Monday, December 1, 2014

ಜೀವಪ್ರಜ್ಞೆಮಹಾಸ್ಫೋಟಕ್ಕಿಂತ ಮೊದಲು ವಿಶ್ವವು ಒಂದೇ ಬಿಂದುವಿನಲ್ಲಿ ಸಂಕುಚಿತಗೊಂಡಿತ್ತು ಎಂದು ಹೇಳುತ್ತಾರೆ. ಮಹಾಸ್ಫೋಟದ ಕ್ಷಣದಿಂದ ವಿಶ್ವವು ಪ್ರಚಂಡವೇಗದಿಂದ ಪ್ರಸರಣಗೊಳ್ಳಲು ಪ್ರಾರಂಭಿಸಿತು. ನಕ್ಷತ್ರರಜಸ್ಸಿನಿಂದ ನಕ್ಷತ್ರಗಳು ರೂಪಗೊಂಡವು. ಕಾಲಕ್ರಮೇಣ ನಮ್ಮ ಸೂರ್ಯನ ಸುತ್ತಲೂ ತಿರುಗುತ್ತಿರುವ ನಮ್ಮ ಭೂಮಿಯ ಮೇಲೆ ಪ್ರಥಮ ಜೀವಿಯ ಉದಯವಾಯಿತು. ತನ್ನ ಹುಟ್ಟಿನ ಸಮಯದಲ್ಲಿ ಈ ಜೀವಿಗೆ `ಜೀವಪ್ರಜ್ಞೆ’ಯ ಹೊರತಾಗಿ, ಬೇರಾವದೇ ಸ್ಪಂದನವಿರಲು ಸಾಧ್ಯವಿರಲಿಲ್ಲವಷ್ಟೇ. ಆದುದರಿಂದ ಅದು ಅಂಧತಮಸ್ಸಿನಲ್ಲಿ ಮುಳುಗಿತ್ತು ಎನ್ನಬಹುದು.

‘ಜೀವಪ್ರಜ್ಞೆ’ ಎಂದರೆ ಏನು? ‘ನಾನು ಇದ್ದೇನೆ’ ಎನ್ನುವ ‘ಇರುವಿನ ಅರಿವೇ’ ಜೀವಪ್ರಜ್ಞೆ. ಇದು ಎಲ್ಲ ಜೀವಿಗಳಲ್ಲಿಯೂ ಇರಲೇಬೇಕಲ್ಲವೆ? ಈ ‘ಅರಿವಿ’ನ ಪರಮ ಅವಸ್ಥೆಯೇ ತನ್ನ ಇರವನ್ನು ಸತತವಾಗಿ ಅನುಭವಿಸುತ್ತಿರುವ ಸಂತೋಷದ ಸ್ಥಿತಿ. ಇದನ್ನೇ ನಮ್ಮ ಯೋಗಿಗಳು ‘ಸಚ್ಚಿದಾನಂದ’  ಎಂದು ಹೇಳಿದ್ದಾರೆ.  {ಸತ್(=ಇರುವು)+ಚಿತ್(=ಅರಿವು)+ಆನಂದ’}.

ಈ ‘ಮೂಲ ಇರುವು’ ವಿಶ್ವದ ಅನಂತ ಜೀವರೂಪಗಳಲ್ಲಿ ವ್ಯಕ್ತವಾಗಿದೆ. ಮೊಟ್ಟಮೊದಲು ಜನಿಸಿದ ಏಕಕೋಶ ಜೀವಿ ಅಮೀಬಾದಿಂದ ಬಹುಕೋಶಜೀವಿಗಳವರೆಗೆ ‘ಮೂಲ ಇರುವು’ ಭಿನ್ನ ಭಿನ್ನ ರೂಪಗಳಲ್ಲಿ ವ್ಯಕ್ತವಾಗುತ್ತಲೇ ಇದೆ. ಮಹರ್ಷಿ ಅರವಿಂದರು ಇದನ್ನೇ ‘To be or to become is the whole endeavour of the Nature’ ಎಂದು ಹೇಳಿದರು. ಆದಿಶಂಕರರು ತಮ್ಮ ಸೌಂದರ್ಯಲಹರಿ ಸ್ತೋತ್ರದಲ್ಲಿ ಈ ಮಾತನ್ನೇ ‘ಪ್ರಕೃತಿಯು ಪರಶಿವನ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಸ್ತುತಿಸಿದ್ದಾರೆ. (‘ಕರಗ್ರಾಹ್ಯಂ ಶಂಭೋರ್ಮುಖಮುಕುರವ್ರಂತಂ ಗಿರಿಸುತೇ…’). ಲಲಿತಾಸಹಸ್ರನಾಮದಲ್ಲಿ ಇದೇ ಮಾತನ್ನು ಅವ್ಯಕ್ತರೂಪದಲ್ಲಿ ಇರುವ ಮೂಲಪ್ರಕೃತಿಯು ಅನೇಕ ವ್ಯಕ್ತರೂಪಗಳನ್ನು ತಾಳುವುದು ಎಂದು ಹೇಳಿದ್ದಾರೆ. (ಮೂಲಪ್ರಕೃತಿರವ್ಯಕ್ತಾ, ವ್ಯಕ್ತಾವ್ಯಕ್ತಸ್ವರೂಪಿಣೀ).

ಏನೇ ಇರಲಿ, ಯಾವುದೇ ಜ್ಞಾನೇಂದ್ರಿಯವಿಲ್ಲದ, ಕೇವಲ ಏಕಕೋಶವಷ್ಟೇ ಇರುವ ಪ್ರಾಥಮಿಕ ಜೀವಿಯು ಪರಿಸರಕ್ಕೆ ಸ್ಪಂದಿಸಲು ಹೇಗೆ ಸಾಧ್ಯವಾಯಿತು? ಉದಾಹರಣೆಗೆ ಈ ಜೀವಿಗೆ ‘ದೃಷ್ಟಿ’ ಹೇಗೆ ಬಂದಿತು? ಪ್ರಾಣಿಗಳು ಉತ್ಕ್ರಾಂತಿಯ ತೀರ ಕೆಳಮಟ್ಟದಲ್ಲಿ ಇದ್ದಾಗ, ಅವಕ್ಕೆ ಕಣ್ಣುಗಳೇ ಇರಲಿಲ್ಲವಲ್ಲ! ಬೆಳಕಿನ ಕಿರಣಗಳ ಮೂಲಕ ವಸ್ತುಸ್ವರೂಪವನ್ನು ತಿಳಿಯಬಹುದು ಎನ್ನುವ ಅರಿವೇ ಆ ಕಾಲದ ಜೀವಿಗಳಿಗೆ ಇರಲಿಲ್ಲ. ಕಿರಣಗಳನ್ನು ಒಂದು ಬಿಂದುವಿನಲ್ಲಿ ಸಂಗಮಿಸಬಲ್ಲ ಮಸೂರಗಳು ಇರಲಿಲ್ಲ; ಅಕ್ಷಿಪಟಲ ಇರಲಿಲ್ಲ. ಅಂದ ಮೇಲೆ ಈ ‘ದೃಷ್ಟಿವ್ಯವಸ್ಥೆ’ಯು  ಪ್ರಾಣಿಗಳಲ್ಲಿ ಹೇಗೆ ವಿಕಾಸಗೊಂಡಿತು?  

ಇದು ಹೀಗಿರಬಹುದು:
ಕೆಳಮಟ್ಟದ ಪ್ರಾಣಿಗಳಲ್ಲಿ ವಿಕಾಸಗೊಂಡ ವ್ಯವಸ್ಥೆಯು ಇರದೇ ಇದ್ದರೂ ಸಹ, ಸ್ವರಕ್ಷಣೆಗೆ ಬೇಕಾಗುವಷ್ಟು ವ್ಯವಸ್ಥೆಯು ವಿಕಾಸಗೊಂಡಿರುತ್ತದೆ. ಈ ವ್ಯವಸ್ಥೆ ತೀರ ಕೆಳಮಟ್ಟದ ವ್ಯವಸ್ಥೆ ಆಗಿರಬಹುದು. ಆದರೆ ಇಂತಹ ಒಂದು ವ್ಯವಸ್ಥೆ ಇರದಿದ್ದರೆ, ಆ ಪ್ರಾಣಿವರ್ಗ ಕಾಲಕ್ರಮೇಣ ನಾಶವಾಗುವದರಲ್ಲಿ ಸಂದೇಹವಿಲ್ಲ.

ಇಂತಹ ಜೀವಿಗಳಲ್ಲಿ, ಅತಿ ಉಷ್ಣತೆಯಿಂದ ಜೀವಕೋಶಗಳನ್ನು ಕಾಪಾಡಿಕೊಳ್ಳುವುದು ಸ್ವರಕ್ಷಣೆಯ ಒಂದು ಪ್ರಾಥಮಿಕ ಅಂಶವಾಗಿರಬೇಕಲ್ಲವೆ? ಆದುದರಿಂದ, ಸೂರ್ಯನ ಪ್ರಖರ ಕಿರಣಗಳಿಗೆ ಸಂವೇದಿಸುವ ಕೋಶಗಳ ಉತ್ಪಾದನೆಯು ಈ ಪ್ರಯತ್ನದ ಮೊದಲ ಹೆಜ್ಜೆಯಾಗಿರಬೇಕು. ಈ ಸಂವೇದನಾಕೋಶಗಳು ಉಷ್ಣತೆಯನ್ನು ಗ್ರಹಿಸುವ ಕಾರ್ಯಕ್ಕಷ್ಟೇ ಸೀಮಿತಗೊಳ್ಳದೆ, ಕಾಲಕ್ರಮದಲ್ಲಿ ಉಷ್ಣತೆಯಿಂದ ಮೂಡುವ ಛಾಯೆಯನ್ನು ಗ್ರಹಿಸುವಷ್ಟು ವಿಕಾಸವನ್ನು ಹೊಂದಿರಬೇಕು. ವಿಕಾಸದ ಮುಂದಿನ ಮೆಟ್ಟಲುಗಳಲ್ಲಿ, ಉಷ್ಣತೆಯ ಕಿರಣಗಳಷ್ಟೇ ಅಲ್ಲದೆ, ಬೆಳಕಿನ ಕಿರಣಗಳನ್ನೂ ಗ್ರಹಿಸುವ ಸಂವೇದನೆಯನ್ನು ಈ ಜೀವಕೋಶಗಳು ಬೆಳೆಸಿಕೊಂಡಿರಬಹುದು. ಬೆಳಕಿನ ಕಿರಣಗಳ ಮೂಲಕ ವಸ್ತುಸ್ವರೂಪವನ್ನು ಗ್ರಹಿಸುವ ‘ದೃಷ್ಟಿವ್ಯವಸ್ಥೆ’ಯು ಉತ್ಕ್ರಾಂತಿಯ ಮೇಲ್ಮಟ್ಟದಲ್ಲಿ ಇರುವ ಪ್ರಾಣಿವರ್ಗಗಳಲ್ಲಿ ಈ ರೀತಿಯಾಗಿ ವಿಕಾಸವಾಗಿರಬಹುದು.

ಪ್ರಾಣಿವರ್ಗಗಳಲ್ಲಿ ಇದೇನೋ ಸರಿಯಾಯಿತು. ಆದರೆ ಸಸ್ಯಗಳಲ್ಲಿ  ‘ಕಾಣುವ ವ್ಯವಸ್ಥೆ’ ಇದೆಯೆ? ಸಸ್ಯವರ್ಗದಲ್ಲಿ ನರಮಂಡಲವಿಲ್ಲ. ಆದುದರಿಂದ ಸಸ್ಯಗಳು ನೋಡಲಾರವು. ಅದೇ ರೀತಿ ಸಸ್ಯಗಳು ಮೂಸಲಾರವು. ಆದರೆ, ನಮ್ಮ ವಿಜ್ಞಾನವು ನಮಗೆ ಕಲಿಸುವ ಪಾಠ ಏನು ತಿಳಿಸುತ್ತದೆ? ದುಂಬಿಗಳನ್ನು ಆಕರ್ಷಿಸಲೆಂದೇ, ಸಸ್ಯಗಳು ವಿವಿಧ ವರ್ಣದ ಹಾಗು ವಿವಿಧ ಪರಿಮಳದ ಹೂವುಗಳನ್ನು ಸೃಷ್ಟಿಸುತ್ತವೆ! ಸ್ವತಃ ಕಣ್ಣಿಲ್ಲದ, ಮೂಸಲಾರದ ಸಸ್ಯಗಳಿಗೆ ಈ ತಿಳಿವು ಬರಲು ಹೇಗೆ ಸಾಧ್ಯ? ಶಾಸ್ತ್ರೀಯ ಸಂಗೀತವನ್ನು ‘ಕೇಳುವ’ ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ ಎಂದು ಕೆಲವು ಸಂಗೀತಕಾರರು ಪ್ರಯೋಗಗಳ ಮೂಲಕ ಸಿದ್ಧಪಡಿಸಿದ್ದಾರೆ! ಕಿವಿ ಇಲ್ಲದ ಸಸ್ಯಗಳಿಗೆ ಇದು ಹೇಗೆ ಸಾಧ್ಯ?
( ಟಿಪ್ಪಣಿ: ಸಸ್ಯಗಳು ಹೊರಸೂಸುವ ಪರಿಮಳದಲ್ಲಿ, ಕಾಮಪ್ರಚೋದಕ ಫೆರೋಹಾರ್ಮೋನುಗಳು ಇರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಕಾರಣದಿಂದಲೇ ದುಂಬಿಗಳು ಹೂವುಗಳಿಗೆ ಆಕರ್ಷಿತವಾಗುತ್ತವೆ ಎನ್ನಲಾಗುತ್ತಿದೆ. ಫೆರೋಹಾರ್ಮೋನುಗಳ ಜ್ಞಾನವು ಸಸ್ಯಗಳಿಗೆ ಹೇಗೆ ಸಾಧ್ಯವಾಯಿತು?)

ಸಸ್ಯಜೀವಿಗಳೇ ಆಗಲಿ, ಪ್ರಾಣಿಜೀವಿಗಳೇ ಆಗಲಿ, ತಮ್ಮಲ್ಲಿ ಇರುವ ‘ಮೂಲ ಅರಿವಿ’ನಿಂದ, ತಮ್ಮ ಪರಿಸರವನ್ನು ಗ್ರಹಿಸುವ ಸಾಮರ್ಥ್ಯವನ್ನು ಪಡೆದಿವೆ. ಈ ‘ಮೂಲ ಅರಿವಿಗೆ’ ನಾನು ‘ಜೀವಪ್ರಜ್ಞೆ’ ಎನ್ನುತ್ತೇನೆ. ಅವ್ಯಕ್ತರೂಪದಲ್ಲಿರುವ ಈ ಜೀವಪ್ರಜ್ಞೆಯ ಪರಮ ಅವಸ್ಥೆಯೇ ‘ಸಚ್ಚಿದಾನಂದ’ ಭಾವ; ವ್ಯಕ್ತಸ್ಥಿತಿಯಲ್ಲಿ ಇದು ವಿಶ್ವರೂಪವನ್ನು ತಾಳುತ್ತದೆ. (‘ವಿಶ್ವರೂಪಾ ಜಾಗರಣೀ, ಸ್ವಪಂತೀ ತೈಜಸಾತ್ಮಿಕಾ, ಸುಪ್ತಾ ಪ್ರಾಜ್ಞಾತ್ಮಿಕಾ ತುರ್ಯಾ ಸರ್ವಾವಸ್ಥಾ ವಿವರ್ಜಿತಾ..’---ಲಲಿತಾಸಹಸ್ರನಾಮ).

ಪ್ರಾಥಮಿಕ ಜೀವಿಗಳಲ್ಲಿ ಜೀವಪ್ರಜ್ಞೆಯು ಯಾವ ಪ್ರಮಾಣದಲ್ಲಿ ಬಳಕೆಯಾಗುವದೋ, ಆ ಪ್ರಮಾಣದಲ್ಲಿ ವಿಕಾಸಗೊಂಡ ಜೀವಿಗಳಲ್ಲಿ ಆಗುವುದಿಲ್ಲ ಎಂದು ನನ್ನ ಭಾವನೆ. ನನ್ನ ಸಂದೇಹಕ್ಕೆ ಕಾರಣ ಹೀಗಿದೆ: ಕೆಳಮಟ್ಟದ ಪ್ರಾಣಿಗಳು ಹುಟ್ಟಿದ ಸ್ವಲ್ಪ ಕಾಲದಲ್ಲಿಯೇ, ತಮ್ಮ ಪೂರ್ಣ ದೈಹಿಕ ಸಾಮರ್ಥ್ಯವನ್ನು ಹಾಗು ತಿಳಿವಳಿಕೆಯನ್ನು ಪಡೆಯುತ್ತವೆ. ಮಂಗನ ಮರಿ ಹುಟ್ಟಿದ ಕೆಲವೇ ತಿಂಗಳಲ್ಲಿ ಮರದಿಂದ ಮರಕ್ಕೆ ಸಲೀಸಾಗಿ ಜಿಗಿಯಬಲ್ಲವು. ತಾವು ಎಂತಹ ಆಹಾರವನ್ನು ತಿನ್ನಬೇಕು ಎನ್ನುವುದು ಅವಕ್ಕೆ ಹುಟ್ಟಿನಿಂದಲೇ ತಿಳಿದು ಬಿಡುತ್ತದೆ. ಆದರೆ ಮಾನವಶಿಶುವಿಗೆ ಎದ್ದು ನಿಂತುಕೊಳ್ಳಲು ಒಂದು ವರ್ಷವೇ ಬೇಕಾಗುತ್ತದೆ; ತಿನ್ನಬಹುದಾದ ಆಹಾರವನ್ನು ಗುರುತಿಸಲೂ ಸಹ ಮಾನವಶಿಶುವು ದೀರ್ಘಕಾಲವನ್ನು ತೆಗೆದುಕೊಳ್ಳುತ್ತದೆ. ಕೆಳಮಟ್ಟದ ಪ್ರಾಣಿಗಳ ಈ ಜೈವಿಕ ಹಾಗು ಬೌದ್ಧಿಕ ಸಾಮರ್ಥ್ಯದಿಂದ ಚಕಿತನಾದ ನಾನು, ನನಗೆ ಪರಿಚಿತರಾದ ಓರ್ವ ಪ್ರಾಣಿಶಾಸ್ತ್ರಜ್ಞರ ಎದುರಿಗೆ ನನ್ನ ಸಂದೇಹವನ್ನು ಮಂಡಿಸಿದೆ. ಅವರ ಉತ್ತರ ಹೀಗಿತ್ತು. ಕೆಳಮಟ್ಟದ ಪ್ರಾಣಿಗಳ ಬದುಕುವ ಅವಧಿ ಕಡಿಮೆ, ಮನುಷ್ಯನ ಬದುಕುವ ಅವಧಿ ಜಾಸ್ತಿ; ಆದುದರಿಂದ ಮನುಷ್ಯನ ಕಲಿಕೆಯ ಅವಧಿ ಸಹ ಜಾಸ್ತಿ. ಈ ಉತ್ತರದಿಂದ ನನಗೆ ಸಮಾಧಾನವಾಗಲಿಲ್ಲ. ಅವರಿಗೆ ಮತ್ತೆ ಕೇಳಿದೆ: ‘ಆದರೆ ಪ್ರೊಫೆಸರರೆ, ಕಡಲಾಮೆಗಳು ನಾಲ್ಕುನೂರು ವರ್ಷಗಳವರೆಗೆ ಜೀವಿಸುತ್ತವೆ. ಆಮೆಯ ಮರಿಗಳು ಮೊಟ್ಟೆಯಿಂದ ಹೊರಬಂದ ತಕ್ಷಣವೇ, ನಡೆಯುತ್ತ ಸಮುದ್ರಕ್ಕೆ ಹೋಗಿ, ಅಲ್ಲಿಂದ ಈಜುತ್ತ ತಮ್ಮ ಸ್ಥಳಗಳಿಗೆ ತಲುಪತ್ತವೆಯಲ್ಲ? ಇಂತಹ ದೀರ್ಘಜೀವಿಗಳಲ್ಲಿ ಕಲಿಕೆಯು ಏತಕ್ಕೆ ಸಾವಕಾಶವಾಗುವದಿಲ್ಲ? ’ ಈ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ.

ಆಗ ನನಗೆ ಹೊಳೆದ ಉತ್ತರ ಹೀಗಿದೆ:
ಮನುಷ್ಯನ ವಿಕಾಸಪಥದಲ್ಲಿ ‘ಜೈವಿಕ ತಿಳಿವಿ’ನ ಜೊತೆಗೇ ‘ಭೌತಿಕ ಕಲಿಕೆಯ’ ಪ್ರಮಾಣವೂ ಅಧಿಕವಾಗುತ್ತಲೇ ಸಾಗಿದೆ. ಮಾನವಶಿಶುವಿಗೆ ಕೇವಲ ಎದ್ದು ನಿಲ್ಲಲು ಸಾಧ್ಯವಾದರೆ ಸಾಲದು; ಅದು ಮಾತನಾಡಲು ‘ಕಲಿ’ಯಬೇಕು! ಮನುಷ್ಯಪರಿಸರವು ಹಾಗು ಸಮಾಜವು ಪ್ರಾಣಿಪರಿಸರಕ್ಕಿಂತ ಹಾಗು ಸಮಾಜಕ್ಕಿಂತ ತುಂಬ ಸಂಕೀರ್ಣವಾಗಿದೆ. ಮಾನವನು ಬದುಕಲು ಕೇವಲ ದೈಹಿಕ ಕುಶಲತೆಯನ್ನು ಅವಲಂಬಿಸುವದಿಲ್ಲ, ಆದರೆ ಬೌದ್ಧಿಕ ಕುಶಲತೆಯನ್ನು ಅವಲಂಬಿಸುತ್ತಾನೆ. ಇಂತಹ ಸಂಕೀರ್ಣತೆಯನ್ನು ಗ್ರಹಿಸುವುದನ್ನು ಹಾಗು ಅದಕ್ಕೆ ಸ್ಪಂದಿಸುವುದನ್ನು ಮಾನವಶಿಶು ಕಲಿಯಬೇಕಾಗುತ್ತದೆ.  ಆದುದರಿಂದ ಜೈವಿಕ ವಿಕಾಸ ಹಾಗು ಭೌತಿಕ ಕಲಿಕೆಗಳು ಜೊತೆಜೊತೆಗೇ ಸಾಗಬೇಕಾದಂತಹ ಪರಿಸ್ಥಿತಿಯಲ್ಲಿ ಮಾನವಕೂಸಿನ ಜೈವಿಕ ಗ್ರಹಿಕೆ ಪ್ರಾಣಿಕೂಸುಗಳ ಜೈವಿಕ ಗ್ರಹಿಕೆಗಿಂತ ನಿಧಾನವಾಗುತ್ತದೆ ಹಾಗು ಮಾನವಶಿಶುಗಳಿಗೆ ಜೈವಿಕ ಸಾಮರ್ಥ್ಯವನ್ನು ರೂಢಿಸಿಕೊಳ್ಳಲು ಅಧಿಕ ಸಮಯ ಬೇಕಾಗುತ್ತದೆ.

ಮಾನವನ ಭೌತಿಕ ಜ್ಞಾನ ಹೆಚ್ಚಿದಂತೆ, ಆತನಿಗೆ ತಾನು ಪರಿಸರವನ್ನು ಜಯಿಸಿದ್ದೇನೆಂಬ ಗರ್ವ ಬಂದಿದೆ. ಆದರೆ ಮಾನವನಿಗಿಂತ ಅಧಿಕ ಜೈವಿಕ ಪ್ರಜ್ಞೆಯನ್ನು ಹೊಂದಿರುವ ತೀರ ಕೆಳಮಟ್ಟದ ಜೀವಿಗಳನ್ನು ಸೋಲಿಸಲು ಅವನಿಂದ ಸಾಧ್ಯವಾಗಿಲ್ಲ ಹಾಗು ಆಗಲಾರದು. ವೈರಾಣುಗಳ ನಾಶಕ್ಕಾಗಿ ನಾವೆಷ್ಟೇ ಜೀವಿರೋಧಿ ಮದ್ದುಗಳನ್ನು ಸಂಶೋಧಿಸಿದರೂ ಸಹ, ವೈರಾಣುಗಳು ತಮ್ಮ ಜೀನುಗಳನ್ನು ಮಾರ್ಪಡಿಸಿಕೊಳ್ಳುತ್ತ ಬದುಕಿವೆ. ಈ ಹೋರಾಟದಲ್ಲಿ ಅವುಗಳದೇ ಕೊನೆಯ ನಗೆ!

ಇದೆಲ್ಲ ‘ಭೂಲೋಕ’ದ ವಿಷಯವಾಯಿತು. ಮಾನವನ ಪ್ರಜ್ಞೆಗಿಂತ ಹೆಚ್ಚಿನ ಪ್ರಜ್ಞೆಯನ್ನು ಹೊಂದಿದ ಅನೇಕ ಲೋಕಗಳಿವೆ. ಅವು ದೇವಲೋಕಗಳು. ಈ ಎಲ್ಲ ಲೋಕಗಳ ಕೊನೆಯಲ್ಲಿ ಇರುವುದೇ ‘ಬಿಂದು’. ಭಾರತೀಯ ಶಾಸ್ತ್ರಗಳ ಮೇರೆಗೆ, ಈ ಬಿಂದುವಿನಲ್ಲಿ ಪರಮಾತ್ಮ ಹಾಗು ಪ್ರಕೃತಿ ಅಭಿನ್ನರಾಗಿ ಇರುತ್ತಾರೆ. ಈ ಬಿಂದುವಿನ ವಿಘಟನೆ ಹಾಗು ಸಂಘಟನೆಗಳು ಸತತವಾಗಿ ನಡದೇ ಇರುತ್ತವೆ. ಇದು ವಿಶ್ವದ ಸೃಷ್ಟಿಯ ಹಾಗು ಸಂಹಾರದ ಗುಟ್ಟು!

16 comments:

ಸುಮ said...

" ಜೀವಪ್ರಜ್ಞೆ " ಯ ಬಗ್ಗೆ ಒಳ್ಳೆಯ ಲೇಖನ ಕಾಕ . ಮಾನವ ಶಿಶುಗಳು ಕಲಿಕೆಗೆ ದೀರ್ಘ ಕಾಲ ತೆಗೆದುಕೊಳ್ಳುವ ಬಗ್ಗೆ ನೀವು ಕೊಟ್ಟ ಉತ್ತರ ಸಮಂಜಸವಾಗಿದೆ ಎಂದು ಅನ್ನಿಸುತ್ತದೆ. ಇದಕ್ಕೆ ಪೂರಕವಾದ ಇನ್ನೊಂದು ಉದಾಹರಣೆ ಆನೆಗಳ ಮರಿಗಳದು. ಆನೆ ತುಂಬ ಬುದ್ಧಿವಂತ ಪ್ರಾಣಿ , ಅತ್ಯುತ್ತಮವಾದ ಸಂವಹನ ಸಾಮರ್ಥ್ಯವಿದೆ. ಆನೆಯ ಮರಿಗಳದೂ ಸಹ ದೀರ್ಘಕಾಲದ ಬಾಲ್ಯ . ಸುಮಾರು ಎಂಟು ವರ್ಷಗಳವರೆಗೆ ಮರಿಗಳನ್ನು ಹಿರಿಯಾನೆಗಳು ಪೊರೆಯುತ್ತವಂತೆ .ಈ ಅವಧಿಯಲ್ಲಿ ಅವು ಯಾವ ಸಮಯದಲ್ಲಿ ಎಲ್ಲಿ ಆಹಾರ ಸಿಗುತ್ತದೆ,ಮತ್ತು ಯಾವ ಆಹಾರ ತಿನ್ನಲು ಯೋಗ್ಯ ಎಂಬ ತಿಳುವಳಿಕೆ, ಪರಸ್ಪರ ಸಂವಹನಕಲೆಗಳನ್ನು ಮರಿಗಳಿಗೆ ಕಲಿಸುತ್ತವೆ. ಜೀವಿಗಳ ಬುದ್ಧಿಮಟ್ಟ ಹೆಚ್ಚಿದಂತೆಲ್ಲ ಪ್ರಕೃತಿಯೊಂದಿಗಿನ ಭಾಂದವ್ಯ ಕಡಿಮೆಯಾಗುವುದು ಸತ್ಯ

sunaath said...

ಸುಮಾ,
ನೀವು ಕೊಟ್ಟ ಆನೆಗಳ ಉದಾಹರಣೆಯನ್ನು ಓದಿ ಮತ್ತಷ್ಟು ಪೂರಕ ಮಾಹಿತಿ ದೊರೆತಂತಾಯಿತು. ಬದುಕು ಪ್ರಾಥಮಿಕ ಹಂತದಲ್ಲಿದ್ದಾಗ, ಜೈವಿಕ-ದೈಹಿಕ ಕಲಿಕೆ ಶೀಘ್ರವಾಗುತ್ತದೆ ಹಾಗು ಬದುಕು ಸಂಕೀರ್ಣವಾದಾಗ, ಈ ಕಲಿಕೆ ಮಂದವಾಗುತ್ತದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ದೊರೆತಂತಾಯಿತು. ಧನ್ಯವಾದಗಳು.

Shashi Dodderi said...

Though the blog seems interesting but not scientifically accurate; it reads like someone like me who has little or no knowledge of Indian philosophy or Bendre's poetry, endup in analyzing it. I would strongly recommend you to study "evolution"; I am sure you will enjoy it. Even in your earlier blog on homosexuals was also not along the scientific lines, homosexuality is present amongst many animal groups and it not unnatural but not common.
regards
shashi

Badarinath Palavalli said...

ಜೀವಪ್ರಜ್ಞೆಯ ಕುರಿತಾದ ನಿಮ್ಮ ಈ ಲೇಖನ ನನಗೆ ಬಹು ನೆಚ್ಚಿಗೆಯಾಯಿತು.

‘ಇರುವಿನ ಅರಿವು’ ಒಳ ಮನಸ್ಸಿಗೂ ಮತ್ತು ಹೊರ ಜಗತ್ತಿನ ಉಳಿವಿಗೂ ಎಷ್ಟು ಪ್ರಮುಖವಾದದ್ದು ಎಂಬುದು ಇಲ್ಲಿ ವಿಸ್ತಾರವಾಗಿ ಬಂದಿದೆ.

ವಿಕಾಸನದ ಹಾದಿಯ ಕಿರು ನೋಟವವು ಲಭಿಸಿತು.

ಮಾನವ ಎಷ್ಟೇ ವಿಕಸನದ ಹಾದಿಯ ಕಟ್ಟ ಕಡೆಯ ಪ್ರಯೋಗ ತಾನೇ ಎಂದರೂ, ತನ್ನ ಅರಿವಿಗೂ ಬಾರದ ಹಲವು ಸೃಷ್ಟಿಗಳು ನಡೆಯುತ್ತಲೇ ಇರುತ್ತವೆ!

ತಾವು ನಿರೂಪಿಸಿದ ವಿಜ್ಞಾನದ ಈ ಬಿಂದು ಆದ್ಯಾತ್ಮಿಕವಾಗಿಯೂ ಮಹತ್ವಹೊಂದಿದೆ.

shared at:
https://www.facebook.com/groups/kannada3K/permalink/483794418371780/

ಮನಸಿನಮನೆಯವನು said...

ಜೀವಪ್ರಜ್ಞೆ ಎಲ್ಲ ಜೀವಿಗಳಲ್ಲಿ ಇರಬಹುದು.. ಅತಿಯಾಗಿ ಚಿಂತನೆ ಮಾಡುವ ಶಕ್ತಿ ಮಾನವನಿಗೆ ಮಾತ್ರ ಎನಿಸುತ್ತದೆ, ಇದು ದೋಷವೋ ವರವೋ ಈ ಚಿಂತನೆಯಿಂದಲೇ ಉತ್ತರ ಸಿಗದ ಪರಿಹಾರವಿರದ ಸಮಸ್ಯೆ ಸೃಷ್ಟಿಸಿಕೊಂಡು ಬದುಕನ್ನು ಗೊಂದಲದಲ್ಲಿ ನೂಕುಕೊಳ್ಳುತ್ತಿದ್ದೇವೆ.. ಕೆಲವು ಜೀವಿಗಳನ್ನು ನೋಡಿ ಎಷ್ಟು ಸಂತೋಷದಿಂದಿರುತ್ತವೆ, ಅವು ಎಂದಿಗೂ ಜೀವನ ಎಂದರೇನು? ಸ್ವರ್ಗ ನರಕ ? ಸಾವಿನಾಚೆಗೆ ಏನು? ಎಂದು ಚಿಂತಿಸದೆ ತಮ್ಮ ಕಾರ್ಯದಲ್ಲಿ ತೊಡಗಿವೆ. ಜೀವಪ್ರಜ್ಞೆಯ ಜೊತೆ ಮಾನವ ವಿಕಾಸದ ದಾರಿಯನ್ನು ಹೆಚ್ಚೇ ಕ್ರಮಿಸುತ್ತಿರುವನೇನೋ...

sunaath said...

ಶಶಿ,
ಉತ್ಕ್ರಾಂತಿಯ ಬಗೆಗಿನ ನನ್ನ ತಿಳಿವಳಿಕೆ ಏನಿದ್ದರೂ ಪ್ರಾಥಮಿಕ ಮಟ್ಟದ್ದು. ಅದರಿಂದಾಗಿ, ನನ್ನ ಅನಿಸಿಕೆಯು ಅವೈಜ್ಞಾನಿಕವಾಗಿರಬಹುದು. ಇದನ್ನು ಗಮನಿಸಿ, ನನಗೆ ಸೂಚಿಸಿದ ನಿಮಗೆ ಧನ್ಯವಾದಗಳು.

sunaath said...

ಬದರಿನಾಥರೆ,
ವಿವಿಧ ಹಂತಗಳ ಪ್ರಜ್ಞಾಲೋಕಗಳಲ್ಲಿ, ಮಾನವನ ಪ್ರಜ್ಞಾಲೋಕವು ಕೆಳಮಟ್ಟದ್ದು. ಮಾನವಲೋಕದ ಮೇಲುಗಡೆ, ಅನೇಕ ಹಂತಗಳ ದೇವಲೋಕಗಳಿವೆ. ಕೊನೆಯ ಹಂತವೇ ಸಚ್ಚಿದಾನಂದ ಪ್ರಜ್ಞೆ. ಸ್ಪಂದನೆಗಾಗಿ ಧನ್ಯವಾದಗಳು.

sunaath said...

ಮನಸಿನ ಮನೆಯವರೆ,
ನೀವು ಹೇಳಿದ ಮಾತನ್ನೇ ವಿಲಿಯಮ್ ಹೆನ್ರಿ ಡೇವೀಸ್ ಎನ್ನುವ ಆಂಗ್ಲ ಕವಿ ಹೀಗೆ ಹೇಳಿದ್ದಾನೆ:
What is this life if, full of care,
We have no time to stand and stare.
No time to stand beneath the boughs
And stare as long as sheep or cows.

umesh desai said...

ಈ ವಯಸ್ಸಿನಲ್ಲಿಯೂ ನಿಮ್ಮ ಹೊಸದುದರ ಬಗೆಗಿನ ತುಡಿತ ಬೆರಗುಗೊಳಿಸಿತು ಕಾಕ..
ಹಂಗ ಸ್ವಲ್ಪ ನಾಚಿಗಿನೂ ಆತು..

sunaath said...

ನಾಚಿಗಿ ಆಗೋದು ಒಳ್ಳೆಯ ಲಕ್ಷಣ, ದೇಸಾಯರ!

Subrahmanya said...

I am surprised !. ಇತ್ತೀಚೆಗೆ ಇಂತಹ ವಿಷಯಗಳನ್ನು ಒಳಗೊಂಡಿರುವ ಪುಸ್ತಕವೇನಾದರೂ ಕನ್ನಡದಲ್ಲಿ ಇದೆಯೇ ಎಂದು ಗೆಳೆಯನೊಬ್ಬನನ್ನು ವಿಚಾ ರಿಸಿದ್ದೆ. ಅವರು ಶಿವರಾಮ ಕಾರಂತರ ಕೆಲವು ಪುಸ್ತಕಗಳ ಬಗ್ಗೆ ಹೇಳಿ ಅವು ಈಗ ಮುದ್ರಿತ ರೂಪದಲ್ಲಿ ಸಿಗುವುದು ಕಷ್ಟ ಎಂದಿದ್ದರು. ನಿಮ್ಮ ಲೇಖನ ತುಂಬ ರಿಲವೆಂಟ್ ಅನಿಸುತ್ತಿದೆ. ಸಾಧ್ಯವಾದರೆ ದಯವಿಟ್ಟು ಇದನ್ನು ಲೇಖನ ಮಾಲೆಯಾಗಿ ಮಂದುವರಿಸಿ.

sunaath said...

ಸುಬ್ರಹ್ಮಣ್ಯರೆ,
ಈ ವಿಷಯದ ಲೇಖನಮಾಲೆ ಬರೆಯುವಷ್ಟು ಸಾಮಗ್ರಿ ನನ್ನಲ್ಲಿಲ್ಲ! ಕಾರಂತರ ಚಿಂತನಸಾಮರ್ಥ್ಯ ದೊಡ್ಡದು. ಆದರೆ ಅವರ ಯಾವ ವಿಶಿಷ್ಟ ಪುಸ್ತಕದಲ್ಲಿ ಈ ಮಾಹಿತಿ ದೊರೆಯುತ್ತದೆ ಎನ್ನುವುದನ್ನು ನಾನು ಅರಿಯೆ.

ಮಂಜುಳಾದೇವಿ said...

ವಿಶ್ವಸೃಷ್ಟಿ,ಜೀವವಿಕಾಸದ ಜೊತೆಜೊತೆಗೆ ಆದ್ಯಾತ್ಮಿಕ ಚಿಂತನೆಯನ್ನು ಹೊಂದಿದ ಲೇಖನ ಬಹಳ ಉಪಯುಕ್ತವಾಗಿದೆ ಸಾರ್..... ಈ ಸರಣೆಯನ್ನು ಮುಂದುವರೆಸಿ.....

sunaath said...

ಮಂಜುಳಾದೇವಿಯವರೆ,
ಧನ್ಯವಾದಗಳು.

Swarna said...

ಮಾನವ ಸಂತತಿ ಬುವಿಯಲ್ಲಿದಷ್ಟು ದಿನ ವೈಜ್ಞಾನಿಕ ಸತ್ಯಗಳು ತೆರೆದು ಕೊಳ್ಳುತ್ತಲೇ ಇರಬಹುದು .
ಆದರೆ ಆಧ್ಯಾತ್ಮ ದ ಪರಮ ಸತ್ಯ ಅದಾಗಲೇ ಹಿಂದಿನವರು ಕಂಡು ಕಾಣ್ಕೆಯಾಗಿಸಿದ್ದಾರೆ.
ಇರುವಿಕೆಯ ಅನುಭವ ಅನುಭಾವವಾಗಿ ಇದ್ದು ಇಲ್ಲದಂತಾಗುವ ಸಚ್ಚಿದಾನಂದವೇ ಪರಮ ಸತ್ಯ.
ಜಡದಲ್ಲಿ ಜಡವಾಗಿ ಚೇತನದಲ್ಲಿ ಚೇತನವಾಗಿ ಇರುವ ಲಲಿತೆಯಂತ ತಾಯಿ ಇಲ್ಲ .
ಚಂದದ ಬರಹ

sunaath said...

ಸ್ವರ್ಣಾ,
ಆದಿಶಂಕರರು ದೇವಿಯನ್ನು, ‘ತಾಯಿ, ಈ ವಿಶ್ವವೆಲ್ಲ ನೀನೆ!’ (‘ತ್ವಯಿ ಪರಿಣತಾಯಾಮ್ ನಹಿ ಪರಮ್’) ಎಂದು ಬಣ್ಣಿಸಿದ್ದಾರೆ.
ಧನ್ಯವಾದಗಳು.