ಬೇಂದ್ರೆಯವರನ್ನು ಅದ್ಭುತ ಪ್ರತಿಭೆಯ ಕವಿ ಎಂದು ವರ್ಣಿಸಲಾಗುತ್ತದೆ. ಅವರು ಅದ್ಭುತ ಪ್ರತಿಭೆಯ ಅನುವಾದಕರೂ ಆಗಿದ್ದರು.
“ನಾಳೆ ಬೆಳಗ್ಗೆ ಬಂದೈತಿ ಮಹಾಮರಣಾ
ಹಸನುಳದಾssವ ನಮ್ಮಂತಃಕರಣಾS”
ಬೇಂದ್ರೆಯವರು ಬರೆದ ಈ ಸಾಲುಗಳನ್ನು ಓದುತ್ತ ಹೋದಂತೆ , ನೇಣಿಗೆ ಕೊರಳು ಕೊಡಲು ಸಿದ್ಧರಾಗಿ ನಿಂತ ಸ್ವಾತಂತ್ರ್ಯ ಹೋರಾಟಗಾರರ ಸ್ಫೂರ್ತಿಯುತ ಚಿತ್ರ ಕಣ್ಣೆದುರಿಗೆ ಕಟ್ಟುತ್ತದೆ. ಕವನದ ಮುಂದಿನ ಸಾಲುಗಳು ನಮ್ಮಲ್ಲಿ ಇನ್ನಷ್ಟು ಆವೇಶವನ್ನು ತುಂಬುತ್ತವೆ. ಅದರೆ ಈ ಹೋರಾಟಗಾರರು ಯಾರು ಎನ್ನುವದು ಒಮ್ಮೆಲೆ ಅರಿವಾಗುವದಿಲ್ಲ. ಬಹುಶಃ ಬ್ರಿಟಿಶರಿಂದ ಗಲ್ಲಿಗೇರಿಸಲ್ಪಡುತ್ತಿರುವ ಭಾರತೀಯ ಉಗ್ರಗಾಮಿ ಯುವಕರು ಇವರಾಗಿರಬೇಕು. ಅಂದರೆ . . . ಭಗತಸಿಂಗ, ಚಂದ್ರಶೇಖರ ಆಜಾದ ಅಥವಾ ಸಂಗೊಳ್ಳಿ ರಾಯಣ್ಣ? ಬೇಂದ್ರೆಯವರು ಯಾರ ಕಹಳೆಯ ಕೂಗನ್ನು ನಮಗೆ ಕೇಳಿಸುತ್ತಿದ್ದಾರೆ?
ಕವಿತೆಯ ಕೊನೆಕೊನೆಗೆ ಬಂದಂತೆ, ಒಂದು ಸಾಲು ಬರುತ್ತದೆ:
“ಫಿಲಿಪೀನಾ ನಾಡದೇವಿ . . . . “
ಈಗ ಅಚ್ಚರಿ ಹುಟ್ಟುತ್ತದೆ. ಬೇಂದ್ರೆ ಫಿಲಿಪ್ಪೀನ್ಸ್ ದೇಶದ ಹುತಾತ್ಮರ ಬಗೆಗೆ ಕವಿತೆ ರಚಿಸಿರುವರೆ?- ಎಂದು.
ಧಾರವಾಡದ ’ಮನೋಹರ ಗ್ರಂಥಮಾಲೆ’ಯ ರಜತಮಹೋತ್ಸವದ ಅಂಗವಾಗಿ ೧೯೫೯ರಲ್ಲಿ ಬಿಡುಗಡೆಯಾದ ’ನಡೆದು ಬಂದ ದಾರಿ’ಯಲ್ಲಿ ಈ ಕವಿತೆ ಪ್ರಕಟವಾಗಿದೆ. ಓದುತ್ತ ಹೋದಾಗ ಇದು ಅನುವಾದ ಎನ್ನುವದು ಗೊತ್ತಾಗುವದೇ ಇಲ್ಲ. ಈ ಅನುವಾದದ ಹಿಂದೆ ಒಂದು ಕತೆ ಇದೆ.
ಫಿಲಿಪ್ಪೀನ್ಸ್ ಸ್ವತಂತ್ರವಾದ ಬಳಿಕ, ಆ ದೇಶದ ಸ್ವಾತಂತ್ರ್ಯೋತ್ಸವದ ದಿನದಂದು ಭಾರತದಲ್ಲಿಯ ಆಕಾಶವಾಣಿ ಕೇಂದ್ರಗಳು ಈ ಗೀತೆಯ ಅನುವಾದವನ್ನು ಪ್ರಸಾರ ಮಾಡಬೇಕೆಂದು ಕೇಂದ್ರ ಸರಕಾರವು ಏಕಾಏಕಿಯಾಗಿ ಒಂದು ಆದೇಶ ಹೊರಡಿಸಿತು. ಆ ಸಮಯದಲ್ಲಿ ಸಾಹಿತಿ ಶ್ರೀ ಎನ್.ಕೆ. ಕುಲಕರ್ಣಿಯವರು ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಅಧಿಕಾರಿಯಾಗಿದ್ದರು. ಅವರು ಈ ಗೀತೆಯ ಇಂಗ್ಲಿಶ್ ಆವೃತ್ತಿಯನ್ನು ಹಿಡಿದುಕೊಂಡು ಬೇಂದ್ರೆಯವರ ಮನೆಗೆ ಓಡಿದರು. ಬೇಂದ್ರೆ ಆಗ ಸಂಜೆಯ ವಾಯುವಿಹಾರಕ್ಕೆ ಹೋಗಿದ್ದರು. ಎನ್.ಕೆ.ಯವರು ಬೇಂದ್ರೆಯವರ ಶ್ರೀಮತಿಯವರಿಗೆ ಸಂಗತಿಯನ್ನು ವಿವರಿಸಿ, ಅನುವಾದ ನಾಳೆಯೇ ಬೇಕು ಎಂದು ಹೇಳಿ, ಆ ಕಾಗದವನ್ನು ಅಲ್ಲಿಟ್ಟು ಹೋದರು.
ಮುದ್ದಾಮ ಕವಿಗಳು ಇಂತಹ ಅನುವಾದ ಕಾರ್ಯವನ್ನು ತಕ್ಷಣವೇ ಮಾಡಿಕೊಡುತ್ತಾರೆ, ಅದರೆ ಈ ಉದ್ದಾಮ ಕವಿ ಸಿಟ್ಟಿನಿಂದ ಎಲ್ಲಿ ಕಾಗದವನ್ನು ತನ್ನ ಮುಖದ ಮೇಲೆ ಬಿಸಾಡುತ್ತಾನೊ ಎಂದು ಹೆದರುತ್ತಲೆ, ಎನ್.ಕೆ.ಕುಲಕರ್ಣಿ, ಮರುದಿನ ಬೆಳಗ್ಗೆ ಬೇಂದ್ರೆಯವರ ಮನೆಗೆ ಹೊದರು. ಬೇಂದ್ರೆ ಇರಲಿಲ್ಲ, ಬೆಳಗಿನ ವಾಯುವಿಹಾರಕ್ಕೆ ಹೋಗಿದ್ದರು. ಆದರೆ ’ಅನುವಾದ’ ಮಾತ್ರ ಸಿದ್ಧವಾಗಿ ಮೇಜಿನ ಮೇಲೆ ಕುಳಿತುಕೊಂಡಿತ್ತು. ಇತರ ಭಾರತೀಯ ಭಾಷೆಗಳಲ್ಲಿ ಮಾಡಲಾದ ಅನುವಾದಗಳನ್ನು ನೋಡಿದ ಎನ್.ಕೆ. ಕುಲಕರ್ಣಿಯವರು, ಇತರ ಯಾವುದೇ ಅನುವಾದವೂ ಬೇಂದ್ರೆಯವರ ಕನ್ನಡ ಅನುವಾದದ ಮಟ್ಟದಲ್ಲಿಲ್ಲ ಎಂದು ಹೇಳುತ್ತಾರೆ. ಇದು ಕನ್ನಡದ ರಚನೆಯೇ ಎನ್ನುವಷ್ಟು ಸುಂದರವಾಗಿದೆ ಈ ಅನುವಾದ.
ಬೇಂದ್ರೆಯವರ ಅನುವಾದ ಸಾಮರ್ಥ್ಯದ ಉಜ್ವಲ ಉದಾಹರಣೆ ಎಂದರೆ ಕಾಳಿದಾಸನ ’ಮೇಘದೂತ’. ಬೇಂದ್ರೆಯವರಿಗಿಂತಲೂ ಮೊದಲು ಸಹ ಮೇಘದೂತವನ್ನು ಕೆಲವರು ಕನ್ನಡಿಸಿದ್ದಾರೆ. ಶ್ರೀ ಶಾಂತಕವಿ, ವರದಾಚಾರ್ಯ, ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ರೈನಾಪುರ, ಎಸ್.ವಿ. ಪರಮೇಶ್ವರ ಭಟ್ಟ ಇವರು ಅನುವಾದಕರಲ್ಲಿ ಪ್ರಮುಖರು.
ಕಾಳಿದಾಸನ ಮೇಘದೂತವು ನಾಲ್ಕು ಸಾಲುಗಳ ಮಂದಾಕ್ರಾಂತ ವೃತ್ತದಲ್ಲಿ ರಚಿತವಾಗಿದೆ. ಕನ್ನಡ ಅನುವಾದವನ್ನು ಯಾರೂ ಇದೇ ವೃತ್ತದಲ್ಲಿ ನಿರ್ವಹಿಸಿಲ್ಲ. ಆದರೆ ಬೇಂದ್ರೆಯವರು ಇದಕ್ಕೆ ಸಮಸ್ಪಂದಿಯಾದ ನಾಲ್ಕು ಸಾಲುಗಳ ವೃತ್ತದಲ್ಲಿ ಕನ್ನಡ ರಚನೆಯನ್ನು ಮಾಡಿದ್ದಾರೆ. ಉದಾಹರಣೆಗಾಗಿ ಒಂದು ಮೂಲಪದ್ಯವನ್ನು ಹಾಗು ಆ ಪದ್ಯದ ಅನುವಾದಗಳನ್ನು ಇಲ್ಲಿ ನೋಡಬಹುದು:
ಮೂಲಪದ್ಯ:
“ತಸ್ಮಿನ್ನದ್ರೌ ಕತಿಚಿದಬಲಾವಿಪ್ರಯುಕ್ತಸ್ಸಕಾಮೀ
ನೀತ್ವಾಮಾಸಾನ್ ಕನಕವಲಯಭ್ರಂಶರಿಕ್ತಪ್ರಕೋಷ್ಠಃ
ಆಷಾಢಸ್ಯ ಪ್ರಥಮೇ ದಿವಸೇ ಮೇಘಮಾಶ್ಲಿಷ್ಟಸಾನುಮ್
ವಪ್ರಕ್ರೀಡಾಪರಿಣತಗಜಪ್ರೇಕ್ಷಣೀಯಂ ದದರ್ಶ”
ಈಗ ಬೇಂದ್ರೆಯವರ ಅನುವಾದವನ್ನು ನೊಡಿರಿ:
“ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು
ಕೆಲವೆ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು
ಕಾರಹುಣ್ಣಿವೆಯ ಮಾರನೆಯ ದಿನವೆ ಮೋಡಕೋಡನಪ್ಪಿ
ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆಬೆಡಗನೊಪ್ಪಿ”
ಇತರರ ಅನುವಾದ (೧):
ಲಲನೆಯಳಲದು ಮೀರೆ
ಬಲಗುಂದಿ ಮೈ ಸೊರಗಿ
ಬಲದೋಳ ಬಳೆಗಳಚಿ ಬೀಳೆ ಕೈಯಿಂ
ಕೆಲವು ತಿಂಗಳ ಕಳೆದು
ಮಳೆಗಾಲದಾ ಮೊದಲು
ಜಳದವನು ನೋಡಿದನು ಗಿರಿಶಿಖರದೊಳ್
ಇತರರ ಅನುವಾದ(೨):
ಅಬಲೆಯನು ತಾನಗಲಿ ಕನಕವಲಯವು ಕಳಚಿ
ಬರಿದಾದ ಮುಂಗೈಯೊಳಾ ಕಾಮಿಯು
ಆದುವೆ ಗಿರಿಯೊಳು ನೆಲಸಿ ಕೆಲವು ತಿಂಗಳು ಕಳೆದು
ಆಷಾಢ ಮಾಸದಲಿ ಮೊದಲ ದಿವಸ
ದಂತದಲಿ ಧರೆಯನೆಗೆದೆರಚುತಿರುವಾಚದಲಿ
ತೊಡಗಿರುವ ಆನೆಯೊಲು ಕಣ್ಗೆಸೆಯುತಿರುವ
ಸಾನುದೇಶವನಪ್ಪಿ ಸೊಬಗನಾಂತಿರುವೊಂದು
ಹಿರಿದಾದ ಮೋಡವನೊಂದು ಕಂಡೆನೆಂದು”
ಬೇಂದ್ರೆಯವರ ಅನುವಾದದಲ್ಲಿ ಕ್ಲಿಷ್ಟತೆ ಇಲ್ಲ. ಮೂಲಕವನದ content ಹಾಗು ಛಂದಸ್ಸಿನ ಸೌಂದರ್ಯ ಉಳಿದುಕೊಂಡಿದೆ. ’ಮಖ್ಖೀ ಕಾ ಮಕ್ಖೀ’ ಶಬ್ದಾನುವಾದವಿಲ್ಲ. ಮೂಲಕವಿ ಹೇಳಬಯಸುವ ಅರ್ಥವನ್ನು ಬೇಂದ್ರೆ ಕನ್ನಡಿಸಿದ್ದಾರೆ. ಉದಾಹರಣೆಗೆ “ಆಷಾಢಸ್ಯ ಪ್ರಥಮೇ ದಿವಸೇ . . . ” ಈ ಸಾಲನ್ನು ಗಮನಿಸಬೇಕು. ಉತ್ತರ ಭಾರತೀಯರು, ಮಾಸಾರಂಭವನ್ನು ಕೃಷ್ಣಪಕ್ಷದ ಪ್ರತಿಪದೆಯಿಂದ ಗಣಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಶುಕ್ಲಪಕ್ಷದ ಪ್ರತಿಪದೆಯಿಂದ ಗಣಿಸಲಾಗುತ್ತದೆ. ಆದುದರಿಂದ ಬೇಂದ್ರೆ ಈ ಸಾಲನ್ನು ’ಆಷಾಢದ ಮೊದಲ ದಿವಸ” ಎಂದು ಅನುವಾದಿಸದೇ, ’ಕಾರಹುಣ್ಣಿವೆಯ ಮಾರನೆಯ ದಿನವೆ . .’ ಎಂದು ಬದಲಾಯಿಸಿದ್ದಾರೆ. ಚಿನ್ನದ ಕಡಗ ಮುಂಗೈಯಿಂದ ಜಾರಿ ಕೆಳಗೆ ಬಿದ್ದಿತು ಅನ್ನುವದನ್ನು, ಮೊಳಕೈಗೆ ಜಾರಿ ಬಂದಿತು ಎಂದು ಬದಲಾಯಿಸಿಕೊಂಡಿದ್ದಾರೆ.(ಬಹುಶ: ಅದು ಅಶುಭಸೂಚಕ ಎನ್ನುವ ಕಾರಣಕ್ಕಾಗಿ ಇರಬಹುದು.) ಅನುವಾದ-ಪ್ರತಿಭೆಯೆಂದು ಇದಕ್ಕಲ್ಲವೇ ಕರೆಯಬೇಕಾದದ್ದು?
ಬೇಂದ್ರೆಯವರು ಅನೇಕ ರಸಮಯ ಕನ್ನಡ ಪದಗಳನ್ನು ಮೇಘದೂತದ ಅನುವಾದದಲ್ಲಿ ಸೃಷ್ಟಿಸಿ ಬಳಸಿದ್ದಾರೆ. ಉದಾಹರಣೆಗಳು: ಕೊರಳ-ಗೆಳತಿ, ಬಯಕೆ-ಮರುಳ , ದೈವ-ಬಂಧು, ಮಳ್ಳ ಮುರುಕ , ಕಾಲ-ನೀರು, ಕಲ್ಮಾಡ, ತುಂತುಂಬಿ ಮಾಲೆಯಾಗಿ. ಇತ್ಯಾದಿ.
ರಸಸೃಷ್ಟಿಯು ಶ್ರೇಷ್ಠ ಕಾವ್ಯದ ಲಕ್ಷಣವಾಗಿದೆ. ಕಾಳಿದಾಸ ಅದನ್ನು ’ಮೇಘದೂತ’ದಲ್ಲಿ ಮಾಡಿದ್ದಾನೆ. ಕನ್ನಡದಲ್ಲಿ ಬೇಂದ್ರೆ ಅದನ್ನು ಮರುಕಳಿಸಿದ್ದಾರೆ. ಬೇಂದ್ರೆಯವರ ನುಡಿಯಲ್ಲಿಯೆ ಅದನ್ನು ಈ ರೀತಿಯಾಗಿ ಹೇಳಬಹುದು:
“ಕವಿಯ ಕಮಲಕೃತಿಯಲ್ಲಿ ಉಂಡೆ ನಾನೊಬ್ಬ ಭಾವಭೃಂಗ
ಪಕಳೆಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ
ತೋಳುಗೀಳು ಸಡಲೀತು ಪ್ರಿಯರ ಸುಸ್ನಿಗ್ಧ ಬಂಧದಲ್ಲು
ಪ್ರಾಣ ತುಂಬುವಾ ಅಧರಪಾನ ಇಳಿದೀತೆ ಉದರದಲ್ಲು?”
ಬಾಲಾಗಸಿ:
ಬೇಂದ್ರೆಯವರ ಹೆಂಡತಿ, ಬೇಂದ್ರೆಯವರಿಗೆ “ ನೀವು ಬಂಗಾರದ ಒಡವೆಯನ್ನಂತೂ ತೊಡಿಸಲಿಲ್ಲ; ಕೊನೆಯ ಪಕ್ಷ ಒಂದು ಮುತ್ತಿನ ಸರವನ್ನಾದರೂ ಕೊಡಿಸಿ”, ಎಂದು ಕೇಳುತ್ತಿದ್ದರಂತೆ. ಬೇಂದ್ರೆ ’ಪ್ರೀತಿಗಿಂತ ಒಡವೆ ಹೆಚ್ಚಲ್ಲ’ ಎಂದು ಹೇಳಲು ಒಂದು ದೊಡ್ಡ ಕವನವನ್ನೇ ಕಟ್ಟಿದರು ಎಂದು ಹೇಳಲಾಗುತ್ತದೆ:
ಅಷ್ಟು ಪ್ರೀತಿ ಇಷ್ಟು ಪ್ರೀತಿ
“ಅಷ್ಟು ಪ್ರೀತಿ ಇಷ್ಟು ಪ್ರೀತಿ . . .
ಎಣಿಸಿ ಕಷ್ಟ ಬಡದಿರು,
ಒಲೆದು ಒಲಿಸಿ ಸುಖದಿರು
ಎಷ್ಟೆ ಇರಲಿ, ಅಷ್ಟೆ ಮಿಗಿಲು
ತಮ್ಮ ಕಿರಣ ತಮಗೆ ಹಗಲು;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.
ಮುತ್ತಿನೆಕ್ಕ ಸರವನಿಕ್ಕೆ
ಮುದ್ದಿಗೆ ಕಳೆ ಕಟ್ಟಿತೆ?
ತೊಯ್ದ ಎವೆಗೆ ಮುದ್ದನಿಡಲು
ಮುದ್ದಿಗೆ ಅದು ತಟ್ಟಿತೆ?
ಕುದಿದ ಬಂದ ಕಂಬನಿಯೊಲು
ಕಂಪು ಬರದೆ ಬಿಟ್ಟಿತೆ?
ಮುತ್ತು,ರತುನ ಹೊನ್ನು ಎಲ್ಲ
ಕಲ್ಲು, ಮಣ್ಣ ವೈಭವಾ
ಎಲವೊ ಹುಚ್ಚು ಮಾನವಾ
ಒಂದು ಷೋಕು- ಬರಿಯ ಝೋಕು
ಬದಕಿನೊಂದು ಜಂಬವು,
ಒಲವೆ ಮೂಲ ಬಿಂಬವು.
ಸಪ್ತ ನಾಕ ಸಪ್ತ ನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕತ್ತಲು
ಸಿಂಹಾಸನವನೇರಿ ಕುಳಿತೆ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
ಅದರೊಳೇನು ಹೆಚ್ಚಿದೆ?
ಎದೆಯ ಕಣ್ಣ ಮುಚ್ಚಿಕೊಂಡು
ಏಕೊ ಏನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
ಅಲ್ಲೆ ಒಲವು ಮೆರೆಯದೇ
ನಲಿವು ಮೇರೆವರಿಯದೇ?
’ಮೇಘದೂತ’ದ ಪ್ರಕಟಣೆಯಿಂದ ಬಂದ ಕಿಂಚಿತ್ ಪ್ರಾಪ್ತಿಯಿಂದ, ಬೇಂದ್ರೆ ತಮ್ಮ ’ಯಕ್ಷಿ’ಗೆ ಮುತ್ತಿನ ಸರವೊಂದನ್ನು ಕೊಡಿಸಿ, ಪ್ರೀತಿಯ ಋಣಮುಕ್ತರಾದರೆಂದು ಹೇಳಲಾಗುತ್ತದೆ. ’ಮೇಘದೂತ’ದ ’ಅರ್ಪಣ’ದಲ್ಲಿಯಂತೂ ಬೇಂದ್ರೆ ಹೀಗೆ ಹೇಳಿದ್ದಾರೆ:
“ಕಾಳಿದಾಸನ ಕಡಲ
ಮುತ್ತು ಮಾಲೆಯನಿತ್ತೆ.
ಮುಡುಪನೊಪ್ಪಿದೆಯೆಂದು ಮುಕ್ತಳಾಗು
ಓ ಯಕ್ಷಿ, ಚೈತ್ಯಾಕ್ಷಿ,
ಚೆನ್ನೆ ಹೃದಯದ ಸಾಕ್ಷಿ,
ನನ್ನ ಕಲ್ಯಾಣಕ್ಕೆ ಯುಕ್ತಳಾಗು”
Tuesday, March 4, 2008
Subscribe to:
Post Comments (Atom)
23 comments:
ಬೇಂದ್ರೆಯವರ ಮೇಘದೂತ ಬೆಡಗಿನ ಚಿತ್ತಾರ, ಮೋಡಿಯ ಮಾಯಾಗಾರ. ಅದರ ಸೌಂದರ್ಯ ಅರಿಯಲು ಸಂಸ್ಕೃತದ ಅರಿವಿರಲೇಬೇಕಿಲ್ಲ. ಅಚ್ಚಗನ್ನಡದಲ್ಲಿ ಸುಲಲಿತವಾಗಿ ಸಾಗುವ ಚಿತ್ರಶಾಲೆಯದು. ಕವಿಯ ಪದ-ಪದಗಳಾಟ "ಅಬ್ಬಾ" ಎನಿಸುವಂಥದ್ದು.
ನಿಮ್ಮ ಮಾತು ನಿಜ, ದೀಪ್ತಿ. ಬೇಂದ್ರೆಯವರ ’ಮೇಘದೂತ’
ಓದಿದರೆ,ಕಾಳಿದಾಸನ ಮೇಘದೂತವನ್ನು ಓದಬೇಕಿಲ್ಲ.
sunaath-ji,
"ಹಸನುಳದಾssವ" ಎಂಬಲ್ಲಿ ಹಸನ ಶಬ್ದ ಸ್ವಚ್ಛ ಎನ್ನುವದರೊಂದಿಗೆ ಇಸ್ಲಾಮ್ ಇತಿಹಾಸದ ಹಸನ್ ರ ನೆನಪನ್ನು ತರುವದಲ್ಲವೆ?
ಇದರೊಂದಿಗೆಯೆ, ನೀವೊಂದು ಬಾರಿ, "ಅಷ್ಟು ಪ್ರೀತಿ..." ಕವನವನ್ನು ವಿಶ್ಲೇಷಿಸುವಾಗ ಪುರಂದರದಾಸರ ಕವನದ ಸಾಲರ್ಧವನ್ನು ಹೇಳಿದ್ದಿರಿ. "ಲೊಳಲೊಟ್ಟೆ ... ಆನೆ ಕುದುರೆ ಎಲ್ಲಾ ಲೊಳಲೊಟ್ಟೆ......." ಅಂತೆಯೆ ಮುತ್ತು, ರತನ ಎಲ್ಲಾ ಬರಿಯ ಶೌಕಲ್ಲವೆ?
sunaath ಅವರೆ,
ಮುತ್ತು, ರತ್ನ ಕೊಡಲಾಗದ ಗಂಡ ಪೋಣಿಸಿದ ಸಮಾಧಾನದ ಕವನ ಇದಾಗಿದೆಯಂದು ತೋರುತ್ತದೆ."ನನು ಬಡವಿ, ಅತ ಬಡವ" ಕವನದಲ್ಲಿನ ನಾಯಕಿಯ ಚಿತ್ರಣವೇ ತುಂಬ ಇಷ್ಟವಾಗುತ್ತದೆ.
ಸುನಾಥ,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
ಸುನಾಥರೆ,
’ಮುತ್ತು,ರತುನ ಹೊನ್ನು ಎಲ್ಲ
ಕಲ್ಲು, ಮಣ್ಣ ವೈಭವಾ
ಎಲವೊ ಹುಚ್ಚು ಮಾನವಾ’
ಈ ಸಾಲುಗಳನ್ನು ನನ್ನ ಮದುವೆಯ ಬಳಿಕ ಕೇಳುತ್ತಲೆ ಬಂದಿದ್ದೇನೆ.ನಾನು ’ಒಡವೆ’ಅಂದಾಗಲೆಲ್ಲ ನನ್ನವರು ಹಾಡುವ ಪದವಿದು.ಬೇಂದ್ರೆಯವರು ಇಂಥವರಿಗೆ ಸರಳ ದಾರಿಯನ್ನು ತೋರಿಸಿದ್ದಾರಲ್ಲವೆ?
ರಾ-jeevs,
’ಹಸನ್’ ಈ ನೆಲದಲ್ಲಿ ಎಷ್ಟು ಹಸನಾಗಿ ಬೆರತಿದ್ದಾನೆ ಅಲ್ಲವೆ?
ತಮ್ಮ ನವಕೋಟಿ ಸಂಪತ್ತನ್ನು ದಾನ ಮಾಡಿ, ಕಾಷಾಯ ತೊಟ್ಟ ದಾಸರು, ”ಲೊಳಲೊಟ್ಟೆ..." ಅಂತ ಹಾಡಿದ್ದು ಆಶ್ಚರ್ಯವಲ್ಲ. ಆದರೆ, "ಭಾಗ್ಯದಾ ಲಕ್ಷ್ಮಿ ಬಾರಮ್ಮಾ..." ಅಂತ ಅವರು ಸಿರಿಯನ್ನು ಕರೆಯುವಾಗ, ಇವಳು ಪಾರಮಾರ್ಥಿಕ ಭಾಗ್ಯಲಕ್ಷ್ಮಿ ಅನ್ನುವ ಅರ್ಥ ಹೊಮ್ಮುವದೆ?
ಪಾಂಡುರಂಗಾ,
’ನಾನು ಬಡವಿ’ ಕವನದ ನಾಯಕಿಗೆ ನಲ್ಲ ಕೊಟ್ಟದ್ದೆಲ್ಲವೂ ಇಷ್ಟವೇ!ಕೊನೆಗಂತೂ ’ಹೊಟ್ಟೆಗಿತ್ತ ಜೀವಫಲವ!’ ಎಂದು ಹೇಳಿ ಸಮಾಧಾನಗೊಳ್ಳುತ್ತಾಳೆ. ಇಂತಹ ಸಮಾಧಾನದ ಹೆಂಡತಿಯೇ ಎಲ್ಲ ಗಂಡಂದಿರಿಗೂ ಇಷ್ಟವಾಗುವದು!
ಸುಶ್ರುತ,
ಆಮಂತ್ರಣಕ್ಕೆ ಧನ್ಯವಾದಗಳು. It is really a good opportunity.
ವನಮಾಲಾ,
ನೀವು ಹೇಳುವಂತೆ ಗಂಡಂದಿರಿಗೆ ಇದು ಸುಲಭದ ರಾಜಮಾರ್ಗ.
ನೀವೂ ಸಹ,"ನಾನು ಕೊಡುವೆ ನಿಮಗೆ ದವನ, ನೀವು ಕೊಡುವಿರೆನಗೆ ಕವನ.....ಬರಿಯ ಮಾತಿನ ಪೋಣಿಕೆ." ಎಂದು return gift ಕೊಟ್ಟು ಬಿಡಿ.
ಸುನಾಥರೇ, ಲಕ್ಷ್ಮೀನಾರಾಯಣ ಭಟ್ಟರು ಇಲ್ಲಿಗೆ ಬಂದಿದ್ದಾಗ ಬೇಂದ್ರೆಯವರ ಮೇಘದೂತ ಅನುವಾದದ ಬಗ್ಗೆ ಬಹಳ ಸೊಗಸಾಗಿ ತಿಳಿಸಿಕೊಟ್ಟಿದ್ದರು. ನಿಮ್ಮ ಬ್ಲಾಗ್ ಓದಿ ಅವರ ಭಾಷಣ ಮತ್ತೆ ನೆನಪಾಯಿತು.
ನಿಮ್ಮ ಮುಂದಿನ ಪೋಸ್ಟಿಗೆ ಕಾಯುವಂತಾಗಿದೆ. ಬೇಂದ್ರೆಯವರನ್ನು ಬ್ಲಾಗಿಗೆ ಕರೆತಂದಿರುವ ನಿಮಗೆ ಧನ್ಯವಾದ.
raelly intresting.. 'ಬೇಂದ್ರೆಯವರನ್ನ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟದ ಮಾತು. ಒಂದೇ ಓದಿಗೆ ಅರ್ಥ ಆಗೋಲ್ಲ ಅವರು ಅವರೊಬ್ಬ ಅನುಭಾವಿ ಕವಿ.' ಅಂತೆಲ್ಲಾ ನನ್ನ ತಂದೆ ಅವರನ್ನು ಹೊಗಳುತ್ತಿರುತ್ತಾರೆ. ನೀವು ಅವರ ಸಾಹಿತ್ಯವನ್ನ ಅರೆದು ಕುಡಿದಂತಿದೆ. ಓದಿ ಖುಷಿಯಾಯಿತು. ಬೇಂದ್ರೆ ಅರ್ಥವಾಗದಿದ್ದರೆ ನಿಮ್ಮ ಬಳಿ ಬರಬಹುದಲ್ಲವಾ?? ಹೇಳಿಕೊಡುತ್ತಿರ?;-)
ತ್ರಿವೇಣಿಯವರೆ,
ಬೇಂದ್ರೆ ಅಂದರೆ "ರಸ-ಗಂಗಾವತರಣ".
ಅವರೇ ಹೇಳಿಲ್ಲವೆ:
"ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ;
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ!"
ಮೃಗನಯನಿಯವರೆ,
ಬೇಂದ್ರೆ ಸರಳನುಡಿಗಳಲ್ಲಿ ಬರೆಯುವ ಕವಿ. ಆದರೆ ಅವರ ಕವನದ ಎಲ್ಲ ಅರ್ಥಗಳನ್ನೂ ಒಮ್ಮೆಲೆ ಗ್ರಹಿಸಿಕೊಳ್ಳುವದು ಕಷ್ಟ. ನಿಮ್ಮ ತಂದೆ ಹೇಳಿದಂತೆ,ಬೇಂದ್ರೆ ಅನುಭಾವ ಕವಿ. ಅವರು ಬರೆದ ಒಂದು ಕವಿತೆ: "ಓ ತಾಯಿ, ಮಾಯಿ, ಶಿವಜಾಯಿ ಕಾಯಿ....." ಕವನದಲ್ಲಿ ಹೀಗೊಂದು ಸಾಲು ಬರುತ್ತದೆ:
(ತಾಯಿ ಭಕ್ತನಿಗೆ ಹೇಳಿದಂತೆ): "ತೆರಿತಾವ ಹಾದಿ, ಅದಕಂತ ಕಾದಿ..."
ಹೊರ ಅರ್ಥ ಬಹಳ ಸ್ಪಷ್ಟವಿದೆ. ಆದರೆ, ಇಲ್ಲಿ pun ಕೂಡ ಇದೆ.’ಹಾದಿ’ ಹಾಗು ’ಕಾದಿ’ ಇವು ತಾಂತ್ರಿಕ ವಿದ್ಯೆಯ ಹಾದಿ(=ಹ+ಆದಿ) ಹಾಗು ಕಾದಿ(=ಕ+ಆದಿ) ಎನ್ನುವ ಭೇದಗಳು.
ಬೇಂದ್ರೆಯವರಿಗೆ ಅನೇಕ ವಿಷಯಗಳಲ್ಲಿ deep knowledge ಇದ್ದುದರಿಂದಲೆ ಇಂತಹ ಅನೇಕಾರ್ಥ ಪದಗಳು ಅವರಿಗೆ ಸಹಜವಾಗಿ ಹೊಳೆಯುತ್ತಿದ್ದವು.
ಬೇಂದ್ರೆಯವರ ಬಗೆಗೆ ಚರ್ಚಿಸಲು ನಾನು ಯಾವಾಗಲೂ ಕುತೂಹಲದಿಂದ ಕಾಯುತ್ತಿರುತ್ತೇನೆ.
ಸುನಾಥರೆ,
ಬೇಂದ್ರೆ ಅಜ್ಜನ ಕಾವ್ಯನ ಕಂಪನ ನಮ್ಮ ಮನದಂಗಳಕೆ ಹರಡಿದಕ್ಕೆ ಧನ್ಯವಾದಗಳು. ಅವರ ಕಾವ್ಯದ ಸವಿಯನ್ನ ಸವಿಯಲು ಒಳ ಅರ್ಥಗಳು ತಿಳಿದರೆ ಚನ್ನ, ನಿಮ್ಮಿಂದ ಇನ್ನು ಹೆಚ್ಚು ಹೆಚ್ಚು ಬೇಂದ್ರೆ ಕಾವ್ಯದ ಬಗ್ಗೆ ತಿಳಿಯಲು ಕಾತುರದಿಂದ ಇದ್ದೆನೆ.
-ಅಮರ
ಅಮರ,
ಬೇಂದ್ರೆ ಕಾವ್ಯದ ಸೊಗಸನ್ನು ಜೊತೆಯಾಗಿ ಸವಿಯೋಣ; ರುಚಿ ಹೆಚ್ಚಾಗುತ್ತದೆ.
ಸುನಾಥರೆ,
ನಿಮ್ಮ ಬ್ಲಾಗ್ ನಲ್ಲಿ ಇಂತಹ ಒಂದು ಅದ್ಭುತ ಬರಹ ಓದಿ ತುಂಬಾ ಸಂತೋಷವಾಯಿತು. ನನ್ನ ಎಂ.ಎ. ಕೊನೆಯ ವರ್ಷದಲ್ಲಿ ಬೇಂದ್ರೆಯವರ ಕಾವ್ಯ-ಕೃತಿಯಕುರಿಗಳ ಅಧ್ಯಯನವಿತ್ತು. ಅಲ್ಲಿಂದ ನನಗೆ ಬೇಂದ್ರೆಯವರ್‍ಎ ಆದರ್ಶರೆನಿಸಿಬಿಟ್ಟರು.
ಅವರ ಮೇಘದೂತವನ್ನೋದಿದ ಮೇಲೆ ಅನ್ನಿಸಿತು.. ಇವರು ಭಾಷೆಗಳ ಎಲ್ಲೆಯನ್ನು ಮೀರಿದ ‘ಕವಿರತ್ನರು’ ಎಂದು.
“ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು
ಕೆಲವೆ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು
ಕಾರಹುಣ್ಣಿವೆಯ ಮಾರನೆಯ ದಿನವೆ ಮೋಡಕೋಡನಪ್ಪಿ
ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆಬೆಡಗನೊಪ್ಪಿ”
ಇಲ್ಲಿ "ಕೆಲವೆ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು "-
ಇದರರ್ಥ ಕೆಲವೇ ತಿಂಗಳಲ್ಲಿ ದಷ್ಟ-ಪುಷ್ಟವಾಗಿ ಸುಖಲೋಲುಪತೆಯಿಂದ ಮೈ-ಕೈ ತುಂಬಿಕೊಂಡಿದ್ದ ಯಕ್ಷನ ಕೈ, ವಿರಹದ ಬೇಗೆಯಲ್ಲಿ ಅನ್ನ, ನೀರು ಸೇರದೆ ಬಡವಾಗಿ ಸೊರಗಿದ್ದರಿಂದ ಕಡಗ ಜಾರಿ ಬಂತು ಎಂದು ಅರ್ಥೈಸುವುದು ಸೂಕ್ತವೇನೋ ಅಲ್ಲವೇ? ನಾನು ಅಭ್ಯಸಿಸುವಾಗ ಕೆಲವೊಂದು ಅನುವಾದಕರೊಡನೆ ವಿಮರ್ಶಿಸಿದಾಗ, ಹಲವರ ಅಭಿಪ್ರಾಯ ಇದಾಗಿತ್ತು. ಹಾಗಾಗಿ ಹೇಳಿದೆ.
ತುಂಬಾ ಉತ್ತಮ ಲೇಖನ. ಮತ್ತಷ್ಟು ಬರಲಿ. ಬರುತ್ತಲೇ ಇರುವೆ ನಿಮ್ಮ ಇನ್ನೊಂದು ಪೋಸ್ಟ್ ಓದಲು.
ತೇಜಸ್ವಿನಿ,
ನಿಮ್ಮ ಅಭಿಪ್ರಾಯ ಅತ್ಯಂತ ಸರಿಯಾಗಿದೆ. ವಿರಹದಲ್ಲಿ ಬಳಲಿದ ಯಕ್ಷ ಅನ್ನಾಹಾರಗಳನ್ನು ಕಡೆಗಣಿಸಿ, ಸೊರಗಿದ್ದರಿಂದ
ಮುಂಗೈ ಮೇಲಣ ಕಡಗ ಮೊಳಕೈಗೆ ಬಂದಿತೆನ್ನುವದು ಸುಯೋಗ್ಯ ತರ್ಕ.
Krishna katti.
nadu kanda bahu dodda kavi bendre avru.bendre avr kavy oduvade ondu ananda.blog molaka odugarlli bendre kavya preeti hechisuttidiri adkke vandnegalu.
ಡಾ|ಕಟ್ಟಿಯವರೆ,
ಲೇಖನವನ್ನು ನೀವು ಮೆಚ್ಚಿಕೊಂಡಿದ್ದು ನನಗೆ ತುಂಬ ಸಂತಸ ತಂದಿದೆ. ಧನ್ಯವಾದಗಳು.
ಬೇಂದ್ರೆಯವರ ಮೆಘದೂತದ ಅನುವಾದ ಪುಸ್ತಕ ಕೊಂಡುಕೊಳ್ಳಲು ಎಲ್ಲಿ ಸಿಗಬದುದೆಂದು ದಯಮಾಡಿ ತಿಳಿಸಿ. ಓದಲು ಕಾತುರನಾಗಿದ್ದೇನೆ. ಹಾಗೆಯೇ ಮೆಘದುತದ ಬಗೆಗೆ ಶತಾವಧಾನಿ ಅರ್ ಗಣೇಶ್ ಅವರ ಉಪನ್ಯಾಸ ಯೂಟುಬ್ ನಲ್ಲಿ ಲಭ್ಯವಿದ್ದು ಅದ್ಭುತವಾಗಿವೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಪ್ರಿಯ ಸುಬ್ರಹ್ಮಣ್ಯರೆ,
ಬೇಂದ್ರೆಯವರ ಎಲ್ಲ ಕೃತಿಗಳನ್ನು ಮೊದಲು ಸಮಾಜ ಪುಸ್ತಕಾಲಯದವರೆ ಪ್ರಕಟಿಸುತ್ತಿದ್ದರು. ಬೇಂದ್ರೆಯವರ ನಿಧನದ ನಂತರ ಅವರ ಪುತ್ರ ವಾಮನ ಬೇಂದ್ರೆ ಹಾಗು ಅವರ ಪುತ್ರಸಮಾನರಾದ ಶರ್ಮಾ ಇವರು ಒಂದು ಟ್ರಸ್ಟ್ ಮಾಡಿಕೊಂಡು ಕೆಲವೊಂದು ಬದಲಾವಣೆಗಳೊಂದಿಗೆ ಪ್ರಕಟಿಸಲು ಪ್ರಾರಾಂಭಿಸಿದರು. ಮೇಘದೂತವನ್ನು ಸದ್ಯಕ್ಕೆ ಯಾರು ಪ್ರಕಟಿಸುತ್ತಿದ್ದಾರೊ ತಿಳಿಯದು. ಆದುದರಿಂದ ನೀವು ಈ ಮೂವರನ್ನು ಸಂಪರ್ಕಿಸಿದರೆ ನಿಮಗೆ ಖಂಡಿತವಾಗಿಯೂ ಲಭ್ಯತೆಯ ಬಗೆಗೆ ಮಾಹಿತಿ ದೊರೆಯುವುದು:
(೧) ಸಮಾಜ ಪುಸ್ತಕಾಲಯ, ಕೆರಿ ಕೆಳಗಿನ ಓಣಿ, ಧಾರವಾಡ
(೨) ವಾಮನ ಬೇಂದ್ರೆ, ‘ಶ್ರೀಮಾತಾ’, ಸಾಧನಕೇರಿ, ಕೆಲಗೇರಿ ರಸ್ತೆ, ಧಾರವಾಡ
(೩) ಕೆ.ಎಸ್.ಶರ್ಮಾ, ಕಾರ್ಮಿಕ ಮುಖಂಡರು, ವಿಶ್ವಶ್ರಮ ಟ್ರಸ್ಟ, ಏರ್‍ಪೋರ್ಟ ರಸ್ತೆ, ಹುಬ್ಬಳ್ಳಿ
ಒಂದು ವೇಳೆ ಪುಸ್ತಕ ನಿಮಗೆ ಲಭ್ಯವಾಗದಿದ್ದರೆ ತಿಳಿಸಿ. ಬೇರೆ ಉಪಾಯ ಮಾಡೋಣ.
Post a Comment