Wednesday, June 4, 2008

ಬೆಂಗಳೂರು ಹಾಗು ವೆಂಗಿಮಂಡಲ

ಬೆಂಗಳೂರು ಈ ಪದದ ಮೂಲ ‘ಬೆಂದಕಾಳೂರು’ ಎಂದು ಹೇಳಲಾಗುತ್ತಿದೆ. ಈ ನಿರುಕ್ತಿಗಾಗಿ ಒಂದು ಕತೆಯನ್ನೇ ಕಟ್ಟಲಾಗಿದೆ.
ಆದರೆ, ಕೆಳಗೆ ಕೊಟ್ಟ ಅಂಶಗಳನ್ನು ಗಮನಿಸಿರಿ:

ವೆಂಗ ಅಥವಾ ಬೆಂಗ ಪದದಿಂದ ಪ್ರಾರಂಭವಾಗುವ ೧೩ ಗ್ರಾಮಗಳು ಕರ್ನಾಟಕದಲ್ಲಿವೆ:
೧. ಬೆಂಗಳೂರು (ಬೆಂಗಳೂರು ತಾಲೂಕು/ ಬೆಂಗಳೂರು ಜಿಲ್ಲೆ)
೨. ಬೆಂಗನೂರು (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೩. ಬೆಂಗಳೆ (ಶಿರಸಿ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೪. ಬೆಂಗೂರು (ಮಡಿಕೇರಿ ತಾಲೂಕು/ ಕೊಡಗು ಜಿಲ್ಲೆ)
೫. ಬೆಂಗೇರಿ (ಹುಬ್ಬಳ್ಳಿ ತಾಲೂಕು/ ಧಾರವಾಡ ಜಿಲ್ಲೆ)
೬. ಬೆಂಗ್ರೆ (ಭಟಕಳ್ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೭. ವೆಂಗಲಪ್ಪನ ಹಳ್ಳಿ (ಮಾಗಡಿ ತಾಲೂಕು/ ಬೆಂಗಳೂರು ಜಿಲ್ಲೆ)
೮. ವೆಂಗಲಮ್ಮನ ಹಳ್ಳಿ (ಮಧುಗಿರಿ ತಾಲೂಕು/ ತುಮಕೂರು ಜಿಲ್ಲೆ)
೯. ವೆಂಗಲಮ್ಮನ ಹಳ್ಳಿ (ಕೊರಟಗೆರೆ ತಾಲೂಕು/ ತುಮಕೂರು ಜಿಲ್ಲೆ)
೧೦. ವೆಂಗಲಾಪುರ (ಹೊಸದುರ್ಗ ತಾಲೂಕು/ ಬಳ್ಳಾರಿ ಜಿಲ್ಲೆ)
೧೧. ವೆಂಗಸಂದ್ರ (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೧೨. ವೆಂಗಳಾಪುರ (ದೇವದುರ್ಗ ತಾಲೂಕು/ ರಾಯಚೂರು ಜಿಲ್ಲೆ)
೧೩. ವೆಂಗಳಾಪುರ(ಡಿ) (ಸಿಂಧನೂರು ತಾಲೂಕು/ ರಾಯಚೂರು ಜಿಲ್ಲೆ)

ಈ ಸ್ಥಳನಾಮಗಳನ್ನು ಪರಿಶೀಲಿಸಿದಾಗ, ಇವೆಲ್ಲವುಗಳ ಪೂರ್ವಪದ ‘ವೆಂಗ’ ಅಥವಾ ‘ಬೆಂಗ’ ಇದ್ದದ್ದು ಕಂಡು ಬರುವದು. ಕನ್ನಡ, ತಮಿಳು, ತೆಲುಗು,ತುಳು ಹಾಗು ಮಲೆಯಾಳಮ್ ಎನ್ನುವ ಪಂಚದ್ರಾವಿಡ ಭಾಷೆಗಳು ಪ್ರತ್ಯೇಕವಾಗುವ ಸಮಯದಲ್ಲಿ ‘ವೆಂಕ’ ಎನ್ನುವ ಮೂಲಪದವು ‘ವೆಂಗ’ ಹಾಗೂ ‘ಬೆಂಗ’ ವಾಗಿದ್ದರಲ್ಲಿ ಅಚ್ಚರಿ ಏನಿಲ್ಲ. ಅರ್ಥಾತ್, ಈ ಎಲ್ಲ ಸ್ಥಳನಾಮಗಳ ಅರ್ಥವೆಂದರೆ ಈ ಸ್ಥಳಗಳು ವೆಂಕನ ಊರುಗಳು.
ಈ ವೆಂಕನು ಯಾರು?
ಅನೇಕ ದಾಕ್ಷಿಣಾತ್ಯರ ಕುಲದೈವವಾದ ವೆಂಕಪ್ಪನೇ ಈ ವೆಂಕನು!

ವೆಂಕ, ವೆಂಗ ಹಾಗೂ ಬೆಂಗ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಕರ್ನಾಟಕದ ಹೊರಗೂ ದೊರೆಯುತ್ತವೆ. ಭಾರತದ ಮಾಜಿ ಪ್ರಧಾನಿಯಾದ ಪಿ.ವಿ. ನರಸಿಂಹರಾಯರು ‘ವೆಂಗಲ್’ ಊರಿನವರು. ವೆಂಗಲ್ ಅಂದರೆ ‘ವೆಂಕ+ಕಲ್’. (ಕಲ್ ಪದದಿಂದ ಅಂತ್ಯವಾಗುವ ಅನೇಕ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ನಿಜಗಲ್, ಹಾನಗಲ್, ಭಟಕಳ್ ಇ.) ಆಂಧ್ರಪ್ರದೇಶದಲ್ಲಿರುವ ಮತ್ತೊಂದು ದೊಡ್ಡ ಊರೆಂದರೆ ವೆಂಗನ್ನಪಲೇಮ್. ತಿರುಪತಿ ಗಿರಿಯೊಡೆಯ ವೆಂಕಪ್ಪನ ಹೆಸರು ‘ವೆಂಕಟೇಶ’ ಎನ್ನುವದನ್ನು ಗಮನಿಸಿ. ಇದು ವೆಂಕಟ+ಈಶ ಎನ್ನುವ ಎರಡು ಪದಗಳಿಂದಾಗಿದೆ. ಹಾಗಿದ್ದರೆ ವೆಂಕಟ ಅಂದರೆ ಯಾರು? ವೆಂಕಟ ಇದು ವೆಂಕ ಅಥವಾ ವೆಂಗ ಹೆಸರುಗಳ ಮತ್ತೊಂದು ರೂಪವಷ್ಟೆ. ಈ ವೆಂಕ, ವೆಂಗ ಹೆಸರಿನ ಮೂಲನಿವಾಸಿಗಳ ಸಮುದಾಯವು ‘ವೆಂಗಿಮಂಡಲ’ ಎನ್ನುವ ಪ್ರದೇಶದ ನಿವಾಸಿಯಾಗಿರಲೇಬೇಕು.

ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಮುಳಿಯ ತಿಮ್ಮಪ್ಪಯ್ಯನವರ ಅಭಿಪ್ರಾಯದಲ್ಲಿ ಈ ವೆಂಗಿಮಂಡಲವು ವಿಂಧ್ಯಪರ್ವತದ ತಪ್ಪಲಿನಲ್ಲಿತ್ತು. ಅವರ “ಕನ್ನಡ ನಾಡೂ ದೇಸಿ ಸಾಹಿತ್ಯವೂ” ಕೃತಿಯಲ್ಲಿ ತಮ್ಮ ಅನುಮಾನಕ್ಕೆ ಅನೇಕ supportಗಳನ್ನು ನೀಡಿದ್ದಾರೆ. ಆ ಪ್ರದೇಶದಲ್ಲಿರುವ ಕೆಲವು ಹೆಸರುಗಳನ್ನು ಗಮನಿಸಿದಾಗ (ಉದಾಹರಣೆಗೆ: ಭಾರತದ ಮಾಜಿ ಕ್ರಿಕೆಟ್ ನಾಯಕರಾದ ‘ವೆಂಗಸರಕಾರ’), ತಿಮ್ಮಪ್ಪಯ್ಯನವರ ಊಹೆಗೆ ಬಲ ಬರುತ್ತದೆ.

ಈ ಅಂಶಗಳನ್ನು ಗಮನಿಸಿದಾಗ, ‘ಬೆಂಗಳೂರು’ ಇದು ‘ವೆಂಗಳೂರು’(=ವೆಂಕನ ಊರು) ಎನ್ನುವದು ಸ್ಪಷ್ಟವಾಗುತ್ತದೆ ಹಾಗು ‘ಬೆಂದಕಾಳೂರು’ ಎಂದು ಅರ್ಥೈಸುವದು ಹಾಸ್ಯಾಸ್ಪದ ದಂತಕತೆ ಎಂದು ಭಾಸವಾಗುವದು.

ಮುಳಿಯ ತಿಮ್ಮಪ್ಪಯ್ಯನವರು ತಮ್ಮ ಲೇಖನದಲ್ಲಿ ‘ವೆಳ್’ ಪದವು ವೇಕ (ಬೇಕ) ಪದವಾಗಿ ಮಾರ್ಪಟ್ಟು, ಅದರಿಂದ ‘ವೆಂಗಿ’ ಪದದ ಉತ್ಪನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ‘ವೆಳ್’ ,‘ಬೆಳ್’ ಹಾಗೂ ವೇಕ (ಬೇಕ) ಪದದಿಂದ ಪ್ರಾರಂಭವಾಗುವ ೨೨೦ ಊರುಗಳು ಕರ್ನಾಟಕದಲ್ಲಿವೆ. ಕೆಲವು ಉದಾಹರಣೆಗಳು:

ಬೇಲಕುಡ, ಬೇಲಕುಣಿ, ಬೇಲುರಾ, ಬೇಲೂರು, ಬೆಳ್ಳಟ್ಟಿ, ಬೇಲಕೆರೆ, ಬೇಲಧಾರಾ, ಬೇಲಾತೂರು, ಬೇಲನಾಯಕನಹಳ್ಳಿ. ಬೇಲುಂಡಗಿ, ಬೇಲೆಕೇರಿ, ಬೇಲೆಗೇರಿ, ಬೇಲೇರಿ, ಬೆಳಂದೂರು, ಬೆಳಂಬರ, ಬೆಳಕಂದ, ಬೆಳಕವಾಡಿ, ಬೆಳಕುಪ್ಪೆ, ಬೆಳಕೆ, ಬೆಳಕೆರೆ, ಬೆಳಕೊಟ್ಟಾ, ಬೆಳಗರಹಳ್ಳಿ, ಬೆಳಗಲಿ, ಬೆಳಗಲ್, ಬೆಳಗಾಲ, ಬೆಳಗಾವಿ, ಬೆಳಗುಂಡಾ, ಬೆಳಮಾ, ಬೆಳವಟಗಿ, ಬೆಳವಡಿ, ಬೆಳಹಾರ, ಬೆಳವಲಕೊಪ್ಪ, ಬೆಳ್ಳಹಳ್ಳಿ, ಬೆಳ್ಳಾವಿ, ಬೆಳ್ಳೂರು, ಬೇಕವಾಡ, ಬೇಗೂರು, ಬೇಗೋಡಿ , ವೇಲಾಪಿ ಇತ್ಯಾದಿ.

ತಮಿಳುನಾಡಿನಲ್ಲಿರುವ ವೆಲ್ಲೂರು, ಕೋಲ್ಕತ್ತಾದ ಹತ್ತಿರವಿರುವ ಬೇಲೂರು ಇವೆಲ್ಲ ವೇಳರ (=ವೆಂಗಿಗಳ) ಹರಡುವಿಕೆಗೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದಲ್ಲಿರುವ ‘ವೇರೂಳ’ ಇದು ವೇಳೂರಿನ ಅಪಭ್ರಂಶವಾಗಿರಬೇಕು.
ಶ್ರೀಕೃಷ್ಣನ ಅಣ್ಣನಾದ ಬಲರಾಮನಿಗೆ ತಮಿಳರು ‘ವೇಲಾಯುಧನ್’ ಎಂದು ಕರೆಯುತ್ತಾರೆ. ಈ ಬಲರಾಮನ ಹೆಂಡತಿಯು ರೇವತಿಯು; ಅರ್ಥಾತ್ ‘ರೇವಾ’ ಪಟ್ಟಣದಿಂದ ಬಂದವಳು. ರೇವಾ ಪಟ್ಟಣವು ವೆಂಗಿಮಂಡಲದ ರಾಜಧಾನಿಯಾಗಿತ್ತು. ಅಂದರೆ, ವೇಲನಾಡಿನಲ್ಲಿರುವ(=ವೆಂಗಿನಾಡಿನಲ್ಲಿರುವ) ಬಲರಾಮನು, ವೆಂಗಿಮಂಡಲದ ರಾಜಧಾನಿಯಾದ ರೇವತಿಯನ್ನು ಮದುವೆಯಾಗಿದ್ದನು ಎಂದರ್ಥವಾಯಿತು. ಬಲರಾಮನ ತಮ್ಮನಾದ ಶ್ರೀಕೃಷ್ಣನು ‘ಕನ್ನಯ್ಯ’ನು, ಅಂದರೆ ಕನ್ನ ಕುಲಜನು(=ಕನ್ನಡಿಗನು). ಅರ್ಥಾತ್, ವೆಂಗಿಮಂಡಲದ ನಿವಾಸಿಗಳು ಕನ್ನಡಿಗರು ಎನ್ನುವದಕ್ಕೆ ಅಪ್ರತ್ಯಕ್ಷ ಪುರಾವೆ.

ಬಲರಾಮನಿಗೆ ಹಲಾಯುಧ ಎನ್ನುವ ಹೆಸರೂ ಇದೆ. ಕರ್ನಾಟಕದಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೧೦೩ ಸ್ಥಳಗಳಿವೆ.
ಉದಾಹರಣೆಗಳು: ಹಲಗಣಿ, ಹಲಗತ್ತಿ, ಹಲಗೇರಿ, ಹಲಕೂರು, ಹಲಕೋಡಾ, ಹಲಗನಹಳ್ಳಿ, ಹಲಗಾ, ಹಲಗೊರ್ಟಾ, ಹಲಘಟ್ಟ, ಹಲಚೇರ,, ಹಲಗಡ್ಲಾ, ಹಲಕುಂಡಿ, ಹಲವರ್ತಿ, ಹಲವಳ್ಳಿ, ಹಲಸುಲಿಗೆ, ಹಲಸೂರು, ಹಲಸೆ, ಹಲಹಳ್ಳಿ, ಹಲಿಕೆ,ಹಲಿಯಾಳ ಇತ್ಯಾದಿ.

‘ಹಲ’ ವಂಶದ ರಾಜರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಸರೂರಿನ ಪ್ರಸಿದ್ಧ ರಾಜರಾಗಿದ್ದರು.

ಕನ್ನಡಿಗರು ವಿಂಧ್ಯ ಪರ್ವತದ ತಪ್ಪಲಿನಿಂದ ಕಾವೇರಿಯವರೆಗೂ ವ್ಯಾಪಕವಾಗಿ ವಾಸಿಸುತ್ತಿದ್ದದು ಈ ಸ್ಥಳನಾಮಗಳಿಂದ ಸಿದ್ಧವಾಗುತ್ತದೆ.
ಟಿಪ್ಪಣಿ: ವೇಲಾಯುಧನ್ ಈತನು ‘ಮುರುಗ’ನೇ ಹೊರತು ‘ಬಲರಾಮ’ ಅಲ್ಲ ಎಂದು ಹಂಸಾನಂದಿಯವರು ತಿಳಿಸಿದ್ದಾರೆ. ಈ ಸೂಚನೆಯು ಸರಿಯಾಗಿದೆ. ಒಪ್ಪಿಕೊಳ್ಳುತ್ತೇನೆ.

22 comments:

ಅಂತರ್ವಾಣಿ said...

ನಿಮ್ಮ ಬ್ಲಾಗೊಂದು encyclopedia!
ಕನ್ನಡದ ಅನೇಕ ಊರುಗಳ, ಜನಾಂಗದ ಬಗ್ಗೆ ಮಾಹಿತಿ ತಿಳಿಸುತ್ತಾಯಿದ್ದೀರ. ತುಂಬಾ ಚೆನ್ನಾಗಿದೆ.
ಆದರೆ, ಬೆಂದಕಾಳೂರು ಪದದಿಂದ ಬೆಂಗಳೂರು ಬಂದಿಲ್ಲ ಅಂತ ಸ್ಪಷ್ಟವಾಗಿ ಹೇಗೆ ಹೇಳುತ್ತೀರ?

ಶಾಂತಲಾ ಭಂಡಿ (ಸನ್ನಿಧಿ) said...

ಸುನಾಥರವರೆ...
ನಿಮ್ಮ ಬ್ಲಾಗ್ ಓದಲು ಖುಷಿ+ಅತ್ಯುಪಯುಕ್ತ ಮಾಹಿತಿಗಳನ್ನು ಒದಗಿಸುತ್ತಿದೆ. ಈ ಸಲದ ಪೋಸ್ಟಿನಲ್ಲಿ ನನ್ನೂರು ಇದೆ, ಎಷ್ಟು ಖುಷಿಯಾಯ್ತು ಅಂದ್ರೆ....
ಆಹಾ...ನನ್ನೂರು ಸುಂದರವಾದ ಸೊಬಗಿನ ಪುಟ್ಟಹಳ್ಳಿ. ಅದನ್ನಿಲ್ಲಿ ನಿಮ್ಮ ಬ್ಲಾಗಿನಲ್ಲಿ ಕಂಡು ಖುಶಿಯೋ ಖುಶಿ...
ಊರಿಗೆ ಹೋಗಿ ಬಂದಷ್ಟು....:)

hamsanandi said...

ಬೆಂದಕಾಳೂರಿನಿಂದ ಬೆಂಗಳೂರು ಬಂದಿಲ್ಲ ಅನ್ನುವುದಕ್ಕೆ ಶಾಸನಾಧಾರವೇ ಇದೆ :)

ಈ ಕಥೆಯ ಪ್ರಕಾರ ಬೆಂದಕಾಳನ್ನು ಕೊಟ್ಟಿದ್ದು (ವೀರ)ಬಲ್ಲಾಳ ರಾಯನಿಗೆ. ಅಂದರೆ ಕ್ರಿ.ಶ.೧೧೫೦-೧೨೦೦ರ ಸುಮಾರಿಗೆ.

ಆದರೆ, ಬೇಗೂರು (ಈಗ ಇದು ಬೆಂಗಳೂರಿಗೆ ಸೇರಿಹೋಗಿದೆ) ಶಾಸನವೊಂದರಲ್ಲಿ, ಬೆಂಗುಳೂರು ಎಂಬ ಹೆಸರು ಕಂಡು ಬಂದಿದೆ!

-ಹಂಸಾನಂದಿ

hamsanandi said...

ಹಿಂದಿನ ಟಿಪ್ಪಣಿ ಮುಗಿದಿರಲಿಲ್ಲ..

ಆ ಶಾಸನ ಗಂಗರ ಕಾಲದ್ದು - ಸುಮಾರು ಕ್ರಿ.ಶ.೮೫೦-೯೦೦ ರದ್ದು ಎಂದು ತೀರ್ಮಾನವಾಗಿದೆ. ಅಂದರೆ, ವೀರಬಲ್ಲಾಳನಿಗೂ ೨೦೦ ವರ್ಷ ಮೊದಲೇ ಬೆಂಗಳೂರೆಂಬ ಹಳ್ಳಿ ಅಲ್ಲಿತ್ತು ಅನ್ನುವುದು ಸಿದ್ಧವಾಗುತ್ತಲ್ಲವೇ?

hamsanandi said...

ಒಂದೆರಡು ತಿದ್ದುಪಡಿ, ಹಾಗೂ ಟಿಪ್ಪಣಿಗಳನ್ನು ಸೂಚಿಸಬಯಸುವೆ!

ವೆಂಕಟ ಎಂದರೆ, ತಿಮ್ಮಪ್ಪನಲ್ಲ. ಆ ಊರಿನ ಹೆಸರು ವೇಂಗಡ (ಅಥವಾ ವೇಂಕಟ); ಅಲ್ಲಿಯ ಒಡೆಯನೇ ವೇಂಕಟೇಶ. ತಮಿಳಿನಲ್ಲಿ ತಿರುಮಲೆಗೆ ವೇಂಗಡಂ ಎಂದೇ ಹೆಸರು. ಹಿಂದಿನ ಕಾಲದಿಂದಲೂ, ಉತ್ತರದಲ್ಲಿ ವೇಂಗಡ (ತಿರುಪತಿ), ಮತ್ತು ದಕ್ಷಿಣದಲ್ಲಿ ಕುಮರಿ (ಕನ್ಯಾಕುಮಾರಿ) ಯನ್ನು ತಮಿಳು ಭಾಷಾ ಪ್ರದೇಶದ ಎರಡು ತುದಿಗಳಾಗಿ ಗುರುತಿಸಲಾಗಿದೆ. ಆದರೆ ಕಾಲಕ್ರಮೇಣ ವೇಂಕಟನೇ ತಿಮ್ಮಪ್ಪ ಅನ್ನುವ ಬದಲಾವಣೆ ಆಗಿರಬಹುದು.

ವೇಂಗಡನೂರು - ವೇಂಗಳನೂರು - ಬೆಂಗಳೂರು ಎನ್ನುವ ಬದಲಾವಣೆಗಳು ಖಂಡಿತ ಸಾಧ್ಯವೆಂದು ನನ್ನ ಅನಿಸಿಕೆಯೂ ಕೂಡ.

ಪಂಪ ವೆಂಗಿಮಂಡಲದವನೆಂಬ ಹೇಳಿಕೆ ಇದೆಯಲ್ಲವೇ? ಮತ್ತೆ ಪೂರ್ವದ ಚಾಲುಕ್ಯರನ್ನು ವೆಂಗಿಯ ಚಾಲುಕ್ಯರು ಎಂದೂ ಕರೆಯುವುದನ್ನು ನೋಡಿದರೆ, ವೆಂಗಿಮಂಡಲವು ಈಗಿನ ಕರ್ನಾಟಕ-ಆಂಧ್ರ-ಮಹಾರಾಷ್ಟ್ರ ಗಳು ಸೇರುವ ರಾಯಚೂರು-ಕಲ್ಬುರ್ಗಿ- ಆದಿಲಾಬಾದ್ ಸುತ್ತಮುತ್ತಲ ಪ್ರದೇಶ ಎಂದರೆ ಹೆಚ್ಚಿನ ಅರ್ಥ ಬರುತ್ತಲ್ಲವೇ? ಇದು ಮಧ್ಯಪ್ರದೇಶವನ್ನೂ ಸೇರಿಸಿಕೊಂಡಿರಬಾರದು ಎನ್ನುವುದಕ್ಕೆ ನನ್ನಲ್ಲಿ ಸಾಕ್ಷಿಗಳೇನೂ ಇಲ್ಲ :)

ಬೇಲ-ಬೇಳ ಹೆಸರುಗಳನ್ನು ಹೇಳುವಾಗ ನೀವು ಬೇಲೂರು, ಬೆಳಗೊಳಗನ್ನೇ ಮರೆತಿರಲ್ಲ?

ಬಲರಾಮ ಹಾಗೂ ವೇಲಾಯುಧರನ್ನು ಸಮೀಕರಿಸುವುದು ಸರಿಯಲ್ಲ. ಬಲರಾಮ ಹಲಾಯುಧ - ಅಂದರೆ ನೇಗಿಲು ಹಿಡಿದವನು. (ಬಲರಾಮನೇ ಬೇರೆ, ಹಲಾಯುಧನೇ ಬೇರೆ ಅನ್ನುವ ವಾದವೂ ಇದೆ). ಆದರೆ, ವೇಲಾಯುಧ ವೇಲ್ ಅನ್ನು ಅಂದರೆ, ಈಟಿಯನ್ನು ಹಿಡಿದವ. ವೇಲಾಯುಧ ಅಥವ ಮುರುಗನನ್ನು ಮೊದಲಿಂದಲೂ ತಮಿಳರು ಪೂಜಿಸುತ್ತಿದ್ದು, ನಂತರ ಮುರುಗ=ಷಣ್ಮುಕ ಎಂಬ ಚಲಾವಣೆ ಬಂತು ಎಂಬ ವಾದಗಳಿವೆ. ಅದು ಹೇಗೇ ಇರಲಿ, ವೇಲಾಯುಧ ಅಂದರೆ ಷಣ್ಮುಖ ಅನ್ನುವ ಅರ್ಥವೇ ಆಚರಣೆಯನ್ನು ನೋಡಿದರೆ ಸೂಕ್ತ.

ರೇವಾ ಪಟ್ಟಣದಲ್ಲಿ ಕನ್ನಡವಿದ್ದಿರಬಹುದೆಂಬುದಕ್ಕೆ ಬೇರೆಯೂ ಆಧಾರಗಳಿವೆ. ಅಮೋಘವರ್ಷ ನೃಪತುಂಗ ಇಲ್ಲಿಯೇ ಹುಟ್ಟಿ, ಮಾನ್ಯಖೇಟಕ್ಕೆ ಮೊದಲು ಇಲ್ಲಿಂದಲೇ ರಾಷ್ಟ್ರಕೂಟರ ರಾಜ್ಯವನ್ನಾಳಿದನೆಂಬುದಕ್ಕೆ ಶಾಸನಾಧಾರವಿರುವ ಬಗ್ಗೆ ನಾನು ಓದಿದ್ದೇನೆ.

ಟಿಪ್ಪಣಿ ದೊಡ್ಡದಾಯಿತು - ತಪ್ಪು ತಿಳಿಯುವುದಿಲ್ಲವೆಂದು ಭಾವಿಸುವೆ. :)

-ಹಂಸಾನಂದಿ

sunaath said...

ಅಂತರ್ವಾಣಿಯವರೆ,
ಅನುಮಾನಕ್ಕೆ ಧನ್ಯವಾದಗಳು.ನನಗೆ ಗೊತ್ತಿರದ ಮಾಹಿತಿಯನ್ನು ಹಂಸಾನಂದಿಯವರು ನೀಡಿದ್ದಾರೆ. ನಿಮ್ಮ ಸಂದೇಹ ಪರಿಹಾರವಾಯಿತೆಂದು ಭಾವಿಸುತ್ತೇನೆ.

sunaath said...

ಶಾಂತಲಾ,
ನಿಮ್ಮೂರು ಯಾವುದು?
ಅಕಸ್ಮಾತ್, ನಿಮ್ಮೂರೇ ನಮ್ಮೂರೆ?

sunaath said...

ಹಂಸಾನಂದಿ,
ಶಾಸನ ಹಾಗು ಇತಿಹಾಸದ ಬಗೆಗೆ ನಿಮ್ಮಲ್ಲಿ ತುಂಬಾ ಮಾಹಿತಿ ಇದೆ. ನನ್ನ ತರ್ಕ ಹಾಗು ಅನುಮಾನ ಕೇವಲ statistics ಮೇಲೆ ಆಧಾರಿತವಾದದ್ದು. ನೀವು ನೀಡಿದ ಹೆಚ್ಚಿನ ಮಾಹಿತಿಗಾಗಿ ಅನೇಕ ಧನ್ಯವಾದಗಳು. ದಯವಿಟ್ಟು, ನಿಮ್ಮಲ್ಲಿರುವ ಹೆಚ್ಚಿನ ಮಾಹಿತಿಯನ್ನು ನೀಡುತ್ತಲಿರಿ.
ಧನ್ಯವಾದಗಳು.

ಅಂತರ್ವಾಣಿ said...

ಸುನಾಥ,
ನನ್ನ ಅನುಮಾನ ಬಗೆ ಹರಿಯಿತು.
ಹಂಸಾನಂದಿ ಅವರೆ,
ಧನ್ಯವಾದಗಳು :)

sritri said...

ಸುನಾಥರೇ, ಈ ಲೇಖನ ಆಸಕ್ತಿದಾಯಕವಾಗಿದೆ. ಬೆಂದಕಾಳೂರಿನಿಂದ ಬೆಂಗಳೂರಾಗಿದೆ ಎಂದು ಎಲ್ಲಾ ಕಡೆ ಪ್ರಚಾರವಾಗಿಹೋಗಿದೆ. ನಿಜ ತಿಳಿಯುವ/ ಸಂಶೋಧಿಸುವ ಹಂಬಲವೇ ಯಾರಿಗೂ ಇಲ್ಲವೇ?

ತಿರುಪತಿಗೆ ಸಂಬಂಧಿಸಿದ ಇನ್ನೊಂದು ವಿಷಯ.ಈಚೆಗೆ ಸುಧಾದಲ್ಲಿ ಬಂದ ಲೇಖನವೊಂದರಲ್ಲಿ ಓದಿದೆ - ಶ್ರೀಲಂಕಾದಲ್ಲಿ ಮುರುಗನ ಗುಡಿಗಳನ್ನು "ತಿರುಪತ್ಯಾ" ಎನ್ನುತ್ತಾರಂತೆ. ಇದರ ಶಿಷ್ಟ ಉಚ್ಚಾರಣೆಯೇ ತಿರುಪತಿ.ಇಂದಿನ ತಿರುಪತಿಯೇ ಪ್ರಾಚೀನ ಮುರುಗನ ಗುಡಿಯೇ ಆಗಿರಬಹುದೇ ಎಂದು ಲೇಖಕರ ಅನುಮಾನ.

ನಮ್ಮೂರು ಕಡೂರು - ಕಾಡೂರಿನಿಂದ ಬಂದಿದೆ ಅನ್ನುತ್ತಾರೆ. ಹಿಂದೇನಾದರೂ ಅಲ್ಲಿ ಕಾಡಿತ್ತೋ ಏನೋ, ಈಗಂತೂ ಏನೂ ಕಾಣೆ!

hamsanandi said...

ತಿರುಮಲೆಯ ಗುಡಿ ಬುದ್ಧನದ್ದೋ ಮುರುಗನದ್ದೋ ಆಗಿದ್ದಿರಬೇಕೆಂಬ ವಾದ ಹಿಂದಿನಿಂದಲೂ ಇದೆ.(ಮುರುಗನಿಗೂ ಬೆಟ್ಟಗಳಿಗೂ ನಂಟಿರುವುದರಿಂದ).

ಇನ್ನು ಬೆಂಗಳೂರು ಅನ್ನುವುದು ೯ನೇ ಶತಮಾನದಲ್ಲೇ ಇತ್ತೆಂಬುದನ್ನು ೫೦ ವರ್ಷಕ್ಕೂ ಹಿಂದೆಯೇ ಹೇಳಿರುವುದನ್ನು ಈ ಪುಸ್ತಕದಲ್ಲಿ ನೋಡಿ.

History of Karnataka: History, Administration & Culture
By I. M. Muthanna (೧೯೬೨)

ಗೂಗಲ್ ಬುಕ್ಸ್ ನಲ್ಲಿ "bEgur inscription Bangalore" ಎನ್ನುವುದಕ್ಕೆ ಹುಡುಕಿದರೆ ಈ ಪುಸ್ತಕ ನಿಮಗೆ ಸಿಗುತ್ತೆ.

ಶ್ಯಾಮಾ said...

ಒಳ್ಳೆಯ ಮಾಹಿತಿ ಒದಗಿಸಿದ್ದೀರ. ಊರಿನ ಹೆಸರುಗಳ ಸಾಲಿನಲ್ಲಿ ನನ್ನೂರನ್ನು ನೋಡಿ ಖುಷಿಯಾಯ್ತು. :)


ಧನ್ಯವಾದಗಳು.

ಶ್ಯಾಮಾ

sunaath said...

ತ್ರಿವೇಣಿಯವರೆ,
ತಿರುಪತಿ ಗುಡಿಯು ಬುದ್ಧನ ಅಥವಾ ಮುರುಗನದಷ್ಟೇ ಅಲ್ಲ, ಬಾಲಾದೇವಿಯ ಗುಡಿಯೂ ಆಗಿರಬಹುದೆನ್ನುವ ವಾದವಿದೆ. ತಿರುಪತಿ ತಿಮ್ಮಪ್ಪನ ಫೋಟೋದ ಮೇಲೆ ”ಶ್ರೀ ಬಾಲಾಜಿ" ಎಂದು ಬರೆದಿರುವದನ್ನು ನೀವು ನೋಡಿರಬಹುದು.
ಆದಿ ಶಂಕರಾಚಾರ್ಯರು ಇಲ್ಲಿಇದ್ದ ಬಾಲಾದೇವಿಯ ಮೂರ್ತಿಯ ಎದುರಿನಲ್ಲಿ ಶ್ರಿಚಕ್ರ ಸ್ಥಾಪಿಸಿದ್ದಾರೆ ಎನ್ನಲಾಗುತ್ತಿದೆ. ನಾನಂತೂ ನೋಡಿಲ್ಲ. ಅಲ್ಲದೆ, ತಿರುಪತಿ ತಿಮ್ಮಪ್ಪ ಅಥವಾ ಮುರುಗನ ಗುಡಿ ಸ್ಥಾಪಿತವಾದ ಕಾಲಕ್ಕೂ ಶಂಕರಾಚಾರ್ಯರ ಕಾಲಕ್ಕೂ ಇರುವ ವ್ಯತ್ಯಾಸವೂ ನನಗೆ ಗೊತ್ತಿಲ್ಲ.
ಇನ್ನು ನಿಮ್ಮ ಊರಾದ ಕಡೂರಿನ ಬಗೆಗೆ ಹೇಳುವದಾದರೆ:
ಕರ್ನಾಟಕದಲ್ಲಿ ‘ಕಡ’ ಶಬ್ದದಿಂದ ಪ್ರಾರಂಭವಾಗುವ ೧೨೧ ಸ್ಥಳಗಳಿವೆ.
ಕೆಲವು ಉದಾಹರಣೆಗಳು:
ಕಡಕೋಡ, ಕಡಕೋಳ, ಕಡಗ, ಕಡಗಂಜಿ, ಕಡಗಡಲು, ಕಡಗತೂರು, ಕಡಗಮದೊಡ್ಡಿ, ಕಡಗರವಳ್ಳಿ, ಕಡಗೋಡು, ಕಡಚರ್ಲಾ, ಕಡತನಮಲೆ, ಕಡತನಾಲು, ಕಡತಾಳ, ಕಡತಿ, ಕಡದನಕೆರೆ, ಕಡದರಗಡ್ಡಿ, ಕಡದರಹಾಳ, ಕಡದಿನ್ನಿ, ಕಡನಿ, ಕಡಪಟ್ಟಿ, ಕಡನೀರ, ಕಡಬ, ಕಡಬನಹಳ್ಳಿ, ಕಡಬಾಳ, ಕಡಬೂರು, ಕಡಲೂರು, ಕಡವಂತಿ, ಕಡವಾಡ, ಕಡಸೂರು, ಕಡಹಳ್ಳಿ, ಕಡೂರು ಇತ್ಯಾದಿ.

ಇದಲ್ಲದೆ, ‘ಕಟ’ ಪದದಿಂದ ಪ್ರಾರಂಭವಾಗುವ ೨೫ ಗ್ರಾಮಗಳಿವೆ. ಉದಾ: ಕಟಗೇರಿ, ಕಟಕೋಳ ಇತ್ಯಾದಿ.
So, ‘ಕಡ’(=ಕಟ) ಎನ್ನುವ ಸಮುದಾಯವೂ ಸಹ ಇದ್ದಿರಬಹುದು. ಇವರಿಂದಲೇ ‘ಕಡೂರು’ ಸ್ಥಳನಾಮ ಬಂದಿರಬಹುದು.

ಇದರ ವಿರುದ್ಧ ಕೂಡಬಹುದಾದ ವಾದವೆಂದರೆ ಕಡ ಎನ್ನುವದ ‘ಕಡೆ(=ಕಡೆಯ)’ ಎನ್ನುವದರ ಹೃಸ್ವ ರೂಪವಿರಬಹುದು ಎನ್ನುವದು. ಆದರೆ, ‘ಕಡೆ+ಊರು’ ಇದು ‘ಕಡೆಯೂರು’ ಆಗುವುದೇ ವಿನಃ ಕಡೂರು ಆಗಲಾರದು.
ಅಲ್ಲದೆ, ‘ಕಡೆ’ ಎನ್ನುವ ಪದದಿಂದ ಪ್ರಾರಂಭವಾಗುವ ೧೫ ಹಳ್ಳಿಗಳೂ ಸಹ ಕರ್ನಾಟಕದಲ್ಲಿವೆ.
ಉದಾಹರಣೆಗಳು:
ಕಡೆಕಲ್, ಕಡೆಕೊಪ್ಪ, ಕಡೆಕೊಳ್ಳ, ಕಡೆಕೋಡಿ, ಕಡೆಗದ್ದೆ, ಕಡೆಚೂರು, ಕಡೆಪುರ, ಕಡೆಸೂರು, ಕಡೆಹಳ್ಳಿ, ಕಡೆಕೋಡಿ ಇತ್ಯಾದಿ.

ಇನ್ನು ಮೇಲಿನ ಗುಂಪಿನಲ್ಲಿರುವ ‘ಕಡಲೂರು’ ಎನ್ನುವ ಸ್ಥಳನಾಮವನ್ನು ಗಮನಿಸಿರಿ. ತಮಿಳುನಾಡಿನಲ್ಲಿಯೂ ಸಹ ಒಂದು ಕಡಲೂರು ಇದೆ. ಕೆಲವು ವರ್ಷಗಳ ಹಿಂದೆ ಈ ಸ್ಥಳವು ಸುನಾಮಿಯಿಂದ ತ್ರಸ್ತವಾಗಿತ್ತು ಎಂದು ನನ್ನ ನೆನಪು. ಆದರೆ, ಕರ್ನಾಟಕದಲ್ಲಿ ಇರುವ ಯಾವ ‘ಕಡಲೂರೂ’ ಕಡಲ ದಂಡೆಯ ಮೇಲಿರುವ ಊರಲ್ಲ.
ವಿವರಣೆಗಳು ಇಂತಿವೆ:
ಕಡಲು (ಆಲೂರು ತಾಲುಕಾ / ಹಾಸನ ಜಿಲ್ಲೆ)
ಕಡಲೂರು (ಆಲೂರು ತಾಲುಕಾ / ಹಾಸನ ಜಿಲ್ಲೆ)
ಕಡಲೂರು (ಮದ್ದೂರು ತಾಲುಕಾ / ಮಂಡ್ಯ ಜಿಲ್ಲೆ)
ಕಡಲೂರು (ರಾಯಚೂರು ತಾಲೂಕಾ / ರಾಯಚೂರು ಜಿಲ್ಲೆ)
ಕಡಲೂರು (ಸಕಲೇಶಪುರ ತಾಲೂಕಾ / ಹಾಸನ ಜಿಲ್ಲೆ)
(ಚಿಕ್ಕ)ಕಡಲೂರು (ಹಾಸನ ತಾಲೂಕಾ / ಹಾಸನ ಜಿಲ್ಲೆ )
(ಹಿರಿ)ಕಡಲೂರು (ಹಾಸನ ತಾಲೂಕಾ / ಹಾಸನ ಜಿಲ್ಲೆ )

ಅಂದ ಮೇಲೆ, ಕಡಲೂರಿಗೂ ಕಡಲಿಗೂ ಸಂಬಂಧವಿಲ್ಲ. ಕಡ ಪದದ ಮುಂದಿರುವ ‘ಲ’ ಪ್ರತ್ಯಯವು ಬಹುಶ: ಸಂಬಂಧವಾಚಕ ಪ್ರತ್ಯಯವಿರಬೇಕು. ಹೀಗಾಗಿ ತಮಿಳುನಾಡಿನಲ್ಲಿರುವ ಕಡಲೂರೂ ಸಹ ಈ ‘ಕಡ’ ಎನ್ನುವ ಸಮುದಾಯದವರ ಊರೇ ಆಗಿರಬೇಕು. ಇನ್ನು ಇವರಾಡುತ್ತಿದ್ದ ಭಾಷೆ? ಪೂರ್ವದ್ರಾವಿಡ ಭಾಷೆಯೇ, ಆ ಬಳಿಕ ಪಂಚ ದ್ರಾವಿಡ ಭಾಷೆಗಳಾಗಿ ಟಿಸಿಲೊಡೆದುದರಿಂದ, ಈ ‘ಕಡ’ರ ಭಾಷೆಯೂ ಸಹ ಪೂರ್ವದ್ರಾವಿಡ ಅಥವಾ ಪಂಚದ್ರಾವಿಡಭಾಷೆಗಳಲ್ಲಿ ಒಂದಾಗಿರಬಹುದು.

ಆಂಧ್ರಪ್ರದೇಶದಲ್ಲಿ ನೆಲ್ಲೂರು ಜಿಲ್ಲೆಯಲ್ಲಿಯೂ ಸಹ ಒಂದು ಕಡಲೂರು ಇದೆ. ಅಲ್ಲಿ ಕಂದೂರು ಹಾಗು ಕರೂರು ಎನ್ನುವ ಗ್ರಾಮಗಳೂ ಇವೆ. ಆದರೆ ಅಲ್ಲಿ ಕಡೂರು ಎನ್ನುವ ಊರು ಇದ್ದಂತಿಲ್ಲ. ಭಾರತದ ಇತರ ರಾಜ್ಯಗಳಲ್ಲಿರುವ ‘ಕಡ’ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳ ಮಾಹಿತಿ ನನಗೆ ಇಲ್ಲ.

sunaath said...

ಹಂಸಾನಂದಿಯವರೆ,
ಗೂಗಲ್‌ನಲ್ಲಿ Begur inscriptions ನೋಡಿದೆ. ಸ್ವಾರಸ್ಯಕರವಾಗಿದೆ.
ವೇಲಾಯುಧ ಹಾಗೂ ಬಲರಾಮರು ಬೇರೆ ಎನ್ನುವ ನಿಮ್ಮ ಹೇಳಿಕೆಯನ್ನು ಈಗ ನಾನು ಒಪ್ಪುತ್ತೇನೆ. ಮಾಹಿತಿಗಾಗಿ ಧನ್ಯವಾದಗಳು.
ಟಿಪ್ಪಣಿ ದೊಡ್ಡದಾದಷ್ಟೂ ಸಂತೋಷ.ಒಬ್ಬರು ತಪ್ಪಿನಿಂದಾಗಿ ಕೊಟ್ಟ ಮಾಹಿತಿಯನ್ನು ಮತ್ತೊಬ್ಬರು ಸರಿಪಡಿಸುವದು ಅತ್ಯಂತ ಅವಶ್ಯವಾಗಿದೆ.
ಮತ್ತೊಮ್ಮೆ ಧನ್ಯವಾದಗಳು.

sunaath said...

ಶ್ಯಾಮಾ,
ನಿಮ್ಮೂರು ಯಾವುದೆಂದು ನೀವು ಹೇಳಿಯೇ ಇಲ್ಲ. ನಿಮ್ಮ blogದಲ್ಲಿಯೂ ಸಹ ಯಾವ ಸುಳಿವನ್ನೂ ಕೊಟ್ಟಿಲ್ಲ.
ಇದು ನ್ಯಾಯವೆ?

ಸುಪ್ತದೀಪ್ತಿ suptadeepti said...

ಸುನಾಥ ಕಾಕಾ, ಇಲ್ಲಿ ಇಷ್ಟೊಂದು ಮಾಹಿತಿಯನ್ನು ನೋಡಿ, ಓದಿ ಒಮ್ಮೆ ತಲೆ ತಿರುಗಿತು- ಖುಷಿಯಿಂದ, ಉತ್ಸಾಹದಿಂದ.

ಹೀಗೇ ಬರೆಯುತ್ತಿರಿ, ಚರ್ಚೆ ನಡೆಯಲಿ. ಓದಿ ಸತೋಷಪಡಲು ನಾನಿದ್ದೇನೆ.

Anonymous said...

ಸುನಾಥ ಅವರ: ಬೆಂಗಾವಲೂರಿನಿಂದ ಬೆಂಗಳೂರು ಬಂತು ಅನ್ನುವ ಥಿಯರಿ ಸಮಂಜಸ ಅಲ್ಲ ಏನು?

sunaath said...

ಜ್ಯೋತಿ,
ಸುಸ್ವಾಗತ.
-ಕಾಕಾ

sunaath said...

ಚಕೋರ,
Most exciting theory!

ತಿಳಿಗಣ್ಣ said...

ಹಂಸಾನಂದಿಯವರ ಮಾತು ಸರಿ.

ಬೇಗೂರು ಶಾಸನದಲ್ಲಿ ಬೆಂಗುಳೂರು ಎಂದಿದೆ.

ಅಲ್ಲಿ ಬೆಂಗ/ಗು = ಕಲ್ಲು, ಮರ ಹೀಗೆ ಹಲವು ಅರ್‍ತಕೊಟ್ಟಿದ್ದಾರೆ.

Mahesh k said...

ಸೂಫರ್ ಸರ್.

sunaath said...

ಧನ್ಯವಾದಗಳು, Unknown ಅವರೆ!