Monday, March 24, 2008

ಸಂಸ್ಕೃತ-ಅಸಂಸ್ಕೃತ

ಕನ್ನಡಿಗರಿಗೆ ಕಾದಂಬರಿ ಓದುವ ರುಚಿಯನ್ನು ಹಚ್ಚಿದವರೆಂದು ಅ.ನ. ಕೃಷ್ಣರಾಯರನ್ನು ನೆನೆಸಲಾಗುತ್ತಿದೆ. ಸಾಹಿತಿಗಳ ಒಳಜಗಳದಿಂದಾಗಿ ಕೃಷ್ಣರಾಯರ ಕಾದಂಬರಿಗಳಿಗೆ ಅಶ್ಲೀಲ ಸಾಹಿತ್ಯವೆನ್ನುವ ಹಣೆಪಟ್ಟಿಯನ್ನು ಅನ್ಯಾಯವಾಗಿ ಕಟ್ಟಲಾಯಿತು. ಅವರ ಕಾದಂಬರಿಗಳಲ್ಲಿ ಬರುವ ಕೆಲವು ಸ್ತ್ರೀಪಾತ್ರಗಳು ಸರಳವಾಗಿ ಅನೈತಿಕತೆಗೆ ಜಾರಿದ್ದಾರು; ಆದರೆ
ಅ. ನ. ಕೃ. ಅವರು ಎಲ್ಲಿಯೂ ಸ್ತ್ರೀಯರ ಅಂಗಸೌಂದರ್ಯವನ್ನು ವಿವರಿಸಿ ಬರೆದಿಲ್ಲ ಅಥವಾ ಎಲ್ಲಿಯೂ ಶಯನವ್ಯಾಪಾರದ ವರ್ಣನೆ ಮಾಡಿಲ್ಲ.

ಕನ್ನಡ ಕವಿಗಳು ರತಿಕ್ರೀಡೆಯನ್ನು ಸಂಸ್ಕೃತದಲ್ಲಿ ವರ್ಣಿಸಿದರೆ, ಅಶ್ಲೀಲತೆ ಮುಚ್ಚಿ ಹೋಗುವದೆ? ಗಂಗಾಧರ ಚಿತ್ತಾಲರು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ, ಸ್ವಾತಂತ್ರ್ಯ ಹೋರಾಟಕ್ಕೆ ಕೈಗೂಡಿಸಿದವರು. ಅತ್ಯಂತ ಜಾಣ ವಿದ್ಯಾರ್ಥಿ ಎಂದು ಹೆಸರು ಪಡೆದವರು. ಅವರು ಬರೆದ ಕವನ ’ಕಾಮಸೂತ್ರ’ದಲ್ಲಿ ಬಳಸಲಾದ ಸಂಸ್ಕೃತ ಪದಗಳ ಬದಲಾಗಿ, ಕನ್ನಡ ಪದಗಳನ್ನು ಬಳಸಿದರೆ, ಆ ಕವನವನ್ನು ಬಹುಶಃ ಹೋಳಿ ಹುಣ್ಣಿವೆಯಲ್ಲಿ ಹಾಡಲು ಸಹ ಪೋಲಿ ಹುಡುಗರು ನಾಚಿಕೊಳ್ಳಬಹುದು. ಆ ಕವನವನ್ನು ಓದಬಯಸುವರು.
ಮೋಟುಗೋಡೆಯಾಚೆ ಇಣುಕಬಹುದು.


ಕನ್ನಡದಲ್ಲಿ ಹೆಣ್ಣನ್ನು ಬತ್ತಲೆ ಮಾಡಿ, ಸಂಸ್ಕೃತದ ಬಣ್ಣದ ಕನ್ನಡಕ ಹಾಕಿಕೊಂಡು ನೋಡುವವರಲ್ಲಿ ಚಿತ್ತಾಳರೊಬ್ಬರೇ ಪ್ರಮುಖ ಸಾಹಿತಿಯಲ್ಲ. ನಮ್ಮ ರಾಷ್ಟ್ರಕವಿಗಳಾದ ಕುವೆಂಪುರವರ ಅನೇಕ ಕವನಗಳು ’ಸಂಸ್ಕೃತ’ವಾಗಿಯೇ ಇವೆ.
ಉದಾಹರಣೆ ನೋಡಬಯಸುವವರು ಇನ್ನೊಮ್ಮೆ
ಮೋಟುಗೋಡೆಯಾಚೆ ಇಣುಕಬಹುದು.
ಕುವೆಂಪುರವರು ರಚಿಸಿದ ಕವನ (’ಷೋಡಶಿ’)ಯ ಕೆಲವು ಸಾಲುಗಳನ್ನು ನೋಡಿರಿ.

“ದಿನವೊಂದರೊಳೆ ನಿನ್ನ ಎದೆಯ ರಸವನು ಹೀರಿ
ಸರ್ವಸ್ವವನು ನಲ್ಲೆ; ಸುಲಿಯಬಲ್ಲೆ!
…………………………….
…………………………………
ಸಂಯೋಗವೊಂದರೊಳೆ ನಿನ್ನ ನುಣ್ಣನೆ ನೊಣೆದು
ರಸಪೂರ್ಣ ಶೂನ್ಯತೆಗೆ ಕಳುಹಬಲ್ಲೆ?”

ಸಾಕೆ ಇಷ್ಟು, ಗಂಡಸ್ತನ ತೋರಿಸಲು?
ಒಂದು ಮಾತು: ಇಲ್ಲಿ ಕವಿತೆಯ ಭಾವ ಅರ್ಥವಾಗುತ್ತದೆ. ಕವಿ ತನ್ನ ಪೌರುಷವನ್ನು ಹೆಣ್ಣಿನ ಮೇಲೆ ವಿಜೃಂಭಿಸಿ ಅವಳ ಮೇಲೆ ಅಧಿಕಾರ ಸ್ಥಾಪಿಸುತ್ತಿದ್ದಾನೆ. ಆದರೆ ಇಲ್ಲಿ ಬಳಸಿದ ಪದಗಳ ಅರ್ಥವಾಗುತ್ತಿಲ್ಲ. ’ರಸಪೂರ್ಣ ಶೂನ್ಯತೆ’ ಎಂದರೇನು?
ಗಂಡಸಿಗೆ ರಸ ಹಾಗು ಹೆಣ್ಣಿಗೆ ಶೂನ್ಯತೆ ಎಂದರ್ಥವೆ?

ಕುವೆಂಪುರವರ “ಹರ-ಗಿರಿಜಾ” ಎನ್ನುವ ಕವನವನ್ನು ನೋಡಿರಿ:

“ಕ್ಷೀರವಾರ್ಧಿ ಕುಗ್ಗಿತೊ ಎನೆ
ಹಿಗ್ಗಿತಾ ಸರೋವರ;
ಸ್ಪರ್ಧಿಸಿತೆನೆ ಗಿರಿಮಂದಿರ
ವರ್ಧಿಸಿತ್ತು ಕುಂಜರ”

ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆಯೊಂದರ ಉಪಸಂಪಾದಕರೊಬ್ಬರು ಹೊಟ್ಟೆಪಾಡಿಗಾಗಿ ಅಶ್ಲೀಲ ಸಾಹಿತ್ಯ ರಚಿಸುತ್ತಿದ್ದರು. ಅವರ ಕತೆಗಳಲ್ಲಿಯೂ ಸಹ ಶಯನವರ್ಣನೆಗಳು ಸಂಸ್ಕೃತ ಭಾಷೆಯಲ್ಲಿಯೇ ಇರುತ್ತಿದ್ದವು. ಕುವೆಂಪು ಅಂತಹ ವರ್ಣನೆಗಳನ್ನು ಕನ್ನಡದಲ್ಲಿಯೇ ಮಾಡಿದ್ದಾರೆ. ಉದಾಹರಣೆಗೆ ಮತ್ತೊಮ್ಮೆ
ಮೋಟುಗೋಡೆಯಾಚೆ ಇಣುಕಬಹುದು.

ಆದರೆ, ರತಿಕ್ರೀಡೆಯ ವರ್ಣನೆ ಮಾತ್ರ ಅಸಭ್ಯ ಅನ್ನುವದು ತಪ್ಪು. ಪೌರುಷದ ವಿಜೃಂಭಣೆ ಕೂಡ ಅಸಭ್ಯವೇ. ಈ ಮಾತಿಗೆ ಅತಿ ದೊಡ್ಡ ಉದಾಹರಣೆ ಎಂದರೆ ನಮ್ಮ ಜನಪ್ರಿಯ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರು. ಅವರು ತಮ್ಮ ಕಾದಂಬರಿಗಳಲ್ಲಿ ಸ್ತ್ರೀಯರ ಮೇಲಾಗುವ ದೌರ್ಜನ್ಯವನ್ನು ಸರಿಯಾಗಿಯೇ ವರ್ಣಿಸಿದ್ದಾರೆ. ಆದರೆ ನಾಯಕನ ಪೌರುಷದೆದುರು ಭೈರಪ್ಪನವರ ನಾಯಕಿ ನಿರ್ಬಲಳು.

15 comments:

Shriniwas M Katti said...

ಬಹು ಸೂಕ್ಷ್ಮ ವಿಷಯ. ಶ್ಲೀಲ - ಅಶ್ಲೀಲದ ಗೆರೆ ಕೊರೆಯುವದು ಅವರವರ ಮನೋಭಾವನೆಗೆ ತಕ್ಕಂತೆ. ಸಂಸ್ಕೃತದಲ್ಲಿಯ ಅತಿ ಸುಂದರ ಸ್ತ್ರೀ ಸೊಬಗಿನ ವರ್ಣನೆಯನ್ನು ಕನ್ನಡದ ಗ್ರಾಮ್ಯ ಭಾಷೆಯಲ್ಲಿ ಬರೆದರೆ, ಅಶ್ಲೀಲತೆ ಅಷ್ಟೆ ಅಲ್ಲ, ಅವಾಚ್ಯ ಎಂದು ಕೂಡ ಅನ್ನಿಸಬಹುದು. ಅಷ್ಟೆ ಏಕೆ, ಸಂಸ್ಕೃತದ ಒಂದು ಶಬ್ದ "ಜನನಾಂಗ" ವನ್ನು ಉತ್ತರ ಕರ್ನಾಟಕದ ಗ್ರಾಮ್ಯ ಭಾಷೆಯಲ್ಲಿ ಬರೆದರೆ ಅವಾಚ್ಯ, ಅಶ್ಲೀಲ, ಅಸಭ್ಯ ಎನಿಸುವದು. ಆದರೆ, ಹಳ್ಲಿಗಳಲ್ಲಿ, ಈ ಶಬ್ದಗಳನ್ನು ಸಹಜವಾಗಿ ಬಳಸುತ್ತಾರೆ.

sunaath said...

ನಿಜ, ಕಟ್ಟಿಯವರೆ! ಶ್ರೀರಂಗರು ಒಂದೆಡೆಗೆ ತಮ್ಮ ಅನುಭವ ಹೇಳಿದ್ದಾರೆ. ಒಂದು ನಾಟಕದಲ್ಲಿ (ಉತ್ತರ ಕರ್ನಾಟಕದ) ಹಳ್ಳಿಯವನೊಬ್ಬ ತನ್ನ ಹೆಂಡತಿಯ ಮೇಲೆ ಸಂಶಯಪಟ್ಟು ಅವಳನ್ನು ಕೇಳುತ್ತಾನೆ:
"ಅವನ ಬುಡಕ ಬೀಳಾಕ ಹೋಗಿದ್ದೇನು?"
ಈ ಸಂಭಾಷಣೆಯನ್ನು ಕೇಳಿದ ಬೆಂಗಳೂರಿನ ನಾಗರಿಕ ದರ್ಶಕರು
ಬಿದ್ದು ಬಿದ್ದು ನಕ್ಕರಂತೆ.
ಶೀಲ, ಅಶ್ಲೀಲ ಇವು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿವೆ, ಅಲ್ಲವೆ?

Shriniwas M Katti said...

ಖಂಡಿತವಾಗಿಯೂ ಅನಕೃ ಮಹಾನ್ ಕಾದಂಬರಿಕಾರರು. ಕನ್ನಡಕ್ಕೆ ಅನುಪಮ ಸೇವೆ ಸಲ್ಲಿಸಿದವರು. ಅವರು "ನಗ್ನಸತ್ಯ, ಸಂಜೆಗತ್ತಲು" ಬರೆದಾಗ, ಕೆಲವರು ಪ್ರತಿಭಟನಾರ್ಥವಾಗಿ ಅವುಗಳ ಪ್ರತಿಗಳನ್ನು ಸುಟ್ಟು ಹಾಕಿದರಂತೆ. ಆಗ ಅನಕೃ ನಕ್ಕು ಹೇಳಿದರಂತೆ
"ಸ್ವಾಮೀ, ನೀವು ಆ ಕಾದಂಬರಿಗಳನ್ನೇಕೆ ಓದಿದಿರಿ ? ಅವುಗಳ ಹೆಸರು "ಭಗವದ್ಗೀತೆ" ಎಂದು ಇರಲಿಲ್ಲವಲ್ಲ. ಅಂತೂ ನನ್ನ ಕಾದಂಬರಿಯ ಪ್ರತಿಗಳು ಮಾರಾಟವಾದವಲ್ಲ.ಅದೇ ಸಂತೋಷ." ನಮ್ಮೊಳಗೆ ಆಷಾಢಭೂತಿತನ ಇರುವ ವರೆಗೆ "ಶ್ಲೀಲ - ಅಶ್ಲೀಲ" ದ ಚರ್ಚೆಗೆ ಅಂತ್ಯವಿಲ್ಲ.

ಅಮರ said...

ಸುನಾಥರೇ,
ಅನಕೃ ಅವರ ಸಾಹಿತ್ಯ ಓದಿಕೊಂಡಿಲ್ಲ ಹಾಗಾಗಿ ಹೆಚ್ಚೆನು ತಿಳಿಯದು, ನೀವು ಭೈರಪ್ಪನವರ ಕಾದಂಬರಿಗಳ ಬಗ್ಗೆ ಪ್ರಸ್ಥಾಪಿಸಿದ್ದಿರಿ. ಬದುಕಿನ ಅನುಭವಗಳು ಬರವಣಿಗೆಯನ್ನ ಹದ ಮಾಡೊದಂತು ದಿಟ, ಆಗಲೆ ಬರವಣಿಗೆಗೆ ಓದುಗನನ್ನ ಮುಟ್ಟೊದು, ಬರಿಯ ಕಲ್ಪನೆಯ ಸಾಲುಗಳು ಆ ಕ್ಷಣಕ್ಕೆ ಓದುಗನನ್ನ ತನ್ನ ಕಲ್ಪನಾ ಪ್ರಪಂಚದಲ್ಲಿ ತೇಲಿಸ ಬಹುದು ಆದರೆ ಹೆಚ್ಚು ಕಾಲ ಉಳಿಯಲಿಕ್ಕಿಲ್ಲ.... ನನಗನ್ನಿಸಿದಂತೆ ಅವರು ಬದುಕಿನುದ್ದಕ್ಕೂ ಕಂಡ ಸ್ತ್ರೀ ಪಾತ್ರಗಳು ಕಾದಂಬರಿಯಲ್ಲಿ ಮೂಡಿದೆ.. ಅವುಗಳನ್ನ ಬಲವಂತವಾಗಿ ವಿಜೃಂಬಿಸಲು ಹೋಗದೆ ನೈಜವಾಗಿ ಚಿತ್ರಿಸಿದ್ದಾರೆ. ಅದಕ್ಕೆ ಅನ್ನಿಸುತ್ತೆ ಅವರ ಗೃಹಭಂಗ ಇವತ್ತಿಗೂ ಓದುಗನನ್ನ ಕಾದಂಬರಿಯ ಒಂದು ಪಾತ್ರದ ಹಾಗೆ ಕಾಡುತ್ತೆ.
-ಅಮರ

sunaath said...

ಪ್ರಿಯ ಅಮರ,
ನಮ್ಮ ಸಮಾಜದಲ್ಲಿ ಸ್ತ್ರೀಯರ ಮೇಲಾಗುತ್ತಿರುವ ದೌರ್ಜನ್ಯವನ್ನು, ಸ್ತ್ರೀಯರು ಪಡುತ್ತಿರುವ ಸಂಕಟವನ್ನು ಭೈರಪ್ಪನವರಷ್ಟು ಚೆನ್ನಾಗಿ ಬಹುಶಃ ಯಾರೂ ಚಿತ್ರಿಸಿಲ್ಲ. ಅದಾಗ್ಯೂ ಭೈರಪ್ಪನವರ ಕಾದಂಬರಿಗಳಲ್ಲಿಯ ಒಂದು ಅಂಶವನ್ನು ನೀವು ಗಮನಿಸಿರಬಹುದು. ಅಲ್ಲಿ ನಾಯಕ ಛಲವಾದಿ;ನಾಯಕಿಯನ್ನು ನಿರ್ಲಕ್ಷಿಸಿ ಮುನ್ನಡೆಯುವವನು. ಭೈರಪ್ಪನವರ ಒಂದು ಕಾದಂಬರಿಯಲ್ಲಂತೂ (ಹೆಸರು ಮರೆತಿದೆ)ನಾಯಕನ ಹಾಗು ನಾಯಕಿಯ ಸಂಗಮವಾದಾಗ, ನಾಯಕಿ ದಣಿದುಕೊಂಡು, "ತನಗೆ ಇಷ್ಟೆ ಸಾಕು, ಅದನ್ನು ನಾಯಕನಿಗೆ ಹೇಗೆ ಹೇಳಲಿ?" ಎಂದು ನಾಚಿಕೊಳ್ಳುತ್ತಾಳೆ. ಇದು ಭೈರಪ್ಪನವರಲ್ಲಿರುವ male chauvinistic ಧೋರಣೆ. ಅವರ ಅನೇಕ ಕಾದಂಬರಿಗಳಲ್ಲಿ ಈ ಧೋರಣೆಯ
ಪ್ರತಿಫಲನವಾಗಿದೆ ಎಂದು ನನಗೆ ಭಾಸವಾಗುತ್ತದೆ. ತಮ್ಮ ಅಭಿಪ್ರಾಯ ಭಿನ್ನವಾಗಿದ್ದರೆ, ದಯವಿಟ್ಟು ಹೇಳಿರಿ.

Shriniwas M Katti said...

ಬಹುಶಃ ಭೈರಪ್ಪನವರ ಎಲ್ಲ ಕಾದಂಬರಿಗಳನ್ನು ಮತ್ತು 'ಭಿತ್ತಿ'ಯನ್ನೂ ಓದಿರುವೆ. ಅವುಗಳಲ್ಲಿ `ಪುರುಷ ಶ್ರೇಷ್ಠತೆಯ ಭಾವ' ಇದೆಯೆಂದು ನನಗೆಂದೂ ಅನಿಸಲೇ ಇಲ್ಲ.
ಪೃಕೃತಿಯು ಕೆಲವಯ ವಿಷಯಗಳಲ್ಲಿ ಪುರುಷನನ್ನು, ಇನ್ನು ಕೆಲವು ವಿಷಯಗಳಲ್ಲಿ ಸ್ತ್ರೀ ಯನ್ನು ಶ್ರೇಷ್ಠ ವಾಗಿ ರೂಪಿಸಿದೆ.ದೈಹಿಕ ಬಲದಲ್ಲಿ ಗಂಡು ಉತ್ತಮನಿದ್ದರೆ, ಮಾನಸಿಕ ಬಲದಲ್ಲಿ ಹೆಂಗಸೇ ಶ್ರೇಷ್ಠ. ಜಗತ್ತಿನಲ್ಲಿ ಎಲ್ಲೆಡೆ ಸ್ತ್ರೀಯರ ಶೋಷಣೆಗೆ,ಪುರುಷರ ದೈಹಿಕ ಬಲವೇ ಕಾರಣ. ಭೈರಪ್ಪನವರ ಕಾದಂಬರಿಗಳು ಇದನ್ನು ಬಹು ಸುಂದರವಾಗಿ ಚಿತ್ರಿಸಿವೆ. ಎಲ್ಲ ಪಾತ್ರಗಳೂ ಜೀವನದ ಅನುಭವಕ್ಕೆ ಬಹಳ ಹತ್ತಿರ. ಜೀವನದಲ್ಲಿ ಅವರು ಎಲ್ಲ ಪಾತ್ರಗಳ ಸಂಪರ್ಕ ಪಡೆದಿದ್ದರೆಂದೇ ಎನಿಸುತ್ತದೆ. ಗೃಹಭಂಗದ ಚೆನ್ನಿಗರಾಯರು ಸಾಕ್ಷಾತ್ ಭೈರಪ್ಪನರ ತಂದೆಯೇ ಎಂದು `ಭಿತ್ತಿ'ಯಲ್ಲಿ ಹೇಳಿದ್ದಾರೆ. ಭೈರಪ್ಪನವರು ಚಿತ್ರಿಸಿದ ಪಾತ್ರಗಳನ್ನು ಕಲ್ಪನೆಯಿಂದ ಚಿತ್ರಿಸುವದು ಅಸಾಧ್ಯ. ಅವೆಲ್ಲವನ್ನೂ ಭೈರಪ್ಪ ಕಂಡು, ಅವರೊಡನೆ ವ್ಯವಹರಿಸಿರಲೇಬೇಕು.

Anonymous said...

ಯಾಕೆ ? `ಆವರಣ'ದ ಪ್ರೋಫೆಸರ್ ರನ್ನು ಮರೆತಿರಾ ? ಸಮಸ್ತ ಕನ್ನಡಿಗರೆಲ್ಲರೂ ಕಂಡ ಸ್ವಯಂ ಘೋಷಿತ, ಬುದ್ಧಿಜೀವಿಗಳಿಬ್ಬರನ್ನೂ ಬೆರೆಸಿ, ಜೋಡಿಸಿ ಎರಕ ಹೊಯ್ದ ಪಾತ್ರವಲ್ಲವೇ ಅದು ? ಹೆಸರಿಗಾಗಿ, ಅವಾರ್ಡಗಾಗಿ ಇತಿಹಾಸವನ್ನೇ ತಿರುಚಿ ಬರೆಯಲು ಹಿಂದೆ-ಮುಂದೆ ನೋಡುವವರಲ್ಲ. ಇಂಥ ಪಾತ್ರವನ್ನು ಕಲ್ಪನೆಯಿಂದ ಬರೆಯುವದು ಸಾಧ್ಯವೆ ?

sunaath said...

ಶ್ರೀ ಕಟ್ಟಿ ಹಾಗು ಶ್ರೀ anonymus,
ನಿಮ್ಮ ಮೌಲಿಕ ಅಭಿಪ್ರಾಯಗಳಿಗೆ ಸ್ವಾಗತ. ಭೈರಪ್ಪನವರ ಕಾದಂಬರಿಗಳ ಬಗೆಗೆ ಒಂದು ಪ್ರತ್ಯೇಕ ಚರ್ಚೆಯೇ ನಡೆಯುವದು ಅವಶ್ಯವೆಂದು ಅನಿಸುತ್ತದೆ.

Shriniwas M Katti said...

ನನ್ನ ಹೆಸರಿಗೆ `ಅನಾಮಧೇಯ' ವನ್ನೂ ಸೇರಿಸಿದ್ದೀರಲ್ಲ. ಅದು ನನ್ನದಲ್ಲ.

ಶ್ರೀನಿವಾಸ ಕಟ್ಟಿ

Shriniwas M Katti said...

ನೀವು ಬರೆದ ಹುಬ್ಬಳ್ಳಿಯ ಉಪಸಂಪಾದಕರು ಶ್ರೀ ಜೀವನ ಅಲ್ಲವೇ ? ನನ್ನ ಕಾಲೇಜಿನ ದಿನಗಳಲ್ಲಿ ನಾನು ಅವರನ್ನು ಭೇಟಿ ಕೂಡ ಆಗಿದ್ದೆ. ಪ್ರತಿಭಾವಂತ ಮನುಷ್ಯ. ಆದರೆ ಕಿತ್ತು ತಿನ್ನುವ ಬಡತನ. ಮೇಲೆ ಸಿಕ್ಕಾಪಟ್ಟೆ ಕುಡಿತ. ಪ್ರಪಂಚವನ್ನು ನಡೆಸುತ್ತಿದ್ದವರೇ ಅವರು. ಪಾಟೀ ಲಪುಟಪ್ಪನವರು ಜೀವನರನ್ನು ಜೀವನದುದ್ದಕ್ಕೂ ಶೋಷಣೆ ಮಾಡಿದರು.

sunaath said...

ನಿಮ್ಮ ಊಹೆ ಸರಿ. ಶ್ರೀ ಜೀವನ ಅವರದು ದುರಂತ ಜೀವನ.

Anonymous said...

ನಮ್ಮ ಲಿಂಕು ಕೊಟ್ಟಿದ್ದಿಕ್ಕೆ ಥ್ಯಾಂಕ್ಸು:)

sunaath said...

ಮೋಟುಗೋಡೆಯಾಚಿನವರೆ,
Pleasure is mine! ನಿಮ್ಮ ತಾಣ ಆಹ್ಲಾದದಾಯಕವಾಗಿದೆ.

Anonymous said...

ಸಂಯೋಗವೊಂದರೊಳೆ ನಿನ್ನ ನುಣ್ಣನೆ ನೊಣೆದು
ರಸಪೂರ್ಣ ಶೂನ್ಯತೆಗೆ ಕಳುಹಬಲ್ಲೆ?”

ಇಲ್ಲಿ ಸಂಯೋಗವೆಂದರೆ..ಸಂಭೋಗ ಅಂತಲೇ? ಅಯ್ಯೊ..
ಶಿವಾ! ಶಿವಾ!

ಕವನ ಪೂರ್ತಿಯಾಗಿ ಓದಲು ಸಿಕ್ಕಿದ್ದರೆ ಕವನದ ಭಾವವನ್ನು ಗ್ರಹಿಸುವುದು ಸುಲಭವಿತ್ತೇನೊ.

sunaath said...

ajitasರೆ,
ಕವಿತೆಯ ಪೂರ್ಣ ಪಾಠ ನನ್ನಲ್ಲಿ ಲಭ್ಯವಿಲ್ಲ.ಮೊದಲಿನ ಎರಡು ಸಾಲುಗಳೂ ಸಹ ಅತಿಕ್ರಮಣದ ಧೋರಣೆಯನ್ನು ತೋರಿಸುತ್ತವೆ,ಅಲ್ಲವೆ?