Tuesday, April 26, 2016

ಮೃಚ್ಛಕಟಿಕಮ್-೬


ವಸಂತಸೇನೆಗೆ ಚಾರುದತ್ತನಲ್ಲಿ ಉತ್ಕಟ ಪ್ರೇಮಭಾವವಿದೆ. ಆದರೆ ಅವಳು ಕುಲವಧುವಂತೂ ಅಲ್ಲ. ಆದುದರಿಂದ ಚಾರುದತ್ತನನ್ನು ಮದುವೆಯಾಗುವದು ಅವಳಿಗೆ ಸಾಧ್ಯವಿಲ್ಲದ ಮಾತು. ಇಂತಹ ಸಂದರ್ಭದಲ್ಲಿ, ಪ್ರಣಯಸಮರ್ಪಣೆಯೊಂದೇ ಅವಳಿಗೆ ಉಳಿದಿರುವ ಹಾದಿ. ಚಾರುದತ್ತನಿಗೆ ಮುತ್ತಿನ ಹಾರವನ್ನು ಮರಳಿಸುವ ನೆವದಲ್ಲಿ ಅವನನ್ನು ಸಂಧಿಸಲು ಅವಳು ಬಯಸುತ್ತಿದ್ದಾಳೆ. ಮೈತ್ರೇಯನ ಮೂಲಕ ಚಾರುದತ್ತನಿಗೆ ಅವಳು ಸಂದೇಶವನ್ನೂ ಸಹ ಕಳುಹಿಸಿದ್ದಾಳೆ.

(ತನ್ನ ಗೆಣೆಯನಿಗಾಗಿ ಹಂಬಲಿಸುತ್ತಿರುವ ಓರ್ವ ಸೂಳೆಯ ಅಳಲನ್ನು ಬೇಂದ್ರೆಯವರು ತಮ್ಮ ಹುಬ್ಬಳ್ಳಿಯಾಂವಾಕವನದಲ್ಲಿ ಚಿತ್ರಿಸಿದ್ದಾರೆ. ಆ ಕವನದಲ್ಲಿ ಎದೀ ಮ್ಯಾಲಿನ ಗೆಳತಿ ಮಾಡಿ ಇಟ್ಟುಕೊಂಡಾಂವಾಅನ್ನುವ ಸಾಲು ಬರುತ್ತದೆ. ಎದೆಯ ಮೇಲಿನ ಕೆಂಪು ಚುಕ್ಕಿಗೆ ಗೆಳತಿಎಂದು ಕರೆಯುತ್ತಾರೆ.  ಚುಕ್ಕಿಯು ಪ್ರೀತಿಪಾತ್ರರ ಸಂಕೇತ. ಈ ಸೂಳೆಯ ಗಿರಾಕಿಯೊಬ್ಬನು ತುಂಬ ಮೋಜಿನ ವ್ಯಕ್ತಿ. ಆತ ಇವಳಿಗೆ ತನ್ನ ಎದೆಯ ಮೇಲಿನ ಗೆಳತಿಯ ಸ್ಥಾನವನ್ನು ಕೊಟ್ಟಿದ್ದಾನೆ. ಆದರೆ ಅದಕ್ಕೂ ಹೆಚ್ಚಿನದಾದ ಮಡದಿಯ ಸ್ಥಾನವು ಇವಳಿಗೆ ಸಿಗುವುದು ಜನ್ಮಜನ್ಮಾಂತರಗಳಲ್ಲಿಯೂ ಸಾಧ್ಯವಿಲ್ಲ. ಈ ನಾಟಕದಲ್ಲಿಯೂ ಸಹ ವಸಂತಸೇನೆಗೆ ಸಿಗುವುದು ಎದಿಯ ಮ್ಯಾಲಿನ ಗೆಳತಿಯಸ್ಥಾನ ಮಾತ್ರ ಎಂದು ಪ್ರೇಕ್ಷಕರಿಗೆ ಭಾಸವಾಗುವುದು ಸಹಜ. ಆದರೆ ಅದಕ್ಕೂ ಹೆಚ್ಚಿನ ಸ್ಥಾನ ಆಕೆಗೆ ಸಿಕ್ಕೀತೆ? ಆ ಕಾಲದ ಸಾಮಾಜಿಕ ಕಟ್ಟುಪಾಡುಗಳನ್ನು ಧಿಕ್ಕರಿಸುವ, ಗಣ್ಯವ್ಯವಸ್ಥೆಯನ್ನು ವಿಡಂಬಿಸುವ ನಮ್ಮ ನಾಟಕಕಾರನ ಒಲವು ಹೇಗಿದೆ ಎನ್ನುವುದನ್ನು ಕೊನೆಯ ಅಂಕದ ಕೊನೆಯಲ್ಲಿ ನೋಡೋಣ.)

ಈ ಅಂಕದಲ್ಲಿ ನಮ್ಮ ನಾಟಕಕಾರನು ಚಾರುದತ್ತ ಹಾಗು ವಸಂತಸೇನೆಯರು ಸಂಧಿಸುವ ದೃಶ್ಯವನ್ನು ಒಂದು ಅವಿಸ್ಮರಣೀಯವಾದ ಘಟನೆಯನ್ನಾಗಿ ಮಾಡಲು ಇಚ್ಛಿಸುತ್ತಾನೆ. ವಸಂತಸೇನೆಯಾದರೊ ಇಲ್ಲಿ ಅಭಿಸಾರಿಕೆ.  ಹಿಂದಿನ ಅಂಕದಲ್ಲಿಯೇ ಅಂದರೆ ಐದನೆಯ ಅಂಕದಲ್ಲಿಯೇ, ವಸಂತಸೇನೆಯ ದಾಸಿಯು ತೀವ್ರವಾಗಿ ಬೀಸುತ್ತಿರುವ ಮಳೆಗಾಳಿಯ ಬಗೆಗೆ ಎಚ್ಚರಿಸಿದ್ದಳು. ಆದರೆ ವಸಂತಸೇನೆಯು ಮಿಲನಕ್ಕಾಗಿ ಉತ್ಕಂಠಿತಳಾಗಿದ್ದಾಳೆ. ಒಬ್ಬ ಗೆಳೆಯ ಹಾಗು ಕೊಡೆ ಹಿಡಿಯುವ ಒಬ್ಬಳು ಸೇವಿಕೆಯ ಜೊತೆಗೆ ವಸಂತಸೇನೆ ಚಾರುದತ್ತನಿಗೆ ಸೂಚಿಸಿದ ಉಪವನದ ಕಡೆಗೆ ಹೊರಟಿದ್ದಾಳೆ. ಈ ಸಮಯದಲ್ಲಿ ಅವಳ ಗೆಳೆಯನು ಅವಳಿಗೆ ಕೆಲವು ಪ್ರಣಯದ ಪಾಠಗಳನ್ನು ಹೇಳುತ್ತಿದ್ದಾನೆ. ಈ ಪಾಠಗಳು ತರುಣ ಪ್ರೇಕ್ಷಕರಿಗೂ ಉಪಯುಕ್ತವಾಗಬಹುದು!

(ವಸಂತಸೇನೆಗೆ ಈ ಪಾಠಗಳನ್ನು ಹೇಳಿಕೊಡುವುದು ಅವಶ್ಯವೆ ಎಂದು ಪ್ರೇಕ್ಷಕರಲ್ಲಿ ಸಂದೇಹ ಬರಬಹುದು. ಆದರೆ ವಸಂತಸೇನೆಗೆ ಇದು ಮೊದಲ ನೈಜಪ್ರೇಮವಾಗಿದೆ ಹಾಗು ಅವಳು ಒಬ್ಬ ಹದಿಹರೆಯದ ಹುಡುಗಿಯಷ್ಟೇ ಉತ್ಸಾಹ ಹಾಗು ಗಲಿಬಿಲಿಯಲ್ಲಿ ಇದ್ದಾಳೆ ಎನ್ನುವುದನ್ನು ಗಮನಿಸಬೇಕು.)

ಧಾರಾಕಾರವಾಗಿ ಬೀಳುತ್ತಿರುವ ಮಳೆ ಹಾಗು ಗುಡುಗು-ಮಿಂಚುಗಳಿಗೆ ಅವಳನ್ನು ಹಿನ್ನಡೆಯಿಸಲು ಸಾಧ್ಯವಾಗುವುದಿಲ್ಲ. ತನ್ನ  ದೃಢ ನಿರ್ಧಾರವನ್ನು ಅವಳು ಪ್ರಕಟಿಸುವುದು ಹೀಗೆ:
ಮೇಘಾ ವರ್ಷಂತು ಗರ್ಜಂತು ಮುಂಚತ್ವ ಶನಿಮೇವ ವಾ|
ಗಣಯಂತಿ ನ ಶೀತೋಷ್ಣಂ ರಮಣಾಭಿಮುಖಾಃ ಸ್ತ್ರಿಯ:
( ಮೋಡಗಳು ಗರ್ಜಿಸಲಿ, ಮಳೆ ಸುರಿಯಲಿ, ಸಿಡಿಲೇ ಬಡೆಯಲಿ; ನಲ್ಲನೆಡೆಗೆ ತೆರಳುತ್ತಿರುವ ನಾರಿಯರು ಇದಾವದನ್ನೂ ಲೆಕ್ಕಿಸುವದಿಲ್ಲ.)

ಇತ್ತ ಚಾರುದತ್ತನು ಮೈತ್ರೇಯನ ಹಾದಿಯನ್ನು ಕಾಯುತ್ತ, ತನ್ನ ಉಪವನದಲ್ಲಿ  ಕುಳಿತಿದ್ದಾನೆ. ಆತನೂ ಸಹ ಬಿರುಮಳೆಯಿಂದಾಗಿ ವಿಹ್ವಲನಾಗಿದ್ದಾನೆ. ಮೈತ್ರೇಯನು ಉಪವನಕ್ಕೆ ಬಂದು ಚಾರುದತ್ತನನ್ನು ಭೆಟ್ಟಿಯಾದ ತಕ್ಷಣವೇ, ವಸಂತಸೇನೆಯ ಬಗೆಗೆ ದೂರಲು ಪ್ರಾರಂಭಿಸುತ್ತಾನೆ. ವಸಂತಸೇನೆಯು ನಿನ್ನಿಂದ ಹೆಚ್ಚಿನ ಮೌಲ್ಯದ ಆಭರಣಗಳನ್ನು ಕೇಳಲು ಬರುತ್ತಿದ್ದಾಳೆಎನ್ನುವ ತನ್ನ ಅನುಮಾನವನ್ನೂ ಹೇಳುವನು.  ಚಾರುದತ್ತನು ಅವಳು ಸಂತೃಪ್ತಳಾಗಿ ತೆರಳಲಿಎಂದು ಮಾರ್ನುಡಿದನು. ಆದರೆ ಚಾರುದತ್ತನ ಹಿತಾಕಾಂಕ್ಷಿಯಾದ ಮೈತ್ರೇಯನು ಸುಮ್ಮನಿರಲಾರನು:  ಬಿಟ್ಟುಬಿಡು ಓ ಗೆಳೆಯಾ, ಸಾವಿರ ತೊಂದರೆಗಳಿಗೆ ತವರಾದ ಈ ವೇಶ್ಯೆಯರ ಸಹವಾಸ ಸಾಕು. ಸೂಳೆ, ಆನೆ, ಕರಣಿಕ, ಬೌದ್ಧ ಭಿಕ್ಷು, ಗೂಢಚಾರ ಮತ್ತು ಕತ್ತೆ ಇದ್ದಲ್ಲಿ ದುಷ್ಟರೂ ಕೂಡ ಜನಿಸುವುದಿಲ್ಲ.

ಮೈತ್ರೇಯನ ಮಾತಿನಲ್ಲಿಯ ಒಂದು ವಿಡಂಬನೆಯನ್ನು ಓದುಗರು ಗಮನಿಸಬೇಕು. ಕರಣಿಕರನ್ನು (ಅಂದರೆ ದಾಖಲಾತಿಗಳನ್ನು ಇಡುವ ರಾಜ್ಯಾಧಿಕಾರಿಗಳನ್ನು) ಹಾಗು ಬೌದ್ಧ ಭಿಕ್ಷುಗಳನ್ನು ನಾಟಕಕಾರನು ಕತ್ತೆಗೆ ಹೋಲಿಸುತ್ತಿದ್ದಾನೆ. ಆ ಕಾಲದಲ್ಲಿಯೂ ಸಹ ಸಾಮಾನ್ಯ ಜನರು ರಾಜಸ್ವ ಅಧಿಕಾರಿಗಳನ್ನು ನಂಬುತ್ತಿರಲಿಲ್ಲ ಹಾಗು ಬೌದ್ಧ ಭಿಕ್ಷುಗಳಿಗೆ ಸಮಾಜದಲ್ಲಿ ಮನ್ನಣೆ ಇರಲಿಲ್ಲ ಎಂದು ಊಹಿಸಬಹುದಾಗಿದೆ.
                                               
ಉಪವನಕ್ಕೆ ಬಂದ ವಸಂತಸೇನೆಯು ಚಾರುದತ್ತನು ಇರುವ ಸ್ಥಳವನ್ನು ಕೇಳಿ, ತಿಳಿದುಕೊಂಡು, ಒಳಬರುತ್ತಲೇ, ಆತನ ಮೇಲೆ ಹೂವುಗಳನ್ನು ಎಸೆದು, ‘ಸಂತೋಷವಾಯಿತೆ?’ ಎಂದು ಕೇಳುತ್ತಾಳೆ. ವಸಂತಸೇನೆಯು ತನ್ನ ಪ್ರಣಯಭಾವವನ್ನು ಮುಚ್ಚುಮರೆಯಿಲ್ಲದೆ, ಆದರೆ ಶಾಲೀನತೆಯ ಮಿತಿಯಲ್ಲಿಯೇ ವ್ಯಕ್ತಪಡಿಸುವ ರೀತಿಯನ್ನು ಪ್ರೇಕ್ಷಕರು ಗಮನಿಸಬೇಕು. ಈ ಹೂಗಳ ಉಡುಗೊರೆಯ ಬದಲಾಗಿ, ಚಾರುದತ್ತನು ಎರಡು ಸುಂದರವಾದ ಉಡುಪುಗಳನ್ನು ವಸಂತಸೇನೆಗೆ ಕೊಡಲು ಬಯಸಿ, ತನ್ನ ಗೆಳೆಯ ಮೈತ್ರೇಯನಿಗೆ ತರಲು ಹೇಳುತ್ತಾನೆ.

(ಚಾರುದತ್ತನು ಪ್ರತಿಕಾಣಿಕೆಯನ್ನು ಕೊಡಲು ಅಸಮರ್ಥನಿರಬಹುದು ಎನ್ನುವ ಪೂರ್ವಶಂಕೆ ವಸಂತಸೇನೆಗೆ ಇರಬಹುದು. ಆದುದರಿಂದ) ವಸಂತಸೇನೆಯ ದಾಸಿಯೇ ಉಡುಪುಗಳನ್ನು ಪ್ರತಿಕಾಣಿಕೆ ಎಂದು ಸಲ್ಲಿಸಲು ಚಾರುದತ್ತನಿಗೆ ಕೊಡುತ್ತಾಳೆ. ಇಷ್ಟಾದರೂ ಸಹ ಚಾರುದತ್ತನು ವಸಂತಸೇನೆಯೊಡನೆ ನೇರವಾಗಿ ಮಾತನಾಡದೆ, ತನ್ನ ಗೆಳೆಯ ಮೈತ್ರೇಯನಿಗೆ ವಿಚಾರಿಸಲು  ಸೂಚನೆ ಕೊಡುತ್ತಾನೆ. ಅದರಂತೆಯೇ ಮೈತ್ರೇಯನು, ‘ತಿಂಗಳ ಬೆಳಕೂ ಇಲ್ಲದ, ಕತ್ತಲು ಕವಿದ, ಮಳೆ ಸುರಿಯುತ್ತಿರುವ ಈ ಇರುಳಿನಲ್ಲಿ ಇತ್ತ ಬರಲು ಕಾರಣವೇನು?’ ಎಂದು ವಸಂತಸೇನೆಯನ್ನು ಪ್ರಶ್ನಿಸುತ್ತಾನೆ.
                       
ಇದೀಗ ಸಂಭಾಷಣೆ ನಡೆಯುವುದು ಮೈತ್ರೇಯ ಹಾಗು ವಸಂತಸೇನೆಯ ದಾಸಿಯ ನಡುವೆ. ದಾಸಿಯು, ಚಾರುದತ್ತನು ಕಳುಹಿಸಿದ ಮುತ್ತಿನ ಹಾರದ ಮೌಲ್ಯವನ್ನು ಕೇಳುತ್ತಾಳೆ. ವಸಂತಸೇನೆ ಇನ್ನೂ ಹೆಚ್ಚಿನ ಮೌಲ್ಯವನ್ನು ಬಯಸುತ್ತಾಳೆ ಎನ್ನುವ ಅನುಮಾನವನ್ನು ಮೈತ್ರೇಯನು ಚಾರುದತ್ತನಿಗೆ ಸೂಚಿಸುತ್ತಾನೆ.
                                   
ಈಗ ನೋಡಿರಿ ಗಮ್ಮತ್ತನ್ನು. ಚಾರುದತ್ತನು ವಸಂತಸೇನೆಯ ಆಭರಣಗಳನ್ನು ಜೂಜಿನಲ್ಲಿ ಸ್ವತಃ ಕಳೆದುಕೊಂಡಿದ್ದೆ
ಎಂದು ಹೇಳಿದ್ದನಷ್ಟೆ? ಇದೇ ಮಾತನ್ನು ವಸಂತಸೇನೆಯ ದಾಸಿಯು ಇದೀಗ ತಿರುಗಿಸುತ್ತಾಳೆ. ನನ್ನ ಒಡತಿಯು ಜೂಜಾಟದಲ್ಲಿ ನೀವು ಕೊಟ್ಟ ಮುತ್ತಿನ ಹಾರವನ್ನು ಕಳೆದುಕೊಂಡಿದ್ದಾಳೆ. ಅದರ ಬದಲಾಗಿ ಈ ಬಂಗಾರದ ಕರಂಡಕವನ್ನು ಸ್ವೀಕರಿಸಬೇಕುಎಂದು ಹೇಳುತ್ತಾಳೆ.
                       
ನಮ್ಮ ನಾಟಕಕಾರನು ಸೃಷ್ಟಿಸುವ ಈ ವಿನೋದ ಸಂಭಾಷಣೆಯನ್ನು ಪ್ರೇಕ್ಷಕರು ಖುಶಿಯಿಂದ ಆಸ್ವಾದಿಸುವದರಲ್ಲಿ ಸಂಶಯವಿಲ್ಲ. ಇದೆಲ್ಲ ಸರಿಯಾಯಿತು. ವಸಂತಸೇನೆಯು ಇನ್ನು ಮುಂದುವರೆಯುವ ಬಗೆ ಹೇಗೆ? ಆದುದರಿಂದ, ಚಾರುದತ್ತನ ಜೊತೆಗೆ ಮಾತುಕತೆಯನ್ನು ಹೆಣೆಯುವ ಉದ್ದೇಶದಿಂದ, ‘ನೀವು ಮುತ್ತಿನ ಹಾರವನ್ನು ನನಗೆ ಕಳುಹಿಸಿ ಕೊಟ್ಟದ್ದು ಸರಿಯಲ್ಲಎಂದು ವಸಂತಸೇನೆಯು ನೇರವಾಗಿ ಚಾರುದತ್ತನಿಗೆ ಹೇಳುತ್ತಾಳೆ. ಈ ಮೂಲಕ, ‘ಪ್ರೇಮಿಗಳಲ್ಲಿ ವ್ಯವಹಾರ ಇರಬಾರದುಎನ್ನುವ ಸಂದೇಶವನ್ನೂ ನೀಡುತ್ತಲೇ, ತಾನು ಚಾರುದತ್ತನ ಪ್ರೇಮಿ ಎನ್ನುವ ಭಾವವನ್ನು ಪರೋಕ್ಷವಾಗಿ ವ್ಯಕ್ತ ಪಡಿಸುತ್ತಾಳೆ. ಚಾರುದತ್ತನು ತನ್ನ ಬಡತನವೇ ಇದಕ್ಕೆಲ್ಲ ಕಾರಣ ಎಂದು ತನ್ನನ್ನು  ಅರೆಬರೆಯಾಗಿ ಸಮರ್ಥಿಸಿಕೊಳ್ಳುತ್ತಾನೆ.

ಈ ರೀತಿಯಾಗಿ ಚಾರುದತ್ತ ಹಾಗು ವಸಂತಸೇನೆಯರ ನಡುವೆ, ಪ್ರಣಯಪೀಠಿಕೆ ಸಿದ್ಧವಾಗುತ್ತಿರುವಾಗ, ಹೊರಗೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಚಾರುದತ್ತನು ವಸಂತಸೇನೆಗೆ ಈ ರಾತ್ರಿ ಇಲ್ಲಿಯೇ ನಿಲ್ಲುಎಂದು ಬಾಯಿ ಬಿಟ್ಟು ಹೇಳುತ್ತಿಲ್ಲ. ವಸಂತಸೇನೆಯು ಆ ರಾತ್ರಿಯನ್ನು ಅಲ್ಲಿಯೇ ಕಳೆಯಲು ಮೈತ್ರೇಯನಿಗೆ ಮನಸ್ಸಿಲ್ಲ. ಆದುದರಿಂದ ಆತನೇ ನೇರವಾಗಿ ವಸಂತಸೇನೆಯನ್ನು ಪ್ರಶ್ನಿಸುತ್ತಾನೆ ಹಾಗು ಚಾರುದತ್ತನಲ್ಲಿ ವೈರಾಗ್ಯ ಹುಟ್ಟುವಂತೆ ಮಾತನಾಡುತ್ತಾನೆ. ಆದರೆ ಮಳೆಯಿಂದ ಹಾಗು ಈ ಸನ್ನಿವೇಶದಿಂದ ಖುಶಿಯಾದ ಚಾರುದತ್ತನು ಆಕರ್ಷಕವಾಗಿ ಮಳೆಯನ್ನು ವರ್ಣಿಸುತ್ತಾನೆ.

ಈ ರೀತಿಯ ಕಾಲಹರಣವು ವಸಂತಸೇನೆಗೆ ಬೇಕಾಗಿಲ್ಲ. ಚಾರುದತ್ತನು ಮಾಡಿದ ವರ್ಣನೆಯನ್ನು ಕೇಳಿದ ಅವಳು ಇನ್ನು ತಡಮಾಡದೆ, ತಕ್ಷಣವೇ ಚಾರುದತ್ತನನ್ನು ಅಪ್ಪಿಕೊಂಡಳು. ಕುತೂಹಲ ಹಾಗು ವಿನೋದದಲ್ಲಿ ಮುಂದುವರೆಯುತ್ತಿದ್ದ ಈ ಪ್ರಕರಣವು ಶೃಂಗಾರಮಯವಾಗಿ ಕೊನೆಗೊಂಡಾಗ, ಪ್ರೇಕ್ಷಕನಲ್ಲಿ ಸುಖಾನುಭವ ಮೂಡುವದರಲ್ಲಿ ಸಂಶಯವಿಲ್ಲ.
                                               
ಮೈತ್ರೇಯನಿಗೆ ಮಾತ್ರ ಸಂತೋಷವಿಲ್ಲ!  ಆತನು ಮಳೆಯನ್ನು ಅನ್ಯೋಕ್ತಿಯಿಂದ ಬೈಯುತ್ತಾನೆ. ಆದರೆ ಚಾರುದತ್ತನೀಗ ಸಂಕೋಚವರ್ಜಿತನಾಗಿದ್ದಾನೆ.  ಆತ ತನ್ನ ಸಂತೋಷವನ್ನು ಒಂದು ಪುಟ್ಟ ಗೀತೆಯ ಮೂಲಕ ವ್ಯಕ್ತ ಪಡಿಸುತ್ತಾನೆ ಹಾಗು ಆ ಮೂಲಕ ವಸಂತಸೇನೆಯ ಪ್ರೇಮಕ್ಕೆ ಪ್ರತಿಯಾಗಿ ತನ್ನ ಪ್ರೇಮವನ್ನೂ ವ್ಯಕ್ತ ಪಡಿಸುತ್ತಾನೆ:
ಧನ್ಯಾನಿ ತೇಷಾಂ ಖಲು ಜೀವಿತಾನಿ
ಯೇ ಕಾಮಿನೀನಾಂ ಗೃಹಮಾಗತಾಮ್|
ಆರ್ದ್ರಾಣಿ ಮೇಘೋದಕ ಶೀತಲಾನಿ
ಗಾತ್ರಾಣಿ ಗಾತ್ರೇಷು ಪರಿಷ್ವಜಂತಿ
(ಬಯಸಿ ಬಂದಿರುವ ಕಾಮಿನಿಯರ, ಮಳೆಯ ನೀರಿಗೆ ತೊಯ್ದ ತಂಪು ಮೈಯನ್ನು ತಮ್ಮ ಮೈಯೊಳಗೆ  ಅಪ್ಪಿ ಹಿಡಿಯುವವರೇ ಧನ್ಯರು!) ಹಾಗೆಂದು ಚಾರುದತ್ತ ಮತ್ತು ವಸಂತಸೇನೆಯರು ಕಾಮಪೀಡಿತ ಪ್ರಣಯಿಗಳು ಎಂದರ್ಥವಲ್ಲ. ಮಾನಸಿಕವಾಗಿ ಅತಿ ಹತ್ತಿರವಾದ ಓರ್ವ ಗಂಡು ಹಾಗು ಓರ್ವ ಹೆಣ್ಣು ದೈಹಿಕವಾಗಿಯೂ ಅತಿ ಹತ್ತಿರವಾಗುವುದು ಒಂದು ಸಹಜ ಪ್ರಕ್ರಿಯೆ. ಇದನ್ನು ಪ್ರೇಮದ ಕೊನೆಯ ಹಂತ ಎಂದೆನ್ನಬಹುದು.

ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಈ ಕ್ಷಣದವರೆಗೂ ಚಾರುದತ್ತನು ತನ್ನ ಪ್ರೇಮಭಾವವನ್ನು ಬಹಿರಂಗವಾಗಿ ಪ್ರದರ್ಶಿಸಿಲ್ಲ, ವಸಂತಸೇನೆಯೇ ಇದರಲ್ಲಿ ಮುಂದಿದ್ದಾಳೆ ; ಹೀಗೇಕೆ? ಕಾರಣವು ಸ್ಪಷ್ಟವಾಗಿಯೇ ಇದೆ. ಚಾರುದತ್ತನು ಸದ್ಗುಣಸಂಪನ್ನ ಬ್ರಾಹ್ಮಣನು; ತನ್ನ ಹೆಂಡತಿಯಲ್ಲಿ ಪ್ರೀತಿ ಹಾಗು ಗೌರವಗಳನ್ನು ಉಳ್ಳವನು; ಜೀವನದಲ್ಲಿ ಕೆಲವೊಂದು ಮೌಲ್ಯಗಳಿಗೆ ಬೆಲೆ ಕೊಟ್ಟವನು. ವಸಂತಸೇನೆಯ ಸಲುವಾಗಿ ಆತನು ತನ್ನ ಹೆಂಡತಿಯನ್ನು ಕಳೆದುಕೊಳ್ಳಲಾರ. ಒಂದು ವೇಳೆ ಅವನಿಗೆ ವಸಂತಸೇನೆಯಲ್ಲಿ ಅನುರಾಗ ಮೂಡಿದರೂ ಸಹ, ಆತನು ಆ ಭಾವವನ್ನು ವ್ಯಕ್ತ ಮಾಡಲು ಹಿಂಜರಿಯುವಂಥವನು. 

ವಸಂತಸೇನೆಯೂ ಸಹ ಪ್ರೇಮವನ್ನು ವ್ಯಕ್ತ ಪಡಿಸುವುದರಲ್ಲಿ ಸ್ವನಿಯಂತ್ರಣವನ್ನು ತೋರಿಸಿದವಳೇ. ಆದರೆ ಅವಳಿಗೆ ಚಾರುದತ್ತನನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಅವನೇ ಅವಳ ಪ್ರಾಣವಾಗಿದ್ದಾನೆ. ಅವಳಿಗೆ ತನ್ನ ಪ್ರಣಯವನ್ನು ವ್ಯಕ್ತ ಪಡಿಸದಂತೆ ಯಾವುದೇ ಕಟ್ಟುಪಾಡುಗಳಿಲ್ಲ. ಅಲ್ಲದೆ, ಅವಳು ಧೂತಾದೇವಿಗಿಂತ ಕೆಳಗಿನ ಸ್ಥಾನವನ್ನು ಸ್ವತಃ ಒಪ್ಪಿಕೊಂಡಿದ್ದಾಳೆ. ಹೀಗಾಗಿ ವಸಂತಸೇನೆಯು ಪ್ರೇಮಪ್ರದರ್ಶನದಲ್ಲಿ ಚಾರುದತ್ತನಿಗಿಂತ ಒಂದು ಹೆಜ್ಜೆ ಮುಂದಿದ್ದಾಳೆ, ಒಂದೇ ಹೆಜ್ಜೆ ಮಾತ್ರ.

ಎಲ್ಲರೂ ಮನೆಯೊಳಗೆ ಹೋಗುತ್ತಾರೆ. ಇಲ್ಲಿಗೆ ಈ ಅಂಕವು ಕೊನೆಯಾಗುತ್ತದೆ. ಅನೇಕ ಸಂಕಟಗಳಿಂದ ಪಾರಾದ ವಸಂತಸೇನೆಯ ಪ್ರಣಯವು ಅವಳಿಷ್ಟದ ಸತ್ಪಾತ್ರನಲ್ಲಿ ಕೊನೆಗೂ ಅವಲಂಬನೆಯನ್ನು ಪಡೆಯಿತಲ್ಲ ಎಂದು ಪ್ರೇಕ್ಷಕನು ಸಹ ಸಂತೋಷ ಪಡುತ್ತಾನೆ. ಆದರೆ ಇದು ತಾತ್ಕಾಲಿಕ ಸಂತೋಷ ಮಾತ್ರ. ಏಕೆಂದರೆ ಚಾರುದತ್ತ ಹಾಗು ವಸಂತಸೇನೆಯರ ಮಿಲನವೇ ಈ ನಾಟಕದ ಪರಮೋದ್ದೇಶವಲ್ಲ. ಅದಷ್ಟೇ ಆಗಿದ್ದರೆ, ಈ ನಾಟಕಕ್ಕೆ ರಂಜನೆಯ ಹೊರತಾಗಿ ಯಾವ ಮಹತ್ವವೂ ಇರುತ್ತಿರಲಿಲ್ಲ. 

(ನಮ್ಮ ನಾಟಕಕಾರ ಶೂದ್ರಕನಿಗಿಂತ ಮೊದಲೇ ಸಂಸ್ಕೃತದ ನಾಟಕಪಿತಾಮಹನಾದ ಭಾಸನು ಸಹ ‘ಚಾರುದತ್ತ’ ಎನ್ನುವ ನಾಟಕವನ್ನು ಬರೆದಿದ್ದನು. ಶೂದ್ರಕನ ನಾಟಕದ ನಾಲ್ಕನೆಯ ಅಂಕಕ್ಕೆ ಭಾಸನ ನಾಟಕವು ಕೊನೆಗೊಳ್ಳುತ್ತದೆ.)

ಶೂದ್ರಕನ ನಾಟಕವು ಭಾಸನು ಬರೆದ ನಾಟಕಕ್ಕಿಂತ ಹೆಚ್ಚು ಮಹತ್ವಾಕಾಂಕ್ಷಿಯಾದ ನಾಟಕವಾಗಿದೆ. ಈ ನಾಟಕಕ್ಕೆ ‘ಮೃಚ್ಛಕಟಿಕಮ್’ ಎಂದು ಹೆಸರಿಸುವ ಪ್ರಸಂಗವು ಮುಂದಿನ ಅಂಕದಲ್ಲಿ ಬರುತ್ತದೆ. ಸಾಮಾಜಿಕ, ರಾಜಕೀಯ ಹಾಗು ಪ್ರಣಯಸನ್ನಿವೇಶಗಳನ್ನು ರಂಜನೀಯವಾಗಿ ತೋರಿಸುವ ಈ ನಾಟಕವು ಬದುಕಿನ ನೈಜ ಸಂದೇಶವನ್ನು ಮುಂದಿನ ಅಂಕದಲ್ಲಿ ನೀಡುತ್ತದೆ.

 [ಟಿಪ್ಪಣಿ: ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಪ್ರೇಮಿಗಳ ಮಿಲನವಾಗುವ ದೃಶ್ಯವನ್ನು ನಾವು ಅನೇಕ ಚಲನಚಿತ್ರಗಳಲ್ಲಿ ನೋಡಿದ್ದೇವೆ. ಬಹುಶಃ ನಮ್ಮ ನಾಟಕಕಾರ ಶೂದ್ರಕನೇ ಈ ಪರಿಪಾಠವನ್ನು ಹಾಕಿರಬಹುದೆ? ಬಹುತೇಕ ಚಲನಚಿತ್ರಗಳಲ್ಲಿ ಇಂತಹ ಸಂದರ್ಭಗಳಲ್ಲಿ ಹೆಣ್ಣು ಗಂಡಿನ ವಶವರ್ತಿಯಾಗುತ್ತಾಳೆ. ಕನ್ನಡ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರ ಕಾದಂಬರಿಗಳಲ್ಲಂತೂ ಗಂಡು ಎಂದರೆ ಪುರುಷರ್ಷಭ. ಆದರೆ ಮೃಚ್ಛಕಟಿಕಮ್ ನಾಟಕದಲ್ಲಿ ನಾಯಕನಾದ ಚಾರುದತ್ತನು ಕೊನೆಯಗಳಿಗೆಯವರೆಗೂ ಆತ್ಮನಿಯಂತ್ರಣವನ್ನು ತೋರಿಸಿದ್ದಾನೆ. ವಸಂತಸೇನೆಯೂ ಸಹ ಅನಿವಾರ್ಯವಾಗಿ ಪ್ರಣಯದ ಮೊದಲ ಹೆಜ್ಜೆಯನ್ನು ತಾನೇ ಮುಂದಿಟ್ಟಿದ್ದಾಳೆ.]

2 comments:

ರಾಘವೇಂದ್ರ ಜೋಶಿ said...

ಸರ್,
ಈ ಅಂಕದಲ್ಲಿ ನನಗೆ ನಿಮ್ಮ ವಿಶ್ಲೇಷಣೆ ಇಷ್ಟವಾಯಿತು. ಉದಾಹರಣೆಗೆ, ವಸಂತಸೇನೆಗೆ ಆಕೆಯ ಗೆಳೆಯ ಪ್ರೇಮಪಾಠಗಳನ್ನು ಹೇಳುವ ಸಂದರ್ಭದಲ್ಲಿ ಓದುಗರಲ್ಲಿ ಉಂಟಾಗಬಹುದಾದ ಗೊಂದಲಗಳಿಗೆ ನೀವು ಕಂಸದಲ್ಲಿ ಉತ್ತರಿಸಿರುವದು.
ಹೌದು, ಇದು ಸೂಕ್ಷ್ಮವಾಗಿ ಓದಬಲ್ಲವರಿಗೆ ಎದುರಾಗಬಹುದಾದ ಒಂದು ಸೂಕ್ಷ್ಮ ಸಂದೇಹವೇ ಸರಿ. ಓರ್ವ ವೇಶ್ಯೆಯಾಗಿರುವ ವಸಂತಸೇನೆಗೆ ತನ್ನ ದೈನಂದಿನ ಯಾಂತ್ರಿಕ ಕ್ರಿಯೆಗೂ ಮತ್ತು ಅಪರೂಪಕ್ಕೆ ಉಂಟಾಗಿರುವ ನೈಜ ಪ್ರೇಮದಲ್ಲಿನ frigidity(?)ಗೂ ಇರಬಹುದಾದ ವ್ಯತ್ಯಾಸವನ್ನು ನೀವು ಅಷ್ಟೇ ಸೂಕ್ಷ್ಮವಾಗಿ ಸೂಚಿಸಿದ್ದು ನನಗೆ ಇಷ್ಟವಾಯಿತು.
-Rj

sunaath said...

ಹೌದು, RJ. ವಸಂತಸೇನೆ ವೇಶ್ಯೆಯೇನೊ ಹೌದು. ಆದರೆ ನೈಜಪ್ರೇಮದಲ್ಲಿ ಸಿಲುಕಿದ ಆಕೆ ಮಾನಸಿಕವಾಗಿ ಒಬ್ಬ ಹದಿಹರೆಯದ ಹುಡುಗಿ. ವಾಸ್ತವದಲ್ಲಿ ಅದು ಹಾಗೆಯೇ ಇರಬಹುದು. ಏಕೆಂದರೆ, ಆ ಕಾಲದಲ್ಲಿ (ಈ ಕಾಲದಲ್ಲಿಯೂ ಸಹ) ಓರ್ವ ಗಣಿಕೆಯ ಉದ್ಯೋಗವಯಸ್ಸು ೧೨ಕ್ಕೆ ಪ್ರಾರಂಭವಾಗುವದೆಂದು ಭಾವಿಸಿದರೆ, ತಮ್ಮ ಉದ್ಯೋಗದ ಶಿಖರದಲ್ಲಿ ಇದ್ದಾಗಲೂ ಸಹ, ಅವರ ವಯಸ್ಸು ೨೫ರ ಕೆಳಗೇ ಇರಬಹುದು ಎಂದು ಭಾವಿಸುತ್ತೇನೆ.