Thursday, January 30, 2014

ಲಂಕೇಶರ ‘ಅವ್ವ’



ತಮ್ಮ ತಾಯಿ ನಿಧನರಾದಾಗ, ಪಿ.ಲಂಕೇಶರು ಬರೆದ ಕವನ:  ಅವ್ವ’.

ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ
ಹೆಸರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟೋ ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟುಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?

ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.
ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ,

ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ.
……………………………………………………………………………..


ಕವಿಯು ಉಪಶಾಂತ ಸ್ಥಿತಿಗೆ ಇಳಿದಾಗ ಸಂಭವಿಸುವ ಭಾವನೆಗಳ ಮರುಜೋಡಣೆಯೇ ಕಾವ್ಯ ಎಂದು ಆಂಗ್ಲ ಕವಿ ವರ್ಡ್ಸವರ್ಥ ಹೇಳುತ್ತಾನೆ. ಇಂತಹ ಕವನವು—ಶೋಕಗೀತವಾಗಿದ್ದರೂ ಸಹ-- ಕಾವ್ಯದ ನಿಯಮಗಳನ್ನು ಅನುಸರಿಸುತ್ತದೆ. ಉದಾಹರಣೆಗೆ ಪುರಂದರದಾಸರ ‘ಗಿಳಿಯು ಪಂಜರದೊಳಿಲ್ಲಾ’ ಕವನವನ್ನು ನೋಡಬಹುದು. ಲಂಕೇಶರ ‘ಅವ್ವ’ ಕವನವು ಕಾವ್ಯದ ಈ ಚೌಕಟ್ಟನ್ನು ಮುರಿದು ಹಾಕಿದೆ. ಬಿಕ್ಕಿ ಬಿಕ್ಕಿ ಬರುತ್ತಿರುವ ದುಃಖದ ಅಲೆಗಳಂತೆ, ಈ ಕವನದ ಸಾಲುಗಳು ಉಮ್ಮಳಿಸಿ ಬರುತ್ತಿವೆ. ಇದು ಉಪಶಾಂತ ಸ್ಥಿತಿಯ ಕವನವಲ್ಲ; ಶೋಕದಲ್ಲಿ ಮುಳುಗೇಳುತ್ತಿರುವ ಸ್ಥಿತಿ. ಉದಾಹರಣೆಗೆ ಕವನದ ನುಡಿಗಳನ್ನೇ ಗಮನಿಸಿರಿ. ಕೆಲವೊಮ್ಮೆ ಐದು, ಕೆಲವೊಮ್ಮೆ ಆರು, ಕೆಲವೊಮ್ಮೆ ಏಳು, ಒಮ್ಮೆಯಂತೂ ಎಂಟು ಸಾಲುಗಳ ನುಡಿ ಇಲ್ಲಿವೆ. ಈ ಸಾಲುಗಳಿಗೂ ಒಂದೇ ಛಂದಸ್ಸು ಎನ್ನುವುದಿಲ್ಲ.

ತಾಯಿಯನ್ನು ಕೃತಜ್ಞತೆಯಿಂದ ಸ್ಮರಿಸುವ, ತಾಯಿಯ ಹೆಚ್ಚುಗಾರಿಕೆಯನ್ನು ಹೊಗಳುವ, ತಾಯಿಯನ್ನು ದೇವತೆಯಂತೆ ಪೂಜಿಸುವ ಕವನಗಳಿಗೆ ಜಾಗತಿಕ ಸಾಹಿತ್ಯದಲ್ಲಿ ಕೊರತೆ ಇಲ್ಲ. ಆದರೆ ಲಂಕೇಶರ ಈ ಕವನವು ತಾಯಿಯನ್ನು ಚುಚ್ಚುವ ವಾಸ್ತವದಲ್ಲಿ ನೋಡುತ್ತದೆ. ಲಂಕೇಶರ ಅವ್ವ ನಮ್ಮ ನಾಡಿನ ಸಾವಿರಾರು ಹೆಣ್ಣುಮಕ್ಕಳಂತೆ ಮಣ್ಣಿನ ಮಗಳು. ಈಕೆ ಮಣ್ಣಿನಲ್ಲಿಯೇ ಹುಟ್ಟಿ, ಮಣ್ಣಿನಲ್ಲಿಯೇ ಬದುಕು ಮಾಡಿ, ಮಣ್ಣಿನಲ್ಲಿಯೇ ಮಣ್ಣಾದವಳು. ಅವಳ ಉರುಟು ಬದುಕಿನಂತೆಯೇ ಇಲ್ಲಿ ಬಳಸಿದ ಭಾಷೆಯೂ ಉರುಟು. ಲಂಕೇಶರು ತಮ್ಮ ತಾಯಿಗೆ ಕೊಡುವ ಹೋಲಿಕೆಗಳಂತೂ  ಓದುಗನನ್ನು ಬೆಚ್ಚಿ ಬೀಳಿಸುತ್ತವೆ. ಅವಳು ಕಪ್ಪು ಹೊಲ, ಕಾಡು ಕರಡಿ, ನೊಂದ ನಾಯಿ ಹಾಗು ಕೆರೆದಾಡುವ ಕೋತಿ. ಈ ಗುಣಗಳು ಹೆಣ್ಣುಮಗಳೊಬ್ಬಳ ಒಂಟಿ ಹೋರಾಟದ ಬದುಕಿನಲ್ಲಿ ಅನಿವಾರ್ಯವಾದ ಗುಣಗಳೇ ಸೈ.

 
ತಾಯಿಯೆಂದೊಡನೆ ಲಂಕೇಶರಿಗೆ ಮೊದಲು ನೆನಪಾಗುವುದು ತನ್ನ ಹಾಗು ಅವಳ ವಾತ್ಸಲ್ಯದ ಸಂಬಂಧ. ಇವರು ಮಗು, ಅವಳು ಅವ್ವ. ಆದುದರಿಂದಲೇ ಮಾತೃತ್ವದ ಸಂಕೇತವಾದ ಕಪ್ಪು ಹೊಲವು ಅವರ ಕಣ್ಣಿಗೆ ಕಟ್ಟುತ್ತದೆ. ಹಳ್ಳಿಗಳಲ್ಲಿರುವ ನಮ್ಮ ಹೆಣ್ಣುಮಕ್ಕಳನ್ನು ನೋಡಿರಿ. ದುಡಿತ, ಹಡೆತ ಇವು ಅವರನ್ನು ಅಂಟಿಕೊಂಡ ಕರ್ಮಗಳು. ಫಲವತ್ತಾದ ಕಪ್ಪು ಹೊಲದಂತೆ ಈ ಹೆಣ್ಣು ಮಕ್ಕಳು ದೇವರು (=ಗಂಡ) ಕೊಟ್ಟಷ್ಟು ಮಕ್ಕಳನ್ನು ಹಡೆಯುತ್ತಲೇ ಹೋಗುತ್ತಾರೆ. ( ಇದು ಲಂಕೇಶರ ಕಾಲದ ವಾಸ್ತವ. ಈಗ ಪರಿಸ್ಥಿತಿ ಬದಲಾಗಿದೆ, ಎನ್ನಿ!) ಫಲವತ್ತಾದ ಹೊಲದಂತೆ ಇವರು ತಮ್ಮ ಮಕ್ಕಳನ್ನು ನಿರ್ವ್ಯಾಜವಾಗಿ, ಸ್ವಲ್ಪವೂ ಕೊರತೆಯಾಗದಂತೆ ಪೋಷಿಸುತ್ತಲೇ ಹೋಗುತ್ತಾರೆ.  ಬಣ್ಣ ಹಾಗು ಗುಣಗಳಲ್ಲಿ ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಕಪ್ಪು ಭೂತಾಯಿಯೇ ಹೌದು! ತಾಯಿ ಹಾಗು ಭೂತಾಯಿ ಇವರು ಒದ್ದಷ್ಟು, ಗುದ್ದಿದಷ್ಟು ತಮ್ಮ ಪ್ರೀತಿಯನ್ನು ಹೆಚ್ಚಿಸುತ್ತಾರೆ. ಇಂತಹ ಅವ್ವ, ತನ್ನ ಮಕ್ಕಳಿಗಾಗಿ ತನ್ನ ಕೊನೆಯ ಉಸಿರಿನವರೆಗೆ ದುಡಿದೇ ದುಡಿದಳು.  ‘ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ’!  ಮೊದಲ ನುಡಿಯ ಈ ಕೊನೆಯ ಸಾಲು ಲಂಕೇಶರ ಜೊತೆಗೆ ನಮ್ಮ ಕಣ್ಣಿನಲ್ಲೂ ನೀರು ತರಿಸುತ್ತದೆ!

ಮೊದಲನೆಯ ನುಡಿಯಲ್ಲಿ ತನ್ನ ಹಾಗು ತನ್ನ ಅವ್ವನ ನಡುವಿನ ಸಂಬಂಧವನ್ನು ನೆನಪಿಸಿಕೊಂಡ ಲಂಕೇಶರು, ಆಬಳಿಕ ಅವಳ ಸ್ವಂತ ಬದುಕನ್ನು ಅಂದರೆ ತನ್ನ ಅವ್ವ ಮದುವೆಯಾಗಿ ತನ್ನ ಅತ್ತೆಯ ಮನೆಗೆ ಬಂದಾಗಿನ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ. ಹೊಸ ಮದುವಣಗಿತ್ತಿಗೆ ಯಾವ ಅತ್ತೆಯ ಮನೆಯಲ್ಲೂ ರಾಜೋಪಚಾರ ಸಿಗುವುದಿಲ್ಲ. ತನ್ನ ದುಡಿತದಿಂದಲೇ ಅವಳು ತನ್ನ ಅತ್ತೆ, ಮಾವ ಹಾಗು ಇತರರ  ಮನವನ್ನು ಗೆಲ್ಲಬೇಕಾಗುತ್ತದೆ. ಗಂಡಸಿನ ಹಾಗೆ ಒಂದು ಪಲ್ಲ ಜೋಳವನ್ನು ಈಕೆ ಎತ್ತಿ ತೋರಿಸಿದಾಗಲೇ, ಗಂಡನಿಂದ ಇವಳಿಗೆ ಸಮ್ಮಾನ, ತೋಳಬಂದಿಯ ಕೊಡುಗೆ! ಅದೇನೂ ಬೇಂದ್ರೆಯವರು ಹಾಡಿರುವ ಪ್ರೀತಿಯ ‘ತೋಳಬಂದಿ’ಯಾಗಿರಲಿಕ್ಕಿಲ್ಲ. ಇವಳ ದುಡಿತಕ್ಕೆ ಕಟ್ಟಿದ ಕಿಮ್ಮತ್ತಾಗಿರಬಹುದು ಅದು. ಅಷ್ಟಕ್ಕೇ ಇವಳು ಹಿಗ್ಗಿ ಹೀರೆಕಾಯಿಯಾಗಿ ಹೆಚ್ಚಿನ ದುಡಿತದಲ್ಲಿ ತೊಡಗಿಕೊಳ್ಳುತ್ತಾಳೆ! 

ಈ ಉತ್ಸಾಹದ ಕೆಲಸದಲ್ಲಿ ಅವಳಿಗೆ ಅವಳ ಗಂಡ ಸಹಕಾರವನ್ನು ಕೊಟ್ಟನೆ? ಅವಳಿಗೆ ತಾನು ಜೊತೆಯಾಗಿ ನಿಂತನೆ? ಕೊನೆಯ ಪಕ್ಷ ರಂಟೆ ಕುಂಟೆಗಳಂತಹ ಜೋಡಣೆಗಳನ್ನಾದರೂ ಒದಗಿಸಿದನೆ? ಊಂಹೂಂ. ಬಹುಶಃ ಅನೇಕ ಗಂಡಸರಂತೆ ಅವನೂ ಯಾವುದೋ ಕಟ್ಟೆಯ ಮೇಲೆ ಬೀಡಿ ಸೇದುತ್ತ ಕುಳಿತಿರಬಹುದು. ತನ್ನ ಖಯಾಲಿಗಳಿಗಾಗಿ, ತನ್ನ ಶೋಕಿಗಾಗಿ ದುಡ್ಡು ಖರ್ಚು ಮಾಡುತ್ತಿರಬಹುದು.  ಆದರೆ ಅವಳಿಗೆ ಆಕ್ಷೇಪವಿಲ್ಲ, ನಿರುತ್ಸಾಹವಿಲ್ಲ. ಅವಳು ತನ್ನ ದುಡಿತದಲ್ಲಿ ಖುಶಿಯಾಗಿಯೇ ಇದ್ದಾಳೆ. ತನ್ನಲ್ಲಿ ಕಸುವು ಇರುವವರೆಗೆ ದುಡಿಯುತ್ತಲೇ ಹೋಗುತ್ತಾಳೆ. ಅವಳ ಯೌವನವೆಲ್ಲ ಈ ದುಡಿತದಲ್ಲೇ ಕಳೆದು ಹೋಗುತ್ತದೆ. ಇದಕ್ಕೆಲ್ಲ ಅವಳಿಗೆ ಸಿಗುವ ಪ್ರತಿಫಲವೆಂದರೆ ಒಂದು ಹರಕು ಸೀರೆ. ಅವಳ ಮಟ್ಟಿಗೆ ಅವಳ ಶ್ರಮವೆಲ್ಲ  ಪ್ರೀತಿಯ ಕಾಯಕ ಮಾತ್ರ.

ತನ್ನ ಅವ್ವ ಹೊಸ ಮದುವಣಗಿತ್ತಿಯಾಗಿ ಗಂಡನ ಮನೆಗೆ ಬಂದಾಗ, ಅವಳಿಗೆ ಎಷ್ಟೆಲ್ಲ ಕನಸು ಇದ್ದಿರಬಹುದು ಎಂದು ಲಂಕೇಶರು ಯೋಚಿಸುತ್ತಾರೆ. ಆದರೆ ಅವಳ ಸ್ವಂತದ ಕನಸುಗಳು ನೋಡುತ್ತಿರುವಂತೆಯೇ ಕರಗಿ ಮಾಯವಾಗಿವೆ. ಅವಳ ಸಂಭ್ರಮವೆಲ್ಲ ತನ್ನ ಮಕ್ಕಳಿಗೆ ಉಣಿಸಿ, ತಿನ್ನಿಸಿ ಹಬ್ಬಗಳನ್ನು ಅವರಿಗಾಗಿ ಆಚರಿಸುವದರಲ್ಲೇ ಕಳೆದು ಹೋಗುತ್ತದೆ.

ಅವಳ ಬದುಕೋ ನಿತ್ಯ ಸಂಕಟಮಯ. ಎಮ್ಮೆ ತಪ್ಪಿಸಿಕೊಂಡು ಹೋಗಿರುತ್ತದೆ, ಕರು ಸತ್ತಿರುತ್ತದೆ, ಪೀಕು ಹಾಳಾಗಿರುತ್ತದೆ. ಇದಕ್ಕೆಲ್ಲ ಪೇಚಾಡುವವಳು ಈ ಅವ್ವನೇ. ತನ್ನ ಗಂಡ ಹಾಗು ಮಕ್ಕಳಿಗಾಗಿ ತಾನು ಕಟ್ಟುತ್ತಿರುವ ಬದುಕು ಹಾಳಾಗಬಾರದೆನ್ನುವ ದುಗುಡ ಇರುವುದು ಇವಳಿಗೇ! ಹಾದಿ ತಪ್ಪುತ್ತಿರುವ ತನ್ನ ಗಂಡ ಹಾಗು ಮಕ್ಕಳನ್ನು ಸರಿದಾರಿಗೆ ಎಳೆತರುವ ಸಂಕಟವೂ ಅವಳ ಬದುಕಿನ ಅನಿವಾರ್ಯ ಭಾಗ.


ಈ ಸಂಭ್ರಮ, ಈ ಪೇಚಾಟದ ದ್ವಂದ್ವಗಳಲ್ಲೇ ಅವಳ ಪ್ರಾಯ ತಿಳಿಯದಂತೆ ಕಳೆದು ಹೋಗಿ, ಅವಳು ಮುದುಕಿಯಾಗಿದ್ದಾಳೆ! ನೋಡುನೋಡುತ್ತಿರುವಂತೆಯೇ ಮಣ್ಣಿನಲ್ಲಿ ಕಣ್ಮರೆಯಾಗಿದ್ದಾಳೆ. ಇವಳ ಬದುಕು ಇಷ್ಟೇ. ಮೋಡದಂತೆ ಮಳೆ ಸುರಿಸಿ ಮೋಡದಂತೆ ಕರಗಿ ಹೋಗುವುದೇ ಈ ಎಲ್ಲ ಅವ್ವಂದಿರ ಹಣೆಬರಹ!

ಹಾಗಿದ್ದರೆ ಇವಳ ಬದುಕಿನ ಅರ್ಥವೇನು? ಜೀವನದ ಮೌಲ್ಯವೇನು? ಇವಳ ಆದರ್ಶಗಳೇನು? ಇವಳ ಮಹತ್ ಸಾಧನೆಗಳೇನು? ಲಂಕೇಶರು ಹೇಳುತ್ತಾರೆ: ಈ ಎಲ್ಲ ದೊಡ್ಡ ಮಾತುಗಳು ಇವಳಿಗೆ ಬೇಡ. ಇವಳೊಬ್ಬ ಸಾಧಾರಣ ಹೆಂಗಸು. ನಮ್ಮ ಚರಿತ್ರೆ, ಪುರಾಣಗಳಲ್ಲಿ ಬರುವಂತಹ ಮಹಾಸತಿಯಲ್ಲ ಇವಳು. ಇವಳ ಒದ್ದಾಟ, ಗುದ್ದಾಟವೆಲ್ಲ ತನ್ನ ಸಂಸಾರವನ್ನು ಸುಸೂತ್ರವಾಗಿ ಸಾಗಿಸಿಕೊಂಡು ಹೋಗಲು ಮಾತ್ರ. ಈ ಹಳ್ಳಿಯ ಹೆಂಗಸು ಯಾವ ತತ್ವಶಾಸ್ತ್ರವನ್ನೂ ತಿಳಿದವಳಲ್ಲ. ಇವಳು ತಿಳಿದಿರುವ ತತ್ವವೆಂದರೆ ಇದೊಂದೇ: ತನ್ನ ಸರೀಕರಲ್ಲಿ ತನ್ನ ಮನೆತನದ ಮೂಗು ಮುಕ್ಕಾಗಬಾರದು. ತನ್ನ ಗಂಡ ಹಾಗು ಮಕ್ಕಳು ತಮ್ಮ ಹಳ್ಳಿಯಲ್ಲಿ ತಲೆ ಎತ್ತಿ ನಡೆಯಬೇಕು.ಈ ಸಂದರ್ಭದಲ್ಲಿ ಲಂಕೇಶರು ಇವಳನ್ನು ಕಾಡು ಕರಡಿಗೆ ಹೋಲಿಸುತ್ತಾರೆ. ತನ್ನ ಚಿಕ್ಕ ಮಕ್ಕಳನ್ನು ಬೆಳೆಸಿ, ತನ್ನ ಸಂಸಾರವನ್ನು ಜೋಪಾನ ಮಾಡುವದರಲ್ಲಿ ಇವಳು ಅಡವಿಯ ಕರಡಿ ಇದ್ದಂತೆ. ಎದುರಾದವರನ್ನು ಗುರ್ ಎನ್ನುತ್ತ ಎದುರಿಸುವವಳು ಈಕೆಯೇ. ತನ್ನವರ ಮೇಲೆ ನಾಯಿಗಿರುವಂತಹ ನಿಷ್ಠೆ ಇವಳಿಗೆ. ತನ್ನವರೇ ಒದ್ದಾಗ, ಒದೆಸಿಕೊಂಡ ನಾಯಿಯಂತೆ ಕುಂಯ್‍ಗುಟ್ಟಿ ಸುಮ್ಮನಾಗುವವಳು ಈಕೆಯೇ. ತಾಯ್ತನವೇ ಇವಳಿಗಿರುವ ದೊಡ್ಡಸ್ತನ! ತಮ್ಮನ್ನು ಹೊತ್ತು, ಹೆತ್ತು ತನ್ನ ಬದುಕೆನ್ನಲ್ಲ ತನ್ನ ಗಂಡ ಹಾಗು ಮಕ್ಕಳಿಗಾಗಿ ಸವೆಸಿದ  ಅವ್ವನನ್ನು ನೆನಪಿಸಿಕೊಂಡ ಲಂಕೇಶರಿಗೆ ಕೃತಜ್ಞತೆಯ ಕಣ್ಣೀರು ಬರುವುದು ಸಹಜವೇ ಆಗಿದೆ.

ಈ ಕವನವನ್ನು ಓದುವಾಗ ಅನ್ನಿಸುವುದು: ಈ ಕವನದ ‘ಅವ್ವ’ ಕೇವಲ ಲಂಕೇಶರ ಅವ್ವ ಅಲ್ಲ. ನಮ್ಮ ನಾಡಿನ ಎಲ್ಲ ಹೆಂಗಸರು ಬದುಕುವುದು ಹೀಗೆಯೇ. ಭಾರತದೇಶದ ಹಳ್ಳಿಗಳಲ್ಲೆಲ್ಲ ಇವಳೇ ಇದ್ದಾಳೆ. ಇವಳನ್ನೇ ನಾವು ಭಾರತಮಾತೆ ಎಂದು ಕರೆಯುವುದು. ಈ ಅವ್ವ ಕೇವಲ ಈ ಕವನದ ಸಾಲುಗಳಲ್ಲಿ ಅಡಗಿಲ್ಲ. ಈ ಕವನದ ಹೊರಗೂ ಅವಳಿದ್ದಾಳೆ. ಇದೇ ಈ ಕವನದ ದೊಡ್ಡಸ್ತಿಕೆ.

ಲಂಕೇಶರು ಕನ್ನಡದ ಶ್ರೇಷ್ಠ ಕತೆಗಾರರು; ಶ್ರೇಷ್ಠ ಕವಿಗಳೇನೂ ಅಲ್ಲ. ಆದರೆ ಅವರ ‘ಅವ್ವ’ ಕವನವು ಜಗತ್ತಿನ ಶ್ರೇಷ್ಠ ಕವನಗಳಲ್ಲಿ ಒಂದಾಗಿದೆ.

[ಟಿಪ್ಪಣಿ: ಈ ಕವನದ ಪಠ್ಯವನ್ನು http://kannadakavyakanaja.blogspot.com/2014/01/blog-post_10.html#ixzz2q1D8wkEq  ಇಲ್ಲಿಂದ ಎತ್ತಿಕೊಂಡಿದ್ದೇನೆ. ಸುಶ್ರೀ ‘ಕನಸು’ ಇವರಿಗೆ ನನ್ನ ಧನ್ಯವಾದಗಳು.]

28 comments:

Badarinath Palavalli said...

ಎರಡು ಕಾಲಮಾನಗಳಲ್ಲಿ ಗೌರವಾನ್ವಿತ ಲಂಕೇಶರು ಎರಡು ಅವ್ವ ಕವನಗಳನ್ನು ಬರೆದಿದ್ದಾರೆ ಎನ್ನುವುದನ್ನು ಕೇಳಿದ್ದೆ. ಬಹುಶಃ ಅವರೇ ಸಂಪಾದಿಸಿರುವ ಆದಿ ಕವಿಗಳಿಂದ ಹಿಡಿದು ಹೊಸ ಕವಿಗಳವರೆಗಿವ ಕವನ ಸಂಕಲನದಲ್ಲಿ ನನಗೆ ಸಿಗಬಹುದು. ಅದನ್ನು ನಾನೂ ಹುಡಕ ಬೇಕಿದೆ.

ಶತಮಾನದ ಶ್ರೇಷ್ಟ ಕವಿತೆಯನ್ನು ನಮಗೆ ಅರ್ಥೈಸಿದ ನಿಮಗೆ ನಾವು ಚಿರರುಣಿಗಳು.

ನೀವೇ ಹೇಳಿದಂತೆ, ಇಲ್ಲಿ ಅವ್ವ ನಮ್ಮ ಹಳ್ಳಿಗಾಡಿನ ಯಾವುದೇ ತಾಯಂದಿರು ಆಗಬಹುದು.

ಈಶ್ವರ said...

ಲಂಕೇಶರು ಕನ್ನಡದ ಶ್ರೇಷ್ಠ ಕತೆಗಾರರು; ಶ್ರೇಷ್ಠ ಕವಿಗಳೇನೂ ಅಲ್ಲ. ಆದರೆ ಅವರ ‘ಅವ್ವ’ ಕವನವು ಜಗತ್ತಿನ ಶ್ರೇಷ್ಠ ಕವನಗಳಲ್ಲಿ ಒಂದಾಗಿದೆ.

ಅವ್ವ ಕವನ ತುಂಬಾ ಮಾರ್ಮಿಕವಾಗಿಯೂ ವಿಸ್ತಾರವಾಗಿಯೂ ಇದೆ. ಎಲ್ಲವನ್ನೂ ಚಂದವಾಗಿ ತೋರಿದ್ದಕ್ಕೆ ಧನ್ಯವಾದ ಕಾಕ. ಅವ್ವ-೨ ಅಷ್ಟೊಂದು ಸೊಗಸಲ್ಲವೇನೊ.

ಧನ್ಯವಾದ.

sunaath said...

ಬದರಿನಾಥರೆ,
ಲಂಕೇಶರ ಅವ್ವ ನಮ್ಮ ಹಳ್ಳಿಗಾಡಿನ ಯಾವುದೇ ಅವ್ವ ಆಗಬಹುದು ಎನ್ನುವುದೇ ಈ ಕವನದ ಹೆಚ್ಚುಗಾರಿಕೆ!

sunaath said...

ಈಶ್ವರ ಭಟ್ಟರೆ,
ಒಳ್ಳೆಯ ಕವಿಯಲ್ಲದಿದ್ದರೂ ಶ್ರೇಷ್ಠ ಕವನವನ್ನು ರಚಿಸಿದ ಲಂಕೇಶರು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದ ಸಾಹಿತಿಯಾಗಿದ್ದಾರೆ!

ಮಂಜುಳಾದೇವಿ said...

"ನನ್ನವ್ವ ಬದುಕಿದ್ದು
.......
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ"

ಎಲ್ಲಾ ಅಮ್ಮಂದಿರು ಬದುಕಿನ ಬವಣೆಗಳನ್ನೂ ಹಲ್ಲು ಕಚ್ಚಿ ಸಹಿಸುವುದು ತಾನು- ತನ್ನವರನ್ನು ಸರೀಕರ ಎದುರು ತಲೆಯೆತ್ತಿ ನಡೆಯಲು.....!ಲಂಕೇಶರ ಅವ್ವನ ಕಾಲದ ತಾಯಂದಿರ ಪರಿಸ್ಥಿತಿಯ ಅನಾವರಣ ಪ್ರತಿ ಸಾಲಿನಲ್ಲೂ ಮೂಡಿದೆ....!!

ಹೆಣ್ಣಿನ ಉದಾತ್ತ ಗುಣವನ್ನು ಹೇಳುವ ಲಂಕೇಶರ ಕವನದ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು ಸಾರ್....

AntharangadaMaathugalu said...

ನಮಸ್ತೆ ಕಾಕಾ
ತಾಯಿಯ ಬದುಕಿನ ಹಾಗೂ ಮನಸಿನ ನೈಜ ವಿವರಣೆ. ಅರ್ಥೈಸುತ್ತಾ ಬದುಕಿನ ಚಿತ್ರಣವನ್ನೇ ಕೊಟ್ಟಿದ್ದೀರಿ. ಎಂದಿನಂತೆ ಇಷ್ಟವಾಯಿತು.

ಶ್ಯಾಮಲ

sunaath said...

ಮಂಜುಳಾದೇವಿಯವರೆ,
ಲಂಕೇಶರ ಅವ್ವ ನಮ್ಮೆಲ್ಲರ ಅವ್ವ ಆಗಿರುವದರಿಂದಲೇ, ಅವಳು ನಮಗೆ ಇಷ್ಟು ಹತ್ತಿರವಾಗುವುದು!

sunaath said...

ಶ್ಯಾಮಲಾ,
ಇದು ನಮ್ಮ ತಾಯಂದಿರ ಬದುಕಿನ ವಾಸ್ತವ ಚಿತ್ರಣವಾಗಿದೆ. ಆದುದರಿಂದಲೇ, ನಮ್ಮ ಕಣ್ಣಿನಲ್ಲಿಯೂ ನೀರು ತರಿಸುತ್ತದೆ.

Swarna said...

ಕಾಕಾ ,
ಅವ್ವನನ್ನು ನೀವು ಅರ್ಥೈಸಿದ ಪರಿ ಎಂದಿನಂತೆ ಸೊಗಸು.
ತಾಯಿ ತಂದೆ ಇಬ್ಬರೂ ಸರೀಕರೆದುರು ತಲೆಯೆತ್ತಿ ನಡೆಯಲೆಂದೇ ಗೇದರೂ ಈ ವಿಷಯದಲ್ಲಿ ತಾಯಿ ಒಂದು ಕೈ ಹೆಚ್ಚೆಂಬುದು ನನ್ನ ಅನಿಸಿಕೆ :)
ಕಾವ್ಯ ಕಣಜವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು
ಸ್ವರ್ಣಾ

Vanamala Deshpande said...

ಪ್ರಿಯ ಸುನಾಥರೆ,
ಅವ್ವ ಕವನದ ವಿವರಣೆ ಕವನದಷ್ಟೇ ಸುಂದರವಾಗಿದೆ. ಮನಸ್ಸಿಗೆ ತಟ್ಟುವಂತೆ ವಿವರಿಸಿದ್ದೀರಿ.
-ವನಮಾಲಾ

sunaath said...

ಸ್ವರ್ಣಾ,
ಅದಕ್ಕೇ ಅಲ್ಲವೆ, ‘ಕುಪುತ್ರೋ ಜಾಯೇತ್ ಕ್ವಚಿದಪಿ, ಕುಮಾತಾ ನ ಭವತಿ’ ಅಂತ ಹೇಳೋದು!

sunaath said...

ವನಮಾಲಾ,
ನಿಮಗೆ ಧನ್ಯವಾದಗಳು.

Unknown said...

ಈ ಅವ್ವನನ್ನು ಬರೀ ಹಳ್ಳಿಗಾಡಿನ ಅವ್ವಳಷ್ಟೆ ಅಲ್ಲದೆ ಸಾರ್ವತ್ರಿಕವಾಗಿಯೂ ನೋಡಬಹುದು ಎನಬಹುದು. ಬರೀ ಅಬ್ಬರವೇ ಬೇಕಿಲ್ಲ - ಹಗಲಿರುಳು ಮನೆಯ ಮುಂದುವರಿಸಿಕೊಂಡು ಹೋಗುವ ಹೆಣ್ಣು, ಮೈಮುರಿದು ದುಡಿವ ಕಾರ್ಮಿಕ ಹೆಣ್ಣು, ಬಸ್ ಕಂಡಕ್ಟರ ಹೆಣ್ಣು, ತಲೆ ತುಂಬಾ, ಕ್ಯೂಬ ತುಂಬಾ ಮಕ್ಕಳ ಫೊಟೊ ಮಡಗಿಕೊಂಡು ಕೆಲಸ ಮಾಡುವ ತಂತ್ರಾಂಶ ಪರಿಣಿತೆ ಹೆಣ್ಣು -ಎಲ್ಲರೂ ಇ 'ಅವ್ವ' ರೆ.
ಬಾಳ ಸುಳಿಯಲಿ ಬೆಳೆದು ತೋರುವವವರೆ -ಅಡವಿಯಲಿ ಹೂದೋಟ ಹೂಡುವವರೆ.

sunaath said...

ಅನಿಲರೆ,
ನಿಮ್ಮ ಹೇಳಿಕೆಯು ಶತಶಃ ಸರಿಯಾಗಿದೆ. ಲಂಕೇಶರ ಅವ್ವ ಹಳ್ಳಿಗಾಡಿನ ಅವ್ವ ಆಗಿದ್ದುದರಿಂದ, ಆ ಅಂಶಕ್ಕೆ ನಾನು ಹೆಚ್ಚಿನ ಒತ್ತು ಕೊಟ್ಟೆ ಅಷ್ಟೆ! ನಿಮ್ಮ ಮಾತನ್ನು ಒಪ್ಪುತ್ತೇನೆ.

ಪದ್ಮಾ ಭಟ್ said...

eshto dina aadmele lankesh avara padya odide... jothege nimma baraha khushy kottitu

sunaath said...

ಪದ್ಮಾ ಮೇಡಮ್,
ಈ ಕವನ ಕಾವ್ಯಕಣಜದಲ್ಲಿ ಸಿಕ್ಕಾಗ ನನಗೂ ತುಂಬ ಖುಶಿಯಾಯಿತು. ನಿಮಗೆ ಧನ್ಯವಾದಗಳು.

ಸತೀಶ್ ನಾಯ್ಕ್ said...

ಲಂಕೇಶರನ್ನ ಈ ವರೆಗೂ ಓದಿಕೊಳ್ಳುವ ಪ್ರಯತ್ನ ಮಾಡಿಲ್ಲ . ಆದರೆ ಈ ಕವನವನ್ನ ಅದೆಷ್ಟು ಸಾರಿ ಓದಿಲ್ಲ. ಓದಿದಷ್ಟೂ ಅದೆಷ್ಟು ಬಾರಿ ಮೆಚ್ಚಿಲ್ಲ. ಸರಳವಾಗಿ ಕವನದೊಳಗಣ ನಮ್ಮೆಲ್ಲರ ಅವ್ವನ ಪ್ರತಿನಿಧಿಯ ಚಿತ್ರಣವನ್ನ ಇಷ್ಟು ಆಪ್ತವಾಗಿ ಬಿಡಿಸಿ ಕೊಟ್ಟಿರೋದಕ್ಕೆ ನಿಮ್ಮ ಬರಹವನ್ನೂ ಮೆಚ್ಚದೆ ಇರಲಾಗುವುದಿಲ್ಲ. ತುಂಬ ಇಷ್ಟವಾಯ್ತು ಸಾರ್..

sunaath said...

ಸತೀಶ ನಾಯ್ಕರೆ,
ಇದು ನನಗೂ ಸಹ ತುಂಬ ಮೆಚ್ಚಿಗೆಯಾದ ಕವನ. ಎಷ್ಟು ಸಲ ಓದಿದರೂ, ಮತ್ತೆ ಓದಬೇಕೆನ್ನಿಸುವಂತಹ ಕವನ!

ಭಾನು ರಾ ಚಂದ್ರ said...

ನಿಜವಾಗಿಯೂ ಅವ್ವಳ ಅಂತರಂಗ ತಿಳಿಯಾದ ವಿಶಾಲ ಕೊಳ....ಲಂಕೇಶರ ಅವ್ವ ಅದ್ಬುತ...

sunaath said...

ಭಾನು,
ಲಂಕೇಶರ ‘ಅವ್ವ’ ವಿಭಿನ್ನವಾದ, ಅದ್ಭುತವಾದ ಕವನವಾಗಿದೆ!

Unknown said...

ಅವ್ವ ಪದ್ಯ ನನಗೆ ಞಷ್ಟ
ಅವ್ವನ ಪ್ರೀತಿ ಜಗತ್ತು
Mothr is god

Unknown said...

ಮಾಗಿದ ಮನವು ಮೂಡಿಸಿತು ಅಂದು ಅವ್ವ ಎನುವ ಕವನವ;
ಓದಿದ ಕಣ್ಣು ತಣಿಸುತಿಹದು ನಮ್ಮ ತಾಯ್ಗರುಳ ಮನವ.
ತುಂಬಾ ಸಂತೋಷ ಆಯ್ತು ಧನ್ಯವಾದಗಳು ಲಂಕೇಶ್ ಅಣ್ಣ

sunaath said...

ಧನ್ಯವಾದಗಳು, Unknownರೆ!

Malukavi.com said...

ಲಂಕೇಶ್ ನನ್ನಿಷ್ಟದ ಕವಿ ಹಾಗೆ ನಮ್ ಬಾಸ್...

sunaath said...

ಅಂದರೆ, ನೀವು ಲಂಕೇಶ್ ಪತ್ರಿಕೆಯಲ್ಲಿ ಇದ್ದಿರಾ?

Anonymous said...

ಹಚಡಕ್ಕೆ ಎಂದರೆ ಏನು

sunaath said...

Anonymusರೆ,
ಹಚಡ ಅಥವಾ ಹಚ್ಚಡ ಎಂದರೆ ಹಳೆಯ ಅರಿವೆಗಳನ್ನು ಜೋಡಿಸಿ ಹೊಲೆದು, ಸಿದ್ಧಪಡಿಸಿದ ಅರಿವೆ. ಇದನ್ನು ಹೊತ್ತುಕೊಳ್ಳಲು ಬಳಸುವುದು ವಾಡಿಕೆ.

Anonymous said...

ಅವ್ವ ಕವಿತೆ ಓದಿದಾಗ ನಮ್ಮ ಅವ್ವಳ ಕಷ್ಟದ ದಿನಗಳು ನೆನಪಿಗೆ ಬಂತು