದ ಚಿತ್ರಣ ಅತ್ಯ೦ತ ಸೊಗಸಾಗಿದೆ. ಇದನ್ನು ನಮ್ಮೊಡನೆ ಹ೦ಚಿಕೊಳ್ಳಲು ಸಹಕರಿಸಿದ, ಸ೦ಬ೦ಧಿಸಿದ ಎಲ್ಲರಿಗೂ ಧನ್ಯವಾದಗಳು.

ಚಿತ್ರಾ said...

ಕಾಕಾ,
ಭಾವ ಪೂರ್ಣ ಕವನದ ಬಹು ಸುಂದರ ಭಾವಾನುವಾದ. ಮರಾಥೀ ಭಾಷೆಯಲ್ಲಿ ಕನ್ನಡದಂತೆಯೇ ತುಂಬಾ ಚಂದದ ಕವನಗಳಿವೆ . ಈ ಮೇಲ್ ನಲ್ಲಿ ನನಗೆ ಬಂದಿರುವ ಅನೇಕ ಕವಿತೆಗಳನ್ನು ಅನುವಾದಿಸಬೇಕೆಂದು ಕೊಳ್ಳುತ್ತೇನೆ . ಆದರೆ , ಸರಿಯಾದ ಶಬ್ದಗಳನ್ನು ಹೊಂದಿಸಲು ಬಹುಶಃ ನನಗೆ ಸಾಧ್ಯವಾಗುತ್ತಿಲ್ಲ ಎಲ್ಲೋ ಒಂದು ಕಡೆ ಅದರ ಸ್ವಾದ ಕಳೆದು ಹೋದಂತೆನಿಸಿಬಿಡುತ್ತದೆ. ಪ್ರಯತ್ನ ನಡೆದಿದೆ. ಮನಸ್ಸಿಗೆ ತೃಪ್ತಿ ಎನಿಸಿದಲ್ಲಿ ಬ್ಲಾಗ್ ನಲ್ಲಿ ನಿಮ್ಮ ಮುಂದೆ ಇಡುತ್ತೇನೆ.

sunaath said...

ಪ್ರಭಾಮಣಿಯವರೆ,
ಎಲ್ಲ ಮಾತೆಯರ ಮನದ ಭಾವನೆಯನ್ನು ಶ್ರೀಮತಿ ಸುಶೀಲಾ ಬಾಪಟ ಕವನರೂಪಕ್ಕೆ ತಂದಿದ್ದಾರೆ ಎಂದು ಹೇಳಬಹುದು.

sunaath said...

ಬೆಳಕಿನ ಮನೆಯಾವರೆ,
ತಾಯಿಯ ಮಮತೆ ಕವನದ ತುಂಬ ತುಂಬಿಕೊಂಡಿದೆ,ಅಲ್ಲವೆ?

sunaath said...

ಚಿತ್ರಾ,
ನಿಮ್ಮ ಸಂಗ್ರಹದಲ್ಲಿರುವ ಮರಾಠಿ ಕವನಗಳನ್ನು ಕನ್ನಡಿಸಿ ನಮಗೆ ನೀಡಿರಿ. ಇತರ ಭಾಷೆಗಳಲ್ಲಿರುವ ಉತ್ತಮ ಸಾಹಿತ್ಯ ಕನ್ನಡಕ್ಕೆ ಬರಬೇಕು.

Manjunatha Kollegala said...

"ಯಾವತ್ತಾದರೂ ಎನಿಸಿದರೆ ನಿನಗೆ
‘ಮತ್ತೊಮ್ಮೆ ಚಿಕ್ಕ ಹುಡುಗಿಯಾಗಬೇಕು’ ಎಂದು
ಬಾ ಇಲ್ಲಿ, ಇದು ನಿನ್ನದೇ ಮನೆ!"

ಎಂದು offer ಮಾಡುವ ತಾಯಿಯ ಕರುಳು, ಕವನದ ಕೊನೆಗೆ ತನ್ನ ಆ ಬಿಗುಮಾನವನ್ನೂ ಬಿಟ್ಟು ಹೇಳುತ್ತದೆ,

"ನೆನಪಿಟ್ಟುಕೊ, ಇಲ್ಲಿದೆ ಒಂದು ಹಳೆಯ ಮನೆ
ತನ್ನ ಕಣ್ಣುಗಳ ಅನವರತ
ನಿನ್ನದೇ ದಾರಿಯಲಿ ನೆಟ್ಟು!"

ಈ ಸಾಲುಗಳಲ್ಲಿನ ಆರ್ತತೆ ಮನಸ್ಸನ್ನು ತೇವಗೊಳಿಸಿತು. ಅಗಲುವಿಕೆಯ ಮಾರ್ದವತೆಯನ್ನು ಅಷ್ಟೇ ನವಿರಾಗಿ ಬಿಡಿಸಿಟ್ಟ ಕವನ. ಅನುವಾದವನ್ನು ಓದಿದ ನಂತರ ಮೂಲವನ್ನು ಮತ್ತೊಮ್ಮೆ ಓದಿದೆ, ಮತ್ತೂ ಸೊಗಸೆನಿಸಿತು. ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

ಪುಣೆಯಲ್ಲಿದ್ದ ಎಂಟು ತಿಂಗಳು ಮರಾಠಿಯನ್ನು ಕಲಿಯಬೇಕೆನ್ನುವುದರಲ್ಲೇ ಹೋಯಿತು, ಸೋಮಾರಿ ಮನಸ್ಸು. ಕಲಿಯಬೇಕು, ಇಲ್ಲದಿದ್ದರೆ ಮರಾಠಿಯ ಸಂತಶ್ರೇಷ್ಠರು ನನ್ನವರಾದಾರು ಹೇಗೆ?

sunaath said...

ಮಂಜುನಾಥರೆ,
ಮರಾಠಿಯು ಕನ್ನಡದಿಂದ ಹುಟ್ಟಿದೆ ಹಾಗು ಗುಜರಾತಿ ಭಾಷೆಗೆ ಕನ್ನಡದ base ಇದೆ ಎಂದು ಭಾಷಾಶಾಸ್ತ್ರಜ್ಞರು ಹೇಳುತ್ತಾರೆ.
ಜ್ಞಾನೇಶ್ವರಿಯಲ್ಲಿರುವ ಕನ್ನಡ ಶಬ್ದಗಳನ್ನು ಅನೇಕ ವಿದ್ವಾಂಸರು ಎತ್ತಿ ತೋರಿಸಿದ್ದಾರೆ. ಮರಾಠಿಯ ಕೆಲವು ಕನ್ನಡ ಅನುವಾದಗಳನ್ನು ಓದಿದ್ದೇನೆ. ಅಲ್ಲಿಯ ಸಾಹಿತ್ಯದ ಬೆಳವಣಿಗೆಯಿಂದ ಅಚ್ಚರಿ ಹಾಗು ಖುಶಿ ಪಟ್ಟಿದ್ದೇನೆ. ಆದರೆ,ಮರಾಠಿ ಬರುತ್ತಿದ್ದರೆ, ರಾಮದಾಸರ ‘ಮನಾಚೇ ಶ್ಲೋಕ’ವನ್ನ್ನಾಅದರೂ ಓದಬಹುದಾಗಿತ್ತಲ್ಲ ಎಂದು ಹಳಹಳಿಸಿದ್ದೇನೆ!

AntharangadaMaathugalu said...

ಸುನಾಥ್ ಕಾಕಾ..
ಅನುವಾದವನ್ನು ಬಹಳ ಆಸ್ಥೆಯಿಂದ ಓದಿಕೊಂಡೆ. ನಿಜ ತಾಯಿ ಎಂದಿದ್ದರೂ ತಾಯಿಯೇ... ಹೋಲಿಕೆಯೇ ಇಲ್ಲ. ಮಗಳು ಮತ್ತೆ ಮಗುವಾಗುವುದು ತಾಯಿಯ ಮಡಿಲಲ್ಲೇ...ತುಂಬಾ ಆಪ್ತವಾಗಿದೆ. ಇಂತಹ ಒಳ್ಳೆಯ ಸಾಹಿತ್ಯವನ್ನು ಅನುವಾದಿಸಿ, ಬ್ಲಾಗ್ ನಲ್ಲಿ ಹಾಕಿ ನಮಗೆ ಓದಿಸಿದ ನಿಮಗೂ ಅನುವಾದ ಮಾಡಿದವರಿಗೂ, ಮುಖ್ಯವಾಗಿ ಕವನ ಬರೆಸಿ ನಿಮಗೆ ಕಳುಹಿಸಿದ ನಿಮ್ಮ ತಂಗಿಗೂ ಹೃತ್ಪೂರ್ವಕ ಧನ್ಯವಾದಗಳು.


ಶ್ಯಾಮಲ

sunaath said...

ಶ್ಯಾಮಲಾ,
ಈ ಸೃಷ್ಟಿ ನಿಂತಿರುವದೇ ಮಾತೃವಾತ್ಸಲ್ಯದ ಮೇಲೆ, ಅಲ್ಲವೆ?

ಶ್ರೀನಿವಾಸ ಮ. ಕಟ್ಟಿ said...

ತಾಯಿಯ ಮನದಾಳದ ಭಾವನೆಗಳನ್ನು ಶಬ್ದಗಳಲ್ಲಿ ಹೆಪ್ಪುಗಟ್ಟಿಸಿ ಹೃದಯದಿಂದ ಹರಿದ ಕವಿತೆ ಇದು. ಭಾವವ್ಯಕ್ತಿ ಅತ್ಯಂತ್ ಸ್ಫುಟವಾಗಿ ಮೂಡಿದೆ. ನನಗೆ ಮರಾಠಿ ಅಷ್ಟಿಷ್ಟು ತಿಳಿಯುತ್ತದೆ. ಕನ್ನಡದಲ್ಲಿ ಅತಿ ಸುಂದರವಾಗಿ ಒಡಮೂಡಿದೆ. ಶ್ರೀಮತಿ ಸುಶೀಲಾ ಬಾಪಟರಿಗೂ, ಶ್ರೀಮತಿ ರಾಧಾ ಫಡಣೀಸರಿಗೂ ನನ್ನ ಧನ್ಯವಾದ ತಿಳಿಸಿರಿ.

ಶ್ರೀನಿವಾಸ ಮ. ಕಟ್ಟಿ said...

ಸೌ. ಅರುಣಾರಿಗೆ ಧನ್ಯವಾದಗಳನ್ನು ಅವರ ಮನೆಗೇ ಹೋಗಿ ಹೇಳುತ್ತೇನೆ. ನಿನ್ನೆ ಅವರ ಮನೆಯಲ್ಲಿ ೪ ಗಂಟೆ ಇದ್ದೆ. ಈ ಕವಿತೆಯ ಕುರಿತು ಮಾತೇ ಆಡಲಿಲ್ಲ ! ಕುಮಾರವ್ಯಾಸ ಭಾರತದ್ದೇ ಮಾತಾಯಿತು. ಅದಲ್ಲದೇ ಅವರ ಮನೆಯಲ್ಲಿ Inverter ಹಾಕಿಸಿದ್ದಾಯಿತು !

sunaath said...

ಕಟ್ಟಿಯವರೆ,
ಕವನ ರಚಿಸಿದ ಶ್ರೀಮತಿ ಸುಶೀಲಾ ಬಾಪಟರು ಎಲ್ಲಿರುವರೋ ತಿಳಿಯದು. ಶ್ರೀಮತಿ ರಾಧಾ ಫಡಣೀಸರಿಗೆ ನಿಮ್ಮ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಖ್ಯವಾಗಿ, ಈ ಕವನವನ್ನು ನನಗೆ ತಂದುಕೊಟ್ಟ ಅರುಣಾಳಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.
ಕುಮಾರವ್ಯಾಸನ ಭಾರತದ ಬಗೆಗೆ ನಿಮ್ಮಿಂದ ಕೇಳಬೇಕಾಗಿದೆ.

PARAANJAPE K.N. said...

ಸು೦ದರವೂ, ಅರ್ಥಪೂರ್ಣವೂ ಆದ ಕವನ, ಮರಾಠಿ ಬಲ್ಲ ನನಗೆ ಅದರ ಕನ್ನಡ ಅನುವಾದ ಕೂಡ ಖುಷಿ ಕೊಡ್ತು. ತು೦ಬಾ ಚೆನ್ನಾಗಿದೆ.

sunaath said...

ಪರಾಂಜಪೆಯವರೆ,
ಮರಾಠಿ ತಿಳಿದವರು ಮೂಲದ ಸೊಬಗನ್ನು ಚೆನ್ನಾಗಿ ಅನುಭವಿಸಬಲ್ಲರು. ಇನ್ನು ಅನುವಾದವೂ ಸಹ ಅಷ್ಟೇ ಚೆನ್ನಾಗಿರಬಹುದೆಂದು ನನ್ನ ಭಾವನೆ.

PaLa said...

"ಇದು ನಿನ್ನದೇ ಮನೆ !" - ತುಂಬಾ ಸುಂದರ ಭಾವದ ಪದ್ಯ. ಈ ಪದ್ಯದ ಮೂಲ ಸಾಹಿತ್ಯವನ್ನು ನಿಮ್ಮೊಂದಿಗೆ ಹಂಚಿಕೊಂಡ ನಿಮ್ಮ ತಂಗಿ, ಕನ್ನಡಕ್ಕೆ ಅನುವಾದಿಸಬೇಕೆಂಬ ಅಪೇಕ್ಷೆಗೆ ನಿಮಗೆ, ಹಾಗೂ ಅನುವಾದಿಸಿದ ಶ್ರೀಮತಿ ರಾಧಾ ಅವರಿಗೆ ಧನ್ಯವಾದಗಳು. ಸಾಹಿತ್ಯ ಹಾಡಿನಲ್ಲಿ ಕೇಳಿದರೆ ಹೇಗಿರಬಹುದೆಂದು ಕಲ್ಪಿಸುತ್ತಿರುವೆ.

sunaath said...

PaLa,
ಹಾಡನ್ನು ನನ್ನ ತಂಗಿ ಹಾಡಿ ತೋರಿಸಿದಳು. ತುಂಬ ಭಾವಪೂರ್ಣವಾಗಿತ್ತು. ಧನ್ಯವಾದಗಳು.

Prasad Shetty said...

ತುಂಬಾ ಚೆನ್ನಾಗಿದೆ ....

sunaath said...

ಧನ್ಯವಾದಗಳು,ಪ್ರಸಾದ!

sritri said...

`ಇಲ್ಲಿದೆ ಒಂದು ಹಳೆಯ ಮನೆ
ತನ್ನ ಕಣ್ಣುಗಳ ಅನವರತ
ನಿನ್ನದೇ ದಾರಿಯಲಿ ನೆಟ್ಟು!'-

ಕವನ, ನನ್ನಲ್ಲಿ ಸುಂದರ ಭಾವನೆಗಳನ್ನು ಅರಳಿಸಿತು ಕಾಕಾ. ಧನ್ಯವಾದಗಳು.

Anonymous said...

ಪ್ರಿಯ ಓದುಗರೆ,
ವಂದನೆಗಳು. ಇವತ್ತು ‘ಸಲ್ಲಾಪ’ ಬ್ಲಾಗಿನಲ್ಲಿ ಶ್ರೀಮತಿ ಮತ್ತು ಶ್ರೀ ದೇಶಪಾಂಡೆಯವರು ಪರಿಚಯಿಸಿದ ಮರಾಠಿ ಕವನ (‘ಹೇ ಘರ ತುಝsಚ ಆಹೆ’) ಅನುವಾದ ಮಾಡಿದ ನನ್ನ ಕವನ “ಇದು ನಿನ್ನದೇ ಮನೆ” ನೋಡಿ ಸಂತಸಗೊಂಡೆ. ಹಾಗೇ ಈ ಕವನಕ್ಕೆ ಸ್ಪಂದಿಸಿ ಬರೆದ ಮೆಚ್ಚಿನ ನುಡಿಗಳನ್ನು ನೋಡಿ, ಓದಿ ಸಂಭ್ರಮಗೊಂಡೆ. ಎಷ್ಟೊಂದು ಹೃದಯ ತುಂಬಿದ ಮಾತುಗಳು!! ನಿಜಕ್ಕೂ ರೋಮಾಂಚನವಾಯಿತು.ಸೃಜನ ಸಾಹಿತ್ಯ, ಅನುವಾದ ಸಾಹಿತ್ಯ ನನ್ನ ಹವ್ಯಾಸ. ಮನಕೆ ತಟ್ಟಿದ ಕೃತಿಗಳನ್ನು ಅನುವಾದ ಮಾಡುತ್ತೇನೆ. ಈ ಕವನದ ಭಾವಾನುವಾದ ತಮಗೆಲ್ಲ ಮೆಚ್ಚಿಗೆ ಆಗಿದ್ದಕ್ಕೆ ಅಭಿಮಾನವೆನಿಸಿದೆ. ಪ್ರಶಸ್ತಿ, ಪದಕಗಳಿಗಿಂತ ಈ ಮೆಚ್ಚುಗೆಯ ಸಹೃದಯ ನುಡಿ ಉಡುಗೊರೆ ಆಪ್ಯಾಯಮಾನವೆನಿಸಿದೆ. ನನಗೆ ಕವನ ಕೊಟ್ಟು, ಅನುವಾದ ಮಾಡಿಸಿ, ಪರಿಚಯಿಸಿದ ಶ್ರೀಮತಿ ವನಮಾಲಾ ಮತ್ತು ಶ್ರೀ ದೇಶಪಾಂಡೆ ಇವರಿಗೂ, ಕವನ ಆಯ್ದುಕೊಟ್ಟ ಶ್ರೀಮತಿ ಅರುಣಾ ಗಲಗಲಿ ಇವರಿಗೂ, ಕವನ ರಚಿಸಿ ನಮಗೆಲ್ಲ ಸಂತಸವನ್ನುಂಟು ಮಾಡಿದ ಶ್ರೀಮತಿ ಸುಶೀಲಾ ಬಾಪಟ ಇವರಿಗೂ ಅನಂತ ಕೃತಜ್ಞತೆಗಳು. ಪ್ರತಿಕ್ರಿಯಿಸಲು ತಡವಾದದ್ದಕ್ಕೆ ಕ್ಷಮಿಸಿ. ಮತ್ತೊಮ್ಮೆ ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ
ರಾಧಾ ಶ್ಯಾಮರಾವ.

“ಕವನಗಳೆಂದರೆ”

ಬರೀ ಕವನಗಳಲ್ಲ
ಕವನಗಳು.
ಭಾವಭಾವಾರ್ದ್ರತೆಯಲ್ಲಿ
--ತಟ್ಟಿದ ಅಲೆಗಳಿಗೆ
ಸ್ಪಂದಿಪ ಹೃದಯಗಳಿಗೆ, ನವಿರಾಗಿ
ಬೆಸೆದ ಬಂಧಗಳು.
ನಿನ್ನೆ, ಇಂದಿಗೆ, ಮುಸ್ಸಂಜೆಗೆ,
ನಾಳೆಗಳ ಮುಂಜಾವಿಗೆ—
ಜೀವನದಿ—
ಭಾವ ಅಲೆಗಳ ತರಂಗಗಳಿವು
ತಟ್ಟುತ ಸಾಗುತಿವೆ
ನಿರಂತರ ನಿರಂತರ.