Saturday, January 17, 2015

ಸಾಹಿತ್ಯಸುಖ-೨



ಭಾಸ (ಕ್ರಿ.ಶ.೩೦೦), ಶೂದ್ರಕ (ಕ್ರಿ.ಶ.೪೦೦) ಹಾಗು ಕಾಲೀದಾಸ  (ಕ್ರಿ.ಶ.೪೦೦) ಇವರು ವಿಶ್ವದ ಶ್ರೇಷ್ಠ ನಾಟಕಕಾರರಲ್ಲಿ ಅಗ್ರಗಣ್ಯರಾಗಿದ್ದಾರೆ. ಈ ಮೂವರ ನಾಟಕರಚನಾಶೈಲಿಗಳು ತುಂಬ ಭಿನ್ನವಾಗಿವೆ. ಆದರೆ ಇವರ ನಾಟಕಗಳು ಓದುಗನಿಗಾಗಲೀ, ಪ್ರೇಕ್ಷಕನಿಗಾಗಲೀ ನೀಡುವ ರಸಾನುಭವ ಮಾತ್ರ ಅವರ್ಣನೀಯವಾದದ್ದು.

ನಾಟಕೀಯತೆಯು ನಾಟಕದ ಚೆಲುವನ್ನು ಇಮ್ಮಡಿಗೊಳಿಸುತ್ತದೆ ಎನ್ನುವುದಾದರೆ, ಈ ವಿಷಯದಲ್ಲಿ ಭಾಸನನ್ನು ಮೀರಿಸಿದವರು ಯಾರೂ ಇಲ್ಲ. ‘ಪ್ರತಿಮಾ ನಾಟಕ’, ‘ಮಧ್ಯಮವ್ಯಾಯೋಗ’ ಹಾಗು ‘ಸ್ವಪ್ನವಾಸವದತ್ತಾ’ ಈ ಮೂರು ನಾಟಕಗಳು ನಾಟಕೀಯತೆಯ ಶಿಖರಗಳಾಗಿವೆ. ಅದರಲ್ಲೂ ‘ಮಧ್ಯಮವ್ಯಾಯೋಗ’ ಎನ್ನುವ ಪುಟ್ಟ ನಾಟಕದ ಕೊನೆಯಲ್ಲಿ ಬರುವ ‘ನಿಶ್ಶಬ್ದಸಂವಾದ’ವು ಜಗತ್ತಿನ ಯಾವ ನಾಟಕದಲ್ಲೂ ಇರಲಿಕ್ಕಿಲ್ಲ!

ಮಧ್ಯಮವ್ಯಾಯೋಗದ ಕತೆ ಹೀಗಿದೆ:
ವನವಾಸಸಂಚಾರದಲ್ಲಿರುವ ಪಾಂಡವರು, ಮಾರ್ಗಮಧ್ಯದಲ್ಲಿ ವಿಶ್ರಾಂತಿಗಾಗಿ ಬೀಡು ಬಿಟ್ಟಿದ್ದಾರೆ. ಭೀಮಸೇನನೊಬ್ಬನನ್ನು ಕುಟೀರದ ಕಾವಲಿಗಾಗಿ ಬಿಟ್ಟು ಉಳಿದ ಪಾಂಡವರು ಯಜ್ಞವೊಂದನ್ನು ನೋಡುವುದಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಓರ್ವ ಬ್ರಾಹ್ಮಣನು ತನ್ನ ಹೆಂಡತಿ ಹಾಗು ಮೂವರು ಗಂಡುಮಕ್ಕಳೊಡನೆ ಅಡವಿಯ ಮಾರ್ಗದಲ್ಲಿ ನಡೆಯುತ್ತ ಬರುತ್ತಿದ್ದಾನೆ. ಆಯಾಸವನ್ನು ಪರಿಹರಿಸಿಕೊಳ್ಳಲು, ಇವರೆಲ್ಲರೂ ಕುಳಿತುಕೊಳ್ಳುತ್ತಾರೆ. ಗಂಡುಮಕ್ಕಳಲ್ಲಿ ನಡುವಿನ ಹುಡುಗನು ನೀರು ತರಲು ಕೆರೆಯನ್ನು ಹುಡುಕುತ್ತ ಹೋಗುತ್ತಾನೆ.

ಅಷ್ಟರಲ್ಲಿ ಒಂದು ಅನಿರೀಕ್ಷಿತ ಘಟನೆ ಸಂಭವಿಸುತ್ತದೆ. ತರುಣ ವಯಸ್ಸಿನ ರಾಕ್ಷಸನೊಬ್ಬನು ಅಲ್ಲಿಗೆ ಬಂದು, ಈ ಪ್ರದೇಶವು ತನ್ನ ತಾಯಿಯ ಒಡೆತನಕ್ಕೆ ಸೇರಿರುವದೆಂದೂ, ಅಲ್ಲಿ ಕುಳಿತಿರುವರಲ್ಲಿ ಒಬ್ಬರನ್ನು ತನ್ನ ತಾಯಿಯ ಭಕ್ಷಣೆಗಾಗಿ ಕೊಡಲೇಬೇಕೆಂದೂ ಗದರಿಸುತ್ತಾನೆ.

ಬ್ರಾಹ್ಮಣ ಹಾಗು ಅವನ ಹೆಂಡತಿ ಇಬ್ಬರೂ ವಯಸ್ಸಾದವರು; ಆದುದರಿಂದ ಭಕ್ಷಣೆಗೆ ನಿರುಪಯುಕ್ತರು. ಗಂಡು ಹುಡುಗರಲ್ಲಿ ಮೊದಲನೆಯವನು ತಂದೆಗೆ ಪ್ರೀತಿಪಾತ್ರನಾದವನು; ಅಲ್ಲದೆ ತಂದೆ-ತಾಯಿಯರ ಸಾವಿನ ನಂತರ ಅವರ ಅಪರ ಕರ್ಮಾದಿಗಳನ್ನು ಮಾಡುವ ಅಧಿಕಾರಿಯು. ಕೊನೆಯವನು ತಾಯಿಯ ಮುದ್ದಿನ ಮಗು. ಆದುದರಿಂದ ನಡುವಿನವನನ್ನೇ ಬಲಿಯಾಗಿ ಕೊಡಲು ಅವರು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ಆದರೆ ಅವನನ್ನು ತಾವೇ ಕೂಗಿ ಕರೆಯಲು ಅಥವಾ ಅವನ ಹೆಸರನ್ನು ರಾಕ್ಷಸನಿಗೆ ತಿಳಿಸಲು ಅವರಿಂದ ಸಾಧ್ಯವಾದೀತೆ? ಕುಟುಂಬದ ಸದಸ್ಯರು ಮುಂದಾಗದಿರಲು, ರಾಕ್ಷಸನೇ ‘ಮಧ್ಯಮಾ! ಮಧ್ಯಮಾ!’ ಎಂದು ಕೂಗಿ ಕರೆಯುತ್ತಾನೆ.

ನಾಟಕೀಯತೆಯು ಪ್ರಾರಂಭವಾಗುವುದೇ ಈ ಕ್ಷಣದಿಂದ. ರಾಕ್ಷಸನ ಕೂಗು ದೂರದ ಕುಟೀರದಲ್ಲಿರುವ ಭೀಮನ ಕಿವಿಗೂ ಬೀಳುತ್ತದೆ.  ಪಾಂಡವರಲ್ಲಿ ಭೀಮನೇ ಮಧ್ಯಮನು ತಾನೇ! ತಕ್ಷಣವೇ ಭೀಮನು ಧ್ವನಿ ಬಂದ ದಿಕ್ಕಿಗೆ ತೆರಳುತ್ತಾನೆ. ಅಲ್ಲಿ ರಾಕ್ಷಸನ ಹಿಡಿತಕ್ಕೆ ಸಿಲುಕಿದ ಕುಟುಂಬದ ರಕ್ಷಣೆಯನ್ನು ತನ್ನ ಹೊಣೆಗಾರಿಕೆ ಎಂದು ಭಾವಿಸಿದ ಭೀಮನು ಆ ರಾಕ್ಷಸನನ್ನು ಹೋರಾಟಕ್ಕೆ ಆಹ್ವಾನಿಸುತ್ತಾನೆ.

ತರುಣ ರಾಕ್ಷಸ ಹಾಗು ಭೀಮಸೇನನ ನಡುವೆ ಹೋರಾಟ ನಡೆಯುತ್ತದೆ. ಆತನ ಮಾತುಗಳಿಂದ ಆತನು ತನ್ನ ಹಾಗು ಹಿಡಂಬಿಯ ಮಗನಾದ ಘಟೋತ್ಕಚನೆನ್ನುವುದು ಭೀಮನಿಗೆ ತಿಳಿದು ಹೋಗುತ್ತದೆ! ತನ್ನ ಮಗನ ಬಲವನ್ನು, ಶೌರ್ಯವನ್ನು ಕಂಡು ಭೀಮಸೇನನು ಹಿಗ್ಗುತ್ತಾನೆ. ಆದರೆ ಘಟೋತ್ಕಚನಿಗೆ ಈ ಅಪರಿಚಿತನು ತನ್ನ ತಂದೆ ಭೀಮಸೇನನೆನ್ನುವುದು ತಿಳಿಯದು. ಈ ಅಪರಿಚಿತ ಮನುಷ್ಯನ ಬಲವನ್ನು ಕಂಡು ಘಟೋತ್ಕಚನಿಗೆ ಆಶ್ಚರ್ಯವೋ ಆಶ್ಚರ್ಯ! ಕೊನೆಗೊಮ್ಮೆ ಘಟೋತ್ಕಚನು ಭೀಮನನ್ನು ತನ್ನ ಮಾಯಾಪಾಶದಿಂದ ಬಂಧಿಸಿ, ತನ್ನ ತಾಯಿಯ ಬಳಿಗೆ ಕರೆದೊಯ್ಯುತ್ತಾನೆ. ಈ ಸಮಯದಲ್ಲಿ ಇವರೀರ್ವರ ನಡುವಿನ ಚಮತ್ಕಾರಿಕ ಸಂಭಾಷಣೆಯು ಭಾಸನ ಪ್ರತಿಭೆಗೆ ಸಾಕ್ಷಿಯಾಗಿದೆ.

ಹಿಡಂಬಿಯು ಘಟೋತ್ಕಚನಿಗೆ ಭೀಮಸೇನನು ಆತನ ತಂದೆಯೆಂದು ತಿಳಿಸುತ್ತಾಳೆ. ಘಟೋತ್ಕಚನು ಭೀಮನ ಕಾಲಿಗೆ ಎರಗುತ್ತಾನೆ. ಹಿಡಿಂಬೆಯು ಭೀಮಸೇನನ ಕಿವಿಯಲ್ಲಿ ಏನೋ ಉಸುರುತ್ತಾಳೆ. ಭೀಮಸೇನನು ಅವಳ ಉಸುರುವಿಕೆಗೆ ಸ್ಪಂದಿಸುತ್ತ, “ಹಿಡಿಂಬೆ, ನೀನು ರಾಕ್ಷಸಕುಲದವಳಾದರೂ, ಆರ್ಯಗುಣವುಳ್ಳವಳು” ಎಂದು ಹೇಳುತ್ತಾನೆ. ಇಲ್ಲಿಗೆ ನಾಟಕ ಕೊನೆಯಾಗುತ್ತದೆ, ಹಿಡಿಂಬೆಯ ಅಶ್ರಾವ್ಯ ಮಾತಿನೊಂದಿಗೆ!

ಭಾಸನು ಪ್ರತ್ಯಕ್ಷವಾಗಿ ಹೇಳದೆ,  ಪ್ರೇಕ್ಷಕರ ಊಹೆಗೆ ಬಿಟ್ಟಿದ್ದು ಹೀಗಿದೆ:
ಪಾಂಡವರು ಅಡವಿಯ ಮಾರ್ಗವಾಗಿ ಸಂಚರಿಸುತ್ತ ಬರುತ್ತಿರುವುದು ಹಿಡಿಂಬೆಗೆ ಮೊದಲೇ ತಿಳಿದಿತ್ತು. ಆದರೆ ಅರಣ್ಯಪ್ರದೇಶದ ಒಡತಿಯಾದ ಅವಳಿಗೆ ತಾನೇ ಅವರಿದ್ದಲ್ಲಿಗೆ ಹೋಗಿ, ಅವರನ್ನು ಸ್ವಾಗತಿಸುವುದು ಶಿಷ್ಟಾಚಾರವಿರೋಧ ಎನ್ನಿಸುತ್ತಿತ್ತು. ಆದುದರಿಂದಲೇ ಅವಳು ಘಟೋತ್ಕಚನನ್ನು ನರಭಕ್ಷಣೆಯ ನೆವದಿಂದ ಭೀಮನಿದ್ದಲ್ಲಿಗೆ ಕಳುಹುತ್ತಾಳೆ. ಇನ್ನು ಅವಳು ಭೀಮನ ಕಿವಿಯಲ್ಲಿ ಗುಟ್ಟಾಗಿ ಉಸಿರಿದ್ದೇನು? ಇದು ಪ್ರೇಕ್ಷಕರ ತರ್ಕಕ್ಕೆ ಬಿಟ್ಟಿದ್ದು! ಆದರೆ ಭೀಮಸೇನನು ಹಿಡಿಂಬೆಯನ್ನು ‘ಸತ್ಕುಲಲಕ್ಷಣೆ’ ಎಂದು ಪ್ರಶಂಸಿರುವುದು ಪ್ರೇಕ್ಷಕರಿಗೆ ಒಂದು ಸುಳಿವನ್ನು ಕೊಡುತ್ತದೆ! ಈ ಸುಳಿವಿನ ಜಾಡನ್ನು ಹಿಡಿದು, ನೀವು ಹಿಡಿಂಬೆಯು ಭೀಮನ ಕಿವಿಯಲ್ಲಿ ಉಸಿರಿದ್ದನ್ನು ಊಹಿಸಬಹುದು!

ಮಿತ್ರರೆ, ಸಂಭಾಷಣೆಯೊಂದು ಪ್ರೇಕ್ಷಕರಿಗೆ ಕೇಳದಂತೆ, ಕಿವಿಯುಸಿರಿನಲ್ಲಿಯೇ ಕೊನೆಗೊಳ್ಳುವ ನಾಟಕವನ್ನು ನೀವೆಲ್ಲಿಯಾದರೂ ನೋಡಿದ್ದೀರಾ? ಕೇಳಿದ್ದೀರಾ? ಓದಿದ್ದೀರಾ? ಬಹುಶಃ ವಿಶ್ವನಾಟಕಗಳಲ್ಲಿ ಇದೊಂದೇ ಅಂತಹ ನಾಟಕವೆಂದು ಭಾಸವಾಗುತ್ತದೆ.

ಭಾಸನಂತಹ ನಾಟಕಚತುರರು ಮೊದಲು ಬಂದಿಲ್ಲ; ಇನ್ನು ಮುಂದೆ ಬಂದಾರೆಂದು ಹೇಳುವಂತಿಲ್ಲ! ಭಾರತೀಯರಿಗೆ ಶ್ರೇಷ್ಠ ನಾಟಕಗಳನ್ನು, ತನ್ಮೂಲಕ ಸಾಹಿತ್ಯಸುಖವನ್ನು, ರಸಾನುಭವವನ್ನು ನೀಡಿದ ಭಾಸನಿಗೆ ನಮ್ಮ ಅನಂತ ಕೃತಜ್ಞತೆಗಳನ್ನು ಸಲ್ಲಿಸೋಣ.

4 comments:

Badarinath Palavalli said...

ಈ ನಿಶ್ಶಬ್ದಸಂವಾದದ ಕುರಿತಂತೆ ದಿ. ಸಿ.ಆರ್. ಸಿಂಹರವರು ಹಿಂದೊಮ್ಮೆ ನಾವು ಟೀವಿಗಾಗಿ ಸಂದರ್ಶನ ತೆಗೆದುಕೊಳ್ಳುತ್ತಿದ್ದಾಗ ವಿವರವಾಗಿ ಮಾತನಾಡಿದ್ರು ಸಾರ್.

ಹಾಗೆಯೇ ಭೀಮನ ಕಿವಿಯಲ್ಲಿ ಗುಟ್ಟಾಗಿ ಉಸಿರಿದ್ದೇನು? ಎಂಬುದರ ಬಗ್ಗೆಯೂ ಹತ್ತಾರು ಊಹಾಪೋಹಗಳನ್ನು ಹಂಚಿಕೊಂಡಿದ್ದೆ ನೆನಪು ಮಾಡಿದಿರಿ.

sunaath said...

ಬದರಿನಾಥರೆ,
ಊಹೆಗಳು ರೋಮಾಂಚಕವಾಗಿರಬೇಕಲ್ಲವೆ?

Swarna said...

ಕಾಕಾ , ನಿಶಬ್ದ ಸಂವಾದ , ಭಾಸನ ನಾಟಕಗಳಂತ ಹೊಸ ವಿಷಯಗಳನ್ನು ನಮಗೆ ತಿಳಿಸುತ್ತಿರುವ
ನಿಮಗೆ ವಂದನೆಗಳು.

sunaath said...

ಸ್ವರ್ಣಾ,
ಭಾಸ, ಶೂದ್ರಕ, ಕಾಳಿದಾಸ ಇವರೆಲ್ಲ ನಮ್ಮ ಪುಣ್ಯದಿಂದ ಭಾರತದಲ್ಲಿ ಜನಿಸಿದರೇನೊ!