Sunday, March 16, 2008

ಬೇಂದ್ರೆ, ಕುವೆಂಪು; ಉಪಮಾ-ಪ್ರಯೋಗ

ಭಾರತೀಯ ಸಾಹಿತ್ಯದಲ್ಲಿ ಕಾಳಿದಾಸನು ಔಚಿತ್ಯಪೂರ್ಣ ಉಪಮೆಗಳಿಗಾಗಿ ಪ್ರಸಿದ್ಧನಾಗಿದ್ದಾನೆ. ಅಂತೆಯೇ ’ಉಪಮಾ ಕಾಳಿದಾಸಸ್ಯ’ ಎಂದು ಹೇಳಲಾಗುತ್ತದೆ. ಕನ್ನಡದ ಅನೇಕ ಕವಿಗಳೂ ತಮ್ಮ ಸಾಹಿತ್ಯದಲ್ಲಿ ಸುಂದರವಾದ ಉಪಮೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಉದಾಹರಿಸಬಹುದು:

೧) ಕಾಲೇಜು ಹುಡುಗಿಯರ ನಗೆಯಂತೆ ಹರಡುತಿದೆ ವಿದ್ಯುದ್ವಳ್ಳಿವೆಳಗು (-ಕ.ವೆಂ.ರಾಜಗೋಪಾಲ)
೨) ತೆರೆದ ಅಂಗಡಿ ತೆರದಿ ಮಲಗಿಹಳು ತರಳೆ (-ರಾಮಚಂದ್ರ ಶರ್ಮ)
೩) ಮರದೊಳಗಡಗಿದ ಬೆಂಕಿಯಂತೆ ಎಲ್ಲೊ ಅಡಗಿದೆ ಬೇಸರ (-ಗೋಪಾಲಕೃಷ್ಣ ಅಡಿಗ)
೪) ನೀರೊಳಗೆ ವೀಣೆ ಮಿಡಿದಂತೆ ಆಡುವ ಮಾತು, ಬೇಲಿಯಲಿ ಹಾವು ಹರಿದಂತೆ (-ಕೆ.ಎಸ್. ನರಸಿಂಹಸ್ವಾಮಿ)
೫) ಬರಿದೊ ಬರಿದು, ತೆರವೊ ತೆರವು ಬಡವರ ಬಗ್ಗರ ತುತ್ತಿನ ಚೀಲಾ (-ಬೇಂದ್ರೆ)

ಬೇಂದ್ರೆ ಹಾಗು ಕುವೆಂಪು ಇವರ ಕವನಗಳಲ್ಲಿಯೂ ಅನೇಕ ಉಪಮೆಗಳು ಹರಿದು ಬಂದಿವೆ. ಕಾವ್ಯದಲ್ಲಿ ಉಪಮೆಯ ಉಪಯೋಗ ಸಹಜವಾದದ್ದೆ. ಆದರೆ ಈ ಉಪಮೆಗಳು ಸಹಜವಾಗಿರಬೇಕು ಹಾಗೂ ಹಿತಮಿತವಾಗಿರಬೇಕು. ಕಾವ್ಯಕನ್ನಿಕೆಯನ್ನು ಉಪಮಾಲಂಕಾರದಿಂದಲೇ ಮುಚ್ಚುವದು ಸರಿಯಲ್ಲ. ಕುವೆಂಪುರವರ ಅನೇಕ ಕವನಗಳಲ್ಲಿ ಈ ಆಭಾಸವು ವ್ಯಕ್ತವಾಗುತ್ತದೆ. ಅವರ ಈ ಕವನವನ್ನು ಗಮನಿಸಿರಿ:

“ಶೋಡಷ ಚೈತ್ರದ ಸುಂದರಿ ನೀನು,
ಕಾಮನ ಬಿಲ್ಲಿನ ಬಣ್ಣದ ಬೋನು,
ನಿನ್ನಾ ಕಣ್ಣು ನೀರಲ ಹಣ್ಣು
ನನ್ನೆದೆ ಹಕ್ಕಿಯೂ ಬಲೆಯಲಿ ಮೀನು!”

ಈ ನಾಲ್ಕು ಸಾಲಿನಲ್ಲಿ ಐದು ಉಪಮೆಗಳು ಬಂದಿದ್ದು, ಕುವೆಂಪು ಏನು ಹೇಳುತ್ತಾರೆನ್ನುವದೇ ತಿಳಿಯದಂತಾಗುತ್ತದೆ. ಕಾಮನ ಬಿಲ್ಲಿನಂತೆ ಈ ಶೋಡಷಿ ಮೋಹಕಳಾಗಿರುವಳೆಂದು ಕವಿ ಹೇಳುತ್ತಿದ್ದಾರೆಯೆ? ಸರಿ, ಆದರೆ ಅವಳು “ಬೋನು” ಯಾಕಾಗಬೇಕು? ಪುರುಷಾಮೃಗಗಳನ್ನು ಬಂಧಿಸಲೆಂದೆ? ಮುಂದಿನ ಸಾಲಿನಲ್ಲಿ ಅವಳ ಕಣ್ಣಿಗೆ ನೀರಲ ಹಣ್ಣಿನ ಉಪಮೆ ಕೊಡಲಾಗಿದೆ. ಆಬಳಿಕ ಕವಿಯ ಮನಸ್ಸನ್ನು ಹಕ್ಕಿಗೆ ಹೋಲಿಸಲಾಗಿದೆ. ಆ ಹಕ್ಕಿಯೇ ನೇರವಾಗಿ ಬಲೆಯಲ್ಲಿ ಬೀಳಬಹುದಾಗಿತ್ತಲ್ಲ; ಅದೇಕೆ ಮೀನು ಆಗಬೇಕು? ಉತ್ತರ ಸ್ಪಷ್ಟವಿದೆ. ’ಬೋನು’ ಈ ಪದಕ್ಕೆ ಪ್ರಾಸ ಕೂಡಿಸಲು ’ಮೀನು’ ಅವಶ್ಯವಾಗಿದೆ. ಈ ರೀತಿಯಾಗಿ ಕುವೆಂಪುರವರು ತಮ್ಮ ಉಪಮೆಗಳ ಮೂಲಕ ಇಲ್ಲೊಂದು ಗೋಜಲನ್ನು ಸೃಷ್ಟಿಸಿದ್ದಾರೆ.
“ಶರತ್ಕಾಲದ ಸೂರ್ಯೋದಯದಲಿ” ಎನ್ನುವ ಅವರ ಇನ್ನೊಂದು ಕವನವನ್ನು ಗಮನಿಸಿ:

“ಹಚ್ಚನೆ ಪಚ್ಚನೆ ವೇದಿಕೆಯಲ್ಲಿ
ಸಾಸಿರಗಟ್ಟಲೆ ಮುತ್ತನು ಚೆಲ್ಲಿ
ರನ್ನದ ಕಿರುಹಣತೆಗಳಲ್ಲಿ
ಶ್ಯಾಮಲ ತೈಲದಿ ಹೊನ್ನಿನ ಬತ್ತಿ—
ಕಾಮನ ಬಿಲ್ಲಿನ ಬೆಂಕಿಯು ಹೊತ್ತಿ
ಸೊಡರುರಿಯುತ್ತಿವೆ ಅಲ್ಲಲ್ಲಿ!”

ಈ ಕವನದ ಯಥಾರ್ಥತೆಯನ್ನು ಅರ್ಥ ಮಾಡಿಕೊಳ್ಳಲು ನಾನು ತಿಣುಕಾಡಿ ಸೋತಿದ್ದೇನೆ. ಇಂತಹ ಉಪಮೆಗಳ ಗೊಂದಲವನ್ನು ಸೃಷ್ಟಿಸುವದು ಕುವೆಂಪುರವರಿಗೆ ಸರಳಸಿದ್ಧಿಯಾಗಿದೆ! ಅಲ್ಲದೆ ಕುವೆಂಪುರವರಿಗೆ ’ಬಲೆ’ಯ ಮೇಲೆ ಅದೇನೊ ಪ್ರೀತಿ. ಅವರ ಒಂದು ಜನಪ್ರಿಯ ಕವನದ ಈ most quoted ಸಾಲುಗಳನ್ನು ಗಮನಿಸಿರಿ:

“ಬಾಗಿಲಲಿ ಕೈಮುಗಿದು, ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!”

ಕುವೆಂಪುರವರ ಶೋಡಷಿ ಪುರುಷರಿಗೆ ’ಬಲೆ’ಯಾಗಿದ್ದಳೆಂದರೆ, ಅವರ ಮಾತುಗಳನ್ನು ಒಪ್ಪಿಕೊಳ್ಳಬಹುದು. ಆದರೆ, ಬೇಲೂರಿನ ಶಿಲ್ಪಸೌಂದರ್ಯದ ಕಲೆ ಯಾವ ರೀತಿಯ ಬಲೆ ಎನ್ನುವದು ಅರ್ಥವಾಗುವದಿಲ್ಲ. ಜೇಡನ ಬಲೆಯೆ, ಮೀನಿನ ಬಲೆಯೆ…………..? ಇದಾವ ಬಲೆ, ದೇವರೆ!

ಕುವೆಂಪುರವರಿಗೆ ಹೋಲಿಸಿದರೆ ಬೇಂದ್ರೆಯವರ ಉಪಮೆಗಳು ಅತಿ ಸರಳ. ಒಂದು ಉದಾಹರಣೆ:

“ಮರವು ನಾವು, ನೀವು ಹೂವು
ನಮಗೆ ನಲಿವು ನೀವಿರೆ
ಇರಲಿ ನೀರು ಕಪ್ಪೆ ಕೆಸರು
ಸಾಕು ಇರಲು ತಾವರೆ!”

ತಂದೆ,ತಾಯಿ ಹಾಗು ಮಕ್ಕಳಿಗೆ ನೀಡಲಾದ ಈ ಹೋಲಿಕೆ ಸಂಸಾರ ಸಾಫಲ್ಯವನ್ನು ಅತ್ಯಂತ ಸರಳವಾಗಿ ಹೇಳುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ( ಕುಮಾರವ್ಯಾಸನ ಒಂದು ರೂಪಕ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ: “ಬಂಧುಗಳ ದರುಶನ ಫಲವಲಾ ಸಂಸಾರ ತರುವಿಂಗೆ!”)


ಬೇಂದ್ರೆಯವರ ಉಪಮೆಗಳು ಕೇವಲ ಅಲಂಕಾರಿಕ ವಸ್ತುಗಳಾಗಿಲ್ಲ. ಅವು ಭಾವಸೃಷ್ಟಿಗೆ ಪೂರಕವಾಗಿವೆ. ಉದಾಹರಣೆಗೆ ಅವರ “ಗಮಗಮಾ ಗಮಾಡಸ್ತಾವ ಮಲ್ಲಿಗಿ” ಕವನದಲ್ಲಿಯ ಈ ಸಾಲುಗಳನ್ನು ನೋಡಿರಿ:

“ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡೀ ಹರಳ”

“ಇಂತಹ ಸುಂದರ ಬೆಳದಿಂಗಳಿನಲ್ಲಿ ನನ್ನನ್ನು ಬಿಟ್ಟು ಎಲ್ಲಿ ಹೋಗುತ್ತಿರುವಿ?” ಎಂದು ನಲ್ಲೆ ತನ್ನ ನಲ್ಲನನ್ನು ಕೇಳುತ್ತಿದ್ದಾಳೆ. ಚಂದ್ರಾಮ ಕನ್ನಡಿ ಹರಳಾಗಿದ್ದಾನೆ ಎನ್ನುವ ಉಪಮೆ ಅನ್ಯೋನ್ಯ ದೇಸಿ ಉಪಮೆಯಾಗಿದೆ. ಅವನನ್ನು ಚಿಕ್ಕಿಗಳು ಬೆರಳು ಚಾಚಿ ತೋರಿಸುತ್ತವೆ (twinkling) ಎನ್ನುವದು , ವಾಸ್ತವತೆಯನ್ನು ಕಲ್ಪನೆಯ ರೂಪದಲ್ಲಿ ತೋರಿಸುವ ಬೇಂದ್ರೆಯವರ ಸಹಜ ಜಾಣ್ಮೆ. ಇದರ ಪರಿಣಾಮವೆಂದರೆ ಉತ್ಕಟವಾದ ಭಾವಸೃಷ್ಟಿ.

ಬೇಂದ್ರೆಯವರ “ನೀ ಹೀಂಗ ನೋಡಬ್ಯಾಡ ನನ್ನ” ಕವಿತೆಯಲ್ಲಿ, ಉಪಮೆಗಳು ಸೃಷ್ಟಿಸುವ emotion ಅದ್ಭುತವಾದದ್ದು:

“ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರ ಕಂಡ ಒಮ್ಮಿಗಿಲs
ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!”

’ಉಪಮಾ ಅಂಬಿಕಾತನಯದತ್ತಸ್ಯ’ ಎಂದರೆ ತಪ್ಪಾಗಲಿಕ್ಕಿಲ್ಲ , ಅಲ್ಲವೆ?

6 comments:

Shriniwas M Katti said...

`ಉಪಮಾ ಕಾಲಿದಾಸಸ್ಯ' ಎಂಬುದು ಜಗತ್ಪ್ರಸಿದ್ಧ. ಉಪಮೆಗಳಲ್ಲಿ ಉಚ್ಚ - ನೀಚ ಇವೆ. ಇವುಗಳನ್ನು ಸಂಸ್ಕೃತ ಕವಿ ಜಗನ್ನಾಥ ಪಂಡಿತ ತನ್ನ 'ರಸಗಂಗಾಧರ' ದಲ್ಲಿ ತುಂಬ ಸುಂದರವಾಗಿ ವಿವರಿಸಿದ್ದಾನೆ. ಉದಾಹರಣೆಗೆ, ತನ್ನ ಕಾವ್ಯದ ಪದ್ಯಗಳನ್ನೇ ಬಳಸುತ್ತಾನೆ. ತುಂಬ ಉದ್ದಾಮ ಕವಿ. ಜಗನ್ನಾಥ ಪಂಡಿತನ 'ಗಂಗಾಲಹರಿ' ಯನ್ನು ಕನ್ನಡದಲ್ಲಿ ಶ್ರೀ ಪಂಢರೀನಾಥಾಚಾರ್ಯ ಗಲಗಲಿಯವರು ಬರೆದಿದ್ದಾರೆ. ತುಂಬ ಸುಂದರವಾಗಿದೆ. ಅವರಿಗೆ ಡಾ. ದ. ರಾ. ಬೇಂದ್ರೆಯವರ 'ಕನ್ನಡ ಮೇಘದೂತ'ವೇ ಸ್ಫೂರ್ತಿಯ ಸೆಲೆ. ಅದಕ್ಕೆ ಬೇಂದ್ರೆಯವರು ಸುಂದರವಾದ ಮುನ್ನುಡಿಯೂ ಇದೆ. ನೀವು ಈಗಾಗಲೇ ಓದಿರಬೇಕು. ಓದಿರದಿದ್ದರೆ, ಖಂಡಿತವಾಗಿ ಓದಿರಿ.

ಶ್ರೀನಿವಾಸ ಕಟ್ಟಿ, ಬೆಳಗಾವಿ

ಅಮರ said...

ಉಪಮಾ ಪ್ರಯೋಗದ ಸೂಕ್ಷ್ಮ ಎಳೆಗಳನ್ನ ಬಿಡಿಸಿಟ್ಟಿದ್ದಿರಾ ಧನ್ಯವಾದ ಸುನಾಥರೇ.
-ಅಮರ

sunaath said...

ಪ್ರಿಯ ಕಟ್ಟಿಯವರೆ,
ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರು ಮಾಡಿದ ಜಗನ್ನಾಥ ಪಂಡಿತನ ’ಗಂಗಾಲಹರಿ’ಯ ಅನುವಾದವನ್ನು ಓದಿದ್ದೇನೆ. ಸ್ವತಃ ಶ್ರೀ ಗಲಗಲಿಯವರೆ ಆ ಅನುವಾದದ ಕೆಲವು ಶ್ಲೋಕಗಳನ್ನು, ನಾನು ಓದುತ್ತಿದ್ದ ಮಾಧ್ಯಮಿಕ ಶಾಲೆಯಲ್ಲಿ ಹಾಡಿ ತೋರಿಸಿದಾಗ, ಕೇಳುವ ಭಾಗ್ಯವೂ ನನಗೆ ದೊರೆಕಿತ್ತು. ಕನ್ನಡ ಮೇಘದೂತದಂತೆ,(ಪಂಢರಿನಾಥಾಚಾರ್ಯರ) ಕನ್ನಡ ಗಂಗಾಲಹರಿಯೂ ಅದ್ಭುತ ಅನುವಾದವಾಗಿದೆ.

sunaath said...

ಪ್ರಿಯ ಅಮರ,
ಈ ಲೇಖನದ ಅಭಿಪ್ರಾಯಗಳು ನಿಮಗೆ ಸರಿ ಎನಿಸಿದರೆ,ಧನ್ಯೋಸ್ಮಿ.

Shriniwas M Katti said...

ಯಾಕೆ ? ಸುನಾಥರೆ, ಕಳೆದೆರಡು ದಿನಗಳಿಂದ ಏನೂ ಬರೆದಿಲ್ಲವಲ್ಲ ?

sunaath said...

ಪ್ರಿಯ ಕಟ್ಟಿಯವರೆ,
one has to wait for the good things, ಅಲ್ಲವೆ?