Thursday, April 4, 2013

ನ್ಯಾಯವಿವೇಚನೆ-೧

ಕನ್ನಡದ ಸುಪ್ರಸಿದ್ಧ ನಾಟಕಕಾರ ಕೈಲಾಸಮ್ ಅವರ ತಂದೆ ಮದ್ರಾಸ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು. ಅವರನ್ನು ಛೇಡಿಸುತ್ತಾ, ಕೈಲಾಸಮ್ ಹೇಳುತ್ತಿದ್ದದ್ದು ಹೀಗೆ: ‘ನ್ಯಾಯ ಇರುವುದು ಇತ್ತ; ನ್ಯಾಯಾಧೀಶರು ಇರುವುದು ಅತ್ತ!’

ಕರ್ನಾಟಕದ ಉಚ್ಚ ನ್ಯಾಯಾಲಯದ ಇತ್ತೀಚಿನ ನಿರ್ದೇಶನವೊಂದನ್ನು ನೋಡಿದಾಗ ಕೈಲಾಸಮ್ ಅವರ ವ್ಯಂಗ್ಯದ ಸತ್ಯ ಅರ್ಥವಾಗುವುದು. ವಕೀಲರಿಗೆ ಕೊಡಬೇಕಾಗುವಷ್ಟು ಕಾಸು ತಮ್ಮಲ್ಲಿ ಇಲ್ಲದಿರುವದರಿಂದ, ತಮ್ಮ ಪ್ರಕರಣದಲ್ಲಿ ತಮಗೇ ವಾದಿಸಲು ಅವಕಾಶ ಮಾಡಿಕೊಡಬೇಕೆಂದು  ವಯೋವೃದ್ಧರೊಬ್ಬರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡರು. ಅಲ್ಲದೆ, ತಮಗೆ ಇಂಗ್ಲಿಶ್ ಬಾರದಿರುವದರಿಂದ, ಕನ್ನಡದಲ್ಲಿ ವಾದಿಸಲು ಅನುಮತಿ ನೀಡಬೇಕೆಂದೂ ಸಹ ಪ್ರಾರ್ಥಿಸಿದರು.

ಈ ಪ್ರಕರಣದಲ್ಲಿ ನ್ಯಾಯ ನೀಡಬೇಕಾದ ಇಬ್ಬರು ನ್ಯಾಯಾಧೀಶರಲ್ಲಿ ಒಬ್ಬರು ಕನ್ನಡವನ್ನು ತಿಳಿಯದವರು. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯಂತೆ, ಕನ್ನಡ ಬರುವ ಮತ್ತೊಬ್ಬ ನ್ಯಾಯಾಧೀಶರು ವಯೋವೃದ್ಧರ ಈ ಮನವಿಯಿಂದ ಕೆರಳಿದರಂತೆ! ‘ಅಹಾ! ಉಚ್ಚ ನ್ಯಾಯಾಲಯಗಳಿಗೆ ಬೇರೆಡೆಯಿಂದ  ವರ್ಗವಾಗಿ ಬರುವ ನ್ಯಾಯಾಧೀಶರಿಗೆ ಸ್ಥಳೀಯ ಭಾಷೆ ತಿಳಿಯುವುದಾದರೂ ಹೇಗೆ? ಆದುದರಿಂದ ನೀವು ಇಂಗ್ಲೀಶಿನಲ್ಲಿಯೇ ವ್ಯವಹರಿಸಬೇಕಾಗುವುದು’ ಎನ್ನುವುದು ಆ ನ್ಯಾಯಾಧೀಶರ ನಿರ್ದೇಶನದ ತಿರುಳಂತೆ. 

ಒಪ್ಪಿಕೊಳ್ಳೋಣ, ಇಂಗ್ಲಿಶ್ ಹಾಗು ಹಿಂದಿ ಇವು ಉಚ್ಚ ಹಾಗು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಬಳಕೆಯಾಗುವ ಭಾಷೆಗಳೆಂದು ಅಂಗೀಕರಿಸಲ್ಪಟ್ಟಿವೆ. ಆದುದರಿಂದ ಕನ್ನಡದಲ್ಲಿ ವ್ಯವಹರಿಸಲು ಅನುಮತಿಸಲಾಗದು ಎನ್ನುವ ನ್ಯಾಯಾಧೀಶರ ನಿರ್ದೇಶನವು ನಿಯಮಗಳ ಮೇರೆಗೆ ಸರಿಯಾಗಿಯೇ ಇದೆ. ಇಲ್ಲಿಗೆ ನ್ಯಾಯಕ್ಕಾಗಿ ನಮ್ಮ ವಯೋವೃದ್ಧರು ಮಾಡಿದ ಪ್ರಾರ್ಥನೆಯ ಸಮಾಧಿಯಾಯಿತು ಎಂದು ತಿಳಿಯಬಹುದಲ್ಲವೆ? ಆದರೆ ನಿಯಮಗಳ ಹೊರತಾಗಿ ತಾತ್ವಿಕ ವಿವೇಚನೆಯನ್ನು ಮಾಡಿದಾಗ ಜನಸಾಮಾನ್ಯನ ಮನದಲ್ಲಿ ಏಳುವ ಪ್ರಶ್ನೆ ಹೀಗಿದೆ: ‘ನ್ಯಾಯಾಲಯಗಳು ಹಾಗು ನ್ಯಾಯಾಧೀಶರು ಇರುವುದಾದರೂ ಏತಕ್ಕೆ? ನೊಂದವರ ಅಳಲನ್ನು ಬಗೆಹರಿಸಿ ಅವರಿಗೆ ನ್ಯಾಯ ಕೊಡಿಸಲು ತಾನೆ? ಈ ವಯೋವೃದ್ಧರು ಕನ್ನಡದಲ್ಲಿ ಮಾಡುವ ವಾದವನ್ನು, ಇಂಗ್ಲೀಶಿಗೆ ಅನುವಾದಿಸಿ ಹೇಳಲು, ನಮ್ಮ ನ್ಯಾಯಾಧೀಶರಿಗೆ ಅನುವಾದಕರು ಸಿಗುತ್ತಿರಲಿಲ್ಲವೆ? ಒಂದು ವೇಳೆ, ಯಾವುದೋ ಒಂದು ಪ್ರಕರಣದಲ್ಲಿ ವಾದಿ, ಪ್ರತಿವಾದಿ ಅಥವಾ ಸಾಕ್ಷಿಯು ಹಳ್ಳಿಯ ಅನಕ್ಷರಸ್ಥನಾಗಿದ್ದು, ಅವನ ಹೇಳಿಕೆಯನ್ನು ಉಚ್ಚ ನ್ಯಾಯಾಲಯದಲ್ಲಿ ಮರುಪರಿಶೀಲಿಸುವುದು ಅವಶ್ಯವಾದಂತಹ ಸಂದರ್ಭದಲ್ಲಿ, ಇಂತಹ ಹೇಳಿಕೆಯನ್ನು ಅವನ ತಾಯಿನುಡಿಯಲ್ಲಿಯೇ ಪಡೆದು, ಅದನ್ನು ಇಂಗ್ಲೀಶಿಗೆ ಅನುವಾದಿಸುತ್ತಿರಲಿಲ್ಲವೆ?’

ಕಾನೂನನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿತು ಪದವಿಯನ್ನು ಪಡೆಯಲು ಈಗ ಅವಕಾಶವಿದೆ. ಹಾಗಿದ್ದಾಗ ವಾದವನ್ನು ಕನ್ನಡದಲ್ಲಿಯೇ ಮಂಡಿಸಲು ಯಾಕೆ ಅವಕಾಶವಿಲ್ಲ? ಕನ್ನಡ ಮಾಧ್ಯಮದಲ್ಲಿ ಕಲಿತು ಪದವಿಯನ್ನು ಪಡೆದ ವಕೀಲರೆಲ್ಲ ಕೇವಲ ಜಿಲ್ಲಾ ಮಟ್ಟದವರೆಗಿನ ನ್ಯಾಯಾಲಯಗಳಿಗೆ ಸೀಮಿತರೆ? ಈ ಧೋರಣೆಯಲ್ಲಿ ಕಾಣಬರುವುದು ಆಂಗ್ಲರು ಸೃಷ್ಟಿಸಿದ ಭಾಷಾ ಅಹಂಕಾರ. ಸದ್ಯಕ್ಕೆ ಇಂಗ್ಲೀಶ್ ಅಲ್ಲದೆ ಹಿಂದಿಯನ್ನೂ ಬಳಸಬಹುದು. ಇದನ್ನು ಹಿಂದೀ ಭಾಷೆಯ ಅಹಂಕಾರ ಎನ್ನೋಣವೆ? ಪ್ರತಿ ರಾಜ್ಯದಲ್ಲಿ ಆ ರಾಜ್ಯದ ಭಾಷೆಯನ್ನೂ ಸಹ ನ್ಯಾಯಾಲಯದ ಭಾಷೆಯನ್ನಾಗಿ ಬಳಸುವುದು ತಪ್ಪೆ?
 

ನೊಂದವರಿಗೆ ನ್ಯಾಯ ನೀಡಲು ನಿರಾಕರಿಸುವುದು ಧರ್ಮವಲ್ಲ. ತಮ್ಮ ರೋಗಿ ಶತ್ರುವೇ ಆಗಿದ್ದರೂ ಸಹ ಅವನಿಗೆ ವೈದ್ಯಕೀಯ ಉಪಚಾರ ನೀಡುತ್ತೇನೆ ಎನ್ನುವ ಶಪಥವನ್ನು ವೈದ್ಯರು ತೆಗೆದುಕೊಳ್ಳುತ್ತಾರೆ. ಇದು ನ್ಯಾಯದಾನಕ್ಕೂ ಸಹ ಅನ್ವಯಿಸುತ್ತದೆ. ನ್ಯಾಯದಾನದ ನಿರಾಕರಣೆ ಮಾಡುವ ನ್ಯಾಯಾಧೀಶರು ತಮ್ಮ ತಿಂಗಳ ಸಂಬಳ ತೆಗೆದುಕೊಳ್ಳುವ ಮೊದಲು, ತಾನು ಆ ತಿಂಗಳ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದೆನೆ ಅಥವಾ ತನ್ನ ವೈಯಕ್ತಿಕ ಲೋಪಗಳಿಂದಾಗಿ ಅಥವಾ ನಿಯಮಾವಳಿಗಳ ದೋಷಗಳಿಂದಾಗಿ ಯಾರಾದರೂ ಕಣ್ಣೀರು ಹರಿಸಿದ್ದಾರೆಯೆ ಎಂದು ಒಂದು ನಿಮಿಷ ಆಲೋಚಿಸುವುದು ಒಳ್ಳೆಯದು.
 
ನ್ಯಾಯಪರಿಜ್ಞಾನ ಹಾಗು ನ್ಯಾಯನಿಷ್ಠುರತೆ ಈ ಎರಡು ಗುಣಗಳು ನ್ಯಾಯಾಧೀಶರಿಗೆ ಇರಬೇಕಾದ ಪ್ರಾಥಮಿಕ ಅವಶ್ಯಕತೆಗಳಾಗಿವೆ. ನಮ್ಮ ಭಾರತದೇಶದಲ್ಲಿಯೇ ಇದಕ್ಕೆ ಜ್ವಲಂತ ನಿದರ್ಶನಗಳಿವೆ. ನ್ಯಾಯಪರಿಜ್ಞಾನದ ಬಗೆಗೆ ಹೇಳುವುದಾದರೆ ಛತ್ರಪತಿ ಶಿವಾಜಿಯ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಶಿವಾಜಿಯು ತನ್ನ ಮಗ ಸಂಭಾಜಿಯನ್ನು ತನ್ನ ಸೈನ್ಯದ ಒಂದು ತುಕಡಿಯ ಮನಸಬದಾರನನ್ನಾಗಿ ನೇಮಿಸಿದ್ದನು. ಸಂಭಾಜಿಯು ಮರಾಠಾ ರಾಜ್ಯದ ಗಡಿಗೆ ಹತ್ತಿಕೊಂಡಿದ್ದ ಮೊಗಲ ಪ್ರದೇಶದ ಮೇಲೆ ದಾಳಿ ಮಾಡಿ, ಅಲ್ಲಿಯ ಸರದಾರನ ಸೊಸೆಯನ್ನು ಅಪಹರಿಸಿಕೊಂಡು ಬರುತ್ತಾನೆ. ಇದರಿಂದ ಕ್ರುದ್ಧನಾದ ಶಿವಾಜಿಯು ತನ್ನ ಮಗನ ಮೇಲೆ ನ್ಯಾಯವಿಚಾರಣೆ ಪ್ರಾರಂಭಿಸುತ್ತಾನೆ.

ಎಲ್ಲಾ ಕಾಲದಲ್ಲಿಯೂ, ಎಲ್ಲಾ ದೇಶಗಳಲ್ಲಿಯೂ Devil's advocates ಎನ್ನುವ ಕೆಲವರು ಇರುತ್ತಾರೆ, ನೋಡಿ! ಸಂಭಾಜಿಗೂ ಇಂತಹ ‘ದೆವ್ವದ ವಕೀಲ’ನೊಬ್ಬ ಸಿಕ್ಕ. ‘ಶಿವಾಜಿಯ ರಾಜ್ಯದ ಸೀಮೆಯಲ್ಲಿ ಸಂಭಾಜಿಯು ಯಾವುದೇ ಅಪರಾಧವನ್ನು ಮಾಡಿರುವದಿಲ್ಲ. ಆದುದರಿಂದ ಸಂಭಾಜಿಯ ವಿಚಾರಣೆಯ ಹಕ್ಕು ಶಿವಾಜಿಯ ನ್ಯಾಯಾಧೀಶರಿಗೆ ಇರುವುದಿಲ್ಲ’ ಎನ್ನುವುದು ಈ ವಕೀಲನ ವಾದ. (ಕೇರಳದ ಮೀನುಗಾರರನ್ನು ಗುಂಡಿಕ್ಕಿ ಕೊಂದ ಇಟಲಿಯ ನಾವಿಕರೂ ಇಂತಹದೇ ವಾದವನ್ನು ಮಂಡಿಸುತ್ತಿದ್ದಾರೆ, ಅಲ್ಲವೆ?) 

ಶಿವಾಜಿಯು ಇದನ್ನು ಒಪ್ಪಲಿಲ್ಲ. ಅಪರಾಧಿಯು ಮರಾಠಾ ರಾಜ್ಯದ ಅಧಿಕಾರಿಯಾಗಿದ್ದಾನೆ. ಆದುದರಿಂದ ಮರಾಠಾ ನ್ಯಾಯಾಧೀಶರು ಆತನ ವಿಚಾರಣೆಯನ್ನು ಮಾಡಬಹುದು ಎಂದು ಹೇಳಿದ ಶಿವಾಜಿಯು, ಮೊಗಲ ಸರದಾರನ ಸೊಸೆಯನ್ನು ಮರ್ಯಾದೆಯೊಂದಿಗೆ ಮರಳಿ ಕಳುಹಿಸುತ್ತಾನೆ ಹಾಗು ಸಂಭಾಜಿಯನ್ನು ಸೆರೆಮನೆಗೆ ಕಳುಹಿಸುತ್ತಾನೆ. ಇದು ನ್ಯಾಯಪರಿಜ್ಞಾನ.

ಪೇಶವಾ ಆಡಳಿತದಲ್ಲಿ ಪುಣೆಯ ನ್ಯಾಯಾಧೀಶನಾಗಿದ್ದ ರಾಮಾಶಾಸ್ತ್ರಿಯು ನ್ಯಾಯನಿಷ್ಠುರತೆಗೆ ಹೆಸರಾದವನು. ಸ್ವತಃ ಪೇಶವೇಗೆ ಮರಣಶಿಕ್ಷೆಯನ್ನು ವಿಧಿಸಿದ ಖ್ಯಾತಿ ಇವನದು. ಆದರೆ ಆ ತೀರ್ಪನ್ನು ಜಾರಿಗೊಳಿಸಲು ತನ್ನಿಂದ ಸಾಧ್ಯವಾಗದೇ ಹೋದಾಗ ತನ್ನ ಹುದ್ದೆಗೇ ರಾಜೀನಾಮೆ ಕೊಟ್ಟು ಹೋದವನೀತ!

ಆಧುನಿಕ ಭಾರತದಲ್ಲಿಯೂ ಸಹ ಕೆಲವು ನ್ಯಾಯಾಧೀಶರು ನ್ಯಾಯನಿಷ್ಠುರತೆಗೆ ಹೆಸರಾಗಿದ್ದಾರೆ. ಇಂದಿರಾ ಗಾಂಧೀಯವರ ವಿರುದ್ಧ ತೀರ್ಪು ಕೊಟ್ಟಂತಹ ಅಲಹಾಬಾದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಜಗಮೋಹನ ಲಾಲ ಸಿಂಹಾ, ತುರ್ತು ಪರಿಸ್ಥಿತಿಯಲ್ಲಿ ಸರಕಾರಕ್ಕೆ ಬಗ್ಗದೆ, ನೇರವಾಗಿ ನಿಂತುಕೊಂಡಂತಹ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಂಸರಾಜ ಖನ್ನಾ ಇವರೆಲ್ಲ ಈ ಪಟ್ಟಿಯಲ್ಲಿ ಸೇರುವವರು. 

ಇನ್ನು ಕೆಲವು ನ್ಯಾಯಮೂರ್ತಿಗಳು ನಮ್ಮ ದೇಶದಲ್ಲಿದ್ದಾರೆ. ಇಂಗ್ಲಿಶ್ ಹಾಗು ಹಿಂದಿ ಇವು ಉಚ್ಚ ನ್ಯಾಯಾಲಯದ ಭಾಷೆಯಾಗಿವೆ. ಇವನ್ನು ಬಿಟ್ಟು ಇತರ ಭಾಷೆಗಳಿಗೆ ನನ್ನ ಕಿವಿಗಳು ಕಿವುಡಾಗಿವೆ ಎಂದು ಇವರು ಹೇಳುತ್ತಾರೆ!

12 comments:

Badarinath Palavalli said...

ಇತ್ತೀಕೆಗೆ ನ್ಯಾಯಾಲಯಗಳು ತುಂಬಾ ಬಿರುಸಿಂದ ಕೆಲ್ಸ ಮಾಡುತ್ತಿವೆ ಎನ್ನುವ ಮಾತಿದೆ. ಈ ನಡುವೆ ನ್ಯಾಯಾಲಯಗಳ ಕನ್ನಡ ಅವಜ್ಞ ನೀತಿಯು ಅತ್ಯಂತ ಖೇದಾದ ವಿಚಾರ.

ಇಂದು ಹಣ ಬಲ, ರಾಜಕೀಯ ಕೃಪಾ ಪೋಷಣೆ ಮತ್ತು ತೋಳ್ಬಲಗಳ ಅಡಿಯಾಳಾಗಿ ಸರ್ಕಾರದ ಮೂರೂ ವ್ಯವಸ್ಥೆಗಳು ನಡೆಯುತ್ತಿಹವೇನೋ ಎಂಬ ಅನುಮಾನವೂ ಕಾಡುತ್ತದೆ.

ಶಿವಾಜಿಯು ತನ್ನ ಮಗ ಸಂಭಾಜಿಯ ಬಗ್ಗೆ ನಡೆಸಿದ ನ್ಯಾಯ ವಿಚಾರಣೆಯು ಮಾದರಿಯಾಗಲಿ.

ಈ ನಡುವೆ ಕೆಲ ಪ್ರಕರಣಗಳಲ್ಲಿ ನ್ಯಾಯಾಲಯಗಳ ಸಮಾನತೆಯ ಮನಸ್ಥಿತಿಯ ಬಗ್ಗೆಯೇ ಶ್ರೀಸಾಮಾನ್ಯನಲ್ಲಿ ಅನುಮಾನಗಳು ಮೂಡುತ್ತವೆ:

1. ನಿತ್ಯಾನಂದನ ಪ್ರಕರಣ.
2. ಮಾಜೀ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಡಿ‌ವಿ‌ಐ ಪತ್ನಿ ಪ್ರಕರಣ.
3. ಸಾಫ್ಟ್ವೇರ್ ಶುಭಾ ಪ್ರಕರಣ.

ಎಂದಿನವರೆಗೆ ತನ್ನ ಶಕ್ತಿಯಿಂದ ಸಮಾಜಕ್ಕೆ ಒಳಿತಾಗುವುದು ಎನ್ನುವುಯನ್ನು ಅರಿಯುವುದೋ ಅಂದಿನವರೆಗೂ ವ್ಯವಸ್ಥೆಗೆ ಅರ್ಥ ಬರುವುದೇ ಇಲ್ಲ.

ಕನ್ನಡವು ನ್ಯಾಯಾಲಯಗಳ ಪ್ರಥಮ ಭಾಷೆಯಾಗಲಿ.

sunaath said...

ನ್ಯಾಯಾಲಯಗಳು ನಿಷ್ಪಕ್ಷಪಾತದಿಂದ ಹಾಗು ನಿಷ್ಠುರತೆಯಿಂದ ನ್ಯಾಯದಾನ ಮಾಡುತ್ತಿವೆ ಎಂದು ನಾನು ನಂಬಬಯಸುತ್ತೇನೆ. ಆದರೆ ನಿಜವ ಬಲ್ಲವರಾರು?!

Srikanth Manjunath said...

ದ್ವಾರಕೀಶರ ನ್ಯಾಯ ಅಲ್ಲಿದೆ ಹಾಡಲ್ಲಿ ಬಡವನು ನ್ಯಾಯವ ಕೇಳುವುದೇ ಅನ್ಯಾಯ ಎನ್ನುವ ಮಾತು ನೆನಪಿಗೆ ಬರುತ್ತೆ. ಯಾರೋ ಬಿಟ್ಟು ಹೋದ ಅಹಂ ಭಾವಗಳಿಗೆ ಜೋತು ಬಿದ್ದು ಸ್ಥಳೀಯರನ್ನು, ನ್ಯಾಯ ಅಪೇಕ್ಷಿತರನ್ನು ಕಡೆಗಣಿಸುವ ಈ ಮಂದಿ ತಮ್ಮ ಕುಟುಂಬದ ಸದಸ್ಯರಿಗೆ ಹೀಗಾದಾಗ ಸುಮ್ಮನಿರುವರೇ. ಕಣ್ಣು ತೆರೆಸುವ ಲೇಖನ ಸರ್.

ಸತೀಶ್ ನಾಯ್ಕ್ said...

ನ್ಯಾಯಾಲಯದ ಈಗಿನ ಕಾರ್ಯ ವೈಖರಿ ಗಮನಿಸಿದರೆ ನ್ಯಾಯ ಸಿಕ್ಕದೆ ಹೋದರೂ ಪರವಾಗಿಲ್ಲ ನ್ಯಾಯಕ್ಕಾಗಿ ಬದುಕು ಹೋಗದೆ ಇರಲಿ, ಜೀವ ಹೋಗದೆ ಇರಲಿ ಅನ್ನೋ ಹಾಗೆ ಆಗಿ ಹೋಗಿದೆ. ಪ್ರಸಕ್ತ ಕಾಲ ಘಟ್ಟಕ್ಕೆ ಹಣ ಬಲ.. ಅಧಿಕಾರ ಬಲ ಉಳ್ಳವನಿಗೆ ಮಾತ್ರವೇ ನ್ಯಾಯ ದಕ್ಕುತ್ತಿದೆ (ದಕ್ಕುತ್ತಿರೋದಲ್ಲ ಅವರ ಬಲವಂತಕ್ಕೆ ಸಿಕ್ಕು ಬಿಕ್ಕುತ್ತಿರೋದು). ಅದಕೆ ಜ್ವಲಂತ ಸಾಕ್ಷಿಗಳು ನಮ್ಮ ಬಳಿ ಅನೇಕಗಳಿವೆ. ಸಲ್ಮಾನ್ ಖಾನ್ ಪ್ರಕರಣ.. ಸಂಜಯ್ ದತ್ ಪ್ರಕರಣ.. ಇನ್ನು ಮುಂತಾದ ಸ್ಟಾರ್ ಗಳ ಪ್ರಕರಣ ಆಗಿರಬಹುದು.. ಬಹುಕೋಟಿ ರುಪಾಯಿಗಳ ರಾಜಕೀಯ ಹಗರಣಗಳಾಗಿರ ಬಹುದು ಯಾವುದು ಸರಿ ಯಾವುದು ತಪ್ಪು ಅಂತ ಶ್ರೀ ಸಾಮಾನ್ಯನಿಗೆ ಕೂಡಾ ಗೊತ್ತಿದ್ರೂ.. ಅದು ತಪ್ಪು.. ಆ ತಪ್ಪಿಗೆ ನ್ಯಾಯಾನುಸಾರ ಇಂಥದ್ದೇ ಶಿಕ್ಷೆ ಅಂತ ಒಂದು ತೀರ್ಪನ್ನ ನೀಡೋಕೆ ಹತ್ತಾರು ವರ್ಷ ಮುಂದೂಡಿಕೆಯನ್ನ ನೀಡ್ತಾರೆ. ಅಷ್ಟರಲ್ಲಿ ಆ ಅಪರಾಧಿಯೇ ಸತ್ತು ಹೋದರೂ ವಿಚಾರಣೆ ಇನ್ನೂ ಮುಗಿದಿರೋಲ್ಲ. ಇನ್ನು ಹೇಗೆ ನ್ಯಾಯಕ್ಕಾಗಿ ಆಶಾ ಭಾವನೆ ಯಿಂದ ಕಾಯ್ತಾ ಕೂರೋದು. ಇದರ ಬದಲು ನಡೆದ ಅಪಘಾತವನ್ನೆಲ್ಲ ಅಬ್ಬಬ್ಬಾ ಅಂದ್ರೆ ಒಂದೆರಡು ವರ್ಷಗಳ ಒಳಗೆ ಮರೆತು, ಆ ಅಪರಾಧಿ ಎದುರು ಕೇಸ್ ಹಾಕದೆ ನೆಮ್ಮದಿಯಿಂದ ಇದ್ದು ಬಿಡಬಹುದು. ನಂತರ ಅದರ ವಿಚಾರಣಾ ಸುಳಿಯೊಳಗೆ ಸಿಲುಕಿ ನರಳಾಡೋ ಸ್ತಿತಿಯಾದರೂ ತಪ್ಪುತ್ತೆ.

ನ್ಯಾಯಕ್ಕೆ ಕಣ್ಣಿಲ್ಲ ಸರಿ.. ಕನ್ನಡ ಭಾಷೆ ವಿಚಾರ ಬಂದ್ರೆ ಕಿವಿಯೂ ಇಲ್ಲದೆ ಹೋಗುತ್ತೆ ಅನ್ನೋ ವಿಚಾರ ಇವತ್ತೇ ಸಾರ್ ಗೊತ್ತಾಗಿದ್ದು. ಬಹಳ ಖೇದದ ವಿಚಾರ. ಕರ್ನಾಟಕದಲ್ಲಿ ನ್ಯಾಯವೂ ಕನ್ನಡೀಕರಣ ಆಗ ಬೇಕಿರೋದು ಅದಕಾಗಿ ನಾವು ಹೋರಾಡ ಬೇಕಿರೋದು ದುರಂತವೇ ಸರಿ..

ಗಿರೀಶ್.ಎಸ್ said...

ನಮ್ಮ ದೇಶದ ನ್ಯಾಯಾಂಗ ಹದಗೆಟ್ಟಿರುವುದು ಖಂಡಿತ ಸತ್ಯ...ಎಲ್ಲೋ ಕೆಲವು ನ್ಯಾಯವಾದಿಗಳು ನ್ಯಾಯವಾಗಿ ತಮ್ಮ ಕಕ್ಷಿದಾರರಿಗೆ ಸಹಾಯ ಮಾಡುತ್ತಾರೆ..ಕೆಲವು ದುಡ್ಡು ಕೀಳುವುದೇ ಅವರ ಕೆಲಸ... ಖಂಡಿತ ಎಲ್ಲ ಕಡೆ ಶ್ರೀ ಸಾಮಾನ್ಯರಿಗೆ ಸಹಾಯವಾಗುವಂತೆ ಅವರ ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸಲು ಅವಕಾಶ ಮಾಡಿಕೊಡಬೇಕು...ಹಿಂದಿ ಅಥವಾ ಇಂಗ್ಲಿಷ್ ಗೊತ್ತಿರದ ಲಕ್ಷಾಂತರ ಜನ ನಮ್ಮ ದೇಶದಲ್ಲಿ ಇದ್ದಾರೆ.. ಆ ನ್ಯಾಯಾಧೀಶರ ಪ್ರಕಾರ ಹೋದರೆ ಆ ಜನರೆಲ್ಲಾ ಎಲ್ಲ ಅವಕಾಶಗಳಿಂದ ವಂಚಿತರಾಗಬೇಕಾಗುತ್ತದೆ..

ಈ ಸನ್ನಿವೇಶದಲ್ಲಿ,ಸಂಸತ್ ನಲ್ಲಿ ಬಾರಿಗೆ ಕನಂದದಲ್ಲಿ ಪ್ರಶ್ನೆ ಕೇಳಿದ ಜೆ.ಎಚ್.ಪಟೇಲರು ನೆನಪಿಗೆ ಬರುತ್ತಾರೆ ...

Swarna said...

ಕಾಕಾ,
ನ್ಯಾಯಾಧೀಶರಿಂದಾಗಿ ನ್ಯಾಯ ಮುನಿಸಿಕೊಂಡ ಪ್ರಕರಣಗಳು ಅದೆಷ್ಟಿವಿಯೊ?ಕಡೆಗೆ ಆ ವೃಧ್ಧರಿಗಾದರೂ ನ್ಯಾಯ ಸಿಕ್ಕಿತೆ ?
ಕ್ಷಮಿಸಿ, ಈ ಪ್ರಕರಣದ ಬಗ್ಗೆ ತಿಳಿದಿರಲಿಲ್ಲ.
ಆಗು ಹೋಗುಗಳನ್ನ ಸೂಕ್ಷ್ಮವಾಗಿ ಗಮನಿಸಿ ಬರೆಯುವ ನಿಮಗೆ ವಂದನೆಗಳು

ರಾಘವೇಂದ್ರ ಜೋಶಿ said...

ಸರ್,
ನನಗೆ ಅನಿಸಿಕೆ ಪ್ರಕಾರ ಇಲ್ಲಿ ನ್ಯಾಯಾಧೀಶರು ಕೊಂಚ ಉದಾರಿಯಾಗಿ ವಿವೇಚನೆಯಿಂದ ವ್ಯವಹರಿಸಬೇಕಿತ್ತು.ಕನ್ನಡ ಬಿಟ್ಟು ಬೇರೆ ಭಾಷಾಜ್ಞಾನವಿಲ್ಲದ ಮತ್ತು ತಮ್ಮ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವಕೀಲರನ್ನು ನೇಮಿಸಿಕೊಳ್ಳಲೂ ಆಗದ ನ್ಯಾಯಾಕಾಂಕ್ಷಿಗಳು ಏನು ಮಾಡಬೇಕು? ನ್ಯಾಯದಾನವನ್ನು ವಿಳಂಬ ಮಾಡುವದೂ,ನ್ಯಾಯದಾನವನ್ನು ಪುರಸ್ಕರಿಸದೇ ಇರುವದೂ ಕೂಡ ನ್ಯಾಯದಾನ ಮಾಡಲು ತಿರಸ್ಕರಿಸಿದಂತೆ ಅಲ್ಲವೇ?
-Rj

sunaath said...

ಶ್ರೀಕಾಂತರೆ,
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಕೈಯಲ್ಲಿ ನ್ಯಾಯದ ತಕ್ಕಡಿಯನ್ನು ಹಿಡಿದುಕೊಂಡ ಪ್ರತಿಮೆಯನ್ನು ನೆನಪಿಸಿಕೊಳ್ಳಿರಿ. ಬಹುಶಃ ಈ ತಕ್ಕಡಿಯಲ್ಲಿ ನೋಟುಗಳ ಕಂತೆಯನ್ನು ಇಡಬೇಕೇನೊ?!

sunaath said...

ಸತೀಶರೆ,
Justice delayed is justice denied ಎನ್ನುವ ಹೇಳಿಕೆಯೇ ಇದೆಯಲ್ಲ. ಅಲ್ಲದೆ, ನಮ್ಮ ತಾರಾ-ಅಪರಾಧಿಗಳಿಗೆ ದಯಾಭಿಕ್ಷೆ ಕೊಡಿಸಲು ನ್ಯಾಯವೇತ್ತರ ದಂಡೇ ತುದಿಗಾಲ ಮೇಲೆ ನಿಂತಿದೆ!

sunaath said...

ಗಿರೀಶರೆ,
ಕೆಲವು ನ್ಯಾಯವಾದಿಗಳು ತಮ್ಮ ಕಕ್ಷಿದಾರರಿಗೆ ಘೋರ ಅನ್ಯಾಯ ಮಾಡಿರುವದನ್ನು ನಾನು ಸ್ವತಃ ನೋಡಿದ್ದೇನೆ. ಸದ್ಯದ ನ್ಯಾಯವ್ಯವಸ್ಥೆಯಲ್ಲಿ ಬಲವಿದ್ದವನೇ ನ್ಯಾಯವಂತ!

sunaath said...

ಸ್ವರ್ಣಾ,
ಇದು ಇತ್ತೀಚಿನ ಪ್ರಸಂಗ. ಬಹುಶಃ ಆ ವೃದ್ಧರು ನ್ಯಾಯಾಲಯದ ಒತ್ತಡಕ್ಕೆ ಮಣಿದಿರಬಹುದು ಎಂದು ತೋರುತ್ತದೆ.

sunaath said...

RJ,
ನಿಮ್ಮ ಮಾತು ಶೇಕಡಾ ನೂರರಷ್ಟು ಸರಿಯಾಗಿದೆ. ಇದಂತೂ justice refused ಎನ್ನುವ ಪ್ರಕರಣವಾಗಿದೆ!