Saturday, March 21, 2015

ನನ್ನ ಕೈಯ ಹಿಡಿದಾಕೆ !............ಬೇಂದ್ರೆ



ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                        ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                        ಹುದುಲಾಗ ಸಿಕ್ಕೇನs

                       
ಜಗದಾಗ ಯಾವಾವ ನೆರಳು ಬೆಳಕಿನಾಗ
                ಹಗಲಿರುಳು ಇದ್ದಾವಾ
ಎದ್ದೇನs ಬಿದ್ದೇನs ಕತ್ತಲು ಬಿಸಲೇನ
               ನಕ್ಕಾವಾ ಗೆದ್ದಾವಾ !

                       
ಹುಸಿ ನಗುತ ಬಂದೇವ ನಸುನಗುತ ಬಾಳೋಣ
                  ತುಸು ನಗುತ ತೆರಳೋಣ
ಬಡ ನೂರು ವರುಷಾನ ಹರುಷಾದಿ ಕಳೆಯೋಣ
                  ಯಾಕಾರೆ ಕೆರಳೋಣ !

                       
ಬಡತನ ಒಡೆತನ ಕಡೆತನಕುಳಿದಾವೇನ
              ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
              ಕಡೆಗೋಲು ಹಿಡಿಹುಟ್ಟ !

                       
ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                        ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                        ಹುದುಲಾಗ ಸಿಕ್ಕೇನs !

ತಮ್ಮ ಹುದುಗಲಾರದ ದುಃಖಕವನದಲ್ಲಿ ಬೇಂದ್ರೆಯವರು ತಮ್ಮ ಹೆಂಡತಿಗೆ ಸುಖದ ನಟನೆಯನ್ನು ಮಾಡಬೇಡ; ನಿನ್ನ ದುಃಖವನ್ನು ಕಣ್ಣೀರಿನಲ್ಲಿ ಹರಿಯಬಿಡುಎಂದು ಹೇಳುತ್ತಾರೆ. ಆ ಸಂದರ್ಭವು ಒಂದು ದುಃಖದ ಪ್ರಸಂಗವಾಗಿತ್ತು. ಆದುದರಿಂಬೇಂದ್ರೆಯವರು ತಮ್ಮ ಹೆಂಡತಿಗೆ ಆ ರೀತಿ ಹೇಳುವುದು ಉಚಿತವೇ ಆಗಿತ್ತು. ಆದರೆ, ‘ನನ್ನ ಕೈಯ ಹಿಡಿದಾಕೆಎನ್ನುವ ಈ ಕವನದಲ್ಲಿ, ಬೇಂದ್ರೆಯವರು ‘ನಿನ್ನಅಳಲನ್ನು ನುಂಗಿಕೊಂಡು ಒಮ್ಮೆ ಕ್ಕು ಬಿಡುಎನ್ನುವ ಬೇಡಿಕೆಯನ್ನು ತಮ್ಮ ಪತ್ನಿಯ ಮುಂದೆ ಇಡುತ್ತಿದ್ದಾರೆ. ಏಕೆಂದರೆ ಇದು ಬೇಂದ್ರೆಯವರ ಬದುಕಿನ ಹತಾಶೆಯ ಸನ್ನಿವೇಶವಾಗಿದೆ.
ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                   ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                   ಹುದುಲಾಗ ಸಿಕ್ಕೇನs
ನನ ಕೈಯ ಹಿಡಿದಾಕೆಎನ್ನುವ ಪದಪುಂಜವು ಸೂಚಿಸುವ ಅನೇಕ ಅರ್ಥಗಳನ್ನು ನಾವು ಇಲ್ಲಿ ಸ್ಮರಿಸಬೇಕು. ಸಾಮಾನ್ಯ ಅರ್ಥವೆಂದರೆ ಪಾಣಿಗ್ರಹಣ’; ಅರ್ಥಾತ್ ಇವಳು ಬೇಂದ್ರೆಯವರ ಧರ್ಮಪತ್ನಿ. ಆದುದರಿಂದ ಇವಳು ತನ್ನ ಗಂಡನನ್ನು ಅಂದರೆ ಬೇಂದ್ರೆಯವರನ್ನು ಅವಲಂಬಿಸಿ, ಅನುಸರಿಸಿ ನಡೆಯಬೇಕಾದವಳು. ಇಲ್ಲಿಯ ಸೂಚ್ಯಾರ್ಥವೇನೆಂದರೆ, ಇವಳು ಬದುಕಿನ ದಾರಿಯಲ್ಲಿ ಬೇಂದ್ರೆಯವರನ್ನೇ ಕೈಹಿಡಿದು ನಡೆಯಿಸುವವಳು. ಈ ಪರಸ್ಪರ ಅವಲಂಬನ, ಪರಸ್ಪರ ಸಹಕಾರ ಇವು ಎಲ್ಲ ದಾಂಪತ್ಯಗಳಲ್ಲೂ ಇರಬೇಕಾದಂತಹ ಗುಣಗಳೇ ಆಗಿವೆ. ಇಂತಹ ಸಹಧರ್ಮಿಣಿಯಿಂದ ಬೇಂದ್ರೆಯವರು ಕೋರುವುದು ಏನನ್ನು? ‘ನಿನ್ನ ದುಃಖ ಅಪಾರವಾಗಿದ್ದರೂ ಸಹ, ಅದೆಲ್ಲವನ್ನೂ ನುಂಗಿಕೊಂಡು, ಒಂದು ಸಲ ನಕ್ಕು ಬಿಡು! ಆಗ ನಾನೂ ಸಹ ನನ್ನ ಹತಾಶೆಯನ್ನು ಮರೆತು, ಸಮಾಧಾನವನ್ನು ಪಡೆದೇನು.’ ಇದು ಸಾಧ್ಯವಾಗದಿದ್ದರೆ? ಬೇಂದ್ರೆಯವರ ಹೆಂಡತಿಗೆ ತನ್ನ ದುಃಖವನ್ನು ಮರೆಮಾಚುವುದು, ಕಣ್ಣೀರನ್ನು ನುಂಗಿಕೊಳ್ಳುವುದು ಸಾಧ್ಯವಾಗದಿದ್ದರೆ? ಅದರ ಘೋರ ಪರಿಣಾಮವನ್ನು ಬೇಂದ್ರೆ ಹೀಗೆ ಉಸುರುತ್ತಾರೆ:
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳಹುದುಲಾಗ ಸಿಕ್ಕೇನs.

ಬಯಲುಸೀಮೆಯ ಹಳ್ಳಗಳಲ್ಲಿ ಪ್ರವಾಹವು ಬೇಸಿಗೆಯ ಕಾಲದಲ್ಲಿ ಇರುವುದಿಲ್ಲ. ಮಳೆಗಾಲದಲ್ಲಿ ಈ ಹಳ್ಳಗಳು ಏಕಾಏಕಿಯಾಗಿ ಉಕ್ಕಿ ಹರಿಯತೊಡಗುತ್ತವೆ. ತಮ್ಮ ದಂಡೆಗಳನ್ನು ಕೊರೆಯುತ್ತ ಮುಂದೆ ಸಾಗುತ್ತವೆ. ಅಕಸ್ಮಾತ್ ಈ ಹಳ್ಳಗಳಲ್ಲಿ ಸಿಕ್ಕ ಜಾನುವಾರುಗಳಾಗಲೀ, ಮನುಷ್ಯರಾಗಲೀ ಅಲ್ಲಿಯ ಹುದಲಿನಲ್ಲಿ ಅಂದರೆ ಕೆಸರಿನಲ್ಲಿ ಸಿಕ್ಕಿಕೊಂಡರೆ,  ಹೊರಗೆ ಬರುವುದು ಅಸಾಧ್ಯ. ಇನ್ನು ‘ಕಳ್ಳಹುದಲು’ ಎನ್ನುವುದು ಮತ್ತೂ ಭೀಕರ. ಇದಕ್ಕೆ ಇಂಗ್ಲೀಶಿನಲ್ಲಿ quicksand ಎಂದು ಹೇಳುತ್ತಾರೆ. ತೋರಿಕೆಗೆ ಅಮಾಯಕವಾಗಿರುವ ಇದರಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿ, ಪ್ರಯತ್ನ ಪಟ್ಟಷ್ಟೂ ಕೆಳಗೆ ಹೋಗುತ್ತಾನೆ. ಬೇಂದ್ರೆಯವರ ಪತ್ನಿ ಸಹಸಾ ತನ್ನ ದುಃಖವನ್ನು ಅದುಮಿ ಇಟ್ಟಿರುತ್ತಾರೆ. ಆದರೆ ತನ್ನ ಗಂಡನನ್ನು ನೋಡಿದೊಡನೆ ಅವರ ಕಣ್ಣೀರು ಏಕಾಏಕಿಯಾಗಿ, ಉಕ್ಕುಕ್ಕಿ ಹೊರಬರುತ್ತದೆ. ಆದುದರಿಂದ ಬೇಂದ್ರೆ ಹೇಳುತ್ತಾರೆ: ‘ನಿನ್ನ ಹುಚ್ಚು ಹಳ್ಳದಂತಿರುವ ಕಣ್ಣೀರ ಪ್ರವಾಹದಲ್ಲಿ ನನ್ನನ್ನು ಮುಳುಗಿಸಬೇಡ!’

‘ಸಮಾಧಾನದಿಂದಿರು’ ಎಂದು ತಮ್ಮ ಹೆಂಡತಿಗೆ ಹೇಳಿದರೆ ಆಯಿತೆ? ಅದಕ್ಕೆ ಸಮರ್ಪಕವಾದ ಕಾರಣವನ್ನು ಹೇಳಬೇಡವೆ? ಬೇಂದ್ರೆಯವರು ಈಗ ಒಂದು ವಿಶಾಲವಾದ ತರ್ಕವನ್ನು ತಮ್ಮ ಹೆಂಡತಿಯ ಮುಂದೆ ಇಡುತ್ತಾರೆ:
ಜಗದಾಗ ಯಾವಾವ ನೆರಳು ಬೆಳಕಿನಾಗ
              ಹಗಲಿರುಳು ಇದ್ದಾವಾ
ಎದ್ದೇನs ಬಿದ್ದೇನs ಕತ್ತಲು ಬಿಸಲೇನ
             ನಕ್ಕಾವಾ ಗೆದ್ದಾವಾ !
ನೆರಳು ಅಂದರೆ ಬಿಸಿಲಿನ ತಾಪ ಇಲ್ಲದೆ ಇರುವುದು; ಬೆಳಕು ಎಂದರೆ ತನ್ನನ್ನು ಗೊಂದಲಕ್ಕೆ ಈಡು ಮಾಡುವಂತಹ ಕತ್ತಲೆ ಇಲ್ಲದಿರುವುದು. ಇಂತಹ ಒಂದು ಸುಸ್ಥಿತಿ ಈ ಜಗತ್ತಿನಲ್ಲಿ ಯಾರಿಗಾದರೂ ಎಲ್ಲ ಕಾಲದಲ್ಲಿಯೂ ಸಿಕ್ಕೀತೆ? ನೆರಳಿನ ಬದಲಾಗಿ, ಬಿಸಲೇ ಇರಲಿ; ಬೆಳಕಿನ ಬದಲು ಕತ್ತಲೆಯೇ ಇರಲಿ, ಅಂತಹದರಲ್ಲಿಯೇ ಏಳುತ್ತ, ಬೀಳುತ್ತ ದಾರಿಯನ್ನು ಸವಿಸಬೇಕು. ನಗುನಗುತ್ತಲೆ ಮುನ್ನಡೆಯಬೇಕು. ಏಕೆಂದರೆ, ‘ನಕ್ಕಾವಾ ಗೆದ್ದಾವಾ! ’ ಅಳುವು ಸೋತವರ ಲಕ್ಷಣ; ಎಲ್ಲವನ್ನು ಕಳೆದುಕೊಂಡರೂ ಸಹ ನಗುವುದೇ ಬದುಕನ್ನು ಗೆದ್ದವರ ಲಕ್ಷಣ!

ಈ ವಿಶಾಲವಾದ ತರ್ಕವನ್ನು ಇದೀಗ ಬೇಂದ್ರೆಯವರು ತಮ್ಮ ವೈಯಕ್ತಿಕ ಬದುಕಿನ ಅಳತೆಗಳಿಗೆ ಹೊಂದಿಸಲು ಪ್ರಯತ್ನಿಸುತ್ತಾರೆ.
ಹುಸಿ ನಗುತ ಬಂದೇವ ನಸುನಗುತ ಬಾಳೋಣ
                ತುಸು ನಗುತ ತೆರಳೋಣ
ಬಡ ನೂರು ವರುಷಾನ ಹರುಷಾದಿ ಕಳೆಯೋಣ
                  ಯಾಕಾರೆ ಕೆರಳೋಣ !
ಪುಟ್ಟ ಕೂಸುಗಳನ್ನು ಗಮನಿಸಿರಿ. ಅವು ಯಾವಾಗಲೂ ಕಾರಣವಿಲ್ಲದೇ ನಗುತ್ತಿರುತ್ತವೆ. ಇದು ಬಾಲರ ನಿಷ್ಕಪಟವಾದ ನಗು. ಬೇಂದ್ರೆಯವರು ಈ ನಗುವಿಗೆ ‘ಹುಸಿನಗು’ ಎಂದು ಕರೆದಿದ್ದಾರೆ. ಹುಸಿನಗುವಿಗೆ ಸುಳ್ಳುನಗೆ ಎನ್ನುವ ಶ್ಲೇಷಾರ್ಥವನ್ನೂ ಸಹ ಬೇಂದ್ರೆಯವರು ಇಲ್ಲಿ ಸೂಚಿಸುತ್ತಿದ್ದಾರೆ. 

ನಸುನಗು ಅಂದರೆ ಮಂದಹಾಸ. ಇದು ಅಲ್ಪಸಂತೃಪ್ತಿಯ, ಆತ್ಮಸಂತೋಷದ ನಗು. ಈ ರೀತಿಯಾಗಿ ನಾವು ಬಾಳಬೇಕು. ಹಾಗು, ಈ ಲೋಕವನ್ನು ಬಿಟ್ಟು ಹೋಗಬೇಕಾದಾಗ, ತುಸುನಗುವಿನೊಡನೆ ತೆರಳಬೇಕು. ‘ಯಾಕಪ್ಪಾ, ಈ ‘ತುಸು ನಗು?’ ಎಂದು ಯಾರಾದರೂ ಕೇಳಬಹುದು. ಬಾಳಿನಲ್ಲಿ ದುಃಖ ಇದ್ದೇ ಇರುತ್ತದೆ. ಅದರ ಒಜ್ಜೆಯನ್ನು ಕಡಿಮೆ ಮಾಡಿಕೊಳ್ಳಲು ‘ಹುಸಿ ನಗು’ ಹಾಗು ‘ತುಸು ನಗು’ ಬೇಕೇ ಬೇಕು! ಅದನ್ನೇ ಬೇಂದ್ರೆ ಹೀಗೆ ಹೇಳುತ್ತಾರೆ: ಹುಟ್ಟು ಸಾವಿನ ನಡುವಿನ ಈ ಅವಧಿಯಲ್ಲಿ ನಮಗೆ ಸುಖದ ಸಮೃದ್ಧಿ ಬರುವದಿಲ್ಲ. ಆದರೂ ಅದಕ್ಕಾಗಿ ಕೆರಳುವುದು ಬೇಡ; ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಂಡು, ನಸುನಗುತ್ತ ಹರ್ಷಚಿತ್ತರಾಗಿ ಇರೋಣ!

ಬೇಂದ್ರೆ ದಂಪತಿಗಳ ಸಂಕಷ್ಟಕ್ಕೆ ಸ್ವತಃ ಬೇಂದ್ರೆಯವರೇ ಕಾರಣರು! ಸರಿಯಾದ ಉದ್ಯೋಗವಿಲ್ಲ; ಹೆಂಡತಿ ಮಕ್ಕಳು ಪರಾಶ್ರಯದಲ್ಲಿ! ಆದುದರಿಂದ ಬೇಂದ್ರೆಯವರಿಗೆ ತಮ್ಮ ಹೆಂಡತಿಯೆದುರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅದಕ್ಕಾಗಿಯೇ ಅವರು ತಮ್ಮ ಹೆಂಡತಿಗೆ ‘ತಿಳಿಸಿ ಹೇಳುತ್ತಾರೆ’ (!): ಈ ಬಡತನ, ಈ ಸಿರಿವಂತಿಕೆ, ಈ ಪರಾಶ್ರಯ ಇವೆಲ್ಲವೂ ಕ್ಷಣಿಕವಾದವುಗಳೇ. ಹಾಗಿದ್ದರೆ, ಸದಾಕಾಲವೂ ಸ್ಥಿರವಾಗಿ ಇರುವಂತಹದು ಯಾವುದು? ಬೇಂದ್ರೆಯವರ ಪ್ರಕಾರ ಅದು ‘ಎದೆಹಿಗ್ಗು’ (ಸ್ವಸಂತೋಷ)! ಈ ಬಾಳೆಂಬ ಸಮುದ್ರದಲ್ಲಿ ನಮ್ಮ ಒಡಕಲು ದೋಣಿಯನ್ನು ನಾವು ಯಶಸ್ವಿಯಾಗಿ ಸಾಗಿಸಬೇಕಾದರೆ, ನಮಗೆ ಬೇಕಾದದ್ದು ಆತ್ಮಸಂತೋಷವೆನ್ನುವ ಹುಟ್ಟುಗಳು. ಆ ಕಡೆಗೋಲನ್ನು (ಹುಟ್ಟುಗಳನ್ನು) ಮುಳುಗಿಸಬೇಡ’, ಇದು ಬೇಂದ್ರೆಯವರು ತಮ್ಮ ಹೆಂಡತಿಗೆ ನೀಡುವ (ಅಸಹಾಯಕ) ಉಪದೇಶ!
ಬಡತನ ಒಡೆತನ ಕಡೆತನಕುಳಿದಾವೇನ
            ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
            ಕಡೆಗೋಲು ಹಿಡಿಹುಟ್ಟ !

ಈ ಎಲ್ಲ ತತ್ವಜ್ಞಾನ, ಈ ಎಲ್ಲ ಉಪದೇಶ ನಿಜವಾಗಿಯೂ ನಿರರ್ಥಕ ಎನ್ನುವುದು ಬೇಂದ್ರೆಯವರಿಗೂ ಗೊತ್ತು. ಆದುದರಿಂದ ಅವರು ಮತ್ತೊಮ್ಮೆ ವಾಸ್ತವತೆಗೆ ಮರಳುತ್ತಾರೆ:
ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                   ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                   ಹುದುಲಾಗ ಸಿಕ್ಕೇನs !
ಇದು ಮೊದಲ ನುಡಿಯ ಪುನರಾವರ್ತನೆಯೇ ಆದರೂ ಸಹ, ಈ ಸಲ ಕೊನೆಯ ಸಾಲಿನ ಕೊನೆಗೆ ಉದ್ಗಾರವಾಚಕ ಚಿಹ್ನೆ ಇರುವುದನ್ನು ಗಮನಿಸಬೇಕು. ಬೇಂದ್ರೆಯವರ ನಿಸ್ಸಹಾಯಕತೆಯನ್ನು ಈ ಚಿಹ್ನೆ ಸ್ಪಷ್ಟಪಡಿಸುತ್ತದೆ.
……………………………………………………………………..
ಟಿಪ್ಪಣಿ:
ತಮ್ಮ ಹೆಂಡತಿಯ ಅಸೆಯನ್ನು ಪೂರೈಸಲು ತಮ್ಮಿಂದ ಸಾಧ್ಯವಾಗದಾಗ ಅಥವಾ ಅವಳು ದುಃಖದಲ್ಲಿದ್ದಾಗ, ತತ್ವಜ್ಞಾನವನ್ನು ಹೇಳಿ, ಅವಳಿಗೆ (ಕವನದ ಮೂಲಕ) ಸಮಾಧಾನಿಸುವುದು ಬೇಂದ್ರೆಯವರಿಗೆ ಒಂದು ಪರಿಪಾಠವೇ ಆದಂತೆ ಕಾಣುತ್ತದೆ. ಹೆಂಡತಿಗೆ ಮುತ್ತಿನ ಏಕಾವಳಿ ಸರವನ್ನು ಕೊಡಿಸಲು ಅಗದ ಬೇಂದ್ರೆ ಅವಳಿಗೆ ‘ಅಷ್ಟು ಪ್ರೀತಿ ಇಷ್ಟು ಪ್ರೀತಿ’ ಎನ್ನುವ ಕವನದ ಸರವನ್ನು ತೊಡಿಸಿದರು. ಈ ಕವನಕ್ಕೆ ಪ್ರತಿಯಾಗಿ, ತಮ್ಮ ಹೆಂಡತಿ ತಮಗೆ, ‘ನಾನು ಕೊಡುವೆ ನಿಮಗೆ ದವನ, ನೀವು ಕೊಡುವಿರೆನಗೆ ಕವನ’ ಎಂದು ಹಂಗಿಸುತ್ತಿರುವಂತಹ ಒಂದು ಕವನವನ್ನೂ ಬರೆದಿದ್ದಾರೆ!

ಬೇಂದ್ರೆಯವರ ಹತ್ತಿರ ಐದುಸಾವಿರಕ್ಕೂ ಹೆಚ್ಚಿಗೆ ಅಮೂಲ್ಯವಾದ ಪುಸ್ತಕಗಳು ಇದ್ದವಂತೆ. ಅವೇನು ನಾಲ್ಕಾಣೆಯ ಪತ್ತೇದಾರಿ ಕಾದಂಬರಿಗಳಲ್ಲ! ಈಗಿನ ಲೆಕ್ಕದಲ್ಲಿ ಒಂದೊಂದಕ್ಕೂ ೫೦೦ ರೂಪಾಯಿಗಳಷ್ಟು ಬೆಲೆ ಎಂದುಕೊಂಡರೂ ಸಹ ಈ ಎಲ್ಲ ಗ್ರಂಥಗಳ ಒಟ್ಟು ಬೆಲೆ ಈಗಿನ ಲೆಕ್ಕದಲ್ಲಿ ೨೫ ಲಕ್ಷದಷ್ಟಾಗಬಹುದು! ತಮ್ಮ ಹೆಂಡತಿಗೆ ಒಂದು ಮುತ್ತಿನ ಸರವನ್ನು ಕೊಡಿಸಲು ಜೀನತನ ತೋರಿಸುತ್ತಿದ್ದ ಈ ಮಹಾನುಭಾವನ ಹೆಂಡತಿಯ ದಾಂಪತ್ಯದ ಔದಾರ್ಯವನ್ನು ನಾವು ಮೆಚ್ಚಬೇಕು. ವರಕವಿಯ ಬಾಳಬಂಡಿಯನ್ನು ಸಹನೆಯಿಂದ ಎಳೆದ ಆ ಸಾಧ್ವಿಗೆ ನನ್ನ ಸಾವಿರ ನಮಸ್ಕಾರಗಳು.

8 comments:

Badarinath Palavalli said...

ಬೇಂದ್ರೆಯವರ ಲಯ ಮತ್ತು ಶೈಲಿ ಮತ್ತೊಮ್ಮೆ ನಮ್ಮ ಮನದಾಳಕೆ ಇಳಿಯುತಿದೆ.
ನಾನೂ ಅಲ್ಪ ಸ್ವಲ್ಪ ಕವಿಯೇ, ಬಹುಶಃ ಸಾಹಿತ್ಯಾಸಕ್ತ ಬಹುಪಾಲು ಮಂದಿ ಅರೆ ಹೊಟ್ಟೆಯವರೇ ಆಗಿರುತ್ತಾರೋ ಏನೋ?
ವಿವಾಹ ಜೀವನದ ಮೊದಲರ್ಧ ನಮ್ಮ ಮನೆ ಕುಚೇಲ ಕುಟೀರ. ಆವತ್ತು ದುಡಿದುತಂದ ಕವಡೆ ಸಂಜೆಯ ಗಂಜಿಗೆ ಮೂಲಾಧಾರ! ಅದೆಷ್ಟು ನೊಂದಿದ್ದಳೋ ಆಕೆ? ಈ ಮಗುವನು ಹಸಿವಾಗಿ ಅಳದಂತೆ ಪೊರೆದು ಬಿಟ್ಟಳು, ತಾನು ಒಂದೆರಡು ತುತ್ತು ಕಡಿಮೆಯಾದರೂ ಉಂಡು!
ನಕ್ಕು ಬಿಡುತ್ತಿದ್ದಳು ಅಳುವನು ನುಂಗಿ ಹುಸಿ ನಗೆ ನಕ್ಕು!

ಯಾಕೋ ಇವೆಲ್ಲ ಈ ತಂಪು ಹೊತ್ತಲಿ ನೆನಪಾಗಿ ಕಣ್ಣೀರಾದೆ ಈ ಬರಹ ಓದಿ! :-(

sunaath said...

ಬದರಿನಾಥರೆ,
ನಿಮ್ಮ ಮೊದಲಿನ ಅನುಭವದ ಸ್ಮರಣೆ ನನ್ನ ಕಣ್ಣನ್ನು ತೇವಗೊಳಿಸುತ್ತಿದೆ. ಕುಚೇಲ ಕುಟೀರವು ಈಗ ಸು-ಧಾಮವಾಗಿದೆ ಎಂದು ಆಶಿಸುತ್ತೇನೆ.

ಸಿಂಧು sindhu said...

ಪ್ರೀತಿಯ ಸುನಾಥ ಕಾಕಾ...
ಇದು ನಂಗೆ ತುಂಬ ಇಷ್ಟವಾದ ಬೇಂದ್ರೆಯವರ ದಾಂಪತ್ಯ ಗೀತೆ.
ಹುಸಿ ನಗುತ ಬಂದೇವ ನಸುನಗುತ ಬಾಳೋಣ
ತುಸು ನಗುತ ತೆರಳೋಣ
ಬಡ ನೂರು ವರುಷಾನ ಹರುಷಾದಿ ಕಳೆಯೋಣ
ಯಾಕಾರೆ ಕೆರಳೋಣ !
ಇಡೀ ಕವಿತೆಯೇ ಒಂದು ಅಪೂರ್ವ ಅನುಭವ ಆದ್ರೆ.. ಈ ಪ್ಯಾರಾ ಅನುಭಾವ.. ದೇಶ,ಕಾಲ,ವ್ಯಕ್ತಿ ಮತ್ತು ಘಟನೆಗಳನ್ನ ಮೀರಿ ಆವರಿಸಿಕೊಳ್ಳುತ್ತದೆ.
ನೀವಂತೂ ಆ ಕವಿತೆಯ ಒಂದೊಂದು ಸೊಲ್ಲನ್ನೂ ತಿದ್ದಿ ತೀಡಿ ನಮ್ಮ ಮನದಂಗಳಕ್ಕೆ ತಂದುಬಿಟ್ಟಿದ್ದೀರಿ.
ಕಣ್ಣುತುಂಬಿಸುವ,, ಹಾಗೇ ಕತ್ತಲಿಗೆ ಒಂದು ಮಿನುಗುದೀಪವೂ ಆಗಿ ನಿಲ್ಲುವ ಕವಿತೆ ಇದು. ಬದುಕಿನ ಹೂರಣ ಇಲ್ಲಿ ಕಣ್ಣ ನೀರಿನಲ್ಲಿ ಕಲೆಸಲ್ಪಟ್ಟಿದೆ.
ಪ್ರೀತಿಯಿಂದ,
ಸಿಂಧು

sunaath said...

ಸಿಂಧು,
ನಿಮ್ಮ ಪ್ರತಿಕ್ರಿಯೆಯ ಈ ಸಲ್ಲುಗಳೇ ಕವನದ ಸಾರವನ್ನು ತಿಳಿಸಿಬಿಟ್ಟಿವೆ:
"ಕಣ್ಣುತುಂಬಿಸುವ, ಹಾಗೇ ಕತ್ತಲಿಗೆ ಒಂದು ಮಿನುಗುದೀಪವೂ ಆಗಿ ನಿಲ್ಲುವ ಕವಿತೆ ಇದು. ಬದುಕಿನ ಹೂರಣ ಇಲ್ಲಿ ಕಣ್ಣ ನೀರಿನಲ್ಲಿ ಕಲೆಸಲ್ಪಟ್ಟಿದೆ."

ಮೌನರಾಗ said...

ಬೆಂದ್ರೆಯವರು ನನ್ನೊಳಗೆ ಇಳಿಯುತ್ತಿರುವ ಹೊತ್ತಲ್ಲೇ, ಮಸ್ತ್ ಕವನವೊಂದನ್ನು ಕೊಟ್ಟಿದ್ದೀರಿ ವಿವರಣೆ ಸಹಿತ.. ಇಷ್ಟವಾಯಿತು...

sunaath said...

ಧನ್ಯವಾದಗಳು, ಮೌನರಾಗಿಣಿ!

ಅಪ್ಪ-ಅಮ್ಮ(Appa-Amma) said...

ಸುನಾಥ್ ಖಾಖಾ,

ಬಹುಷಃ ಕುವೆಂಪು ಒಬ್ಬರು ಬಿಟ್ಟರೆ ಅ ಕಾಲದ ಕನ್ನಡದ ಕವಿಗಳೆಲ್ಲರ ಜೇಬು ಖಾಲಿ ಖಾಲಿ..

ಮತ್ತೊಂದು ಬೇಂದ್ರೆ ಕಾವ್ಯದ ಸುಲಲಿತ ಪಾಠಕ್ಕೆ ಶರಣು !

sunaath said...

ಅಪ್ಪ-ಅಮ್ಮ,
ದ.ಬಾ.ಕುಲಕರ್ಣಿಯವರ ಒಂದು ಚುಟುಕು ನೆನಪಿಗೆ ಬರುತ್ತಿದೆ:
‘ಸೋಮವಾರ ಚಿಂತಿ
ಮಂಗಳವಾರ ಸಂತಿ
ಬುಧವಾರ ನಿಶ್ಚಿಂತಿ!’