ಆ ಆಲದ ಮರದ ಬೇರೆ ಬೇರೆ ಟೊಂಗೆಗಳಿಗೆ ಬೇರೆ ಬೇರೆ ಜಿಲ್ಲೆಯ ಹೆಸರುಗಳನ್ನು ಬರೆದು, ನೂರಾರು ನೇಣುಗಳನ್ನು ಜೋತು ಬಿಟ್ಟಿದ್ದರು. ಪಕ್ಕದಲ್ಲಿ ಒಂದು ಫಲಕವಿತ್ತು.
WORLD TRADE ORGANIZATION
ಭಾರತೀಯ ರೈತರಿಗಾಗಿ ಜಾಗತಿಕ ವ್ಯವಹಾರ ಸಂಸ್ಥೆಯ ಕೊಡುಗೆ
ಪ್ರಧಾನಿ ಮಮೋ ಸಿಂಗರ ಹೆಮ್ಮೆಯ ಯೋಜನೆ
ನಶೀಬು ಎಂದರೆ ಇದು! ಕರ್ಣಪಿಶಾಚಿಗೆ ಖುಶಿಯೋ ಖುಶಿ! ಅರಸುತಿಹ ಉರುಳ್ ಕೊರಳ್ಗೆ ತೊಡರಿತು! ಆಯಿತು, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ಆತ್ಮಹತ್ಯೆ ಮಾಡಿಕೊಳ್ಳೋಣ ಎಂದುಕೊಂಡು ಕರ್ಣಪಿಶಾಚಿಯು, ಆಲದ ಮರದ ಕಟ್ಟೆಯ ಮೇಲೆ ಒರಗಿಕೊಂಡಿತು.
ಕರ್ಣಪಿಶಾಚಿಯ ಕಣ್ಣುಗಳು ಮುಚ್ಚಲಾರಂಭಿಸಿದವು. ಅಷ್ಟರಲ್ಲಿ ದೂರದಿಂದ ಒಂದು ರೋದನದ ದನಿ ಕೇಳಲಾರಂಭಿಸಿತು. ಕ್ರಮೇಣ ಆ ದನಿ ಹತ್ತರಕ್ಕೆ ಬಂದಿತು. ಒಬ್ಬಳು ಅಂಗವಿಕಲೆಯಾದ ಮುದುಕಿ. ಮೈಯಲ್ಲಿ ಅಲ್ಲಲ್ಲಿ ಸೋರಿದ ರಕ್ತ ಹೆಪ್ಪುಗಟ್ಟಿದೆ. ಕರ್ಣಪಿಶಾಚಿಯಲ್ಲಿ ಕನಿಕರ ಹಾಗು ಕುತೂಹಲ ಮೂಡಿದವು. ಇವರೀರ್ವರ ನಡುವಿನ ಸಂಭಾಷಣೆ ಹೀಗಿದೆ:
ಕ.ಪಿ: ಯಾರು ಬಂದವರಿಲ್ಲಿ? ತಾಯಿ, ಎಂದೆ.
ಮುದುಕಿ: ಯಾರು ಕೇಳುವರೆನಗೆ ಯಾಕೆ, ತಂದೆ?
ಕ.ಪಿ: ಬೇಸರದ ದನಿ ಏಕೆ, ಹೆಸರ ಹೇಳಲ್ಲ.
ಮುದುಕಿ: ಕನ್ನಡಾಂಬೆಯು ಎನಲು ನಂಬುವವರಿಲ್ಲ!
ಕರ್ಣಪಿಶಾಚಿಗೆ ಆಶ್ಚರ್ಯ ಹಾಗು ಖುಶಿ ಒಟ್ಟಿಗೆ ಆದವು. ಕೊನೆಗೂ ಒಬ್ಬಳು ಮಹಾಸುಳ್ಳಿ ಸಿಕ್ಕಳು.
ಎತ್ತಣ ಕನ್ನಡ ಭುವನೇಶ್ವರಿ, ಎತ್ತಣ ಈ ವಿಕಲಾಂಗ ಮುದುಕಿ?
ಕ.ಪಿ: ಹಹ್ಹಹ್ಹಾ ಮುದುಕಿ! ನನಗೂ ನಿನ್ನಂಥ ಸುಳ್ಳಿಯೇ ಬೇಕಾಗಿದ್ದಳು. ಛಲೋ ಆತು ನೀ ಸಿಕ್ಕದ್ದು.
ಮುದುಕಿ: ನಾ ಖರೇ ಹೇಳ್ತಾ ಇದ್ದೇನೊ, ಬಾಳಾ. ಸಾವಿರ ವರ್ಷ ನಾ ಛಂದಾಗಿ ಬಾಳಿದಾಕಿ. ಐಲಿ ಕಡೆ ನನ್ನ ಸ್ಥಿತಿ ಹಿಂಗಾಗೇದ, ನೋಡು.
ಕ.ಪಿ: ವಾಹ್ ರೆ, ಹೀರೊಯಿನ್! ಚಡ್ಯೂರಪ್ಪನವರು ‘Statue of Liberty’ ತರಹ ಕನ್ನಡ ಭುವನೇಶ್ವರಿಯ ಮೂರ್ತಿಯನ್ನು ನಿಲ್ಲಸ್ತಾರಂತ. ನೀನs ಅಲ್ಲಿ model ಆಗಿ ಹೋಗು.
ಮುದುಕಿ: ಹಾ! ವಿಧಿಯೇ!
ಮಕ್ಕಳಿವರೇನಮ್ಮ, ಮಕ್ಕಳಿವರು?
ಪಕ್ಕೆಲವುಗಳನೆಲ್ಲ ಕತ್ತರಿಸುತಿಹರು!
ರೆಕ್ಕೆಗಳನೆಲ್ಲ ತರಿದು ಹಾಕಿಹರು!
ಬಿಕ್ಕೆ ಬೇಡುವ ಸ್ಥಿತಿಯು ನನ್ನದಾಗಿಹದು!
ಕ.ಪಿ: ಗುಬ್ಬಿ ವೀರಣ್ಣಾರ ನಾಟಕ ಕಂಪನಿ ಒಳಗ ಇದ್ದೇನಬೆ, ಮುದುಕಿ? ಬೆಷ್ಟ ಯಾಕ್ಟ್ರೆಸ್ ಇದ್ದೀ ನೋಡು.
ಮುದುಕಿ: ಆರು ಕೋಟಿ ಕನ್ನಡಿಗರ ಮೇಲಾಣೆ! ಘೋಟಾಳ್ ನಾಗರಾಜರ ಬೋಳುತಲೆಯ ಮೇಲಾಣೆ! ಸತ್ಯವನ್ನೇ ಹೇಳ್ತಾ ಇದ್ದೀನಿ: ನಾನೇ ಕನ್ನಡ ಭುವನೇಶ್ವರಿ!
ಕ.ಪಿ: ನೀ ಖರೇ ಹೇಳ್ತಿ ಅಂತ ನಂಬೋದು ಹ್ಯಾಂಗ? ನಿನ್ನ ಮೊಂಡು ಕೈ, ಮೊಂಡು ಕಾಲು ಇವೆಲ್ಲಾ ಖರೇನ ಮೊಂಡಾಗಿದ್ದೊ? ಅಥವಾ ಇದು ನಿನ್ನ ಧಂಧೇನೊ?
ಮುದುಕಿ: ಬಾಳಾ, ನಾ ಖರೇ ಹೇಳಿದರೂ ನೀ ನಂಬೂದುಲ್ಲಾ, ನಾ ಸುಳ್ಳು ಹೇಳಿದರೂ ನಂಬೂದುಲ್ಲಾ! ಹೇಳಿ ಯಾನ ಮಾಡೂದದ?
ಕ.ಪಿ: ನೋಡು ಮುದುಕಿ. ಒಬ್ಬನರ ಸುಳ್ಳ ಅಥವಾ ಸುಳ್ಳಿ ನನಗ ಸೂರ್ಯೋದಯ ಆಗೋದರ ಒಳಗ ಸಿಗಲಿಲ್ಲಾ ಅಂದರ, ನಾ ಉರಲು ಹಾಕ್ಕೋ ಬೇಕಾಗ್ತೈತಿ. ನಿನ್ನ ಜಾತಕಾ ನೀ ತೋರಸು. ಯಾಂಬಲ್ಲಾ, ಫಾಯದೇ ಆದರೂ ಅದೀತು!
ಮುದುಕಿ: ಹಾಂಗಾದರ ಕೇಳು. ಕತೆ ಹೇಳುವೆ, ನನ್ನ ಕತೆ ಹೇಳುವೆ!
(ಮುದುಕಿಯ ಕತೆ, ಮುಂದಿನ ಸಂಚಿಕೆಯಲ್ಲಿ!)
24 comments:
tumbaa chennagi sambhashane henediddiri sir... mana kalakuvantide
ಧನ್ಯವಾದಗಳು, ಚಂದ್ರಿಕಾ ಅವರೆ.
ಕನ್ನಡದ ಸದ್ಯದ ಸ್ಥಿತಿಯು ಮನ ಕರಗುವಂತಿಯೇ ಇದೆ!
ಸುನಾಥ್ ಬಾಬಾ, ನಮಸ್ತೆ.
(ನಾ ನಿಮಗ ಕಾಕಾ ಅನ್ಲೋ ಬಾಬಾ ಅನ್ಲೋ ಅಂತ ಕನ್ಫುಸ್ಯನ್ ಇತ್ತು. ನನ್ನ ದೊಡ್ಡಪ್ಪನ ಹಂಗೇ ಇದಿರಿ. ಅದಕ್ಕೆ ಬಾಬಾ.) :)
ನಿಮ್ಮ ಹಿಂದಿಂದ ಪೋಸ್ಟಿಗೆ ಒಂದು ದೊಡ್ಡ ಕಾಮೆಂಟ್ ಹಾಕಿದ್ದೆ.
ಈ ಸಲ ಓದಿ ಯಾಕೋ ಬ್ಯಾಸರ ಆಗ್ಯದ.
ಮನಕಲಕದಂಗ ಆಯ್ತು..!
A-NIL,
ನೀವು ನನಗ ಕಾಕಾ ಅಂತ ಕರದರೂ ಸಂತೋಷ; ಬಾಬಾ ಅಂದರ ಮತ್ತಷ್ಟು ಸಂತೋಷ. ಯಾಕಂದರ ಬಾ,ಬಾ ಅಂತ ನನ್ನನ್ನ ಹತ್ತರ ಕರೀತೀರಿ.
ಈ ಸಲದ ಲೇಖನ ಸ್ವಲ್ಪ ಬ್ಯಾಸರ ಆಗೋ ಹಂಗs ಅದ.
ಬರೀತಾನ ನನಗೂ ಬ್ಯಾಸರ ಆಗತಿತ್ತು.
ಕಾಕ.. ಖನ್ನಢಾ೦ಬೆಯ ಕ[ವಿ]ತೆ ಚ೦ದಾಗಿದೆ...!!!
Sunaath sir,
nijavaagiyu namma kannada maate nishyktalu, badakalu aagiddale, as usual sundara baraha sir....
ಕನ್ನಡಮ್ಮನ ಅಳಲಿಗೆ ಏನು ಹೇಳೋಣ ? ಆಕೆ ಮುದುಕಿಯಾದುದು ಬೇಸರವಾಯಿತು !...ಜೈ ಕನ್ನಡಾಂಬೆ
ಮುಂದೊಂದು ದಿನ ಇದೇ ರೀತಿ ಕನ್ನಡಾಂಬೆ ತನ್ನ ಕ(ವ್ಯ)ಥೆ ಯನ್ನ ಎಲ್ಲರ ಹತ್ತಿರ ಹೇಳಿಕೋತಾಳೆ. ಎಂತ ಗತಿ ಬರುವುದೋ ಗೊತ್ತಿಲ್ಲ ಭಯವಾಗುತ್ತೆ ಆದರೆ ನಮ್ಮ ಕೈಲಾದಷ್ಟು ನಾವುಗಳು ಕನ್ನಡತನವನ್ನು ಸುಧಾರಿಸಿಕೊಂಡು ಬೆಳೆಸಬೇಕು... ತಿಳಿದು ತಿಳಿದು ನಾವುಗಳು ತಪ್ಪು ಮಾಡುವುದು ಬೇಡ ಅಲ್ಲವೇ.. ಕಾಕ..!!
ಪ್ರಸಂಗವನ್ನು ಬಹಳಷ್ಟು ವಿವರವಾಗಿ ಎಲ್ಲರ ಮನಸ್ಸಿಗೆ ನಾಟುವಂತೆ ತಿಳಿಸಿದ್ದೀರಿ......... ಕನ್ನಡಾಂಬೆ ಮುಂದೊಂದು ದಿನ ಯಾರು ಎಂದು ಕೇಳುತ್ತಾರೆಂದೋ ಏನೋ ರಾಜಕೀಯ ನಾಯಕರು ಮೂರ್ತಿ ಸ್ಥಾಪನೆಗೆ ಮುಂದಾಗಿರುವುದು ಎಂದೆನಿಸುತ್ತೆ..... ಎಲ್ಲವೂ ವಿಚಿತ್ರತೆಯಲ್ಲಿದೆ. ಬದಲಾವಣೆಯ ಹಾದಿಯಲ್ಲಿ ಒಳಿತನ್ನ ಮರಿತಾ ಇದ್ದೀವಿ ಅಷ್ಟೆ ಇದಂತು ಸತ್ಯ...
ವಿಜಯಶ್ರೀ,
ಖನ್ನಢಾಂಭೆಯ ಕರುಣಾಜನಕ ಸ್ಥಿತಿ ಚಿತ್ರವಿಚಿತ್ರವಾಗಿದೆ.
ಅಶೋಕ,
ಕನ್ನಡಾಂಬೆ ನಿರ್ಜೀವಳಾಗಿದ್ದಾಳೆ. ಮತ್ತೆ ಅವಳು ಮೊದಲಿನಂತಾಗಬಹುದೆ?
ಪುತ್ತರ್,
ಆಕೆ ವಯಸ್ಸಿನ ಕಾರಣದಿಂದಾಗಿ ಮುದುಕಿಯಾಗಿಲ್ಲ. ಅವಳ ಸ್ಥಿತಿಯಿಂದಾಗಿ ಮುದುಕಿಯಾಗಿದ್ದಾಳೆ. ದೇವರ ದಯದಿಂದ, ಕನ್ನಡಿಗರ ಪುಣ್ಯದಿಂದ ಅವಳ ಯೌವನ ಮತ್ತೆ ಮರುಕಳಿಸಬಹುದು.
ಮನಸು,
ಒಂದು ಕಾಲದಲ್ಲಿ ರಾಣಿಯಾಗಿ ಮೆರೆದ ಕನ್ನಡಾಂಬೆ, ಇಂದು ಗುರುತು ಸಿಗದ ಸ್ಥಿತಿಯಲ್ಲಿದ್ದಾಳೆ. ಕಾಲಚಕ್ರ ತಿರುಗಿದಂತೆ, ಅವಳು ಮತ್ತೊಮ್ಮೆ ರಾಣಿಯಾದಾಳು.
ಕಾಕಾ,
ಸ೦ಭಾಷಣೆಯಲ್ಲಿ ವಾಸ್ತವದ ಚಿತ್ರಣವನ್ನು ಚೆನ್ನಾಗಿ ತಿಳಿಸಿದ್ದಿರಿ.
ಮನಮುಕ್ತಾ,
ಕಟು ವಾಸ್ತವ ಎನ್ನೋಣವೆ?
kaka,
Superb! waiting for the next part eagerly.. ಓದ್ತಾ ಇದ್ದ ಹಾಗೆ... ನಗು ಬಂದರೂ ಎಲ್ಲೋ ಒಂದು ಕಡೆ ಕಟು ವಾಸ್ತವಿಕತೆಯ ವಿಕೃತಿಯನ್ನು ನೆನೆದು ನೋವೂ ಆಯಿತು...:( ಸುಖವಿಲ್ಲ ಇಂದಿನ ರಾಜಕಾರಣ ಹಾಗೂ ರಾಜಕಾರಣಿಗಳಿಂದ....
ತೇಜಸ್ವಿನಿ,
ಕೈಲಾಸಮ್ ಹೇಳಿದ್ದರು:
"The raft of humour
Often veers
From shoals of smiles
To seas of tears."
ರಾಜರತ್ನಮ್ ಇದನ್ನು ಈ ರೀತಿಯಾಗಿ ಅನುವಾದಿಸಿದ್ದಾರೆ:
"ಕಿರಿಯಾಳದ ನಗೆನೀರಿನ ಮೇಲೆ
ತಿರುಗಾಡುತ ಬಹು ವೇಳೆ
ಕಣ್ಣೀರಿನ ಕಡಲಿನ ಪಾಲು
ಹಾಸ್ಯದ ಹರಿಗೋಲು"
ಇದೀಗ ಕನ್ನಡದ ಸ್ಥಿತಿ.
ಕಾಕಾ,
ನಗಬೇಕು ಅನಿಸ್ತಾ ಇತ್ತು ಆದರೆ ಯಾಕೋ ಕನ್ನಡಾಂಬೆ ಮುದುಕಿ ನೆನಸಿಕೊಂಡು ಅಳು ಬಂತು..
ಅಪ್ಪ-ಅಮ್ಮ,
ಅಳಬೇಕೊ, ನಗಬೇಕೊ ತಿಳಿಯದಂತಹ ಪರಿಸ್ಥಿತಿ ಇದೆ!
ಕರ್ಣ ಪಿಶಾಚಿಯ ಪ್ರಶ್ನೆಗಳಿ೦ದ ಕ೦ಗೆಡುವ ಕನ್ನಡಾಂಬೆಯ ಸ್ಥಿತಿ ನಿಜಕ್ಕೂ ಶೋಚನೀಯ. ಅದರಲ್ಲೂ ನಿಮ್ಮ ಹಾಸ್ಯ ಪ್ರಜ್ಞೆ ಅದ್ಭುತವಾಗಿದೆ. ಕನ್ನಡಾಂಬೆಯ ಕ(ವ್ಯ)ಥೆಯನ್ನು ಕೇಳಲು ಕಾತುರಳಾಗಿದ್ದೇನೆ
ಪ್ರಭಾಮಣಿಯವರೆ,
ಕನ್ನಡಮ್ಮನ ಕತೆಯು ಕರುಣಾಜನಕವಾದದ್ದೇ. ಅವಳ ಸ್ಥಿತಿ ಸುಧಾರಿಸಲಿ ಎಂದು ಹಾರೈಸೋಣ.
ಸುನಾಥ್ ಸರ್,
ಹೊಸ ವಿಚಾರಗಳನ್ನು ಎತ್ತಿಕೊಳ್ಳುತ್ತಾ..ಮನತಟ್ಟುವಂತೆ...ಹಾಗೆ ಎಲ್ಲೋ ಒಂದು ಕಡೆ ವಿಷಾಧ ಮತ್ತು ವ್ಯಥೆಯುಂಟಾಗುವಂತೆ..ವಾಸ್ತವ ಸ್ಥಿತಿಯನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ..
sunaath sir dayavittu nanagondu test mail kalisi...digwashegde@gmail.com
ಕ.ಪಿ.-ಭಾಗ ೨ ಓದಿ ಸಂತೋಷಪಟ್ಟೆ, ತನ್ಮಧ್ಯೆ ಅನಿಲ್ ಬೆಡಗೆಯವರು ಹೊಸ ’ಬಾಬಾ’ ರನ್ನು ಸೃಷ್ಟಿಸಿದರೋ ಎಂದು ಅನುಮಾನವಾಯ್ತು! ಉತ್ತರ ಕರ್ನಾಟಕದಲ್ಲಿ ’ಬಾಬಾ’ ಎನ್ನುವ ಪದಕ್ಕೆ ಈ ಅರ್ಥವೂ ಇದೆ ಎಂಬುದು ನೆನಪಿಗೆ ಬಂದು ನಿರುಮ್ಮಳನಾದೆ. ಚೆನ್ನಾಗಿದೆ ಸ್ವಾಮೀ, ಧನ್ಯವಾದಗಳು
mundina bhaagakke kayuttiddene.
Post a Comment