ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು. ||೧||
ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ
‘ಅಬ್ಬ’ ಎನಬೇಡs ನನ ಗೆಣತಿ | ಸಾವಿರಕ
ಒಬ್ಬ ನೋಡವ್ವ ನನ ನಲ್ಲ. ||೨||
ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು. ||೩||
ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ. ||೪||
ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ. ||೫||
‘ಒಲುಮೆಯ ಕಿಚ್ಚು’ ಕವನವು ವಿರಹದಗ್ಧ ಮುಗ್ಧೆಯ ಹಾಡಾದರೆ, ‘ಜನುಮದ ಜಾತ್ರಿ’ ಕವನವು ಪ್ರಣಯಸಂತೃಪ್ತಳಾದ ಹೊಸ ಮದುವಣಗಿತ್ತಿಯ ಹಾಡಾಗಿದೆ.
ಬೇಂದ್ರೆಯವರ ‘ಜನುಮದ ಜಾತ್ರಿ’ ಕವನದಲ್ಲಿ ತನ್ನ ನಲ್ಲನಿಗೆ ಮನಸೋತಿರುವ ಹೊಸ ಮದುವಣಗಿತ್ತಿಯ ಮನ:ಸ್ಥಿತಿಯನ್ನು ವರ್ಣಿಸಲಾಗಿದೆ. ಈ ಹೊಸ ಮದುವಣಗಿತ್ತಿಯು ತನ್ನ ಆಪ್ತಸಖಿಯ ಜೊತೆಗೆ ತನ್ನ ಹೊಸ ಸಂಸಾರದ ಸುಖವನ್ನು ಹಂಚಿಕೊಳ್ಳುತ್ತಿದ್ದಾಳೆ. ತನ್ನ ನಲ್ಲನ ಒಲವಿಗೆ ಮನಸೋತು ಅವನ ಕೈಯಲ್ಲಿಯ ಸೂತ್ರದ ಗೊಂಬೆಯಂತೆ ಆಗಿರುವದಾಗಿ ಅವಳು ಹೇಳುತ್ತಿದ್ದಾಳೆ. ಆ ನಲ್ಲನಾದರೋ ತನ್ನ ನೇತ್ರಪಲ್ಲವಿಯಿಂದಲೇ ಅಂದರೆ ಕಣ್ಸನ್ನೆಯಿಂದಲೇ ಇವಳನ್ನು ಕುಣಿಸುತ್ತಾನೆ. ಇವನು ನಿರ್ದೇಶಿಸಿದಂತೆ ಕುಣಿಯುವ ಪಾತ್ರವಾಗಿದ್ದಾಳೆ ಅವಳು. ಅವರಿಬ್ಬರನ್ನು ಜೋಡಿಸುತ್ತಿರುವ ಆ ‘ಸೂತ್ರ’ ಯಾವುದು?
ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು.
ಅವಳಲ್ಲಿ ಇವನಿಗೆ ಇರುವ ಒಲುಮೆ ಹಾಗು ಇವನಲ್ಲಿ ಅವಳಿಗಿರುವ ಒಲುಮೆ ಇವೇ ಅವರ ಬದುಕಿನಾಟದ ಸೂತ್ರ. ಇಂತಹ ಒಲುಮೆಯನ್ನು ದಿನದಿನವೂ ಈ ಪ್ರಣಯಜೋಡಿಯು ಸೂರೆ ಮಾಡುತ್ತಿರುವಾಗ, ಹೊಸ ಬಾಳು ಹೇಗಿರುತ್ತದೆ?
‘ದಿನದಿನ ಜಾತ್ರಿಯೆನಿಸಿತ್ತ ಜನುಮವು!’
ಆಧುನಿಕ ತಲೆಮಾರಿನ ನಮ್ಮ ಯುವಕ, ಯುವತಿಯರು ಹಳ್ಳಿಯ ಜಾತ್ರೆಗಳನ್ನು ಬಹುಶಃ ನೋಡಿರಲಿಕ್ಕಿಲ್ಲ. ಅದೊಂದು ಸಡಗರದ ಸಮಾವೇಶ. ಜಾತ್ರೆಯಲ್ಲಿ ಚಿಕ್ಕ ಮಕ್ಕಳು ಆಟಿಗೆಗಳನ್ನು ಕೊಡಿಸಿಕೊಳ್ಳಲು ಬಂದಿದ್ದರೆ, ಹುಡುಗ-ಹುಡುಗಿಯರಿಗೆ ತಿರುಗು-ಗಾಲಿಗಳಲ್ಲಿ ಕೂಡುವ ಉಮೇದಿ. ಬಹುಪಾಲು ಯುವಕ-ಯುವತಿಯರು ‘ರಾಜಾ-ರಾಣಿ ದೇಖೋ’ ಅನ್ನುತ್ತ ‘ಕಣ್ಣಾಟ’ಕ್ಕಾಗಿ ಬಂದಿರುತ್ತಾರೆ. ಒಟ್ಟಿನಲ್ಲಿ ಆಬಾಲವೃದ್ಧರಿಗೆ ಇದೊಂದು ಉತ್ಸಾಹದ, ಸಂಭ್ರಮದ ಸನ್ನಿವೇಶ.
ತನ್ನ ನಲ್ಲನ ಒಲವಿನಲ್ಲಿ ನಮ್ಮ ಹೊಸ ಮದುವಣಗಿತ್ತಿಗೆ ಅವಳ ಬಾಳೆಂಬುದು ಪ್ರತಿದಿನವೂ ಇಂತಹ ಜಾತ್ರೆಯ ಸಂಭ್ರಮವಾಗಿದೆ. ನಿಸಾರ ಅಹಮದರ ಭಾಷೆಯಲ್ಲಿ ಹೇಳುವದಾದರೆ, ಜೀವನವೊಂದು ‘ನಿತ್ಯೋತ್ಸವ!’
ತನ್ನ ನಲ್ಲೆಯನ್ನು ಕಣ್ಸನ್ನೆಯಿಂದಲೇ ಆಟ ಆಡಿಸುವದು, ರಸಿಕತನದ ಪ್ರಥಮ ಸಂಕೇತವಾದರೆ, ಅವಳನ್ನು ‘ಹುಬ್ಬು ಹಾರಿಸಿ’ ಕರೆಯುವದು ರಸಿಕ ನಲ್ಲನು ಕೊಡುತ್ತಿರುವ ಎರಡನೆಯ ಸಂಕೇತ. ಇದು ಶೃಂಗಾರದಾಟಕ್ಕೆ ಆತ ನೀಡುತ್ತಿರುವ ನೇರ ಆಹ್ವಾನವೇ ಆಗಿದೆ. ಇದು ಯೌವನದ ಹಬ್ಬ, ಇದು ರಸಿಕರ ಹಬ್ಬ, ಇದು ಶೃಂಗಾರದ ಹಬ್ಬ!
ನಮ್ಮ ಹೊಸ ಮದುವಣಗಿತ್ತಿಯ ಗೆಳತಿಗೆ ಈ ಸಂಕೇತಗಳಲ್ಲಿ, ಈ ಆಟದಲ್ಲಿ ಯಾವ ವಿಶೇಷತೆಯೂ ಕಾಣಿಸಲಿಲ್ಲವೇನೋ. ಅದನ್ನು ಗ್ರಹಿಸಿದ ಈ ಹುಡುಗಿ ತನ್ನ ನಲ್ಲನು ಸಾಮಾನ್ಯನಲ್ಲವೆಂದು ಆಗ್ರಹದಿಂದ ಹೇಳುತ್ತಾಳೆ:
ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ
‘ಅಬ್ಬ’ ಎನಬೇಡs ನನ ಗೆಣತಿ ಸಾವಿರಕ
ಒಬ್ಬ ನೋಡವ್ವ ನನ ನಲ್ಲ.
‘ತನ್ನ ನಲ್ಲನು ಸಾವಿರದಲ್ಲಿ ಒಬ್ಬನು; ನನ್ನ ಈ ಮಾತಿಗೆ ನೀನು ‘ಅಬ್ಬಾ!’ ಎಂದು ಹಾಸ್ಯ ಮಾಡದಿರು’ ಎಂದು ತನ್ನ ಗೆಳತಿಯ ಎದುರು ಸಮರ್ಥನೆ ಮಾಡುತ್ತಾಳೆ ಈ ಹುಡುಗಿ. ಅಂತಹ ಅಸಾಮಾನ್ಯತೆ ಏನಿದೆ ಇವಳ ನಲ್ಲನಲ್ಲಿ?
ಬಹುಶ: ಹೊಸದಾಗಿ ಮದುವೆಯಾದ ಎಲ್ಲ ಹುಡುಗಿಯರೂ ತಮ್ಮ ನಲ್ಲನೆಂದರೆ ಅಸಾಮಾನ್ಯ ಎನ್ನುವ ಭಾವನೆಯನ್ನೇ ಇಟ್ಟುಕೊಂಡಿರುತ್ತಾರೊ ಏನೊ? ಈ ಹುಡುಗಿಯ ನಲ್ಲನಲ್ಲಿ ಇರುವ ವಿಶೇಷತೆ ಏನು?
ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು.
ಕಣ್ಣುಗಳು ಭಾವನೆಯನ್ನು ಪ್ರದರ್ಶಿಸುವ ಅಂಗಗಳಾಗಿವೆ. ತನ್ನ ನಲ್ಲೆಯ ಬಗೆಗೆ ಆ ನಲ್ಲನಿಗೆ ಎಷ್ಟು ಪ್ರೀತಿ ಇದೆ ಎಂದರೆ ಆತ ತನ್ನ ಕಣ್ಣುರೆಪ್ಪೆಗಳನ್ನು ಎತ್ತಿ ಇವಳೆಡೆಗೆ ನೋಡಿದರೆ ಸಾಕು, ಅಲ್ಲಿ ಪೂರ್ಣಿಮೆಯ ಬೆಳದಿಂಗಳು ಹರಡುತ್ತದೆ. ಆ ಬೆಳದಿಂಗಳಿನಲ್ಲಿ ಒಂದು ಗಂಧರ್ವಲೋಕದ ಸೃಷ್ಟಿಯಾಗುತ್ತದೆ. ‘ಆ ಲೋಕದಲ್ಲಿ ತನ್ನ ಹುಡುಗಿಯನ್ನು ನಲಿಸಬೇಕು’ ಎನ್ನುವ ಅವನ ಚಿತ್ತದೊಳಗಿನ ಬಯಕೆ ಪಾರದರ್ಶಕವಾಗಿ ಅವನ ಕಣ್ಣಿನಲ್ಲಿ ಇವಳಿಗೆ ಕಾಣುತ್ತದೆ. ನಿಜ ಹೇಳಬೇಕೆಂದರೆ, ತನ್ನ ಬಯಕೆಯನ್ನೇ ಇವಳು ಅವನ ಕಣ್ಣುಗಳಲ್ಲಿ ಕಾಣುತ್ತಿದ್ದಾಳೆ. ಇದನ್ನು ಬೇಂದ್ರೆಯವರು ‘ಚಿತ್ತಕ್ಕೆ ಕಣ್ಣು ಬರೆಧ್ಹಾಂಗ ಕಂಡಿತ್ತು’ ಎಂದು ವರ್ಣಿಸುತ್ತಾರೆ.
ಜೀವನವೆಲ್ಲ ಮಾಯಾಲೋಕವಾಗಲು ಸಾಧ್ಯವೆ? ಇಲ್ಲಿ ದೈನಂದಿನ ಸಮಸ್ಯೆಗಳು ಇದ್ದೇ ಇರುತ್ತವೆ. ‘ಸಾಕಪ್ಪಾ ಈ ಬದುಕು!’ ಎಂದೆನಿಸುವದು ಸಹಜ. ಅಂತಹ ಸಮಯದಲ್ಲಿ ಇವಳ ನಲ್ಲನೇ ಇವಳಿಗೆ ಸಮಾಧಾನ ಹೇಳಿ ಬದುಕಿನಲ್ಲಿ ಆಸೆ ಹುಟ್ಟಿಸಬೇಕಲ್ಲವೆ?
ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ.
ಸಮಸ್ಯೆಗಳಿಗೆ ಹೆದರಿದ ತನ್ನ ನಲ್ಲೆಗೆ ಈ ನಲ್ಲ ಧೈರ್ಯವನ್ನು ಕೊಡುವ ಬಗೆ ಎಂತಹದು? ತನ್ನ ಮೀಸೆಯ ಮೇಲೆ ಕಿರಿಬೆರಳನ್ನು ಎಳೆದು, ಈ ಗಂಡಸು ಅವಳಿಗೆ ಅಭಯ ಕೊಡುತ್ತಾನೆ: ‘ನಾನಿದ್ದೇನೆ, ಹೆದರದಿರು! ಬಾ ನನ್ನ ಜೊತೆಗೆ ಬದುಕನ್ನು ಎದುರಿಸಲು!’ ಎನ್ನುವ ಧಾಟಿಯಲ್ಲಿ ತನ್ನ ಕೆಂಚನೆಯ ಕೈಯನ್ನು ಬೀಸಿ ಇವಳನ್ನು ಕರೆಯುತ್ತಾನೆ. ಬೇಂದ್ರೆಯವರು ನಲ್ಲನ ‘ಗಂಡಸುತನ’ವನ್ನು ಎತ್ತಿ ತೋರಿಸುವ ಉದ್ದೇಶದಿಂದ, ‘ಮೀಸಿ ಮೇಲೆಳೆದ ಬೆರಳು, ‘ಕೆಂಗಯ್ಯ ಬೀಸಿ ಕರೆದಾನ’ ಎನ್ನುವ ಎನ್ನುವ ವಿಶೇಷಣಗಳನ್ನು ಬಳಸಿದ್ದಾರೆ.
ರಸಿಕ ನಲ್ಲನ ಆಸರೆಯು ಇರುವಾಗ ಇವಳ ಬದುಕಿನ ಬೇಗುದಿ ಮಾಯವಾಗುತ್ತದೆ, ಆಸೆ ಮತ್ತೆ ಚಿಗುರುತ್ತದೆ, ಪ್ರಣಯ ಮತ್ತೆ ಕೊನರುತ್ತದೆ. ತಾಂಬೂಲದಿಂದ ಕೆಂಪಾದ ತುಟಿಯ ಈ ರಸಿಕನ ನಗೆಯು ಇವಳಿಗೆ ಬೆಚ್ಚನೆಯ, ಆಹ್ಲಾದಕರವಾದ ಹೊಂಬಿಸಲಂತೆ ಭಾಸವಾಗುತ್ತದೆ. ಅವಳ ಅಂತರಂಗದಲ್ಲಿ ಈ ಭಾವನೆಯು ‘ಬಿಂಬಿಸುತ್ತದೆ’ ಎಂದರೆ ಅವನ ಅಂತರಂಗದಿಂದ ಇವಳ ಅಂತರಂಗಕ್ಕೆ transfer ಆಗುತ್ತದೆ.
ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ.
ನಿರಂತರ ಪ್ರಣಯವೊಂದೇ ಅಲ್ಲ, ಬದುಕಿಗೆ ಬೇಕಾದದ್ದು ನಿರಂತರ ವಿಶ್ವಾಸವೂ ಅಹುದು. ಇವೆರಡನ್ನೂ ಈತ ತನ್ನ ನಲ್ಲೆಗೆ ಕೊಡುತ್ತಿದ್ದಾನೆ. ಆ ಮಾತನ್ನು ‘ನಂಬೀಸಿ, ರಂಬಿಸಿತವ್ವಾ ಜೀವವ’ ಎನ್ನುವ ಮೂಲಕ ಅಭಿವ್ಯಕ್ತಿಸಲಾಗಿದೆ.
ದೇಸಿ ಪದಗಳನ್ನು ಬೇಂದ್ರೆಯವರು ಎಷ್ಟು ಸಮರ್ಥವಾಗಿ ಬಳಸಬಲ್ಲರು, ತಮಗೆ ಬೇಕಾದ ಅರ್ಥವನ್ನು ಈ ಪದಗಳ ಮೂಲಕ ಹೇಗೆ ಹಿಗ್ಗಿಸಿ ಹೊರತರಬಲ್ಲರು ಎನ್ನುವದಕ್ಕೆ ಈ ಗೀತೆಯು ಶ್ರೇಷ್ಠ ಉದಾಹರಣೆಯಾಗಿದೆ. ಪದಗಳ ಅರ್ಥವನ್ನು ಅರಿಯಬಲ್ಲವನು ಪಂಡಿತ; ಪದಗಳಲ್ಲಿ ಅರ್ಥ ತುಂಬಬಲ್ಲವನು ವರಕವಿ!
‘ಜನುಮದ ಜಾತ್ರಿ’ ಕವನವು ‘ಕಾಮಕಸ್ತೂರಿ’ ಸಂಕಲನದಲ್ಲಿ ಅಡಕವಾಗಿದೆ.
30 comments:
ಕವನದ ಅ೦ತರಾರ್ಥವನ್ನು ಬಹಳ ಚೆನ್ನಾಗಿ ವರ್ಣಿಸಿದ್ದೀರಿ ಸರ್, ಧನ್ಯವಾದಗಳು. ಬೇಂದ್ರೆಯವರನ್ನು 'ಪದಗಳ ಗಾರುಡಿಗ' ಎನ್ನುವುದು ಅವರ ಎಲ್ಲ ಕವನಗಳಲ್ಲೂ ಬಿ೦ಬಿತವಾಗಿದೆ .
ಕಾಕ..
ಕವಿತೆಯನ್ನು ಅರ್ಥಪೂರ್ಣವಾಗಿ ವರ್ಣಿಸಿದ್ದೀರಿ.
ವ೦ದನೆಗಳು.
ಪದಗಳ ಅರ್ಥವನ್ನು ಅರಿಯಬಲ್ಲವನು ಪಂಡಿತ; ಪದಗಳಲ್ಲಿ ಅರ್ಥ ತುಂಬಬಲ್ಲವನು ವರಕವಿ!
ಹೌದು ಕಾಕಾ ಖರೆ ಅದ ಆದ್ರ ವರಕವಿಯ ಭಾವಗಳಿಗೆ ಸಾಣಿಗಿ ಹಿಡದು ಸುಲಲಿತ ವಾಗಿಸಿ
ಝರಡಿ ಹಿಡದು ಉಣಬಡಿಸುವ ನೀವು ಅಪ್ರತಿಮರು..! ನಿಮಗ ನೀವ ಸಾಟಿ...!
ಪ್ರಭಾಮಣಿಯವರೆ,
ನೀವು ಹೇಳುವದು ಸರಿ. ಬೇಂದ್ರೆಯವರು ನಿಜಕ್ಕೂ ಪದಗಾರುಡಿಗರು.
ವಿಜಯಶ್ರೀ,
ಅರ್ಥಗರ್ಭಿತ ಕವನದ ಸ್ವಲ್ಪಾಂಶವನ್ನಾದರೂ ನಾನು ಇಲ್ಲಿ ಬರೆದಿದ್ದರೆ, ನನ್ನ ಪುಣ್ಯ! ನಿಮಗೆ ಧನ್ಯವಾದಗಳು.
ದೇಸಾಯರ,
ಸೂರ್ಯನ ಕಾಂತಿಯನ್ನು ಪ್ರತಿಫಲಿಸುವಂಥಾ ಗ್ರಹ ನಾನು, ಪರಪ್ರಕಾಶ ಮಾತ್ರ!
ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು. ||೩||
ಬೇಂದ್ರೆ ಅಜ್ಜ ಜನಪದ ಸಾಹಿತ್ಯಶೈಲಿಯಲ್ಲಿ ಆದಿಪ್ರಾಸದಲ್ಲಿ ಬರೆದ ಈ ಕವನ ಎಂತಹ ಸರಳ ಸುಲಲಿತ! ಮಿಕ್ಕಿದ ಅವರ ಹಲವು ಕ್ಲಿಷ್ಟ ಕವನಗಳನ್ನು ನೋಡಿದರೆ ಇದು ಅವರೇ ಬರೆದಿದ್ದೇ ಎನಿಸುವಷ್ಟು ಸರಳವಾಗಿದೆ. ಎಂದಿನಂತೇ ನಿಮ್ಮ ಅರ್ಥವಿವರಣೆ ಪೂರಕವಾಗಿದೆ, ಸತತವಾಗಿ ಬೇಂದ್ರೆ ದರ್ಶನಮಾಡಿಸುತ್ತಿರುವ ನಿಮಗೆ ಧನ್ಯವಾದಗಳು.
Ultimate explanation Sir!!!
ಪ್ರಿಯ ಸುನಾಥ,
ಅದ್ಬುತವಾದ ವಿವರಣೆ. ಓದಿ "ಚಿತ್ತಕ್ಕ ಕಣ್ಣು" ಬರೆಧಾಂಗ ಕಂಡ್ತು.
ಅಬ್ಬ ಎನ್ನಲೋ ಬೇಡವೋ ಅಂತ ಆಲೋಚಿಸ್ತಾ ಇದೀನಿ.
ಎಂತೆಂತ ಹಾಡು ಹುಡುಕಿ ಸವಿ ಹಂಚ್ತೀರಿ ನೀವು. ಖುಶ್ ಖುಶೀ.
"ಬದುಕಿಗೆ ಬೇಕಾದದ್ದು ನಿರಂತರ ವಿಶ್ವಾಸವೂ ಅಹುದು. " ಎಂಬುದು ಈ ಹಾಡು ಹಾಲಿನ ಒಳಗಿನ ತುಪ್ಪ!
ಶರಣು ಎಂಬುದರ ಹೊರತು ಬೇರೇನೂ ಸಲ್ಲದು, ನಿಮಗೆ, ನಿಮ್ಮ ಪೋಸ್ಟಿಗೆ.
ಪ್ರೀತಿಯಿಂದ,ಸಿಂಧು
ಭಟ್ಟರೆ,
ಬೇಂದ್ರೆಯವರ ಕವನವೆಂದರೆ:‘ಪುಟವನ್ನು ತಿರುವಿದರೆ ಹುಣ್ಣಿವೆ ತೆರಧಾಂಗ’, ಅಲ್ಲವೆ?
ಗಿರೀಶ,
ಕವನವೇ ultimate ಆಗಿದೆ! ನಿಮಗೆ ಧನ್ಯವಾದಗಳು.
ಸಿಂಧು,
ನಿಮಗೂ ಶರಣು!
Three cheers to the reader who reads with love!
ಕಾಕಾ,
ಸು೦ದರ ಜೀವನಕ್ಕೆ ಪರಸ್ಪರ ನ೦ಬಿಕೆ, ಪ್ರೀತಿ ವಿಶ್ವಾಸಗಳೇ ಆಧಾರ ಎ೦ಬ ನಿಜವನ್ನು ಬೇ೦ದ್ರೆಯವರು ಕವನದಲ್ಲಿ ಅರ್ಥಪೂರ್ಣವಾಗಿ ಹೇಳಿದ್ದಾರೆ.
ಸು೦ದರ ಕವನಕ್ಕೆ ಚೆ೦ದದ ಅರ್ಥವಿವರಣೆ ನೀಡಿದ್ದೀರಿ.ಧನ್ಯವಾದಗಳು.
ಸ್ಪಷ್ಟ ಕಾವ್ಯ
ಸುಸೂತ್ರ ವಿವರಣೆ
ಎಲ್ಲೂ ಕೊಂಕಿಲ್ಲ
ಮುನಿಸಿಲ್ಲ
ಮತ್ತೆಲ್ಲಿಯ ಜಾಗ
ಮುದ್ದಣ್ಣನ ಕಡುಬಿಗೆ?
**
Sure shot! ತುಂಬಾ ಇಷ್ಟವಾಯ್ತು ಈ ಸಲದ ಕವಿತೆ.
ನಿಮ್ಮ ವಿವರಣೆ ಅದಕ್ಕೆ ಅತ್ತ್ಯುತ್ತಮ ಸಾಥ್ ಕೊಟ್ಟಿದೆ..
ಶುಭಾಶಯಗಳು ಸಾರ್.
ಅರ್ಥಪೂರ್ಣ ವಿವರಣೆ, ಖುಷಿ ಕೊಟ್ಟಿತು ಧನ್ಯವಾದಗಳು ಕಾಕ
ಮೇಲ್ನೋಟಕ್ಕೆ ತಿಳಿಯಾಗಿ ಕಂಡರೂ, ಕಚಗುಳಿ ಇಡುವ ಭಾವವಿದೆ. ವರಕವಿಯ ಕವನಕ್ಕೆ ನಿಮ್ಮ ವಿವರಣೆಯು ಮೆರುಗು ಹೆಚ್ಚಿಸಿದೆ.
ಮನಮುಕ್ತಾ,
ಬೇಂದ್ರೆಯವರ ಕವನದ ಮೂಲ ಆಶಯವೇ ಇದು:ಪ್ರೀತಿ ಹಾಗು ನಂಬಿಕೆ. ಅವರ ಅನೇಕ ಕವನಗಳಲ್ಲಿ ಈ ಆಶಯವು ಮರುಕಳಿಸುತ್ತದೆ.
RJ,
ಬೇಂದ್ರೆಯವರ ಕವನವು ಮುದ್ದಣನ ಕಡಬು ಅಲ್ಲದಿದ್ದರೂ ಸಹ ಹೂರಣಗಡಬಂತೂ ಖರೆ. ಹೂರಣದ ರುಚಿ ತಿಂದವನಿಗೇ ತಿಳಿಯುವದು!
ಮನಸು,
ಬೇಂದ್ರೆ-ಕವನಕ್ಕೆ ಸಂಪೂರ್ಣ ವ್ಯಾಖ್ಯಾನ ಬರೆಯುವದು ನನ್ನ ಅಳವಲ್ಲ. ತಿಳಿದಷ್ಟು ಬರೆಯುತ್ತಿದ್ದೇನೆ!
ಸುಬ್ರಹ್ಮಣ್ಯರೆ,
ಬೇಂದ್ರೆ ಕಾವ್ಯವೆ ಹಾಗೆ. ಮೇಲ್ನೋಟಕ್ಕೆ ತಿಳಿ ತಿಳಿ, ಒಳಗೆ ಇಳಿದಂತೆಲ್ಲ ಗಹನ, ಗಭೀರ!
ಸುನಾಥರೆ,
ನಲ್ಲೆಯ ಭಾವನೆಯನ್ನು ಬೇಂದ್ರೆಯವರು ಸರಸವಾಗಿ ವರ್ಣಿಸಿದ್ದಾರೆ.ನಿಮ್ಮ ವಿವರಣೆಯು ಬಹಳ ಚೆನ್ನಾಗಿದೆ.
ಧನ್ಯವಾದಗಳು, ವನಮಾಲಾ.
ಬಾಳ ಚೊಲೊ ಅತ್ರಿ ಜನುಮದ ಜಾತ್ರಿ ಕವನ ಮತ್ತು ವಿವರಣೆ .....ಈ ವಾರ ಹುಬ್ಳಿಗೆ ಬಂದಾಗ ಬೆಟ್ಟಿ ಅಗೊಣ.
ಬೇಂದ್ರೆ ಕವನ ಅಂದರ ಮಸ್ತ ಜಾತ್ರಿ ಇದ್ಧಾಂಗ! ಬರ್ರಿ, ಭೆಟ್ಟಿಯಾಗೋಣ.
Abba .. Eshtondu Sundara artha baruvanta kavana ..nimma e kavya vimarsha lekhanagalinda namagoo ondishtu tilidukolluvanatytu ...
ಶ್ರೀಧರ,
ಬೇಂದ್ರೆಯವರೆ ತಮ್ಮ ಕವನ ‘ಪ್ರಾರ್ಥನೆ’ಯಲ್ಲಿ ಹೇಳಿದ್ದಾರೆ:
"ಕೂಡಿ ಓದಿ ಕೂಡಾಡಿ ಕೂಡಿ ಅರಿಯೋಣ ಕೂಡಿ ಕೂಡಿ."
ಆದುದರಿಂದ ಸಾಹಿತ್ಯವನದಲ್ಲಿ ಜೊತೆಯಾಗಿ ವಿಹರಿಸೋಣ!
wow.. sooper sir..
ನಿಜಕ್ಕೂ ಈ ಕವನ ತುಂಬ ತುಂಬ ಇಷ್ಟವಾಯಿತು...
ಧನ್ಯವಾಗಳು ಸರ್..
ಬೆಂದ್ರೆ...ಬೇಂದ್ರೆ ಎನ್ನುವ ಮಾತು
ಅವರ ಈ kkvanada ಒಂದೊಂದು
padagalu binbisuttave.
sundaravaada kavanakke
sogasaada vimarshegaagi
dhanyavaadagalu sir.
ನಮಸ್ತೆ ಸರ್,
ಎಂದಿನಂತೆ ಚ್ನೆನ್ನಾಗಿದೆ.
ನಿಮ್ಮಲ್ಲಿ ಒಂದು ಮನವಿ, ಬೆನಕ ಬೆನಕ ಅಂತ
ನಮ್ಮಲಿ ಒಂದು ಶ್ಲೋಕ ಹೇಳ್ಕೊಡ್ತಾರಲ್ಲ ಮಕ್ಳಿಗೆ
ಅದರ ವಿಸ್ತಾರ ಅರ್ಥ ತಿಳಿಸ್ತೀರಾ?
"ಪಾಣಿ ಮೆಟ್ಲು" ಅಂತ ಅದ್ರಲ್ಲಿ ಬರತ್ತೆ ಹಾಗಂದ್ರೆ ಏನು ಅಂತ
ಗೊತ್ತಾಗ್ತಿಲ್ಲ, ಅಥವ ಅದರ ಉಚ್ಚಾರಣೆ ತಪ್ಪೇ?
ನಿಮ್ಮ ರಾಮ ರಕ್ಷಾ ಸ್ತೋತ್ರ ದ ಪೋಸ್ಟ್ ಮತ್ತೊಮ್ಮೆ ಓದಿದಾಗ
ಈ ಸಂದೇಹ ಬಂತು.
ಗೌರಿ ಗಣೇಶ ಹಬ್ಬದ ಶುಭಾಶಯಗಳೊಂದಿಗೆ
ಸ್ವರ್ಣ
ಜನುಮದ ಜಾತ್ರೆಯ ವಿಸ್ತಾರವನ್ನ ವಿವರಿಸದ ತಮ್ಮ ಪರಿ ಅದ್ಭುತ ಸುನಾಥರೆ...ತಮ್ಮೆಲ್ಲ ಲೇಖನಗಳು ಸಂಗ್ರಹಯೋಗ್ಯ ಮತ್ತು ಪುಸ್ತಕವಾಗಿ ಹೊರಬರಲಿ.ಇಡು ನಮ್ಮ ಆಶಯ.
Post a Comment