Monday, December 1, 2014

ಜೀವಪ್ರಜ್ಞೆ



ಮಹಾಸ್ಫೋಟಕ್ಕಿಂತ ಮೊದಲು ವಿಶ್ವವು ಒಂದೇ ಬಿಂದುವಿನಲ್ಲಿ ಸಂಕುಚಿತಗೊಂಡಿತ್ತು ಎಂದು ಹೇಳುತ್ತಾರೆ. ಮಹಾಸ್ಫೋಟದ ಕ್ಷಣದಿಂದ ವಿಶ್ವವು ಪ್ರಚಂಡವೇಗದಿಂದ ಪ್ರಸರಣಗೊಳ್ಳಲು ಪ್ರಾರಂಭಿಸಿತು. ನಕ್ಷತ್ರರಜಸ್ಸಿನಿಂದ ನಕ್ಷತ್ರಗಳು ರೂಪಗೊಂಡವು. ಕಾಲಕ್ರಮೇಣ ನಮ್ಮ ಸೂರ್ಯನ ಸುತ್ತಲೂ ತಿರುಗುತ್ತಿರುವ ನಮ್ಮ ಭೂಮಿಯ ಮೇಲೆ ಪ್ರಥಮ ಜೀವಿಯ ಉದಯವಾಯಿತು. ತನ್ನ ಹುಟ್ಟಿನ ಸಮಯದಲ್ಲಿ ಈ ಜೀವಿಗೆ `ಜೀವಪ್ರಜ್ಞೆ’ಯ ಹೊರತಾಗಿ, ಬೇರಾವದೇ ಸ್ಪಂದನವಿರಲು ಸಾಧ್ಯವಿರಲಿಲ್ಲವಷ್ಟೇ. ಆದುದರಿಂದ ಅದು ಅಂಧತಮಸ್ಸಿನಲ್ಲಿ ಮುಳುಗಿತ್ತು ಎನ್ನಬಹುದು.

‘ಜೀವಪ್ರಜ್ಞೆ’ ಎಂದರೆ ಏನು? ‘ನಾನು ಇದ್ದೇನೆ’ ಎನ್ನುವ ‘ಇರುವಿನ ಅರಿವೇ’ ಜೀವಪ್ರಜ್ಞೆ. ಇದು ಎಲ್ಲ ಜೀವಿಗಳಲ್ಲಿಯೂ ಇರಲೇಬೇಕಲ್ಲವೆ? ಈ ‘ಅರಿವಿ’ನ ಪರಮ ಅವಸ್ಥೆಯೇ ತನ್ನ ಇರವನ್ನು ಸತತವಾಗಿ ಅನುಭವಿಸುತ್ತಿರುವ ಸಂತೋಷದ ಸ್ಥಿತಿ. ಇದನ್ನೇ ನಮ್ಮ ಯೋಗಿಗಳು ‘ಸಚ್ಚಿದಾನಂದ’  ಎಂದು ಹೇಳಿದ್ದಾರೆ.  {ಸತ್(=ಇರುವು)+ಚಿತ್(=ಅರಿವು)+ಆನಂದ’}.

ಈ ‘ಮೂಲ ಇರುವು’ ವಿಶ್ವದ ಅನಂತ ಜೀವರೂಪಗಳಲ್ಲಿ ವ್ಯಕ್ತವಾಗಿದೆ. ಮೊಟ್ಟಮೊದಲು ಜನಿಸಿದ ಏಕಕೋಶ ಜೀವಿ ಅಮೀಬಾದಿಂದ ಬಹುಕೋಶಜೀವಿಗಳವರೆಗೆ ‘ಮೂಲ ಇರುವು’ ಭಿನ್ನ ಭಿನ್ನ ರೂಪಗಳಲ್ಲಿ ವ್ಯಕ್ತವಾಗುತ್ತಲೇ ಇದೆ. ಮಹರ್ಷಿ ಅರವಿಂದರು ಇದನ್ನೇ ‘To be or to become is the whole endeavour of the Nature’ ಎಂದು ಹೇಳಿದರು. ಆದಿಶಂಕರರು ತಮ್ಮ ಸೌಂದರ್ಯಲಹರಿ ಸ್ತೋತ್ರದಲ್ಲಿ ಈ ಮಾತನ್ನೇ ‘ಪ್ರಕೃತಿಯು ಪರಶಿವನ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಸ್ತುತಿಸಿದ್ದಾರೆ. (‘ಕರಗ್ರಾಹ್ಯಂ ಶಂಭೋರ್ಮುಖಮುಕುರವ್ರಂತಂ ಗಿರಿಸುತೇ…’). ಲಲಿತಾಸಹಸ್ರನಾಮದಲ್ಲಿ ಇದೇ ಮಾತನ್ನು ಅವ್ಯಕ್ತರೂಪದಲ್ಲಿ ಇರುವ ಮೂಲಪ್ರಕೃತಿಯು ಅನೇಕ ವ್ಯಕ್ತರೂಪಗಳನ್ನು ತಾಳುವುದು ಎಂದು ಹೇಳಿದ್ದಾರೆ. (ಮೂಲಪ್ರಕೃತಿರವ್ಯಕ್ತಾ, ವ್ಯಕ್ತಾವ್ಯಕ್ತಸ್ವರೂಪಿಣೀ).

ಏನೇ ಇರಲಿ, ಯಾವುದೇ ಜ್ಞಾನೇಂದ್ರಿಯವಿಲ್ಲದ, ಕೇವಲ ಏಕಕೋಶವಷ್ಟೇ ಇರುವ ಪ್ರಾಥಮಿಕ ಜೀವಿಯು ಪರಿಸರಕ್ಕೆ ಸ್ಪಂದಿಸಲು ಹೇಗೆ ಸಾಧ್ಯವಾಯಿತು? ಉದಾಹರಣೆಗೆ ಈ ಜೀವಿಗೆ ‘ದೃಷ್ಟಿ’ ಹೇಗೆ ಬಂದಿತು? ಪ್ರಾಣಿಗಳು ಉತ್ಕ್ರಾಂತಿಯ ತೀರ ಕೆಳಮಟ್ಟದಲ್ಲಿ ಇದ್ದಾಗ, ಅವಕ್ಕೆ ಕಣ್ಣುಗಳೇ ಇರಲಿಲ್ಲವಲ್ಲ! ಬೆಳಕಿನ ಕಿರಣಗಳ ಮೂಲಕ ವಸ್ತುಸ್ವರೂಪವನ್ನು ತಿಳಿಯಬಹುದು ಎನ್ನುವ ಅರಿವೇ ಆ ಕಾಲದ ಜೀವಿಗಳಿಗೆ ಇರಲಿಲ್ಲ. ಕಿರಣಗಳನ್ನು ಒಂದು ಬಿಂದುವಿನಲ್ಲಿ ಸಂಗಮಿಸಬಲ್ಲ ಮಸೂರಗಳು ಇರಲಿಲ್ಲ; ಅಕ್ಷಿಪಟಲ ಇರಲಿಲ್ಲ. ಅಂದ ಮೇಲೆ ಈ ‘ದೃಷ್ಟಿವ್ಯವಸ್ಥೆ’ಯು  ಪ್ರಾಣಿಗಳಲ್ಲಿ ಹೇಗೆ ವಿಕಾಸಗೊಂಡಿತು?  

ಇದು ಹೀಗಿರಬಹುದು:
ಕೆಳಮಟ್ಟದ ಪ್ರಾಣಿಗಳಲ್ಲಿ ವಿಕಾಸಗೊಂಡ ವ್ಯವಸ್ಥೆಯು ಇರದೇ ಇದ್ದರೂ ಸಹ, ಸ್ವರಕ್ಷಣೆಗೆ ಬೇಕಾಗುವಷ್ಟು ವ್ಯವಸ್ಥೆಯು ವಿಕಾಸಗೊಂಡಿರುತ್ತದೆ. ಈ ವ್ಯವಸ್ಥೆ ತೀರ ಕೆಳಮಟ್ಟದ ವ್ಯವಸ್ಥೆ ಆಗಿರಬಹುದು. ಆದರೆ ಇಂತಹ ಒಂದು ವ್ಯವಸ್ಥೆ ಇರದಿದ್ದರೆ, ಆ ಪ್ರಾಣಿವರ್ಗ ಕಾಲಕ್ರಮೇಣ ನಾಶವಾಗುವದರಲ್ಲಿ ಸಂದೇಹವಿಲ್ಲ.

ಇಂತಹ ಜೀವಿಗಳಲ್ಲಿ, ಅತಿ ಉಷ್ಣತೆಯಿಂದ ಜೀವಕೋಶಗಳನ್ನು ಕಾಪಾಡಿಕೊಳ್ಳುವುದು ಸ್ವರಕ್ಷಣೆಯ ಒಂದು ಪ್ರಾಥಮಿಕ ಅಂಶವಾಗಿರಬೇಕಲ್ಲವೆ? ಆದುದರಿಂದ, ಸೂರ್ಯನ ಪ್ರಖರ ಕಿರಣಗಳಿಗೆ ಸಂವೇದಿಸುವ ಕೋಶಗಳ ಉತ್ಪಾದನೆಯು ಈ ಪ್ರಯತ್ನದ ಮೊದಲ ಹೆಜ್ಜೆಯಾಗಿರಬೇಕು. ಈ ಸಂವೇದನಾಕೋಶಗಳು ಉಷ್ಣತೆಯನ್ನು ಗ್ರಹಿಸುವ ಕಾರ್ಯಕ್ಕಷ್ಟೇ ಸೀಮಿತಗೊಳ್ಳದೆ, ಕಾಲಕ್ರಮದಲ್ಲಿ ಉಷ್ಣತೆಯಿಂದ ಮೂಡುವ ಛಾಯೆಯನ್ನು ಗ್ರಹಿಸುವಷ್ಟು ವಿಕಾಸವನ್ನು ಹೊಂದಿರಬೇಕು. ವಿಕಾಸದ ಮುಂದಿನ ಮೆಟ್ಟಲುಗಳಲ್ಲಿ, ಉಷ್ಣತೆಯ ಕಿರಣಗಳಷ್ಟೇ ಅಲ್ಲದೆ, ಬೆಳಕಿನ ಕಿರಣಗಳನ್ನೂ ಗ್ರಹಿಸುವ ಸಂವೇದನೆಯನ್ನು ಈ ಜೀವಕೋಶಗಳು ಬೆಳೆಸಿಕೊಂಡಿರಬಹುದು. ಬೆಳಕಿನ ಕಿರಣಗಳ ಮೂಲಕ ವಸ್ತುಸ್ವರೂಪವನ್ನು ಗ್ರಹಿಸುವ ‘ದೃಷ್ಟಿವ್ಯವಸ್ಥೆ’ಯು ಉತ್ಕ್ರಾಂತಿಯ ಮೇಲ್ಮಟ್ಟದಲ್ಲಿ ಇರುವ ಪ್ರಾಣಿವರ್ಗಗಳಲ್ಲಿ ಈ ರೀತಿಯಾಗಿ ವಿಕಾಸವಾಗಿರಬಹುದು.

ಪ್ರಾಣಿವರ್ಗಗಳಲ್ಲಿ ಇದೇನೋ ಸರಿಯಾಯಿತು. ಆದರೆ ಸಸ್ಯಗಳಲ್ಲಿ  ‘ಕಾಣುವ ವ್ಯವಸ್ಥೆ’ ಇದೆಯೆ? ಸಸ್ಯವರ್ಗದಲ್ಲಿ ನರಮಂಡಲವಿಲ್ಲ. ಆದುದರಿಂದ ಸಸ್ಯಗಳು ನೋಡಲಾರವು. ಅದೇ ರೀತಿ ಸಸ್ಯಗಳು ಮೂಸಲಾರವು. ಆದರೆ, ನಮ್ಮ ವಿಜ್ಞಾನವು ನಮಗೆ ಕಲಿಸುವ ಪಾಠ ಏನು ತಿಳಿಸುತ್ತದೆ? ದುಂಬಿಗಳನ್ನು ಆಕರ್ಷಿಸಲೆಂದೇ, ಸಸ್ಯಗಳು ವಿವಿಧ ವರ್ಣದ ಹಾಗು ವಿವಿಧ ಪರಿಮಳದ ಹೂವುಗಳನ್ನು ಸೃಷ್ಟಿಸುತ್ತವೆ! ಸ್ವತಃ ಕಣ್ಣಿಲ್ಲದ, ಮೂಸಲಾರದ ಸಸ್ಯಗಳಿಗೆ ಈ ತಿಳಿವು ಬರಲು ಹೇಗೆ ಸಾಧ್ಯ? ಶಾಸ್ತ್ರೀಯ ಸಂಗೀತವನ್ನು ‘ಕೇಳುವ’ ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ ಎಂದು ಕೆಲವು ಸಂಗೀತಕಾರರು ಪ್ರಯೋಗಗಳ ಮೂಲಕ ಸಿದ್ಧಪಡಿಸಿದ್ದಾರೆ! ಕಿವಿ ಇಲ್ಲದ ಸಸ್ಯಗಳಿಗೆ ಇದು ಹೇಗೆ ಸಾಧ್ಯ?
( ಟಿಪ್ಪಣಿ: ಸಸ್ಯಗಳು ಹೊರಸೂಸುವ ಪರಿಮಳದಲ್ಲಿ, ಕಾಮಪ್ರಚೋದಕ ಫೆರೋಹಾರ್ಮೋನುಗಳು ಇರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಕಾರಣದಿಂದಲೇ ದುಂಬಿಗಳು ಹೂವುಗಳಿಗೆ ಆಕರ್ಷಿತವಾಗುತ್ತವೆ ಎನ್ನಲಾಗುತ್ತಿದೆ. ಫೆರೋಹಾರ್ಮೋನುಗಳ ಜ್ಞಾನವು ಸಸ್ಯಗಳಿಗೆ ಹೇಗೆ ಸಾಧ್ಯವಾಯಿತು?)

ಸಸ್ಯಜೀವಿಗಳೇ ಆಗಲಿ, ಪ್ರಾಣಿಜೀವಿಗಳೇ ಆಗಲಿ, ತಮ್ಮಲ್ಲಿ ಇರುವ ‘ಮೂಲ ಅರಿವಿ’ನಿಂದ, ತಮ್ಮ ಪರಿಸರವನ್ನು ಗ್ರಹಿಸುವ ಸಾಮರ್ಥ್ಯವನ್ನು ಪಡೆದಿವೆ. ಈ ‘ಮೂಲ ಅರಿವಿಗೆ’ ನಾನು ‘ಜೀವಪ್ರಜ್ಞೆ’ ಎನ್ನುತ್ತೇನೆ. ಅವ್ಯಕ್ತರೂಪದಲ್ಲಿರುವ ಈ ಜೀವಪ್ರಜ್ಞೆಯ ಪರಮ ಅವಸ್ಥೆಯೇ ‘ಸಚ್ಚಿದಾನಂದ’ ಭಾವ; ವ್ಯಕ್ತಸ್ಥಿತಿಯಲ್ಲಿ ಇದು ವಿಶ್ವರೂಪವನ್ನು ತಾಳುತ್ತದೆ. (‘ವಿಶ್ವರೂಪಾ ಜಾಗರಣೀ, ಸ್ವಪಂತೀ ತೈಜಸಾತ್ಮಿಕಾ, ಸುಪ್ತಾ ಪ್ರಾಜ್ಞಾತ್ಮಿಕಾ ತುರ್ಯಾ ಸರ್ವಾವಸ್ಥಾ ವಿವರ್ಜಿತಾ..’---ಲಲಿತಾಸಹಸ್ರನಾಮ).

ಪ್ರಾಥಮಿಕ ಜೀವಿಗಳಲ್ಲಿ ಜೀವಪ್ರಜ್ಞೆಯು ಯಾವ ಪ್ರಮಾಣದಲ್ಲಿ ಬಳಕೆಯಾಗುವದೋ, ಆ ಪ್ರಮಾಣದಲ್ಲಿ ವಿಕಾಸಗೊಂಡ ಜೀವಿಗಳಲ್ಲಿ ಆಗುವುದಿಲ್ಲ ಎಂದು ನನ್ನ ಭಾವನೆ. ನನ್ನ ಸಂದೇಹಕ್ಕೆ ಕಾರಣ ಹೀಗಿದೆ: ಕೆಳಮಟ್ಟದ ಪ್ರಾಣಿಗಳು ಹುಟ್ಟಿದ ಸ್ವಲ್ಪ ಕಾಲದಲ್ಲಿಯೇ, ತಮ್ಮ ಪೂರ್ಣ ದೈಹಿಕ ಸಾಮರ್ಥ್ಯವನ್ನು ಹಾಗು ತಿಳಿವಳಿಕೆಯನ್ನು ಪಡೆಯುತ್ತವೆ. ಮಂಗನ ಮರಿ ಹುಟ್ಟಿದ ಕೆಲವೇ ತಿಂಗಳಲ್ಲಿ ಮರದಿಂದ ಮರಕ್ಕೆ ಸಲೀಸಾಗಿ ಜಿಗಿಯಬಲ್ಲವು. ತಾವು ಎಂತಹ ಆಹಾರವನ್ನು ತಿನ್ನಬೇಕು ಎನ್ನುವುದು ಅವಕ್ಕೆ ಹುಟ್ಟಿನಿಂದಲೇ ತಿಳಿದು ಬಿಡುತ್ತದೆ. ಆದರೆ ಮಾನವಶಿಶುವಿಗೆ ಎದ್ದು ನಿಂತುಕೊಳ್ಳಲು ಒಂದು ವರ್ಷವೇ ಬೇಕಾಗುತ್ತದೆ; ತಿನ್ನಬಹುದಾದ ಆಹಾರವನ್ನು ಗುರುತಿಸಲೂ ಸಹ ಮಾನವಶಿಶುವು ದೀರ್ಘಕಾಲವನ್ನು ತೆಗೆದುಕೊಳ್ಳುತ್ತದೆ. ಕೆಳಮಟ್ಟದ ಪ್ರಾಣಿಗಳ ಈ ಜೈವಿಕ ಹಾಗು ಬೌದ್ಧಿಕ ಸಾಮರ್ಥ್ಯದಿಂದ ಚಕಿತನಾದ ನಾನು, ನನಗೆ ಪರಿಚಿತರಾದ ಓರ್ವ ಪ್ರಾಣಿಶಾಸ್ತ್ರಜ್ಞರ ಎದುರಿಗೆ ನನ್ನ ಸಂದೇಹವನ್ನು ಮಂಡಿಸಿದೆ. ಅವರ ಉತ್ತರ ಹೀಗಿತ್ತು. ಕೆಳಮಟ್ಟದ ಪ್ರಾಣಿಗಳ ಬದುಕುವ ಅವಧಿ ಕಡಿಮೆ, ಮನುಷ್ಯನ ಬದುಕುವ ಅವಧಿ ಜಾಸ್ತಿ; ಆದುದರಿಂದ ಮನುಷ್ಯನ ಕಲಿಕೆಯ ಅವಧಿ ಸಹ ಜಾಸ್ತಿ. ಈ ಉತ್ತರದಿಂದ ನನಗೆ ಸಮಾಧಾನವಾಗಲಿಲ್ಲ. ಅವರಿಗೆ ಮತ್ತೆ ಕೇಳಿದೆ: ‘ಆದರೆ ಪ್ರೊಫೆಸರರೆ, ಕಡಲಾಮೆಗಳು ನಾಲ್ಕುನೂರು ವರ್ಷಗಳವರೆಗೆ ಜೀವಿಸುತ್ತವೆ. ಆಮೆಯ ಮರಿಗಳು ಮೊಟ್ಟೆಯಿಂದ ಹೊರಬಂದ ತಕ್ಷಣವೇ, ನಡೆಯುತ್ತ ಸಮುದ್ರಕ್ಕೆ ಹೋಗಿ, ಅಲ್ಲಿಂದ ಈಜುತ್ತ ತಮ್ಮ ಸ್ಥಳಗಳಿಗೆ ತಲುಪತ್ತವೆಯಲ್ಲ? ಇಂತಹ ದೀರ್ಘಜೀವಿಗಳಲ್ಲಿ ಕಲಿಕೆಯು ಏತಕ್ಕೆ ಸಾವಕಾಶವಾಗುವದಿಲ್ಲ? ’ ಈ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ.

ಆಗ ನನಗೆ ಹೊಳೆದ ಉತ್ತರ ಹೀಗಿದೆ:
ಮನುಷ್ಯನ ವಿಕಾಸಪಥದಲ್ಲಿ ‘ಜೈವಿಕ ತಿಳಿವಿ’ನ ಜೊತೆಗೇ ‘ಭೌತಿಕ ಕಲಿಕೆಯ’ ಪ್ರಮಾಣವೂ ಅಧಿಕವಾಗುತ್ತಲೇ ಸಾಗಿದೆ. ಮಾನವಶಿಶುವಿಗೆ ಕೇವಲ ಎದ್ದು ನಿಲ್ಲಲು ಸಾಧ್ಯವಾದರೆ ಸಾಲದು; ಅದು ಮಾತನಾಡಲು ‘ಕಲಿ’ಯಬೇಕು! ಮನುಷ್ಯಪರಿಸರವು ಹಾಗು ಸಮಾಜವು ಪ್ರಾಣಿಪರಿಸರಕ್ಕಿಂತ ಹಾಗು ಸಮಾಜಕ್ಕಿಂತ ತುಂಬ ಸಂಕೀರ್ಣವಾಗಿದೆ. ಮಾನವನು ಬದುಕಲು ಕೇವಲ ದೈಹಿಕ ಕುಶಲತೆಯನ್ನು ಅವಲಂಬಿಸುವದಿಲ್ಲ, ಆದರೆ ಬೌದ್ಧಿಕ ಕುಶಲತೆಯನ್ನು ಅವಲಂಬಿಸುತ್ತಾನೆ. ಇಂತಹ ಸಂಕೀರ್ಣತೆಯನ್ನು ಗ್ರಹಿಸುವುದನ್ನು ಹಾಗು ಅದಕ್ಕೆ ಸ್ಪಂದಿಸುವುದನ್ನು ಮಾನವಶಿಶು ಕಲಿಯಬೇಕಾಗುತ್ತದೆ.  ಆದುದರಿಂದ ಜೈವಿಕ ವಿಕಾಸ ಹಾಗು ಭೌತಿಕ ಕಲಿಕೆಗಳು ಜೊತೆಜೊತೆಗೇ ಸಾಗಬೇಕಾದಂತಹ ಪರಿಸ್ಥಿತಿಯಲ್ಲಿ ಮಾನವಕೂಸಿನ ಜೈವಿಕ ಗ್ರಹಿಕೆ ಪ್ರಾಣಿಕೂಸುಗಳ ಜೈವಿಕ ಗ್ರಹಿಕೆಗಿಂತ ನಿಧಾನವಾಗುತ್ತದೆ ಹಾಗು ಮಾನವಶಿಶುಗಳಿಗೆ ಜೈವಿಕ ಸಾಮರ್ಥ್ಯವನ್ನು ರೂಢಿಸಿಕೊಳ್ಳಲು ಅಧಿಕ ಸಮಯ ಬೇಕಾಗುತ್ತದೆ.

ಮಾನವನ ಭೌತಿಕ ಜ್ಞಾನ ಹೆಚ್ಚಿದಂತೆ, ಆತನಿಗೆ ತಾನು ಪರಿಸರವನ್ನು ಜಯಿಸಿದ್ದೇನೆಂಬ ಗರ್ವ ಬಂದಿದೆ. ಆದರೆ ಮಾನವನಿಗಿಂತ ಅಧಿಕ ಜೈವಿಕ ಪ್ರಜ್ಞೆಯನ್ನು ಹೊಂದಿರುವ ತೀರ ಕೆಳಮಟ್ಟದ ಜೀವಿಗಳನ್ನು ಸೋಲಿಸಲು ಅವನಿಂದ ಸಾಧ್ಯವಾಗಿಲ್ಲ ಹಾಗು ಆಗಲಾರದು. ವೈರಾಣುಗಳ ನಾಶಕ್ಕಾಗಿ ನಾವೆಷ್ಟೇ ಜೀವಿರೋಧಿ ಮದ್ದುಗಳನ್ನು ಸಂಶೋಧಿಸಿದರೂ ಸಹ, ವೈರಾಣುಗಳು ತಮ್ಮ ಜೀನುಗಳನ್ನು ಮಾರ್ಪಡಿಸಿಕೊಳ್ಳುತ್ತ ಬದುಕಿವೆ. ಈ ಹೋರಾಟದಲ್ಲಿ ಅವುಗಳದೇ ಕೊನೆಯ ನಗೆ!

ಇದೆಲ್ಲ ‘ಭೂಲೋಕ’ದ ವಿಷಯವಾಯಿತು. ಮಾನವನ ಪ್ರಜ್ಞೆಗಿಂತ ಹೆಚ್ಚಿನ ಪ್ರಜ್ಞೆಯನ್ನು ಹೊಂದಿದ ಅನೇಕ ಲೋಕಗಳಿವೆ. ಅವು ದೇವಲೋಕಗಳು. ಈ ಎಲ್ಲ ಲೋಕಗಳ ಕೊನೆಯಲ್ಲಿ ಇರುವುದೇ ‘ಬಿಂದು’. ಭಾರತೀಯ ಶಾಸ್ತ್ರಗಳ ಮೇರೆಗೆ, ಈ ಬಿಂದುವಿನಲ್ಲಿ ಪರಮಾತ್ಮ ಹಾಗು ಪ್ರಕೃತಿ ಅಭಿನ್ನರಾಗಿ ಇರುತ್ತಾರೆ. ಈ ಬಿಂದುವಿನ ವಿಘಟನೆ ಹಾಗು ಸಂಘಟನೆಗಳು ಸತತವಾಗಿ ನಡದೇ ಇರುತ್ತವೆ. ಇದು ವಿಶ್ವದ ಸೃಷ್ಟಿಯ ಹಾಗು ಸಂಹಾರದ ಗುಟ್ಟು!

Saturday, November 15, 2014

‘ಅಪ್ಪು ಆತ್ಮನನು ಆತ್ಮನೆ ಅಪ್ಪೆ’...............ದ.ರಾ.ಬೇಂದ್ರೆ



ಅಪ್ಪು ಆತ್ಮನನು, ಆತ್ಮನೆ ಅಪ್ಪೆ
ನಿನ್ನನು ಒಪ್ಪದೆ ನನ್ನನು ಒಪ್ಪೆ

ತಿಳಿವಳಿಕೆಯ ತುದಿ ನಾವೂ ನೀವೂ
ತಿಳಿಯೆನು ಎನ್ನುವ ಹಠವೇ ಸಾವು

ತಿಳಿಸಿರಿ ಎನುವಲಿ ತಿಳಿವಿರಬೇಕು
ನೀರಿನ ಕದಡೂ ಇಳಿದಿರಬೇಕು

ಬಲ್ಲೆನು ಎನುವುದು ಗರ್ವವು ನೋಡಾ
ತಿಳಿಯಲು ಬಲ್ಲೆನು ನೀನೆನಬೇಡಾ

ಬಲಗಡೆಯಿಂದ ಎಡಗಡೆ ಓದು
ಜಾಜಾ ಮಂತ್ರಾ ಮಾತಿನ ಜಾಡು

ಹೊರಮೈ ಒಳಮೈ ಒಂದೇ ದೇಹ
ಇರುವಿನ ಅರಿವಿನ ಹರಿವೇ ಸ್ನೇಹ

ಸುತ್ತೂ ಕಡೆಗೆ ಎಲ್ಲೂ ಇಲ್ಲಾ
ಬೆಳಕೇ ಬೆಲ್ಲಾ ಕತ್ತಲೆ ಅಲ್ಲಾ

ಲ್ಲಾಅಲೆತ್ತಕ ಲ್ಲಾಬೆ ಕೆಳಬೆ
ಲ್ಲಾಇ ಲ್ಲೂಎ ಗೆಡಕ ತ್ತೂಸು


ಕವಿ ಬದಲಾಗುತ್ತ ಹೋದಂತೆ, ಅವನ ಕಾವ್ಯವೂ ಬದಲಾಗುತ್ತ ಹೋಗುತ್ತದೆ. ಬೇಂದ್ರೆಯವರು ಈ ಮಾತಿಗೆ ಉತ್ತಮ ಉದಾಹರಣೆಯಾಗಿದ್ದಾರೆ. ‘ಅರಳು ಮರಳು’ ನಂತರದ ಬೇಂದ್ರೆ-ಕಾವ್ಯವು ಕಾವ್ಯವೇ ಅಲ್ಲ ಎಂದು ಕೆಲವರು ವಿಮರ್ಶಕರು ಹೇಳಿದ್ದುಂಟು. ‘ಅರಳು ಮರಳು’ವಿನ ಮೊದಲಿನ ಬೇಂದ್ರೆಯವರು ನವೋದಯದ ಆದರ್ಶಗಳ ಕನಸು ಕಂಡ ಕವಿ. ಅವರ ದೃಷ್ಟಿ ಅಧ್ಯಾತ್ಮಿಕವಾಗುತ್ತ ಹೋದಂತೆ ಅವರ ಕಾವ್ಯ ಬದಲಾಗುತ್ತ ಹೋಯಿತು. ಅವರು ಶ್ರೇಷ್ಠ ಕವಿಯಾಗಿದ್ದರೂ ಸಹ ಆಧ್ಯಾತ್ಮಿಕ ಸಾಧನೆಯ ಪಥದಲ್ಲಿ ಇನ್ನೂ ದೂರ ಕ್ರಮಿಸಿರಲಿಲ್ಲ. ಹೀಗಾಗಿ ಆಧ್ಯಾತ್ಮಿಕ ಅನುಭವದ ಅವರ ಕವನಗಳು ಈ ಅವಧಿಯಲ್ಲಿ ಉತ್ಕಟ ಕಾವ್ಯವಾಗಲಿಲ್ಲ. ಅವರ ಸಾಧನೆ ಹೆಚ್ಚಾದಂತೆ, ಕವನಗಳು, ತೋರಿಕೆಗೆ ಸರಳವಾದರೂ ಸಹ, ಹೆಚ್ಚು ಗೂಢವಾದವು. ಇಲ್ಲಿರುವ ಕವನವು ಅಂತಹ ಒಂದು ಕವನ. ಇನ್ನು ಈ ಕವನವನ್ನು ಹೇಗೆ ಅನುಭವಿಸಬೇಕು? ಕನ್ನಡವನ್ನು ಓದಲಿಕ್ಕೆ ಕನ್ನಡ ಲಿಪಿಯನ್ನು ಕಲಿಯಬೇಕು. ಇಂಗ್ಲಿಶ್‍ಅನ್ನು ಓದಲು ಇಂಗ್ಲಿಶ್ ಲಿಪಿ ಬರಬೇಕು. ಅದರಂತೆ ವಿಭಿನ್ನ ಕವಿಗಳನ್ನು (--ಅವರು ಒಳ್ಳೆಯ ಕವಿಗಳೇ ಇರಲಿ, ಕೆಟ್ಟ ಕವಿಗಳೇ ಇರಲಿ—) ಅರ್ಥೈಸಿಕೊಳ್ಳಲು ಅವರ ಕಾವ್ಯಭಾಷೆಯನ್ನು ನಾವು ತಿಳಿಯಬೇಕು.

ಬೇಂದ್ರೆಯವರ ‘ನಾಕು ತಂತಿ’ ಕವನವನ್ನು ನೋಡಿರಿ: ನಾನು, ನೀನು, ಅವನು, ತಾನು ಎನ್ನುವುದೇ ಈ ವಿಶ್ವಸಂಸಾರದ ನಾಲ್ಕು ತಂತಿಗಳು. ಆದರೆ, ವಿಶ್ವವು ಭಿನ್ನವಾಗಿ ಒಡೆಯುವ ಮೊದಲು, ಈ ಎಲ್ಲ ತಂತಿಗಳು ಒಂದೇ, ಅಭಿನ್ನ ರೂಪ. ಬೇಂದ್ರೆಯವರು ಈ ತತ್ವವನ್ನು ಈ ಕವನದಲ್ಲಿ ಅನುಭವಿಸುತ್ತಿದ್ದಾರೆ. ಮೊದಲು ವಿಘಟಿತ ವಿಶ್ವವನ್ನು ನಾಲ್ಕು ತಂತಿಗಳ ಮೂಲಕ ನೋಡಿದ ಬೇಂದ್ರೆಯವರು, ಈಗ ಅದೇ ವಿಶ್ವವನ್ನು ಒಂದೇ ರೂಪದಲ್ಲಿ ನೋಡುತ್ತಿದ್ದಾರೆ.

ಆತ್ಮ ಎಂದರೆ self. ತನ್ನನ್ನು ತಿಳಿದುಕೊಳ್ಳಬಯಸುವ ವ್ಯಕ್ತಿಯು ತನ್ನನ್ನು ಅಪ್ಪಿಕೊಳ್ಳಬೇಕು. ಈ ಮಾತಿಗೆ ಏನರ್ಥ? ತನ್ನನ್ನು ತಾನು ಧ್ಯಾನಿಸಿಕೊಳ್ಳಬೇಕು ಎಂದಲ್ಲವೆ? ತನ್ನನ್ನು ತಾನು ಧ್ಯಾನಿಸಿಕೊಂಡಾಗ, ‘ತಾನು’ ಎಂದು ತಿಳಿದುಕೊಂಡಿರುವ ಮನಸ್ಸು ಅಥವಾ ಪ್ರಜ್ಞೆಯು ತನ್ನನ್ನೇ ಅಪ್ಪಿಕೊಳ್ಳುತ್ತದೆ ಅಂದರೆ ತನ್ನಲ್ಲೇ ಸಮರಸವಾಗುತ್ತದೆ. ಇದೇ ಮಾತನ್ನು ಅಲ್ಲಮಪ್ರಭುಗಳು ತಮ್ಮ ಒಂದು ವಚನದಲ್ಲಿ, ‘ಗುಹೇಶ್ವರ ಸತ್ತ, ನಾನು ಉಳಿದೆ’ ಎಂದು ಹೇಳಿದ್ದಾರೆ.

ಆದರೆ ವಿಘಟಿತ ವಿಶ್ವದಲ್ಲಿ ‘ನಾನು’ ಮಾತ್ರ ಇರುವುದಿಲ್ಲ. ನಾಲ್ಕು ತಂತಿಯ ಎರಡನೆಯ ತಂತಿಯಾದ ‘ನೀನು’ ಅಲ್ಲಿ ಇರಲೇಬೇಕು. ಅದರ ಇರುವನ್ನು ‘ನಾನು’ ಅನುಭವಿಸಬೇಕು. ‘ನಿನ್ನನ್ನು’ ನಾನು ‘ನಾನು’ ಎಂದು ತಿಳಿದಾಗಲೇ, ನನ್ನನ್ನು ನಾನು ತಿಳಿದುಕೊಂಡಂತೆ. ಆದುದರಿಂದಲೆ, ಬೇಂದ್ರೆಯವರು ‘ನಿನ್ನನು ಒಪ್ಪದೆ, ನನ್ನನು ಒಪ್ಪೆ’ ಎಂದು ಹೇಳುತ್ತಿದ್ದಾರೆ. ಅರ್ಥಾತ್ ನಾನು ಹಾಗು ನೀನು ಎರಡೂ ಒಂದೇ. ಈ ಮಾತು ಆಧ್ಯಾತ್ಮಿಕವಾಗಿ ಮಾತ್ರವಲ್ಲ, ವ್ಯಾವಹಾರಿಕವಾಗಿಯೂ ಸತ್ಯವಾಗಿದೆ. ಲೌಕಿಕ ಜಗತ್ತಿನಲ್ಲಿ ನಾನು ನನಗೆ ಕೊಡುವ ಸ್ಥಾನವನ್ನು ನನಗೆ ಎದುರಾದ ‘ನಿನ’ಗೂ ಕೊಡಲೇ ಬೇಕು. ಈ ತಿಳಿವೇ ಅಂತಿಮ ಸತ್ಯ. ಪರಮಾತ್ಮನು  ಸತ್ಯದ ಮೂಲವಾದರೆ, ನಾನು ಹಾಗು ನೀನು ಈ ಸತ್ಯದ ವ್ಯಕ್ತ ಕೊನೆಗಳು; ವೃಕ್ಷದ ಕಾಂಡ ಹಾಗು ರೆಂಬೆಗಳು ಇದ್ದಂತೆ. ನಾವೆಲ್ಲರೂ ಆ ಅವ್ಯಕ್ತ ಪರಮಾತ್ಮನ ವ್ಯಕ್ತರೂಪಗಳು ಎನ್ನುವುದನ್ನು ತಿಳಿಯಲು ನಿರಾಕರಿಸಿದರೆ, ನಮ್ಮ ಅಸ್ತಿತ್ವಕ್ಕೆ ಅರ್ಥವಿಲ್ಲ ಅರ್ಥಾತ್ ನಾವು ಇದ್ದರೂ ಸಹ ಸತ್ತಂತೆಯೇ.

ತಿಳಿವಳಿಕೆ ಇಲ್ಲದ ವ್ಯಕ್ತಿ ತಿಳಿವಳಿಕೆ ಇದ್ದ ಗುರುವನ್ನು ಆಶ್ರಯಿಸಿ, ‘ತಿಳಿಸಿರಿ’ ಎಂದು ಪ್ರಾರ್ಥಿಸಬೇಕು. ಆ ಯಾಚಕನ ಮನಸ್ಸು ತಿಳಿಯಾಗಿರಬೇಕು ಅಂದರೆ ಅವನ ಮನಸ್ಸಿನಲ್ಲಿ ಅಹಂಕಾರ ಇರಕೂಡದು, ಯಾವುದೇ ಕಲ್ಮಶಗಳು ಇರಬಾರದು.  ಕದಡಿದ ನೀರಿನಲ್ಲಿ ರಾಡಿ ಇರುತ್ತದೆ. ಆದರೆ ನೀರು ನಿಶ್ಚಲವಾದಾಗ ರಾಡಿ ಇಳಿದು ಹೋಗುತ್ತದೆ. ಅದರಂತೆ ಚಂಚಲತೆ ಹಾಗು ಉದ್ವಿಗ್ನತೆಯಿಂದ ಕದಡಿದ ಮನಸ್ಸಿಗೆ ಗುರುವಾಕ್ಯವನ್ನು ಗ್ರಹಿಸಲು ಅಸಾಧ್ಯವಾಗುತ್ತದೆ. ಆದುದರಿಂದ ಮನಸ್ಸನ್ನು ಸ್ವಚ್ಛಗೊಳಿಸಿ, ನಿಗ್ರಹದಲ್ಲಿ ತಂದು ಗುರುವಾಕ್ಯವನ್ನು ಆಲಿಸಬೇಕು. ತನಗೆ ತಿಳಿದೇ ಬಿಟ್ಟಿದೆ ಎಂದು ತಿಳಿದುಕೊಂಡವನು ಗುರುವಿನಿಂದ ಏನನ್ನು ಪಡೆಯಲು ಸಾಧ್ಯ? ಅದರಂತೆ, ತಿಳಿಯುವ ಸಾಮರ್ಥ್ಯವು ತನ್ನಲ್ಲಿ ಇದೆ ಎಂದುಕೊಳ್ಳುವುದೂ ಸಹ ಅಹಂಕಾರವೇ. ಅದುದರಿಂದ ಪಾರಮಾರ್ಥಿಕ ಸತ್ಯವು ತನಗೆ ತಿಳಿದಿಲ್ಲ; ಗುರುಕೃಪೆಯಿಂದ ಮಾತ್ರ ಆ ಸತ್ಯವನ್ನು ತಿಳಿದುಕೊಳ್ಳಬಹುದು ಎನ್ನುವ ಅರಿವು ಯಾಚಕನಿಗೆ ಬೇಕು.

ಗುರುಕೃಪೆಯಿಂದ ದೊರೆಯುವ ಈ ಪರಮ ಸತ್ಯವನ್ನು ಯಾವ ಕಡೆಯಿಂದ ನೋಡಿದರೂ ಒಂದೇ ಆಗಿರುತ್ತದೆ. ಈ ಪರಮ ಸತ್ಯವನ್ನು ಅನೇಕರು ಅನೇಕ ಬಗೆಗಳಲ್ಲಿ ಹೇಳುತ್ತಾರೆ:  ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’. ಸತ್ಯಾರ್ಥಿಯು ಈ ಸತ್ಯವನ್ನು ಎಡದಿಂದ ಬಲಕ್ಕೆ ಓದಲಿ ಅಥವಾ ಬಲದಿಂದ ಎಡಕ್ಕೆ ಓದಲಿ, ಅದರ ಅರ್ಥ ಬದಲಾಗುವದಿಲ್ಲ.  ಈ ಮಾತಿಗೆ ಒಂದು ಉದಾಹರಣೆಯನ್ನು ಕೊಡಬಹುದು. ಕನಕ ಎನ್ನುವ ಪದವನ್ನು ಎಡಗಡೆಯಿಂದಲೇ ಓದಲಿ ಅಥವಾ ಬಲಗಡೆಯಿಂದಲೇ ಓದಲಿ, ಅದು ಕನಕವಾಗಿಯೇ ಅಂದರೆ ಬಂಗಾರವಾಗಿಯೇ ಉಳಿಯುವುದು.ಇದನ್ನು ಬೇಂದ್ರೆಯವರು ‘ಜಾಜಾ ಮಂತ್ರ’ ಎನ್ನುತ್ತಾರೆ. ‘ಜಾಜಾ ಮಂತ್ರ’ ಇದು ಹುಡುಗರು ಆಡುವಾಗ ಬಳಸುವ ಮಾತು. ತಮ್ಮ ಬಲಗೈಯಲ್ಲಿದ್ದ ಬಳಪವನ್ನು ‘ಜಾಜಾ’ ಎನ್ನುತ್ತ ಹುಡುಗರು ಎಡಗೈಗೆ ಬದಲಾಯಿಸುತ್ತಾರೆ. ಅಂದರೆ ಬಾಲಕರಂತೆ ಸರಳವಾದ ಮನಸ್ಸನ್ನು ಹೊಂದಿದವರಿಗೆ, ಈ ಸತ್ಯಶೋಧನೆ ಜಾಜಾ ಮಂತ್ರದಷ್ಟೇ ಸುಲಭವಾದ ಕಾರ್ಯ.

ಮೊದಲು ಎಡ ಹಾಗು ಬಲಗಳು ಒಂದೇ ಎಂದು ಹೇಳಿದ ಬೇಂದ್ರೆಯವರು, ಈಗ ಹೊರಮೈ ಹಾಗು ಒಳಮೈ ಒಂದೇ ಎಂದು ಹೇಳುತ್ತಾರೆ. ಪಾರಮಾರ್ಥಿಕ ಸತ್ಯಕ್ಕೆ ಒಳ ಹಾಗು ಹೊರ ಎನ್ನುವ ಭೇದವೇ ಇರುವುದಿಲ್ಲ. ಈ ಸತ್ಯಕ್ಕೆ ಇರುವುದು, ಇರುವು, ಅರಿವು ಹಾಗು ಸ್ನೇಹ. ಇರುವು ಎಂದರೆ ‘ಸತ್’, ಅರಿವು ಅಂದರೆ ‘ಚಿತ್’ ಅಥವಾ ಜ್ಞಾನ, ಸ್ನೇಹ ಎಂದರೆ ಪ್ರೀತಿ ಅಥವಾ ಆನಂದ. ಹರಿವು ಎಂದರೆ ವಿಸ್ತಾರ; ಹರಿವು ಎಂದರೆ ಚಲನೆಯೂ ಹೌದು. ಈ ವಿಶ್ವವೆಂದರೆ ಸಚ್ಚಿದಾನಂದದ ಸದಾ ಚಲನ. ಬೇಂದ್ರೆಯವರು ಈ ಮಾತನ್ನು ಕೇವಲ ಹೇಳುತ್ತಿಲ್ಲ, ಆದರೆ ಅನುಭವಿಸುತ್ತಿದ್ದಾರೆ.  ಆದುದರಿಂದಲೇ ಅವರು ಇದು ನಮ್ಮ ಹೊರಗೆ, ನಮ್ಮ ಸುತ್ತಮುತ್ತಲೂ ಇಲ್ಲ, ಆದರೆ ನಮ್ಮಲ್ಲೇ, ನಮ್ಮ ಒಳಗೇ ಇದೆ ಎಂದು ಹೇಳುತ್ತಿದ್ದಾರೆ. ಈ ಅರಿವೇ ಬೆಲ್ಲದಂತೆ ಸಿಹಿಯಾದದ್ದು ಹಾಗು ಪೋಷಕವಾದದ್ದು. ಅಜ್ಞಾನ ಅಂದರೆ ಈ ಅರಿವಿನ ಅಭಾವ. ಅದು ಎಂದಿಗೂ ಪರಮಾರ್ಥ ಸಾಧಕನಿಗೆ ಸಿಹಿಯಾಗಲಾರದು.

ಕೊನೆಯ ಎರಡು ಸಾಲುಗಳಲ್ಲಿ ಬೇಂದ್ರೆಯವರು ಈ ಸತ್ಯವನ್ನು ತಿರುವು ಮುರುವು ಮಾಡಿ, ಮೇಲ್‍ಕೆಳಗೆ ಮಾಡಿ ಬರೆದಿದ್ದಾರೆ. ನಾವು ಹೇಗೇ ಓದಿದರೂ ಸಹ ಪರಮ ಸತ್ಯವು ಅದೇ ಆಗಿದೆ ಎನ್ನುವುದನ್ನು ಬೇಂದ್ರೆ ತಮ್ಮದೇ ಆದ ವಿಚಿತ್ರ ರೀತಿಯಲ್ಲಿ ತೋರಿಸುತ್ತಿದ್ದಾರೆ. ಕವಿಯ ಈ ವೈಚಿತ್ರ್ಯವನ್ನು ನಾವು ಒಪ್ಪಿಕೊಂಡಾಗಲೇ ಅವನ ಕವನವನ್ನು ಅಪ್ಪಿಕೊಳ್ಳಲು ಸಾಧ್ಯವಾದೀತು.

Wednesday, November 5, 2014

‘ಕುರುಬರೋ ನಾವು ಕುರುಬರೋ’-----ಶಿಶುನಾಳ ಶರೀಫರು



ಕುರುಬರೋ ನಾವು ಕುರುಬರೋ
ಏನು ಬಲ್ಲೇವರಿ ಆತ್ಮದ ಅನುಭವವೋ                ||ಪಲ್ಲ||

ಮುನ್ನೂರು ಅರುವತ್ತು ಕುರಿ ಮೇಸಿಕೊಂಡು
ಸುಮ್ಮನೇ ಬರುವಂಥಾ                                   ||ಅನುಪಲ್ಲ||

ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ
ನಮ್ಮ ಕುರಿಗಳಿಟ್ಟೇವ್ರಿ ಚೆನ್ನಾಗಿ ಬಚ್ಚಿ
ಈಡೆಂಬ ಬಾಗಿಲ ಹಾಕೇವ್ರಿ ಗಟ್ಟಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ                   ||೧||

ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬು ಚೆಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ವಾಕ್ಯವು ಹಾಲಿನ ಗಡಗಿ
ನಮ್ಮ ಕೈಯಲ್ಲಿ ಇರುವುದೋ ಮುಕ್ತಿ ಎಂಬೋ ಬಡಗಿ  ||೨||

ಸ್ಮಶಾನಭೂಮಿ ಇದು ಖರೆ
ನಾವು ಮೇಸಾಕ ಬಂದೇವರಿ ಕುರಿಯೇ
ತೋಳ ಮುರಿದು ಹತ್ತು ಕುರಿಯೇ
ನಾಗಲಿಂಗ ಅಜ್ಜ ಹೇಳಿದ ಪರಿಯೇ                       ||೩||


ಶರೀಫರು ಈ ಗೀತೆಯಲ್ಲಿ ಪ್ರಾಪಂಚಿಕರ ಬದುಕಿನ ಪರಿಯನ್ನು ಹಾಗು ಅಂತಹ ಬದುಕನ್ನು ಬದಲಾಯಿಸುವ ಬಗೆಯನ್ನು ವರ್ಣಿಸುತ್ತಿದ್ದಾರೆ. ಈ ವರ್ಣನೆಯು ಸಮಸ್ತ ಲೌಕಿಕರಿಗೆ ಅನ್ವಯಿಸುವದರಿಂದ, ಅವರು ‘ನಾನು’ ಎನ್ನುವ ಬದಲಾಗಿ ‘ನಾವು’ ಎನ್ನುವ ಸಮಸ್ತ ಪದವನ್ನು ಗೀತೆಯ ಪಲ್ಲದಲ್ಲಿಯೇ ಬಳಸಿದ್ದಾರೆ.
ಕುರುಬರೋ ನಾವು ಕುರುಬರೋ
ಏನು ಬಲ್ಲೇವರಿ ಆತ್ಮದ ಅನುಭವವೋ

ಕುರುಬರು ಎಂದರೆ ಯಾರು? ಕುರಿಗಳನ್ನು ಸಾಕುವವರು ಕುರುಬರು. ಈ ಕುರಿಗಳ ವಿವರಣೆ ಮುಂದಿನ ನುಡಿಯಲ್ಲಿ ಬರುತ್ತದೆ. ಶರೀಫರ ಕಾಲದಲ್ಲಿ ಶಿಕ್ಷಣ ಹಾಗು ವಿದ್ಯೆ ಸಾರ್ವತ್ರಿಕವಾಗಿರಲಿಲ್ಲ. ಆದುದರಿಂದ ಕುರುಬರು ಎನ್ನುವ ಪದವನ್ನು ಸಾಮಾನ್ಯರು ಅಥವಾ ಪಾಮರರು ಎನ್ನುವ ಅರ್ಥದಲ್ಲಿ ಶರೀಫರು ಬಳಸಿದ್ದಾರೆ. ಆದರೆ ಶರೀಫರು ಇಲ್ಲಿ ಹೇಳುತ್ತಿರುವ ವಿದ್ಯೆ ಪ್ರಾಪಂಚಿಕ ವಿದ್ಯೆ ಅಲ್ಲ; ಅದು ಆತ್ಮಜ್ಞಾನ. ಆದುದರಿಂದ ‘ನಾವು’ ಅಂದರೆ ಪ್ರಾಪಂಚಿಕರು, ಆತ್ಮಜ್ಞಾನವಿಲ್ಲದ ಪಾಮರರು ಎಂದು ಶರೀಫರು ಹೇಳುತ್ತಾರೆ. ಇದಿಷ್ಟು ಪಲ್ಲದಲ್ಲಿಯ ಎರಡು ಸಾಲುಗಳ ಅರ್ಥ.

ಅನುಪಲ್ಲದಲ್ಲಿ ಶರೀಫರು ತಮ್ಮ ಕುರಿಗಳ ವರ್ಣನೆಯನ್ನು ಮಾಡುತ್ತಾರೆ.
ಮುನ್ನೂರು ಅರುವತ್ತು ಕುರಿ ಮೇಸಿಕೊಂಡು
ಸುಮ್ಮನೇ ಬರುವಂಥಾ
ಒಂದು ವರ್ಷದಲ್ಲಿ (ಸಾಂಪ್ರದಾಯಕ ಪಂಚಾಂಗದ ಮೇರೆಗೆ) ಮುನ್ನೂರು ಅರುವತ್ತು ದಿನಗಳಿರುವುದು ನಮಗೆಲ್ಲರಿಗೂ ತಿಳಿದಿದೆ. ಸಾಮಾನ್ಯ ವ್ಯಕ್ತಿಗೆ ಪ್ರತಿ ದಿನವೂ ಒಂದಿಲ್ಲೊಂದು ಪ್ರಾಪಂಚಿಕ ಚಿಂತೆ ಇರುವಂತಹದೇ. ಆದುದರಿಂದಲೇ, ಪುರಂದರದಾಸರು ‘ಅನುಗಾಲವೂ ಚಿಂತೆ ಮನಕೆ ’ಎಂದು ಹಾಡಿದ್ದಾರೆ. ಬದುಕಿಗೆ ದುಡ್ಡು ಬೇಕು, ಈ ದುಡ್ಡನ್ನು ಹೇಗೆ ಗಳಿಸಬೇಕು ಎನ್ನುವುದು ಒಂದು ಚಿಂತೆ; ಮಕ್ಕಳ ಉದ್ಧಾರ ಹೇಗೆ ಎನ್ನುವುದು ನಿರಂತರ ಚಿಂತೆ. ವರ್ಷಪೂರ್ತಿಯಾಗಿ ಈ ಲೌಕಿಕ ಚಿಂತೆಗಳು ಇರುವುದರಿಂದ ಶರೀಫರು ಈ ಚಿಂತೆಗಳಿಗೆ ಮುನ್ನೂರು ಅರುವತ್ತು ಕುರಿಗಳ ಸಾಮತಿಯನ್ನು ಕೊಟ್ಟಿದ್ದಾರೆ. ಈ ಚಿಂತೆಗಳನ್ನು ನಾವು ಪೋಷಿಸುತ್ತಲೇ ಹೋಗುತ್ತೇವೆ; ಅವುಗಳನ್ನು ಬಿಟ್ಟು ಬಿಡುವ ಪ್ರಯತ್ನವನ್ನು ಮಾಡುವುದಿಲ್ಲ ಎನ್ನುವುದನ್ನು ಶರೀಫರು ಅನುಪಲ್ಲದಲ್ಲಿ ಹೇಳುತ್ತಿದ್ದಾರೆ.                                                

ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ
ನಮ್ಮ ಕುರಿಗಳಿಟ್ಟೇವ್ರಿ ಚೆನ್ನಾಗಿ ಬಚ್ಚಿ
ಈಡೆಂಬ ಬಾಗಿಲ ಹಾಕೇವ್ರಿ ಗಟ್ಟಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ             

ಕುರುಬರು ತಮ್ಮ ಕುರಿಗಳನ್ನು ಕಾಯ್ದುಕೊಳ್ಳಲು ಮಾಡುವ ಪ್ರಯತ್ನಗಳನ್ನು ಶರೀಫರು ಹೇಳುತ್ತಾರೆ. ಏಳುಸುತ್ತಿನ ಬೇಲಿ ಅಂದರೆ ಗಟ್ಟಿಯಾದ ಬೇಲಿ. ಈ ಕುರಿಗಳಿಗೆ ಯಾವುದೇ ಅಪಾಯ ಬರಬಾರದೆಂದು ಅಲ್ಲಿ ಅವುಗಳನ್ನು ಅಡಗಿಸಿ ಇಡಲಾಗಿದೆ. ಅಲ್ಲದೆ, ಒಳಗಿರುವ ಕುರಿಗಳು ಹೊರಗೆ ಹೋಗಬಾರದು. ಈ ಕಾರಣಗಳಿಂದಾಗಿ ದೊಡ್ಡಿಯ ಬಾಗಿಲನ್ನು ಈಡಾಗಿ ಎಂದರೆ ಗಟ್ಟಿಯಾಗಿ ಹಾಕಲಾಗಿದೆ ಹಾಗು ಈ ಕುರಿಗಳನ್ನು ಕಾಯಲು ನಾಯಿಯನ್ನು ಸಾಕಲಾಗಿದೆ. ಈ ಪ್ರಯತ್ನಗಳು ಪ್ರಾಪಂಚಿಕರಿಗೂ ಸಹ ಹೇಗೆ ಅನ್ವಯಿಸುತ್ತವೆ ಎನ್ನುವುದನ್ನು ನೋಡೋಣ. ಬದುಕಲು ಬೇಕಾದ ಗುಣಗಳನ್ನು ಹಾಗು ಸಂಸಾರದ ಚಿಂತೆಗಳನ್ನು ಪ್ರಾಪಂಚಿಕರು ಭದ್ರವಾಗಿ ಕಾಯ್ದುಕೊಳ್ಳುತ್ತಾರೆ. ಅಲ್ಲದೆ ತಮ್ಮ ವಿಚಾರಗಳು ಬದಲಾಗಬಾರದು ಎನ್ನುವ ಉದ್ದೇಶದಿಂದ, ಬೇರೆ ಬೇರೆ ಸೋಗು ಹಾಕುತ್ತ, ತಮ್ಮ ವಿಚಾರಗಳನ್ನು ಮುಚ್ಚಿಡುತ್ತಾರೆ. ಒಳ್ಳೆಯ ವ್ಯಕ್ತಿಗಳ ಸತ್ಸಂಗದಿಂದ ಈ ಪ್ರಾಪಂಚಿಕ ವಿಚಾರಗಳು ಬದಲಾಗಬಹುದೆನ್ನುವ ಹೆದರಿಕೆಯಿಂದ, ತಮ್ಮ ಮನಸ್ಸಿನ ಬಾಗಿಲನ್ನು ಗಟ್ಟಿಯಾಗಿ ಹಾಕಿಕೊಳ್ಳುತ್ತಾರೆ. ಯಾರಾದರೂ ಇವರಿಗೆ ಬುದ್ಧಿ ಹೇಳಲು ಬಂದರೆ, ಇವರ ಸಿಟ್ಟು ಎನ್ನುವ ನಾಯಿಯು ಅವರ ಮೇಲೆ ತಟ್ಟನೆ ಹಾರುತ್ತದೆ! ಇನ್ನು ಏಳು ಸುತ್ತಿನ ಕೋಟೆ ಎಂದರೆ ಈ ದೇಹ ಎನ್ನುವ ಮತ್ತೊಂದು ಅರ್ಥವಿದೆ. ತ್ವಚೆ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ವೀರ್ಯ ಎನ್ನುವ ಸಪ್ತಧಾತುಗಳಿಂದ ಈ ಶರೀರದ ನಿರ್ಮಾಣವಾಗಿದೆ. ಆದುದರಿಂದ ಈ ದೇಹವೇ ಏಳು ಸುತ್ತಿನ ಕೋಟೆಯಾಗಿದೆ. ಈ ಕೋಟೆಯಲ್ಲಿರುವ ಜೀವಾತ್ಮನೇ ಕುರುಬನು. ಈ ಜೀವಾತ್ಮನನ್ನು ಬಂಧಿಸಿರುವ ಪ್ರಾಪಂಚಿಕ ವಿಚಾರಗಳೇ ಆತನ ಕುರಿಗಳು. ಆ ಕುರಿಗಳನ್ನು ಹೊರಹೋಗದಂತೆ ಹಾಗು ಒಳ್ಳೆಯ ವಿಚಾರಗಳು ಒಳಬರದಂತೆ ಆತನು ಕೋಟೆಯನ್ನು ಭದ್ರಗೊಳಿಸಿದ್ದಾನೆ.

ಎರಡನೆಯ ನುಡಿಯಲ್ಲಿ ಶರೀಫರು ಈ ಸಂಸಾರದಿಂದ ಬಿಡುಗಡೆಯಾಗುವ ಬಗೆಯನ್ನು ವಿವರಿಸುತ್ತಿದ್ದಾರೆ:
ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬು ಚೆಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ವಾಕ್ಯವು ಹಾಲಿನ ಗಡಗಿ
ನಮ್ಮ ಕೈಯಲ್ಲಿ ಇರುವುದೋ ಮುಕ್ತಿ ಎಂಬೋ ಬಡಗಿ

ಕುರಿಗಳು ವಿಸರ್ಜಿಸಿದ ಹಿಕ್ಕಿಯನ್ನು ಉಡುಗಿ ಹಾಕಿ, ಅವನ್ನೆಲ್ಲ ಬುಟ್ಟಿಯಲ್ಲಿ ತುಂಬಿ ಚೆಲ್ಲುವುದು ಮೊದಲನೆಯ ಕೆಲಸ. ಅಂದರೆ ನಮ್ಮ ದೇಹವನ್ನು ನಿಯಂತ್ರಿಸುತ್ತಿರುವ ನಮ್ಮ ಕೊಳಕು ಭಾವನೆಗಳನ್ನು ಸ್ವಚ್ಛಗೊಳಿಸುವುದು ನಮ್ಮ ಆದ್ಯ ಕರ್ತವ್ಯ. ಇಷ್ಟಾದ ಮೇಲೆ  ಗುರುವಿನ ಕೃಪೆಯಾಗುವುದು.  ಗುರುವಿನ ಉಪದೇಶವು ಹಾಲು ಇದ್ದಂತ. ಆ ಹಾಲನ್ನು ಸೇವಿಸುವದರಿಂದ ನಮ್ಮ ಆಧ್ಯಾತ್ಮಿಕ ಉನ್ನತಿಯಾಗುವುದು.

ಕೊನೆಯ ನುಡಿಯಲ್ಲಿ ಶರೀಫರು ಒಂದು ತತ್ವವನ್ನು ಹೇಳುತ್ತಾರೆ:
ಸ್ಮಶಾನಭೂಮಿ ಇದು ಖರೆ
ನಾವು ಮೇಸಾಕ ಬಂದೇವರಿ ಕುರಿಯೇ
ತೋಳ ಮುರಿದು ಹತ್ತು ಕುರಿಯೇ
ನಾಗಲಿಂಗ ಅಜ್ಜ ಹೇಳಿದ ಪರಿಯೇ

ಈ ಪ್ರಪಂಚವು ಒಂದು ಸ್ಮಶಾನಭೂಮಿ. ಏಕೆಂದರೆ ಇಲ್ಲಿ ಇರುವ ಜೀವಿಗಳೆಲ್ಲವೂ ತಮ್ಮ ದೇಹವನ್ನು ಒಂದಿಲ್ಲೊಂದು ದಿನ ಬಿಟ್ಟು ಹೋಗಲೇ ಬೇಕು. ನಾವು ಇಲ್ಲಿಗೆ ಬರುವುದು ನಮ್ಮ ಕುರಿಗಳನ್ನು ಪಾಲಿಸಲು ಅಂದರೆ ಸಂಸಾರವನ್ನು ಮಾಡಲು. ಈ ರೀತಿಯಾಗಿ ನಮ್ಮ ಕುರಿಗಳನ್ನು ಪಾಲಿಸುತ್ತಿರುವಾಗ, ಒಂದು ತೋಳವು ಬಂದು ಹತ್ತು ಕುರಿಗಳನ್ನು ಮುರಿದು ಹಾಕಿತು ಎಂದು ಶರೀಫರು ಹೇಳುತ್ತಾರೆ. ತೋಳವೆಂದರೆ ಗುರು. ಗುರೂಪದೇಶದ ಫಲವಾಗಿಯೇ ನಮ್ಮ ಪ್ರಾಪಂಚಿಕ ವಿಚಾರಗಳು ಅಂದರೆ ಕುರಿಗಳು ಸಾಯುತ್ತವೆ ಎನ್ನುವುದು ಶರೀಫರ ಅನುಭವದ ಮಾತು. ಶರೀಫರು ಇದು ನಾಗಲಿಂಗ ಅಜ್ಜನವರ ಮಾತು ಎಂದು ಹೇಳುತ್ತಿದ್ದಾರೆ. ನವಲಗುಂದದ ನಾಗಲಿಂಗ ಅಜ್ಜ, ಗರಗದ ಮಡಿವಾಳಪ್ಪ ಹಾಗು ಶಿಶುನಾಳದ ಶರೀಫರು ಸಮಕಾಲೀನರು. ಹುಬ್ಬಳ್ಳಿಯ ಸಿದ್ಧಾರೂಢರು ಶರೀಫರಿಗಿಂತ ಚಿಕ್ಕವರು. ನಾಗಲಿಂಗ ಅಜ್ಜನವರು ವಿಕ್ಷಿಪ್ತ ವ್ಯಕ್ತಿಗಳು. ಶರೀಫರು ಪ್ರಾಪಂಚಿಕ ವಿಚಾರಗಳನ್ನು ದೂರ ಮಾಡಲು ನಾಗಲಿಂಗ ಅಜ್ಜನವರ ಉಪದೇಶವನ್ನು ಅನುಸರಿಸಬೇಕು ಎಂದು ಹೇಳುತ್ತಿದ್ದಾರೆ.

ಟಿಪ್ಪಣಿ:
(೧) ನಾಗಲಿಂಗ ಅಜ್ಜನವರು ವಿಕ್ಷಿಪ್ತ ಯೋಗಿಗಳು. ಕೆಲವೊಮ್ಮೆ ಅವರು ಶಿಷ್ಯರು ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಸಾಗುತ್ತಿದ್ದರು. ಈ ನೋಟವನ್ನು ನೋಡಿದ ಶರೀಫರು ನಾಗಲಿಂಗ ಅಜ್ಜನವರನ್ನು ಲೇವಡಿ ಮಾಡಿ, ಹಾಡಿದ ಗೀತೆ ಹೀಗಿದೆ:
ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ   ||ಪಲ್ಲ||
ದುರಿತಭವದ ಯೋಗದಿಂದ ವಾದವ್ಯಾತಕೆ
ವಾದದಿಂದ ಸಿದ್ಧಯೋಗ ಮಾಡುವುದ್ಯಾತಕೆ  ||೧||
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ
ಬಗಳಾಮುಖಿಯ ಮಗನ  ಕೂಡ ರಗಳಿಯಾತಕೆ  ||೨||
ಹಸಿವು ತೃಷಿಯಗಳನು ಬಯಸುವದ್ಯಾತಕೆ
ಶಿಶುನಾಳಾಧೀಶನ ಮರಿತು ಕುಸಿಯುವದ್ಯಾತಕೆ  ||೩||
ಈ ಗೀತೆಯನ್ನು ಕೇಳಿ ನಾಗಲಿಂಗ ಅಜ್ಜನ ಶಿಷ್ಯರು ಕೆರಳಿ, ಶರೀಫರನ್ನು ಚೆನ್ನಾಗಿ ತದುಕಿದರು! ಹೀಗಿದ್ದರೂ ಸಹ ಶರೀಫರು ನಾಗಲಿಂಗ ಅಜ್ಜನವರನ್ನು ಗೌರವಿಸುವ ರೀತಿಯು ‘ನಾಗಲಿಂಗ ಅಜ್ಜ ಹೇಳಿದ ಪರಿಯೇ ಎನ್ನುವ ಸಾಲಿನಲ್ಲಿ ವ್ಯಕ್ತವಾಗಿದೆ.

(೨) ಪ್ರತಿಯೊಬ್ಬ ಸಾಧಕನು ಪರಮಾತ್ಮನೊಡನೆ ಅಥವಾ ತನ್ನ ಗುರುವಿನೊಡನೆ ವಿಶಿಷ್ಟವಾದ ಸಂಬಂಧವನ್ನು ಹೊಂದಿರುತ್ತಾನೆ. ಅಕ್ಕ ಮಹಾದೇವಿಯು ಶಿವನೇ ತನ್ನ ಗಂಡ ಎಂದಳು; ಅರ್ಜುನನು ಕೃಷ್ಣನನ್ನು ಸಖ್ಯಭಾವದಿಂದ ಪೂಜಿಸಿದನು. ಶರೀಫರು ಪರಮಾತ್ಮನನ್ನು demanding ಗಂಡ ಎಂದು ನೋಡುತ್ತಾರೆ. (---‘ಎಲ್ಲರಂಥವನಲ್ಲ ನನ ಗಂಡ, ಬಲ್ಲಿದನು ಪುಂಡ’---)
ಅದರಂತೆ ಗುರೂಪದೇಶವನ್ನು ತೋಳ, ಹಾವು, ಚೇಳು ಮೊದಲಾದ ನೋವು ಕೊಡುವ ವಿಷಯವನ್ನಾಗಿ ಭಾವಿಸುತ್ತಾರೆ.
ನೂರು ಸಾಧಕರು, ನೂರು ಬಗೆ! ಶ್ರೀಕೃಷ್ಣನಿಗೆ ಹದಿನಾರುಸಾವಿರ ಹೆಂಡಂದಿರು ಇದ್ದರು ಎಂದು ಹೇಳುವುದು ಬಹುಶಃ ಈ ಕಾರಣಕ್ಕಾಗಿಯೇ ಇರಬಹುದೇನೊ?