Friday, November 4, 2011

“ಮಾ ನಿಷಾದ...."

“ಮಾ ನಿಷಾದ, ಪ್ರತಿಷ್ಠಾಂ ತ್ವಮಗಮ: ಶಾಶ್ವತೀಸ್ಸಮಾಃ
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್!”

“ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಲಭಿಸಲಾರದು!”

ಇದು ವಾಲ್ಮೀಕಿ ಋಷಿಗಳಿಂದ ಹೊರಟ ಉದ್ಗಾರ.
ಈ ಉದ್ಗಾರ ಯಾರಿಗೆ ಸಂಬೋಧಿತವಾಗಿದೆ?

ಬೇಡನಾಗಿದ್ದ ವಾಲ್ಮೀಕಿ ಋಷಿಗಳು ನಾರದ ಮಹರ್ಷಿಗಳ ಪ್ರಭಾವದಿಂದ ತಮ್ಮ ತಮೋವೃತ್ತಿಯನ್ನು ತ್ಯಜಿಸಿದರು. ನಾರದರು ನೀಡಿದ ರಾಮನಾಮದ ಧ್ಯಾನದಲ್ಲಿ ಶಾಂತಿ ಹಾಗು ಪ್ರೇಮ ತುಂಬಿದ ಹೊಸ ಬದುಕನ್ನು ಅರಸಿದರು, ಮಹರ್ಷಿಗಳಾದರು. ಆದರೆ ತಮ್ಮ ಮೊದಲಿನ ಹಿಂಸಾಜೀವನದ ನೆನಪು ಅವರ ಮನಸ್ಸಿನಲ್ಲಿ ಕುದಿಯುತ್ತಲೇ ಇತ್ತು. ಎಷ್ಟೇ ಪರಿತಪಿಸಿದರೂ ಅವರಿಗೆ ಸ್ಥಿರವಾದ ಶಾಂತಿ ಸಿಗಲಿಲ್ಲ.

ಒಂದು ದಿನ ಮುಂಜಾವಿನಲ್ಲಿ ವಾಲ್ಮೀಕಿ ಋಷಿಗಳು ತಮ್ಮ ದೈನಂದಿನ ಆಚರಣೆಗಳಿಗಾಗಿ ನಡೆದಾಗ, ಬೇಡನೊಬ್ಬನು ಪ್ರೇಮಮಗ್ನವಾದ ಕ್ರೌಂಚಪಕ್ಷಿಗಳ ಜೋಡಿಯ ಮೇಲೆ ಬಾಣ ಬಿಡುವದನ್ನು ನೋಡುತ್ತಾರೆ. ಆ ಜೋಡಿಯಲ್ಲಿ ಗಂಡುಪಕ್ಷಿಯು ಬಾಣದ ಹೊಡೆತಕ್ಕೆ ಕೆಳಗುರುಳುತ್ತದೆ. ಹೆಣ್ಣು ಪಕ್ಷಿಯು ಶೋಕವಿಹ್ವಲವಾಗಿ ಗಂಡುಪಕ್ಷಿಯ ಸುತ್ತಲೂ ಹಾರಾಡತೊಡಗುತ್ತದೆ. ಆ ಸಮಯದಲ್ಲಿ ಅವರ ಬಾಯಿಯಿಂದ ಈ ಉದ್ಗಾರ ಹೊರಡುತ್ತದೆ:

“ಮಾ ನಿಷಾದ, ಪ್ರತಿಷ್ಠಾಂ ತ್ವಮಗಮ: ಶಾಶ್ವತೀಸ್ಸಮಾಃ
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್!”

“ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಲಭಿಸಲಾರದು!”

ಬೇಟೆಯಾಡಿ ಹೊಟ್ಟೆ ತುಂಬಿಕೊಳ್ಳುವದು ಬೇಡನ ವೃತ್ತಿ. ಮೊದಲೊಮ್ಮೆ ತಾವೂ ಸಹ ಅದನ್ನೇ ಮಾಡಿದವರು. ಹಾಗಿರಲು ವಾಲ್ಮೀಕಿ ಮಹರ್ಷಿಗಳಿಗೆ ಈ ಬೇಡನ ಮೇಲೆ ಇಷ್ಟೊಂದು ಕೋಪ ಬರಬೇಕೆ? ವಾಲ್ಮೀಕಿ ಮಹರ್ಷಿಗಳು ಬೇಡನನ್ನು ಶಪಿಸಿದರೆ? ಅಥವಾ ತಮ್ಮ ಪೂರ್ವಜೀವನದ ನೆನಪಿನಿಂದ ಪರಿತಪ್ತರಾದ ಮಹರ್ಷಿಗಳು, ಆ ತಾಪದಿಂದ ಹೊರಬರಲಾರದೇ ತಮ್ಮನ್ನೇ ಶಪಿಸಿಕೊಂಡರೆ?

ಇಲ್ಲಿ ಮತ್ತೊಂದು ಸೂಕ್ಷ್ಮ ವಿಷಯವಿದೆ. ಈ ಕ್ರೌಂಚಪಕ್ಷಿಗಳು ಸೃಷ್ಟಿಕ್ರಿಯೆಯಲ್ಲಿ ನಿರತವಾಗಿದ್ದವು. ಆ ಜೋಡಿಯಲ್ಲಿ ಒಂದನ್ನು ಸಂಹರಿಸುವದೆಂದರೆ, ಸೃಷ್ಟಿಕ್ರಮಕ್ಕೆ ಭಂಗ ತಂದಂತೆ. ಇದು ಜೀವವಿರೋಧಿ ಮನೋಧರ್ಮ. ಇದೂ ಸಹ ವಾಲ್ಮೀಕಿ ಮಹರ್ಷಿಯವರನ್ನು ಉದ್ವಿಗ್ನಗೊಳಿಸಿದೆ. ತಾವೂ ಇದೇ ತರಹ, ಜೀವವಿರೋಧಿ ಹಿಂಸಾಕರ್ಮದಲ್ಲಿ ನಿರತರಾಗಿದ್ದವರು. ಕಾಡುತ್ತಿರುವ ಆ ಕ್ರೂರ ನೆನಪುಗಳಿಂದ ಬಿಡುಗಡೆ ಪಡೆಯುವದು ಹೇಗೆ? ಪಶ್ಚಾತ್ತಾಪದಲ್ಲಿ, ಆತ್ಮನಿಂದನೆಯಲ್ಲಿ ಎಷ್ಟು ಬಳಲಿದರೇನು, ಮನಶ್ಶಾಂತಿ ದೊರೆಯುವದು ಸಾಧ್ಯವೆ?

ಈ ತೊಳಲಾಟದಲ್ಲಿ ಸಿಲುಕಿದಾಗ, ಅವತಾರಪುರುಷನಾದ ಶ್ರೀರಾಮಚಂದ್ರನ ಚರಿತ್ರೆಯನ್ನು ರಚಿಸುವದರಿಂದ ತಮ್ಮ ಮನಸ್ಸನ್ನು ಶಾಂತಗೊಳಿಸಬಹುದೆನ್ನುವ ದೈವೀ ಪ್ರೇರಣೆ ಅವರಿಗೆ ದೊರೆಯುತ್ತದೆ. ಅದರ ಫಲವೇ ‘ರಾಮಾಯಣ’.

ಇದನ್ನೇ ಶ್ರೀ ಗೋಪಾಲಕೃಷ್ಣ ಅಡಿಗರು ‘ಕ್ರೌಂಚವಧದುದ್ವೇಗದಳಲ ಬತ್ತಲ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು’ ಎಂದು ಬಣ್ಣಿಸಿದ್ದಾರೆ. ಬುಧಕೌಶಿಕ ಋಷಿಗಳು ತಮ್ಮ ರಾಮರಕ್ಷಾ ಸ್ತೋತ್ರದ ಪ್ರಾರಂಭದಲ್ಲಿ ವಾಲ್ಮೀಕಿ ಮಹರ್ಷಿಗಳಿಗೆ ವಂದಿಸುತ್ತ,
‘ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್’, ಎಂದು ಹೇಳುತ್ತಾರೆ.

ವಾಲ್ಮೀಕಿ ಮಹರ್ಷಿಗಳು ರಾಮಾಯಣ ಕಾವ್ಯವೆನ್ನುವ ಮರದ ಶಾಖೆಗಳ ಮೇಲೆ ‘ರಾಮ, ರಾಮ’ ಎಂದು ಕೂಜಿಸುವ ಕೋಗಿಲೆಯಾದಾಗ, ಅವರ ಮನದ ತಾಪವೆಲ್ಲ ಹರಿದು ಹೋಗಿ, ಮನಸ್ಸು ಶಾಂತಗೊಳ್ಳುತ್ತದೆ. ರಾಮಾಯಣದ ರಚನೆಯಿಂದ ವಾಲ್ಮೀಕಿ ಮಹರ್ಷಿಗಳ ಮನಸ್ಸು ಶಾಂತವಾಗಲು ಕಾರಣವೇನು? ರಾಮಾಯಣವು ಧರ್ಮಮಾರ್ಗದ ಹಾಗು ತ್ಯಾಗಜೀವನದ ಬೋಧೆಯಾಗಿದೆ. ಇಂತಹ ಜೀವನದಿಂದಲೇ ಮನಸ್ಸಿನ ಶಾಂತಿ ಸಾಧ್ಯ. ತಂದೆಯ ವಚನಪಾಲನೆಗಾಗಿ ಶ್ರೀರಾಮಚಂದ್ರನು ರಾಜಪಟ್ಟವನ್ನು ತ್ಯಜಿಸಿದನು. ರಾಜಪಟ್ಟವು ಭೋಗದ ಸಂಕೇತ, ವನವಾಸವು ತ್ಯಾಗದ ಪ್ರತೀಕ. ಉಚ್ಛೃಂಖಲ ಭೋಗದ ಶಿಖರಸ್ಥಾನವಾದ ಲಂಕೆಯ ಅವನತಿಯೂ ತ್ಯಾಗಜೀವನದ ಹಿರಿಮೆಯನ್ನೇ ಸೂಚಿಸುತ್ತದೆ. ಮರ್ಯಾದಾಪುರುಷೋತ್ತಮನೆಂದು ನಾವು ಗೌರವಿಸುವ ಶ್ರೀರಾಮಚಂದ್ರನ ಪವಿತ್ರ ವ್ಯಕ್ತಿತ್ವವನ್ನು ಧ್ಯಾನಿಸುತ್ತ, ಲೇಖಿಸುತ್ತ ವಾಲ್ಮೀಕಿ ಮಹರ್ಷಿಗಳ ಮನಸ್ಸು ಶಾಂತಿಯನ್ನು ಪಡೆಯಲು ಸಾಧ್ಯವಾಯಿತು. ಗೋಪಾಲಕೃಷ್ಣ ಅಡಿಗರು ಹೇಳುವಂತೆ, ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪರೇಷೆ’?

ಕಾಳಿದಾಸನ ‘ಮೇಘದೂತ’ದ ಪ್ರಾರಂಭದ ನುಡಿಯನ್ನು ನೋಡಿರಿ:
“ಕಶ್ಚಿತ್ ಕಾಂತಾವಿರಹಗುರುಣಾ ಸ್ವಾಧಿಕಾರಾತ್ ಪ್ರಮತ್ತ:
ಶಾಪೇನಾಸ್ತಂಗಮಿತಮಹಿಮಾ ವರ್ಷಭೋಗ್ಯೇಣ ಭರ್ತ್ರುಃ
ಯಕ್ಷಶ್ಚಕ್ರೇ ಜನಕತನಯಾಸ್ನಾನಪುಣ್ಯೋದಕೇಷು
ಸ್ನಿಗ್ಧಶ್ಛಾಯಾ ತರುಷು ವಸತೀನ್ ರಾಮಗಿರ್ಯಾಶ್ರಮೇಷು”

ಗಂಧರ್ವರ ನಾಡಿನ ಯಕ್ಷನೊಬ್ಬ ತನ್ನ ಅಧಿಕಾರಬಲದಿಂದ ಸೊಕ್ಕಿದ್ದಾನೆ. ಅದರಿಂದಾಗಿ ಆತನು ಒಂದು ವರ್ಷ ಭೂಲೋಕವಾಸಿಯಾಗುವ ಶಾಪಕ್ಕೆ ಸಿಲುಕುತ್ತಾನೆ. ಈ ಅವಧಿಯಲ್ಲಿ ಆತನು ಆರಿಸಿಕೊಳ್ಳುವ ವಾಸಸ್ಥಾನ ಯಾವುದು?

ಸೀತಾದೇವಿಯ ಸ್ನಾನದಿಂದ ಪವಿತ್ರವಾದಂತಹ ಸರೋವರವಿರುವ ರಾಮಗಿರಿ ಆಶ್ರಮ! ಸೀತಾದೇವಿಯು ತನ್ನ ಪತಿಯ ಜೊತೆಗೆ ವನವಾಸವನ್ನು ಆರಿಸಿಕೊಂಡಳು. ಆ ಆಟವಿಕ ಜೀವನದಲ್ಲಿಯೇ ಅವಳಿಗೆ ಸಂತೋಷವಿತ್ತು. ಅಯೋಧ್ಯೆಗೆ ಮರಳಿದ ನಂತರವೂ ರಾಮ,ಸೀತೆಯರು ತಮ್ಮ ವನವಾಸದ ದಿನಗಳನ್ನು ನೆನೆಸಿಕೊಂಡು ಪುಲಕಿತರಾಗುತ್ತಾರೆ. ಭವಭೂತಿಯು ರಚಿಸಿದ ‘ಉತ್ತರರಾಮಚರಿತಮ್’ ನಾಟಕದಲ್ಲಿ ‘ತೇಹಿ ನೋ ದಿವಸಾ ಗತಾ:’ (ಆ ನಮ್ಮ ದಿನಗಳು ಕಳೆದು ಹೋದವಲ್ಲ) ಎಂದು ಗತಕಾಲದ ಸ್ಮರಣೆಯಲ್ಲಿ ಮುಳುಗುತ್ತಾರೆ.

ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಭಾರತದಲ್ಲಿ ಹಾಗು ವಿದೇಶಗಳಲ್ಲಿ ಅನೇಕ ಕಾವ್ಯಗಳು ಹಾಗು ನಾಟಕಗಳು ರಚಿತವಾದವು. ವಾಲ್ಮೀಕಿ ಮಹರ್ಷಿಗಳು ಭಾರತದ ವಿಶ್ವಮಾನ್ಯ ಆದಿಕವಿಯಾದರು. ಭಾರತಕ್ಕೆ ತನ್ನ ಮೊದಲ ಮಹಾಕಾವ್ಯ ದೊರೆಯಿತು. ನಿಷಾದನೊಬ್ಬನ ಮನಸ್ಸು ಶಾಂತಿ ಪಡೆಯಿತು.

50 comments:

ಚುಕ್ಕಿಚಿತ್ತಾರ said...

ಕಾಕ..
"ಮಾ ನಿಷಾದ...." ಕುರಿತ ನಿಮ್ಮ ವಿವರಣೆ ಚನ್ನಾಗಿ ಮೂಡಿದೆ.ಮನುಶ್ಯನಾದವನಿಗೆ ತನ್ನ ಗಿಲ್ಟ್ ಕಳೆದುಕೊಳ್ಳಲು ಸಾಕಷ್ಟು ಸಮಯ, ಮತ್ತು ಪರಿಶ್ರಮ ಬೇಕೇ ಬೇಕು..! ವಾಲ್ಮೀಕಿ ಮಹರ್ಷಿಗಳೂ ಆ ಪರಿಸ್ಥಿತಿಯನ್ನು ಅನುಭವಿಸಿರಬಹುದು.
ವ೦ದನೆಗಳು.

ಸಿಂಧು sindhu said...

ಪ್ರಿಯ ಸುನಾಥ,

ಈ ಆಸಕ್ತಿಕರ ವಿಶ್ಲೇಷಣೆಗೆ ನಿಮಗೆ ನನ್ನ ವಂದನೆಗಳು. ಈ "ಮಾ ನಿಷಾದ.." ಶ್ಲೋಕವು ಬಹು ಚಂದವಾದದ್ದೂ ಮತ್ತು ವಿಚಾರಪ್ರೇರಕವೂ ಆದದ್ದು. ಸುಂದರ ರಾಮಾಯಣ ಕಾವ್ಯವನ್ನೇ ಕಂಡರಿಸಿದ ಹಿರಿಮೆ ಈ ಶ್ಲೋಕದಲ್ಲಿದೆ. ನೀವು ಸೂಚಿಸಿದ ವಾಲ್ಮೀಕಿಯು ಈ ಶ್ಲೋಕವನ್ನು ತನ್ನ ಅಂತರಂಗಕ್ಕೇ ಹೇಳಿಕೊಂಡ ಎಂಬ ದಿಕ್ಕು ಬಹುಸೂಕ್ತ ಎನ್ನಿಸಿತು.
ನಿಮ್ಮ ಲೇಖನದ ಇತರ ರೆಫರೆನ್ಸುಗಳು ಓದಲು ಖುಶಿಯಾಗುತ್ತೆ.
ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್’ ಇದು ನನ್ನ ಇಷ್ಟದ ಶ್ಲೋಕ ಕೂಡಾ. ನಮ್ಮ ಸಂಸ್ಕೃತ ಅಧ್ಯಾಪಕರು ಇದನ್ನು ಬಹುಸೊಗಸಾಗಿ ವಿವರಿಸಿದ್ದರು.

ವಿಷಯ ನಿರೂಪಣೆಯ್ ಹೊರತಾದ ಒಂದು ಕುತೂಹಲ. ಈ ಲೇಖನದ ಕೊನೆಯು ನೀವು ಏನನ್ನೋ ಹೇಳಲು ಹೊರಟ ಮುನ್ಸೂಚನೆಯಂತಿದೆ. ನಂಗ್ಯಾಕೋ ನಿಮ್ಮ ಲೇಖನ ಥಟ್ಟನೆ ಮುಗಿಸಿಬಿಟ್ಟಂತೆನಿಸಿತು. ಇನ್ನೂ ಬರೀರಿ.

ಓದುತ್ತಲೇ ಇರಬೇಕೆನ್ನಿಸುವಂತೆ ಬರೆಯುವ ನಿಮ್ಮ ಕುಶಲತೆಗೆ ನನ್ನ ಶರಣು.
ಬೇಂದ್ರೆಯವರು ಕನ್ನಡ ಮೇಘದೂತ ಬರೆದಂತೆ ನನ್ನ ನೆನಪು. ನಿಮ್ಮ ಬತ್ತಳಿಕೆಯಲ್ಲೇ ಇದ್ದರೆ ಅದರ ಬಗ್ಗೆಯೂ ಬರೆಯಿರಿ.

ಸಲಿಗೆಯಿಂದ, ಆಗ್ರಹಿಸುತ್ತಿರುವುದಕ್ಕೆ ಕ್ಷಮಿಸಿ. ಇಷ್ಟು ಸೊಗಸಾದ ನಿರೂಪಣೆ ಕೊಡುವ ನಿಮ್ಮ ಬರಹದ ಮೇಲೆ ನನಗೆ ದುರಾಶೆ.

ಪ್ರೀತಿಯಿಂದ,
ಸಿಂಧು

Dr.D.T.Krishna Murthy. said...

"ಮಾ ನಿಷಾದ "ತುಂಬಾ ಮಾಹಿತಿಯುಳ್ಳ ಲೇಖನ.ಧನ್ಯವಾದಗಳು.ನಮಸ್ಕಾರ.

sunaath said...

ವಿಜಯಶ್ರೀ,
ಗಿಲ್ಟಿ ಮನುಷ್ಯನ ಬವಣೆಯೇ ಹೀಗೆ. ಅಂಗುಲಿಮಾಲಾನ ಕತೆಯೂ ಇದೇ ಆಗಿದೆ.

sunaath said...

ಕೃಷ್ಣಮೂರ್ತಿಯವರೆ,
ಧನ್ಯವಾದಗಳು.

umesh desai said...

ಕಾಕಾ ಅರ್ಥಪ್ರದ ನಿಮ್ಮ ಲೇಖನ . "ಮಾ ನಿಷಾದ..." ತಪ್ಪು ತೊಳೆದುಕೊಳ್ಳುವ ಪರಿ ಅಂದಿನಿಂದಲೂ ಇತ್ತು.
ಬಹುಶಃ ಚರ್ಚಗಳಲ್ಲಿ ಸಿಗೋ "ಕಾನಫೆಶನ್" ಗೂ ಇದೇ ಬುನಾದಿಯಾಗಿರಬೇಕು.

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,
ಪಾಪದಿಂದ ದೂರವಾದರೂ ಪಾಪಪ್ರಜ್ಞೆ ಹೇಗೆ ಹಿಂಬಾಲಿಸುತ್ತಿರುತ್ತದೆ ಎಂಬುದಕ್ಕೆ ವಾಲ್ಮೀಕಿ ದೃಷ್ಟಾಂತ ನಿರದರ್ಶನವಲ್ಲವೇ..
ಎಂದಿನ ಹಾಗೆ ವಿಚಾರಯುಕ್ತ ಲೇಖನ..

sunaath said...

ದೇಸಾಯರ,
ಪಾಪ ಮಾಡುವದು ಹಾಗು ಪಶ್ಚಾತ್ತಾಪ ಪಡುವದು ಇವು ಮನುಕುಲದ ವೈಶಿಷ್ಟ್ಯಗಳೇ ಆಗಿವೆ!

sunaath said...

ಅಪ್ಪ-ಅಮ್ಮ,
ತಮ್ಮ ಮಾತು ಸರಿ. ಪಾಪಪ್ರಜ್ಞೆ ಮನುಷ್ಯನ್ನು ಮರಣದವರೆಗೂ ಕಾಡುವ ಪ್ರಜ್ಞೆಯಾಗಿದೆ!

ಮನಮುಕ್ತಾ said...

ಕಾಕಾ,
ವಾಲ್ಮೀಕಿಯವರ ಪಾಪಪ್ರಜ್ನೆ ಮನದಿ೦ದ ಹೊರಬಿದ್ದಿರಬಹುದೆ೦ಬ ವಿಚಾರ, ಹಾಗೆಯೇ ರಾಮಾಯಣವನ್ನು ಬರೆದು ಮನಸ್ಸು ಶಾ೦ತಗೊ೦ಡ ಬಗೆಯನ್ನು ಸು೦ದರವಾಗಿ ತಿಳಿಸಿದ್ದೀರಿ.
ಧನ್ಯವಾದಗಳು.

Subrahmanya said...

ಕಾಕಾ,

ತುಂಬ ಚೆನ್ನಾಗಿದೆ.

Manjunatha Kollegala said...

"ನಿಷಾದನೊಬ್ಬನ ಮನಸ್ಸು ಶಾಂತಿ ಪಡೆಯಿತು" - ಲೇಖನಕ್ಕೆ ಕಲಶವಿಟ್ಟ ಮಾತು. ಒಬ್ಬ ನಿಷಾದನ ಮನಸ್ಸಲ್ಲ, ನಿಷಾದಮನಸ್ಸಿನ ಪರಂಪರೆಯನ್ನೇ ತಣಿಸುವ ಅಮೃತವಲ್ಲವೇ ರಾಮಾಯಣ ಕಾವ್ಯ!

ಎಂದಿನಂತೆ ಸೊಗಸಾದ ನಿರೂಪಣೆ.

V.R.BHAT said...

ಸುನಾಥರೇ, ತವು ಇಷ್ಟೆಲ್ಲಾ ಬರೆದದ್ದನ್ನು ಓದಿದಾಗ ಒಂದು ಚಿಕ್ಕ ಘಟನೆ ನೆನಪಿಗೆ ಬರುತ್ತಿದೆ, ತೇಜಸ್ವಿಯವರಿಗೆ ಸಾಕಷ್ಟು ಆರ್ಥಿಕ ಅನುಕೂಲವಿತ್ತು, ಸಾಹಿತ್ಯಾಸಕ್ತಿ ಇತ್ತು, ಜೊತೆಗೆ ಬೇಟೆಯಲ್ಲೂ ಸಹಿತ ಅಷ್ಟೇ. ಮೂಡಿಗೆರೆಯಲ್ಲಿ ಅವರು ವಾಸಿಸುತ್ತಿದ್ದಾಗ ಸುತ್ತಲ ಕಾಡುಪ್ರದೇಶಗಳಲ್ಲಿ ಸಿಗುವ ವನ್ಯ ಜೀವಿಗಳನ್ನು ಸ್ನೇಹಿತರು ಮತ್ತು ಇನ್ನಿತರ ಕೆಲಸದವರೊಟ್ಟಿಗೆ ಸೇರಿ ಬೇಟೆಯಾಡಿ ತಿನ್ನುವಕಾಯಕ ಕೂಡ ಇತ್ತಂತೆ. ಹಲವಾರು ಹಂದಿ, ಮೊಲ, ಕಡವೆ ಮೊದಲಾದ ಪ್ರಾಣಿಗಳನ್ನು ವಧಿಸಿ ಭುಂಜಿಸಿದ ಅವರು ಒಮ್ಮೆ ಸಾರಂಗವೊಂದನ್ನು ಹೊಡೆದರಂತೆ. ಸತ್ತ ಅದನ್ನು ಸೀಳುವಾಗ ಹೊಟ್ಟೆಯೊಳಗೆ ಇನ್ನೇನು ಈ ಪ್ರಪಂಚಕ್ಕೆ ಕಾಲಿಡಲು ಹತ್ತಿರವಾಗಿದ್ದ ಎರಡು ಮರಿಗಳಿದ್ದು ಅವೂ ಅಸುನೀಗಿದ್ದವು ! ಅದನ್ನು ನೋಡಿದ ತೇಜಸ್ವಿಗೆ ಭಾವತೀವ್ರತೆ ಜಾಗ್ರತವಾಗಿ ನಂತರದ ದಿನಗಳಲ್ಲಿ ಬೇಟೆಯನ್ನೇ ತೊರೆದರಂತೆ. ಅದರಂತೇ ಪ್ರತೀ ಮಾಂಸಾಹಾರಿಯೂ ಒಮ್ಮೆ ಕೂತು ಯೋಚಿಸಿದರೆ ತನ್ನ ಚಾಪಲ್ಯಕ್ಕಾಗಿ ಇನ್ನೊಂದು ಜೀವವನ್ನು ಬಲಿಗೊಡುವ ಬಗ್ಗೆ ಮನಸ್ಸು ನೋಯತೊಡಗಬಹುದೇನೋ. ಆದರೆ ಒಂದು ಮಾತ್ರ ಸತ್ಯ, ಮಾಂಸ ತಿಂದು ಅರಗಿಸಿಕೊಂಡು ಅದರಿಂದ ಬಲಿತ ಮೆದುಳಿನಲ್ಲಿ ಕ್ರಮೇಣ ಈ ಸಾಫ್ಟ್ ಕಾರ್ನರ್ ಅಥವಾ ಮೃದುಮಧುರ ಭಾವಗಳು ಒಡಮೂಡುವುದು ಕಮ್ಮಿಯಾಗಲೂ ಬಹುದು. ’ಕೊಂದು ಪಾಪ ತಿಂದು ಪರಿಹಾರ’ ಎಂಬ ಮಾತಿದ್ದರೂ ಜಗತ್ತಿನಲ್ಲಿ ಜನಿಸಿದ ಜೀವಗಳನ್ನು ಹರಣಮಾಡುವ ಯಾವ ಅಧಿಕಾರವೂ ನಮಗಿಲ್ಲ. ಈ ಕುರಿತು ಹಲವು ಪ್ರಬಂಧಗಳಲ್ಲಿ ನಾನು ಬರೆಯುತ್ತಲೇ ಇದ್ದೇನೆ. ನಾಳೆ ಸೋಮವಾರ ಬಕ್ರಿದ್ ಬರುತ್ತಿದೆ-ಜಗತ್ತಿನಾದ್ಯಂತ ಕೋಟ್ಯಂತರ ಜೀವಿಗಳು[ಕುರಿಗಳು, ಒಂಟೆಗಳು, ಹಾಲು ನೀಡಿದ ಗೋ ಮಾತೆಗಳು] ಎಲ್ಲಾ ಹತವಾಗುತ್ತವೆ, ಇದನ್ನು ನಾವೌ ನೀವು ತಡೆಯಲಾರೆವು. ಮಾಂಸಗತವಾಗ ನಮ್ಮ ಬುದ್ಧಿ ಮಾಂಸತಿನ್ನುವುದರಿಂದ ಮತ್ತೆ ಅಂಧಕಾರಕ್ಕೆ ಹತ್ತಿರವಾಗುತ್ತದೆ; ಕ್ರೌರ್ಯವೆಂಬ ಶಬ್ದವನ್ನು ಅರ್ಥೈಸುವ ತಾಕತ್ತನ್ನು ಕಳೆದುಕೊಳ್ಳುತ್ತದೆ. ಹುಟ್ಟಾ ಬೇಡನಾದ ಮಹರ್ಷಿವಾಲ್ಮೀಕಿ ತಪವಿಮುಕ್ತರಾದಮೇಲೆ ಅದರ ಅರಿವಾಗಿ ಮತ್ತೆ ಅಂತಹ ಕೆಲಸಕ್ಕೆ ಕೈಹಾಕಲಿಲ್ಲ ಮಾತ್ರವಲ್ಲ ಹಿಂಸೆಯೆಂದು ತಿಳಿದ ಆ ಕ್ಷಣಕ್ಕೇ ಅವರು ಜಪಿಸಿದ ಮಂತ್ರ ಮರಾ ಮರಾ ಮರಾ ....ಆ ಮರಾ ಮರಾ ಹೋಗಿ ರಾಮ ರಾಮ ರಾಮ..ವಾಯ್ತು. ’ರಾ’ ಎಂದಾಗ ಬಾಯಿ ತೆರೆದುಕೊಳ್ಳುವುದರಿಂದ ನಮ್ಮಲ್ಲಿನ ದೋಷಗಳು ಬಾಯಿಂದ ಹೊರಹೋಗುತ್ತವಂತೆ, ’ಮ’ ಎಂದು ಉಚ್ಚರಿಸುವಾಗ ಬಾಯಿ ಮುಚ್ಚುವುದರಿಂದ ಹೊರಗಿನಿಂದ ಮತ್ತೆ ದೋಷಗಳು ನಮ್ಮನ್ನು ಸೇರದಂತೇ ಬಾಯಿ ತಡೆವುದಂತೆ. ಅಷ್ಟಾಕ್ಷರೀ ಮತ್ತು ಪಂಚಾಕ್ಷರೀ ಮಂತ್ರಗಳ ಬೀಜಾಕ್ಷರಗಳನ್ನು ಸೇರಿಸಿ ’ರಾಮ’ವಾಯಿತಂತೆ. ಅಂತಹ ಪಾವನ ನಾಮವನ್ನು ಅರಿಯದೇ ಭಜಿಸಿಯೂ ಪುನೀತನಾಗಿ ಶರೀರದ ಸುತ್ತ ವಲ್ಮೀಕಬೆಳೆದು ಕೂತುಬಿಟ್ಟಿದ್ದ ವಾಲ್ಮೀಕಿಗೆ ದೈವಸಾಕ್ಷಾತ್ಕಾರವಾಯಿತಲ್ಲವೇ ? ಹಾಗೆಯೇ "ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ" ಎಂದ ಜಗದ್ಗುರು ಕೃಷ್ಣ ತಾನು ಪ್ರತಿಯೊಂದೂ ಜೀವಿಯಲ್ಲಿ ಅಡಗಿದ್ದೇನೆ ಎಂದನಷ್ಟೇ ? ಎಲ್ಲದರಲ್ಲೂ ದೇವರನ್ನೇ ಕಂಡರೆ ತಿನ್ನುವ ಜನ ದೇವರನ್ನು ವಧಿಸಿ ತಿನ್ನಲು ಸಾಧ್ಯವೇ...ಅದಕ್ಕೆ ಮನಸ್ಸು ಬರಬಹುದೇ? ಯುಧಿಷ್ಠಿರನಂತಹ ಪುಣ್ಯಾತ್ಮ ಇರುವೆಯನ್ನೂ ತುಳಿಯುತ್ತಿರಲಿಲ್ಲ ಎಂಬುದನು ಕೇಳಿದ್ದೇನೆ, ಜಗದ ಪ್ರತೀ ಜೀವಿಗೂ ಅದರದ್ದೇ ಆದ ಕುಟುಂಬವಿದೆ, ಅದರ ಸುತ್ತ ಲೌಕಿಕದ ಸಂಕೋಲೆಯಿದೆ, ಅದಕ್ಕೊ ನೋವು-ನಲಿವುಗಳಿರುತ್ತವೆ ಎಂಬುದನ್ನು ಅನುಭವಿಸುವ, ಅರ್ಥೈಸುವ ಮನಸ್ಸು ನಮ್ಮದಾದರೆ ತಾವು ಬರೆದ ಈ ಲೇಖನದ ಕೆಲಸ ಸಾರ್ಥಕವಾಗುತ್ತದೆ. ಆದರೆ ಅಷ್ಟಾಗುವುದು ಸುಲಭ ಸಾಧ್ಯವೇ? ವಿಚಾರಪೂರ್ಣ ಲೇಖನ, ಧನ್ಯವಾದಗಳು.

V.R.BHAT said...

ಸುನಾಥರೇ, ತಾವು ಇಷ್ಟೆಲ್ಲಾ ಬರೆದದ್ದನ್ನು ಓದಿದಾಗ ಒಂದು ಚಿಕ್ಕ ಘಟನೆ ನೆನಪಿಗೆ ಬರುತ್ತಿದೆ, ತೇಜಸ್ವಿಯವರಿಗೆ ಸಾಕಷ್ಟು ಆರ್ಥಿಕ ಅನುಕೂಲವಿತ್ತು, ಸಾಹಿತ್ಯಾಸಕ್ತಿ ಇತ್ತು, ಜೊತೆಗೆ ಬೇಟೆಯಲ್ಲೂ ಸಹಿತ ಅಷ್ಟೇ. ಮೂಡಿಗೆರೆಯಲ್ಲಿ ಅವರು ವಾಸಿಸುತ್ತಿದ್ದಾಗ ಸುತ್ತಲ ಕಾಡುಪ್ರದೇಶಗಳಲ್ಲಿ ಸಿಗುವ ವನ್ಯ ಜೀವಿಗಳನ್ನು ಸ್ನೇಹಿತರು ಮತ್ತು ಇನ್ನಿತರ ಕೆಲಸದವರೊಟ್ಟಿಗೆ ಸೇರಿ ಬೇಟೆಯಾಡಿ ತಿನ್ನುವಕಾಯಕ ಕೂಡ ಇತ್ತಂತೆ. ಹಲವಾರು ಹಂದಿ, ಮೊಲ, ಕಡವೆ ಮೊದಲಾದ ಪ್ರಾಣಿಗಳನ್ನು ವಧಿಸಿ ಭುಂಜಿಸಿದ ಅವರು ಒಮ್ಮೆ ಸಾರಂಗವೊಂದನ್ನು ಹೊಡೆದರಂತೆ. ಸತ್ತ ಅದನ್ನು ಸೀಳುವಾಗ ಹೊಟ್ಟೆಯೊಳಗೆ ಇನ್ನೇನು ಈ ಪ್ರಪಂಚಕ್ಕೆ ಕಾಲಿಡಲು ಹತ್ತಿರವಾಗಿದ್ದ ಎರಡು ಮರಿಗಳಿದ್ದು ಅವೂ ಅಸುನೀಗಿದ್ದವು ! ಅದನ್ನು ನೋಡಿದ ತೇಜಸ್ವಿಗೆ ಭಾವತೀವ್ರತೆ ಜಾಗ್ರತವಾಗಿ ನಂತರದ ದಿನಗಳಲ್ಲಿ ಬೇಟೆಯನ್ನೇ ತೊರೆದರಂತೆ. ಅದರಂತೇ ಪ್ರತೀ ಮಾಂಸಾಹಾರಿಯೂ ಒಮ್ಮೆ ಕೂತು ಯೋಚಿಸಿದರೆ ತನ್ನ ಚಾಪಲ್ಯಕ್ಕಾಗಿ ಇನ್ನೊಂದು ಜೀವವನ್ನು ಬಲಿಗೊಡುವ ಬಗ್ಗೆ ಮನಸ್ಸು ನೋಯತೊಡಗಬಹುದೇನೋ. ಆದರೆ ಒಂದು ಮಾತ್ರ ಸತ್ಯ, ಮಾಂಸ ತಿಂದು ಅರಗಿಸಿಕೊಂಡು ಅದರಿಂದ ಬಲಿತ ಮೆದುಳಿನಲ್ಲಿ ಕ್ರಮೇಣ ಈ ಸಾಫ್ಟ್ ಕಾರ್ನರ್ ಅಥವಾ ಮೃದುಮಧುರ ಭಾವಗಳು ಒಡಮೂಡುವುದು ಕಮ್ಮಿಯಾಗಲೂ ಬಹುದು. ’ಕೊಂದು ಪಾಪ ತಿಂದು ಪರಿಹಾರ’ ಎಂಬ ಮಾತಿದ್ದರೂ ಜಗತ್ತಿನಲ್ಲಿ ಜನಿಸಿದ ಜೀವಗಳನ್ನು ಹರಣಮಾಡುವ ಯಾವ ಅಧಿಕಾರವೂ ನಮಗಿಲ್ಲ. ಈ ಕುರಿತು ಹಲವು ಪ್ರಬಂಧಗಳಲ್ಲಿ ನಾನು ಬರೆಯುತ್ತಲೇ ಇದ್ದೇನೆ. ನಾಳೆ ಸೋಮವಾರ ಬಕ್ರಿದ್ ಬರುತ್ತಿದೆ-ಜಗತ್ತಿನಾದ್ಯಂತ ಕೋಟ್ಯಂತರ ಜೀವಿಗಳು[ಕುರಿಗಳು, ಒಂಟೆಗಳು, ಹಾಲು ನೀಡಿದ ಗೋ ಮಾತೆಗಳು] ಎಲ್ಲಾ ಹತವಾಗುತ್ತವೆ, ಇದನ್ನು ನಾವು- ನೀವು ತಡೆಯಲಾರೆವು. ಮಾಂಸಗತವಾಗ ನಮ್ಮ ಬುದ್ಧಿ ಮಾಂಸತಿನ್ನುವುದರಿಂದ ಮತ್ತೆ ಅಂಧಕಾರಕ್ಕೆ ಹತ್ತಿರವಾಗುತ್ತದೆ; ಕ್ರೌರ್ಯವೆಂಬ ಶಬ್ದವನ್ನು ಅರ್ಥೈಸುವ ತಾಕತ್ತನ್ನು ಕಳೆದುಕೊಳ್ಳುತ್ತದೆ. ಹುಟ್ಟಾ ಬೇಡನಾದ ಮಹರ್ಷಿವಾಲ್ಮೀಕಿ ತಪವಿಮುಕ್ತರಾದಮೇಲೆ ಅದರ ಅರಿವಾಗಿ ಮತ್ತೆ ಅಂತಹ ಕೆಲಸಕ್ಕೆ ಕೈಹಾಕಲಿಲ್ಲ ಮಾತ್ರವಲ್ಲ ಹಿಂಸೆಯೆಂದು ತಿಳಿದ ಆ ಕ್ಷಣಕ್ಕೇ ಅವರು ಜಪಿಸಿದ ಮಂತ್ರ ಮರಾ ಮರಾ ಮರಾ ....ಆ ಮರಾ ಮರಾ ಹೋಗಿ ರಾಮ ರಾಮ ರಾಮ..ವಾಯ್ತು. ’ರಾ’ ಎಂದಾಗ ಬಾಯಿ ತೆರೆದುಕೊಳ್ಳುವುದರಿಂದ ನಮ್ಮಲ್ಲಿನ ದೋಷಗಳು ಬಾಯಿಂದ ಹೊರಹೋಗುತ್ತವಂತೆ, ’ಮ’ ಎಂದು ಉಚ್ಚರಿಸುವಾಗ ಬಾಯಿ ಮುಚ್ಚುವುದರಿಂದ ಹೊರಗಿನಿಂದ ಮತ್ತೆ ದೋಷಗಳು ನಮ್ಮನ್ನು ಸೇರದಂತೇ ಬಾಯಿ ತಡೆವುದಂತೆ. ಅಷ್ಟಾಕ್ಷರೀ ಮತ್ತು ಪಂಚಾಕ್ಷರೀ ಮಂತ್ರಗಳ ಬೀಜಾಕ್ಷರಗಳನ್ನು ಸೇರಿಸಿ ’ರಾಮ’ವಾಯಿತಂತೆ. ಅಂತಹ ಪಾವನ ನಾಮವನ್ನು ಅರಿಯದೇ ಭಜಿಸಿಯೂ ಪುನೀತನಾಗಿ ಶರೀರದ ಸುತ್ತ ವಲ್ಮೀಕಬೆಳೆದು ಕೂತುಬಿಟ್ಟಿದ್ದ ವಾಲ್ಮೀಕಿಗೆ ದೈವಸಾಕ್ಷಾತ್ಕಾರವಾಯಿತಲ್ಲವೇ ? ಹಾಗೆಯೇ "ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ" ಎಂದ ಜಗದ್ಗುರು ಕೃಷ್ಣ ತಾನು ಪ್ರತಿಯೊಂದೂ ಜೀವಿಯಲ್ಲಿ ಅಡಗಿದ್ದೇನೆ ಎಂದನಷ್ಟೇ ? ಎಲ್ಲದರಲ್ಲೂ ದೇವರನ್ನೇ ಕಂಡರೆ ತಿನ್ನುವ ಜನ ದೇವರನ್ನು ವಧಿಸಿ ತಿನ್ನಲು ಸಾಧ್ಯವೇ...ಅದಕ್ಕೆ ಮನಸ್ಸು ಬರಬಹುದೇ? ಯುಧಿಷ್ಠಿರನಂತಹ ಪುಣ್ಯಾತ್ಮ ಇರುವೆಯನ್ನೂ ತುಳಿಯುತ್ತಿರಲಿಲ್ಲ ಎಂಬುದನು ಕೇಳಿದ್ದೇನೆ, ಜಗದ ಪ್ರತೀ ಜೀವಿಗೂ ಅದರದ್ದೇ ಆದ ಕುಟುಂಬವಿದೆ, ಅದರ ಸುತ್ತ ಲೌಕಿಕದ ಸಂಕೋಲೆಯಿದೆ, ಅದಕ್ಕೊ ನೋವು-ನಲಿವುಗಳಿರುತ್ತವೆ ಎಂಬುದನ್ನು ಅನುಭವಿಸುವ, ಅರ್ಥೈಸುವ ಮನಸ್ಸು ನಮ್ಮದಾದರೆ ತಾವು ಬರೆದ ಈ ಲೇಖನದ ಕೆಲಸ ಸಾರ್ಥಕವಾಗುತ್ತದೆ. ಆದರೆ ಅಷ್ಟಾಗುವುದು ಸುಲಭ ಸಾಧ್ಯವೇ? ವಿಚಾರಪೂರ್ಣ ಲೇಖನ, ಧನ್ಯವಾದಗಳು.

sunaath said...

ಮನಮುಕ್ತಾ,
ಪಾಪಪ್ರಜ್ಞೆಯಿಂದ ದಾಟಿ ಹೊರಬರುವದು ತುಂಬ ಕಷ್ಟದ ಕೆಲಸ.
ರಾಮಾಯಣ-ರಚನೆಯು ವಾಲ್ಮೀಕಿ ಮಹರ್ಷಿಗಳ ಮನಸ್ಸನ್ನು ಶಾಂತಗೊಳಿಸಿತು. ನಮ್ಮ ಅನೇಕ ಆಧುನಿಕ ಲೇಖಕರ ಸಾಹಿತ್ಯವನ್ನು ವಿಶ್ಲೇಷಿದಾಗ, ಒಂದಿಲ್ಲ ಒಂದು ಬಗೆಯ complexಅನ್ನು ಗಮನಿಸಬಹುದು!

sunaath said...

ಪುತ್ತರ್,
ಧನ್ಯವಾದಗಳು.

sunaath said...

ಮಂಜುನಾಥರೆ,
ರಾಮಾಯಣವು ಮನಸ್ಸಿಗೆ ಶಾಂತಿ ನೀಡುವ ಕಾವ್ಯವಾದರೆ, ಮಹಾಭಾರತವಂತೂ ಧರ್ಮಜಿಜ್ಞಾಸೆಯಿಂದ ತುಂಬಿದೆ. ಮಹಾಭಾರತದಲ್ಲೂ ಸಹ ಪಾಂಡವರ ವನವಾಸವೇ ಹೃದಯಂಗಮವಾಗಿದೆ.

V.R.BHAT said...

ಸುನಾಥರೇ, ನಿನ್ನೆ ಸಂಜೆ ಬಹಳ ಉದ್ದದ ಪ್ರತಿಕ್ರಿಯೆ ಬರೆದು ಮೂರು ಸಲ ಪ್ರಕಟಿಸಲು ಹೋಗಿ ಅದು ಅಳಿಸಿಹೋಗಿದೆ, ಮತ್ತೆ ಬರೆಯಲು ಬೇಸರ,ಆಲಸ್ಯ, ಹೀಗಾಗಿ ಚಿಕ್ಕದಾಗಿ ಮುಗಿಸುತ್ತೇನೆ,ಲೇಖನ ವಿಚಾರಪೂರ್ಣ, ತೇಜಸ್ವಿ ಮೂಡಿಗೆರೆಯಲ್ಲಿ ಒಮ್ಮೆ ಬೇಟೆಯಾಡಿದ ಸಾರಂಗವನ್ನು ಸೀಳಿದಾಗ ಹೊಟ್ಟೆಯಲ್ಲಿ ಇನ್ನೂ ಈ ಜಗತ್ತಿಗೆ ಕಾಲಿಡುವ ಎರಡು ಮರಿಗಳೊ ಜೀವ ಕಳೆದುಕೊಂಡಿದ್ದನ್ನು ಕಂಡರಂತೆ-ಆಮೇಲೆ ಬೇಟೆಯನ್ನೇ ತೊರೆದರಂತೆ, ನಾಳೆ ಬಕ್ರಿದ್: ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿಗಳು ವಧೆಯಾಗುವ ದಿನ, ತನ್ನ ಚಾಪಲ್ಯಕ್ಕಾಗಿ ಹಲವು ಪ್ರಾಣಿಗಳನ್ನು ವಧಿಸುವ ಮನುಷ್ಯ ಅವುಗಳ ಬದುಕಿನತ್ತಲೂ ಸ್ವಲ್ಪ ಅವಲೋಕಿಸಿದರೆ ಪಾಪ ಪ್ರಜ್ಞೆಯಿಂದ ಮಾಂಸಾಹಾರವನ್ನೇ ತ್ಯಜಿಸಬಹುದು, ಅದರೆ ಹಾಗೆ ಮಾಡುವವರು ವಿರಳ. ಮೊದಲು ಮಾಂಸಾಹಾರಿಯಾಗಿದ್ದು ಆಮೇಲೆ ಅದನ್ನು ತ್ಯಜಿಸಿ ಮುನಿಯಾದ ವಾಲ್ಮೀಕಿ ಅಪರೂಪದ ಉದಾಹರಣೆ, ಧನ್ಯವಾದಗಳು.

sunaath said...

ಭಟ್ಟರೆ,
‘ಸಬಕೋ ಸನ್ಮತಿ ದೇ ಭಗವಾನ್’ ಎಂದು ದೇವರಲ್ಲಿ ಪ್ರಾರ್ಥಿಸಬೇಕಷ್ಟೆ!

ಮಂಜುಳಾದೇವಿ said...

ಸುನಾಥ್ ರವರೆ,
ಎಂದಿನಂತೆ ಅತ್ಯುತ್ತಮ ಲೇಖನ.ಅಭಿನಂದನೆಗಳು

sunaath said...

ಮಂಜುಳಾದೇವಿಯವರೆ,
ತಮಗೆ ಧನ್ಯವಾದಗಳು.

ಜಲನಯನ said...

ಸುನಾಥಣ್ಣ..ವಾಲ್ಮಿಕಿ ಮುನಿಗಳು ಬೇಡನಾಗಿದ್ದದ್ದು ನಂತರ ರಾಮಾಯಣ ಮಹಾಕಾವ್ಯ ರಚನೆಯಲ್ಲಿ ತೊಡಗಿದ್ದು ಅವರ ಅಂತಃಭಾವಕಲಹವನ್ನು ಶಾಂತಗೊಳಿಸಲು ಎನ್ನಬಹುದೇ.. ಆ ದಾರಿಯಲ್ಲಿ ಹೊರಗೆಡಹಿದ ಹಲವು ಸ್ವನಿಂದಾ ಅಥವಾ ಆತ್ಮಾವಲೋಕಿತ ಶಾಪವಾಗಿತ್ತೇ? ಅಥವಾ ಬೇಡನಲ್ಲಿ ತನ್ನನ್ನು ಕಂಡು ಎಂದುಕೊಂಡರೇ..?? ನಿಜಕ್ಕೂ ಮಹಾಪುರುಷರು ಪಕ್ವವಾದಂತೆ .. ತಮ್ಮಲ್ಲಿ ಲೋಪಗಳನ್ನು ನೋಡಿಕೊಳ್ಳುವುದು ಅವರ ಹಿರಿತನದ ಗುರುತು.. ಇದೇ ಒಮ್ದು ನಿದರ್ಶನದಂತೆ ಮೊಹಮ್ಮದರು ನವಧರ್ಮ ಹುಟ್ಟುಹಾಕಿದಾಗ ಪದೇ ಪದೇ ನನ್ನಲ್ಲಿ ತಪ್ಪಿದ್ದರೆ ಹೇಳಿ ಎಂದು ತಮ್ಮ ಅನುಯಾಯಿಗಳಿಗೆ ಕೇಳುತ್ತಿದ್ದರಂತೆ... ಸದಾ ತನ್ನನ್ನು ಶಪಿಸುತ್ತಿದ್ದ ಯಹೂದಿ ಮುದುಕಿಯೊಬ್ಬಳು ಅವರು ದಿನವೂ ನಮಾಜಿಗೆ ಹೋಗುತ್ತಿದ್ದ ಹಾದಿಯಲ್ಲಿ ಉಗುಳುತ್ತಿದ್ದಳಂತೆ..... ಒಮ್ಮೆ ಆಕೆ ಹಾಗೆ ಮಾಡದಾದಾಗ ಆಕೆಯನ್ನು ನೋಡಲು ಅವಳ ಗುಡಿಸಿಲಿಗೆ ಹೋದರಂತೆ...ಆದಿನ ಅವರನ್ನು ಹುಡುಕಿಕೊಲ್ಲಲು ಶತೃಗಳು ಹೊಂಚುತ್ತಿದ್ದರಂತೆ... ಆಕೆಯ ಯೋಗಕ್ಷೇಮ ವಿಚಾರಿಸಿದಾಗ ಮನನೊಂದ ಆಕೆ ಅವರ ಶಿಷ್ಯಳಾದಳಂತೆ...
ಅವರ ಹಲವು ಕಟ್ಟರ್ ಅನುಯಾಯಿಗಳು..ನಿಮ್ಮನ್ನು ಆಕೆ ಬೈಯ್ಯುತ್ತಿದ್ದಳು ಆದರೂ ನೀವು ಹೋದದ್ದು ಸರಿಕಾಣಲಿಲ್ಲ ಎಂದಾಗ..ನಾನು ಹಾಗೆ ಹೋದದ್ದರಿಂದ ಆಕೆ ನನ್ನನ್ನು ಪ್ರಾಣಾಪಾಯದಿಂದ ಪಾರುಮಾಡಿದಳು ಎಂದರಂತೆ...
ಮಹಾತ್ಮರು.. ಮತ್ತು ನಮ್ಮಂಥ ಪಾಪಾತ್ಮರ ಮಧ್ಯೆಯ ವ್ಯತ್ಯಾಸ ಸಾಲದೇ..??

Badarinath Palavalli said...

ಮೊದಲು ಸುನಾತರಿಗೆ,
"ಗುರು ಭ್ಯೋ ನಮಃ"

ಒಳ್ಳೆಯ ಸಂಗ್ರಹಾರ್ಹ ಲೇಖನ ಕೊಟ್ಟಿದ್ದೀರಿ.
ಒಂದು ಶ್ಲೋಕದ ಸುತ್ತಲು ಇಷ್ಟೆಲ್ಲ ಕಥೆ ಇದ್ದೀತು ಅಂತ ಗೊತ್ತಿರುವುದಿಲ್ಲ. ಅಡಿಗರ ಮಹಾಕಾವ್ಯ ಗ್ರಹಿಕೆ ಮತ್ತದನ್ನು ಪದಗಳ ಆಟಿಕೆಯಂತೆ ಬಳಸಿರುವುದು ಚೆನ್ನಾಗಿ ನಿರೂಪಿಸಿದ್ದೀರಿ ಸರ್.

Swarna said...

ಎಷ್ಟು ಚಂದದ ಲೇಖನ ಮತ್ತು ಮಾಹಿತಿ ಸರ್.
ರಾಡಿಯಾದ ನೀರಲ್ಲವೇ ಮತ್ತೆ ಶಾಂತ ಕೊಳವಾಗುವುದು.
ವಂದನೆಗಳು ಮತ್ತು ಧನ್ಯವಾದಗಳು
ಸ್ವರ್ಣ

ಹಳ್ಳಿ ಹುಡುಗ ತರುಣ್ said...

"ಮಾ ನಿಷಾದ " molaka tumba amulyavada mahitiyannu tilisiddira danyavadagalu..

sunaath said...

ಜಲನಯನ
ಮಹಾತ್ಮರ ನಡೆ, ನುಡಿ ಎಲ್ಲವೂ ದಯಾಭಾವದಿಂದಲೇ ಪ್ರೇರಿತವಾಗಿವೆ. ‘ಸಕಲ ಜೀವಿಗಳಲಿ ಲೇಸನು ಬಯಸುವನು ನಮ್ಮ ಕೂಡಲಸಂಗಮ ದೇವ’ ಎಂದು ಬಸವಣ್ಣನವರು ಹಾಡಿಲ್ಲವೆ?

sunaath said...

ಬದರಿನಾಥರೆ,
ಒಂದೊಂದು ದೊಡ್ಡ ಕಾರ್ಯದ ಹಿಂದೆ ಒಂದೇನೊ ಕತೆ ಇದ್ದೇ ಇರುತ್ತದೆ!

sunaath said...

ಸ್ವರ್ಣಾ,
ತುಂಬ ಸಮುಚಿತ ಉಪಮೆಯನ್ನು ಕೊಟ್ಟಿರುವಿರಿ. ಧನ್ಯವಾದಗಳು.

sunaath said...

ಹಳ್ಳಿಹುಡುಗರೆ,
ಧನ್ಯವಾದಗಳು.

ಈಶ್ವರ said...

ಕಾಕಾ ಒಳ್ಳೆ ಲೇಖನ.
ವಾಲ್ಮೀಕಿಯ ಕಥನ ಶೈಲಿಯೂ ಆತ್ಮೀಯವಾದದ್ದೇ. ನಡೆಯುತ್ತಿರುವ ಕಥೆಯನ್ನೇ ಬರೆಯುತ್ತಾ ಮತ್ತೆ ಕಥೆಯೊಳಗೆ ತಾನೂ ಸೇರಿಕೊಳ್ಳುವುದಕ್ಕೆ ಮಾ ನಿಷಾಧ ಪ್ರಾರಂಭ ಆಗಿರಬೇಕು.

ತುಂಬಾ ಚೆನ್ನಾಗಿತ್ತು.. ಒಂದು ಹೋಟೆಲ್ ಥರ ನಿಮ್ಮ ಬ್ಲಾಗು.ಎಲ್ಲಾ ಸಿಗುತ್ತದೆ. ರಸವತ್ತಾದ ಪ್ರತಿಕ್ರಿಯೆಗಳು ಕೂಡಾ..

http://bhavakirana.blogspot.com/ ಗೂ ಒಮ್ಮೆ ಬಂದು ಹರಸಿ .

sunaath said...

ಈಶ್ವರ ಭಟ್ಟರೆ,
ಈ ಹೊಟೆಲ್ಲಿನ ತಿಂಡಿಗಳು ನಿಮಗೆ ಇಷ್ಟವಾದುದ್ದಕ್ಕೆ ಧನ್ಯವಾದಗಳು!

ಶ್ರೀನಿವಾಸ ಮ. ಕಟ್ಟಿ said...

‘ಮಾ ನಿಷಾದ’ ತುಂಬ ಚೆನ್ನಾಗಿದೆ. ಎ.ಕೆ. ರಾಮಾನುಜಮ್‍ರ ಪುಸ್ತಕ ೩೦೦ ರಾಮಾಯಣಾಸ್ ಓದಿದ್ದೀರಾ ?ಓದಿದ್ದರೆ, ಅದರ ಕುರಿತು ಸವಿಸ್ತಾರವಾಗಿ ಬರೆಯುವಿರಾ ?

ಶ್ರೀನಿವಾಸ ಮ. ಕಟ್ಟಿ said...

ಸಂಸ್ಕೃತ ಗ್ರಂಥಗಳಲ್ಲಿಯೇ ವಾಲ್ಮೀಕಿ ರಾಮಾಯಣದ ಭಾಷೆ ತುಂಬ ಸುಂದರ್ ಹಾಗೂ ಸರಳವಾದುದು. ಹನುಮಂತನು ಮೊದಲ ಸಲ ರಾವಣನ ಆಸ್ಥಾನಕ್ಕೆ ಹೋದಾಗ ಅವನು ಆಡುವ ಮಾತುಗಳನ್ನು ಓದಿದ್ದೀರಾ ? ಅದರಲ್ಲಿ ರಾವಣನನ್ನು ಹೊಗಳಿ,ಅವನಿಗೆ ರಾಮನ ಕುರಿತ್ಯ್ ಭಯ ಹುಟ್ಟಿಸುವ ಮಾತುಗಳು ಮನೋಜ್ಞವಾಗಿವೆ. ಹನುಮಂಯತನ್ ಭಾಷೆ ಇಂದಿನ ರಾಜಕೀಯ ಪಟ್ಟುಗಳೀಗೂ ಕಡಿಮೆ ಇಲ್ಲ. ನೀವು ಅದರ ಮೇಲೆಯೇ ದೊದ್ದ ಲೇಖನ ಬರೆಯಬಹುದು.

ಶ್ರೀನಿವಾಸ ಮ. ಕಟ್ಟಿ said...

ಈ ಮೇಲಿನ commentನಲ್ಲಿ ಆಗಿರುವ, ಕಾಗುಣಿತದ ತಪ್ಪುಗಳಿಗೆ ಕ್ಷಮೆ ಇರಲಿ.

ಗಿರೀಶ್.ಎಸ್ said...

"ಮಾ ನಿಷಾದ..." ತುಂಬ ಚೆನ್ನಾಗಿ ವಿವರಿಸಿದ್ದಿರಾ ಸರ್... ಮನುಷ್ಯ ತನ್ನ ಪಾಪ ಪ್ರಜ್ಞೆಯನ್ನು ಕಳೆದುಕೊಳ್ಳುವುದಕ್ಕಾಗಿ ಕೆಲವು ಸತ್ಕಾರ್ಯಗಳನ್ನು ಮಾಡುತ್ತಾನೆ ಎನ್ನುವುದಕ್ಕೆ ಇದು ಒಂದು ನಿದರ್ಶನ...

sunaath said...

ಕಟ್ಟಿಯವರೆ,
ವಾಲ್ಮೀಕಿ ರಾಮಾಯಣದ ಸರಳತೆ ಹಾಗು ಸೌಂದರ್ಯವನ್ನು ವರ್ಣಿಸುವದೆಂದರೆ ಮಹಾಸಾಗರವನ್ನು ವರ್ಣಿಸಿದಂತೆಯೇ ಸರಿ!
ಏ.ಕೆ.ರಾಮಾನುಜನ್ನರ ಕೃತಿಯನ್ನು ನಾನು ಓದಿಲ್ಲ. ಓದುವ ಸಾಧ್ಯತೆಯೂ ಇಲ್ಲ!

sunaath said...

ಗಿರೀಶರೆ,
ಪ್ರಾಣಿಗಳಿಗೆ ಪಾಪಪ್ರಜ್ಞೆ ಇರುವದಿಲ್ಲ. ಏಕೆಂದರೆ ಅವು ಪಾಪ ಮಾಡುವದಿಲ್ಲ. ಪಾಪ ಹಾಗು ಪಾಪಪ್ರಜ್ಞೆ ಇವು ಮಾನವನ ಸ್ಪೆಶಾಲಿಟಿ!

ಸಿಂಧು sindhu said...

ಪ್ರಿಯ ಸುನಾಥ,

ನಾನು ಮಾಡಿದ್ದ ಕಮೆಂಟ್ ಅದು ಹ್ಯಾಗೋ ಪ್ರಕಟ ಆಗಿಯೇ ಇಲ್ಲ. ನೀವು ಪೋಸ್ಟ್ ಮಾಡಿದ ದಿನವೇ ಓದಿ ಸಂತೋಷಪಟ್ಟು ಬರೆದಿದ್ದೆ.

ಹೇಗೂ ಇರಲಿ ಈಗ ನನ್ನ ಅನಿಸಿಕೆಯನ್ನು ನಿಮಗೆ ಹೇಳದೆ ಈ ಸೊಗಸಾದ ಲೇಖನ ಓದಿದ ಋಣ ಕೊಂಚವೂ ತೀರುವುದಿಲ್ಲ.

ಸೊಗಸಾದ ಶ್ಲೋಕವನ್ನು ಅದಕ್ಕೆ ಪೂರಕವಾದ ವಿವರಣೆಯೊಂದಿಗೆ ಅಷ್ಟೇ ಸೊಗಸಾಗಿ ನಿರೂಪಿಸಿ ಎಂದಿನ ಹಿತವಾದ ಓದನ್ನು ಧಾರೆಯೆರೆದಿದ್ದೀರ. ಅನುಪಮ ಕಾವ್ಯದ ಆರಂಭವೇ ಇಡೀ ಕಾವ್ಯದ ಮೂಲಾಧಾರ ಎನ್ನುವ ಈ ದಿಕ್ಕು ನನಗೆ ತುಂಬ ಇಷ್ಟವಾಯಿತು.

"ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್" ಇದು ನಂಗೂ ತುಂಬ ಇಷ್ಟವಾದ ಶ್ಲೋಕ. ನಮ್ಮ ಸಂಸ್ಕೃತ ಮಾಷ್ಟರು ಇದನ್ನು ಸೊಗಸಾಗಿ ವಿವರಿಸಿದ್ದರು.

ಈ ಲೇಖನವನ್ನು ಇನ್ನೂ ಮುಂದುವರೆಸಬೇಕಿತ್ತು ಅನ್ನಿಸುವ ಹಾಗೆ ಮುಗಿಸಿದ್ದೀರ ಅನ್ನಿಸಿತು.

ಬರೀರಿ ಇನ್ನೂ ಬರೀರಿ.

ಬೇಂದ್ರೆಯವರು ಕನ್ನಡದಲ್ಲಿ ಮೇಘದೂತ ಬರೆದ ನೆನಪು.
ಅದರ ಬಗ್ಗೆ ಬರೀರಿ. ನನ್ನ ಸಲುಗೆಯ ಆಗ್ರಹಕ್ಕೆ ಕ್ಷಮಿಸಿ. ಆದರೆ ನಿಮ್ಮ ಓದಿನ ಹರವು ಮತ್ತು ಆಳ, ಬರಹದಲ್ಲಿ ಮೂಡಿ ಬರುವ ಪರಿಗೆ ನಾನು ಮನಸೋತಿದ್ದೇನೆ. ಅದಕ್ಕಾಗಿ ಈ ಬೇಡಿಕೆ.

ಪ್ರೀತಿಯಿಂದ,
ಸಿಂಧು

prabhamani nagaraja said...

ವಾಲ್ಮೀಕಿ ಋಷಿಗಳು ರಾಮಾಯಣವನ್ನು ರಚಿಸುವ ಮೂಲಕ ಮನಃ ಶಾ೦ತಿ ಪಡೆದರು ಎನ್ನುವುದು ಎಷ್ಟು ಅರ್ಥವತ್ತಾಗಿದೆ! ಆತ್ಮಾನ೦ದವನ್ನು ಉ೦ಟುಮಾಡುವುದೆ ನಿಜವಾದ ಸಾಹಿತ್ಯದ ಗುರಿ. ಅದ್ಭುತವಾದ ಲೇಖನವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.

sunaath said...

ಪ್ರಭಾಮಣಿಯವರೆ,
ಅದಕ್ಕೇ ಅಲ್ಲವೆ,‘ನಾನೃಷಿಃ ಕುರುತೇ ಕಾವ್ಯಮ್’ ಎನ್ನುವದು!

ಅನಂತ್ ರಾಜ್ said...

ಸುನಾತ್ ಸರ್ ಅವರ ಬ್ಲಾಗ್ ಪೋಸ್ಟ್ ಹಾಕಿದ ತಕ್ಷಣ ಮೊದಲಿಗೆ ನಾನು ಕಾಮೆ೦ಟ್ ಬರೆಯುವುದಿಲ್ಲ. ಕಾರಣ ಪ್ರತಿಕ್ರಿಯೆಗಳನ್ನು ಓದುವುದೇ ಮತ್ತಷ್ಟು ವಿಚಾರಗಳನ್ನು ತು೦ಬಿಸಿಕೊ೦ಡ೦ತೆ..! ಎ೦ದಿನ೦ತೆ ವಿಚಾರಪೂರಿತ ಲೇಖನ. ಮಾನಿಷಾದ ಎ೦ಬ ಕ್ರೋಧಿತ ಉಕ್ತದಲ್ಲಿ, ತಮ್ಮ ಪೂರ್ವಾಶ್ರಮದ ತಪ್ಪುಗಳನ್ನು ನೆನಪಿಸಿಕೊಳ್ಳುತ್ತ ಅದರಿ೦ದ ಬಿಡುಗಡೆ ಹೊ೦ದಬೇಕೆ೦ಬ ಭಾವ ಇರುವುದು ಸ್ಪಷ್ಟವಾಗಿದೆ. ಒ೦ದು ರೀತಿಯ ಆತ್ಮಾವಲೋಕನವೆ ಇದಾಗಿರಬಹುದು. ಅಭಿನ೦ದನೆಗಳು ಸರ್.

ಅನ೦ತ್

sunaath said...

ಅನಂತರಾಜರೆ,
ನನ್ನ ಬ್ಲಾಗ್ ಲೇಖನಗಳಿಗೆ ಬರುವ ಪ್ರತಿಕ್ರಿಯೆಗಳೂ ಸಹ ವಿಚಾರಪೂರ್ಣವಾಗಿರುವದು ಖುಶಿ ನೀಡುತ್ತದೆ. ನಿಮಗೆ ಧನ್ಯವಾದಗಳು.

KalavathiMadhusudan said...

sunath sir nimma vichaarapoorna maahitiyulla lekhanakkaagi dhanyavaadagalu.

ಮನಸು said...

ಸುನಾಥ್ ಕಾಕ,
ಕ್ಷಮಿಸಿ ತಡವಾಗಿ ಬಂದಿದ್ದಕ್ಕೆ ನನಗೆ ನಿಮ್ಮ ಬ್ಲಾಗ್ ಅಪ್ಡೇಟ್ ಬರ್ತಾ ಇಲ್ಲ ಕಾರಣ ಗೊತ್ತಿಲ್ಲ....
ಇಂದಿನ ವಿಚಾರಧಾರೆ ಬಹಳ ಚೆನ್ನಾಗಿದೆ. ಈ ಲೇಖನ ಓದಿ ಇತ್ತೀಚೆಗಷ್ಟೆ ಕನ್ನಡ ಕೂಟ ಕಾರ್ಯಕ್ರಮಕ್ಕೆ ಬುದ್ಧನ ಕಥೆಯಲ್ಲಿನ ಅಂಗುಲಿ ಮಾಲನ ಕಥೆಯನ್ನು ನಾಟಕಕ್ಕೆ ಬರೆದಿದ್ದು ನೆನಪಾಯಿತು. ಧನ್ಯವಾದಗಳು

sunaath said...

ಕಲರವ,
ಧನ್ಯವಾದಗಳು.

sunaath said...

ಮನಸು,
ಗೂಗಲ್ ರೀಡರದಲ್ಲಿ ಈ ತೊಂದರೆ ಕಾಣಿಸಿಕೊಳ್ಳುತ್ತ ಇದೆ. ಕಾಮೆಂಟುಗಳು ಸಹ ಅಪ್‍ಡೇಟ್ ಆಗ್ತಾ ಇಲ್ಲ. ತಾಂತ್ರಿಕ ತೊಂದರೆ ಇರಬಹುದು.

sunaath said...

ಸಿಂಧು,
ನಿಮ್ಮ ಸ್ಪಂದನೆಯು ಅದ್ಹೇಗೋ ಸ್ಪ್ಯಾಮ್‍ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನೀಗ ಸರಿಪಡಿಸಿಕೊಂಡಿದ್ದೇನೆ. ತುಂಬ ವಿಷಾದವಾಗುತ್ತಿದೆ. ಕ್ಷಮಿಸಿ.

ಸೀತಾರಾಮ. ಕೆ. / SITARAM.K said...

ಮೊದಲ ಕಾವ್ಯ ಶ್ಲೋಕದ ಮುಖಾಂತರ ಅದರ ಹಿಂದಿನ ಕಥೆ ಮತ್ತು ಅರ್ಥ ವಿವರಿಸಿ ತುಂಬಾ ಉತ್ತಮ ಲೇಖನ ನೀಡಿದ್ದೀರಾ..

ರೇಣುಕ ವೈಕುಂಠಯ್ಯ (ಗೀಚೀ..) said...

ಜೈಕರ‌್ನಾಟಕ


ಚನ್ನಾಗಿ ಬರೆದಿದ್ದೀರಿ

sunaath said...

ಧನ್ಯವಾದಗಳು, ರೇಣುಕ ವೈಕುಂಠಯ್ಯ!