ಎಂಥಾ ಮೋಜಿನ ಕುದರಿ
ಹತ್ತಿದ ಮ್ಯಾಲೆ ತಿರುಗುವುದು ಹನ್ನೊಂದು ಫೇರಿ ||ಪಲ್ಲ||
ಸಾರಿ ನಾನು ಹೇಳತೇನಿ ಸಟಿಯಲ್ಲ ಈ ಮಾತು
ಸತ್ಯಸದ್ಗುರುವಿನ ಪಾದ ಗಟ್ಯಾಗಿ ಮುಟ್ಟಿಸಿತು ||ಅ.ಪ.||
ಹಚ್ಚನ್ನ ಕಡ್ಡವ ಹಾಕಲಿ ಬೇಕೋ
ನಿಚ್ಚಳ ನೀರು ಕುಡಿಸಲಿ ಬೇಕೋ
ಸಂಸ್ಕಾರ ಹಿಡಿದು ಹೊಡಿಯಲಿ ಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಲಿ ಬೇಕೋ ||೧||
ತಪ್ಪುವುದಿಲ್ಲಪ್ಪಾ ಎರಡು ಹೊತ್ತಿನ ದಾಣಿ
ತಿಂದ ಮೇಲೆ ತಿರಗತೈತಿ ಮೇಲಿನ ಓಣಿ
ಖಾದರಲಿಂಗನು ಪಾಡಿದ ವಾಣಿ
ಸೋಸಿ ನೋಡಿಕೋ ಹಾಕಿದ ಗೋಣಿ ||೨||
ಪಾಂಡವರ ಮನಿಯೊಳಗ ಪಾಗಾದಾಗಿತ್ತು
ಪಾಗಾದ ಗೂಟವ ಕಿತ್ತು ಓಡಿ
ಹೋಗುವಾಗ ಶಿಶುನಾಳಿಗೆ ಬಂತು
ಗೋವಿಂದ ನೋಡಿದ ತಾನೇ ತಾನಾತು ||೩||
ಶರೀಫರು ಗೋವಿಂದಭಟ್ಟರ ಶಿಷ್ಯರು. ಗೋವಿಂದಭಟ್ಟರು ತಂತ್ರಮಾರ್ಗದ ಸಾಧಕರು.
ಹೀಗಾಗಿ ಗೋವಿಂದಭಟ್ಟರು ಶರೀಫರಿಗೆ ಯೋಗಸಾಧನೆಯ ಹಾಗು ತಂತ್ರಮಾರ್ಗದ ಅನೇಕ ವಿಧಾನಗಳನ್ನು ಕಲಿಸಿರಲಿಕ್ಕೆ
ಸಾಕು. ಆ ಕಾರಣದಿಂದಲೇ ಶರೀಫರ ಗೀತೆಯಲ್ಲಿ “ಆರು ಮೂರನು ಕಟ್ಟಿ, ಮೇಲಕೆ ಏರಿದವನು ಘಟ್ಟಿ” ಎಂಬಂತಹ
ಸಾಲುಗಳು ಬರುತ್ತವೆ. ಪ್ರಸ್ತುತ ‘ಎಂಥಾ ಮೋಜಿನ ಕುದರಿ’ ಎನ್ನುವದೂ ಸಹ ಇಂತಹದೇ ಒಂದು ಗೀತೆಯಾಗಿದೆ.
ಯೋಗ ಅಥವಾ ತಂತ್ರ ಇದರ ಉದ್ದೇಶವು ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸುವುದು.
ಇದು ಸತತ ಅಭ್ಯಾಸದಿಂದ ಸಾಧ್ಯವಿದೆ. ಓರ್ವ ವ್ಯಕ್ತಿಯು ತನ್ನಲ್ಲಿ ಸುಪ್ತವಾಗಿ ಇರುವ ದೈವೀ ಚೈತನ್ಯವನ್ನು
ಧ್ಯಾನದಿಂದ ಉದ್ದೀಪನಗೊಳಿಸಬಹುದು. ಯೋಗಸಾಧಕರು ಈ ಸುಪ್ತಶಕ್ತಿಯನ್ನು ‘ಕುಂಡಲಿನಿ’ ಎಂದು ಕರೆದಿದ್ದಾರೆ.
ಈ ದೈವೀ ಶಕ್ತಿ ಅಥವಾ ಕುಂಡಲಿನೀ ಶಕ್ತಿ ಅಥವಾ ಯೋಗಶಕ್ತಿಯು ಸೂಕ್ಷ್ಮಶರೀರದಲ್ಲಿರುವ ಆರು ವಿಭಿನ್ನ
ಚಕ್ರಗಳಲ್ಲಿ ಉದ್ದೀಪನಗೊಂಡಾಗ, ಆ ಸಾಧಕನು ವಿವಿಧ ಸಿದ್ಧಿಗಳನ್ನು ಪಡೆಯುವನೆಂದು ಹೇಳಲಾಗುತ್ತದೆ.
ಸಾಧಕನು ವಿವೇಕಿಯಾಗಿದ್ದರೆ, ಈ ಶಕ್ತಿಯ ಸದುಪಯೋಗವಾಗುತ್ತದೆ. ಇಲ್ಲವಾದರೆ ಈ ಶಕ್ತಿಸಂಚಯವು ಸಾಧಕನನ್ನು
ಹಾದಿಗೆಡಿಸುವ ಸಂಭವ ಇದ್ದೇ ಇರುತ್ತದೆ. ಆದುದರಿಂದಲೇ ಪತಂಜಲಿಯು ತನ್ನ ‘ಅಷ್ಟಾಂಗ ಯೋಗ’ದಲ್ಲಿ ಕೇವಲ
ಆಸನ, ಪ್ರಾಣಾಯಾಮ ಮೊದಲಾದ ಕ್ರಿಯೆಗಳನ್ನಷ್ಟೇ ಹೇಳದೆ, ಸಾಧಕನು ಪ್ರಯತ್ನಪೂರ್ವಕವಾಗಿ ಸಾಧಿಸಬೇಕಾದ
ಹತ್ತು ನಿಗ್ರಹಗಳನ್ನು (ಅಹಿಂಸೆ, ಸತ್ಯ, ಅಸ್ತೇಯ,ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ಸಂತೋಷ, ತಪ,
ಸ್ವಾಧ್ಯಾಯ, ಈಶ್ವರ ಪ್ರಣಿಧಾನ) ನಿರೂಪಿಸಿದ್ದಾನೆ. ಶರೀಫರೂ ಸಹ ತಮ್ಮ ಈ ಗೀತೆಯಲ್ಲಿ ಯೋಗಸಾಧಕನಿಗೆ
ಬೇಕಾದ ವಿವೇಕವನ್ನು ಹಾಗು ಯೋಗಸಾಧನೆಯ ಫಲಗಳನ್ನು ವರ್ಣಿಸಿದ್ದಾರೆ.
ಎಂಥಾ ಮೋಜಿನ ಕುದರಿ
ಹತ್ತಿದ ಮ್ಯಾಲೆ ತಿರುಗುವುದು ಹನ್ನೊಂದು ಫೇರಿ ||ಪಲ್ಲ||
ಮನಸ್ಸು ಒಂದು ಕುದುರೆ ಇದ್ದಂತೆ; ಯೋಗಶಕ್ತಿಯನ್ನು ಸಂಗ್ರಹಿಸಿದ ಮನಸ್ಸು
ಒಂದು ಬಲಶಾಲಿ ಕುದುರೆ ಇದ್ದಂತೆ. ಇಂತಹ ಕುದುರೆಯ ಸವಾರನು ಮೋಜಿನಿಂದ, ಮಾಯಾಲೋಕದಲ್ಲೆಲ್ಲ ತಿರುಗಬಹುದು,
ಅಂದರೆ ಅಷ್ಟಸಿದ್ಧಿಗಳನ್ನು ಪಡೆಯಬಹುದು ಹಾಗು ಮೂರು ಲೋಕಗಳ ಸಂಚಾರವನ್ನು ಮಾಡಬಹುದು. ಆದುದರಿಂದ ಶರೀಫರು
‘ತಿರುಗುವುದು ಹನ್ನೊಂದು ಫೇರಿ’ ಎಂದು ಹೇಳುತ್ತಾರೆ.
ಆದರೆ ಸಾಧಕನ ಮೂಲ ಉದ್ದೇಶವು ‘ಕೈವಲ್ಯ ಜ್ಞಾನ’ವಾಗಿರುತ್ತದೆ. ಈ ಜ್ಞಾನವನ್ನು
ಪಡೆಯಲು ಸದ್ಗುರುವಿನ ಅನುಗ್ರಹವಾಗಬೇಕು. ಅಂತಹ ಗುರುವಿನ ಕರುಣೆಯಾಗಲು ಆತನ ಪಾದಗಳಿಗೆ ಸಾಧಕನು ಶರಣಾಗಬೇಕು.
ಸಾಧಕನನ್ನು ಗುರುಪಾದಗಳ ಬಳಿಗೆ ಕರೆದೊಯ್ಯುವುದೇ ಈ ಕುದುರೆಯ ಅರ್ಥಾತ್ ಯೋಗಶಕ್ತಿಯನ್ನು ಪಡೆದ ಮನಸ್ಸಿನ
ಕಾರ್ಯ. ಅದನ್ನೇ ಶರೀಫರು ಈ ಮಾತಿನಲ್ಲಿ ಹೇಳುತ್ತಾರೆ:
‘ಸಾರಿ ನಾನು ಹೇಳತೇನಿ ಸಟಿಯಲ್ಲ ಈ ಮಾತು
ಸತ್ಯಸದ್ಗುರುವಿನ ಪಾದ ಗಟ್ಯಾಗಿ ಮುಟ್ಟಿಸಿತು’ ||ಅ.ಪ.||
ಕುದುರೆಯು ಹೇಳೀ ಕೇಳಿ ಮೊಂಡ ಪ್ರಾಣಿ. ಸಾಧಕನು ಅದನ್ನು ಸರಿಯಾಗಿ ನೋಡಿಕೊಂಡರೆ
ಮಾತ್ರ, ಕುದುರೆಯು ಸವಾರನನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವುದು; ಇಲ್ಲವಾದರೆ ಸವಾರನ ಗತಿ ಅಧೋಗತಿ!
ಕುದುರೆಯನ್ನು ಜೋಪಾನ ಮಾಡುವ ರೀತಿಯನ್ನು ಶರೀಫರು ಹೀಗೆ ಹೇಳುತ್ತಾರೆ:
ಹಚ್ಚನ್ನ ಕಡ್ಡವ ಹಾಕಲಿ ಬೇಕೋ
ನಿಚ್ಚಳ ನೀರು ಕುಡಿಸಲಿ ಬೇಕೋ
ಸಂಸ್ಕಾರ ಹಿಡಿದು ಹೊಡಿಯಲಿ ಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಲಿ ಬೇಕೋ ||೧||
ಕಡ್ಡ ಅಂದರೆ ದನಗಳಿಗೆ ಹಾಕುವ ಮೇವು. ಈ ಮೇವು ಒಣಗಿರಬಾರದು, ಹಚ್ಚನೆ ಅಂದರೆ
ತಾಜಾ ಮೇವು ಆಗಿರಬೇಕು. ಅರ್ಥಾತ್ ಪ್ರತಿ ದಿನವೂ ನಾವು ಮಾಡುವ ದೈವೀ ಸ್ಮರಣೆಯು ಯಾಂತ್ರಿಕವಾಗಿರದೆ,
ಭಾವಪೂರ್ಣವಾಗಿರಬೇಕು. ನಿಚ್ಚಳ ನೀರು ಅಂದರೆ ತಿಳಿ ನೀರು. ಮನಸ್ಸು ಕಲ್ಮಶಪೂರಿತವಾಗಿರಬಾರದು, ಮನಸ್ಸಿನಲ್ಲಿ
ರಾಗದ್ವೇಷಗಳಿರಬಾರದು ಎಂದು ಶರೀಫರು ತಿಳಿ ನೀರಿನ ಸಂಕೇತದ ಮೂಲಕ ಹೇಳುತ್ತಾರೆ. ಇಷ್ಟಾದರೂ ಸಹ ಮೊಂಡು
ಕುದುರೆಯು ಅಡ್ಡ ಹಾದಿ ಹಿಡಿಯಬಹುದು. ಅದನ್ನು ತಪ್ಪಿಸಲು ಸವಾರನು ಆ ಕುದುರೆಯನ್ನು ಅಂದರೆ ತನ್ನ ಮನಸ್ಸನ್ನು
‘ಉತ್ತಮ ಸಂಸ್ಕಾರ ಎನ್ನುವ ಚಾವಟಿ’ಯಿಂದ ಹೊಡೆಯುತ್ತಲೇ ಇರಬೇಕು.
ಶರೀಫರು ಹೆಳುವ ಈ ಮಾತು ಎಲ್ಲ ದೇಶ-ಕಾಲಗಳಿಗೆ ಅನ್ವಯಿಸುವಂತಿದೆ. ಸದ್ಯದ
ಭಾರತೀಯ ಸಮಾಜವನ್ನೇ ನೋಡಿರಿ. ನಮ್ಮ ಪ್ರಜೆಗಳ ಅವ್ಯವಹಾರಗಳಿಗೆ, ಹೆಣ್ಣು ಮಕ್ಕಳ ಮೇಲೆ ಆಗುವ ಅತ್ಯಾಚಾರಗಳಿಗೆ ಮುಖ್ಯ ಕಾರಣವೆಂದರೆ ನಾವು ನಮ್ಮ ಮಕ್ಕಳನ್ನು ‘ಸಂಸ್ಕಾರಹೀನ’ರನ್ನಾಗಿ
ಮಾಡಿರುವುದೇ ಆಗಿದೆ. ದೊಡ್ಡವರು ತಮ್ಮ ಒಳ್ಳೆಯ ನಡತೆಯಿಂದ ಕಿರಿಯರಿಗೆ ಅನುಕರಣೀಯ ಮಾದರಿಯಾಗಬೇಕು.
ಕಿರಿಯರು ಹಾದಿಗೆಡದಂತೆ ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕೊಡುವುದು ಹಿರಿಯರ ಕರ್ತವ್ಯವಾಗಿದೆ. ನಾವು
ಅಂದರೆ ದೊಡ್ಡವರು ತಪ್ಪಿದ್ದೇವೆ. ನಮ್ಮ ಸಮಾಜವು ನಮ್ಮ ತಪ್ಪಿನ ಫಲವನ್ನು ಉಣ್ಣುತ್ತಲಿದೆ.
ಅಚ್ಯುತ ಅಂದರೆ ದೇವರು ಹೌದು, ಆದರೆ ಎಂತಹ ದೇವರು? ಚ್ಯುತನಾಗದವನು ಅಂದರೆ
ಸನ್ಮಾರ್ಗವನ್ನು ತಪ್ಪದಂಥವನು ಅಚ್ಯುತನು. ಆದುದರಿಂದ ಕೆಟ್ಟ ಗುಣಗಳನ್ನು ಚಾಟಿ ಏಟಿನಿಂದ ದೂರ ಮಾಡುವಂತೆಯೇ,
ಒಳ್ಳೆಯ ಗುಣಗಳಿಂದ ನಮ್ಮ ಮನಸ್ಸೆಂಬ ಕುದುರೆಯನ್ನು ದಿನವೂ ಮಾಲೀಸು ಮಾಡಬೇಕು!
ಒಳ್ಳೆಯ ನಡತೆಯಿಂದ ನಡೆಯುವವನು ಮನಸ್ಸಿನ ತಳಾತಳದಲ್ಲಿ ಒಳ್ಳೆಯವನೇ ಇರುತ್ತಾನೆ
ಎಂದು ಹೇಳಲು ಬಾರದು. ಅದಕ್ಕಾಗಿಯೇ ಬಸವಣ್ಣನವರು ‘ಬಹಿರಂಗ ಶುದ್ಧಿ ಹಾಗು ಅಂತರಂಗ ಶುದ್ಧಿ’ ಎಂದು
ಹೇಳಿದರು. ಗೀತೆಯ ಎರಡನೆಯ ನುಡಿಯಲ್ಲಿ ಶರೀಫರು ಆಚಾರವನ್ನು ತಿದ್ದಿಕೊಂಡಂತೆ ವಿಚಾರವನ್ನೂ ಸಹ ಹೇಗೆ
ತಿದ್ದಿಕೋಬೇಕು ಎನ್ನುವುದನ್ನು ಹೇಳುತ್ತಿದ್ದಾರೆ:
ತಪ್ಪುವುದಿಲ್ಲಪ್ಪಾ ಎರಡು ಹೊತ್ತಿನ ದಾಣಿ
ತಿಂದ ಮೇಲೆ ತಿರಗತೈತಿ ಮೇಲಿನ ಓಣಿ
ಖಾದರಲಿಂಗನು ಪಾಡಿದ ವಾಣಿ
ಸೋಸಿ ನೋಡಿಕೋ ಹಾಕಿದ ಗೋಣಿ ||೨||
ಮನಸ್ಸೆಂಬ ಕುದುರೆಗೆ ದಿನವೂ ಎರಡು ಹೊತ್ತು ದಾಣಿಯನ್ನು (ಅಂದರೆ ಕುದುರೆಗೆ
ತಿನ್ನಿಸುವ ಕಾಳನ್ನು) ಹಾಕಬೇಕಾಗುತ್ತದೆ. ಹಾಗಾದಾಗ ಮಾತ್ರ ಈ ಕುದುರೆಯು ‘ಮೇಲಿನ ಓಣಿ’ಯಲ್ಲಿ ತಿರುಗುತ್ತದೆ.
ಇಲ್ಲಿ ದಾಣಿ ಎಂದರೆ ಧ್ಯಾನ, ಜಪ ಇತ್ಯಾದಿ. ಮುಂಜಾನೆ ಹಾಗು ಸಂಜೆ ಎರಡೂ ಹೊತ್ತಿನಲ್ಲಿ ದೇವರ ಧ್ಯಾನದಲ್ಲಿ,
ಭಜನೆಯಲ್ಲಿ ನಿರತನಾದ ಸಾಧಕನ ಮನಸ್ಸು ಮಾತ್ರ ಅವನನ್ನು ‘ಮೇಲಿನ ಓಣಿ’ಯಲ್ಲಿ ನಡೆಯಿಸುವುದು. ಈ ಮೇಲಿನ
ಓಣಿಗೆ ಅನೇಕ ಅರ್ಥಗಳನ್ನು ಹೇಳಬಹುದು.
ಆಧುನಿಕ ಮನೋವಿಜ್ಞಾನದ ಪಿತಾಮಹನಾದ ಫ್ರಾੱಯ್ಡ ಹೇಳುವಂತೆ ಮನಸ್ಸಿನ ಮೂಲವಸ್ತು (Id) ಪ್ರಾಣಿಸಹಜವಾದ ವರ್ತನೆಯನ್ನು
ಪಡೆದಿರುತ್ತದೆ. ಮನಸ್ಸಿನ ಉನ್ನತಭಾಗವು (superconscious) ವಿವೇಚನೆಯನ್ನು ತೋರಿಸುತ್ತದೆ. ಮಹರ್ಷಿ
ಅರವಿಂದರು ಪೂರ್ಣತೆಯನ್ನು ಪಡೆದ ಮನಸ್ಸಿಗೆ ‘ಸುಪ್ರಮಾನಸ’ (supramental) ಎಂದು ಕರೆದಿದ್ದಾರೆ.
ಬೇಂದ್ರೆಯವರೂ ಸಹ ತಮ್ಮ ಒಂದು ಕವನದಲ್ಲಿ ‘ಎತ್ತರಕ್ಕೆ ನಡೆಯಣ್ಣ, ಅಲ್ಲೆ ನೀ ಪಡೆವುದನ್ನು ಪಡೆವೆ’
ಎಂದಿದ್ದಾರೆ. ಒಟ್ಟಿನಲ್ಲಿ, ದೈಹಿಕ, ಐಹಿಕ ಆಮಿಷಗಳಿಂದ ದೂರವಾಗಿ, ದೈವಿಕ ಭಾವನೆಗಳಿಗೆ ಹತ್ತಿರವಾದ
ಮಾರ್ಗವನ್ನು ‘ಮೇಲಿನ ಓಣಿ’ ಎಂದು ಕರೆಯಬಹುದು.
ಕುದುರೆಯನ್ನು ಜೋಪಾನ ಮಾಡಿದರೆ ಸಾಲದು. ಅದರ ಸವಾರಿಯನ್ನು ಮಾಡಬೇಕಾದರೆ,
ಅದರ ಮೇಲೆ ಜೀನನ್ನು ಹಾಕಿ ಹತ್ತಬೇಕಾಗುತ್ತದೆ. (ಒಳ್ಳೆಯ ಜೀನನ್ನು ಹಾಕುವುದು ಸಿರಿವಂತರಿಗೆ ಅಥವಾ
ಸೈನಿಕರಿಗೆ ಮಾತ್ರ ಸಾಧ್ಯ. ಸಾಮಾನ್ಯರು ಗೋಣಿ ಬಟ್ಟೆಯನ್ನೇ ಅಂದರೆ ಸಣಬಿನ ಬಟ್ಟೆಯನ್ನೇ ಜೀನಿನಂತೆ
ಉಪಯೋಗಿಸುತ್ತಿದ್ದರು.) ಶರೀಫರು ಬಳಸುವ ಜೀನು ಯಾವುದು? ಖಾದರಲಿಂಗ ಅಂದರೆ ಗುರು ಹೇಳಿದ ಉಪದೇಶವೇ
ಶರೀಫರು ಬಳಸುವ ಜೀನು!
(ಶಿಶುನಾಳದ ಹತ್ತಿರ ಇರುವ ಹುಲಗೂರಿನಲ್ಲಿ ಖಾದರ ಶಾವಲಿ ಎನ್ನುವ ಸಂತರೊಬ್ಬರ ಸಮಾಧಿ ಇದೆ. ಶರೀಫರ ತಂದೆ-ತಾಯಿ
ಈ ಸಂತರ ಸಮಾಧಿಗೆ ನಡೆದುಕೊಂಡ ಬಳಿಕ ಶರೀಫರು ಹುಟ್ಟಿದರು. ಶರೀಫರು ತಮ್ಮ ಗೀತೆಗಳಲ್ಲಿ ಈ ಸಂತರನ್ನು
‘ಖಾದರಲಿಂಗ’ ಎಂದೇ ಸಂಬೋಧಿಸಿದ್ದಾರೆ. ಖಾದರಲಿಂಗ ಗುರುವಿನ ಬೋಧನೆಯನ್ನು ಸೋಸಿ ಅಂದರೆ ತಿಳಿದುಕೊಂಡು
ಬಳಸುವುದೇ, ಶರೀಫರು ಉಪಯೋಗಿಸುವ ಜೀನು!)
ಸಾಧಕನು ಹಾಗು ಆತನ ಸಾಧನೆ ಒಂದು ಜನ್ಮದ್ದಲ್ಲ. ಇದನ್ನೇ ಶ್ರೀಕೃಷ್ಣನು
ಅರ್ಜುನನಿಗೆ, “ಅರ್ಜುನಾ, ನಾನು ಹಾಗು ನೀನು ಅನೇಕ ಜನ್ಮಗಳನ್ನು ಕಳೆದಿದ್ದೇವೆ. ಅವೆಲ್ಲವೂ ನನಗೆ
ಗೊತ್ತು; ನೀನು ಅವುಗಳನ್ನು ಅರಿಯೆ.” ಎಂದು ಹೇಳಿದ್ದಾನೆ. ಶರೀಫರು ತಾವು ಪೂರ್ವಜನ್ಮದಲ್ಲಿ ಪಾಂಡವರ
ಪಾಗಾದಲ್ಲಿ (= ಕುದುರೆ ಲಾಯದಲ್ಲಿ) ಕುದುರೆಯಾಗಿದ್ದೆ ಎಂದು ಹೇಳುತ್ತಿದ್ದಾರೆ. ಇದು ವಾಸ್ತವಿಕವಾಗಿರಬಹುದು
ಅಥವಾ ಸಾಂಕೇತಿಕವಾಗಿರಬಹುದು. ಪಾಂಡವರು ಧರ್ಮಚಾರಿಗಳು. ಅವರ ಸಹವಾಸದಿಂದಾಗಿ ಈ ಕುದುರೆಯೂ ಸಹ ಪುಣ್ಯಕರ್ಮಿಯಾಗಿದೆ.
ಆದರೂ ಸಹ ಈ ಕುದುರೆ ಅಲ್ಲಿ ಇರಲಾರದೆ, ತನಗೆ ಕಟ್ಟಿದ ಹಗ್ಗವನ್ನು ಕಿತ್ತುಕೊಂಡು ಓಡಿ ಹೋಯಿತು. ಜನ್ಮಜನ್ಮಾಂತರಗಳಲ್ಲಿ
ಸಂಚರಿಸುತ್ತ, ತನ್ನ ಪುಣ್ಯಬಲದಿಂದ ಶಿಶುನಾಳಿಗೆ ಬಂದಿತು:
( ದೀಪಕ್ ಚಂದ್ರಶೇಖರ್ ಅವರು ಈ ವಿಷಯದ ಬಗೆಗೆ ಹೀಗೆ ವ್ಯಾಖ್ಯಾನಿಸುತ್ತಾರೆ: ’’ಪಾಂಡವರ ಮನಿಯೊಳಗ ಪಾಗಾದಾಗಿತ್ತು
ಪಾಗಾದ ಗೂಟವ ಕಿತ್ತು ಓಡ”......
ಶರೀಫರು ತಾವು ಪೂರ್ವಜನ್ಮದಲ್ಲಿ ಪಾಂಡವರ ಪಾಗಾದಲ್ಲಿ (= ಕುದುರೆ ಲಾಯದಲ್ಲಿ)
ಕುದುರೆಯಾಗಿದ್ದೆ ಎಂದು ಹೇಳುತ್ತಿದ್ದಾರೆ.!!
ಈ ಸಾಲುಗಳ ಮೇಲೆ ನನ್ನದೊಂದು ಸಣ್ಣ ಭಿನ್ನಬಿಪ್ರಾಯ!
ಪಾಂಡವರು ಅಂದರೆ ಐದು ಜನ - ಪಂಚೇಂದ್ರಿಯಗಳು! ಪಂಚೇಂದ್ರಿಯಗಳ ಮನೆ - ಈ ದೇಹ! ಪಾಗು -
ಮನಸ್ಸು!
ನಮ್ಮ ಚೈತನ್ಯ/ಬುದ್ದಿ ಮನಸಿನ ಹತೋಟಿಗೆ ಸಿಗದೇ (ಅಂದರೆ ಇಂದ್ರೀಯ ಸುಖಕ್ಕೆ ಪಕ್ಕಾಗಿ)
ಪಂಚೆದ್ರಿಯಗಳ ಮೇಲೆ ಹತೋಟಿ ಸಿಗದೇ (ಪಾಗಾದ ಗೂಟವ ಕಿತ್ತು ಓಡಿ) ಓಡಾಡುತಿದ್ದಾಗ, ಅಲ್ಲಿ
ಗುರು ಗೋವಿಂದರ ಕೃಪಾದೃಷ್ಟಿ ಬಿತ್ತು.
ಇದು ಪೂರ್ವ ಜನ್ಮದ ಅಥವಾ ಜನ್ಮಾಂತರದ ಬಗ್ಗೆ ಅಲ್ಲವೆಂದು (ಸಾಂಕೇತಿಕವಾಗಿಯೂ ಅಲ್ಲ),
ನನ್ನ ಅಭಿಪ್ರಾಯ!)
ಪಾಂಡವರ ಮನಿಯೊಳಗ ಪಾಗಾದಾಗಿತ್ತು
ಪಾಗಾದ ಗೂಟವ ಕಿತ್ತು ಓಡಿ
ಹೋಗುವಾಗ ಶಿಶುನಾಳಿಗೆ ಬಂತು
ಗೋವಿಂದ ನೋಡಿದ ತಾನೇ ತಾನಾತು ||೩||
ಅಲ್ಲಿ ಗುರು ಗೋವಿಂದರ
ಕೃಪಾದೃಷ್ಟಿ ಈ ಕುದುರೆಯ ಮೇಲೆ ಬೀಳುವದೇ ತಡ, ಈ ಕುದುರೆಯು ‘ತಾನೇ ತಾನಾತು’ ಅಂದರೆ
‘ಸ್ವ-ಜ್ಞಾನ’ವನ್ನು
ಅರ್ಥಾತ್ ಆತ್ಮಜ್ಞಾನವನ್ನು ಪಡೆಯಿತು.
ಆತ್ಮಜ್ಞಾನವನ್ನು ಪಡೆಯುವವರೆಗೂ,
‘ಶಕ್ತಿಸಂಚಯವಾದ ಮನಸ್ಸೆನ್ನುವ ಕುದುರೆಯು’ ಮೋಜಿನ ಕುದುರೆಯಾಗಿ ಎಲ್ಲೆಲ್ಲಿಯೋ ತಿರುಗಬಹುದು. ಸಾಧಕನೆನ್ನುವ
ಸವಾರನು ತನ್ನ ಆತ್ಮಜ್ಞಾನದ ಉದ್ದೇಶದಿಂದ ಈ ಕುದುರೆಯನ್ನು ‘ಮೇಲಿನ ಮಾರ್ಗ’ದಲ್ಲಿ ನಡೆಯಿಸಿಕೊಂಡು
ಹೋದಾಗ ಸಾಧಕನಿಗೆ ಸದ್ಗತಿ ದೊರೆಯುವುದು.
17 comments:
ಮನವನ್ನು ಮೇಲಕ್ಕೆ ಒಯ್ಯುವ ಅದೆಷ್ಟು ರೀತಿಗಳನ್ನು ಹೇಳಿದ್ದಾರೆ ಪೂರ್ವೀಕರು . ಮನಸೆಂಬ ಮೋಜಿನ ಕುದುರಿಯ ಹಾಡನ್ನು ಸೊಗಸಾಗಿ ವಿವರಿಸಿದ್ದೀರಿ ಕಾಕಾ.
ವಂದನೆಗಳು
ಶರೀಫರ ಗೀತೆಯೂ ಸಹ ಮೋಜಿನ ಕುದುರೆಯೇ ಆಗಿದೆ!
ಕಾಕಾ,
ಈ ದಿನಗಳಲ್ಲಿ ಕುದುರೆಗೆ ನಿಚ್ಚಳ ನೀರಿಗಿಂತ ರಾಡಿ ನೀರೇ ಹೆಚ್ಚಾಗಿ ಸಿಗುತ್ತಿದೆ.
ಸಂಸ್ಕಾರದ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚಾಗಿದೆ.
ಶರೀಫರ ಎಂತಹ ಸೊಗಸಾದ ಗೀತೆ..
ಬೇಂದ್ರೆಯಜ್ಜ ಮತ್ತು ಶರೀಫಜ್ಜನವರ ಕೃತಿಗಳ ವಿಶ್ಲೇಷಣೆಯಲ್ಲಿ ನಿಮ್ಮ ಕುದುರೆ ಯಾವಾಗಲು ಮೇಲಿನ ಓಣಿಯಲ್ಲಿ ತಿರುಗುತ್ತಿರುತ್ತೆ !
ನಿಮ್ಮ ದಯೆಯಿಂದ ನಮ್ಮಂತಹ ಕತ್ತೆಗಳು ಸಹ ಆಗಾಗ ಆ ಓಣಿಯಲ್ಲಿ ಕಾಣಬಹುದು :)
ಪ್ರೀತಿಯಿಂದ..
ಅಪ್ಪ-ಅಮ್ಮ,
ಭವಬಂಧನದಲ್ಲಿ ಸಿಲುಕಿದ ನಾವೆಲ್ಲರೂ ಕತ್ತೆಗಳೇ! ಮೇಲಿನ ಮಾರ್ಗಕ್ಕೆ ಹೋದಾಗ, ಕತ್ತೆಯೂ ಸಹ ಕುದುರೆಯಾಗಿ evolve ಆಗುವುದೇನೊ!
ಇಲ್ಲಿಯವರೆಗೂ ಅರ್ಥವರಿಯದ ಮೂಢನಾದ ನಾನು ಈ ಪದ್ಯವನ್ನು ತಪ್ಪಾಗಿ ಅರ್ಥೈಸಿ ಓದುತ್ತಿದ್ದೆ. ಇಂದಿಗೆ ನನ್ನ ಮೌಢ್ಯವು ಹರೆದು ಪದ್ಯದ ಆಂತರ್ಯದ ಬೆಳಕು ಗೋಚರಿಸಿತು.
ಶಿಶುನಾಳ ಸಾಹೇಬರ ಅಕ್ಷರಗಳಲ್ಲಿ ಅಡಗಿರುವ ಪಾರಿಮಾರ್ಥತೆಯನ್ನು ಸರಿಯಾಗಿ ತಿಳಿದುಕೊಂಡರೆ ಸಾಕೇನೋ ಬಗೆ ಹರೆಯುವುದು ಭವ ದೋಷಗಳು.
ಈ ಹಿಂದೆ ನನಗೂ ಹುಲಗೂರಿನಲ್ಲಿ ಖಾದರ ಶಾವಲಿ ಸಮಾಧಿ ಸ್ಥಳಕ್ಕೆ ಭೇಟಿಕೊಡುವ ಅದೃಷ್ಟ ಸಿಕ್ಕಿತ್ತು.
ನನ್ನ ಮೋಜಿನ ಕುದುರಿ ನನ್ನ ಲಗಾಮಿಗೆ ದೊರೆಯುವುದು ಎಂದೋ!
ಬದರಿನಾಥರೆ,
ಪಾರಮಾರ್ಥದ ಕುದುರೆ ಅತ್ತ ಕಡೆಗಿರಲಿ, ನೀವು ಕವನವೆನ್ನುವ ಮೋಜಿನ ಕುದುರೆಯನ್ನು ಹತ್ತಿರುವಿರಿ. ನಮಗೂ ಸಹ ನಿಮ್ಮ ಕಾವ್ಯಾಶ್ವದ ಸವಾರಿಯನ್ನು ಮಾಡಿಸುತ್ತ ಮೋಜು ಕೊಡುತ್ತಿರುವಿರಿ. ನಿಮಗೆ ಧನ್ಯವಾದಗಳು.
ಸುನಾತ್ ಸರ್ ;ಮೋಜಿನ ಹುಚ್ಕುದ್ರೀ ಹತ್ತಿ ಹೊಂಟೀವಿ!!!! ಆ ಗೋವಿಂದನ ಅನುಗ್ರಹ ಎಂದೋ ಏನೋ !!!! ಶರೀಫಜ್ಜನ ಗೀತೆಗೆ ಅರ್ಥವಾಗುಂತೆ ವಿವರಣೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು .
ಕೃಷ್ಣಮೂರ್ತಿಯವರೆ,
ಶರೀಫರಿಗೆ ಗೋವಿಂದಭಟ್ಟರ ಅನುಗ್ರಹವಾದರೆ, ನಮಗೆ ‘ಗೋವಿಂದನ ಅನುಗ್ರಹ ಎಂದೋ!’ ಎಂದು ಹೇಳುವ ಮೂಲಕ ನಿಮ್ಮ ಸ್ಪಂದನದಲ್ಲಿಯೂ ಶ್ಲೇಷೆಯನ್ನು ಮೂಡಿಸಿರುವಿರಿ! ಧನ್ಯವಾದಗಳು.
ಕಾಕಾ...
ಓದುತ್ತ ಓದುತ್ತ ಮಾತು ಮರೆಯಿತು.
ಇದು ನನಗೆ ಬಹಳ ಖುಶಿ ಕೊಡುತ್ತಿದ್ದ ಶರೀಫರ ಗೀತೆ,(ನನ್ನ ಕ್ಯಾಸೆಟ್ ಕೇಳುವಿಕೆಯ ಕಾಲದಲ್ಲಿ).
ಇದರ ಆಳವನ್ನ ಇಲ್ಲಿ ಜಾಲಂಗಳದಲ್ಲಿ ಹರಡಿದ ನಿಮಗೆ ನನ್ನ ಪ್ರೀತಿಯ ನಮನ.
ತುಂಬ ಇಷ್ಟಾಯಿತು.
ಖಾದರಲಿಂಗ ಎಂಬಲ್ಲಿಯ ಶರೀಫರ ಸಮನ್ವಯಕ್ಕೆ ಮನಸೋತೆ.
ಪ್ರೀತಿಯಿಂದ,
ಸಿಂಧು
ಸುನಾಥ್ ಸಾರ್,
ತುಂಬಾ ಒಳ್ಳೆಯ commentary! ಧನ್ಯವಾದಗಳು!
ಪಾಂಡವರ ಮನಿಯೊಳಗ ಪಾಗಾದಾಗಿತ್ತು
ಪಾಗಾದ ಗೂಟವ ಕಿತ್ತು ಓಡಿ......
ಶರೀಫರು ತಾವು ಪೂರ್ವಜನ್ಮದಲ್ಲಿ ಪಾಂಡವರ ಪಾಗಾದಲ್ಲಿ (= ಕುದುರೆ ಲಾಯದಲ್ಲಿ) ಕುದುರೆಯಾಗಿದ್ದೆ ಎಂದು ಹೇಳುತ್ತಿದ್ದಾರೆ.!!
ಈ ಸಾಲುಗಳ ಮೇಲೆ ನನ್ನದೊಂದು ಸಣ್ಣ ಭಿನ್ನಬಿಪ್ರಾಯ!
ಪಾಂಡವರು ಅಂದರೆ ಐದು ಜನ - ಪಂಚೇಂದ್ರಿಯಗಳು! ಪಂಚೇಂದ್ರಿಯಗಳ ಮನೆ - ಈ ದೇಹ! ಪಾಗು - ಮನಸ್ಸು!
ನಮ್ಮ ಚೈತನ್ಯ/ಬುದ್ದಿ ಮನಸಿನ ಹತೋಟಿಗೆ ಸಿಗದೇ (ಅಂದರೆ ಇಂದ್ರೀಯ ಸುಖಕ್ಕೆ ಪಕ್ಕಾಗಿ) ಪಂಚೆದ್ರಿಯಗಳ ಮೇಲೆ ಹತೋಟಿ ಸಿಗದೇ (ಪಾಗಾದ ಗೂಟವ ಕಿತ್ತು ಓಡಿ) ಓಡಾಡುತಿದ್ದಾಗ, ಅಲ್ಲಿ ಗುರು ಗೋವಿಂದರ ಕೃಪಾದೃಷ್ಟಿ ಬಿತ್ತು.
ಇದು ಪೂರ್ವ ಜನ್ಮದ ಅಥವಾ ಜನ್ಮಾಂತರದ ಬಗ್ಗೆ ಅಲ್ಲವೆಂದು (ಸಾಂಕೇತಿಕವಾಗಿಯೂ ಅಲ್ಲ), ನನ್ನ ಅಭಿಪ್ರಾಯ!
ನಮಸ್ಕಾರ!
ದೀಪಕ್ ಚಂದ್ರಶೇಖರ್
ಕಾಕಾ ಅದ್ಭುತ ವಿವರಣೆ!! ಇಷ್ಟು ಪರಿಪಕ್ವವಾಗಿ ವಿಶ್ಲೇಷಿಸಲು ಅಂತಹ ಪರಿಶುದ್ಧ ಮನಸ್ಸೇ ಬೇಕಾಗುತ್ತದೆ. ತುಂಬಾ ಧನ್ಯವಾದಗಳು :)
~ತೇಜಸ್ವಿನಿ.
ಸಿಂಧು,
ತುಂಬ ‘ಮೋಜಿನ’ ಗೀತೆ ಇದು! ಸ್ಪಂದನಕ್ಕೆ ಧನ್ಯವಾದಗಳು.
ದೀಪಕರೆ,
ತುಂಬ ಸಮಂಜಸವಾದ ವಿವರಣೆಯನ್ನು ನೀಡಿರುವಿರಿ. ನಿಮ್ಮ ವಿವರಣೆಯನ್ನು ಲೇಖನದ relevant ಭಾಗದಲ್ಲಿ ಇದೀಗ ಸೇರ್ಪಡಿಸಿದ್ದೇನೆ.ಧನ್ಯವಾದಗಳು.
ತೇಜಸ್ವಿನಿ,
ನನ್ನದು ಯಾವ ಅಳತೆಯಿಂದಲೂ ಪರಿಶುದ್ಧವಾದ ಮನಸ್ಸಲ್ಲ.
ಮೋಸ ಹೋಗದಿರಿ!
ಸುನಾಥ್ ಸರ್,
ನನ್ನ ಅಭಿಪ್ರಾಯವನ್ನು ಸಮಂಜಸ ಎಂದು ಹೇಳಿದ್ದಲ್ಲದೆ, ವ್ಯಾಖ್ಯಾನವಾಗಿ ನನ್ನ ಹೆಸರ ಸಮೇತ ನಿಮ್ಮ ಲೇಖನದಲ್ಲಿ ಸೇರಿಸಿದ್ದೀರಿ. ನಿಮ್ಮದು ದೊಡ್ಡ ಗುಣ, ದೊಡ್ಡ ಮನಸು!
ಅಭಾರಿಯಾಗಿದ್ದೇನೆ!!
ನಮಸ್ಕಾರ!
- ದೀಪಕ್ ಚಂದ್ರಶೇಖರ್
ಅರ್ಥೈಸಿ ತಿಳಿಸಿದ್ದಕ್ಕಾಗಿ ಶರಣು ಶರಣಾರ್ಥಿಗಳು
Anonymousರೆ, ನಿಮಗೂ ಧನ್ಯವಾದಗಳು.
Post a Comment