Wednesday, August 25, 2010

ಹೇ ರಾಮ್!

‘ದೇಶ ಶ್ರೀಮಂತವಾಗಿರುವಾಗ ಓರ್ವ ವ್ಯಕ್ತಿ ಬಡತನದಲ್ಲಿದ್ದರೆ  ಅವನು ತಪ್ಪುಗಾರ; ದೇಶ ಬಡತನದಲ್ಲಿದ್ದಾಗ ಓರ್ವ ವ್ಯಕ್ತಿ ಸಿರಿವಂತಿಕೆಯಲ್ಲಿದ್ದರೆ ಆ ವ್ಯಕ್ತಿ ಒಬ್ಬ ಪಾಪಿ’ ಎಂದು ಚೀನಾ ದೇಶದ ತತ್ವಜ್ಞಾನಿ ಕನ್‌ಫ್ಯೂಶಿಯಸ್ ಹೇಳಿದ್ದಾನೆ. ಕಾಲ ಹಾಗು ದೇಶದಿಂದ ದೂರದಲ್ಲಿದ್ದ ಆ ತತ್ವಜ್ಞಾನಿಯನ್ನು ಬಿಡೋಣ. ನಾವು ರಾಷ್ಟ್ರಪಿತ ಎಂದು ಸ್ಮರಿಸುವ ಮಹಾತ್ಮಾ ಗಾಂಧಿಯವರು ಅರೆಹೊಟ್ಟೆಯ ಅಡುಗೆ ಹಾಗು ಅರೆಬತ್ತಲೆಯ ಉಡುಗೆಯ ವ್ರತವನ್ನು ಏಕೆ ಆಚರಿಸಿದರು? ತಮ್ಮ ದೇಶವಾಸಿಗಳ ಹೀನಸ್ಥಿತಿಯನ್ನು ನೋಡಿ ಮರುಕಗೊಂಡಿದ್ದಕ್ಕಲ್ಲವೆ? ಮಾನವ ಸಂವೇದನೆಯಿರುವ ಹೃದಯವಂತರು ಮಾಡುವ ಕೆಲಸವಿದು. ಇಂತಹ ಸಂವೇದನೆಯನ್ನು ನಾವು ಚುನಾಯಿಸಿದ ನಮ್ಮ ಶಾಸಕರಲ್ಲಿ ಅಪೇಕ್ಷಿಸುವದು ಹುಚ್ಚುತನವೇ ಸರಿ.

ಇದೀಗ ನಮ್ಮ ಶಾಸಕರು ಅಂದರೆ ಲೋಕಸಭೆಯ ಸದಸ್ಯರು ತಮ್ಮ ಮಾಸಿಕ ವೇತನವನ್ನು ರೂ.೫೦,೦೦೦ಗಳಿಗೆ ಏರಿಸಿಕೊಳ್ಳುವ ಹುನ್ನಾರದಲ್ಲಿದ್ದಾರೆ.. ಅದರ ಜೊತೆಗೆ ರೂ.೪೫,೦೦೦/-ಗಳ ಕ್ಷೇತ್ರಭತ್ತೆ . ಲೋಕಸಭೆ ನಡೆಯುತ್ತಿರುವಾಗ ಪ್ರತಿದಿನ ರೂ.೨೦೦೦/-ಗಳ ಭತ್ತೆ ಬೇರೆ. ಲೋಕಸಭೆಯು ಒಂದು ವರ್ಷದಲ್ಲಿ ಕನಿಷ್ಠ ೧೨೦ ದಿನಗಳವರೆಗೆ ನಡೆಯುವದರಿಂದ ರೂ. ೨,೪೦,೦೦೦ಗಳ ಗಳಿಕೆ ಇಲ್ಲಿಯೇ ಆಗುತ್ತದೆ. ಇದಲ್ಲದೆ ಟೆಲಿಫೋನ್, ವಿಮಾನ ಹಾರಾಟ ಮೊದಲಾದವುಗಳ ಪುಕ್ಕಟೆ ಸೌಲಭ್ಯ.  ಒಟ್ಟಿನಲ್ಲಿ ಓರ್ವ ಸದಸ್ಯನಿಗೆ ವರ್ಷಕ್ಕೆ ಸುಮಾರು ೨೦ ಲಕ್ಷಗಳವರೆಗಿನ ಗಳಿಕೆ. ಇದು ಸಾಮಾನ್ಯ ಭಾರತೀಯನ ವಾರ್ಷಿಕ ಆದಾಯದ ೬೮ ಪಟ್ಟು ಅಧಿಕವಾಗಿದೆ. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ೫೪೩. ಸಂಪುಟ ಸಚಿವರು ಹಾಗು ಉಪಮಂತ್ರಿಗಳಿಗೆ ಹೆಚ್ಚಿನ ಸಂಬಳ. ಅದನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಸಹ, ಲೋಕಸಭೆಯ ವರ್ತಮಾನ ಸದಸ್ಯರಿಗಾಗಿ ಭಾರತೀಯರು ಮಾಡುವ ಖರ್ಚು ವರ್ಷಕ್ಕೆ ರೂ. ೧೦೫ ಕೋಟಿ. ಲೋಕಸಭೆಯ ಸದಸ್ಯರಾಗಿದ್ದವರು, ಮುಂದಿನ ಚುನಾವಣೆಯಲ್ಲಿ ಗೆಲ್ಲದೆ ಹೋದರೆ, ಅವರಿಗೆ ನಿವೃತ್ತಿವೇತನದ ಹೆಸರಿನಲ್ಲಿ ಸಮಾಧಾನಕರ ಬಹುಮಾನ ಲಭ್ಯವಾಗುತ್ತದೆ. (ಇನ್ನು ರಾಜ್ಯಸಭೆಯ ಸದಸ್ಯರ ಸಂಖ್ಯೆ ೨೫೦. ಇವರಿಗೂ ಸಹ ಇಷ್ಟೇ ವೇತನ ಹಾಗು ಇಷ್ಟೇ ಭತ್ತೆ ಇರಬಹುದಲ್ಲವೆ?)

ಇದಲ್ಲದೆ ಲೋಕಸಭೆಯಲ್ಲಿ  ಮತದಾನ ಮಾಡುವಾಗ ಅಡ್ಡಮತ ನೀಡಲು, ವಿಶ್ವಾಸಮತ ನೀಡಲು ಲಂಚ ಸ್ವೀಕರಿಸಿದ ಉದಾಹರಣೆಗಳು ನಮ್ಮ ಎದುರಿಗಿವೆ. ಪ್ರಶ್ನೆ ಕೇಳುವ ಸಲುವಾಗಿ ಕೆಲವು ಸದಸ್ಯರು ಆಸಕ್ತ ಉದ್ದಿಮೆಪತಿಗಳಿಂದ ಲಂಚ ಪಡೆಯುತ್ತಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಒಟ್ಟಿನಲ್ಲಿ ಲೋಕಸಭೆಯ ಸದಸ್ಯನಾಗಿರುವದು ಅತ್ಯಂತ ಲಾಭದಾಯಕ ಧಂಧೆಯಂತೆ ಭಾಸವಾಗುತ್ತದೆ. ಈ ಧಂಧೆಯಲ್ಲಿಯ ಅತ್ಯಂತ ಆಕರ್ಷಕ ಅಂಶವೆಂದರೆ, ಲೋಕಸಭೆಯಲ್ಲಿ ಪಡೆದ ಲಂಚವು ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ಕೊಟ್ಟುಬಿಟ್ಟಿದೆ. (ಸೋರೇನ ಶಿಬು ಮತ್ತು ನರಸಿಂಹರಾವ ಪ್ರಕರಣ.)

ಕಳ್ಳಧಂಧೆ ಮಾಡುವದರಲ್ಲಿ ಹೆಸರು ಮಾಡಿದ ಅನೇಕ ವ್ಯಕ್ತಿಗಳಿದ್ದಾರೆ: ಹಾಜಿ ಮಸ್ತಾನ, ಛೋಟಾ ಶಕೀಲ, ವೀರಪ್ಪನ್ ಇತ್ಯಾದಿ. ಕಾಯದೆಯ ಕೈಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವು ಅಪರಾಧಿಗಳು ಭಾರತೀಯ ಅಪರಾಧಿಗಳ ಸ್ವರ್ಗವಾದ ದುಬೈಯಲ್ಲಿ ನೆಲಸಿದ್ದಾರೆ. ಕೆಲವರು ಮುಖಾಮುಖಿಯಲ್ಲಿ ನೆಗೆದು ಹೋಗಿದ್ದಾರೆ. ಲೋಕಸಭೆಯ ಸದಸ್ಯರಿಗೆ ಮಾತ್ರ ಇಂತಹ ಯಾವುದೇ risk ಇಲ್ಲ. ಲೋಕಸಭೆಯಲ್ಲಿ ಘಟಿಸಿದ ಇವರ ಆರ್ಥಿಕ ಅಪರಾಧಗಳು ಭಾರತೀಯ ದಂಡಸಂಹಿತೆಯ ಅಡಿಯಲ್ಲಿ ಗಣನೆಗೆ ಬರುವದಿಲ್ಲ. ಇತರ ಕೆಲವು ಕ್ಷುಲ್ಲಕ ಅಪರಾಧಗಳಿಗಾಗಿ (ಉದಾ: ರೇಪ್, ಕೊಲೆ, ಅಪಹರಣ ಇ.) ಇವರು ಜೇಲಿನಲ್ಲಿ ಇರಬೇಕಾದರೂ ಸಹ, ಅಲ್ಲಿ ಅವರಿಗೆ ಸ್ವರ್ಗಸೌಲಭ್ಯಗಳು ಲಭ್ಯವಿರುತ್ತವೆ. ೨೦೦೪ರ ಲೋಕಸಭೆಯಲ್ಲಿ ೧೨೦ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದವು. ಆದುದರಿಂದ ನಮ್ಮ ಲೋಕಸಭೆಗೆ ‘ಅಪರಾಧಿಸಭಾ’ ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ.

ಲೋಕಸಭೆಯ ಸದಸ್ಯರಿಗಾಗಿ ರೂ.೮೦ ಸಾವಿರಕ್ಕಿಂತ ಹೆಚ್ಚಿನ ಮಾಸಿಕ ವೇತನವಿರಬೇಕು ಎನ್ನುವದು ಸನ್ಮಾನ್ಯ ಸದಸ್ಯರಾದ ಲಾಲೂ ಪ್ರಸಾದ ಯಾದವರ ಒತ್ತಾಯ. ಯಾಕೆಂದರೆ ಸರಕಾರದ ಕಾರ್ಯದರ್ಶಿಗಳು  ರೂ.೮೦ ಸಾವಿರಕ್ಕಿಂತ ಹೆಚ್ಚಿನ ಮಾಸಿಕ ವೇತನ ಪಡೆಯುತ್ತಾರಂತೆ. ಲೋಕಸಭಾ ಸದಸ್ಯರ ದರ್ಜೆಯು ಸರಕಾರದ ಕಾರ್ಯದರ್ಶಿಗಳ ದರ್ಜೆಗಿಂತ ಹೆಚ್ಚಿನದಾಗಿರುವದರಿಂದ, ಇವರಿಗೆ ಮಾಸಿಕ ರೂ.೮೦ ಸಾವಿರಕ್ಕಿಂತ ಹೆಚ್ಚಿಗೆ ವೇತನ ಬೇಕಂತೆ. ಅಲ್ಲಾ ಸ್ವಾಮಿ, ಸರಕಾರದ ಕಾರ್ಯದರ್ಶಿಗಳು ಭಾರತೀಯ ಆಡಳಿತಾತ್ಮಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದಂತಹ ಪ್ರತಿಭಾವಂತರಾಗಿರುತ್ತಾರೆ. ದಯವಿಟ್ಟು ನಿಮ್ಮನ್ನು ಅವರ ಜೊತೆಗೆ ಹೋಲಿಸಿಕೊಳ್ಳಬೇಡಿ. ಲೋಕಸಭಾ ಸದಸ್ಯರಿಗೂ ಸಹ ಒಂದು common entrance test ಇಟ್ಟರೆ ನಿಮ್ಮ ಹೂರಣ ಹೊರಬೀಳುತ್ತದೆ. ಈ ಪರೀಕ್ಷೆಯಲ್ಲಿ ಎಷ್ಟು ಅಭ್ಯರ್ಥಿಗಳು ಪ್ರಾಮಾಣಿಕವಾಗಿ ತೇರ್ಗಡೆ ಹೊಂದುತ್ತಾರೆ ಎನ್ನುವದು ಚರ್ಚಾತ್ಮಕ ವಿಷಯ!

ಆಶೆಬುರುಕತನ ತೋರಿಸುವ ಇಂತಹ ಶಾಸಕರಿಗೆ ನಾವು ಮತ ನೀಡಬೇಕೆ? ವೇತನ ಹೆಚ್ಚಿಸಿಕೊಳ್ಳಲು ಮತ ನೀಡಿದ ಯಾವ ಶಾಸಕನಿಗೂ ಮುಂದಿನ ಚುನಾವಣೆಯಲ್ಲಿ ನಾನು ಮತ ನೀಡಲಾರೆ. ಇಂತಹ ‘ಶಾಸಕ-ತಿರಸ್ಕಾರ’ ಚಳುವಳಿಯು ನಮ್ಮ ದೇಶದಲ್ಲಿ ರೂಪಗೊಳ್ಳಬೇಕು. ಶಾಸಕಾಂಗಕ್ಕೆ ಪರಮೋಚ್ಚ ಅಧಿಕಾರವಿದೆ ಎಂದು ಶಾಸಕರು ಹೇಳುತ್ತಾರೆ. ಪರಮೋಚ್ಚ ಅಧಿಕಾರವಿರುವದು ನಾಗರಿಕರಿಗೆ ಎನ್ನುವದನ್ನು ಪ್ರಜ್ಞಾವಂತ ನಾಗರಿಕರು ತೋರಿಸಿ ಕೊಡಬೇಕು.

ಮಹಾತ್ಮಾ ಗಾಂಧೀಜಿಯವರನ್ನು ೩೦ ಜನೆವರಿ ೧೯೪೮ರಂದು ನಾಥೂರಾಮ ಘೋಡಸೆ ಗುಂಡಿಟ್ಟು ಕೊಂದ ಎಂದು ಹೇಳುತ್ತಾರೆ. ಇದು ತಪ್ಪು ಹೇಳಿಕೆ. ನಮ್ಮ ಶಾಸಕರು ರಾಷ್ಟ್ರಪಿತನನ್ನು ಪ್ರತಿದಿನವೂ ಕೊಲ್ಲುತ್ತಿದ್ದಾರೆ.

ಹೇ ರಾಮ್!

Thursday, August 19, 2010

"ಇದು ನಿನ್ನದೇ ಮನೆ !". . . . . ಸುಶೀಲಾ ಬಾಪಟ

ಮದುವೆಯ ನಂತರ ಮೊದಲ ಸಲ, ಅತ್ತೆಯ ಮನೆಗೆ ಹೊರಡಲು ಸಿದ್ಧಳಾದ ಮಗಳನ್ನು ಬೀಳ್ಕೊಡುವಾಗ, ಅವಳ ತಾಯಿಯ ಮನಸ್ಸಿನಲ್ಲಿ ಮೂಡುವ ಭಾವನೆಗಳು ಹೇಗಿರಬಹುದು? ಇಂತಹ ಪ್ರಸಂಗವನ್ನು ವರ್ಣಿಸುವ ಕವನವೊಂದನ್ನು ಮರಾಠಿಯ ಪ್ರಸಿದ್ಧ ಕವಯಿತ್ರಿ ಸುಶೀಲಾ ಬಾಪಟ ಎನ್ನುವವರು ಸುಮಾರು ಐವತ್ತು ವರ್ಷಗಳ ಹಿಂದೆ ರಚಿಸಿದರು.
ಈ ಕವನದ ಒಂದು ಪ್ರತಿ ಇತ್ತೀಚೆಗೆ ನನ್ನ ತಂಗಿ ಶ್ರೀಮತಿ ಅರುಣಾ ಗಲಗಲಿ ಇವಳಿಗೆ ಲಭ್ಯವಾಯಿತು. ಅದರ ಮೊದಲ ಭಾಗದ ಸ್ವಲ್ಪಾಂಶ ನಷ್ಟವಾಗಿತ್ತು. ಕವನದಿಂದ ಪ್ರಭಾವಿತಳಾದ ಅರುಣಾ ಆ ಕವನದ ಪ್ರತಿಯೊಂದನ್ನು ನನಗೆ ಕಳುಹಿಸಿಕೊಟ್ಟಳು. ಈ ಕವನವನ್ನು ಕನ್ನಡಕ್ಕೆ ಅನುವಾದಿಸಿ ಕೊಡಲು ನಾನು ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ ಇವರಿಗೆ ಬಿನ್ನವಿಸಿದೆ. ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ ಇವರು ಕನ್ನಡ ಹಾಗು ಮರಾಠಿ ಎರಡೂ ಭಾಷೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದವರು. ಮರಾಠಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದವರು. ರಾಧಾ ಹಾಗು ಶ್ಯಾಮರಾವ ದಂಪತಿಗಳು ಧಾರವಾಡದ ನಿವಾಸಿಗಳು, ಇಬ್ಬರೂ ಸಾಹಿತ್ಯಪ್ರಿಯರು ಹಾಗು ಲೇಖಕರು. ನನ್ನ ವಿನಂತಿಗೆ ಮನ್ನಣೆ ಕೊಟ್ಟು, ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ ತ್ವರಿತವಾಗಿ ಕವನದ ಭಾವಾನುವಾದವನ್ನು ಮಾಡಿಕೊಟ್ಟರು. ಅವರಿಗೆ ನನ್ನ ಅನೇಕ ಧನ್ಯವಾದಗಳು. ಅದರಂತೆ ಈ ಸುಂದರ ಕವನವನ್ನು ನನಗೆ ಒದಗಿಸಿದ ತಂಗಿ ಅರುಣಾಳಿಗೂ ಅನೇಕ ಧನ್ಯವಾದಗಳು.
‌‌‌‌‌‌‌‌‌‌‌‌‌‌‌‌‍^^^^^^^^^^^^^^^^^^^^^^^^^^^^^^^^^^^^^^^^^
ಈ ಕವನವನ್ನು ಮೊದಲು ಮೂಲ ಮರಾಠಿಯಲ್ಲಿ, ಬಳಿಕ ಕನ್ನಡ ರೂಪದಲ್ಲಿ ಕೆಳಗೆ ಕೊಡಲಾಗಿದೆ.

ಮರಾಠಿ ಮೂಲ: ‘ಹೇ ಘರ ತುಝsಚ ಆಹೆ !’
. . . . . . . . . . . . . . . . . . . . . . . . .
ಛಾಲ್ಯಾವರ ಮೋಠೆ ಪಣ್ಯಾಚ ನಾವ ಘೇವೂನ
ಪಣ ಕಧೀ ಲಹಾನ ವ್ಹಾವೇಸೆ ವಾಟಲೇ ನಾ
ತರ ಯೇ, ಹೇ ಘರ ತುಝsಚ ಆಹೆ!.

ಆಜ ತೂ ವೇಗಳೀಚ ದಿಸತೇ ಆಹೇಸ,
ಡೋಳ್ಯಾ⁰ತ ಸ್ವಪ್ನೇ ತರಳತ ಆಹೇತ,
ಏಕ ನವೀನ ಘರ ಆಪಲೇಸೆ ಕರಣ್ಯಾಚೀ,
ಪತ್ನೀ, ಸೂನ, ನಾತಸೂನ, ವಹಿನೀ……
ನವ್ಯಾ ನಾತ್ಯಾ⁰ಚಾ ನವ್ಯಾ ಭೂಮಿಕಾ,
ತನ್ಮಯತೇನೆ ಸಾಕಾರಣಾರ ಆಹೇಸ.
ಪಣ ಕಧೀ ವಾಟಲೇ ತುಲಾ
ಕೀ ಫಕ್ತ ಏಕ ಲಹಾನ ಮುಲಗೀ ವ್ಹಾವೇ
ತರ ಯೇ, ಹೇ ಘರ ತುಝsಚ ಆಹೆ!.

ಏಕ ನವೇ ವಿಶ್ವ ತುಲಾ ಖುಣಾವತೇ ಆಹೇ
ತಿಥೇ ನವೀ ಆಹ್ವಾನೇ ಆಹೇತ
ಪರಿಶ್ರಮಾನಿ ಫುಲಣಾರ ಸೌಖ್ಯಾಚೇ ಮಳೇ ಆಹೇತ
ಯಾ ನವನವ್ಯಾ ಕ್ಷಿತಿಜಾಕಡೇ ವಾಟಚಾಲ ಕರತಾನಾ
ಕ್ಷಣಭರ ಥಂಬಕೂನ ಆಯೀಚ್ಯಾ ಕುಶೀತ ಶಿರಾವೇಸೆ ವಾಟಲೇ ನಾ
ತರ ಯೇ, ಹೇ ಘರ ತುಝsಚ ಆಹೆ!.

ತೂ ಹೋಯೀಲ ಸ್ವಾಮಿನೀ ಕುಣಾಚ್ಯಾ ಹೃದಯಾಚೀ
ಪುರವಶೀಲ ಕೋಡಕೌತುಕ, ಲಾಡ, ಹಟ್ಟ ಅನೇಕಾ⁰ಚೇ
ಪೂರ್ಣ ಕರಶೀಲ ಕರ್ತವ್ಯೇ ಆಣಿ ಕಾಮನಾ ಸಾಜ್ಯಾ⁰ಚಾ
ಪಣ ತುಲಾಚ ಕಧೀ ವಾಟಲೇ ಕೀ ಹಟ್ಟ ಕರಾವಾ ಥೋಡಾಸಾ…
ತರ ಯೇ, ಹೇ ಘರ ತುಝsಚ ಆಹೆ!.

ತೂ ಹಿಂಡಶೀಲ ಕಿತೀತರೀ ದೇಶವಿದೇಶ
ಚಾಖೂನ ಬಧಶೀಲ ನಾನಾ ಪರೀಚ್ಯಾ
ಪಂಚತಾರಾಂಕಿತ ಪಾಕಕೃತೀ
ಪಣ ಕಧೀತರೀ ವಾಟಲೇ ಕೀ ಖಾವಾ
ಕುಣೀತರೀ ಕಾಲವೂನ ದಿಲೇಲಾ ವರಣಭಾತ
ತರ ಯೇ, ಹೇ ಘರ ತುಝsಚ ಆಹೆ!.

ನವ್ಯಾ ಘರಾಚ್ಯಾ ಉಂಬರಠ್ಯಾವರಚೇ
ಮಾಪ ಓಲಾಡತಾನಾ ಆಠವಣ ಠೇವ. . . . .
ಕೀ ಏಕ ಜುನೇ ಘರ ತುಝ್ಯಾ ವಾಟೇಕಡೇ
ನೇಹಮೀಚ ಡೋಳೇ ಲಾವೂನ ಬಸಲೇಲೆ ಆಹೇ!

ಕನ್ನಡ ಅನುವಾದ: ‘ಇದು ನಿನ್ನದೇ ಮನೆ !’

“. . . . . . . . . . . . . . . . .
ನೋಡನೋಡುತ್ತ ದೊಡ್ಡ ಹೆಸರು !
ದೊಡ್ಡವಳಾಗಿದ್ದಿ ಇಂದು !!
ಯಾವತ್ತಾದರೂ ಎನಿಸಿದರೆ ನಿನಗೆ
‘ಮತ್ತೊಮ್ಮೆ ಚಿಕ್ಕ ಹುಡುಗಿಯಾಗಬೇಕು’ ಎಂದು 
ಬಾ ಇಲ್ಲಿ, ಇದು ನಿನ್ನದೇ ಮನೆ!

ಇಂದು ನೀ ಬೇರೆಯೇ ಕಾಣುತ್ತಿರುವಿ,
ತೇಲುತ್ತಿವೆ ಕಣ್ಣಲ್ಲಿ ಕನಸುಗಳು!
ಒಂದು ಹೊಸ ಗೂಡನ್ನು
ತನ್ನದಾಗಿಸುವ ತವಕ. .
ಪತ್ನಿ, ಸೊಸೆ, ಕಿರಿಸೊಸೆ, ವೈನಿ;
ಹೊಸ ಸಂಬಂಧಗಳು,ಹೊಸ ಪಾತ್ರಗಳು
ತನ್ಮಯತೆಯಲ್ಲಿ ಸಾಕಾರಗೊಳಿಸಲಿಹೆ. . .
ಆದರೆ ಅನಿಸಿದರೆ ನಿನಗೆ ಯಾವಾಗಲಾದರೂ
ಚಿಕ್ಕ ಹುಡುಗಿಯಾಗಬೇಕು ಮೊದಲಿನಂತೆ,
ಬಾ ಇಲ್ಲಿ, ಇದು ನಿನ್ನದೇ ಮನೆ !

ಒಂದು ಹೊಸ ವಿಶ್ವ ನಿನಗೆ ಮಾಡುತಿದೆ ಸನ್ನೆ,
ಹೊಸ ಆಹ್ವಾನಗಳಿವೆ ಅಲ್ಲಿ,
ಸಂತಸದಿ, ಪರಿಶ್ರಮದಿ ಅರಳಿದ ಹೂದೋಟಗಳು !!
ಆ ಹೊಸ ಕ್ಷಿತಿಜದತ್ತ ಸಾಗುವಾಗ ದಣಿದು
ವಿರಮಿಸಬೇಕೆನಿಸುತ್ತದೆಯೆ ಒಂದು ಕ್ಷಣ?
ತಾಯ ಮಡಿಲಲ್ಲಿ?
ಬಾ ಇಲ್ಲಿ, ಇದು ನಿನ್ನದೇ ಮನೆ !

ನೀನಿಂದು ಒಡತಿ ಬೇರೊಂದು ಹೃದಯಕೆ,
ಪೂರೈಸುವೆ ಅವರ ಆಶೆ, ಆಕಾಂಕ್ಷೆ, ಹಠ, ಅಪೇಕ್ಷೆಗಳ
ಎಲ್ಲರ ಮನೋಕಾಮನೆಗಳ, ಕರ್ತವ್ಯಗಳ ಪೂರ್ತಿಗೊಳಿಸುತ
ಅನಿಸಬಹುದಲ್ಲವೆ ನಿನಗೂ
ಹಠ ಮಾಡಬೇಕೆಂದು ಸ್ವಲ್ಪ?
ಬಾ ಆಗ, ಇದು ನಿನ್ನದೇ ಮನೆ !

ಹಾಯಾಗಿ ಹಾರಾಡುವಿ ದೇಶ ವಿದೇಶಗಳ,
ಸವಿಯುತ್ತ ಪಂಚತಾರಾ ಹೊಸ ರುಚಿಗಳ.
ಎಂದಾದರೂ ಅನಿಸಿದರೆ ನಿನಗೆ ಉಣಬೇಕೆಂದು
ಯಾರಾದರೂ ಕಲಿಸಿಕೊಟ್ಟ ಕೈಬುತ್ತಿಯನ್ನು
ಬಾ ಇಲ್ಲಿ, ಇದು ನಿನ್ನದೇ ಮನೆ !

ಹೊಸ ಮನೆಯ ಹೊಚ್ಚಲಲಿ ಪಡಿಯನ್ನು ಚಿಮ್ಮುತ್ತ
ಹೆಜ್ಜೆಯನು ಇಡುವಾಗ ಒಳಗೆ,
ನೆನಪಿಟ್ಟುಕೊ, ಇಲ್ಲಿದೆ ಒಂದು ಹಳೆಯ ಮನೆ
ತನ್ನ ಕಣ್ಣುಗಳ ಅನವರತ
ನಿನ್ನದೇ ದಾರಿಯಲಿ ನೆಟ್ಟು!
‌‌‌‌‌‌‌‌‌‌^^^^^^^^^^^^^^^^^^^^^^^^^^^^^^^^^^^
ಮೂಲ ಲೇಖಕಿ: ಶ್ರೀಮತಿ ಸುಶೀಲಾ ಬಾಪಟ
ಭಾವಾನುವಾದ: ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ
^^^^^^^^^^^^^^^^^^^^^^^^^^^^^^^^^^^^^^

Friday, August 6, 2010

ಜಗನ್ನಾಥ ಪಂಡಿತ…………ಗಂಗಾಲಹರಿ

ಬೇಂದ್ರೆಯವರು ಕಾಶಿ ಕ್ಷೇತ್ರಕ್ಕೆ ಹೋದಾಗ, ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ‘ಗಂಗಾಷ್ಟಕ’ ಎನ್ನುವ ಕವನವನ್ನು ರಚಿಸಿದರು. ಆ ಕವನದಲ್ಲಿಯ ಒಂದು ನುಡಿ ಹೀಗಿದೆ:

‘ರಾಜರಮಣಿಯರೆದೆಗೆ ಬೆಳಗಿನಲ್ಲುಳಿದಂಥ ಕಸ್ತೂರಿ ಬಿದ್ದು ಕೆಳಕೆ
ಮೈತೊಳೆದ ನೀರಿನೊಡ ಗಂಗೆಯಲಿ ಕೂಡಿದರೆ ಮುಕ್ತಿ ಕಸ್ತೂರಿ ಮೃಗಕೆ’
 ---ಹೀಗೆ ಹಾಡಿದ ಕವಿಯ ನಂಬಿ ನಿನ್ನಲ್ಲಿ ಮಿಂದೆ; ನಾನವನ ಬಟ್ಟೆಯವನು
ನನ್ನ ತಾಯಿಗೆ ಮುಕ್ತಿ ಮಿಂದಂದೆಯಾಗಿತ್ತು; ನಾನವಳ ಹೊಟ್ಟೆಯವನು.

ಈ ನುಡಿಯ ಮೊದಲೆರಡು ಸಾಲುಗಳು ಕವಿ ಜಗನ್ನಾಥ ಪಂಡಿತನ ‘ಗಂಗಾಲಹರಿ’ ಕಾವ್ಯದಿಂದ ಎತ್ತಿಕೊಂಡದ್ದು. ಸಂಸ್ಕೃತ ಕಾವ್ಯದ ಮೂಲಸಾಲುಗಳು ಹೀಗಿವೆ:

“ಪ್ರಭಾತೇ ಸ್ನಾಂತೀನಾಂ ನೃಪತಿ-ರಮಣೀನಾಂ ಕುಚತಟೀ-
ಗತೋ ಯಾವನ್ ಮಾತರ್ ಮಿಲತಿ ತವ ತೋಯೈರ್ಮೃಗಮದ:
ಮೃಗಾಸ್ತಾವದ್ ವೈಮಾನಿಕ ಶತಸಹಸ್ರೈಃ ಪರಿವೃತಾಃ
ವಿಶಂತಿ ಸ್ವಚ್ಛಂದಂ ವಿಮಲವಪುಷೋ ನಂದನವನಮ್”

ಈ ನುಡಿಯ ಭಾವಾರ್ಥ ಹೀಗಿದೆ:
ರಾಜಸ್ತ್ರೀಯರು ಸುಗಂಧಕ್ಕಾಗಿ ಕಸ್ತೂರಿ ಮೃಗದ ಮದವನ್ನು ಪೂಸಿಕೊಂಡಿರುತ್ತಾರೆ. ಬೆಳಗಿನಲ್ಲಿ ಆ ಸ್ತ್ರೀಯರು ಗಂಗಾಸ್ನಾನವನ್ನು ಮಾಡಿದಾಗ ಈ ಮದವು ಗಂಗಾನದಿಯ ನೀರಿನಲ್ಲಿ ಸೇರಿಕೊಳ್ಳುತ್ತದೆ.ಈ ಮದವನ್ನು ನೀಡಿದ ಕಸ್ತೂರಿ ಮೃಗಕ್ಕೆ ಸ್ವರ್ಗಪ್ರಾಪ್ತಿಯಾಗಲು ಇಷ್ಟೇ ಸಾಕು. ಅದು ವಿಮಲದೇಹದೊಂದಿಗೆ ನಂದನವನದಲ್ಲಿ ವಿಹರಿಸುತ್ತದೆ.

ಬೇಂದ್ರೆಯವರು ತಾವೂ ಸಹ ಕವಿಯಾದುದರಿಂದ, ಜಗನ್ನಾಥ ಪಂಡಿತನ ಕಾವ್ಯದ ಅಭಿಮಾನಿಯಾದುದರಿಂದ, ಏಕಲವ್ಯನಂತೆ ಅವನ ಮಾನಸಿಕ ಶಿಷ್ಯರಾದದ್ದರಿಂದ, ’ನಾನವನ ಬಟ್ಟೆಯವನು’ ಎಂದು ಹೇಳುತ್ತಾರೆ. ಬಟ್ಟೆ ಎಂದರೆ ಮಾರ್ಗ, ಪಥ ಎಂದರ್ಥ. ಕವಿ ಜಗನ್ನಾಥ ನಡೆದ ಹಾದಿಯಲ್ಲಿ ನಡೆದೇ ಬೇಂದ್ರೆಯವರು ‘ಗಂಗಾವತರಣ’ ರಚಿಸಿದರು.

ಕಸ್ತೂರಿ ಮೃಗದಿಂದ ಹುಟ್ಟಿದ ಮದವು ಗಂಗೆಯಲ್ಲಿ ಸೇರಿದಾಗ, ಆ ಮೃಗಕ್ಕೆ ಸ್ವರ್ಗಪ್ರಾಪ್ತಿಯಾಯಿತು ಎಂದು ಜಗನ್ನಾಥ ಪಂಡಿತ ಕವನಿಸಿದ್ದಾನೆ. ಅದೇ ರೀತಿಯಲ್ಲಿ, ತಾವು ಗಂಗೆಯಲ್ಲಿ ಮಿಂದದ್ದರಿಂದ, ತಮ್ಮ ತಾಯಿಗೂ ಸ್ವರ್ಗಪ್ರಾಪ್ತಿಯಾಗಬೇಕು ಎನ್ನುವದು ಬೇಂದ್ರೆಯವರ ಆಶಯ.

ಬೇಂದ್ರೆಯವರಿಗೆ ಈ ರೀತಿ ಸ್ಫೂರ್ತಿ ನೀಡಿದ ಜಗನ್ನಾಥ ಪಂಡಿತನು ಸಂಸ್ಕೃತದ ಉದ್ದಾಮ ಪಂಡಿತ ಹಾಗು ಕವಿ. ಈತನು ಮೊಗಲ ಬಾದಶಹರಾದ ಜಹಾಂಗೀರ, ಶಹಾಜಹಾನ ಹಾಗು ಔರಂಗಜೇಬ ಇವರ ಕಾಲದಲ್ಲಿ ಜೀವಿಸಿದ್ದನು.

ಜಗನ್ನಾಥನ ಹುಟ್ಟೂರು ಆಂಧ್ರಪ್ರದೇಶದ ವೆಂಗಿನಾಡು. ತಾಯಿ ಲಕ್ಷ್ಮೀ ಹಾಗು ತಂದೆ ಪೇರುಭಟ್ಟ. ತಂದೆಯಿಂದಲೇ ಶಿಕ್ಷಣ ಪಡೆದ ಈತನು ತನ್ನ ಅಪ್ರತಿಮ ಪಾಂಡಿತ್ಯದಿಂದ ಅನೇಕ ವಿದ್ವಾಂಸರನ್ನು ವಾದದಲ್ಲಿ ಜಯಿಸಿದ. ಇವನೊಡನೆ ವಾದಿಸಲು ಯಾರೂ ಮುಂದಾಗದಿರಲು, ‘ನಖಾನಾಂ ಪಾಂಡಿತ್ಯಂ ಪ್ರಕಟಯತು ಕಸ್ಮಿನ್?’ ಎಂದು ಅಬ್ಬರಿಸಿದ. ಸಿಂಹದ ಶೌರ್ಯವಿರುವದು ಅದರ ನಖ(=ಉಗುರು)ಗಳಲ್ಲಿ. ತಾನೂ ಸಹ ಆ ಸಿಂಹದಂತೆ;  ಇತರ ವಿದ್ವಾಂಸರನ್ನು ಸಿಗಿದು ಹಾಕುವ ಈತನ ಪಾಂಡಿತ್ಯಕ್ಕೆ ಈಗ ಬಲಿಯೇ ಸಿಗುತ್ತಿಲ್ಲವಲ್ಲ ಎನ್ನುವದು ಈ ಗರ್ಜನೆಯ ತಾತ್ಪರ್ಯ. ಜಗನ್ನಾಥನು ಅನೇಕ ಪ್ರಾಚೀನ ವಿದ್ವಾಂಸರ ಶಾಸ್ತ್ರೀಯ ಸಿದ್ಧಾಂತಗಳನ್ನು ಖಂಡಿಸಿ ಉದ್ಗ್ರಂಥಗಳನು ರಚಿಸಿದ. `ಸಿದ್ಧಾಂತ ಕೌಮುದೀ’ ಎನ್ನುವ ಗ್ರಂಥಕ್ಕೆ ಭಟ್ಟೋಜಿ ದೀಕ್ಷಿತರು ಬರೆದ ‘ಮನೋರಮಾ’ ಎನ್ನುವ ವ್ಯಾಖ್ಯಾನಗ್ರಂಥಕ್ಕೆ ಪ್ರತಿಯಾಗಿ ‘ಮನೋರಮಾ ಕುಚಮರ್ದಿನೀ’ ಎನ್ನುವ ಗ್ರಂಥರಚನೆಯನ್ನು ಈತ ಮಾಡಿದ್ದನ್ನು ನೋಡಿದರೆ, ಈತನ ಉದ್ಧಟ ಪಾಂಡಿತ್ಯದ ಅರಿವಾಗದಿರದು.

ಏನಾದರೇನು, ಈತನ ದಾರಿದ್ರ್ಯ ಮಾತ್ರ ಹಿಂಗಲಿಲ್ಲ. ಆದುದರಿಂದ ಜಗನ್ನಾಥನು ರಜಪುತಾನಾದಲ್ಲಿರುವ ಜಯಪುರಕ್ಕೆ ಬಂದು, ಅಲ್ಲಿಯ ರಾಜನ ಆಶ್ರಯದಲ್ಲಿ ನೆಲೆ ನಿಂತ. ಜಯಪುರದಲ್ಲಿ ಓರ್ವ ಮುಸಲ್ಮಾನ ಧರ್ಮಗುರು ಅಲ್ಲಿಯ ಹಿಂದೂ ಪಂಡಿತರನ್ನೆಲ್ಲ ವಾದದಲ್ಲಿ ಸೋಲಿಸಿದ್ದ. ಜಗನ್ನಾಥನು ಅರಬ್ಬಿ ಭಾಷೆಯನ್ನು ಅಭ್ಯಾಸ ಮಾಡಿ ಆ ಯವನ ಪಂಡಿತನೊಡನೆ ವಾದಗೈದು, ಆತನನ್ನು ಸೋಲಿಸಿದ ಬಳಿಕ, ಈತನ ಕೀರ್ತಿಯು ದಿಲ್ಲಿಯವರೆಗೂ ಹಬ್ಬಿತು. ಆ ಸಮಯದಲ್ಲಿ ದಿಲ್ಲಿಯ ಬಾದಶಹನಾದ ಜಹಾಂಗೀರನ ಆಮಂತ್ರಣದ ಮೇರೆಗೆ ಜಗನ್ನಾಥನು ದಿಲ್ಲಿಯ ದರಬಾರಿಗೆ ತೆರಳಿ, ಅಲ್ಪ ಸಮಯದಲ್ಲಿಯೇ ಬಾದಶಹನಿಗೆ ಆಪ್ತನಾದ. ಜಹಾಂಗೀರನ ನಿಧನದ ನಂತರ ಬಾದಶಹನಾದ ಶಹಾಜಹಾನನಿಗೂ ಸಹ ಜಗನ್ನಾಥನು  ಆಪ್ತಮಿತ್ರನೇ ಆಗಿದ್ದ. ಜಗನ್ನಾಥನ ಕಾವ್ಯಪಾಂಡಿತ್ಯವನ್ನು ಮೆಚ್ಚಿದ ಶಹಾಜಹಾನನು ಈತನಿಗೆ ‘ಕವೀಶ್ವರ’ ಎನ್ನುವ ಬಿರುದನ್ನು ನೀಡಿದ್ದ.

ಜಗನ್ನಾಥ ಪಂಡಿತ ಹಾಗು ಶಹಾಜಹಾನರು ರಾಜಮಂದಿರದಲ್ಲಿ ಒಮ್ಮೆ ಚದುರಂಗವಾಡುತ್ತ ಕುಳಿತಿದ್ದರು. ಆ ಸಮಯದಲ್ಲಿ ನೀರಡಿಸಿದ ಬಾದಶಹನಿಗೆ, ಓರ್ವ ತರುಣಿ ಚಿನ್ನದ ಹೂಜೆಯಲ್ಲಿ ನೀರು ನೀಡಿದಳು. ಆಟವಾಡುವ ಬದಲು, ಅವಳನ್ನೇ ನೋಡುತ್ತಲಿದ್ದ ಜಗನ್ನಾಥನಿಗೆ ಬಾದಶಹನು ಆ ತರುಣಿಯನ್ನು ವರ್ಣಿಸುವೆಯಾ ಎಂದು ತುಂಟಾಟದಲ್ಲಿ ಕೇಳಿದ. ಜಗನ್ನಾಥನು ಥಟ್ಟನೇ ನುಡಿದ ಆ  ಕವನವು ಹೀಗಿದೆ:

“ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ
ಕುಸುಂಭಾರುಣಂ ಚಾರು ಚೇಲಂ ವಸಾನಾ
ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತೀಮ್
ಗೃಹೀತ್ವಾ ಘುಟೇ ವಿನ್ಯಸ್ಯ ಯಾತೀವ ಭಾತಿ”

(ಅರುಣವರ್ಣದ ಬಟ್ಟೆಯನ್ನುಟ್ಟ, ತಲೆಯ ಮೆಲೆ ಕಳಶವನ್ನು ಹೊತ್ತ, ಈ ಪೀನಪಯೋಧರಿಯು ಸಮಸ್ತ ಲೋಕದ ಚೈತನ್ಯವನ್ನೇ ಹೊತ್ತು ತರುತ್ತಿರುವಂತೆ ಹೊಳೆಯುತ್ತಿದ್ದಾಳೆ.)

ಈ ವರ್ಣನೆಯನ್ನು ಕೇಳಿದ ಶಹಾಜಹಾನನು ಸಂತೋಷಗೊಂಡು ಕವಿಗೆ ಬಹುಮಾನ ಕೊಡಬಯಸಿದ. ಅವರೀರ್ವರ ನಡುವೆ ಆಗ ನಡೆದ ಸಂಭಾಷಣೆ ತುಂಬ ಸ್ವಾರಸ್ಯಕರವಾಗಿದೆ:
ಶಹಾಜಹಾನ:   ಕವೀಶ್ವರ, ನನ್ನ ಅರಮನೆಯ ಆನೆಗಳನ್ನೆಲ್ಲ ನಿನಗೆ ಸಮ್ಮಾನವಾಗಿ ಕೊಡುತ್ತೇನೆ.
ಜಗನ್ನಾಥ:      ‘ನ ಯಾಚೇ ಗಜಾಲೀಂ’ (ನನಗೆ ಆನೆಗಳ ಹಿಂಡು ಬೇಡ.)
ಶಹಾಜಹಾನ:    ನನ್ನ ಎಲ್ಲ ಕುದುರೆಗಳನ್ನು ನಿನಗೆ ಕೊಡುವೆ.
ಜಗನ್ನಾಥ:      ‘ನ ವಾ ವಾಜಿರಾಜೀಂ’ (ಕುದುರೆಗಳೂ ಬೇಡ.)
ಶಹಾಜಹಾನ:    ದಿಲ್ಲೀಶ್ವರನ ಸಕಲ ಸಂಪತ್ತನ್ನೇ ನಿನಗೆ ಕೊಡಲೆ?
ಜಗನ್ನಾಥ:      ‘ನ ವಿತ್ತೇಷು ಚಿತ್ತಂ ಮದೀಯಂ ಕದಾಪಿ’  
                 (ಸಂಪತ್ತನ್ನು ನಾನು ಎಂದೂ ಬಯಸುವದಿಲ್ಲ.)
ಶಹಾಜಹಾನ:    ಹಾಗಾದರೆ ನಿನಗೆ ಬೇಕಾದುದಾದರೂ ಏನು?
ಜಗನ್ನಾಥ:       ‘ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ’  (ಈ ಚೆಲುವೆ!)
ಶಹಾಜಹಾನ:    ‘ಅವಳು ನನ್ನ ಮಗಳು*, ‘ಲವಂಗಿ’!  (*ದಾಸೀಪುತ್ರಿ)
ಜಗನ್ನಾಥ:       ‘ಲವಂಗೀ ಕುರಂಗೀ ದೃಗಂಗೀಕರೋತು’  (ಈ ಚೆಲುವೆ ಲವಂಗಿ ನನ್ನವಳಾಗಬೇಕು.)

ಶಹಾಜಹನನು ಈ ಮದುವೆಯಿಂದ ಜಗನ್ನಾಥನಿಗೆ ಆಗಬಹುದಾದ ಸಮಸ್ಯೆಗಳ ಕಡೆಗೆ ಅವನ ಗಮನವನ್ನು ಸೆಳೆದ. ಆದರೆ ಜಗನ್ನಾಥನ ಬಯಕೆ ದೃಢವಾಗಿತ್ತು. ಜಗನ್ನಾಥ ಅರಮನೆಯ ಅಳಿಯನಾದ.

‘ಬೆಚ್ಚನಾ ಅರಮನೆಯು, ವೆಚ್ಚಕ್ಕೆ ಬಲು ಹೊನ್ನು
ಇಚ್ಚೆಯಾನರಿವ ಲವಂಗಿ ತಾ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಜಗನ್ನಾಥ!’

ಜಗನ್ನಾಥನ ಆಶ್ರಯದಾತ ಶಹಾಜಹಾನನನ್ನು ಆತನ ಮಗ ಔರಂಗಜೇಬನು ಬಂಧಿಸಿ ಆಗ್ರಾದಲ್ಲಿ ಸೆರೆಯಲ್ಲಿಟ್ಟ ಬಳಿಕ, ಜಗನ್ನಾಥನು ಅರಮನೆಯನ್ನು ತೊರೆದು ಅಲೆಯಬೇಕಾಯಿತು. ಲವಂಗಿಯು ಬೇಕಾದರೆ ರಾಜಕುಟುಂಬದವರ ಜೊತೆಗೇ ಉಳಿಯಬಹುದೆಂದು ಜಗನ್ನಾಥನು ಹೇಳಿದರೂ ಸಹ ಅವಳು ತನ್ನ ಪತಿಯನ್ನೇ ಅನುಸರಿಸಿದಳು. ಜಗನ್ನಾಥನು ಅಲ್ಲಿಂದ ಕಾಮರೂಪಕ್ಕೆ (ಇಂದಿನ ಅಸ್ಸಾಮ) ತೆರಳಿ, ಅಲ್ಲಿಯ ರಾಜನಾದ ಪ್ರಾಣನಾರಾಯಣನ ಆಶ್ರಯ ಪಡೆದ. ಔರಂಗಜೇಬನು ಕಾಮರೂಪವನ್ನೂ ಆಕ್ರಮಿಸಿದ್ದರಿಂದ, ಜಗನ್ನಾಥನದು ಮತ್ತೆ ಅಲೆಮಾರಿ ಜೀವನವಾಯಿತು.

ತನ್ನ ಯೌವನದಲ್ಲಿ ಪಂಡಿತಕುಲವನ್ನೆಲ್ಲ ಚಂಡಾಡಿದ, ಮುಸ್ಲಿಮ್ ದೊರೆಯ ಆಶ್ರಯದಲ್ಲಿದ್ದು ಮುಸ್ಲಿಮ್ ಯುವತಿಯನ್ನು ಮದುವೆಯಾದ ಜಗನ್ನಾಥ ಪಂಡಿತನಿಗೆ ಹಿಂದು ಧರ್ಮೀಯರಿಂದ ಬಹಿಷ್ಕಾರ ಶಿಕ್ಷೆ ಪ್ರಾಪ್ತವಾಯಿತು.

ಜಗನ್ನಾಥನಿಗೆ ಹಾಗು ಲವಂಗಿಗೆ ಈಗ ನಿಲ್ಲಲು ನೆರಳಿಲ್ಲ, ಬಾಯಾರಿಕೆ ತೀರಿಸಲು ಒಂದು ಬೊಗಸೆ ನೀರು ಸಹ ದೊರೆಯಲಿಲ್ಲ. ವ್ಯರ್ಥ ಅಲೆದಾಟದಿಂದ ಬಳಲಿದ ಗಂಡ ಹೆಂಡಿರು ಕಾಶಿಯಲ್ಲಿಯ ಗಂಗಾ ಘಾಟಿಗೆ ಬಂದು ಅಲ್ಲಿಯೇ ಸೋಪಾನದ ಮೇಲೆ ಮಲಗಿಕೊಂಡರು.

ಕಾಶಿಯಲ್ಲಿ ಅರುಣೋದಯದ ಸಮಯ. ಗಂಗಾಸ್ನಾನಕ್ಕಾಗಿ ಜನ ಬರುತ್ತಿದ್ದಾರೆ. ಕಾಶಿಯ ಪಂಡಿತಚಕ್ರವರ್ತಿಗಳಾದ, ಆಧ್ಯಾತ್ಮಗುರುಗಳಾದ ಅಪ್ಪಯ್ಯ ದೀಕ್ಷಿತರು ಸ್ನಾನ ಪೂರೈಸಿ ಬರುತ್ತಿದ್ದಾಗ, ಒಂದು ಸೋಪಾನದ ಮೇಲೆ ಹರಕು ಬಟ್ಟೆಯನ್ನೆ ಹೊದ್ದುಕೊಂಡು ನಿರ್ಲಜ್ಜರಂತೆ ಮಲಗಿದ ದಂಪತಿಯನ್ನು ನೋಡಿದರು. ಆ ಹರಕು ಬಟ್ಟೆಯೊಳಗಿಂದ ಕಂಡ ಬಿಳಿ ಕೂದಲಿನ ಪೊದೆ ಅವರನ್ನು ಮತ್ತಿಷ್ಟು ಕೋಪಗೊಳಿಸಿತು. ಆ ದಂಪತಿಯತ್ತ ತಾತ್ಸಾರದ ದನಿಯಲ್ಲಿ ದೀಕ್ಷಿತರು ಗುಡುಗಿದರು:
‘ಕಿಂ ನಿಃಶಂಕಂ ಶೇಷೇ ಶೇಷೇ ವಯಸಿ ತ್ವಮಾಗತೇ ಮೃತ್ಯೌ’
(ಇದೇನು, ಮರಣ ಸಮೀಪಿಸಿರುವ ಈ ಇಳಿ ವಯಸ್ಸಿನಲ್ಲಿ ನಿರ್ಲಜ್ಜೆಯಿಂದ ಮಲಗಿರುವಿರಲ್ಲ?)  

ಮಲಗಿಕೊಂಡಾತ ಮುಸುಕು ಸರಿಸಿದ. ಅಪ್ಪಯ್ಯ ದೀಕ್ಷಿತರು ತಬ್ಬಿಬ್ಬಾದರು. ತಮ್ಮ ಗ್ರಂಥಗಳನ್ನೆಲ್ಲ ಖಂಡಿಸಿ ಒಗೆದ, ತಮ್ಮ ಪರಮ ವಿರೋಧಿ ಜಗನ್ನಾಥ! ತೊದಲುತ್ತಲೇ ದೀಕ್ಷಿತರು ಮತ್ತೆ ನುಡಿದರು:
‘ಅಥವಾ ಸುಖಂ ಶಯೀಥಾ: ತವ ನಿಕಟೇ ಜಾಗರ್ತಿ ಜಾಹ್ನವೀ ಜನನೀ.’
( ಸರಿ ಸರಿ, ಸುಖವಾಗಿ ಮಲಗಿಕೊಳ್ಳಪ್ಪ; ನಿನ್ನ ಪಕ್ಕದಲ್ಲಿ ತಾಯಿ ಗಂಗಾದೇವಿ ಎಚ್ಚತ್ತೇ ಇದ್ದಾಳೆ.)

ಜಗನ್ನಾಥ ಪಂಡಿತನ ಪಾಲಿಗೆ ಇದು ಎಚ್ಚರಿಕೆಯ ಗಂಟೆಯಾಯಿತು. ತನ್ನ ಬಾಳಿನ ಕಲ್ಮಶಗಳನ್ನು ತೊಳೆಯಲು ಗಂಗಾದೇವಿಯೇ ಸಮರ್ಥಳೆಂದು ಭಾವಿಸಿದ ಜಗನ್ನಾಥ ಲವಂಗಿಯೊಡನೆ ಜಲಸಮಾಧಿಗೆ ಸಿದ್ಧನಾಗಿ, ಸೋಪಾನಗಳನ್ನು ಇಳಿಯತೊಡಗಿದ. ಆದರೆ ಸ್ನಾನಕ್ಕೆ ಬಂದಂತಹ ಅಲ್ಲಿಯ ಧರ್ಮನಿಷ್ಠರು ಈ ಪಾಖಂಡಿಯನ್ನು ಗಂಗಾಸ್ನಾನಕ್ಕೆ ಬರದಂತೆ ಪ್ರತಿಬಂಧಿಸಿದರು.

ಹತಾಶನಾದ ಜಗನ್ನಾಥ ನಿಂತಲ್ಲಿಯೇ ನಿಂತುಕೊಂಡು ಗಂಗಾದೇವಿಯ ಪ್ರಾರ್ಥನೆ ಮಾಡತೊಡಗಿದ. ಅದೇ ಜಗನ್ನಾಥನ ಪ್ರಸಿದ್ಧ ಕಾವ್ಯ:‘ಗಂಗಾಲಹರಿ’. ಇಲ್ಲಿಯವರೆಗೂ ಪಾಂಡಿತ್ಯದ ಕಾವ್ಯವನ್ನು ಸೃಷ್ಟಿಸಿದ್ದ ಜಗನ್ನಾಥ ಪಂಡಿತ, ಇದೀಗ ತನ್ನೆಲ್ಲ ಹಮ್ಮನ್ನು ತೊರೆದು, ಆರ್ತನಾಗಿ ಗಂಗಾದೇವಿಯನ್ನು ಭಕ್ತಿಯಿಂದ ಕೂಗಿ ಕರೆದ. ಇವನ ಒಂದೊಂದು ಶ್ಲೋಕಕ್ಕೂ ಒಂದೊಂದು ಮೆಟ್ಟಿಲೇರಿದ ಗಂಗೆ ಕೊನೆಯ ಅಂದರೆ ಐವತ್ತೆರಡನೆಯ ಶ್ಲೋಕಕ್ಕೆ ಇವನನ್ನು ಹಾಗು ಲವಂಗಿಯನ್ನು ತನ್ನಲ್ಲಿ ಸೆಳೆದುಕೊಂಡೊಯ್ದಳು. ಇದು ದಂತಕಥೆ ಇರಬಹುದು. ವಾಸ್ತವದಲ್ಲಿ ಗಂಗಾಪ್ರಾರ್ಥನೆಯ  ನಂತರ ಜಗನ್ನಾಥನು ಲವಂಗಿಯೊಡನೆ ಗಂಗೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು. ಒಟ್ಟಿನಲ್ಲಿ  ಹೀಗಿದೆ ಒಬ್ಬ ಉದ್ದಾಮ ಕವೀಶ್ವರ ಹಾಗು ಉದ್ಧಟ ಪಂಡಿತರಾಜನ ಜೀವನಕಥೆ!

ಜಗನ್ನಾಥ ಪಂಡಿತನ ಸಂಸ್ಕೃತ ಗಂಗಾಲಹರಿಯನ್ನು ಕನ್ನಡಕ್ಕೆ ತಂದವರು ಉಭಯಭಾಷಾ ವಿದ್ವಾಂಸರೂ, ಲೇಖಕರೂ ಆದ  ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರು.
ಮೂಲದ ಸಂಸ್ಕೃತ ಸೊಬಗನ್ನು ಕನ್ನಡಕ್ಕೆ ತರುವದರಲ್ಲಿ ಆಚಾರ್ಯರು ಯಶಸ್ವಿಯಾಗಿದ್ದಾರೆ. ಇದೇ ಪುಸ್ತಕದಲ್ಲಿ ಜಗನ್ನಾಥನ ಜೀವನಗಾಥೆಯನ್ನೂ ಸಹ ಅವರು ಬರೆದಿದ್ದಾರೆ. ಅದರ ಸಂಕ್ಷಿಪ್ತ ಅವತರಣಿಕೆಯನ್ನೇ ನಾನು ಮೇಲೆ ಕೊಟ್ಟಿದ್ದೇನೆ.

ಜಗನ್ನಾಥ ಪಂಡಿತನ ಸಂಸ್ಕೃತ ಗಂಗಾಲಹರಿಯ ಮೊದಲ ನುಡಿಯನ್ನು ಹಾಗು ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರ ಅನುವಾದವನ್ನು ಓದುಗರ ಅವಗಾಹನೆಗಾಗಿ ಕೆಳಗೆ ಕೊಡುತ್ತಿದ್ದೇನೆ:

ಮೂಲ:
ಸಮೃದ್ಧಂ ಸೌಭಾಗ್ಯಂ ಸಕಲ ವಸುಧಾಯಾ: ಕಿಮಪಿ ತನ್
ಮಹೈಶ್ವರ್ಯಂ ಲೀಲಾಜನಿತ ಜಗತಃ ಖಂಡಪರಶೋ:
ಶ್ರುತೀನಾಂ ಸರ್ವಸ್ವಂ ಸುಕೃತಮಥ ಮೂರ್ತಂ ಸುಮನಸಾಂ
ಸುಧಾಸೌಂದರ್ಯಂ ತೇ ಸಲಿಲಮಶಿವಂ ನಃ ಶಮಯತು.

ಅನುವಾದ:
ಜಗದ ಭಾಗ್ಯ, ಜನಕೆಲ್ಲ ಭೋಗ್ಯ, ಸೌಭಾಗ್ಯಪೂರ್ಣ ಸಿರಿಯು
ಲೀಲೆಯಿಂದ ಜಗಜನಿಪ ಶಿವನ ಐಸಿರಿಯು ದಿವ್ಯ ತೊರೆಯು
ವೇದಸಾರ ಸರ್ವಸ್ವ ದೇವಕುಲ ಪುಣ್ಯ ಮೂರ್ತಿಮಂತ
ಅಮೃತಕಾಂತಿ ಸವಿ ಸಲಿಲ ಸವೆಸಲಿದು ಅಶುಭಗಳನನಂತ.

‘ಗಂಗಾಲಹರಿ’ ಕಾವ್ಯವು ಗಂಗಾನದಿಯ ಪ್ರವಾಹದಂತೆಯೇ ಭೋರ್ಗರೆದಿದೆ. ಗಂಗಾಮಾತೆಯೇ ಕಾವ್ಯರೂಪ ತಾಳಿ ಗಂಗಾಲಹರಿಯಾಗಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದುದರಿಂದ ಗಂಗೆಯಲ್ಲಿ ಮಿಂದ ಅನುಭವವೇ ಗಂಗಾಲಹರಿಯನ್ನು ಓದಿದಾಗ ಸಹ ಆಗುವದು.

ಜಗನ್ನಾಥ ಪಂಡಿತನನ್ನು ಪಾವನಗೊಳಿಸಿದ ತಾಯಿ ಗಂಗೆ, ಗಂಗಾಲಹರಿಯ ಮೂಲಕ ನಮ್ಮನ್ನೂ ಅನುಗ್ರಹಿಸಲಿ.

Monday, August 2, 2010

ಕರಿಯ ಸಾಹೇಬರು

೧೮೩೫ರಲ್ಲಿ ಬ್ರಿಟನ್ನಿನ ಮೆಕಾಲೆ ಸಾಹೇಬರು ಹಿಂದುಸ್ತಾನವೆನ್ನುವ ತಮ್ಮ ವಸಾಹತುವಿನ ಬಗೆಗೆ ಕಂಡ ಕನಸುಹೀಗಿದೆ:

It is impossible for us, with our limited means, to attempt to educate the body of the people. We must at present do our best to form a class who may be interpreters between us and the millions whom we govern; a class of persons, Indian in blood and colour, but English in taste, in opinions, in morals, and in intellect. To that class we may leave it to refine the vernacular dialects of the country, to enrich those dialects with terms of science borrowed from the Western nomenclature, and to render them by degrees fit vehicles for conveying knowledge to the great mass of the population.
(-Minute on Indian Education)

ಹಿಂದುಸ್ತಾನವೆನ್ನುವ ತಮ್ಮ ವಸಾಹತುವಿನ ಬಗೆಗೆ ಬ್ರಿಟಿಶರಿಗೆ ಕೀಳು ಅಭಿಪ್ರಾಯವಿರುವದು ಸಹಜವೇ ಆಗಿದೆ. ಹೀಗಾಗಿ ಮೆಕಾಲೆ ಸಾಹೇಬರು ಹಿಂದುಸ್ತಾನದಲ್ಲಿ ‘ಕರಿಯ ಸಾಹೇಬ’ರನ್ನು ಹುಟ್ಟುಹಾಕಿ, ಈ ವಸಾಹತುವಿನ ಉದ್ಧಾರ ಮಾಡಬೇಕೆಂದು ಚಿಂತಿಸಿದ್ದರೆ, ಅದರಲ್ಲಿ ತಪ್ಪೇನೂ ಇರಲಿಕ್ಕಿಲ್ಲ. ಬ್ರಿಟಿಶ್ ಆಳಿಕೆಯಿದ್ದ ಅವಧಿಯಲ್ಲಿ, ಅನೇಕ ಹಿಂದುಸ್ತಾನಿಗಳೂ ಇದೇ ಅಭಿಪ್ರಾಯದವರು ಇದ್ದಿದ್ದಾರು.

ಕಾಲಾಂತರದಲ್ಲಿ ಬ್ರಿಟಿಶರಿಗೆ ತಮ್ಮ ತಪ್ಪು ಕಲ್ಪನೆಯ ಅರಿವಾಗಿರಬಹುದು. ಭಾರತೀಯ ಸಂಸ್ಕೃತಿಯ ಉದಾತ್ತ ಪ್ರತೀಕರಾದ ಸ್ವಾಮಿ ವಿವೇಕಾನಂದ, ಭಾರತೀಯ ಭಾಷೆ ಹಾಗು ಸಾಹಿತ್ಯದ ಶ್ರೇಷ್ಠತೆಯನ್ನು ಜಗತ್ತಿಗೆ ತೋರಿಸಿದ ಕವಿ ರವೀಂದ್ರನಾಥ ಠಾಕೂರ, ಶ್ರೇಷ್ಠ ವಿಜ್ಞಾನಿ ಜಗದೀಶಚಂದ್ರ ಬೋಸ ಇವರನ್ನಲ್ಲದೆ ಭಾರತಕ್ಕಾಗಿ ಜೀವ ಹಾಗು ಜೀವನವನ್ನೇ ಮುಡುಪಿಟ್ಟ ಚಂದ್ರಶೇಖರ ಆಜಾದ, ಭಗತ್ ಸಿಂಗ, ಲೋಕಮಾನ್ಯ ತಿಲಕ, ಸುಭಾಷಚಂದ್ರ ಬೋಸ, ಮಹಾತ್ಮಾ ಗಾಂಧಿ ಇವರನ್ನೆಲ್ಲ ಕಂಡ ಬ್ರಿಟಿಶರಿಗೆ ಮೆಕಾಲೆಯ ಮೂರ್ಖ ಅಹಂಕಾರದ ಅರಿವಾಗಿರಬಹುದು.

ಆದರೆ ಸ್ವತಂತ್ರ ಭಾರತದಲ್ಲಿಯೇ ಹುಟ್ಟಿದಂತಹ ಅನೇಕ ಭಾರತೀಯರು ಈಗಲೂ ಮೆಕಾಲೆಯ ವಂಶಸ್ಥರಂತೆ ವರ್ತಿಸುತ್ತಿರುವದು ಆಶ್ಚರ್ಯಕರವಾಗಿದೆ. ಈ ಆಂಗ್ಲವ್ಯಾಮೋಹಿಗಳನ್ನು ಕರಿಯ ಸಾಹೇಬರು ಎಂದು ಕರೆಯಬಹುದೆ? ಯಾಕೆಂದರೆ, ಇವರಿಗೆ ಪರದೇಶಿ ಜೀವನಶೈಲಿ, ಪರದೇಶಿ ಭಾಷೆ ಅಂದರೆ ಪ್ರಾಣಪ್ರಿಯ. ತಮ್ಮ ಮಟ್ಟಿಗೆ ಈ ವ್ಯಾಮೋಹ ಸೀಮಿತವಾಗಿದ್ದರೆ, ಇವರನ್ನು ಉದಾಸೀನ ಮಾಡಬಹುದಾಗಿತ್ತು. ಆದರೆ ಇವರು ಪ್ರತಿಭಾವಂತ ವ್ಯಕ್ತಿಗಳು, ಜನರನ್ನು ಪ್ರಭಾವಿಸಬಲ್ಲ ಉದ್ಯಮಗಳಲ್ಲಿ ಅಂದರೆ ಪತ್ರಿಕೋದ್ಯಮದಲ್ಲಿ ಹಾಗು ಇತರ ಸಾರ್ವಜನಿಕ ಮಾಧ್ಯಮ‌ದ ಉದ್ಯಮಗಳ ಉಚ್ಚಸ್ಥಾನಗಳಲ್ಲಿ ಇರುವಂಥವರು.
ಇದು ಭಾರತದ ದುರ್ದೈವವೆನ್ನಬಹುದು.

ಕನ್ನಡದಲ್ಲಿ ಅತಿ ಹೆಚ್ಚಿನ ಪ್ರಸಾರವುಳ್ಳದ್ದೆಂದು ಹೇಳಲಾದ ಸಮಾಚಾರ ಪತ್ರಿಕೆಯೊಂದರ ಸಂಪಾದಕರು ತಮ್ಮ ಪತ್ರಿಕೆಯಲ್ಲಿ ಇತ್ತೀಚೆಗೆ ಲೇಖನವೊಂದನ್ನು ಬರೆದಿದ್ದರು. ವಿದೇಶಗಳಲ್ಲಿ ಪಾಯಖಾನೆಗಳು ಎಷ್ಟು ಸ್ವಚ್ಛ ಹಾಗು ಕಲಾತ್ಮಕವಾಗಿರುತ್ತವೆ; ಅಲ್ಲಿ ಒಳಹೊಕ್ಕರೆ ಹೊರಗೆ ಬರುವ ಮನಸ್ಸೇ ಆಗುವದಿಲ್ಲ ಇತ್ಯಾದಿಯಾಗಿ ವಿದೇಶಿ ಪಾಯಖಾನೆಗಳನ್ನು ವರ್ಣಿಸಿದ್ದರು. ಅಲ್ಲದೆ, ವಿದೇಶೀಯರು ಎಷ್ಟು ಸುಸಂಸ್ಕೃತರಾಗಿದ್ದಾರೆಂದರೆ ಅವರು ತಮ್ಮ ಪಾಯಖಾನೆಗಳಿಗೆ ‘ವಿಶ್ರಾಂತಿಸ್ಥಳ’ ಎಂದು ಕರೆಯುತ್ತಾರೆ ಎಂದು ಅವರನ್ನು ಹೊಗಳಿ ಹೊಗಳಿ ಹೊನ್ನಶೂಲಕ್ಕೆ ಏರಿಸಿದ್ದರು.

ಇಲ್ಲಿ ಮೂರು ಅಂಶಗಳನ್ನು ಗಮನಿಸಬೇಕು:
(೧) ಓರ್ವ ವ್ಯಕ್ತಿಯ ಸುಸಂಸ್ಕೃತ ನಾಗರಿಕತೆ ಕೇವಲ ಅವನ ಪದಸಂಪತ್ತಿನ ಮೇಲೆ ಅವಲಂಬಿತವಾಗುವದಿಲ್ಲ. ಯಹೂದಿಗಳ ಮಾರಣಹೋಮ ಮಾಡಿದ ಹಿಟ್ಲರನ ಪದಕೋಶವೇನು ಕಡಿಮೆಯದಾಗಿತ್ತೆ? ಬಾಂಗ್ಲಾದಲ್ಲಿ ಘೋರ ಅತ್ಯಾಚಾರಕ್ಕೆ ಕಾರಣನಾದ ಝುಲ್ಫಿಕರ ಅಲಿ ಭುಟ್ಟೋನ ಪದಸಂಪತ್ತು ಕಳಪೆಯಾಗಿತ್ತೆ? ಇವರೂ ಸಹ ‘ವಿಶ್ರಾಂತಿಸ್ಥಳ’ಗಳನ್ನು ಬಳಸುವ ದೊಡ್ಡ ನಾಗರಿಕರೇ ಆಗಿದ್ದರು. ಪಾಯಖಾನೆ ಪದವನ್ನು ಬಳಸಿದ ಮಾತ್ರಕ್ಕೆ ಓರ್ವ ವ್ಯಕ್ತಿ ಅಸಂಸ್ಕೃತನಾಗುವದಿಲ್ಲ. ಹಾಗೆ ನೋಡಿದರೆ ಹಿಂದುಸ್ತಾನದ ಅನೇಕ ಬಾದಶಾಹರು ಪಾಯಖಾನೆಗಳನ್ನೇ ಬಳಸುತ್ತಿದ್ದರು. (‘ಪಾಯ’ ಅಂದರೆ ಕಾಲು; ‘ಖಾನಾ’ ಎಂದರೆ ಕೋಣೆ. ಪಾಯಖಾನಾ ಅಂದರೆ ಕಾಲೂರುವ ಸ್ಥಳ!)

(೨) ಈ ನಮ್ಮ ‘ಬಡೇ ಲೋಗ’ ಸಂಪಾದಕರು ಮಾರು ಹೋದಂತಹ ಪಾಯಖಾನೆಗೆ (-- ಯಾವುದೇ ಹೆಸರಿನಿಂದ ಕರೆದರೂ ಸಹ, ಈ ಸ್ಥಳವು ಬಳಸಿದ ವ್ಯಕ್ತಿಯ ವಾಸನೆಯನ್ನೇ ಹೊರಹಾಕುತ್ತದೆ!--) ಸಂಗಮರವರಿ ಕಲ್ಲಿನ ಹಾಸು ಇರಬಹುದು. ಮೂಲೆಗಳಲ್ಲಿ ಹೂದಾನಿ ಇರಬಹುದು. ಒಂದು ಸಲ ಬಳಸಿದ ಮೇಲೆ ಎರಡು ಬಕೆಟ್ ಶುದ್ಧ ನೀರನ್ನು ತೊಳೆಯಲು ಬೇಡಬಹುದು. ಆದರೆ, ಇದೆಲ್ಲಕ್ಕಾಗಿ ಮಾಡಬೇಕಾಗುವ ಖರ್ಚು ಎಷ್ಟು ಸ್ವಾಮಿ? ಭಾರತದ ಒಬ್ಬ ದಿನಗೂಲಿಯ ದಿನದ ದುಡಿಮೆಗಿಂತ ಇದು ಎಷ್ಟು ಪಟ್ಟು ಹೆಚ್ಚು ಹೇಳಿ? ಈ ಎಲ್ಲ ಅಂಶಗಳನ್ನು ಲೆಕ್ಕಿಸದೆ, ನೀವು ಭಾರತದ ಪಾಯಖಾನೆಗಳು ನರಕಸದೃಶವಾಗಿರುತ್ತವೆ, ಸ್ವರ್ಗಸದೃಶ ವಿದೇಶಿ ‘ವಿಶ್ರಾಂತಿಸ್ಥಳ’ಗಳ ಗಮ್ಮತ್ತೇ ಗಮ್ಮತ್ತು ಎಂದು ಹಾಡಿದರೆ ನಿಮಗೆ ಕರಿಯ ಸಾಹೇಬರೆಂದು ಕರೆಯುವದೇ ಸರಿಯಲ್ಲವೆ?

ಭಾರತದಲ್ಲಿ ಇದೀಗ ಅನೇಕರು ಕೋಟ್ಯಾಧೀಶ್ವರರಾಗುತ್ತಿದ್ದಾರೆ. ಇವರೆಲ್ಲರ ಹೆಗ್ಗಳಿಕೆ ಏನೆಂದರೆ ಭಾರತದ ಆಂತರಿಕ ಸಂಪತ್ತಿನ ಹೆಚ್ಚಳಕ್ಕೆ ತಮ್ಮದು ದೊಡ್ಡ ಕೊಡುಗೆ  ಎಂದು.
ನಾನು ಕೇಳುತ್ತೇನೆ: “ಸ್ವಾಮಿ, ಭಾರತದ ಆಂತರಿಕ ದಾರಿದ್ರ್ಯದ ಹೆಚ್ಚಳಕ್ಕೆ ನಿಮ್ಮ ಕೊಡುಗೆ ಎಷ್ಟು?”
ನೋಡ ಬನ್ನಿ, ಈ ಕೋಟ್ಯಾಧೀಶ್ವರ ಉದ್ಯೋಗಪತಿಗಳು  ಸ್ಥಾಪಿಸಿದ ಕಾರಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ರೇಲವೆ ಹಳಿಗಳ ಪಕ್ಕದಲ್ಲಿಯೇ ಮಲವಿಸರ್ಜನೆ ಮಾಡಿ, ಅಲ್ಲಿಯೇ ತಮ್ಮ ಗುಡಿಸಲುಗಳಲ್ಲಿ ರೊಟ್ಟಿ ಬೇಯಿಸಿಕೊಳ್ಳುತ್ತಾರೆ. ಈ ದರಿದ್ರರ ಎದುರಿಗೆ ಶ್ರೀಮಂತರ ಪಾಯಖಾನೆಯ ವರ್ಣನೆಯನ್ನು ಕವಿತೆ ಮಾಡಿ ಹಾಡುವ ಹೊಗಳು-ಭಟ್ಟರೇ  ಇಂದು ಪತ್ರಿಕಾಮಾಧ್ಯಮದ ಪ್ರತಿಭಾವಂತ ಸಂಪಾದಕರಾಗಿದ್ದಾರೆ !

ಭಾರತದಲ್ಲಿರುವ ರೈತಕಾರ್ಮಿಕರಲ್ಲಿ ಹಾಗು ಕಾರಖಾನೆಗಳ ಕಾರ್ಮಿಕರಲ್ಲಿ ಅನೇಕರು ನಿರಕ್ಷರಿಗಳೇ ಆಗಿದ್ದಾರೆ. ಸಾಕ್ಷರರಿದ್ದರೂ ಸಹ ಅವರಿಗೆ ಪತ್ರಿಕೆ ಎನ್ನುವದು ಒಂದು ಐಷಾರಾಮಿ ವಸ್ತುವೇ ಆಗಿರುತ್ತದೆ.  ಆದುದರಿಂದ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಲು ಇಂಥವರು ನಿರುಪಯೋಗಿಗಳು. ಪತ್ರಿಕೆಯನ್ನು ಓದುವ ಶ್ರೀಮಂತವರ್ಗಕ್ಕೆ ಶ್ರೀಮಂತಜೀವನಶೈಲಿಯ ಪತ್ರಿಕೆಗಳು ಬೇಕು. ಓದುಗರು ಮಧ್ಯಮವರ್ಗದವರಾಗಿದ್ದರೆ, ಅಂಥವರಿಗೆ ಶ್ರೀಮಂತಜೀವನಶೈಲಿಯ ಭ್ರಮೆಗಳನ್ನು ಉಣ್ಣಿಸುವಂತಹ ಪತ್ರಿಕೆಗಳು ಬೇಕು. ಆದುದರಿಂದಲೇ ಈ ಮನೋಧರ್ಮದ ದುರ್ಬಳಕೆ ಮಾಡುವ ಉದ್ದೇಶದಿಂದ ನಮ್ಮಲ್ಲಿ ಶ್ರೀಮಂತಜೀವನಶೈಲಿಯನ್ನು ಪ್ರದರ್ಶಿಸುವ ಪತ್ರಿಕೆಗಳು ವೃದ್ಧಿಸುತ್ತಿವೆ. ನುಣುಪಾದ ಪುಟಗಳು, ಅರೆನಗ್ನ ಹೆಣ್ಣುಗಳ ಚಿತ್ರಗಳು, ಕೊಳ್ಳುಬಾಕ ಸಂಸ್ಕೃತಿಯ ಜಾಹೀರಾತುಗಳು ಇಷ್ಟಿದ್ದರೆ ಸಾಕು, ಆ ಪತ್ರಿಕೆಯ ಪ್ರಸಾರ ಪುಟಿದೇಳುತ್ತದೆ.

(೩) ಇಷ್ಟೇ ಆಗಿದ್ದರೆ, ಇಂತಹ ಪತ್ರಿಕೆಗಳನ್ನು ಓದದೆ ನಮ್ಮಷ್ಟಕ್ಕೆ ನಾವು ಸುಮ್ಮನಿರಬಹುದಿತ್ತು. ಆದರೆ, ಈ ಪತ್ರಿಕೋದ್ಯಮಿಗಳ ಆಂಗ್ಲಮೋಹದಿಂದಾಗಿ ಕನ್ನಡಕ್ಕೆ ಅಪಚಾರವಾಗುತ್ತಿದೆಯಲ್ಲ ಎಂದು ತಳಮಳವಾಗುತ್ತದೆ. ಮೆಕಾಲೆ ಸಾಹೇಬನಿಗೆ ಭಾರತೀಯ ಭಾಷೆಗಳ ಶ್ರೀಮಂತಿಕೆ ಗೊತ್ತಿರಲಿಲ್ಲ. ಅದಕ್ಕಾಗಿಯೇ ಆ ಅಜ್ಞಾನಿ ಮನುಷ್ಯ ಹೀಗೆ ಹೇಳಿದ:

…To that class we may leave it to refine the vernacular dialects of the country, to enrich those dialects with terms of science borrowed from the Western nomenclature, and to render them by degrees fit vehicles for conveying knowledge to the great mass of the population.

ಈ ನಮ್ಮ ಆಂಗ್ಲವ್ಯಾಮೋಹಿ ಸಂಪಾದಕರು ಮೆಕಾಲೆಯ ಮಾತುಗಳನ್ನು ಶಿರಸಾವಹಿಸಿ ಪಾಲಿಸುತ್ತಿರಬಹುದು. ಏಕೆಂದರೆ ಮೆಕಾಲೆಯ ಈ ಚೇಲಾಗಳು ಭಾರತದ ದೇಶಭಾಷೆಗಳಲ್ಲಿ ಇಂಗ್ಲಿಶ್ ಪದಗಳನ್ನು ನೇರವಾಗಿ ತುಂಬುತ್ತಿದ್ದಾರೆ. ಇದರಿಂದಾಗಿ ಮೆಕಾಲೇನ ಆತ್ಮಕ್ಕೆ ಸಂತೃಪ್ತಿ ಸಿಕ್ಕಿರಬಹುದು. ಆದರೆ, ಕನ್ನಡಕ್ಕೆ  ಪತ್ರಿಕಾಪದಗಳನ್ನು ಹಾಗು ಪತ್ರಿಕಾಭಾಷೆಯನ್ನು ನೀಡಿದಂತಹ ಕನ್ನಡ ಪತ್ರಿಕೆಗಳ ಪ್ರಾರಂಭದ ದಿನಗಳ ಸಂಪಾದಕರ ಆತ್ಮಗಳು ಸಂತಪ್ತವಾಗಿವೆ ಎನ್ನುವದರಲ್ಲಿ ಸಂಶಯವೇ ಇಲ್ಲ. ಅದೇನೋ ಹೇಳುತ್ತಾರಲ್ಲ: ‘ಕುಂಬಾರನಿಗೆ ಒಂದು ವರುಷ; ಡೊಣ್ಣೆಗೆ ಒಂದು ನಿಮಿಷ !” ಈ ಆಂಗ್ಲವ್ಯಾಮೋಹಿ ಪತ್ರಿಕೋದ್ಯಮಿಗಳಿಂದಾಗಿ ನಮ್ಮ ಪತ್ರಿಕಾಪೂರ್ವಜರ ಭಾಷಾಪರಿಶ್ರಮವೆಲ್ಲ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ವ್ಯರ್ಥವಾಗಿ ಹೋಗಿದೆ.

ಶ್ರೀಮಂತಜೀವನಶೈಲಿಯ ಈ ಸಂಪಾದಕರುಗಳಿಗೆ ಭಾರತದ ಸಮಸ್ಯೆಗಳು ಗೊತ್ತಿವೆಯೆ? ಭಾರತದ ಬಡ ರೈತನಿಗೆ ಬೇಕಾಗಿರುವದು ಒಂದು ತಗಡಿನ ಚಪ್ಪರವೆ ಹೋರತು ಸುಸಜ್ಜಿತ ‘ವಿಶ್ರಾಂತಿಸ್ಥಳ’ವಲ್ಲ. ಬಡರೈತನು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕರೆ ಸಾಕು, ಆತ ನೇಣಿಗೆ ಶರಣಾಗುವದಿಲ್ಲ. ಎಲ್ಲೆಲ್ಲಿಯೊ ಸಾಲ ಮಾಡಿ ಆತ ತನ್ನ ಜಮೀನಿನಲ್ಲಿ ಬೆಳೆ ತೆಗೆಯುತ್ತಾನೆ. ಬೆಳೆ ಚೆನ್ನಾಗಿ ಬಂದಾಗ ಧಾರಣಿ ಕುಸಿಯುತ್ತದೆ. ಧಾರಣಿ ಚೆನ್ನಾಗಿದ್ದಾಗ ಬೆಳೆ ಇರುವದಿಲ್ಲ. ಈ ಎರಡೂ ಸಂದರ್ಭಗಳಲ್ಲಿ ಫಾಯದೆ ಮಾಡಿಕೊಳ್ಳುವವನು ಮಧ್ಯಸ್ಥನಾದ ವ್ಯಾಪಾರಸ್ಥ. ಲಂಚ ಕೊಡಲಾಗದ ನಮ್ಮ ರೈತನಿಗೆ ನೇರವಾಗಿ ಸಬ್ಸಿಡಿ ಕೊಡಲು ನಮ್ಮ ಮಂತ್ರಿಗಳಿಗೆ ಮನಸ್ಸಿಲ್ಲ. ಒಂದು ವೇಳೆ ನಮ್ಮ ಸರಕಾರ ಕೊಡಬಯಸಿದರೂ ಅದಕ್ಕೆ ಜಾಗತಿಕ ಬ್ಯಾಂಕು ಅಡ್ಡಿ ಮಾಡುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಎರಡು ಲಕ್ಷಕ್ಕೆ ಹತ್ತಿರವಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೇಸಾಯದಿಂದ ಹೊಟ್ಟೆ ತುಂಬಿಸಲಾರದ ಈ ಪರಿಸ್ಥಿತಿಯಲ್ಲಿಯೇ, ಉದ್ದಿಮೆಗಳು ಸಹ ಬೆಳೆಯಲಾರದಂತಹ ಸ್ಥಿತಿ ಭಾರತದಲ್ಲಿದೆ. ಒಂದು ಉದ್ದಿಮೆಗೆ ಬೇಕಾಗುವ ಮೂಲಭೂತ ಸೌಕರ್ಯಗಳು ನಮ್ಮಲ್ಲಿಲ್ಲ. ಅರ್ಥಾತ್ ನಮ್ಮಲ್ಲಿ ನಿರುದ್ಯೋಗ ನಿವಾರಣೆಗೆ ಯಾವುದೇ ಉಪಾಯವಿಲ್ಲ. ಇದರ ಮೇಲೆ ಹೆಚ್ಚುತ್ತಿರುವ ಜನಸಂಖ್ಯೆ. ಇದು ಯಾವದೂ ತನಗೆ ಸಂಬಂಧಿಸಿದ ಸಮಸ್ಯೆಯೇ ಅಲ್ಲ ಎಂದು ಕಣ್ಣು ಮುಚ್ಚಿ ಕುಳಿತಿರುವ ಸರಕಾರಗಳು !

ಇಂತಹ ಸಮಸ್ಯೆಗಳೆಲ್ಲ ನಮ್ಮನ್ನು ಕಾಡುತ್ತಿರುವಾಗ ನಮ್ಮ ‘ಹೈ-ಫೈ’ ಸಂಪಾದಕರಿಗೆ ಇರುವ ಏಕಮೇವ ಚಡಪಡಿಕೆ ಎಂದರೆ ಭಾರತದಲ್ಲಿ ಇವರು ಸಂಚರಿಸುವ ಸ್ಥಳಗಳಲ್ಲಿ ಸುಸಜ್ಜಿತ ಪಾಯಖಾನೆಗಳಿಲ್ಲ ಎನ್ನುವದು ! 

Sunday, July 25, 2010

ವಸಂತಮುಖ..........(ದ.ರಾ.ಬೇಂದ್ರೆ)

ಬೇಂದ್ರೆಯವರು ಬರೆದ ‘ವಸಂತಮುಖ’ ಕವನವನ್ನು ಕವಿಗಳ ಕೈಪಿಡಿ ಎಂದು ಬಣ್ಣಿಸಬಹುದು.

ಕವನ ಇಲ್ಲಿದೆ:
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ

ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ

ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ


ಬೇಂದ್ರೆಯವರಿಗೆ ಪ್ರಕೃತಿಯು ಕೇವಲ ದೃಶ್ಯವೈಭವವಲ್ಲ. ಅವರ ಪಾಲಿಗೆ ಅದು ಸಜೀವವಾದ ಚೈತನ್ಯದ ಚಿಲುಮೆ. ಪ್ರಕೃತಿಯ ಚಟುವಟಿಕೆಗಳಿಗೆ ಪ್ರೇರಣೆ ಕೊಡುವ ‘ಬೆಳಗು’ ಆಗಲೀ, ದಣಿದ ಜೀವಿಗಳನ್ನು ಮಡಿಲಲ್ಲಿ ಮಲಗಿಸಿ, ಮುದ್ದಿಸುವ ಬೆಳದಿಂಗಳೇ ಆಗಲಿ ಅಥವಾ ರಾವಣನಂತೆ ಕುಣಿಯುವ ಶ್ರಾವಣವೇ ಆಗಲಿ, ಇವೆಲ್ಲ ಬೇಂದ್ರೆಯವರ ಪಾಲಿಗೆ ನಿಸರ್ಗದ ಸಜೀವ ಚೇತನಗಳು. ಅಷ್ಟೇ ಏಕೆ, ಒಂದು ಹೂತ ಹುಣಿಸೆಯ ಮರವೂ ಸಹ ಬೇಂದ್ರೆಯವರಿಗೆ ಬದುಕಿನ ಸಜೀವ ಭಾಗವೇ ಆಗಿದೆ. ಈ ಮನೋಧರ್ಮದ ಪರಾಕಾಷ್ಠೆಯನ್ನು ನಾವು ‘ವಸಂತಮುಖ’ ಕವನದಲ್ಲಿ ನೋಡಬಹುದು.

ವಸಂತ ಋತುವಿನ ಒಂದು ಉಷಃಕಾಲದಲ್ಲಿ ಕವಿ ಅನುಭವಿಸಿದ ಆನಂದವನ್ನು ‘ವಸಂತಮುಖ’ ಕವನವು ವರ್ಣಿಸುತ್ತದೆ. ಕನ್ನಡ ಕವಿಗಳು ಸೂರ್ಯೋದಯದ ಸಮಯದಲ್ಲಿ ತಾವು ಅನುಭವಿಸಿದ ಆನಂದದ ಬಗೆಗೆ ಅನೇಕ ಕವನಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಈ ಕವನಗಳಲ್ಲಿ ಸೂರ್ಯೋದಯ ಸಮಯದ ನಿಸರ್ಗಸೌಂದರ್ಯದ ವರ್ಣನೆಯೇ ಪ್ರಧಾನವಾಗಿದೆ. ಬೇಂದ್ರೆಯವರೇ ಬರೆದ ಕವನ ‘ಬೆಳಗು’ ಅಂತೂ ಅತಿ ಪ್ರಸಿದ್ಧವಾದ ಕವನವೇ ಹೌದು. ಈ ಕವನದಲ್ಲಿಯೂ ಸಹ ಸೂರ್ಯೋದಯ ಸಮಯದ ಪ್ರಕೃತಿಯ ವೈಭವವನ್ನು ವರ್ಣಿಸಿ, ಕವಿಯು ಅದರಿಂದಾಗಿ ಹೇಗೆ ಆನಂದಪರವಶನಾದನು ಎನ್ನುವ ವರ್ಣನೆ ಇದೆ. ಆದರೆ, ‘ವಸಂತಮುಖ’ ಕವನವು ಹಾಗಿಲ್ಲ. ಈ ಕವನದಲ್ಲಿ ಕವಿಯು ಅಖಿಲ ವಿಶ್ವವೇ ಉಷಃಕಾಲದಲ್ಲಿ ಚೇತನಗೊಂಡು, ಆನಂದಪರವಶವಾದುದರ ದರ್ಶನವಿದೆ.  ಕನ್ನಡದಲ್ಲಿ ನಾವು ಕೇಳುವ ಇಂತಹ ಇನ್ನೊಂದೇ ಗೀತೆಯೆಂದರೆ ಪುರಂದರದಾಸರು ಹಾಡಿದ ಕೀರ್ತನೆ.
ಅದರ ಪಲ್ಲ ಹೀಗಿದೆ:
“ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಜ-
ಗಂಗಳು ಚೈತನ್ಯ ಮರೆದು ಅಂಗಪರವಶವಾದವು”

ರಂಗನ ಕೊಳಲಿನ ಸ್ವರದಿಂದ ಅಖಿಲ ಪ್ರಕೃತಿಯೇ ಹೇಗೆ ಸಚೇತನವಾಯ್ತು, ಹೇಗೆ ಆನಂದಪರವಶವಾಯ್ತು ಎಂದು ಪುರಂದರದಾಸರು ಹಾಡಿ, ಕುಣಿದು ಹೇಳುವ ಕೀರ್ತನೆ ಇದು.

ಈಗ ಬೇಂದ್ರೆಯವರ ‘ವಸಂತಮುಖ’ವನ್ನು ನೋಡೋಣ:
(ಮೊದಲ ನುಡಿ:)
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ

‘ಉದಿತ ದಿನ’ ಅಂದರೆ, ಇದೀಗ ಬೆಳಕು ಒಡೆದಿದೆ. ಇದು ಉಷ:ಕಾಲ.  ಉಷಃಕಾಲದ ಆನಂದವು ಕೇವಲ ಮನುಷ್ಯನಷ್ಟೇ ಅನುಭವಿಸಬಹುದಾದ ಸುಖವಲ್ಲ.  ಸುತ್ತಲಿರುವ  ವನವೆಲ್ಲ ಸಚೇತನವಾಗಿದೆ, ಉಷಃಕಾಲದಿಂದ ಮುದಗೊಂಡಿದೆ. ವನರಾಜಿಯ ಈ ಆನಂದವು ‘ವನವಾಸಿ’ಗಳಾದ ಹಕ್ಕಿಗಳ ಚಿಲಿಪಿಲಿಯಲ್ಲಿ ಕೇಳಬರುತ್ತಿದೆ. ಇದು ಕಣ್ಣಿಗೆ ಬೀಳುವ ದೃಶ್ಯ ಸೌಂದರ್ಯವಷ್ಟೇ ಅಲ್ಲ, ಕಿವಿಗೆ ಬೀಳುವ ಶ್ರಾವ್ಯ ಸೌಭಾಗ್ಯವೂ ಹೌದು.

ಕೇವಲ ಒಂದು ಹಕ್ಕಿಯ ಸ್ವರ ಇಲ್ಲಿ ಕೇಳಬರುತ್ತಿಲ್ಲ. ಅನೇಕ ವಿಧದ ಹಕ್ಕಿಗಳು ಇಲ್ಲೀಗ ಹಾಡುತ್ತಿವೆ. ಇಲ್ಲಿ ಕೇಳಿಬರುತ್ತಿರುವದು ಈ ಸಾಮುದಾಯಿಕ ಸ್ವರಮೇಳ. ನಿಸರ್ಗದಲ್ಲಿರುವ ಈ ಸಾಮರಸ್ಯವನ್ನು ಕಂಡ ಕವಿ ‘ಇದುವೆ ಜೀವ, ಇದು ಜೀವನ’ ಎಂದು ಉದ್ಗರಿಸುತ್ತಾನೆ. ಅಲ್ಲದೆ ಇಂತಹ ಸಾಮರಸ್ಯದ ಜೀವನವೇ ಪಾವನಗೊಂಡ ಜೀವನ. ಪವನ ಅಂದರೆ ಗಾಳಿ. ಗಾಳಿಯು ಎಲ್ಲೆಡೆಗೆ ಬೀಸುತ್ತ ಸುಗಂಧವನ್ನು ಹರಡುತ್ತದೆ. ಅದರಂತೆ ದುರ್ಗಂಧವನ್ನು ದೂರೀಕರಿಸುತ್ತದೆ. ಉಷಃಕಾಲವೂ ಸಹ ವಾತಾವರಣವನ್ನು ಅದೇ ರೀತಿಯಲ್ಲಿ ಪಾವನಗೊಳಿಸುವದರಿಂದ, ಕವಿಯು, ‘ಪವನದಂತೆ ಪಾವನ’ ಎಂದು ಹೇಳುತ್ತಾನೆ.

(ಎರಡನೆಯ ನುಡಿ:)
ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ

ಈ ಚೈತನ್ಯಪೂರ್ಣ, ಉಲ್ಲಾಸಮಯ ವಾತಾವರಣವು ಕವಿಯಲ್ಲಿ ಯಾವ ಭಾವನೆಯನ್ನು ಮೂಡಿಸುತ್ತಿದೆ? ಅದು ಅನಿರ್ವಚನೀಯವಾದ, ಆಧ್ಯಾತ್ಮಿಕತೆಗೆ ಹತ್ತಿರವಾದ ಭಾವನೆಯಾಗಿದೆ. ಬ್ರಹ್ಮಭಾವನೆ, ವಿಶ್ವ-ಏಕಾತ್ಮ ಭಾವನೆ ಎಂದು ಹೇಳಬಹುದೇನೊ? ಅದು ಕವಿಯ ಅನುಭವಕ್ಕೆ ಬರುತ್ತಿದೆಯೇ ಹೊರತು, ಏನೆಂದು ಹೇಳಲು ಬರದಂತಿದೆ. (ಶಂಕರಾಚಾರ್ಯರು ಬ್ರಹ್ಮವನ್ನು ‘ನೇತಿ, ನೇತಿ’ ಎಂದು ಬಣ್ಣಿಸಿದ್ದನ್ನು ನೆನಪಿಸಿಕೊಳ್ಳಬಹುದು.)  ಆದುದರಿಂದ ಕವಿ ಅದನ್ನು ‘ಏನೊ ವಿಧ!’ ಎಂದು ಬಣ್ಣಿಸುತ್ತಾನೆ. (ಆಮೂಲಕ ಅದು ‘ಬ್ರಹ್ಮಾನಂದ’ ಎಂದು ಸೂಚಿಸುತ್ತಾನೆ.) ಆ ಭಾವನೆ ಏನೆಂದು ಹೇಳಲು ಬರದಿದ್ದರೂ,ಅದು ಕವಿಯಲ್ಲಿ ಒಂದು ಭಾವಪಕ್ವತೆಯನ್ನು ಹುಟ್ಟಿಸಿದೆ. ಅದು ಕವಿಯ ಅನುಭವಕ್ಕೆ ಬರುತ್ತಿರುವ ‘ಹದ’! ಇಂತಹ ಹದ ಅಥವಾ ಪಕ್ವತೆ ಬರಲು ಕಾರಣವೆಂದರೆ, ಕವಿಯ ಅಹಂಭಾವವು ಇಲ್ಲಿ ಗಾಳಿಗೊಡೆದ ಬುದ್ಬುದ ಅಂದರೆ ನೀರಗುಳ್ಳೆಯಾಗಿದೆ. ಪ್ರಕೃತಿಚೈತನ್ಯದ ಎದುರಿಗೆ ಮನುಷ್ಯ ತಾನೆಷ್ಟು ಅಲ್ಪ ಎನ್ನುವದನ್ನು ಅರಿಯುತ್ತಾನೆ. ಆ ಕ್ಷಣದಲ್ಲಿ ಅವನಿಗೆ ‘ಯಾವುದು ಮಹತ್?’ ಎನ್ನುವ ಸತ್ಯದ ದರ್ಶನವಾಗುತ್ತದೆ. ಅದೇನೆಂದರೆ, ‘ಬೆಳಕೆ ಬದುಕು!’ ನಿಸರ್ಗದಲ್ಲಿರುವ ಗಿಡ,ಮರಗಳಿಗೆ ಬೆಳಕು ಬೇಕು; ಅಲ್ಲಿರುವ ಪಕ್ಷಿಗಳಿಗೆ ಬೆಳಕು ಬೇಕು. ಬೆಳಕು ಅವುಗಳಿಗೆ ಜೀವನವನ್ನು ಕೊಡುತ್ತದೆ. ಮನುಷ್ಯನಿಗೂ ಸಹ ಬೆಳಕು ಬೇಕು. ಆದರೆ ಇದು ಬರಿ ಹೊರಗಿನ ಬೆಳಕಲ್ಲ. ಮನುಷ್ಯನಿಗೆ ಬೇಕಾಗಿರುವದು ಅಂತರಂಗದ ಬೆಳಕು. ಈ ಸತ್ಯದರ್ಶನವೇ ಕವಿಗೆ ಮುದವನ್ನು ಅಂದರೆ ಸಂತೋಷವನ್ನು ಕೊಡುತ್ತದೆ. ಈ ಸಂತೋಷವು ಸ್ವಯಂಸ್ಫೂರ್ತ ಸಂತೋಷವು. ತನ್ನಿಂದ ತಾನೇ ಹೊರಹೊಮ್ಮಿದ್ದು. ಆದುದರಿಂದ ಕವಿ  ಈ ಸಂತೋಷವನ್ನು ‘ಜೀವ ಹೊಮ್ಮಿ ಚಿಮ್ಮಿದ ಮುದ’ ಎಂದು ಕರೆಯುತ್ತಾನೆ.

 (ಮೂರನೆಯ ನುಡಿ:)
ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ

ನಾವು ಸಂಸ್ಕೃತಿ ಎಂದು ಕರೆಯುವ ಮಾನವ-ನಾಗರಿಕತೆಗಳಲ್ಲಿ ಎಲ್ಲ ಮಾನವರನ್ನು ಒಂದೇ ಶಿಸ್ತಿನ ಏಕತಾನತೆಗೆ ಒಳಪಡಿಸುವ ವಿಕೃತಿ ಇದೆ. ಆದರೆ ಪ್ರಕೃತಿಯಲ್ಲಿ ಇರುವದು ಸ್ವಚ್ಛಂದತೆ; ಏಕತಾನತೆ ಅಲ್ಲ. ಈ ವನರಾಜಿಯಲ್ಲಿ ನೂರಾರು ತರದ ಮರಗಳಿವೆ. ಅಲ್ಲಿರುವ ಹಕ್ಕಿಗಳು ನೂರಾರು ತರದ ಸ್ವರ ಹೊರಡಿಸುತ್ತಿವೆ. ಇಂತಹದೇ ಸ್ವರ ಹೊರಡಿಸಬೇಕೆನ್ನುವ  ಕಟ್ಟುನಿಟ್ಟು ಅವುಗಳಿಗೂ ಇಲ್ಲ. ಇಂತಹ ಬಂಧನವು ಇರದ ಕಾರಣದಿಂದಲೆ ಇವುಗಳ ಹಾಡು ಬಂಧುರ ಅಂದರೆ ಉಲ್ಲಾಸದಾಯಕವಾಗಿದೆ. ಇವುಗಳ ಹಾಡು ಹಾಗು ಹಾರಾಟ ಸ್ವಚ್ಛಂದ ವಾಗಿರುವದರಿಂದಲೇ ಇವುಗಳ ಬದುಕು ಸುಂದರವಾಗಿದೆ. ಬದುಕಿನಲ್ಲಿ ವಿವಿಧ ಸ್ವರಗಳು ಬೇಕು. ಆದರೆ ಮಧುರವಾದ ಸ್ವರಮೇಳಕ್ಕಾಗಿ ಸಾಮರಸ್ಯವೂ ಬೇಕು. ಇದು ಕವಿಯು ಇಲ್ಲಿ ಅನುಭವಿಸಿದ ದರ್ಶನವಾಗಿದೆ. ಪ್ರಕೃತಿಯಲ್ಲಿ ಒಂದಾಗಿ, ಪ್ರಕೃತಿಯ ಉಲ್ಲಾಸವೇ ತನ್ನ ಉಲ್ಲಾಸವಾಗಿದ್ದನ್ನು ಕವಿ ಅನುಭವಿಸಿದ ಕಾವ್ಯವು ಇದಾಗಿದೆ.
...........................................................................
ಈ ಕವನದ ವೈಶಿಷ್ಟ್ಯ:
ಸೂರ್ಯೋದಯದಿಂದಾಗಿ ಮೂಡುವ ನಿಸರ್ಗವೈಭವವು ಕವಿಗಳಲ್ಲಿ ಉಲ್ಲಾಸವನ್ನು ಮೂಡಿಸುವದು ಸಹಜ ಹಾಗು ಸಾಮಾನ್ಯ. ಇಂತಹ ಕವನಗಳು, ಸ್ವತಃ ಬೇಂದ್ರೆಯವರೇ ಬರೆದಂತಹವು, ಅನೇಕವಿವೆ. ಸಾಮಾನ್ಯವಾಗಿ, ಪ್ರಕೃತಿ ಅನುಭವಿಸುವ ಸಂವೇದನೆಗಳು ಮಾನವನ ಅನುಭವಕ್ಕೆ ಹೊರತಾಗಿವೆ. ಆದರೆ, ಈ ಕವನದಲ್ಲಿ, ಉಷಃಕಾಲವು ನಿಸರ್ಗದಲ್ಲಿ ಮೂಡಿಸಿದ ಉಲ್ಲಾಸದ ಅನುಭವವಿದೆ. ಈ ಅನುಭವವು ಕವಿಯನ್ನು ಮೂಕನನ್ನಾಗಿಸುತ್ತದೆ. (“ಏನೊ ವಿಧ! ಏನೊ ಹದ.”) ಪ್ರಕೃತಿಯ ಅಗಾಧತೆಯ ಎದುರಿಗೆ ತಾನು ಅಲ್ಪ ಎನ್ನುವ ಸತ್ಯವನ್ನು ತಿಳಿಸುತ್ತದೆ. ಬದುಕಿನಲ್ಲಿ ಸ್ವಾತಂತ್ರ್ಯ ಬೇಕು, ಅದರೊಡನೆಯೆ ಸಾಮರಸ್ಯವೂ ಬೇಕು ಎನ್ನುವ ದರ್ಶನವನ್ನು ಕವಿಯಲ್ಲಿ ಹುಟ್ಟಿಸುತ್ತದೆ. ಇಂತಹ ಬೃಹದ್ದರ್ಶನವನ್ನು ಮಾಡಿಸುವ ಈ ಕವನದಲ್ಲಿ ಇರುವದು ಕೇವಲ ಮೂರು ನುಡಿಗಳು ಅಥವಾ ಮೂವತ್ತಾರು ಪದಗಳು! ‘ಕಿರಿದರೊಳ್ ಪಿರಿದರ್ಥವನು’ ಪೇಳುವದು ಎಂದರೆ ಇದೇ ಇರಬೇಕು!

ಬೇಂದ್ರೆಯವರದು ಅಸೀಮ ಕಲ್ಪನಾವಿಲಾಸ ಹಾಗು ಅಪಾರವಾದ ಪದಸಾಮರ್ಥ್ಯ. ಅವರ ‘ಪಾತರಗಿತ್ತಿ ಪಕ್ಕಾ’, ‘ಬೆಳದಿಂಗಳ ನೋಡಾ’  ಮೊದಲಾದ ಕವನಗಳನ್ನು ಓದಿದವರಿಗೆ ಇದರ ಅನುಭವವಿದೆ. ಆದರೆ ‘ವಸಂತಮುಖ’ ಕವನದಲ್ಲಿ, ಬೇಂದ್ರೆಯವರು ನಿಸರ್ಗದ ಆನಂದದಲ್ಲಿ ಎಷ್ಟು ಪರವಶರಾಗಿದ್ದಾರೆಂದರೆ, ಅತಿ ಚಿಕ್ಕದಾದ ಕವನದಲ್ಲಿ ಅತಿ ಮಹತ್ವದ ದರ್ಶನ ಇಲ್ಲಿ ಹೊಮ್ಮಿದೆ. ಇದೇ ಈ ಕವನದ ವೈಶಿಷ್ಟ್ಯವಾಗಿದೆ.
……………………………………………

ಟಿಪ್ಪಣಿ:
(೧) ಪಾಂಡವರು ವನವಾಸದಲ್ಲಿದ್ದಾಗ, ಓರ್ವ ಮುನಿಯನ್ನು ಅವಮಾನಿಸಿದ್ದಕ್ಕಾಗಿ ಅರ್ಜುನನು ಶಪಿತನಾದನು. ಶಾಪಮುಕ್ತಿಗಾಗಿ ಆತನು ತೀರ್ಥಯಾತ್ರೆಯನ್ನು ಮಾಡಬೇಕಾಯಿತು.‘ಬುದ್ಬುದಾ’ ಎನ್ನುವ ಅಪ್ಸರೆಯು ಈ ಪ್ರಸಂಗಕ್ಕೆ ಸಂಬಂಧಿಸಿದ್ದಾಳೆ.  ಬೇಂದ್ರೆಯವರು ಎರಡನೆಯ ಸಾಲಿನಲ್ಲಿ ಬಳಸಿದ ‘ಬುದ್ಬುದ’ ಪದವು ಈ ಕಾರಣದಿಂದಾಗಿ ಬಂಧ ಹಾಗು ಮೋಕ್ಷವನ್ನು ಸೂಚಿಸುತ್ತದೆ.
(೨) ಬೇಂದ್ರೆಯವರ ಅನೇಕ ಶ್ರೇಷ್ಠ ಕವನಗಳು ದೇಸಿ ಶೈಲಿಯಲ್ಲಿವೆ ಎನ್ನುವದು ಕೆಲವು ವಿಮರ್ಶಕರ ಅಭಿಪ್ರಾಯ. ಈ ಕವನವು ಮಾರ್ಗ ಭಾಷೆಯಲ್ಲಿದ್ದೂ ಸಹ ಬೇಂದ್ರೆಯವರ ಕವನಗಳಲ್ಲಿಯೇ ಶಿಖರಸ್ಥಾಯಿಯಾಗಿರುವದನ್ನು ಗಮನಿಸಬೇಕು.

ಹೆಚ್ಚಿನ ಟಿಪ್ಪಣಿ:
(೧) ಒಂದೇ ಸಾಲಿನಲ್ಲಿ ಜೀವನದರ್ಶನವನ್ನು ಮಾಡಿಸುವ ಕವನಗಳು ಕನ್ನಡದಲ್ಲಿ ಇದ್ದೇ ಇವೆ. ಅನೇಕ ವರ್ಷಗಳ ಹಿಂದೆ, ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ‘ಕನ್ನಡ ಕವಿಗಳ ಪ್ರತಿಭೆಯ ಮಿಂಚು’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕೆಲವು ಕವನಗಳ ಒಂದೊಂದು ಸಾಲನ್ನು ಕೊಡಲಾಗಿತ್ತು. ಸೂರ್ಯೋದಯಕ್ಕೆ ಸಂಬಂಧಿಸಿದಂತೆ ಅಂತಹ ಒಂದು ಸಾಲು ಇಲ್ಲಿದೆ:
ಶಿವ ಬರೆದ ಕತೆಯ ಪುಟವೊಂದು ತೆರೆದು ನನ್ನ ಮನೆ ಮೂಡಲಲಿ ಬೆಳಕಾಯಿತು.”

ಕವಿಯ ದೈವಶ್ರದ್ಧೆಯನ್ನು, ಈ ಶ್ರದ್ಧೆ ಅವನಲ್ಲಿ ಮೂಡಿಸುವ ಸ್ಥೈರ್ಯವನ್ನು, ಶಿವವಾದುದನ್ನು ಅಂದರೆ ಮಂಗಲವನ್ನೇ ಬಯಸುವ ಅವನ ಮನೀಷೆಯನ್ನು ಈ ಸಾಲು ಅದ್ಭುತವಾಗಿ ಬಿಂಬಿಸುತ್ತದೆ. ಈ ಸಾಲಿನ ಕೆಳಗೆ ‘ಮಸಳಿ’ ಎನ್ನುವ ಅಂಕಿತವಿದ್ದುದ್ದಾಗಿ ನನ್ನ ಮಸುಕಾದ ನೆನಪು ಹೇಳುತ್ತಿದೆ. ಆದರೆ ಇದು ಹೀಗೇ ಎಂದು ಹೇಳಲು ಈಗ ಸಾಧ್ಯವಾಗದು.

(೨) ಇಂಗ್ಲಿಶ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ Reader’s Digest ತರಹದ ಮಾಸಿಕವನ್ನು ಕನ್ನಡದಲ್ಲಿ ತರಲು ಉದ್ದೇಶಿಸಿದ ಲೋಕಶಿಕ್ಷಣ ಸಂಸ್ಥೆಯು ‘ಕಸ್ತೂರಿ’ ಮಾಸಿಕವನ್ನು ಹೊರತಂದಿತು. Reader’s Digestನಲ್ಲಿ ಪ್ರಕಟವಾಗುತ್ತಿದ್ದ ಸ್ಥಿರಶೀರ್ಷಿಕೆ ‘Life’s like that’ ಗೆ ಸಂವಾದಿಯಾಗಿ ಕಸ್ತೂರಿ ಮಾಸಿಕದಲ್ಲಿ ’ಇದುವೇ ಜೀವ ಇದು ಜೀವನ’ ಶೀರ್ಷಿಕೆಯನ್ನು ತರಲಾಯಿತು. ಕನ್ನಡದ ಶೀರ್ಷಿಕೆಯು ‘ವಸಂತಮುಖ’ ಕವನದ ಮೊದಲನೆಯ ನುಡಿಯ ಮೂರನೆಯ ಸಾಲೇ ಆಗಿರುವದನ್ನು ಗಮನಿಸಬಹುದು.

Monday, July 19, 2010

ಶಿಷ್ಟಾಚಾರ vs ದುಷ್ಟಾಚಾರ

ಕನ್ನಡದ ಖ್ಯಾತ ನಾಟಕಕಾರರಾದ ಶ್ರೀ ವ್ಯಾಸ ದೇಶಪಾಂಡೆಯವರು ಶಾಸಕರ ಬಗೆಗಿನ ತಮ್ಮ ಅಭಿಪ್ರಾಯವನ್ನು ಕವನರೂಪದಲ್ಲಿ ಅಭಿವ್ಯಕ್ತಿಸಿದ್ದಾರೆ. ಆಳುವ ಪಕ್ಷದವರೇ ಇರಲಿ, ವಿರೋಧ ಪಕ್ಷದವರೇ ಆಗಲಿ ಶಾಸಕರೆಲ್ಲ ಒಂದೇ. ಅವರು ಅಲ್ಲಿಯೂ ಸಲ್ಲದವರು, ಇಲ್ಲಿಯೂ ಸಲ್ಲದವರು. 

ವ್ಯಾಸ ದೇಶಪಾಂಡೆಯವರ ಕವನವನ್ನು ಓದಿ ಆನಂದಿಸಿರಿ:

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                    ವಿಧಾನಸಭೆಯ ಒಳಗಡೆ ಮಲಗಿ,
                                    ನಿಧಾನನೀತಿಯ ಜಗ್ಗಿದಿರಿ.
                                    ನಿಧಾನ ನಡೆಯ ಪ್ರಧಾನಕರ್ತರೆ,
                                    ಧರಣಿಯ ಶಯನವ ಮಾಡಿದಿರಿ.

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                    ಮೂರು ಕಾಲಿನ ಓಟವ ಓಡಿ,
                                    ಮೂರಾಬಟ್ಟೆ ಕಲಾಪ ಮಾಡಿ,
                                    ಮೂರೂ ಬಿಟ್ಟು ಬೈದಾಡಿದಿರಿ;
                                    ಘನತೆಯ ಬಿಟ್ಟು ಗುದ್ದಾಡಿದಿರಿ,
                                    ಧರಣಿಯ ಶಯನವ ಮಾಡಿದಿರಿ.

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                    ಗಣಿಗಣಿ ಝಣಝಣ ಹಪಿಹಪಿಸುವಿರಿ,
                                    ನಿಮ್ಮಯ ಪಾಲನು ಎಣಿಸುವಿರಿ;
                                    ಭೀಮ-ಬಕಾಸುರ ನುಂಗುವ ಕುಸ್ತಿ,
                                    ಸದನದ ಬಾವಿಗೆ ಹಾರುವ ಮಸ್ತಿ,
                                    ಧರಣಿಯ ಶಯನವ ಮಾಡಿದಿರಿ.

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                    ನೋಟಿನ ಹಾರವ ಕೊರಳಲಿ ಧರಿಸಿ,
                                    ಓಟನು ಕಾಸಿಗೆ ಕೊಳ್ಳುವಿರಿ;
                                    ಜನಹಿತವೆಂಬುದ ಮನದಲಿ ನೆನೆಯದೆ,
                                    ದಿಲ್ಲಿಯ ಬಾಗಿಲಿಗೋಡುವಿರಿ;
                                    ಧರಣಿಯಲ್ಲಿ ಉರಳಾಡುವಿರಿ,
                                    ಧರಣಿಯಲ್ಲಿ ಹೊರಳಾಡುವಿರಿ.

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                                                             ----ವ್ಯಾಸ ದೇಶಪಾಂಡೆ

 .................................................................................
ಶಾಸಕರಷ್ಟೇ ರಾಜಕಾರಣ ಮಾಡುತ್ತಾರಂತಲ್ಲ. ರಾಜ್ಯಪಾಲರು ಇನ್ನೂ ಹೆಚ್ಚಿನ ರಾಜಕೀಯದಲ್ಲಿ ಮುಳುಗಿದ ನಿದರ್ಶನಗಳಿವೆ. ಕರ್ನಾಟಕದ ಸದ್ಯದ ರಾಜಕೀಯವನ್ನೇ ಗಮನಿಸಿ:

ಕರ್ನಾಟಕದ ರಾಜ್ಯಪಾಲರು ತಮ್ಮ ಸರಕಾರದ ವಿರುದ್ಧವೇ ರಣಕಹಳೆಯನ್ನು ಊದಿದ್ದಾರೆ. ತಮ್ಮ ಹೋರಾಟವು ಭ್ರಷ್ಟಾಚಾರದ ವಿರುದ್ಧವೇ ಹೊರತು, ಬಿಜೆಪಿ ಪಕ್ಷದ ಸರಕಾರದ ವಿರುದ್ಧ ಅಲ್ಲ ಎನ್ನುವ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ. ತಾವು ರಾಜ್ಯಪಾಲರಾಗಿರುವದರಿಂದ ಯಾವುದೇ ಪಕ್ಷಕ್ಕೆ ಸೇರಿದವರು ಅಲ್ಲ; ಆದರೆ ತಮ್ಮ ಅಂತರಂಗದಲ್ಲಿ ತಾವು ನಿಷ್ಠ ಕಾಂಗ್ರೆಸ್ಸಿಗರು ಎಂದು ಬಿಚ್ಚುಮನಸ್ಸಿನಿಂದ ಹೇಳಿದ್ದಾರೆ. ಇವೆಲ್ಲವನ್ನೂ ಪರೀಕ್ಷಿಸುವ ಮೊದಲು ರಾಜ್ಯಪಾಲರ ಸಾಂವಿಧಾನಿಕ ಸ್ಥಿತಿಯನ್ನು ಸ್ವಲ್ಪ ಅವಲೋಕಿಸೋಣ.

ಭಾರತದ ರಾಷ್ಟ್ರಪತಿಗಳನ್ನು ಲೋಕಸಭೆಯ ಸದಸ್ಯರು ಚುನಾಯಿಸುತ್ತಾರೆ. ಹೀಗಾಗಿ ಕೇಂದ್ರದಲ್ಲಿ ಬಹುಮತದಲ್ಲಿದ್ದ ಪಕ್ಷಕ್ಕೆ ಬೇಕಾದ ಅಭ್ಯರ್ಥಿಯೇ ರಾಷ್ಟ್ರಪತಿಯಾಗುವದು ಸಹಜ. ರಾಷ್ಟ್ರಪತಿಯಾದ ಬಳಿಕ ಅವರ ನಿಷ್ಠೆಯು ಸಂವಿಧಾನಕ್ಕೆ ಮಾತ್ರ ಮೀಸಲಾಗಿರಬೇಕು. ಆದರೆ ಇಂದಿರಾ ಗಾಂಧಿಯವರು ಪ್ರಧಾನಿಯಾದ ಬಳಿಕ ರಾಷ್ಟ್ರಪತಿಯವರ ಸಂವಿಧಾನ ನಿಷ್ಠೆಯು ‘ಇಂದಿರಾ-ನಿಷ್ಠೆ’ಯಾಗಿ ಬದಲಾಯಿತು. ಶ್ರೀ ವರಾಹಗಿರಿ ವೆಂಕಟರಮಣ ಗಿರಿಯವರು ಇಂತಹ ಮೊದಲ ‘ಇಂದಿರಾ ನಿಷ್ಠ’ ರಾಷ್ಟ್ರಪತಿಗಳು. ಬಳಿಕ ಬಂದ ಫಕರುದ್ದೀನ ಅಲಿ ಅಹಮದರಂತೂ ತುರ್ತು ಪರಿಸ್ಥಿತಿಯ ಆದೇಶಕ್ಕೆ ಮಧ್ಯರಾತ್ರಿಯಲ್ಲಿ ರುಜು ಹಾಕಿ ‘ರಬ್ಬರ ಸ್ಟ್ಯಾಂಪ ರಾಷ್ಟ್ರಪತಿ’ ಎಂದು ಖ್ಯಾತರಾದರು.

ರಾಜ್ಯಪಾಲರ ಆಯ್ಕೆಯ ವಿಧಾನ ಹೀಗಿಲ್ಲ. ರಾಜ್ಯಪಾಲರದು ಚುನಾಯಿತ ಹುದ್ದೆಯಲ್ಲ. ಕೇಂದ್ರಸರಕಾರವು ತನಗೆ ಬೇಕಾದ ಯಾರನ್ನಾದರೂ ರಾಜ್ಯಪಾಲರೆಂದು ಆಯ್ದುಕೊಂಡು ನಿಯುಕ್ತಿಗೊಳಿಸುವದು. ಈ ನಿಯುಕ್ತಿಗೆ ರಾಷ್ಟ್ರಪಾಲರು ರುಜು ಹಾಕಲೇಬೇಕು. ಆದುದರಿಂದ ರಾಜ್ಯಪಾಲರು ರಾಷ್ಟ್ರಪ್ರತಿಗಳ ಪ್ರತಿನಿಧಿಯಲ್ಲ. ತಾತ್ವಿಕವಾಗಿ ಹಾಗು ವಾಸ್ತವದಲ್ಲಿ ಅವರು ಕೇಂದ್ರಸರಕಾರದ ಪ್ರತಿನಿಧಿ. ಭಾರತದಲ್ಲಿ ಬ್ರಿಟಿಶ್ ಆಳಿಕೆಯಲ್ಲಿದ್ದ ಕಾಲದಲ್ಲಿ, ಬ್ರಿಟಿಶರು ಪ್ರತಿಯೊಂದು ಸಂಸ್ಥಾನದಲ್ಲಿ ತಮ್ಮ ಪರವಾಗಿ Resident ಎನ್ನುವ ಒಬ್ಬ ಏಜಂಟನನ್ನು ನಿಯಮಿಸುತ್ತಿದ್ದರು. ರಾಜ್ಯಪಾಲರನ್ನು ಕೇಂದ್ರಸರಕಾರದ Resident ಎಂದು ಕರೆಯಬಹುದು. ರಾಜ್ಯಪಾಲರು ಕೇಂದ್ರಸರಕಾರಕ್ಕೆ ವರದಿಗಳನ್ನು ಸಲ್ಲಿಸುತ್ತಾರೆಯೆ ವಿನ: ರಾಷ್ಟ್ರಪತಿಗಳಿಗಲ್ಲ. ಈ ವರದಿಗಳನ್ನು ಆಧರಿಸಿ ಕೇಂದ್ರಸರಕಾರವು ತನಗೆ ಉಚಿತವೆನಿಸಿದ ಕ್ರಮವನ್ನು ಕೈಗೊಳ್ಳುವದು. ನಮ್ಮದು Unitary ಹಾಗು Fedaral ಇವೆರಡರ ಸಂಯುಕ್ತ ಪದ್ಧತಿಯಾಗಿರುವದರಿಂದ, ಈ ತರಹದ ವಿಧಾನವನ್ನು ಮಾಡಲಾಗಿದೆ. ಹೀಗಿರುವಾಗ, ರಾಜ್ಯಪಾಲರು ಪಕ್ಷಾತೀತರಾಗಿರಬೇಕು ಹಾಗು ಸಂವಿಧಾನಕ್ಕೆ ಮಾತ್ರ ನಿಷ್ಠರಾಗಿರಬೇಕು ಎಂದು ಅಪೇಕ್ಷಿಸುವದು ಸಾಧ್ಯವಾದೀತೆ?

ರಾಜ್ಯಪಾಲರು ಪಕ್ಷಾತೀತರಾದರೆ, ಅವರು ಆನಂತರ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು, ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಯಾವುದೇ ಸ್ಥಾನವನ್ನು (ಅಂದರೆ ಮಂತ್ರಿಸ್ಥಾನ ಇತ್ಯಾದಿ) ಹೊಂದಬಾರದು. ಆದರೆ, ವಸ್ತುಸ್ಥಿತಿ ಹಾಗಿಲ್ಲ. ಶ್ರೀ ಎಸ್.ಎಮ್. ಕೃಷ್ಣರು ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದರು. ಆ ಅವಧಿಯಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ತೀರ ಬೇಕಾದವರಾದರು. ಆದುದರಿಂದ ರಾಜ್ಯರಾಜಕಾರಣದಿಂದ ನಿವೃತ್ತರಾಗಬೇಕಾದ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಪದವಿಯನ್ನು ಗಿಟ್ಟಿಸಿಕೊಂಡರು.  ಆಬಳಿಕ ಮತ್ತೆ ಕೇಂದ್ರ ಮಂತ್ರಿಗಳಾಗಿ ದಿಲ್ಲಿಗೆ ಹಾರಿದರು. ಇಂತಹ ರಾಜ್ಯಪಾಲರು ಪಕ್ಷಾತೀತರಾಗಿ ಉಳಿಯಬೇಕೆಂದು ಅಪೇಕ್ಷಿಸಲು ಸಾಧ್ಯವೆ? ಇವರ ನಿಷ್ಠೆ ಏನಿದ್ದರೂ ತಮ್ಮನ್ನು ನಿಯಮಿಸಿದ ಯಜಮಾನನಿಗೆ (ಯಜಮಾನಳಿಗೆ) ಮಾತ್ರ.

ಯಜಮಾನ-ನಿಷ್ಠೆಯ (ಇಂದಿರಾ-ನಿಷ್ಠೆಯ) ಪರಮಾವಧಿಯನ್ನು ಪ್ರದರ್ಶಿಸಿದ ರಾಜ್ಯಪಾಲರೆಂದರೆ ೧೯೮೪ರಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ರಾಮಲಾಲರು. ಆ ಸಮಯದಲ್ಲಿ ಶ್ರೀ ಎನ್.ಟಿ.ರಾಮರಾವರು ವಿಧಾನಸಭೆಯ ಚುನಾವಣೆಯಲ್ಲಿ ಬಹುಮತ ಪಡೆದಿದ್ದರು. ಆದರೆ  ರಾಜ್ಯಪಾಲರಾದ ರಾಮಲಾಲರು ರಾಮರಾವರ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿದ್ದ ಭಾಸ್ಕರರಾವ ಎನ್ನುವವರ ನೇತೃತ್ವದಲ್ಲಿ ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟರು. ರಾಮರಾವರು ತಮ್ಮ ಶಾಸಕರನ್ನು ಕರೆದೊಯ್ದು ರಾಜ್ಯಪಾಲರಿಗೆ ತೋರಿಸಿದರೂ ಸಹ ರಾಮಲಾಲ ಮಣಿಯಲಿಲ್ಲ. ಆಗ ರಾಮರಾವ ಅವರು ತಮ್ಮೆಲ್ಲ ಶಾಸಕರನ್ನು ಕರೆದುಕೊಂಡು ದಿಲ್ಲಿಗೆ ಹೋಗಿ ಅಲ್ಲಿ ತಮ್ಮ ಬಹುಮತದ ಪ್ರದರ್ಶನ ಮಾಡಿದರು. ‘ತಲೆಗಳನ್ನು ಎಣಿಸಲು ಬಾರದ ಗಣಿತಪಂಡಿತ ಎಂದು ರಾಮಲಾಲರನ್ನು ಆಗ ಪತ್ರಿಕೆಗಳು ಗೇಲಿ ಮಾಡಿದವು. ರಾಮರಾವರು ಮತ್ತೆ ಸರಕಾರವನ್ನು ರಚಿಸಿದರು. ರಾಮಲಾಲರು ರಾಜ್ಯಪಾಲ ಹುದ್ದೆಯನ್ನು ಬಿಟ್ಟು ದಿಲ್ಲಿಗೆ ಮರಳಬೇಕಾಯಿತು. ರಾಮರಾವರಿಗೆ ಮಣ್ಣು ಕಾಣಿಸಲು ಹೋದ ರಾಮಲಾಲರು ತಾವೇ ಮಣ್ಣು ಮುಕ್ಕಿದರು. ಅವರ ಸ್ಥಾನದಲ್ಲಿ ಬಂದ ಶಂಕರ ದಯಾಳ ಶರ್ಮಾರ ವರದಿಯನ್ನು ಆಧರಿಸಿ, ಕೇಂದ್ರ ಸರಕಾರವು ಮೂರೇ ತಿಂಗಳುಗಳಲ್ಲಿ ಎನ್.ಟಿ. ರಾಮರಾವ ಸರಕಾರವನ್ನು ವಜಾ ಮಾಡಿ, ವಿಧಾನಸಭೆಯನ್ನು ವಿಸರ್ಜಿಸಿತು. ಮತ್ತೆ ಚುನಾವಣೆಯನ್ನು ನಡೆಯಿಸಲಾಯಿತು. ರಾಮರಾವರು ಮತ್ತೆ ಬಹುಮತ ಗಳಿಸಿ ಮತ್ತೊಮ್ಮೆ ಮುಖ್ಯ ಮಂತ್ರಿಯಾದರು !

೧೯೮೯ರಲ್ಲಿ ಕರ್ನಾಟಕದಲ್ಲಿ ಜನತಾಪಕ್ಷದ ಸರಕಾರವಿತ್ತು. ಎಸ್. ಆರ್. ಬೊಮ್ಮಾಯಿಯವರು ಮುಖ್ಯ ಮಂತ್ರಿಗಳಾಗಿದ್ದರು. ಸರಕಾರದ ಬಹುಮತ ಕುಸಿದಿದೆ ಎನ್ನುವ ಆಪಾದನೆಯನ್ನು ವಿಧಾನಸಭೆಯಲ್ಲಿ ಪರೀಕ್ಷಿಸದೆ, ಆಗಿನ ರಾಜ್ಯಪಾಲರಾಗಿದ್ದ ಪಿ. ವೆಂಕಟಸುಬ್ಬಯ್ಯನವರು ೨೦-೪-೧೯೮೯ರಂದು ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರಿಗೆ ವರದಿ ನೀಡಿದರು. ಅದೇ ದಿನ ಬೊಮ್ಮಾಯಿ ಸರಕಾರವನ್ನು ವಜಾ ಮಾಡಿ, ವಿಧಾನಸಭೆಯನ್ನು ವಿಸರ್ಜಿಸಲಾಯಿತು ಹಾಗು ರಾಷ್ಟ್ರಪತಿ ಆಳಿಕೆಯನ್ನು ಕರ್ನಾಟಕದ ಮೇಲೆ ಹೇರಲಾಯಿತು. ಇದೇ ರೀತಿಯಲ್ಲಿ ೧೯೮೮ರಲ್ಲಿ ನಾಗಾಲ್ಯಾಂಡ ಸರಕಾರವನ್ನು, ೧೯೯೧ರಲ್ಲಿ ಮೇಘಾಲಯ ಸರಕಾರವನ್ನು ವಜಾ ಮಾಡಲಾಗಿತ್ತು. ಬಾಬರಿ ಮಸೀದಿ ಪ್ರಕರಣದ ನಂತರ ೧೫-೧೨-೧೯೯೨ರಂದು ಬಿ.ಜೆ.ಪಿ.ಸರಕಾರಗಳನ್ನು ಹೊಂದಿದ ಮೂರು ರಾಜ್ಯಗಳಲ್ಲಿ (ಮಧ್ಯ ಪ್ರದೇಶ,ಹಿಮಾಚಲ ಪ್ರದೇಶ ಹಾಗು ರಾಜಸ್ಥಾನ) ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಇವೆಲ್ಲ ಸಂದರ್ಭಗಳಲ್ಲಿ ರಾಜ್ಯಪಾಲರು ಕೇಂದ್ರಸರಕಾರದ ಪ್ರತಿನಿಧಿಯಂತೆ ವರ್ತಿಸದೆ, ಕೇಂದ್ರದಲ್ಲಿಯ ಆಡಳಿತ ಪಕ್ಷದ ಪ್ರತಿನಿಧಿಯಂತೆ ವರ್ತಿಸಿದ್ದು ಸ್ಪಷ್ಟವಿದೆ. ಕರ್ನಾಟಕ, ಮೇಘಾಲಯ ಹಾಗು ನಾಗಾಲ್ಯಾಂಡಗಳ ಮೇಲ್ಮನವಿಗಳನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರು ವಿಧಾನಸಭೆಯ ವಿಸರ್ಜನೆಗೆ ವರದಿ ಸಲ್ಲಿಸುವ ಮೊದಲು, ವಿಧಾನಸಭೆಯಲ್ಲಿಯೇ ಪಕ್ಷಗಳ ಬಲಾಬಲವನ್ನು ಪರೀಕ್ಷಿಸಲು, ವಿಧಾನಸಭೆಯ ಸಭಾಪತಿಗಳಿಗೆ ಸೂಚನೆ ನೀಡುವದೇ ಸರಿಯಾದ ಏಕೈಕ ವಿಧಾನ ಎಂದು ನಿರ್ಣಯ ನೀಡಿತು. ಇದು ಕೇಂದ್ರಸರಕಾರಕ್ಕೆ ಆದ ಮುಖಭಂಗ. ಆದರೇನು, ಅದಾಗಲೇ ಕರ್ನಾಟಕದಲ್ಲಿ ಮರುಚುನಾವಣೆಗಳನ್ನು ಜರುಗಿಸಲಾಗಿತ್ತು. ಈ ಸಲವೂ ಸಹ ಜನತಾ ಪಕ್ಷವೇ ಅಧಿಕಾರಕ್ಕೆ ಬಂದಿತು. ಆದರೆ ಬೊಮ್ಮಾಯಿಯವರಿಗೆ ಆದ ಹಾನಿಯನ್ನು ಸರಿಪಡಿಸಲಾಗಲಿಲ್ಲ. ಏಕೆಂದರೆ ಅವರ ಬದಲು, ಈ ಬಾರಿ ದೇವೇಗೌಡರು ಮುಖ್ಯ ಮಂತ್ರಿಗಳಾದರು !

ಈ ರೀತಿಯಾಗಿ ಕೇಂದ್ರ ಸರಕಾರವು ಚುನಾಯಿತ ರಾಜ್ಯಸರಕಾರವನ್ನು ಉರುಳಿಸಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಲೇ ಬಂದಿದೆ. ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರಿಗೆ ಮೂಗುದಾಣ ಹಾಕಿದ ನಂತರವೇ ಈ ಕುಟಿಲ ತಂತ್ರಕ್ಕೆ ಕಡಿವಾಣ ಬಿದ್ದಿದೆ.

ಕರ್ನಾಟಕದ ಸದ್ಯದ ರಾಜ್ಯಪಾಲ ಭಾರದ್ವಾಜರು ಸಂವಿಧಾನವನ್ನು ಮೀರುವ ಕಾರ್ಯವನ್ನು ಮಾಡಿಲ್ಲ. ತಮ್ಮ ಯಜಮಾನರ ಆದೇಶ ಬಂದರೆ ಮಾಡಲೂ ಸಿದ್ಧ ಎನ್ನುವ ಧೋರಣೆಯನ್ನು ಅವರು ಪ್ರದರ್ಶಿಸಿದ್ದಾರೆ.  ಅಂದರೆ ಅವರು ಒಬ್ಬ ರಾಜಕಾರಣಿಯಂತೆಯೇ ವರ್ತಿಸಿದ್ದಾರೆ.  ರಾಜ್ಯಪಾಲರ ಗೌರವಯುತ ಹುದ್ದೆಯಲ್ಲಿದ್ದ ವ್ಯಕ್ತಿ ಸಾರ್ವಜನಿಕ ಮಾಧ್ಯಮಗಳ ಎದುರಿಗೆ ತಾನು ಒಂದು ಪಕ್ಷಕ್ಕೆ ಸೇರಿದವನು ಎಂದು ಘೋಷಿಸುವದು ಉಚಿತವೆ? ತನ್ನ ಸರಕಾರದ ವಿರುದ್ಧವೇ ಸಾರ್ವಜನಿಕವಾಗಿ ಟೀಕೆ ಮಾಡಬಹುದೆ? ಇದರಲ್ಲಿ ರಾಜಕೀಯ ದುರುದ್ದೇಶ ಇಲ್ಲವೆ? ಇದು ಶಿಷ್ಟಾಚಾರವೊ ಅಥವಾ ದುಷ್ಟಾಚಾರವೊ? ಅಥವಾ ಅವರು ತಮ್ಮ ಪಕ್ಷ ನಿಷ್ಠೆಯನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸುತ್ತಿದ್ದಾರೆಯೆ? ಯಾರಿಗೆ ಗೊತ್ತು, ಇಂತಹ ನಿಷ್ಠೆಯನ್ನು ಪ್ರದರ್ಶಿಸಿದ್ದಕ್ಕಾಗಿ, ಅವರಿಗೆ ಭವಿಷ್ಯದಲ್ಲಿ ಉಪರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಹುದ್ದೆ ದೊರೆಯಲೂ ಬಹುದು!

Thursday, July 15, 2010

ಶಾಸಕರ ವರ್ತನೆಯ ಮಾನದಂಡ ಹಾಗು ಸಾರ್ವಜನಿಕ ಕಣ್ಗಾವಲು

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಧರಣಿ ಕೂತಿದ್ದಾರೆ. ಧರಣಿ ಕೂಡುವ ಹಕ್ಕು ಶಾಸಕರಿಗೆ ಇದೆ. ಈ ಧರಣಿಯ ಮೂಲಕ ಈ ಶಾಸಕರು ಏನನ್ನು ಸಾಧಿಸಬಯಸುತ್ತಾರೆ ಎನ್ನುವದರ ಮಂಥನ ನನ್ನ ಗುರಿಯಲ್ಲ. ನನ್ನನ್ನು ತೀವ್ರ ಚಿಂತನೆಗೆ ಹಾಗು ಚಿಂತೆಗೆ ಒಡ್ಡಿರುವದು ಧರಣಿಯ ಸ್ವರೂಪ.

ಮಹಾತ್ಮಾ ಗಾಂಧಿಯವರು ಮೊದಲ ಸಲ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ‘Asiatic Registration Act’ದ ವಿರುದ್ಧ ನಡೆದ ಈ ಸತ್ಯಾಗ್ರಹದಲ್ಲಿ ಆಫ್ರಿಕಾದಲ್ಲಿದ್ದ ಅನೇಕ ಭಾರತೀಯರು (೨೦೩೭ ಜನ ಗಂಡಸರು, ೧೨೭ ಜನ ಹೆಂಗಸರು ಹಾಗು ೫೭ ಜನ ಬಾಲರು) ಚಾರ್ಲ್ಸ್‌ಟೌನಿನಿಂದ ಟ್ರಾನ್ಸವಾಲದ ರಾಜಧಾನಿ ಪ್ರಿಟೋರಿಯಾ ತಲುಪಲು ಸುಮಾರು ನೂರು ಕಿಲೊಮೀಟರಗಳನ್ನು  ಕಾಲ್ನಡಿಗೆಯಲ್ಲಿ ನಡೆದರು. ಮಾರ್ಗದುದ್ದಕ್ಕೂ ಭಜನೆಗಳು ನಡೆಯುತ್ತಿದ್ದವು. ರಾತ್ರಿಯ ಹೊತ್ತು  ಬಯಲಿನಲ್ಲಿ ಬೀಡು ಬಿಟ್ಟು, ಬೆಳಗಿನಲ್ಲಿ ಮತ್ತೆ ಮುನ್ನಡೆಯಬೇಕಾಗುತ್ತಿತ್ತು. ಮಾರ್ಗಮಧ್ಯದಲ್ಲಿ ಸಣ್ಣಪುಟ್ಟ ತೊರೆಗಳನ್ನು,  ದಾಟಬೇಕಾಗುತ್ತಿತ್ತು. ಆ ಸಮಯದಲ್ಲಿ ಎರಡು ಶಿಶುಗಳು ಮರಣ ಹೊಂದಿದವು. ಈ ಸತ್ಯಾಗ್ರಹಿಗಳ ಒಂದು ಪೂರ್ಣದಿನದ ಆಹಾರವೆಂದರೆ ಒಂದೂವರೆ ಪೌಂಡ್ ಬ್ರೆಡ್ ಹಾಗು ಒಂದು ಔನ್ಸ್ ಸಕ್ಕರೆ.

ಮಹಾತ್ಮಾ ಗಾಂಧಿಯವರ ಈ ಸತ್ಯಾಗ್ರಹವನ್ನು ಈಗ ನಮ್ಮ ಶಾಸಕರು ನಡೆಸುತ್ತಿರುವ ಸತ್ಯಾ(?)ಗ್ರಹದೊಂದಿಗೆ ಹೋಲಿಸಿ ನೋಡಿರಿ. ಧರಣಿ ಕೂತ ನಮ್ಮ ಶಾಸಕರಿಗೆ ದಿನಕ್ಕೊಂದು ಬಗೆಯ ತಿನಿಸುಗಳ ಏರ್ಪಾಡಾಗುತ್ತಿವೆ. ಬೇಕಾದವರಿಗೆ ಬಾಡೂಟ ಸಹ ಲಭ್ಯ. ಇದರಲ್ಲಿ ತಪ್ಪೇನಿಲ್ಲ. ಯಾವುದೇ ನಿಷೇಧಿತ ಪದಾರ್ಥವನ್ನು ಅವರು ಸೇವಿಸಿಲ್ಲ. ಬಹುಶಃ ಗೋಮಾಂಸವನ್ನು ತಿಂದರೂ ತಪ್ಪಾಗಲಿಕ್ಕಿಲ್ಲ. ಶಾಸಕ ಶ್ರೀ ನಾಣಯ್ಯನವರಂತೂ ಗೋಹತ್ಯಾನಿಷೇಧ ಶಾಸನದ ವಿರೋಧಿಗಳೇ ಆಗಿದ್ದಾರೆ. ಈ ತರ್ಕವನ್ನು ಮುಂದುವರಿಸಿದರೆ, ‘ಪಾನಸೇವನೆ’ಯಲ್ಲಿಯೂ ತಪ್ಪಿಲ್ಲ. ಯಾಕೆಂದರೆ ಗುಜರಾತ ರಾಜ್ಯದಲ್ಲಿ ಇರುವಂತೆ ನಮ್ಮಲ್ಲಿ ಪಾನಪ್ರತಿಬಂಧವಿಲ್ಲ. ಕರ್ನಾಟಕವನ್ನು ಗುಜರಾತ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವೆ ಎಂದು ಹೇಳುವ ಮು.ಮಂ. ಯಡ್ಯೂರಪ್ಪನವರಿಗೂ ಸಹ ಪಾನಪ್ರತಿಬಂಧ ಬೇಕಾಗಿಲ್ಲ. ಹಾಗಿರುವದರಿಂದ ಈ ಧರಣಿಯಲ್ಲಿ ಮಾಂಸಸೇವನೆ ಹಾಗು ಮದ್ಯಪಾನಕ್ಕೆ ಅವಕಾಶವಿದ್ದರೆ ತಪ್ಪೇನಿಲ್ಲ. ಕ್ಯಾಬರೆ ನೃತ್ಯವೂ ಸಹ ಮಧ್ಯರಾತ್ರಿಯವರೆಗೆ ಶಾಸನಬದ್ಧವೇ ಆಗಿರುವದರಿಂದ ಅವಕ್ಕೂ ಸಹ ವಿಧಾನಸೌಧದಲ್ಲಿ ಆಸ್ಪದವೀಯಬಹುದು! (ಸಭಾಧ್ಯಕ್ಷರು ರೂಲಿಂಗ್ ಕೊಡಬಹುದು!)

ಇದಲ್ಲದೆ ಶಾಸಕರು ವಿಧಾನಸೌಧದಲ್ಲಿ / ಲೋಕಸಭಾಭವನದಲ್ಲಿ ಏನು ಮಾಡಿದರೂ ಸಹ ಅದನ್ನು ಪ್ರಶ್ನಿಸುವಂತಿಲ್ಲ ಎಂದು ನಮ್ಮ ಸರ್ವೋಚ್ಚ ನ್ಯಾಯಾಲಯವೇ ತೀರ್ಪು ಕೊಟ್ಟುಬಿಟ್ಟಿದೆ(----ಶಿಬು ಸೋರೆನ್ ಲಂಚ ಪ್ರಕರಣದಲ್ಲಿ). ಲಂಚವೇ ಆಗಲಿ, ಮಂಚವೇ ಆಗಲಿ ವಿಧಾನಸೌಧದ ಹೊರಗೆ ಜರುಗಿದರಷ್ಟೇ ಅಪರಾಧ(ಉದಾ: ಹರತಾಳ ಹಾಲಪ್ಪನವರ ಪ್ರಕರಣ.) ವಿಧಾನಸೌಧದ ಒಳಗೆ ಜರುಗಿದಾಗ ಇದು ಶಾಸಕರ privilegesನಲ್ಲಿ ಬರುವದರಿಂದ ಇದನ್ನು ಪ್ರಶ್ನಿಸುವಂತಿಲ್ಲ. 

ಹಾಗಿದ್ದರೆ ಶಾಸಕರು ಪ್ರಶ್ನಾತೀತರೆ? ಅವರ ನಡತೆಗೆ ಯಾವುದೇ ಮಾನದಂಡವಿಲ್ಲವೆ? ನಮ್ಮಲ್ಲಿ ಜಾರಿಯಲ್ಲಿರುವ ‘ಭಾರತದ ಸಂವಿಧಾನ’ದ ಪ್ರಕಾರ ವಿಧಾನಸೌಧದಲ್ಲಿ( ಅದರಂತೆ ಲೋಕಸಭಾ ಭವನದಲ್ಲಿ) ಅವರು ಪ್ರಶ್ನಾತೀತರು. ಆದರೆ ‘ನೈತಿಕ ಸಂವಿಧಾನ’ ಎನ್ನುವದು ಒಂದು ಇರುತ್ತದೆಯಲ್ಲವೆ? ನಮ್ಮ ಶಾಸಕರ ಧರಣಿ ಸತ್ಯಾಗ್ರಹವನ್ನು ಗಮನಿಸುತ್ತಿರುವ ಸಾರ್ವಜನಿಕರಿಗೆ ಇವರದು ಲಘು ವರ್ತನೆ ಮತ್ತು ಅಸಹ್ಯವರ್ತನೆ—obnoxious-- ಎನ್ನಿಸಲಿಕ್ಕಿಲ್ಲವೆ?

ಸಾರ್ವಜನಿಕ ಅಭಿಪ್ರಾಯಕ್ಕೆ ಹೆದರುವ ಶಾಸಕರಾದರೆ ತಮ್ಮ ವರ್ತನೆಗೆ ಒಂದು ಲಕ್ಷ್ಮಣರೇಖೆಯನ್ನು ಎಳೆದುಕೊಂಡಿರುತ್ತಾರೆ.  ‘ಸಾರ್ವಜನಿಕ ಕಣ್ಗಾವಲು’—public watch--- ಎನ್ನುವ ಮಾನದಂಡಕ್ಕೆ ಮರ್ಯಾದೆಯನ್ನು ಕೊಡುತ್ತಾರೆ. ಅಂಥವರು ಈಗೆಲ್ಲಿ ಸಿಗುತ್ತಾರೆ, ಹೇಳಿ.
ಮಹಾತ್ಮಾ ಗಾಂಧಿಯ ಕಾಲ ಈಗ ಮುಗಿದು ಹೋಗಿದೆ. ಇದೀಗ ‘ಮಜಾತ್ಮಾ ಗಾಂಧಿ’ಗಳ ಕಾಲ!

ಶಾಸಕರಿಗಾಗಿ ಒಂದು ನಗೆಹನಿ(?):
ಕೊಲ್ಲಾಪುರವು ಮರಾಠಾ ರಾಜ್ಯದ ರಾಜಧಾನಿಯಾಗಿತ್ತು. ಅಲ್ಲಿ ಶಿವಾಜಿ ಮಹಾರಾಜರ ಹಾಗು ಶಾಹೂ ಮಹಾರಾಜರ ಅನೇಕ ಪ್ರತಿಮೆಗಳಿವೆ. ಅವೆಲ್ಲ ಆಶ್ವಾರೂಢರಾಗಿ ಕೈಯಲ್ಲಿ ಖಡ್ಗ ಹಿಡಿದ ಪ್ರತಿಮೆಗಳು. ಗಾಂಧೀಜಿಯವರ ಪ್ರತಿಮೆ ಸಹ ಅಲ್ಲಿಯ ಒಂದು ಉದ್ಯಾನದಲ್ಲಿದೆ.

ಒಂದು ರಾತ್ರಿ, ಓರ್ವ ನಿರುದ್ಯೋಗಿ ತರುಣ ಆ ಉದ್ಯಾನವನದಲ್ಲಿ ಗಾಂಧೀಜಿಯ ಪ್ರತಿಮೆಯ ಕೆಳಗೆ ಚಿಂತಾಮಗ್ನನಾಗಿ ಕುಳಿತುಕೊಂಡಿದ್ದ. ಸರಿಯಾಗಿ ಮಧ್ಯರಾತ್ರಿಯ ಸಮಯದಲ್ಲಿ ಆ ತರುಣನ ತಲೆಯ ಮೇಲೆ ಟಪ್, ಟಪ್ ಎಂದು ಎರಡು ಹನಿಗಳು ಉದುರಿದವು. ಈ ಬೇಸಿಗೆಯಲ್ಲಿ ಎಂತಹ ಮಳೆ ಎಂದು ಆತ ಮುಖವೆತ್ತಿ ನೋಡಿದ. ಆಶ್ಚರ್ಯ ! ಗಾಂಧೀಜಿಯ ಕಣ್ಣುಗಳಿಂದ ಹನಿಗಳು ಉದುರುತ್ತಿವೆ ! ಆಘಾತಗೊಂಡ ಆತ ಕೇಳಿದ:
“ಬಾಪೂ, ಏಕೆ ಅಳುತ್ತಿದ್ದೀರಿ?”

ಪ್ರತಿಮೆ ನುಡಿಯಿತು: “ಮಗೂ, ಕೊಲ್ಲಾಪುರದಲ್ಲಿರುವ ಮರಾಠಾ ರಾಜರ ಪ್ರತಿಮೆಗಳನ್ನು ನೋಡು. ಎಲ್ಲರೂ ಕುದುರೆಯ ಮೇಲೆ ಕುಳಿತುಕೊಂಡಿದ್ದಾರೆ. ಇಷ್ಟು ವರುಷಗಳವರೆಗೆ ನಿಂತುಕೊಂಡಿದ್ದರಿಂದ ನನ್ನ ಕಾಲು ನೋಯತೊಡಗಿವೆ.  ನನಗೂ ಒಂದು ಕುದುರೆ ಇದ್ದರೆ, ನಾನೂ ಸಹ ಆರಾಮಾಗಿ ಕುಳಿತುಕೊಳ್ಳಬಹುದಾಗಿತ್ತು!”

ನಮ್ಮ ನಿರುದ್ಯೋಗಿ ತರುಣನ ಮನಸ್ಸು ಮಿಡಿಯಿತು. ತತ್‌ಕ್ಷಣವೇ ಹೇಳಿದ: “ಚಿಂತಿಸಬೇಡಿ, ಬಾಪೂ! ನಾಳೆಯೇ ನಿಮಗಾಗಿ ಒಂದು ಕುದುರೆಯ ವ್ಯವಸ್ಥೆ ಮಾಡುತ್ತೇನೆ.”

ಇಷ್ಟು ಹೇಳಿದ ಆ ತರುಣ ಮರುದಿನ ಬೆಳಿಗ್ಗೆ ಕೊಲ್ಲಾಪುರದ ಶಾಸಕರ ಮನೆಗೆ ಹೋಗಿ, ರಾತ್ರಿ ಜರುಗಿದ ಘಟನೆಯನ್ನು ಅವರಿಗೆ ವಿವರಿಸಿ, ಬಾಪೂಜಿಗೂ ಸಹ ಒಂದು ಕುದುರೆಯನ್ನು ಮಾಡಿಕೊಡಲು ವಿನಂತಿಸಿದ.
ಇಂತಹದನ್ನೆಲ್ಲ ನಂಬಲು ಶಾಸಕರೇನು ಹುಚ್ಚರೆ? ಆದರೆ ಈತ ತನ್ನ ಪಟ್ಟು ಬಿಡಲು ತಯಾರಿಲ್ಲ. “ನೀವೇ ಬೇಕಾದರೆ ಬಂದು ನೋಡಿರಿ”, ಎಂದು ಶಾಸಕರಿಗೆ ಒತ್ತಾಯ ಮಾಡಿದ. ಶಾಸಕರು ಸಹ ತಯಾರಾದರು.

ಆ ರಾತ್ರಿ ನಿರುದ್ಯೋಗಿ ತರುಣ ಹಾಗು ಶಾಸಕರು ಜೊತೆಯಾಗಿ ಉದ್ಯಾನವನಕ್ಕೆ ಹೋದರು. ಪ್ರತಿಮೆಯ ಬಳಿಗೆ ಬಂದ ತರುಣನು, “ಬಾಪೂಜಿ, ಶಾಸಕ ಮಹಾಶಯರನ್ನು ಕರೆದುಕೊಂಡು ಬಂದಿದ್ದೇನೆ” ಎಂದು ನುಡಿಯುತ್ತಿದ್ದಂತೆಯೇ, ಬಾಪೂಜಿಯ ಮೂರ್ತಿಯು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಆ ತರುಣನ ಮೇಲೆ ಬೀಸಿ ಉದ್ಗರಿಸಿತು:
“ಮೂರ್ಖಾ, ಕುದುರೆಯನ್ನು ತೆಗೆದುಕೊಂಡು ಬಾ ಎಂದು ನಿನಗೆ ಹೇಳಿದ್ದೆ ; ನೀನು ಕತ್ತೆಯನ್ನು ಕರೆದುಕೊಂಡು ಬಂದಿದ್ದೀಯಲ್ಲ!”