Thursday, March 3, 2011

ಭೋಜಪಾಲ

ಒಂದು ಊರಿನ ಹೆಸರು ಏಕೆ ಬದಲಾಗುತ್ತದೆ? ಇದಕ್ಕೆ ಎರಡು ಕಾರಣಗಳನ್ನು ಊಹಿಸಬಹುದು. ಮೊದಲನೆಯದು ಅಲ್ಲಿಯ ನಿವಾಸಿಗಳು ಉಚ್ಚಾರದ ಭರಾಟೆಯಲ್ಲಿ ಮಾಡಿಕೊಂಡಂತಹ ಬದಲಾವಣೆ. ಎರಡನೆಯದು ಪರಕೀಯರ ಆಕ್ರಮಣದಿಂದಾದ ಬದಲಾವಣೆ. ಉದಾಹರಣೆಗಾಗಿ ‘ಬೆಂಗಳೂರು’ ಎನ್ನುವ ಹೆಸರನ್ನೇ ತೆಗೆದುಕೊಳ್ಳೋಣ. ವೆಂಕಟೇಶ್ವರನ ಹೆಸರನ್ನು ಹೊತ್ತು, ‘ವೆಂಕಳೂರು’ ಎಂದು ಕರೆಯಲಾಗುತ್ತಿದ್ದ ಈ ಊರು ಕಾಲ ಸರಿದಂತೆ ‘ಬೆಂಗಳೂರು’ ಆಗಿ, ಆಂಗ್ಲರ ಉಚ್ಚಾರದಲ್ಲಿ ‘ಬ್ಯಾಂಗಲೋರ್’ ಆಯಿತು.  ಇದನ್ನೀಗ ಕನ್ನಡಿಗರು ಬೆಂಗಳೂರು ಎಂದು ಬದಲಾಯಿಸಿಕೊಂಡರು. ಇದಕ್ಕೂ ಮೊದಲೇ ಮಹಾರಾಷ್ಟ್ರೀಯರು ಬಾಂಬೇಯನ್ನು ಮೊದಲಿನ ಮುಂಬಯಿಗೆ ಬದಲಾಯಿಸಿಕೊಂಡಿದ್ದರು. ಈ ರೀತಿಯಾಗಿ ಮೂಲ ಹೆಸರಿಗೆ ಮರುಬದಲಾವಣೆ ಮಾಡುವದು ಜನತೆಯ ಸಾಂಸ್ಕೃತಿಕ ಹಾಗು ಐತಿಹಾಸಿಕ ಪ್ರಜ್ಞೆಯ ದ್ಯೋತಕವೇ ಆಗಿದೆ.

ಹೀಗಿರಲು, ಮಧ್ಯಪ್ರದೇಶದ ರಾಜಧಾನಿಯಾದ ‘ಭೋಪಾಲ’ ಎನ್ನುವ ಹೆಸರನ್ನು ಅದರ ಮೂಲ ಹೆಸರಾದ ‘ಭೋಜಪಾಲ’ ಎಂದು ಮರುಬದಲಾಯಿಸಲು ಅಲ್ಲಿಯ ನಾಗರಿಕರು ಬಯಸಿದಾಗ, ಕೆಲವು ತರಲೆ ಜನ ಅದಕ್ಕೆ ತಕರಾರು ಮಾಡುತ್ತಿದ್ದಾರೆ. ಈ ಬದಲಾವಣೆಯು ಭಾರತದ ಜಾತ್ಯತೀತ ಧೋರಣೆಗೆ ವಿರುದ್ಧವಾಗಿದೆ ಎನ್ನುವದು ಅವರು ಕೊಡುವ ಕಾರಣವಾಗಿದೆ! ಇದರ ಅರ್ಥವೇನೆಂದರೆ ಭಾರತೀಯ ಸಂವಿಧಾನವು ಜಾತ್ಯತೀತತೆಯನ್ನು ಘೋಷಿಸಿದ ಕಾರಣದಿಂದಾಗಿ ಭಾರತೀಯರು ತಮ್ಮ ಪ್ರಾಚೀನ ಸಂಸ್ಕೃತಿಯನ್ನು ಅರಬ್ಬಿ ಸಮುದ್ರದಲ್ಲಿ ಬಿಸಾಕಿಬಿಡಬೇಕು. ಯಾಕೆಂದರೆ ಭಾರತವನ್ನು ತುರ್ಕರು ಹಾಗು ಪರ್ಶಿಯನ್ನರು ಆಕ್ರಮಿಸಿ, ಹಾಳುಗೆಡುವದಕ್ಕಿಂತ ಮೊದಲಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವದು ನಮ್ಮ ಸಂವಿಧಾನದ ಜಾತ್ಯತೀತ ಧೋರಣೆಗೆ ವಿರುದ್ಧವಾಗುತ್ತದೆ!

‘ಭೋಪಾಲ’ ನಗರದ ಮರುನಾಮಕರಣಕ್ಕೆ ಸಂಬಂಧಿಸಿದಂತೆ, ಫೆಬ್ರುವರಿ ೨೮ರಂದು ‘ಸಂಯುಕ್ತ ಕರ್ನಾಟಕ’ದಲ್ಲಿ ಪ್ರಕಟವಾದ ಸಮಾಚಾರವನ್ನು ಇಲ್ಲಿ ನೋಡಿರಿ:


ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ಅರೀಫ ಮಸೂದರ ಹೇಳಿಕೆಯನ್ನು ನೋಡಿದಿರಾ?: ‘ಮುನ್ನೂರು ವರ್ಷಗಳಿಂದಲೂ ಭೋಪಾಲ ಹಿಂದೂ-ಮುಸ್ಲಿಮ್ ಐಕ್ಯತೆಗೆ ಸಾಕ್ಷಿಯಾಗಿದೆ.

ಮುನ್ನೂರು ವರುಷಗಳ ಮೊದಲು ಭೋಪಾಲದಲ್ಲಿ ಹಿಂದು-ಮುಸ್ಲಿಮ್ ಐಕ್ಯತೆ ಇರಲಿಲ್ಲವೆಂದು ಇದರರ್ಥವೆ? ಏನೆ ಇರಲಿ, ನಾವೆಲ್ಲರೂ ಭಾರತೀಯರೇ ಆಗಿರುವಾಗ, ನಮ್ಮಲ್ಲಿಯೇ ಹಿಂದು ಮತ್ತು ಮುಸ್ಲಿಮ್ ಎಂದು ವಿಭಾಗಿಸಿ ಹೇಳುವ ಕಾರಣವೇನು? ‘ಒಡೆದು ಆಳುವ’ ಉದ್ದೇಶದಿಂದಲೇ ಈ ರಾಜಕಾರಣಿಗಳು ‘ಒಡೆದು ಹೇಳು’ತ್ತಿದ್ದಾರೆ. ಓರ್ವ ಹಿಂದು ಗೃಹಸ್ಥನ ನೆರೆಮನೆಯವನೂ ಸಹ ಹಿಂದುವೇ ಆಗಿದ್ದಾಗ ಅವರು ಐಕ್ಯದಿಂದ ಇದ್ದಾರೆ ಅಥವಾ ಜಗಳಾಡುತ್ತಾರೆ ಎಂದು ಯಾರೂ ಹೇಳುವದಿಲ್ಲ. ಆದರೆ ಈ ಹಿಂದೂ ಗೃಹಸ್ಥನ ನೆರೆಯವನು ಮುಸ್ಲಿಮ ಗೃಹಸ್ಥನಾಗಿದ್ದರೆ, ಅವರ ಬಾಂಧವ್ಯವನ್ನು ಹಿಂದು-ಮುಸ್ಲಿಮ್ ಐಕ್ಯವೆಂದು ಬಣ್ಣಿಸುವದರ ಮತ್ತು ಅವರು ಜಗಳವಾಡುತ್ತಿದ್ದರೆ ಅದನ್ನು ಹಿಂದು-ಮುಸ್ಲಿಮ್ ಸಮರವೆಂದು ಬಣ್ಣಿಸುವದರ ಹಿಂದಿನ ಉದ್ದೇಶವೇನು? ಅಥವಾ ಇದು ಮತ-ರಾಜಕೀಯದ ಜಾಣತನವೆ?  ಸ್ವತಂತ್ರ ಭಾರತದ ರಾಜಕಾರಣಿಗಳ ಇಂತಹ ರಾಷ್ಟ್ರಘಾತಕ ವೃತ್ತಿಯು ನಮಗೆಲ್ಲರಿಗೂ ತಿಳಿದದ್ದೇ ಆಗಿದೆ. ಆನೆಗಳ ದಂತಗಳ ಸಲುವಾಗಿ ವೀರಪ್ಪನ್ನನು, ಆನೆಗಳ ಕೊಲೆ ಮಾಡಲು ಹೇಸುತ್ತಿರಲಿಲ್ಲ. ಅದೇ ರೀತಿಯಲ್ಲಿ ತಮ್ಮ ದುರಾಸೆಗಾಗಿ ಈ ರಾಜಕಾರಣಿಗಳು  ಭಾರತವನ್ನು ತುಂಡು ತುಂಡು ಮಾಡಲು ಹೇಸಲಾರರು.

ಯಾರೀ ಭೋಜರಾಜ?:
ಭಾರತ ದೇಶದ ಮಹಾನ್ ರಾಜನಾದ ಭೋಜರಾಜನನ್ನು ‘ಯಾರೀ ಭೋಜರಾಜ?’ ಎಂದು ಕೇಳುವ ಮೂಲಕ ಮಸೂದರು ತಮ್ಮ ಅಜ್ಞಾನವನ್ನು ತೋರಿಸುತ್ತಿದ್ದಾರೆಯೊ ಅಥವಾ ತಮ್ಮ ಅಹಂಕಾರವನ್ನು ತೋರಿಸುತ್ತಿದ್ದಾರೆಯೊ ಅರ್ಥವಾಗುತ್ತಿಲ್ಲ. ಸಮಗ್ರ ವಿಶ್ವದ ಸಾರಸ್ವತ ಲೋಕವು ಪೂಜಿಸುತ್ತಿರುವ ಕವಿಕುಲಗುರು ಕಾಲಿದಾಸನ ಆಶ್ರಯದಾತನಾದ ಭೋಜರಾಜನು ಈ ರಾಜಕಾರಣಿಗೆ, ‘ಯಾರೀ ಭೋಜರಾಜ?’ ಆದನೆ? ಇವರ ಈ ಸೊಕ್ಕಿನ ಮಾತನ್ನು ಕೇಳಿದಾಗ, ’ಕಹಾಂ ರಾಜಾ ಭೋಜ, ಕಹಾಂ ಗಂಗೂ ತೇಲಿ?’ ಎನ್ನುವ ಗಾದೆಯನ್ನು  ’ಕಹಾಂ ರಾಜಾ ಭೋಜ, ಕಹಾಂ ಅರೀಫ ಮಸೂದ?’ ಎಂದು ಬದಲಾಯಿಸುವದೇ ಸಮಂಜಸವೆನಿಸುತ್ತದೆ.

‘ಪಾಲ ಅಥವಾ ಪಳ್ಳಿ’ ಪದವು ಸ್ಥಳನಿರ್ದೇಶಕವಾದದ್ದು. ‘ಭೋಜಪಾಲ’ ಅಂದರೆ ‘ಭೋಜ’ನ ‘ಪಾಲ’ ಅರ್ಥಾತ್ ಸ್ಥಳ. ಭೋಜಪಾಲದ ಬದಲಾಗಿ ಸೋನಿಯಾನಗರ ಎನ್ನುವ ಹೆಸರನ್ನು ಸೂಚಿಸಿದ್ದರೆ, ಮಸೂದರು ಕುಣಿಕುಣಿದು ಒಪ್ಪುತ್ತಿದ್ದರೇನೊ?

ನನಗೆ ದುಃಖವಾಗುವದು ಮಸೂದರು ತಮ್ಮ ಪರಂಪರೆಯನ್ನು ಅರಿತಿಲ್ಲವಲ್ಲ ಎನ್ನುವ ಕಾರಣಕ್ಕಾಗಿ. ಭೋಜರಾಜ ಹಾಗು ಕಾಲಿದಾಸರು ಕೇವಲ ಹಿಂದು ಧರ್ಮೀಯರ ಪೂರ್ವಜರಲ್ಲ. ಭಾರತದಲ್ಲಿ ಇದ್ದವರೆಲ್ಲರಿಗೂ ಅವರು ಪೂರ್ವಜರು. ಸ್ವಇಚ್ಛೆಯಿಂದಲೊ ಅಥವಾ ಬಲಾತ್ಕಾರದಿಂದಲೊ ನನ್ನ ಧರ್ಮ ಬದಲಾಗಿರಬಹುದು. ಹಾಗೆಂದು ನನ್ನ ಅಪ್ಪ, ಅಮ್ಮ ಬದಲಾಗುತ್ತಾರೆಯೆ? ನನ್ನ ಪರಂಪರೆ ಬದಲಾಗುತ್ತದೆಯೆ?

ರಾಜಕಾರಣಿಗಳನ್ನು ಬಿಡಿ. ಅವರು ಸ್ವಾರ್ಥಕ್ಕಾಗಿ ದೇಶವನ್ನೇ ಮಾರುತ್ತಿದ್ದಾರೆ. ಆದರೆ ಬುದ್ಧಿಜೀವಿ ಎಂದು ಸ್ವಯಂಘೋಷಣೆ ಮಾಡಿಕೊಳ್ಳುತ್ತಿರುವ ನಮ್ಮ ಸಾಹಿತಿಗಳೂ ಹೀಗೆ ಆಡುತ್ತಿದ್ದಾರಲ್ಲ! ಜ್ಞಾನಪೀಠಸ್ಥ ಅನಂತಮೂರ್ತಿಯವರ ಅಭಿಪ್ರಾಯದಲ್ಲಿ ಭಾರತವು ಅನೇಕ-ಸಂಸ್ಕೃತಿಯ ರಾಷ್ಟ್ರವಾಗಿದೆ. ಭಾರತೀಯರ ಆಚಾರಗಳಲ್ಲಿ ವೈವಿಧ್ಯವಿರಬಹುದು; ಆದರೆ ಇದು ‘ಅನೇಕ-ಸಂಸ್ಕೃತಿ’ ಹೇಗಾಗುತ್ತದೆ ಎನ್ನುವದು ನನಗೆ ತಿಳಿಯಲಾರದಾಗಿದೆ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಕರಾವಳಿಯ ಕನ್ನಡವೇ ಬೇರೆ, ಕಲಬುರ್ಗಿಯ ಕನ್ನಡವೇ ಬೇರೆ. ಮೈಸೂರಿನವರು ರಾಗಿಮುದ್ದೆ ತಿಂದರೆ, ವಿಜಾಪುರದವರು ಜೋಳದ ರೊಟ್ಟಿಯನ್ನು ತಿನ್ನುತ್ತಾರೆ. ಹಾಗಾದರೆ, ಇವರೆಲ್ಲರ ಸಂಸ್ಕೃತಿ ಬೇರೆ ಬೇರೆಯೆ? ಸಂಸ್ಕೃತಿ ಬೇರೆ ಬೇರೆಯಾಗಿದ್ದರೆ, ಕವಿಕುಲಗುರು ಕಾಳಿದಾಸನು ಭಾರತವನ್ನು ‘ಆಸೇತುಹಿಮಾಚಲ’ ಎಂದು ಬಣ್ಣಿಸುತ್ತಿದ್ದನೆ? ಇಂತಹ ಕವಿಗೆ ಆಶ್ರಯದಾತನಾದ ಭೋಜರಾಜನಿಗೆ ಇಂದು ತನ್ನ ಸಾಮ್ರಾಜ್ಯದ ರಾಜಧಾನಿಯಲ್ಲಿಯೇ ಅವಮಾನವಾಗುತ್ತಿದೆ, ಜಾತ್ಯತೀತತೆಯ ಹೆಸರಿನಲ್ಲಿ!

ನಮ್ಮ ಪರಂಪರೆಯನ್ನು ಕುರುಡು ರೀತಿಯಲ್ಲಿ ಅನುಸರಿಸಬೇಕೆಂದು ನಾನು ಹೇಳುತ್ತಿಲ್ಲ. ಪ್ರತಿಯೊಂದು ಧರ್ಮದಲ್ಲಿ, ಪ್ರತಿಯೊಂದು ಸಂಸ್ಕೃತಿಯಲ್ಲಿ ಒಳ್ಳೆಯ ಹಾಗು ಕೆಟ್ಟ ಅಂಶಗಳು ಇದ್ದೇ ಇರುತ್ತವೆ. ಈ ಕೆಟ್ಟ ಅಂಶಗಳನ್ನು, ಅವು ಯಾವ ಧರ್ಮ ಹಾಗು ಯಾವ ಪ್ರದೇಶದ್ದೇ ಆಗಿರಲಿ, ವಿರೋಧಿಸುವ ಧೈರ್ಯ ಪ್ರತಿಯೊಬ್ಬ ಭಾರತೀಯನಿಗೂ ಬರಬೇಕು. ಅದರಂತೆ ಭಾರತದ ಶ್ರೇಷ್ಠ ಪರಂಪರೆಯನ್ನು ತನ್ನದು ಎನ್ನುವ ಅಭಿಮಾನವೂ ಆತನಿಗಿರಬೇಕು. ಇಂತಹ ಧೈರ್ಯವನ್ನು ತೋರಿಸಲು ಯಾವ ‘ಜಾತ್ಯತೀತ’ ರಾಜಕಾರಣಿಯೂ ಸಿದ್ಧನಿಲ್ಲ; ಇಂತಹ ಅಭಿಮಾನವನ್ನು ತೋರಿಸಲು ಯಾವ ‘ಬುದ್ಧಿಜೀವಿ’ಯೂ ಸಿದ್ಧನಿಲ್ಲ!

27 comments:

ಅನಿಲ್ ಬೇಡಗೆ said...

ಸುನಾಥ್ ಕಾಕಾ, ನಮಸ್ತೆ.
ನನಗ ಇಂತಹ ವಿಷಯಗಳು ಭಾಳ ಬ್ಯಾಸರ ತರ್ತಾವ.
ಭಾಳ್ ಸಲ ಹಿರಿಯರ ಅನ್ತಿರತಾರ, ಈಗಿನ ಯುವಜನ ಸರಿ ಇಲ್ಲ.
ಸಂಸ್ಕಾರ ಇಲ್ಲ..ಹಂಗ-ಹೀಂಗ..
ಆದ್ರ, ಕೆಲವು ಹಿರಿಯರೇ ಕಚ್ಯಾಡ್ಕೊಂಡು-ಕಿತ್ಯಾಡ್ಕೊಂಡು ಇದ್ರ ಕಿರಿಯರು ಏನ್ ಕಲಿಬೇಕು..?
ಎಲ್ಲ ತಮ್ಮ-ತಮ್ಮ 'ಮತಪಾತ್ರೆ' ತುಂಬು ಸಲುವಾಗಿ ಏನೇನು ಬೇಕು ಎಲ್ಲಾ ಮಾಡ್ತಾರ, ಉಳಿದವರು ತಮ್ಮ ಹೆಸ್ರ-ಪ್ರತಿಷ್ಟ ಸಲುವಾಗಿ ಮಾಡ್ತಾರ.
ಒಳ್ಳೆದಕ್ಕಿಂತ-ಕೆಟ್ಟದ್ದು ಜಲ್ದಿ ಪ್ರಭಾವ ಬಿರ್ತದ ಅಂತ ನನ್ನ ಅನಿಸಿಕೆ.

ಮತ್ತ ನೀವು ಭಾಷ ಬಗ್ಗೆ ಚ್ಹೊಲೋ ಮಾತ್ ಹೇಳಿದ್ರಿ,
ಕಾಕಾ. ನಾ ಗುಲ್ಬರ್ಗದಿಂದ ಬಂದ ಹೊಸದರಲ್ಲಿ,
ಬೆಂಗಳುರಿನ್ಯಾಗ ಒಂದು ನನ್ನ ಅನುಭವ; "ನಿಮ್ಮ ಭಾಷೆ ಕಷ್ಟ ಕಣ್ರೀ, ಆದ್ರೆ ಕೇಳೋದಕ್ಕೆ ಚೆನ್ನಾಗಿರುತ್ತೆ" ಅಂದ್ರು..!
ನಾ ಕೇಳಿದೆ, ಯಾವ ಭಾಷೆ..?
ಅವರು ಮಾತಾಡಿದ್ದು- ನಾನು ಮಾತಾಡಿದ್ದು ಕನ್ನಡದಲ್ಲೇ..!
ಮತ್ತ ನಾ ಹೇಳ್ದೆ, ಮಾತಿನ ಶೈಲಿ ಬೇರೆ ಇದೆ, ಭಾಷೆ ಒಂದೇ.! 'ಕನ್ನಡ'.
--
ಕಾಕಾ, ನಾ ಸಣ್ಣವಾದಿನಿ. ನನ್ನ ಕಾಮೆಂಟ್ ನಾಗ ಏನಾರ ತಪ್ಪ ಅನ್ಸಿದ್ರ ಕ್ಷಮಿಸ್ರಿ.

-ಪ್ರೀತಿ ಬೆಳೆಯಲಿ
ಅನಿಲ್.

Ittigecement said...

ಸುನಾತ ಸರ್...

ನಮ್ಮ ಸಂಸ್ಕೃತಿಯ ಬಗೆಗೆ ಹೆಮ್ಮೆ ಪಟ್ಟುಕೊಂಡರೆ "ಕೋಮುವಾದ" ಆಗಿಬಿಡುತ್ತದೆ..
ಇದು ನಿಜಕ್ಕೂ ಬೇಸರ ತರುತ್ತದೆ..

ಬೆಂಗಳೂರಿನ ಬಗೆಗೆ ನೀವು ಹೇಳಿದ್ದು ನನಗೆ ಹೊಸದು..
ನಾನು "ಬೆಂದಕಾಳೂರು" ಬೆಂಗಳೂರು ಆಗಿದೆ ಅಂತ ಅಂದು ಕೊಂಡಿದ್ದೆ..

ಧನ್ಯವಾದಗಳು ಸರ್...

PARAANJAPE K.N. said...

ಯಾರೀ ಭೋಜರಾಜ ? ಎ೦ದು ಪ್ರಶ್ನಿಸಿದ ಆರೀಪ್ಹ್ ಮಸೂದ್ ಅಥವಾ ಧರ್ಮಾತೀತವಾಗಿ ಅವನ೦ತಹ ಮನಸ್ಥಿತಿಯ ರಾಜಕಾರಣಿಗಳಿಗೆ ದೇಶದ ಪರ೦ಪರೆ, ಸ೦ಸ್ಕ್ರತಿ ಬಗ್ಗೆ ಕಿ೦ಚಿತ್ತೂ ಕಾಳಜಿ ಇಲ್ಲ. ಇನ್ನು ನಮ್ಮ ಜ್ಞಾನಪೀಠಸ್ಥರಿಗೆ, ಬುದ್ಧಿ ಜೀವಿಗಳೆ೦ದು ಕರೆಸಿಕೊಳ್ಳುವವರಿಗೆ ಅದೇನಾಗಿದೆಯೋ, ಅವರ್ಯಾರೂ ನ೦ಬದ ಆ ದೇವನೇ ಬಲ್ಲ. ಇವತ್ತಿನ ಸ೦ದರ್ಭ ದಲ್ಲಿ "ಜಾತ್ಯಾತೀತ" ಎ೦ಬ ಪದ ಅರ್ಥ ಕಳೆದುಕೊ೦ಡಿದೆ. ಇಲ್ಲಿ ಅತೀತರಾದವರು ಯಾರೂ ಇಲ್ಲ. ಎಲ್ಲರೂ ಜಾತಿ-ಜನಾ೦ಗ ಗಳ ಓಲೈಕೆಯಿ೦ದ ತಮ್ಮ ಬೇಳೆ ಬೇಯಿಸಿ ಕೊಳ್ಳಲು ಇಲ್ಲವೇ ಸದಾ ಪ್ರಚಾರದಲ್ಲಿರಲು ಸಾಧ್ಯವಾಗಿದೆ. ನಿಮ್ಮ ಲೇಖನದ ಆಶಯಕ್ಕೆ ನನ್ನ ಸಹಮತವಿದೆ.

ಮನಸು said...

ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಏನಾದರೊಂದು ಕಾರಣ ಹುಡುಕುತ್ತಲೇ ಇರುತ್ತಾರೆ.

ಆಡಿಕೊಳ್ಳುವ ಬಾಯಿಗೆ ಏನಾದರು ಬೇಕಲ್ಲ ಈಗ ಸಿಕ್ಕಿದೆ ಅದಕ್ಕೆ ಉಪಯೋಗಿಸಿಕೋತಾ ಇದ್ದಾರೆ. ನಮ್ಮ ಸಂಸ್ಕೃತಿ ಉಳಿಯುವಂತ ಕಾರ್ಯಗಳನ್ನು ಮಾಡುವವರು ವಿರಳ.

ನೀವು ಹೇಳಿದಂತೆ ಬುದ್ಧಿಜೀವಿ ಎನಿಸಿಕೊಂಡವರೂ ಇದೇ ಹಾದಿಯಲ್ಲಿ ನಡೆಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ....

ತೇಜಸ್ವಿನಿ ಹೆಗಡೆ said...

ಇಂತಹವರಿಂದ ಇನ್ನೆಂತಹ ಉತ್ತರ ನಿರೀಕ್ಷಿಸಬಹುದು? ಭೂಭಾರಕ್ಕೆ ಉತ್ತಮ ಉದಾಹರಣೆ ಇಂತಹವರು..!

ಚುಕ್ಕಿಚಿತ್ತಾರ said...

ಕಾಕ ನೀವು ಹೇಳಿದ್ದು ತು೦ಬಾ ಸರಿಯಾಗಿದೆ.
ಮತ್ತು ಆ ಪುಣ್ಯಾತ್ಮರು ಹೇಳಿದ್ದು ಮತಪ್ರಜ್ಞೆಯ ದ್ಯೋತಕವೇ ಆಗಿದೆ....!

ಮನಮುಕ್ತಾ said...

ಸುನಾಥ್ ಕಾಕಾ,
ನಿಜಕ್ಕೂ ಬೇಸರದ ಸ೦ಗತಿ.. :(

’ಬೆ೦ಗಳೂರು’ ಹೆಸರಿನ ಬಗ್ಗೆ ಇಷ್ಟೊ೦ದು ವಿಚಾರಗಳು ತಿಳಿದಿರಲಿಲ್ಲ..
ಧನ್ಯವಾದಗಳು.

sunaath said...

ಅನಿಲರೆ,
ನೀವು ಹೇಳಿದ್ದು ಬರೋಬರ್ ಅದ. ನಮ್ಮೆಲ್ಲರ ಮಾತು ಕನ್ನಡನs ಆಗೇದ. ಆದರ ಶೈಲಿ ಬ್ಯಾರೆ, ಬ್ಯಾರೆ! ಇನ್ನು ಈಗಿನ ಭಾರತವನ್ನ ನೋಡಿದರ, ಹಿರಿಯರೆಲ್ಲಾ ದಾರಿ ತಪ್ಯಾರ ಅಂತ ಅನಸ್ತದ. ಕಿರಿಯರs ಹಿರಿಯರಕಿಂತಾ ಸರಿಯಾದ ವಿಚಾರಮಾರ್ಗದಾಗ ನಡದಾರ ಅಂತ ಅನಸ್ತದ.

sunaath said...

ಪ್ರಕಾಶ,
‘ಬೆಂದಕಾಳೂರು’ ಪದದಿಂದ ‘ಬೆಂಗಳೂರು’ ಎನ್ನುವ ಹೆಸರು ಬಂದsದ ಅಂತ ಒಂದು ದಂತಕತೆ ಅದ. ಜನರೆಲ್ಲ ಈ ರೋಮಾಂಚಕ ಕತೆಯನ್ನ ನಂಬಿಕೊಂಡು ನಡದಾರ. ಆದರ ‘ವೆಂಕ’ ಮತ್ತು ‘ಬೆಂಗ’ ಹೆಸರಿನಿಂದ ಪ್ರಾರಂಭವಾಗುವ ೧೩ ಊರು ಕರ್ನಾಟಕದಾಗ ಅವ. ಕರ್ನಾಟಕದ ಹೊರಗೂ ಸಹ ಅವ. ಉದಾಹರಣೆಗೆ ದಿವಂಗತ ಪ್ರಧಾನಿಯವರ ಹೆಸರಿನಲ್ಲಿ ಬರುವ ‘ವೆಂಗಲ್’ ಇದು ಆಂಧ್ರಪ್ರದೇಶದಲ್ಲಿ ಬರುವ ಊರು. ವೆಂಕಕಲ್ಲು ಅನ್ನೋ ಹೆಸರು ವೆಂಗಲ್ ಆಗೇದ. ಕನ್ನಡ ಜಿಲ್ಲೆಯೊಳಗ ಇರುವ ಬೇಂಗ್ರೆ ಎನ್ನೋ ಊರು ಸಹ ವೆಂಕ ಪದದಿಂದಲೇ ಬಂದದ.

sunaath said...

ಪರಾಂಜಪೆಯವರೆ,
ಈಗಿನ ರಾಜಕಾರಣಿಗಳಿಗೆ ಗೊತ್ತಿರುವದು ಕೊಳ್ಳೆ ಹೊಡೆಯುವ ಸಂಸ್ಕೃತಿ. ಈಗಿನ ಬುದ್ಧಿಜೀವಿಗಳಿಗೆ ಗೊತ್ತಿರುವದು polish ಹೊಡೆಯುವ ಸಂಸ್ಕೃತಿ!

sunaath said...

ಮನಸು,
ರಾಜಕಾರಣಿಗಳು ಗೊಂದಲ ಎಬ್ಬಿಸಲು ಏನಾದರೂ ಹುಡುಕುತ್ತಲೇ ಇರುತ್ತಾರೆ. ಹಾಗೆಂದು ಅವರು ನಮ್ಮ ಸಂಸ್ಕೃತಿಗೆ ಅಪಚಾರ ಮಾಡುತ್ತಿರುವದಕ್ಕೆ ಬೇಸರವಾಗುತ್ತಿದೆ.

sunaath said...

ತೇಜಸ್ವಿನಿ,
ನೀವು ಹೇಳಿದ್ದು ಸರಿ. ಕಳ್ಳರಿಂದ ಒಳ್ಳೆಯತನವನ್ನು ಅಪೇಕ್ಷಿಸಬಹುದೆ?

sunaath said...

ವಿಜಯಶ್ರೀ,
ಪ್ರಧಾನಿಯಿಂದ ಪ್ರಾರಂಭಿಸಿ ಗ್ರಾಮಪಂಚಾಯತಿಯ ಸದಸ್ಯನವರೆಗೂ ಮತರಾಜಕಾರಣಕ್ಕೇ ಪ್ರಾಧಾನ್ಯ ಸಿಕ್ಕಿದೆ. ನಮ್ಮದು ಪ್ರಜಾಪ್ರಭುತ್ವ ಅಲ್ಲ; ಮತಪ್ರಭುತ್ವ!

sunaath said...

ಮನಮುಕ್ತಾ,
ಬೆಂಗಳೂರು ಪದವು ಬೆಂದಕಾಳೂರು ಪದದಿಂದ ಬಂದಿದೆ ಎನ್ನುವ ರೋಚಕ ದಂತಕಥೆ ನಿಮಗೆ ಗೊತ್ತಿರಬಹುದು. ಆದರೆ, ವೆಂಕಟೇಶ ದೇವರು ದಕ್ಷಿಣ ಭಾರತದ ಅನೇಕ ಜನಾಂಗಗಳಿಗೆ, ಮನೆತನಗಳಿಗೆ ಕುಲದೈವವಾಗಿದ್ದಾನೆ. ಅನೇಕ ಹಳ್ಳಿಗಳಿಗೆ ಅವನ ಹೆಸರನ್ನೇ ಕೊಡಲಾಗಿದೆ.

Ashok.V.Shetty, Kodlady said...

ಸುನಾಥ್ ಸರ್,

'ಬೆಂಗಳೂರು' ಈ ಹೆಸರು ಬಂದ ಬಗ್ಗೆ ಇಷ್ಟೊಂದು ಮಾಹಿತಿ ತಿಳಿದಿರಲಿಲ್ಲ, ವಿವರಕ್ಕಾಗಿ ಧನ್ಯವಾದಗಳು. ಇನ್ನು ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು ಅನ್ನಿಸುತ್ತೆ, ತಮ್ಮ ಸ್ವಾರ್ಥ ಸಾಧನೆಗಾಗಿ ಎಂತಹ ಹೀನ ಮಟ್ಟಕ್ಕೂ ಇಳಿಯುವ ಇಂತ ಹೊಲಸು ರಾಜಕಾರಣಿಗಳ ಕಾರಣದಿಂದಲೇ ನಮ್ಮ ದೇಶದ ಪರಿಸ್ಹ್ಥಿತಿ ಈ ರೀತಿ ಇರುವುದಲ್ಲವೇ ?

hamsanandi said...

ಸುನಾಥರೆ,

ವೆಂಕಳೂರಿನಿಂದ ಬೆಂಗಳೂರು ಬಂದಿರಬಹುದೆಂಬುದು ಒಂದು ಊಹೆ ಅಲ್ಲವೇ? ಏಕೆಂದರೆ, ಆ ಹೆಸರು ಎಲ್ಲೂ ದಾಖಲಾಗಿಲ್ಲ. ಕ್ರಿ.ಶ.೮೫೦(?)ರ ಬೇಗೂರು ಶಾಸನದಲ್ಲೂ ಬೆಂಗ(ಗು?)ಳೂರು ಎಂದೇ ಇದೆ. ಈ ವಿಷಯವನ್ನ ನಿಮ್ಮ ಹಿಂದಿನ ಬರಹವೊಂದರಲ್ಲಿ ಚರ್ಚಿಸಿದ ನೆನಪು.

-ಹಂಸಾನಂದಿ

sunaath said...

ಅಶೋಕ,
ನಮ್ಮ ರಾಜಕಾರಣಿಗಳ ಬಗೆಗೆ ಮಾತನಾಡದಿರುವದೇ ಲೇಸು!

sunaath said...

ಹಂಸಾನಂದಿಯವರೆ,
ಬೆಂಗಳೂರು ಇದು ವೆಂಕಳೂರಿನಿಂದ ಬಂದಿದೆ ಎನ್ನುವದು ಊಹೆ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ಇದು ತರ್ಕಬದ್ಧ ಊಹೆ ಎಂದು ನನ್ನ ಅನಿಸಿಕೆ. ಹಾಗೆ ನೋಡಿದರೆ ನಮ್ಮ ಎಲ್ಲ ಸಂಶೋಧಕರ ಅನುಮಾನಗಳು ಊಹೆಗಳೇ ತಾನೆ?

ಪ್ರವೀಣ್ ಭಟ್ said...

Hmm .. idu poorna votina rajakaranavaste.. alpasankyatara olaisuvike .. namma nammale kichchu hachchi adaralli bele beyisikolluva pravruttiyavaru ...

rajakeeyavendare ravana keechaka yama jarasandha.. yavaga badalagutoo...

Dhanyavaada
Pravi

sunaath said...

ಪ್ರವೀಣ,
ಹೊಣೆಗಾರಿಕೆಯಿಲ್ಲದ ರಾಜಕಾರಣಿಗಳು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದೆನಿಸುತ್ತದೆ.

ಅನಂತ್ ರಾಜ್ said...

bhojapala mathu bengalooru, eradoo hesarugala moolavannu tilisi vicharapoorita lekhanavannu saadarapadisidderi. tumba vishyagalu tilidavu... haageye "aane nadedadde daari.." ennuva rajakaarani / budhijeevigala bagge jigupse huttuttade..

ananth

ಜಲನಯನ said...

ಸುನಾಥಣ್ಣ....ಎಲ್ಲಾ ಬರೀ ವ್ಯರ್ಥ ಪ್ರಯತ್ನಗಳು...ರಾಜಕಾರಣಿಗಳ ವಂಚನಾ ಮತ್ತು ವಿಭಜನಾ ನೀತಿಯ ಚರ್ಯೆಗಳು...ಇದೇ ಪ್ರಯತ್ನದ ದಿಶಾಬದಲಾವಣೆ ದೇಶ ಪ್ರಗತಿ, ರಾಜಕಾರಣಿಗಳ ದುರಸ್ತಿ ಮತ್ತು ಚಂಚಕೋರರ ದಮನಕ್ಕೆ ಬಳಸಿದರೆ ಎಲ್ಲಾ ತಂತಾನೆ ಹಾದಿಗೆ ಬರುತ್ತೆ,,,
ಇದು ನನ್ನ ಅನಿಸ್ಕೆ ಅಷ್ಟೇ...ನನಗೆ ನನ್ನ ಧರ್ಮ ಮನೆಯ ಮಟ್ಟಿಗೆ ನನ್ನ ಆಚಾರಕ್ಕೆ ನಮ್ಮವರೊಂದಿಗೆ ವಿಚಾರಕ್ಕೆ...ಸಮಾಜದಲ್ಲಿ ಅದರ ಪಾತ್ರ ಕಡಿತವಾಗಬೇಕು,,,ಇನ್ನು ರಾಜ- ರಾಜಕಾರಣ ಸರ್ವಜನ ಕಲ್ಯಾಣದಲ್ಲಿ ಬರಲೇಬಾರದು...ಈ ಸ್ತರಗಳಲ್ಲಿ ದೇಶದ ಪ್ರಗತಿ ಪ್ರಮುಖವಾಗಬೇಕು.
ತಪ್ಪಿದ್ದರೆ ಕ್ಷಮಿಸಿ.

sunaath said...

ಅನಂತರಾಜ,
ಬೆಂದಕಾಳೂರು=ಬೆಂಗಳೂರು ಎನ್ನುವದು ಒಂದು ರೋಚಕ ದಂತಕಥೆ. ನಮ್ಮ ಜನರು ತರ್ಕಕ್ಕಿಂತ ರೋಚಕತೆಗೆ ಮರಳಾಗುತ್ತಾರೆ. ಇದರಂತೆಯೆ ಭೋಜರಾಜನು ಪಾಲಿಸಿದ ಅಂದರೆ ರಕ್ಷಣೆಗಾಗಿ ಕಟ್ಟಿಸಿದ ಕಟ್ಟೆ ಅಥವಾ ತಡೆಗೋಡೆಯಿಂದಾಗಿ, ಭೋಜಪಾಲ ಎನ್ನುವ ಹೆಸರು ಬಂದಿತು ಎಂದು ಹೇಳುವವರೂ ಇದ್ದಾರೆ.

sunaath said...

ಜಲನಯನ,
ನೀವು ಹೇಳುತ್ತಿರುವದು ಅತ್ಯಂತ ಸಮರ್ಪಕವಾದ ಮಾತು. ಆದರೆ ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವದು ಮತ-ರಾಜಕೀಯ ಹಾಗು ಲಂಚ-ರಾಜಕೀಯ. ಕರ್ನಾಟಕದಲ್ಲಿಯೇ, ನಮ್ಮ ಶಾಸಕರು ಸ್ವಾರ್ಥಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರಾಟ ನಡೆಸಿದ್ದು ಜುಗುಪ್ಸೆಯ ಸಂಗತಿ.
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಕ್ರಿಯೆಗಳನ್ನು ನೋಡಿದಾಗ, ಭರವಸೆಯ ಮಿಣುಕು ದೀಪ ಕಾಣುತ್ತದೆ!

V.R.BHAT said...

ಲೇಖನ ವಾಸ್ತವಿಕತೆಗೆ ಹಿಡಿದ ಕನ್ನಡಿ, ಇವತ್ತಿನ ಧೂರತ ರಾಜಕಾರಣಿಗಳಿಗೇನು ಗೊತ್ತು ಇತಿಹಾಸ-ಪುರಾಣ?

Digwas Bellemane said...

sunath sir...ನಿಜವಾದ ವಿಷಯವನ್ನೆ ಬರೆದಿದ್ದೀರ.

ಶಿವಪ್ರಕಾಶ್ said...

ಜಾತ್ಯತೀತ ಎನ್ನುವ ಹೆಸರಿನಲ್ಲೇ ಜನರನ್ನು ವಿಂಗಡಿಸುವವರು ನಮ್ಮಲ್ಲೇ ಹೆಚ್ಚಾಗಿಬಿಟ್ಟಿದ್ದಾರೆ.... !!!