Wednesday, June 25, 2008

ಶಂಕರ ಭಟ್ಟರ ಪದಕ್ರಾಂತಿ

ಶಂಕರ ಭಟ್ಟರು ಕನ್ನಡ ನುಡಿಯಲ್ಲಿ ಸಾಧ್ಯವಾದಷ್ಟು ಕನ್ನಡ ಪದಗಳೇ ಬಳಕೆಯಲ್ಲಿ ಬರಬೇಕೆಂದು ಹೇಳುತ್ತಾರೆ. ಈ ಹೇಳಿಕೆಗೆ ಸ್ವಾಗತವಿದೆ. ಕನ್ನಡದಲ್ಲಿ ಇಲ್ಲದ ಹೊಸ ಪದಗಳನ್ನು ರೂಪಿಸುವಾಗ ಕ್ಲಿಷ್ಟ ಸಂಸ್ಕೃತ ಪದಗಳಿಗೆ ಜೋತು ಬೀಳದೆ, ಇಂಗ್ಲಿಶ್ ಪದಗಳನ್ನು ಉಳಿಸಿಕೊಳ್ಳಲು ಸೂಚಿಸುತ್ತಾರೆ:
ಉದಾಹರಣೆ:
ಪೋಲೀಸ.……ಆರಕ್ಷಕ
ಇಂಜನಿಯರ…..ಅಭಿಯಂತ

ಇದರಂತೆ, ವೈಜ್ಞಾನಿಕ ಬರಹಗಳಲ್ಲಿ ಸಹ ಹೆಚ್ಚೆಚ್ಚು ಕನ್ನಡ ಪದಗಳನ್ನು ಬಳಸಲು ಅವರು ಕರೆ ಕೊಡುತ್ತಿದ್ದಾರೆ. ಇವೆಲ್ಲ ಸ್ವಾಗತಾರ್ಹ ಸಲಹೆಗಳು. ಈಗಾಗಲೇ ನಮ್ಮ ಅನೇಕ ಸತ್ವಶಾಲಿ ವಿಜ್ಞಾನ-ಬರಹಗಾರರು ಇಂತಹ ಪದಗಳನ್ನು ಬಳಕೆಯಲ್ಲಿ ತಂದಿದ್ದಾರೆ. ಉದಾ: ಅರಿವಳಿಕೆ, ಕೀಳರಿಮೆ, ಕುಲಾಂತರಿ ಇತ್ಯಾದಿ.

ಶಂಕರ ಭಟ್ಟರು ದಿನಪತ್ರಿಕೆಗಳಲ್ಲಿ ಅನೇಕ ಸಂಸ್ಕೃತ ಪದಗಳನ್ನು ಕೇವಲ ಘನತೆಗಾಗಿ ಉಪಯೋಗಿಸುತ್ತಾರೆ ಎನ್ನುವ ಆರೋಪ ಮಾಡುತ್ತಾರೆ. ಸಂಸ್ಕೃತ ಪದಗಳನ್ನು ಘನತೆಗಾಗಿ ಉಪಯೋಗಿಸುವದು ನಿಜವೇ ಆದರೂ, ಇದು ಅನಿವಾರ್ಯವಾಗಿದೆ.
ಉದಾಹರಣೆಗೆ: ‘ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು’ ಎನ್ನುವ head line ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ head line ಕೊಡುವದು ಚಂದ ಕಂಡೀತೆ?

ಭಾರತೀಯ ಭಾಷೆಗಳಿಗೆ ಒಂದು advantage ಇದೆ. ‘ಘನತೆ’ ಬೇಕಾದಾಗ ಅಥವಾ ಮುಜುಗರ ತಪ್ಪಿಸುವಂತಹ ಪದಗಳನ್ನು ಬಳಸಬೇಕಾದಾಗ ಸಂಸ್ಕೃತ ಭಾಷೆಯನ್ನು ನಾವು ಅವಲಂಬಿಸಬಹುದು. ಈ advantage ಇಂಗ್ಲಿಶ ಭಾಷೆಗಿಲ್ಲ. ವೈಜ್ಞಾನಿಕ ಪುಸ್ತಕಗಳಲ್ಲಿ ಲೈಂಗಿಕ ಪದಗಳನ್ನು ಬಳಸುವಾಗ, ನಾವು ಸರಳವಾಗಿ ಸಂಸ್ಕೃತ ಪದಗಳನ್ನು ಬಳಸಬಹುದು. ಇಂಗ್ಲಿಶ್ ಭಾಷೆಯಲ್ಲಿ ಇದು ಸಾಧ್ಯವಿಲ್ಲ. ಅಷ್ಟೇ ಏಕೆ, ಹೊಲಸು ಬೈಗಳನ್ನು ಹೇಳಬೇಕಾದಾಗ ಸಹ, ನಾವು ಇಂಗ್ಲಿಶ್ ಭಾಷೆಯ ಪದವನ್ನೇ ಬಳಸಿ ಮುಜುಗರ ತಪ್ಪಿಸಿಕೊಳ್ಳುತ್ತೇವೆ. ಉದಾಹರಣೆ: shit. ಈ ಸೌಲಭ್ಯ ಇಂಗ್ಲಿಶ್ ಅಥವಾ ಅಮೆರಿಕನ್ನರಿಗೆ ಇಲ್ಲವಲ್ಲ!

ವೀರಶೈವ ಚಳುವಳಿಯು ಕರ್ನಾಟಕದಲ್ಲಿ ಕೇವಲ ಸಾಮಾಜಿಕ ಕ್ರಾಂತಿಯನ್ನಷ್ಟೇ ಮಾಡಲಿಲ್ಲ. ವಚನಸಾಹಿತ್ಯವೆನ್ನುವ ಸೊಬಗಿನ ಸೃಷ್ಟಿಯನ್ನೇ ಮಾಡಿತು. ಈ ವಚನ ಸಾಹಿತ್ಯವನ್ನು ರಚಿಸಿದವರಲ್ಲಿ ಹೆಚ್ಚಿನವರು the so called ‘ಕೆಳವರ್ಗದವರು’. ಆದರೆ ಇವರ ವಚನಗಳಲ್ಲಿ ಸಂಸ್ಕೃತ ಪದಗಳಿಲ್ಲವೆ?

ಸಂಸ್ಕೃತ ಪದಗಳ ಅವಶ್ಯಕತೆಯನ್ನು ಅರಿತುಕೊಳ್ಳಲು ಬಸವಣ್ಣನವರ ಈ ವಚನವನ್ನು ನೋಡಿರಿ:

‘ಕರಿ ಘನ ಅಂಕುಶ ಕಿರಿದೆನ್ನ ಬಹುದೆ?
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

ಶಂಕರ ಭಟ್ಟರು ಈ ವಚನವನ್ನು ಹೀಗೆ ಬರೆಯುತ್ತಿದ್ದರೇನೊ?

‘ಆನೆ ದೊಡ್ಡದು, ಆದರೆ ಚುಚ್ಚುಗ ಸಣ್ಣದೆ?
ಕತ್ತಲೆ ದಟ್ಟವಾಗಿದೆ, ಆದರೆ ಸೊಡರು ಸಣ್ಣದೆ?’

ಆದುದರಿಂದ ಸಂಸ್ಕೃತ ಹಾಗೂ ಇಂಗ್ಲಿಶ್ ಅಥವಾ ಮತ್ತಾವದೇ ಭಾಷೆಯ ಪದಗಳನ್ನು ಕನ್ನಡದಲ್ಲಿ ಸಂಕೋಚವಿಲ್ಲದೇ ಬಳಸೋಣ.ಬಳಸಲು ನಮ್ಮ ಸಂಕೋಚವನ್ನು ತೊರೆಯೋಣ.

ಇಷ್ಟು ದಿನ ಶಂಕರ ಭಟ್ಟರ ಜೊತೆಗೆ ಮಲ್ಲಯುದ್ಧಕ್ಕಿಳಿದು ಸಾಕಾಗಿದೆ. ಇದೀಗ ಸಾಕು ಮಾಡುತ್ತಿದ್ದೇನೆ.
ಕನ್ನಡದ ಖ್ಯಾತ ಹಾಸ್ಯ ಲೇಖಕ ಶ್ರೀ ಅನಂತ ಕಲ್ಲೋಳ ಅವರು ಕನ್ನಡ ಬರಹದ ಬಗೆಗೆ ಬರೆದ ಲೇಖನವೊಂದನ್ನು ಮಂಗಳಶ್ಲೋಕದ ರೂಪದಲ್ಲಿ ಮುಂದಿನ postನಲ್ಲಿ ಕೊಟ್ಟು ಮಂಗಳ ಹಾಡುತ್ತೇನೆ. ತಾಳ್ಮೆಯಿಂದ ಸಹಭಾಗಿಗಳಾದ ತಮಗೆಲ್ಲರಿಗೂ ನನ್ನ ವಂದನೆಗಳು.

30 comments:

ತೇಜಸ್ವಿನಿ ಹೆಗಡೆ said...

ಸುನಾಥರೆ,

ಮತ್ತೊಂದು ಅರ್ಥವತ್ತಾದ ಲೇಖನ. ಸಂಸ್ಕೃತದಲ್ಲೊಂದು ಸುಭಾಷಿತವಿದೆ. "ಆನೋ ಭದ್ರಾಃ ಕೃತವೋ ಯಂತು ವಿಶ್ವತಃ" ಎಂದು. ಅದರ ಕನ್ನಡಾನುವಾದ ಹೀಗಿದೆ "ವಿಶ್ವದೆಲ್ಲೆಡೆಯಿಂದ ಒಳ್ಳೆಯ ವಿಚಾರಗಳು ನಮ್ಮೆಡೆಗೆ ಬರಲಿ" ಎಂದು. ಅದೇ ರೀತಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಉಳಿದ ಭಾಷೆಗಳಲ್ಲಿರುವ ಎಲ್ಲಾ ಒಳಿತುಗಳು ಕನ್ನಡದ ಕಡೆ ಹರಿದು ಬರಲಿ. ಹೀಗೆ ಸ್ವೀಕೃತಿಸುವಾಗ ಯಾವುದೇ ಸಂಕೋಚ ಅಥವಾ ಸಂಕುಚಿತ ಮನೋಭಾವ ಇರಬಾರದು. ಹಾಗಾದಾಗ ಮಾತ್ರ ಯಾವುದೇ ಭಾಷೆ ಬೆಳೆಯುವುದು, ಉಳಿಯುವುದು. ಪ್ರತಿಯೊಂದು ಭಾಷೆಯೂ ಒಂದು ಸಾಗರದಂತೆ. ಹಲವು ನದಿ, ತೊರೆಗಳು ಕಡಲ ಸೇರಿದರೆ, ಕಡಲು ನದಿಯಾಗದು.. ಅಲ್ಲವೆ? ಕನ್ನಡ ಭಾಷೆಗೆ "ಶುಭಂ ಭೂಯಾತ್" (ಕನ್ನಡಾನುವಾದ : "ಒಳಿತಾಗಲಿ")

sunaath said...

ತೇಜಸ್ವಿನಿ,
ಇದೀಗ ಕನ್ನಡ ಬೆಳೆಸುವ ನಿಜವಾದ ಮಾರ್ಗ!

Keshav.Kulkarni said...

ಇಂಗ್ಲಿಶ್ ಭಾಷೆಯೂ ಸಹ ನಮ್ಮ ಕನ್ನಡದಂತೆಯೇ. ಅಶ್ಲೀಲ ಎನಿಸುವಾಗಲೆಲ್ಲ ನಾವು ಸಂಸ್ಕೃತದ ಮೊರೆ ಹೋದಂತೆ, ಇಂಗ್ಲಿಶ್ ಭಾಷೆ ಸಹ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಯ ಮೊರೆ ಹೋಗುತ್ತದೆ. ಹಾಗೆ ನೋಡಿದರೆ ಇಂಗ್ಲಿಶ್ ಭಾಷೆಯ ಮುಕ್ಕಾಲು ಪದಗಳ ಮೂಲ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗೆ ಸೇರುತ್ತೆ ಎಂದು ಓದಿದ ನೆನಪು.

ಕನ್ನಡದಲ್ಲಿ ಹೊಸ ಪದಗಳನ್ನು ಹುಟ್ಟು ಹಾಕುವಾಗ ಎರಡು ಕೆಲಸಗಳು ನಡೆಯುತ್ತವೆ.
೧. ಹಳೆ ಕನ್ನಡ ಶಬ್ದಕ್ಕೆ ಇನ್ನೊಂದು ಅರ್ಥ: ಉದಾ: ಹಚ್ಚು. ಕುಂಕುಮ ಹಚ್ಚಿಕೊಳ್ಳುವುದು - ಹಳೆಯ ಪ್ರಯೋಗ. ವಿದ್ಯುತ್ ಬಂದು ಮನೆಯಲ್ಲಿ ಲೈಟ್ ಬರಲಾರಂಭಿಸಿದಾಗ "ದೀಪ ಹಚ್ಚು" ಎಂದು ನನ್ನಜ್ಜಿ ಹೇಳುತ್ತಿದ್ದಳು. ಅಂದರೆ ಹಚ್ಚು ಎಂಬ ಹಳೆಯ ಶಬ್ದಕ್ಕೆ ಇನ್ನೊಂದು ಅರ್ಥ ಸೇರಿಕೊಂಡಿತು - switch on
೨. ತದ್ಭವಗಳು: ಸಂಸ್ಕ್ರ್ತುತದಿಂದ ತದ್ಭವಗಳು ನಮಗೆ ಗೊತ್ತೇ ಇವೆ. ಹಾಗೆಯೇ ಕೈಗಾರಿಕಾ ಕ್ರಾಂತಿಯಾಗುತ್ತಿದ್ದಂತೆ ಇಂಗ್ಲಿಷಿನಿಂದ ತದ್ಭವಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಉದಾ: rail ಕನ್ನಡದಲ್ಲಿ ರೈಲು ಆಯಿತು. sir ಸಾರ್ ಆಯಿತು.
೩. ಸಂಸ್ಕೃತದಿಂದ ಹೊಸ ಪದಗಳ ಹುಟ್ಟು: ಅಭಿಯಂತರ, ಆರಕ್ಷಕ, ಲೋಕೋಪಯೋಗಿ ಇತ್ಯಾದಿ. ಆದರೆ ಇಂಥ ಶಬ್ದಗಳು ಯಾವತ್ತು ಜನರ ಆಡುಮಾತಿನಲ್ಲಿ ಒಮ್ದಾಗಲೇ ಇಲ್ಲ. ಇಂಗ್ಲಿಷಿನಿಂದ ತದ್ಭವಗಳು ಜನರ ಆಡುಮಾತಿನಲ್ಲಿ ಉಳಿದು ಬಿಟ್ಟಿವೆ.

ದಿನದಿಂದ ದಿನಕ್ಕೆ ಇಂಗ್ಲಿಶ್ ಪದಗಳ ಬಳಕೆ ಎಷ್ಟು ಜಸ್ತಿಯಗಿದೆಯೆಂದರೆ ಕ್ರಿಯಾಪದಗಳನ್ನು ಬಿಟ್ಟರೆ ಎಲ್ಲ ಇಂಗ್ಲಿಷಿನಲ್ಲೇ ಮಾತಾಡುವ ಸ್ಥಿತಿಗೆ ಬಂದಿದ್ದೇವೆ. ಅದಕ್ಕೆ ಪರ್ಯಾಯವಾಗಿ ಕನ್ನಡದ ದಿನ ಬಳಕೆಯ ಪದಗಳಿಗೆ ಹೊಸ (೧ ನೋಡಿ) ಅರ್ಥ ಕೊಡುವ ಕೆಲಸ ಹೆಚ್ಚು ಹೆಚ್ಚು ಆಗಬೇಕಿದೆ. ಉದಾ: ಜಂಗಮ = mobile.

ಇನ್ನೊಂದು ಕನ್ನಡದ ಪದಗಳನ್ನು ಸೇರಿಸಿ ಹೊಸ ಪದಗಳ ಹುಟ್ಟು: radio ಗೆ ಬಾನುಲಿ. computer ಗೆ ಗಣಕಯಂತ್ರ ಎಂಬುದರ ಬದಲು ಎಣಿ ಅಂತ ಹೇಳಬಹುದಲ್ವೆ? ಆಗ laptop ಪುಟ್ಟೆಣಿ ಆಗುತ್ತದೆ, palmtop ಕೈಣಿ ಆಗುತ್ತದೆ.

ಕೇಶವ

ಸುಪ್ತದೀಪ್ತಿ suptadeepti said...

ಕೇಶವ ಕುಲಕರ್ಣಿಯವರ "ದೀಪ ಹಚ್ಚು"ವುದಕ್ಕೆ ಪ್ರತಿಕ್ರಿಯೆ: ದೀಪ ಹಚ್ಚು ಅನ್ನುವುದು ವಿದ್ಯುದ್ದೀಪಗಳಿಗೂ ಮೊದಲೇ ಇದ್ದ ಬಳಕೆ (ಹೊಸ ಅರ್ಥವೇನಲ್ಲ). ಆಗ, ಸಂಜೆಯಾಗುತ್ತಿದ್ದಂತೆ ಮನೆಯೊಳಗೆ ದೀಪ/ ಲಾಟೀನು/ ಕಂದೀಲು "ಹಚ್ಚಿದರೆ" ಮಾತ್ರ ಬೆಳಕಾಗುತ್ತಿತ್ತು. ವಿದ್ಯುದ್ದೀಪ ಬಂದಾಗ ಪದಪ್ರಯೋಗ ಹಾಗೇ ಉಳಿದು, ಕ್ರಿಯೆ ಮಾತ್ರ ಬದಲಾಗಿದೆ. ಬದಲಾದ ಕ್ರಿಯೆಯಿಂದಾಗಿ ಹೊಸ ಅರ್ಥದಂತೆ ಕಾಣುತ್ತದೆಯೇ ಹೊರತು "ಹಚ್ಚು" ಪದಕ್ಕೆ ಹೊಸ ಅರ್ಥ ಹುಟ್ಟಿಲ್ಲ.

ಇಂಗ್ಲಿಷ್ ಭಾಷೆ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಿಂದಲೇ ಎರವಲು ಪಡೆದು ಬೆಳೆದು ಬಂದ ಭಾಷೆ. ಅದರ ಮೂಲವೇ ಲ್ಯಾಟಿನ್. ಕನ್ನಡ-ಸಂಸ್ಕೃತದ ನಂಟು ಹಾಗಲ್ಲ. ಕನ್ನಡ ದ್ರಾವಿಡ ಮೂಲದ್ದು. ಸಂಸ್ಕೃತದಿಂದ ಪೋಷಕಾಂಶಗಳನ್ನು ಪಡೆದು ಪುಷ್ಟವಾದದ್ದು.

ಹಳೆ ಪದಗಳಿಗೆ ಹೊಸ ಅರ್ಥ ಕೊಡುವ ಬಗ್ಗೆ ನನ್ನ ಅಭ್ಯಂತರವಿಲ್ಲ. ಎಲ್ಲಿ, ಯಾವಾಗ, ಎಷ್ಟು ಅನ್ನುವ ವಿವೇಚನೆ ಬೇಕು, ಅಷ್ಟೇ.

"ಜಂಗಮ" "ದೂರವಾಣಿ" ಅನ್ನುವುದಕ್ಕಿಂತ ಎಲ್ಲರಿಗೂ ಪರಿಚಿತ "ಮೊಬೈಲ್ ಫೋನ್" ನಮ್ಮ ಕೈಯಲ್ಲಿರಲಿ, ಭಾಷೆಯೊಳಗೆ ಬರಲಿ. ತಪ್ಪೇನಂತೆ?

ಗಣಕಯಂತ್ರ ಈಗೀಗ ಬಳಕೆಯಲ್ಲಿ ಬರುತ್ತಿದೆ. ಆದರೆ, ನಿರಕ್ಷರಕುಕ್ಷಿಗಳಿಗೂ "ಕಂಪ್ಯೂಟರ್" ಪದದ ಪರಿಚಯವಿದೆ. ಆದ್ದರಿಂದ ಅದನ್ನು ಹಾಗೇ ಕನ್ನಡಕ್ಕೆ ತೆಗೆದುಕೊಳ್ಳುವುದೆ ಒಳಿತು. ನಮ್ಮೂರಲ್ಲಿ ತುಳು ಮನೆಮಾತಿನ ಹಳ್ಳಿ ಜನರೂ ಕಂಪ್ಯೂಟರ್ ಪದ ಸಲೀಸಾಗಿ ಬಳಸುತ್ತಾರೆ. ಅದೇ ಸುಲಭ. ಅವರ ಬಾಯಿಗೆ ಗಣಕಯಂತ್ರವನ್ನು ಯಾಕೆ ತುರುಕಬೇಕು?ರೂಢಿಯಲ್ಲಿ ಬಂದಾಗಿರುವ ಶಬ್ದಗಳನ್ನು ಬದಲಾಯಿಸಬೇಕೆ?

ಹಾಗೆಯೇ- ಟೀವಿ, ರೇಡಿಯೋ, ಫೋನ್, ಕಾರು, ಬಸ್ಸು, ಲಾರಿ, ರಿಕ್ಷಾ, ಸೈಕಲ್, ಟೇಬಲ್, ಹಾಲ್ (Hall), ಕಾಲೇಜು, ರೋಡು, ಸ್ಪೂನ್, ಪ್ಲೇಟ್... ಇನ್ನೂ ಎಷ್ಟೆಷ್ಟೋ ಇವೆ. ಸಾಮಾನ್ಯ ಹಳ್ಳಿಗರ ಮಾತಿನಲ್ಲೂ ಸೇರಿಹೋಗಿರುವ ಇಂಥ ಹಲವಾರು ಪದಗಳನ್ನು "ಕನ್ನಡೀಕರಿಸು"ವುದೋ, ಬದಲಾಯಿಸುವುದೋ? ಯೋಚಿಸಬೇಕಾದ ವಿಚಾರ.

ಭಾಷೆ ಕಡಲಿನಂತೆ... ತೇಜು ಮಾತನ್ನು ನಾನು ಸಮರ್ಥಿಸುತ್ತೇನೆ.

Sree said...

ಸುನಾಥ ಕಾಕಾ,
ಈ ವಿಷ್ಯದ ಬಗ್ಗೆ ವಿವರವಾಗಿ ಬರೆದಿದ್ದಕ್ಕೆ ನಿಮಗೆ ಮೊದ್ಲು ಥ್ಯಾಂಕ್ಸ್! ಈ ಕನ್ನಡದ ಹೊಸ ಅವತಾರದ ವಾದಗಳನ್ನ ನೋಡ್ತಾ ತುಂಬಾ ಗಲಿಬಿಲಿ ಆಗಿಬಿಟ್ಟಿದ್ದೆ. ನಿಮ್ಮ ಬರಹಗಳು ಸ್ವಲ್ಪ ಸಮಾಧಾನ ಕೊಟ್ವು!:)
ಮತ್ತೆ ಸುಪ್ತದೀಪ್ತಿಯವರ ಮಾತುಗಳಿಗೆ ನನ್ನದೊಂದು ವೋಟ್ ಸೇರಿಸ್ಕೊಳ್ಳಿ

Keshav.Kulkarni said...

ಸುಪದೀಪ್ತಿ,
ನಿಮ್ಮ ಮಾತನ್ನು ನೂರಕ್ಕೆ ನೂರು ಒಪ್ಪುತ್ತೇನೆ. "ಹಚ್ಚು", "ಜಂಗಮ"ಗಳ ಉದಾಹರಣೆ ಕೊಟ್ಟೆ ಅಷ್ಟೆ.

ಕನ್ನಡ ಸಂಸ್ಕೃತದಿಂದ ಹುಟ್ಟಿದ ಭಾಷೆ ಅಲ್ಲ, ಸಂಸ್ಕೃತದ ಸಹಾಯದಿಂದ ಬೆಳೆದ ಭಾಷೆ. ಪಾರ್ಸಿ, ಉರ್ದು ಪದಗಳನ್ನು ತನ್ನದಾಗಿಸಿಕೊಂಡು ಮುಂದೆ ಸಾಗುತ್ತಿದೆ.

ಈಗ ಇಂಗ್ಲೀಶಿನ ಬಾಲ ಹಿಡಿದು ಬಸ್ಸು, ಕಾರು, ಲಾರಿ ಇತ್ಯಾದಿ ಯುರೋಪಿಯನ್ ಪದಗಳನ್ನು ತನ್ನೊಳಕ್ಕೆ ಹಾಕಿಕೊಂಡು ಬೆಳೆಯುತ್ತಿದೆ.

ನಾನು ನನ್ನ ಪ್ರತಿಕ್ರಿಯೆಯಲ್ಲಿ ಸೂಚಿಸಿದ್ದು ಏನೆಂದೆರೆ, ಆಡುಮಾತಿನಲ್ಲಿ ಇಂಗ್ಲೀಷಿನಿಂದ ತದ್ಭವಗೊಂಡ ಪದಗಳು ಸರಳವಾಗಿ ಉಳಿಯುತ್ತವೆ, ಸಂಸ್ಕೃತದಿಂದ ತಯಾರಿಸಿದ ಪದಗಳು ಉಳಿಯುವುದಿಲ್ಲ ಎಂದು. ಉದಾ: ಫೋನು, ಟೆಲಿಫೋನು ಎನ್ನುತ್ತೇವೆಯೇ ಹೊರತು ದೂರವಾಣಿ ಎಂದು ಮಾತಾಡುವಾಗ ಉಪಯೋಗಿಸುವುದಿಲ್ಲ. ಆದ್ದರಿಂದ ನಮ್ಮ ಕನ್ನಡದ ಪಂಡಿತರು ತಾಂತ್ರಿಕ ಪದಗಳನ್ನು ಕನ್ನಡೀಕರಿಸುವಾಗ ಸಂಸ್ಕೃತದ ಮೊರೆ ಹೋಗದೇ ಕನ್ನಡದ ಮೊರೆ ಹೋದರೆ (ಹೊಸ ನುಡಿಗಳು ಅಥವಾ ಹಳೆ ಪದಗಳಿಗೆ ಹೊಸ ಅರ್ಥ)ಚೆನ್ನ ಎಂದು ನಾನು ಹೇಳಹೊರಟಿರುವುದು.

ಮುಗಿಸುವ ಮುನ್ನ ಇನ್ನೊಂದು ವಿಚಾರ: ಇಂಗ್ಲೀಷ್ ಭಾಷೆಯಿಂದಾಗಿ ಕನ್ನಡದ ಸಹಜ ಪದಗಳು ಸಾಯುತ್ತಿವೆಯಲ್ಲಾ, ಅವನ್ನು ಹೇಗೆ ಉಳಿಸಿಕೊಳ್ಳುವುದು?

ಉದಾ: ಬಚ್ಚಲುಮನೆ, ಈಗ ಎಲ್ಲರೂ ಬಾತ್-ರೂಮ್ ಎನ್ನಲು ಶುರುಮಾಡಿದ್ದಾರೆ. ಪಡಸಾಲೆ, ಈಗ ಎಲ್ಲರೂ ಡ್ರ್ವಾಯಿಂಗ್-ರೂಮ್ ಎನ್ನುತ್ತಾರೆ. ಇವಕ್ಕೇನು ಮಾಡುವುದು? ಅಥವಾ ಇದೂ ಕೂಡ ಭಾಷೆ ಬೆಳೆಯುವ ಪರಿ ಎನ್ನುತ್ತೀರೋ ಹೇಗೆ?

-ಕೇಶವ

sunaath said...

ಕೇಶವ, ಜ್ಯೋತಿ, sree,
ಬಳಕೆಯಲ್ಲಿರುವ ಪದಗಳನ್ನು ಬಿಟ್ಟು,ಕನ್ನಡದವೇ ಆದ ಪದಗಳನ್ನು ಬಳಸುವದು ಕಷ್ಟ. ತಿಂಡಿ ತಿನ್ನಲು ನೀವು ಹೋಟಲಿಗೆ ಹೋದಾಗ, ಮಾಣಿಗೆ "fork ಕೊಡಪ್ಪಾ" ಎನ್ನುವ ಬದಲು, "ಮುಳ್ಳುಚಮಚೆ ಕೊಡಪ್ಪಾ" ಎಂದರೆ, ಮುಳ್ಳಿನಿಂದ ಇರಿಯುವಂತೆ ನಿಮ್ಮನ್ನು ನೋಡಿಯಾನು.

ಇವು ಹೊಸ ಪದಗಳ ರಚನೆಯ ಕಷ್ಟ. ಆದರೆ,ಹಳೆಯ ಪದಗಳು ಈಗ ನಾಶವಾಗುತ್ತಿರುವದು ದುಃಖದ ಸಂಗತಿ. ಉದಾ: ಬಚ್ಚಲು ಮನೆ, ಪಡಸಾಲೆ, ಮದ್ದು , ಔಷಧಿ ಇತ್ಯಾದಿ.

S0, ದಾರಿ ಯಾವುದಯ್ಯಾ ಕನ್ನಡಕ್ಕೆ?

Anonymous said...

ತಾವೇನು ಭಾಷಾವಿಜ್ನಾನಿಯೇ?

ತಮ್ಮ ಕೆಲಸ ಏನು?

ಶಂಕರಬಟ್ಟರ ಎದುರು ಮಲ್ಲಯುದ್ದಕ್ಕೆ ಇಳಿಯಲು ನಿಮಗೆ ಬೇರೆ ಕೆಲಸ ಇಲ್ಲವೇ?

ನೀವು ನಿಮ್ಮ ಬಂಟರು ಬಾವಿಗಪ್ಪೆಗಳು.. ಎಂಬುದು ಇಲ್ಲ ಚನ್ನಾಗೇ ತೋರಿದೆ...

ಯಾಕೆಂದರೆ ನಿಮ್ಮ ವಾದಕ್ಕೆ ಎದುರುವಾದ ಮಂಡಿಸ ತಕ್ಕ ಎದುರಾಳಿಯೇ ಇಲ್ಲದೇ ನೀವೇ ಎಲ್ಲ ಹೇಳಿ ಬೀಗಿಕೊಂಡಿದ್ದೀರಿ..

ನಾಚಿಕೆಗೇಡು!!

Shubha said...

ಅನಾಮಿಕರೇ,
ಸುನಾಥರು ಬರೆದಿರುವ ಅಂಶಗಳ ಬಗ್ಗೆ ನಿಮ್ಮ
’ಎದುರು ವಾದ’ ಇದ್ದಲ್ಲಿ ಅದನ್ನು ಇಲ್ಲಿ ಮಂಡಿಸಬಹುದಿತ್ತಲ್ಲ? ಬದಲಾಗಿ ಅವರ ಕ್ಷಮತೆಯನ್ನೋ ಅಥವಾ ಅವರ ವಾದವನ್ನು ಬೆಂಬಲಿಸಿರುವ ಇತರರ ವಿವೇಕವನ್ನೋ ಪ್ರಶ್ನಿಸಿರುವ ನಿಮ್ಮ ವಿವೇಕ ಯಾವ ತೀರ್ಥಯಾತ್ರೆಗೆ ಹೋಗಿದೆ? ಹೆಸರು ಹೇಳುವ ಧೈರ್ಯವಿಲ್ಲದ ನಿಮಗೆ ಗಂಭೀರವಾಗಿ ತಮ್ಮ ವಾದವನ್ನು ಮುಂದಿಟ್ಟಿರುವ ಸುನಾಥರ ಉದ್ದೇಶಗಳನ್ನಾಗಲೀ ಅರ್ಹತೆಯನ್ನಾಗಲೀ ಪ್ರಶ್ನಿಸಲು ಏನು ಅಧಿಕಾರ? "ಯಾಕೆಂದರೆ ನಿಮ್ಮ ವಾದಕ್ಕೆ ಎದುರುವಾದ ಮಂಡಿಸ ತಕ್ಕ ಎದುರಾಳಿಯೇ ಇಲ್ಲದೇ ನೀವೇ ಎಲ್ಲ ಹೇಳಿ ಬೀಗಿಕೊಂಡಿದ್ದೀರಿ.." ಎಂದರೆ ಏಣು ಅರ್ಥ? ಸುನಾಥರು ಎದುರುವಾದ ಮಂಡಿಸುವವರನ್ನು ಹಿಡಿದು ತಂದು ಇಲ್ಲಿ ಬರೆಸಬೇಕಿತ್ತೇ? ಅಥವಾ ಎದುರು ವಾದಗಳನ್ನು ಅವರು ತಡೆದಿದ್ದಾರೆಯೇ?!
ಗಂಭೀರ ಚರ್ಚೆಯೊಂದನ್ನು ದಯವಿಟ್ಟು ಇಂತಹ ಬಾಲಿಶ ಮಾತುಗಳಿಂದ ಕೆಡಿಸಬೇಡಿ. ನಿಮ್ಮ ಅಭಿಪ್ರಾಯ ಭಿನ್ನವಾಗಿದ್ದಲ್ಲಿ ಅದನ್ನು ತೆರೆದ ಮನಸ್ಸಿನಿಂದ ನೋಡುವಷ್ಟು ವಿವೇಕ ಸುನಾಥರಿಗೂ ಅವರ ಬರಹಗಳನ್ನು ಓದುತ್ತಿರುವ ನಮ್ಮೆಲ್ಲರಿಗೂ ಖಂಡಿತ ಇದೆ. ಸುಮ್ಮನೆ ಕೀಳು ವ್ಯಂಗ್ಯ-ಆರೋಪ ಮಾಡುವ ಬದಲು ಗಂಭೀರವಾದ ಪ್ರತಿವಾದದ ಕಡೆ ಗಮನ ಹರಿಸಿದರೆ ಅದರಿಂದ ಎಲ್ಲರಿಗೂ ಉಪಯೋಗ.

Keshav.Kulkarni said...

ಶುಭಾ,
ಹೆಸರು ಕೂಡ ಬರೆದುಕೊಳ್ಳಲು ತಾಕತ್ತಿಲ್ಲದಿರುವ ಅನಾಮಿಕರಿಗೆ ಚೆನ್ನಾಗಿ ಹೇಳಿದಿರಿ. ನನ್ನದು ಒಂದು ಹೆಸರು ಸೇರಿಸಿಕೊಳ್ಳಿ.
ಕೇಶವ

sunaath said...

ಅನಾಮಿಕರೆ,
ಧನ್ಯವಾದಗಳು. ನಾನು ಭಾಷಾವಿಜ್ಞಾನಿಯಲ್ಲ. ಆದರೆ,
common sense ಇರುವ ಯಾರಿಗಾದರೂ ಶಂಕರ ಭಟ್ಟರ ಪ್ರತಿಪಾದನೆಯ ದೋಷಗಳು ತಿಳಿಯುತ್ತವೆ ಎಂದುಕೊಂಡಿದ್ದೇನೆ.
ಭಟ್ಟರನ್ನು ಸಮರ್ಥಿಸುವ ಅಂಶಗಳು ನಿಮ್ಮಲ್ಲಿದ್ದರೆ, ದಯವಿಟ್ಟು ಬರೆಯಿರಿ. We shall be happy.

sunaath said...

ಶುಭಾ, ಕೇಶವ,
ತುಂಬಾ ಧನ್ಯವಾದಗಳು.

ಅಂತರ್ವಾಣಿ said...

ಸುನಾಥ್ರವರೆ,
ಬಹಳ ಸೊಗಸಾಗಿ ಬರೆದಿದ್ದೀರ. ಎಲ್ಲಾ ಪದಗಳು ಕನ್ನಡದಲ್ಲಿ ಇಲ್ಲವಾದ್ದರಿಂದ ನಾವು ಬೇರೆ ಭಾಷೆಯ ಸಹಾಯ ಪಡೆಯುವುದರಲ್ಲಿ ತಪ್ಪಿಲ್ಲ.

sunaath said...

ಅಂತರ್ವಾಣಿಯವರೆ,
ಟಿಪ್ಪಣಿಗಾಗಿ ತುಂಬಾ ಧನ್ಯವಾದಗಳು

Anonymous said...

ಶಂಕರಭಟ್ಟರ ಪುಸ್ತಕಗಳನ್ನು ಓದಿಯೂ ಅವರ ಅನಿಸಿಕೆ ತಿಳಿದಿಲ್ಲ ಸರಿಯಾಗಿ ಎಂದು ನಿಮ್ಮ ಬರಹ ಸಾರುತ್ತದೆ.

ನಿಮಗಿರುವ ಹೊಗಳುಭಂಟ ವಿವೇಕಹೀನತೆಗೆ ನೀವು ಬರೆದುದಕ್ಕೆಲ್ಲ ಉತ್ಪ್ರೇಕ್ಷೆಯಲ್ಲಿ ಹೊಗಳುವುದೇ ಸಾಕ್ಷಿ.

ಭಾಷಾವಿಜ್ನಾನಿ ಅಲ್ಲ ಅಂದ ಮೇಲೆ ನಿಮಗೆ ಶಂಕರಭಟ್ಟರ ವಾದವನ್ನು ಖಂಡಿಸುವ ಯೋಗ್ಯತೆ ಇಲ್ಲ.

ನನಗೂ ಇಲ್ಲ. ಮೊದಲು ಶಂಕರಭಟ್ಟರಂತೆ ಆ ವಿಷಯದಲ್ಲಿ ಅಧ್ಯಯನ ನಡೆಸಿ, ನಿಮ್ಮ ವಾದವನ್ನು ಒಂದು ಪುಸ್ತಕದಲ್ಲಿ ಮಂಡಿಸಿರಿ, ಕೊಂಡು ಓದುವೆವು.

ಸುಮ್ಮೆನ ನಿಮ್ಮ ಹೊಗಳುಬಳಗದ ಮುಂದೆ ಮರೆಯಲು ಶಂಕರಭಟ್ಟರನ್ನು ಯಾಕೆ ಹಿಪೊಕ್ರಾಟ್ ಅನ್ನಿವಿರಿ.

ನಿಮ್ಮ ಕ್ಷೇತ್ರವೇನೋ ಅದರಲ್ಲಿ ಬರೆಯಿರಿ. ಇಲ್ಲ ಮೊದಲು ಭಾಷಾವಿಜ್ನಾನದ ಅಧ್ಯಯನಮಾಡಿ ಆಮೇಲೆ ಶಂಕರಭಟ್ಟರನ್ನು ಟೀಕಿಸಿರಿ.

ನಿಮ್ಮ ಲೇಖನವು ಒಂದು ಚೂರು ಭಷಾವಿಜ್ನಾನದಡಿ ಇಲ್ಲದೇ, ಬರೀ ವಿಷಯ ತಿಳಿಯದೇ ಆಡಿದ ಕುಹುಕವಾಗಿದೆ.

ನಿಮಗೆ ಹೇಳಿ ಪ್ರಯೋಜನವಿಲ್ಲ ಎಂದು ಸುಮ್ಮನಿದ್ದೆವು. ಆದರೆ ನೀವು ಬರಹದ ಮೇಲೆ ತೆವಲು ಬರಹಗಳನ್‌ನು ಬರೆದುದಕ್ಕೆ ನಿಮಗೊಂದು ಕಿವಿಮಾತು ಕನ್ನಡಿಗನಾಗಿ.

ನಮ್ಮ ಮಾತುಗಳು ನಿಮ್ಮ ಅಹಂಮಿಗೆ ಅಡ್ಡಿಯಾದಾರೆ ನಮ್ಮ ಬಾಧ್ಯತೆ ಅಲ್ಲ.!

ತುಸು ವಿಚಾರ ಮಾಡಿ.. ದುಡಕಿ, ಒಬ್ಬ ಕನ್ನಡದ ಮೇರು ಭಾಷಾವಿಜ್ನಾನಿ ಬಗ್ಗೆ ಹಗುರವಾಗಿ ಬರೆಯಬೇಡಿ.

sunaath said...

ಅನಾಮಿಕರೆ,
ನಿಮ್ಮ ಸಲಹೆಗಾಗಿ ತುಂಬಾ ಧನ್ಯವಾದಗಳು.

ಸುಪ್ತದೀಪ್ತಿ suptadeepti said...

ಅನಾಮಿಕರೆ,
ಸುನಾಥರ ವಾದ ಅಹಮಿಕೆಯದ್ದೋ, ಭಂಡತನದ್ದೋ, ಒಬ್ಬ ಸಾಧಾರಣ ಕನ್ನಡಿಗನದ್ದೋ ಎನ್ನುವುದನ್ನು ತಿಳಿದುಕೊಂಡಿಲ್ಲದ ನೀವು ಇಷ್ಟು ರೇಗಿ ಹಳಿಯುವುದೇಕೆ? "ನಾಚಿಕೆಗೇಡಿ"ನ ಕೆಲಸ ಇಲ್ಲೇನು ನಡೆದಿದೆ? ಸಾಮಾನ್ಯ ಕನ್ನಡಿಗರಾಗಿ ನಾವೆಲ್ಲ ಇಲ್ಲಿ ಕನ್ನಡಭಾಷೆಯ ಬಗ್ಗೆ ಚರ್ಚಿಸುತ್ತಿದ್ದರೆ ಅದರಲ್ಲಿ ನಾಚಿಕೊಳ್ಳುವಂಥಾದ್ದೇನಿದೆ?

ಸುನಾಥರು ಹೇಳಿದ ಮಾತುಗಳಿಗೆ ನಿಮ್ಮ ತರ್ಕವೇನಾದರೂ ಇದ್ದಲ್ಲಿ ಅದನ್ನು ತಿಳಿಸಿ. ಅದನ್ನೂ ಅಷ್ಟೇ ಆಸ್ಥೆಯಿಂದ ಓದುತ್ತೇವೆ.

ಶಂಕರ ಭಟ್ಟರು "ಕನ್ನಡದ ಮೇರು ಭಾಷಾ ವಿಜ್ಞಾನಿ"ಯಿರಬಹುದು. ಅವರನ್ನು ಬೆಂಬಲಿಸುವ ನೀವು ಆ ಪದವನ್ನಾದರೂ ಸರಿಯಾಗಿ ಬರೆಯಿರಿ. ಹತ್ತು ಸಾಲಿನ ಕಮೆಂಟು ಬರೆಯುವುದರಲ್ಲಿ ಅದೆಷ್ಟು ತಪ್ಪುಗಳು. ಯಾಕೆ? ಅದೇ ಸರಿಯಾದ ಕನ್ನಡವೆ?

ಇಲ್ಲಿ ಶಂಕರ ಭಟ್ಟರನ್ನು ಹಳಿದಿಲ್ಲ, ಅವರ ವಾದವನ್ನು ಖಂಡಿಸಿ ತಮ್ಮ ತರ್ಕವನ್ನು ವಿವರಿಸಿದ್ದಾರೆ, ಅಷ್ಟೇ. (ಒಬ್ಬರ ವಾದವನ್ನು ಪ್ರಶ್ನಿಸಿ ಮರುವಾದ ಹೂಡುವವರೆಲ್ಲರೂ ಪುಸ್ತಕವನ್ನೇ ಬರೆಯಬೇಕೇ?) ಇದು ವ್ಯಕ್ತಿಗತ ಟೀಕೆಯಲ್ಲ, ಬೌದ್ಧಿಕ ಮಲ್ಲಯುದ್ಧ. ಅದನ್ನೂ ಕಾಣಲಾಗದ ನೀವು ತೆರೆಮರೆಯಲ್ಲಿ ನಿಂತು ಬಾಣ ಎಸೆಯುವುದಕ್ಕೆ ಇಲ್ಲಿ ಯಾರೂ ವಾಲಿಗಳಿಲ್ಲ; ಕ್ಷಮಿಸಿ.

ಸುಪ್ತದೀಪ್ತಿ suptadeepti said...

ಕೇಶವ ಕುಲಕರ್ಣಿಯವರೆ, ನಿಮ್ಮ ಕೊನೆಯ ವಾದ ಒಪ್ಪಿದೆ. ಕನ್ನಡದಲ್ಲೇ ಬೆಳೆದು ಬಂದ ಪದಗಳು ಈಗ ಆಂಗ್ಲ ಪದಗಳ ಮರೆಗೆ ಹೋಗಿವೆ. ಬಚ್ಚಲುಮನೆ, ಅಡುಗೆಮನೆ, ಪಡಸಾಲೆಯಂಥ ಕನ್ನಡ ಪದಗಳು, ಈಗ ಕಾಣೆಯಾಗುತ್ತಿವೆ. ಇದಕ್ಕೆ ನಾವುಗಳೇ ಕಾರಣ. ನಮ್ಮ ಮಾತಿನಲ್ಲಿ ಅದು ಎಷ್ಟು ಇದೆ? ನಮ್ಮ ಮಕ್ಕಳ ಜೊತೆ ಮಾತಾಡುವಾಗ ಆ ಪದಗಳನ್ನು ನಾವು ಉಪಯೋಗಿಸುತ್ತೇವೆಯೆ?
"ಹಾಲಲ್ಲಿ ಸೋಫಾದ ಮೇಲೆ ಟೀವಿ ರಿಮೋಟ್ ಇದೆ" ಅಂದಾಗ ಕನ್ನಡ ಎಲ್ಲಿ ಉಳೀತು? ಹಾಗೂ, ಅದೇ ಮಾತನ್ನು "ಪಡಸಾಲೆಯಲ್ಲಿ..." ಎಂದು ಹೇಳಿದಾಗ, ವಾಕ್ಯ ಉದ್ದವಾಯ್ತು ಎನಿಸುತ್ತದೆ ನಮಗೆ. ಅವಸರದ ಈ ಯುಗದಲ್ಲಿ ಎಲ್ಲವೂ ಕ್ಷಣದಲ್ಲಿ ಆಗಬೇಕಾದಾಗ "ಪಡಸಾಲೆ" (೫ ಮಾತ್ರಾ ಕಾಲ) ಪದವನ್ನು "ಹಾಲ್" (ಎರಡೂವರೆ ಮಾತ್ರಾ ಕಾಲ) ನುಂಗುತ್ತದೆ. ಏನು ಮಾಡೋಣ? ನಾವೇ ಜವಾಬ್ದಾರರು ಇದಕ್ಕೆ.

Anveshi said...

ಸುನಾಥರೆ,
ಜನಮಾನಸದಲ್ಲಿ ಅಚ್ಚೊತ್ತಿರುವ ಆಂಗ್ಲ ಪದಗಳನ್ನು ಹಾಗೇ ಬಳಸುವುದರಲ್ಲಿ ತಪ್ಪು ಇಲ್ಲ ಎಂಬುದು ಒಪ್ಪತಕ್ಕ ವಿಚಾರವೆ.

ಆದರೆ "ಮಾರ್ಕೆಟಿಗೆ ಹೋಗಿ ಬೀನ್ಸ್ ತಂದು ಅದನ್ನು ವಾಶ್ ಮಾಡಿ, ಚೆನ್ನಾಗಿ ಕಟ್ ಮಾಡಿ, ಸ್ಟವ್ ಮೇಲಿಟ್ಟು ಸರಿಯಾಗಿ ಫ್ರೈ ಮಾಡಿ ತಿಂದರೆ ಏನ್ ಟೇಸ್ಟ್ ಅಂತೀರಿ... "

ಅಥವಾ

ಕೃಷ್ಣೇಗೌಡ್ರು ಎಲ್ಲೋ ಹೇಳಿದಂತೆ..
"ರೀ... ಮದುವೇಗೆ ಹೋಗ್ತಿದೀವಿ... ಗೋಲ್ಡ್ ಜೆವೆಲ್ಸ್... ಅದ್ರಲ್ಲೂ ಆ ದೊಡ್ಡ ನೆಕ್‌ಲೇಸ್ ಹಾಕ್ಕೋಬೇಕೂಂತ ಆಸೆ... ಅವೆಲ್ಲಾ ಇವತ್ತು ನಾನು ಹಾಕ್ಕೋತೀನಿ... ಮ್ಯಾರೇಜ್ ಹಾಲ್‌ನ ಡೋರ್‌ನಲ್ಲೇ ನಿಂತ್ಕೊಂಡು ಎಲ್ರನ್ನೂ ರಿಸೀವ್ ಮಾಡ್ತೀನಿ... ಯಾಕಂದ್ರೆ ಎಲ್ರೂ ನನ್ನ Neck ನೋಡಿಯೇ ಒಳಹೋಗ್ಬೇಕೂಂತ ಆಸೆ ಕಣ್ರೀ"

ಎಂಬ ಪದಗಳನ್ನು ಬಳಸುವಾಗ ಮಾತ್ರ ಎಚ್ಚರ ವಹಿಸದಿದ್ದರೆ ಕನ್ನಡ ಎಲ್ಲೀಂತ ಹುಡುಕಬೇಕಾದ ಮತ್ತು ಆಭಾಸಕರ ಪರಿಸ್ಥಿತಿ ಬರುತ್ತದೆ.

ಆದ್ರೂ, ಸುಪ್ತದೀಪ್ತಿ ಹೇಳಿದಂತೆ, ಕೆಲವೊಮ್ಮೆ ಸಣ್ಣ ಮಾತ್ರೆಗಳನ್ನು ನುಂಗಬೇಕಾದಾಗ ಅನಿವಾರ್ಯವಾಗಿ ಆಂಗ್ಲ ಪದವೇ ಬೇಕು.

ಇನ್ನು ಅನಾನಿಮಸ್ ಬಗ್ಗೆ... ಅನಾನಿಮಸ್ ಮಹಾಸ್ವಾಮಿಗಳು ಮುಖ ತೋರಿಸಲಾಗದೆ ಕಾಲ್ಪನಿಕವಾಗಿ... (ಒಳ್ಳೆಯ ಭಾಷೆಯಲ್ಲಿ ಹೇಳೋದಾದ್ರೆ ಕಪೋಲ ಕಲ್ಪಿತವಾಗಿ) "ಎದುರಾಳಿಯೇ ಇಲ್ಲದೆ ಬೀಗಿಕೊಂಡಿದ್ದೀರಿ" ಮತ್ತು "ನಾಚಿಕೆಗೇಡು" ಎಂಬ ತಮಗೇ ಸುಸಂಸ್ಕೃತ ಅನಿಸುವ ಭಾಷೆ ಬಳಸಿದ್ದಾರೆ. ಭಾಷೆಯ ಉಳಿವು ಮತ್ತು ಅದರ ಪೋಷಣೆ ಬಗ್ಗೆ, ಸರಿ ತಪ್ಪುಗಳ ಬಗ್ಗೆ, ಆಗಬೇಕಿರುವ ಬದಲಾವಣೆಗಳ ಬಗ್ಗೆ ಇಲ್ಲಿ ಗಂಭೀರ ಚರ್ಚೆಯಾಗುತ್ತಿದ್ದರೆ.... 'ಅದು ನಾಚಿಕೆಗೇಡು' ಅಂತ ಹೇಳುವುದು ಅಂಥವರ 'ಮಹಾನ್' ವ್ಯಕ್ತಿತ್ವದ ಸೂಚಕ. ತಮ್ಮ ಅಭಿಪ್ರಾಯ, ವಾದ ಮಂಡಿಸುವ ಬದಲು, ಸಮಸ್ಯೆ ಅರ್ಥ ಮಾಡಿಕೊಳ್ಳುವ ಬದಲು, ಅಪ-ವಾದದೊಂದಿಗೆ, ವಿವಾದಕ್ಕೇ ಹೊರಟರೆ ಮತ್ತು ಬದಲಾವಣೆಗೆ ಮುಕ್ತ ಮನಸ್ಸು ಇಲ್ಲದಿರೆ ಭಾಷೆ ಉದ್ಧಾರವಾಗುವುದಾದರೂ ಹೇಗೆ? "ಭಾಷೆ ಬೆಳವಣಿಗೆಯಾಗಿಲ್ಲ, ಕನ್ನಡ ಉಳಿಸಿ, ಬೆಳೆಸಿ" ಅಂತೆಲ್ಲಾ ನಮ್ಮ ನಾಡಿನಲ್ಲೇ ಕೂಗು ಕೇಳಬೇಕಿದ್ದರೆ ಯಾರು ಕಾರಣರು ಎಂಬುದು ಕೂಡ ಈಗಷ್ಟೇ ನಮಗರ್ಥವಾಯಿತು. ಅರ್ಥವಾದರೂ ಇದು ಅನರ್ಥವೇ.

ಚಿತ್ರಾ said...

ಸುನಾಥ್ ರೆ ,

ಮೊದಲನೆಯದಾಗಿ ಕನ್ನಡ ಭಾಷೆಯ ಬಗೆಗಿನ ಒಂದು ಕಳಕಳಿಯ ಬರಹಕ್ಕಾಗಿ ಅಭಿನಂದನೆಗಳು.ಲೇಖನ ತುಂಬಾ ಅರ್ಥವತ್ತಾಗಿ ಮೂಡಿ ಬಂದಿದೆ.

ತೇಜಸ್ವಿನಿಯ ಅಭಿಪ್ರಾಯಕ್ಕೆ ನನ್ನದೂ ಒಂದು ಓಟಿದೆ.

ಎಷ್ಟೋ ಕಡೆ ,ಇಂಗ್ಲಿಷ್ ಪದಗಳನ್ನು /ತದ್ಭವಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಷ್ಟೇ ಅಲ್ಲ ,ಜಾಣತನವೂ ಹೌದು. ಆದರೆ ,ಇಂಗ್ಲಿಷ್ ಅಥವಾ ಬೇರಾವುದೇ ಭಾಷೆಯ ಅತೀ ಬಳಕೆಯಿಂದ ಕನ್ನಡ ಬಡವಾಗಬಾರದಷ್ಟೇ. ಹಾಗೆ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ಕನ್ನಡ ಭಾಷೆ ಈಗ ಇದ್ದಂತೇ ಸುಂದರವಾಗಿದೆ. ಅದನ್ನು ಸರಳೀಕರಿಸುವ ಭರದಲ್ಲಿ ವಿರೂಪಗೊಳಿಸಬಾರದು ಎಂಬುದು ನನ್ನ ಅಭಿಪ್ರ್ರಾಯ .

ಇನ್ನು ಶ್ರೀಯುತ ಅನಾಮಿಕರೇ,
ಶಂಕರ ಭಟ್ಟರಂಥಾ ಪಂಡಿತರು ಯಾವ ಉತ್ಸಾಹದಿಂದ ಕನ್ನಡ ಭಾಷೆಯಲ್ಲಿ ಕ್ರಾಂತಿ ತರುವ ಬಗ್ಗೆ ಆಲೋಚಿಸಿದರೋ , ಅಷ್ಟೇ,ಪ್ರೀತಿ- ಕಳಕಳಿಯಿಂದ ( ಬಹುಶಃ ಸ್ವಲ್ಪ ಹೆಚ್ಚೇ) ನಾವು ಸಾಮಾನ್ಯ ಜನರು ನಮ್ಮ ಮಾತೃ ಭಾಷೆಯ ಬಗ್ಗೆ , ಅದರಲ್ಲಿನ ಬದಲಾವಣೆಯ ಬಗ್ಗೆ , ಅದರ ಪರಿಣಾಮದ ಬಗ್ಗೆ ಚರ್ಚಿಸುವುದು ತಪ್ಪೆ?
ಯಾವುದೇ ವಿಷಯದ ಬಗ್ಗೆ ಯಾರೂ ಕೂಡ ತಮ್ಮ ಸ್ವಂತ ಅಭಿಪ್ರಾಯಗಳನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತ ಪಡಿಸಬಹುದಲ್ಲವೆ? ಆಯಾ ವಿಷಯದ ಪಂಡಿತರು ಮಾತ್ರ ಅದಕ್ಕೆ ಸಂಬಂಧ ಪಟ್ಟಂತೆ ಮಾತನಾಡ ಬೇಕು ಎಂಬ ನಿಮ್ಮ ವಾದವೇ ಬಾಲಿಶವೆನಿಸುತ್ತದೆ. ಏನು ಸ್ವಾಮೀ, ನೀವು ಕ್ರಿಕೆಟ್ ಆಗಲೀ ಯಾವುದೇ ಆಟವನ್ನಾಗಲೀ ನೋಡುವಾಗ ಏನೂ ಕಾಮೆಂಟ್ ಮಾಡದೇ ನೋಡುತ್ತೀರಾ? ರಾಜಕೀಯದ ಬಗ್ಗೆ , ದೇಶದ ಸ್ಥಿತಿಯ ಬಗ್ಗೆ ಯಾರೊಂದಿಗೂ ಚರ್ಚಿಸುವುದೇ ಇಲ್ಲವೆ? ಪ್ರಾಯಶಃ ಇರಲಿಕ್ಕಿಲ್ಲ. ಏಕೆಂದರೆ , ನೀವೇ ಹೇಳುವಂತೆ ಆಯಾ ಕ್ಷೇತ್ರದ ಪರಿಣಿತರು ಮಾತ್ರ ಆ ವಿಷಯಗಳ ಬಗ್ಗೆ ಮಾತನಾಡಲು ಅರ್ಹರು ಅಲ್ಲವೆ?

sunaath said...

ಜ್ಯೋತಿ, ಚಿತ್ರಾ, ಅ-ಸತ್ಯ ಅನ್ವೇಷಿ,
ಕನ್ನಡ ಹಾಗು ಇಂಗ್ಲಿಶ್ ಪದಗಳ ಬಳಕೆಗೆ ಸಂಬಂಧಿಸಿದಂತೆ ಉತ್ತಮ ವಿಚಾರಗಳನ್ನು ಮಂಡಿಸಿದ್ದೀರಿ. ತೇಜಸ್ವಿನಿ,ಶುಭಾ, sree ಹಾಗು ಅಂತರ್ವಾಣಿಯವರ ವಿಚಾರಗಳನ್ನೂ ಸಹ ಗಮನಿಸಿದ್ದೀರಿ. ಕನ್ನಡದ ಪದಗಳ ಬಳಕೆಯು ಹೆಚ್ಚಬೇಕು; ಆಂಗ್ಲ ಪದಗಳು ಅನಾವಶ್ಯಕವಾಗಿ ಬರಬಾರದು; ಆದರೆ ಪರಭಾಷೆಗಳ ಪದಗಳನ್ನು ಅವಶ್ಯಕವಿದ್ದಲ್ಲಿ ಸಂಕೋಚವಿಲ್ಲದೆ ಸ್ವೀಕರಿಸಬೇಕು ಇದು ನಮ್ಮ ವಿಚಾರದ ಸಾರಾಂಶವೆನ್ನಬಹುದು.
ಮುಂದಿನ postನಲ್ಲಿ ಅನಂತ ಕಲ್ಲೋಳರ ಒಂದು ಅತ್ಯುತ್ತಮ ಲೇಖನವನ್ನು ಹಾಕುತ್ತಿದ್ದೇನೆ. ದಯವಿಟ್ಟು ನೋಡಿರಿ.

Anonymous said...

ಶಂಕರ ಭಟ್ಟರ ವಾದ, ನಿಮ್ಮ ತರ್ಕ ಎಲ್ಲವನ್ನೂ ಮತ್ತೆ ಮತ್ತೆ ಓದಿಕೊಂಡೆ. ನೀವು ಮಂಡಿಸಿರುವ ವಿಚಾರ ತೀರ ಸರಿ ಅನಿಸಿತು. ಅವರು ಹೇಳುತ್ತಿರುವ ಸಂಗತಿ ತೀರ ಅಪ್ರಸ್ತುತ. ಇವತ್ತು ಇಂಗ್ಲೀಶು ಜಗದಗಲ ಬೆಳೆದಿದೆಯೆಂದರೆ ಅದು ಎಲ್ಲ ಭಾಷೆಗಳನ್ನೂ ತನ್ನೊಳಗೆ ಸೇರಿಸಿಕೊಂಡೇ ಬೆಳೆದಿದೆಯಲ್ಲವೆ? ಭಟ್ಟರು ಹೇಳುವ ಹಾಗೆ ನಮ್ಮ ಕನ್ನಡವನ್ನು ಹಾಗೆಲ್ಲ ಸಂಕುಚಿತಗೊಳಿಸುತ್ತ ಹೋದರೆ ಇರುವುದನ್ನೋ ಕಳಕೊಳ್ಳಬೇಕಾದೀತು!

~ ಚೇತನಾ

Anonymous said...

----ಶಂಕರಬಟ್ಟರ ಲಿಪಿಕ್ರಾಂತಿಯನ್ನು ಬಳಸಿ ಬರೆದಿರವ ಈ ಸಾಲುಗಳು-

ಹಲವು ತಪ್ಪುಗಳನ್ನು ಮಾಡಿರುವ ಬರಹಗಾರರು, ತಿಳಿಯದ ವಿಶಯದ ಬಗ್ಗೆ ಬರೆದುದು ಎಂದು ತೋರಿಸಿದ್ದಾರೆ.

ಮೊದಲನೆಯದಾಗಿ ಬರಹಗಾರ ಕಟ್ಟ ಸಂಸ್ಕ್ರುತದ ದೊಡ್ಡ ಅಬಿಮಾನಿಯಾಗಿದ್ದು ಸಂಸ್ಕ್ರುತವು ಎಲ್ಲದಕ್ಕಿಂತ ಮೇಲು ಎಂಬ ಬಾವನೆಯನ್ನು ದಟ್ಟವಾಗಿ ಹೊಂದಿದ್ದು, ಬೇರೆ ನುಡಿಗಳ ಬಗ್ಗೆ ಕೀಳು ಬಾವನೆ ಇಟ್ಟುಕೊಂಡಿದ್ದಾರೆ ( ಇವರ ತಮಿಳು ಬಾಶೆಯ ಬಗ್ಗೆ ಅವರ ನುಡಿಗಳು ತೋರುವುವು )

ಇಶ್ಟೆಲ್ಲ ಪೂರ್ವಾಗ್ರಹವರಿಗೆ ಶಂಕರಬಟ್ಟರ ವಾದ ಮೊದಲು ಅರ್ತ ಮಾಡಿಕೊಳ್ಳುವುದರಲ್ಲೇ ತೊಡಕು ಇರುತ್ತದೆ. ಎಲ್ಲರಿಗೂ ಎಲ್ಲ ಸಂಗತಿಗಳೂ ಸುಲಬಗ್ರಾಹ್ಯವಲ್ಲ. ನಮ್ಮ ಕೊರತೆಯನ್ನು ನಾವು ತಿಳಿಯದೇ ಇರಬಹುದು. ( ತಮಿಳು ವ್ಯಾಕರಣ ತಿಳಿಯುವವರಿಗೆ ಮೊದಲಿಗೆ ಇದೇನು ಗೋಚಲು ಪಾಪಾ, ಬಾಬಾ, ಬಾಪಾ, ಪಾಬಾ ಎಲ್ಲವೂ ಎಂದೇ ಎಂದು ನಗುವರು.. ಆದರೆ ಅದರ ವ್ಯಾಕರಣವನ್ನು ಸರಿಯಾಗಿ ತಿಳಿದವರಿಗೆ ಅದರ ಸಮಸ್ಯೆಯೇ ಇಲ್ಲ.. ಕೋರಿಕ್ಕಯ್ಗಳ್ => ಕೋರಿಕಯ್ಗಳ್ ಎಂದು ಉಲಿಯುವುದು, ಕ್ಕೆ ಇದು ಅಲ್ಲಿ ಗ ಇಲ್ಲ ಎಂದು ತೋರುವುದು )

ಇಲ್ಲಿ ಕೆಲವು ಆಡಿದ ಹಗುರ ಮಾತಿನ ಸಮಾದಾನಕ್ಕಾಗಿ ಮೂಲ ಬರಹದ ಕೆಲವು ತಪ್ಪುಗಳು ತೋರಿಸುವೆನು.. ( ಇವರ ಟೀಕೆಗಳ ತುಂಬಾ ಇಂತಹ ತಪ್ಪುಗಳ ರಾಶಿಗಳಿದ್ದು, ಅವನ್ನೆಲ್ಲ ತೋರಿಸಿಕೊಡಲಾಗದು )

================================
"ಉದಾಹರಣೆಗೆ: ‘ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು’ ಎನ್ನುವ head line ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ head line ಕೊಡುವದು ಚಂದ ಕಂಡೀತೆ?

ಭಾರತೀಯ ಭಾಷೆಗಳಿಗೆ ಒಂದು advantage ಇದೆ. ‘ಘನತೆ’ ಬೇಕಾದಾಗ ಅಥವಾ ಮುಜುಗರ ತಪ್ಪಿಸುವಂತಹ ಪದಗಳನ್ನು ಬಳಸಬೇಕಾದಾಗ ಸಂಸ್ಕೃತ ಭಾಷೆಯನ್ನು ನಾವು ಅವಲಂಬಿಸಬಹುದು
================================
ಮೊದಲಿಗೆ ’ಚಂದ’ ಎಂಬುದು ಒಂದು ನಿರ್ದಿಶ್ಟವಾದ ಸಂಗತಿಯೇ? ನನಗೆ ನಿಧನ ಅನ್ನೋ ಪದ ಚಂದವಿಲ್ಲ ಅಂದಾಗೆ ಯಾಕೆ ಎಂದು ಯಾರಾದರು ಪ್ರಶ್ನೆ ಮಾಡುವರೇ?

ಇನ್ನು ಚಂದದ ಬಿಡಿಸಿ ಹೇಳಬೇಕಾದರೆ.. ನಿಮ್ಮ 'favorite' / ನಿಮಗೆ ಚಂದವಾದ ಬಣ್ಣ ಯಾವುದು? ಎಂಬ ಕೇಳ್ವೆಗೆ ಒಬ್ಬನು ನೀಲಿ, ಒಬ್ಬನು ಹಳದಿ, ಒಬ್ಬರು ಕೆಂಪು ಅನ್ನುವರು.. ಅವರ ಉತ್ತರಕ್ಕೆ ’ಯಾಕೆ’ ಎಂದು ಪ್ರಶ್ನಿಸಲು ಬರದು.

’ಚಂದ’ ಎಂಬು ಟೀಕೆಗೆ ಸಾದುವಲ್ಲ.."ನನಗೆ ಬಾತ್ರೋಮ್, ಬಚ್ಚಲಮನೆಗಿಂತ ಚಂದವಾದ ಪದ" ಎನ್ನುವ ಮಾತನ್ನು ಮಾನ್ಯರೂ ಒಪ್ಪರು..

ಆದುದರಿಂದ ಟೀಕೆಯಲ್ಲಿ ಚಂದಚಾರುಗಳ ಸಂಗತಿ ಬರದೇ, ಇತಿ-ತಥ್ಯಗಳ ಮಾತುಬರಬೇಕು.

ಇನ್ನು ಸತ್ತರು = ಅನುನೀಗಿದರು = ತೀರಿಹೋದರು = ಕೊನೆಯುಸಿರೆದರು = ಕಣ್ಮಿದರು ಮುಂತಾದ ಕನ್ನಡದ ಪದಗಳೇ ಇವೆ.. ಇದರ ಬದಲು ಸಂಸ್ಕ್ರುತದ ನಿಧನ, ಮೃತ, ದಿವಂಗತ, ಇಲ್ಲವೇ ಉರ್ದು ಪದಗಳಾದ ’ಗುಜರ್‍ ಜಾನ’. ’ಇಂತಿಕಾಲ್’ ಇಲ್ಲವೇ ಇಂಗ್ಲೀಶಿನ ’ಪಾಸ್ ಅವೇ’ ’ಎಕ್ಸ್‌ಪಯಿರ್ಡು’ ಯಾವುದನ್ನೇ ಬಳಸಿದರೂ ಅದು ಕನ್ನಡವಲ್ಲ... ಅದು ಅನ್ಯಬಾಶೆಯ ಪದವೇ.

ಮೇಲಿನ ಸಾಲು ’ಘನತೆ’ ಎಂಬ ವಾದಕ್ಕೂ ಸಮಾದಾನ ನೀಡುವುದು.

ಕಕ್ಕಸುಮನೆ ಮತ್ತು ಮಲಾಲಯ ಎರಡ ಘನತೆಯೂ ಒಂದೇ.. ಸಂಸ್ಕ್ರುತದ ಪದಪ್ರಯೋಗದಿಂದ ಮಲಾಲಯ ಮೇಲ್ಮೆ ಪಡೆಯುವುದಿಲ್ಲ, ಕಕ್ಕಸುಮನೆ ಕೀಳಾಗುವುದಿಲ್ಲ... ಮೇಲ್ಮೆ ಕೀಳ್ಮೆಗಳಿರುವುದ ಪದಗಳಲ್ಲಲ್ಲ, ಅವರು ಅರುಹುವ ಸಂಗತಿಯಲ್ಲಿ.. !

ಈ ಸಂಗತಿಯನ್ನು ಕಡೆಣಿಸಿರುವ ಬರಹಗಾರ ತಮ್ಮ ಮನದಲ್ಲಿ ದಟ್ಟವಾಗಿ ಬೆಳಿದುಕೊಂಡಿರುವ ಸಂಸ್ಕ್ರುತದ ಮೇಲಣ ಹಿಸಿಮೇಲ್ಮೆಯನ್ನ ತೋರಿಸಿದ್ದಾರೆ.. ಇದಕ್ಕೆ ಅನೇಕ ಕಾರಣಗಳಿರ ಬಹುದು.. ಅದರಲ್ಲೊಂದು ಅವರು ಬ್ರಾಹ್ಮಣಜಾತಿಯವರು ಆಗಿರುಬಹುದಾಗಿರುವುದು ಒಂದಾಗಿರಬಹುದು. ಅವರೇ ಆ ಕಾರಣಗಳನ್ನು ಕಂಡುಕೊಂಡು ಅದರಿಂದ ಹೊರಬಂದು ವಿಸ್ತುನಿಶ್ಟೆ/ವಿಶಯನಿಶ್ಟೆಯ ಮೇಲೆ ಬಾಶಾವಿಜ್ನಾನವನ್ನು ಅಬ್ಯಾಸಮಾಡಿ ಶಂಕರಬಟ್ಟರ ಮಾತುಗಳನ್ನು ಓದಿದರೆ, ಅವರು ಹೇಳುವುರು ಬಾನಿನಿಂದ ನೀರು ಮಳೆಯಾಗಿ ಸುರಿಯುವಶ್ಟೇ ಸಾಮಾನ್ಯವಾದ ಸರಿಯಾದ ಅಸಹಜವಲ್ಲದ ವಿಶಯವೆಂದು ತಿಳಿಯುವುದು.

ಶಂಕರಬಟ್ಟರ ವಾದದ ಒಟ್ಟುಸಾರವನ್ನು ಒಮ್ಮೆ ಬರೆಯುವೆನು..
"
೧ ಬರಹ ಆಡುಮಾತಿಗೆ ಹತ್ತಿರವಾಗಿರಬೇಕು
೨ ಕನ್ನಡವನ್ನು ಹೆಚ್ಚು ಮಾತಾಡುವ ಮಂದಿಗೆ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ, ಶ/ಷಗಳ ನಡುವೆ ವ್ಯತ್ಯಾಸ ಕಂಡುಹಿಡಿಯಲಾಗದೇ ವಿಧ್ಯೇ, ಹಾರ್ಧಿಕ ಮುಂತಾದ ’ತಪ್ಪು’ಗಳನ್ನು ಮಾಡುವರು. ಅದು ತಪ್ಪಲ್ಲ ಕಾರಣ ಅವರಿಗೆ ಸಹಜವಾಗೇ ಮಹಾಪ್ರಾಣಗಳು, ಷಕಾರ ಉಲಿಯಲು ಆಗಲ್ಲ.. ಇದು ಅವರ ಜನಾಂಗದ ಲಕ್ಶಣ(ಎತಿನಿಕ್ ಪ್ರಾಪರಿಟಿ).. ಪಿನ್ ಲ್ಯಾಂಡ್ ಮಂದಿಗೆ ತ=ದ, ಪ=ಬ, ಮ್ರುದು ಮತ್ತು ಕರ್ಕಶ ವ್ಯಂಜನಗಳು ಒಂದೇ, ಜರ್ಮನನ್ನರಿಗೆ ವ ಮತ್ತು fa ಒಂದೇ, ಹಿಂದಿಯಲ್ಲಿ ಎ/ಏ ಒ/ಓ ಒಂದೇ...
೩ ಮೇಲ್ಮಟ್ಟದ ಕನ್ನಡವೆಂದು ಹೆಚ್ಚೆಚ್ಚಾಗಿ ಸಂಸ್ಕ್ರುತದ ಪದಗಳನ್ನು ತುಂಬುವುದರಿಂದ ಕನ್ನಡ ಕಟಿಣವಾಗುವುದು..

ಸತ್ತರು ಎಂಬ ಒಂದು ಕನ್ನಡ ಪದಕ್ಕೆ ನಿಧನ, ಮೃತ, ದಿವಂಗತ ಎಂಬ ಮೂರು ಹೆಚ್ಚುವರಿ ಪದಗಳನ್ನು ತಿಳಿದುಕೊಳ್ಳಬೇಕು.. ಹೀಗೆ
ಊಟ = ಭೋಜನ = ಆಹಾರ = ಅಶನ
ತಿಂಡಿ = ಉಪಹಾರ = ಲಘಹಾರ

ಅಂದರೆ ಕನ್ನಡದ ನಿಗಂಟು = ಕನ್ನಡದ ಪದಗಳು + ಸಂಸ್ಕ್ರುತ ಪದಗಳು.. ಇದು ಮಾಮೂಲಿ ಕನ್ನಡಿಗರಿ ಹೊರಲಾರ ಹೊರೆಯಾಗಿರುವುದು ಇಂದು ಕನ್ನಡ ಮೀಡಿಯಮ್ಮಲ್ಲಿ ಕಲಿತ/ಕಲಿಯುವ ಮಂದಿಯ ತೊಡರು, ಎರಡುಗಳಿಂದ ಸಾಬೀತಾಗಿದೆ."

ಇಲ್ಲಿ ಯಾರ ಮನವನ್ನು ನೋಯಿಸಬೇಕೆಂದ ಹಿನ್ನೆಲೆ ಇಲ್ಲ..

ಇಲ್ಲಿ ಬಳಸಿರುವ ಸಂಸ್ಕ್ರುತದ ಪದಗಳು ಮಾನ್ಯರಿಗೆ ಗ್ರಾಹ್ಯಸೌಲಬ್ಯಕ್ಕಾಗಿ ಹೊರತು ಅದಕ್ಕೆ ಪರ್ಯಾಯ ಕನ್ನಡದ ಪದಗಳು ಗೊತ್ತಿಲ್ಲ ಎಂದಲ್ಲ...

ಇನ್ನೂ ವಿವರವಾದ ಚರ್ಚೆಯ ಅಗತ್ಯವಿಲ್ಲ.. ಕಾರಣ ಮೂಲಬರಹಗಾರರ ಟೀಕಾಂಶಗಳಲ್ಲಿ ಬಹುಲೋಪಗಳಿವೆ.. ಚಂದ, ಘನತೆ ಇವೆಲ್ಲ, ವೈಯಕ್ತಿಕ ಪ್ರಾಧಾನ್ಯತೆಗಾಳಾಗಿದ್ದು ವಸ್ತುಚರ್ಚೆಯಲ್ಲಿ ನಗಣ್ಯ.

ಮುಸ್ಲಿಂ ಮಂದಿಗೆ ಬುರ್ಕಾ ಗನತೆ ಎಂದು ಎಲ್ಲರೂ ತೊಡಲಾಗದು. ಕುಂಕುಮ ಹಿಂದುಗಳಿಗೆ ಗನತೆ ಎಂದು ಎಲ್ಲರೂ ಇಡಲಾಗದು.. ಈ ಸಂಗತಿಯನ್ನು ಬರಹಗಾರರು ಅರಿತಿಲ್ಲ.!

ಇಲ್ಲಿಗೆ ಸಾಕು.. ಮಹದೀಯರು ಅನುಮೋಹಿಗಳಿಗೆ ನೋವಾಗಬಹುದು..

ಸುನಿಲ್ ಜಯಪ್ರಕಾಶ್ said...

‘ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು’ ಎನ್ನುವ head line ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ head line ಕೊಡುವದು ಚಂದ ಕಂಡೀತೆ?

ಸುಮ್ನೆ ತಮಾಶೆಗೆ, "ತೀರಿಕೊಂಡರು ಎನ್ನಬಹುದು" :) ವಿಷಯ ಅದಲ್ಲ.

>> ಮುಜುಗರ ತಪ್ಪಿಸುವಂತಹ ಪದಗಳನ್ನು ಬಳಸಬೇಕಾದಾಗ ಸಂಸ್ಕೃತ ಭಾಷೆಯನ್ನು ನಾವು ಅವಲಂಬಿಸಬಹುದು.

ಅಪ್ಪಟ ಸತ್ಯ!!!!! :) :)

>> ಈ advantage ಇಂಗ್ಲಿಶ ಭಾಷೆಗಿಲ್ಲ.
ಇದು ತಪ್ಪು :( ನಮಗೆ ಇಂಗ್ಲೀಷ್ ಚೆನ್ನಾಗಿ ಗೊತ್ತಿಲ್ಲದ್ದರಿಂದ ಹಾಗನ್ನಿಸುತ್ತೆ. ಗ್ರೀಕು, ಲಾಟಿನ್ ಭಾಷೆಗಳು ಸತ್ವಹೀನ ಭಾಷೆಗಳಲ್ಲ.

>> ವೈಜ್ಞಾನಿಕ ಪುಸ್ತಕಗಳಲ್ಲಿ ಲೈಂಗಿಕ ಪದಗಳನ್ನು ಬಳಸುವಾಗ, ನಾವು ಸರಳವಾಗಿ ಸಂಸ್ಕೃತ ಪದಗಳನ್ನು ಬಳಸಬಹುದು.
ನಿಜ.

>> ಇಂಗ್ಲಿಶ್ ಭಾಷೆಯಲ್ಲಿ ಇದು ಸಾಧ್ಯವಿಲ್ಲ.
೧೦೦ ಸುಳ್ಳು. ಒಮ್ಮೆ ನಿಮ್ಮ ನೆಂಟರು ಯಾರಾದರೂ ಡಾಕ್ಟರ್ ಇದ್ದರೆ ಕೇಳಿ. ನಿಮಗೇ ಗೊತ್ತಾಗತ್ತೆ.

>> ಅಷ್ಟೇ ಏಕೆ, ಹೊಲಸು ಬೈಗಳನ್ನು ಹೇಳಬೇಕಾದಾಗ ಸಹ, ನಾವು ಇಂಗ್ಲಿಶ್ ಭಾಷೆಯ ಪದವನ್ನೇ ಬಳಸಿ ಮುಜುಗರ ತಪ್ಪಿಸಿಕೊಳ್ಳುತ್ತೇವೆ. ಉದಾಹರಣೆ: shit. ಈ ಸೌಲಭ್ಯ ಇಂಗ್ಲಿಶ್ ಅಥವಾ ಅಮೆರಿಕನ್ನರಿಗೆ ಇಲ್ಲವಲ್ಲ!

ಅಮೇರಿಕನ್ ಇಂಗ್ಲೀಷ್ ಹಿನ್ನೆಲೆಯಿಂದ ಯೋಚಿಸುತ್ತಿರುವುದರಿಂದ ಹೀಗೆನಿಸುತ್ತಿದೆ, ಆದರೆ ನೀವು ಬ್ರಿಟನ್ನರು ಬಳಸುವ ಇಂಗ್ಲೀಷಿನಿಂದ ಯೋಚಿಸಿದರೆ, ಇದು ನಿಜವಲ್ಲ ಎಂಬುದು ತಿಳಿಯುತ್ತದೆ.

ಸುನಿಲ್ ಜಯಪ್ರಕಾಶ್ said...

ಹೇಯ್, ಗೆಳೆಯರೆ ಒಂದು ಮರೆತಿದ್ದೆ. ಒಂದು ಸಣ್ಣ ಪಾಪೆ(picture) ಬಿಡಿಸಿ, ಸಂಪದದಲ್ಲಿ ಹಾಕಿದ್ದೆ. ಬಿಡುವಿದ್ದಾಗ ನೋಡಿ.
ಸವಿಯಾದ ಮತ್ತು ಮುಳ್ಳಿನಂತಹ ಸಂಸ್ಕೃತ ಪದಗಳು

Anonymous said...

ಸ್ವಾಮಿ ಸುನಾತರೆ,

"...ಉದಾಹರಣೆಗೆ: ‘ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು’ ಎನ್ನುವ head line ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ head line ಕೊಡುವದು ಚಂದ ಕಂಡೀತೆ?..."

ಈ ಮೇಲಿನ ಸಾಲುಗಳೇ ಸಾಕು ನೀವು ತಪ್ಪುತಿಳುವಳಿಕೆ(prejudice)ಯಿಂದ ಬರೆಯುತ್ತಿದ್ದೀರ ಅಂತ ಹೇಳುವುದಕ್ಕೆ. ನೀವು ಕನ್ನಡಿಗರೇ ಎಂಬ ಅಯ್ಬು ನನ್ನನ್ನು ಕಾಡುತ್ತಿದೆ. ನೀವು ಬೆಳೆದಿರುವ ಪರಿಸರ 'ಸಕ್ಕದ ಹಿರಿದು, ಕನ್ನಡ ಕೀಳು' ಎಂಬ ಅನಿಸನ್ನು ನಿಮ್ಮಲ್ಲಿ ಹೇರಿದೆ.
ಶಂಕರಬಟ್ಟರು ಎಂತ ಮೇರು ಮಟ್ಟದ ಪಂಡಿತರು ಎಂಬುದನ್ನ ಅರಿತು ಮಾತನಾಡಿ. ಅವರ ಬಗ್ಗೆ ಇಲ್ಲಿದೆ ನೋಡಿ.
http://www.sampada.net/article/9612

ನೀವು objective ಆಗಿ ಮಾತನಾಡದೆ ಬರೀ ನಿಮ್ಮ ಅನಿಸಿಕೆ/ಅಬಿಪ್ರಾಯಗಳನ್ನು ಹೇಳಿದ್ದೀರ.
ನಿಮಗೆ 'ನಿಧನ' ಚಂದ ಆದರೆ ಹೆಚ್ಚು ಕನ್ನಡ ಮಂದಿಗೆ 'ತೀರ್ಕೊಂಡರು', 'ಕೊನೆಯುಸಿರೆಳೆದರು' ಇವೆ ಚಂದ.

ಕನ್ನಡದ ಬೇರುಗಳು ಗಟ್ಟಿಯಾಗಿವೆ. ಅದಕ್ಕೆ ಸಕ್ಕದದ ಊರುಗೋಲು ಬೇಕಾಗಿಲ್ಲ.
ಇಶ್ಟಕ್ಕು ಕನ್ನಡ-ಸಕ್ಕದ ಹೇಗಿರಬೇಕೆಂದು ೯ ನೇ ನೂರೇಡಿನ ಕವಿರಾಜಮಾರ್ಗದ ಸಾಲುಗಳಲ್ಲಿ ಹೇಳಲಾಗಿದೆ. ಶಂಕರಬಟ್ಟರೇನೂ ಹೊಸದಾಗಿ ಸುರು ಮಾಡಿಲ್ಲ.

ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
ತಱಿಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರೆಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್

ಕುದಿಯುವ ಹಾಲಿಗೆ ಮಜ್ಜಿಗೆ ಹನಿಗಳನ್ನ ಬೆರೆಸಿದರೆ ಹೇಗೆ ಹಾಗಾಗುತ್ತದೆ ಎಲ್ಲ ಕಡೆನೂ ಸಕ್ಕದ ಬೆರೆಸುತ್ತಾ ಹೋದರೆ.

Anonymous said...

ಅಶ್ಟೊಂದು ಓದಿರುವ ಸುನಾತರಿಗೆ ಈ ಕವಿರಾಜಮಾರ್ಗದ ಪದ್ಯ ಗೊತ್ತಿಲ್ಲವೇ...

ಏನಾಚಾರ್ಯ?!!

ಹಾಗೆ ನಯಸೇನನ "ಸುಲಿದ ಬಾಳೆಹಣ್ಣನಂದದಿ" ಮತ್ತು ಶಬ್ದಮಣಿದರ್ಪಣದ ಪದ್ಯಗಳೂ ತಿಳಿದಿದೆಯೋ ಇಲ್ಲವೋ!

Unknown said...

ಸುನಾತರೆ,
ಯಾಕೆ ಕವಿರಾಜಮಾರ್ಗದ ಪದ್ಯ ನೋಡಿ ಗಾಬರಿಗೊಂಡಿರೆ?
ಮೊದಲು ಕನ್ನಡದ ಈ ಕಬ್ಬಗಳನ್ನು ಓದಿ
೧. ಕವಿರಾಜಮಾರ್ಗ(ಸಿರಿವಿಜಯ)
೨. ಕಬ್ಬಿಗರ ಕಾವನ್(ಆಂಡಯ್ಯ)
೩. ದರ್ಮಾಮ್ರುತಂ(ನಯಸೇನ)

ನಿಮಗೆ ಕನ್ನಡ ಅಂದ್ರೆ ಏನು ಅಂತ ಗೊತ್ತಾಗುತ್ತೆ. ಬರೀ ಹೊಸಗನ್ನಡ ಸಕ್ಕದಬೆರೆಸಿದ ಬರಹಗಳನ್ನು ಓದಿ ಎಲ್ಲಾ ಗೊತ್ತು ಅಂತ ಬೀಗಬೇಡಿ.

'ಅಸಮಸಕ್ಕದಂ ಅಚ್ಚಗನ್ನಡಂ' ಅಂತ ಆಂಡಯ್ಯ ಹೇಳಿದ್ದಾನೆ.
ಸಕ್ಕದವನ್ನು ಕನ್ನಡಕ್ಕೆ ಬೆರೆಸಿದರೆ ಎಣ್ಣೆ -ತುಪ್ಪ ಬೆರೆಸಿದಂತೆ ಆಗುತ್ತದೆ ಅಂತ ನಯಸೇನ ಹೇಳಿದ್ದಾನೆ.

ಸಕ್ಕದ ಕನ್ನಡಕ್ಕೆ ಬೆರೆಸಿದರೆ ಕುದಿಯುವ ಹಾಲಿಗೆ ಮಜ್ಜಿಗೆ ಹನಿಗಳನ್ನು ಬೆರೆಸಿದ ಹಾಗೆ ಅಂತ ಸಿರಿವಿಜಯನು ಹೇಳಿದ್ದಾನೆ.

ಕನ್ನಡ ಯಾಕೆ ಎಲ್ಲಾ ನುಡಿಗಳಿಂದ ಸಕ್ಕದಕ್ಕೆ ಪದಗಳು ಹೋಗಿದೆ.
ಮಲ್ಲ, ಪಟ್ಟ ಇವೆಲ್ಲ ಕನ್ನಡದಿಂದ ಸಕ್ಕದಕ್ಕೆ ಹೋಗಿರುವ ಪದಗಳು.

ಕನ್ನಡ ಸಕ್ಕದದಲ್ಲಿ ಲಿಂಗಗಳು ಬೇರೆಯಾಗಿವೆ.
ಕನ್ನಡ ಕೆಲಸದೊರೆ(ಕ್ರಿಯಾಪದ)ಕ್ಕೆ ಒತ್ತು ಕೊಡುವ ನುಡಿ
ಸಕ್ಕದ ಹೆಸರೊರೆ(ನಾಮಪದ)ಕ್ಕೆ ಒತ್ತು ಕೊಡುವ ನುಡಿ.

ಹ್ಯಾಗೆ ಸಕ್ಕದದಲ್ಲಿ ಎ, ಱ್, ೞ್ ಇಲ್ಲವೊ ಹಾಗೆ ಕನ್ನಡದಲ್ಲಿ ಮಾಪ್ರಾಣಗಳಿಲ್ಲ. ಇದರಲ್ಲಿ ಯಾವೆ ಸಕ್ಕದದ ಯಾವ ಹೆಚ್ಚುಗಾರಿಕೆಯೂ ಇಲ್ಲ.

ಇವು ಆಯ ನುಡಿಗಳ ನಿಬ್ಬರಗಳು/ವಿಶೇಶತೆಗಳು.

sunaath said...

joey,
ನಿಮ್ಮ ಪಾಪೆಯನ್ನು ನೋಡಿದೆ. ಮೆಲ್ಲ ಸಕ್ಕದ ಹಾಗು ಮೆಲ್ಲಾಂಗ್ಲ
ಪದಗಳನ್ನು ಕನ್ನಡದಲ್ಲಿ ನಲ್ ಆಗಿ ಬಳಸಬಹುದೆಂದು ಚೆನ್ನಾಗಿ
ಸೂಚಿಸಿದ್ದೀರಾ.

Anonymous said...

ಯಪ್ಪೋ ಈಯಪ್ಪಗೆ ಸಕ್ಕನೂ ಬರಲ್ಲ ಕನ್ನಡನೂ ಬರಲ್ಲ
ಇಲ್ಲೋಡಿ ಬಸವಣ್ಣನ ವಚನಾನ ಹೇಗೆ ಕನ್ನಡಿಕರಿಸಿದ್ದಾರೆ? ಹ ಹಹ

ಇವರ ಮಾತೇ ನೋಡಿ.....

ಸಂಸ್ಕೃತ ಪದಗಳ ಅವಶ್ಯಕತೆಯನ್ನು ಅರಿತುಕೊಳ್ಳಲು ಬಸವಣ್ಣನವರ ಈ ವಚನವನ್ನು ನೋಡಿರಿ:................

‘ಕರಿ ಘನ ಅಂಕುಶ ಕಿರಿದೆನ್ನ ಬಹುದೆ?
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

ಶಂಕರ ಭಟ್ಟರು ಈ ವಚನವನ್ನು ಹೀಗೆ ಬರೆಯುತ್ತಿದ್ದರೇನೊ?

‘ಆನೆ ದೊಡ್ಡದು, ಆದರೆ ಚುಚ್ಚುಗ ಸಣ್ಣದೆ?
ಕತ್ತಲೆ ದಟ್ಟವಾಗಿದೆ, ಆದರೆ ಸೊಡರು ಸಣ್ಣದೆ?’

ಹೋ... ಈಗೆ ಸಕ್ಕವನ್ನು ಕನ್ನಡದಲ್ಲಿ ಬರೆದೇ ಇರಬೇಕು "ಸಕ್ಕ ಮೇಲು ಕನ್ನಡ ಕೀಳು" ಅನ್ನಿಸುವ ಹಾಗೆ ಮಾಡಿರುವುದು.
ನಾಚಿಕೆ ಆಗಲ್ಲವೆ ನಿಮಗೆ. ಕನ್ನಡವನ್ನು ಇಟೋಂದು ಹಗುರವಾಗಿ ಕಾಣೋಕೆ? ಕನ್ನಡ ಅಂದರೆ ಏನಂದ ತಿಳಕೊಂಡಿರ?
ಬರೆಯೋಕೆ ಬರುತ್ತೆ ಅಂತ ಬಾಯಿಗೆ ಬಂದಂತೆ ಏನೇನೋ ಹ್ಯಾಗ್ಯಾಗೋ ಬರೆದು ಕನ್ನಡವನ್ನು ಕಕ್ಕಸು ಮಾಡಬೇಡಿ. " ಕೈಲಾಗದಿದ್ದದ್ದಕ್ಕೇ ಮೈಯಲ್ಲ ಪರಿಚಿ ಕೊಂಡರಂತೆ" ಅಂತವರು ನಿಮ್ಮಂತ ಹೆಣ್ಣುಗರೇ ಇರಬೇಕು.

‘ಕರಿ ಘನ ಅಂಕುಶ ಕಿರಿದೆನ್ನ ಬಹುದೆ?
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

ಈ ಸಾಲುಗಳ ತಿರುಳೇನು? ತಿಳುದೈತ ನಿಮ್ಗ?

‘ಆನೆ ದೊಡ್ಡದು, ಆದರೆ ಚುಚ್ಚುಗ ಸಣ್ಣದೆ?
ಕತ್ತಲೆ ದಟ್ಟವಾಗಿದೆ, ಆದರೆ ಸೊಡರು ಸಣ್ಣದೆ?’

ಈ ಸಾಲುಗಳಲ್ಲಿ ನೀವೇಲಿರುವುದೇನು, ಹೇಳುವುದೇನು? ಒಂದಕ್ಕೊಂದು ಸಾಲಿಗೆ ಒಂದಿಕೆ ಐತೇನು? ನೊಡಿ ನಿಮ್ಮ ಈ ಅರಚಾಟ "ಗಾಳಗೆ ಸ್ಯಾಟ ಬೋಳಿಸಿದಾಂಗೆ" ಇದೆ.
ಬಸವಣ್ಣ, ಸಕ್ಕನೇ ದೊಡ್ಡದು ಅದನ್ನೇ ನಾವು ಬಳಸಬೇಕೆನ್ನುವುದರವಿರುದ್ದ, ಪುರೋಹಿತಶಾಹಿಯ ವಿರುದ್ದ, ಊಳಿಗೆ ಮಾನ್ಯ ಪದ್ದತಿ ವಿರುದ್ದ, ಸಿಡಿದೆದ್ದು ಕನ್ನಡದಲ್ಲಿ, ಆಡುಮಾತಲ್ಲಿ ವಚನ ಬರೆದು ವೈಚಾರಿಕ ಕ್ರಾಂತಿಯ ಕಿಚ್ಚು ಹಚ್ಚಿದ್ದರು. ಅವರಿಗೆ ಜನರಿಗೆ ತಿಳಿಯುವ ಹಾಗೆ ಬರೆಯಬೇಕಿತ್ತು. ತಿಳಿಯುವ ಹಾಗೆ ಬರೆದರು. ಕನ್ನಡ ಸೋಸಿ ಬರೆಯುವಟ್ಟು ಹೊತ್ತು ಅವರಿಗಿರಲಿಲ್ಲ. ಬಾಯಿಗೆ ಬಂದಂತೆ ಮೂಗಿನ ನೇರಕ್ಕೆ ತೋಚಿದಂತೆ ಮಾತನಾಡಿ ಗಂಡಸುತನ ತೊರಿಸಬೇಡಿರಿ. ಬಸವಣ್ಣನಿಗೆ ಇದ್ದದ್ದು ದಿಟವಾದ ಕನ್ನಡ ಒಲವು. ಅದಕ್ಕೆ ಕಬ್ಬಿಣದ ಕಡೆಲೆಯಾದ ಸಕ್ಕವನ್ನು ತೂರಿ ಸುಳಿದ ಬಾಳೆ ಹಣ್ಣಿನಂತ ಕನ್ನಡದಲ್ಲಿ ಬರೆದಿದ್ದು. ಅವರು ಬಳಸಿರುವ ಸಕ್ಕದ ಅಲ್ಲೊಂದು ಇಲ್ಲೊಂದು ಒರಯನ್ನೇ ಮುಂದಿಟ್ಟುಕೊಂಡು ಬೀದಿನಾಯಿತರ ಅರಚಾಡಬೇಡಿ. ಅವರಿಗೆ ಆಗ ಆಟೊಂದು ಹೊತ್ತು ಇರಲಿಲ್ಲ ಅನ್ನೋದು ತಿಳುಕೊಳ್ಳಿ.

‘ಕರಿ ಘನ ಅಂಕುಶ ಕಿರಿದೆನ್ನ ಬಹುದೆ?
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

ಈ ಸಾಲುಗಳನ್ನು ಕನ್ನಡದಲ್ಲಿ ಇದೇ ತಿರುಳು ಕೊಡುವ ಹತ್ತಾರಿ ಬಗೆಯಲ್ಲಿ ಬರೆಯ ಬಹುದು.

"ತೋರಾನೆ ಚಿಪ್ಪಾಳವನು ಕಿರಿದೆನ್ನ ಬಹುದೇ?
ದಟ್ಟ ಕಗ್ಗತ್ತಲು ಹಣತೆಯನು ಕಿರಿದೆನ್ನ ಬಹುದೆ?

"ಪೇರರೆ ಆನೆ ದೋಟಿಯನು ಕಿರಿದೆನ್ನ ಬಹುದೇ?
ಕಗ್ಗಾನ ಕಾವಳು ಹಣತೆಯನು ಕಿರಿದೆನ್ನ ಬಹುದೆ?

"ತಿಮಿಯಂತಾನೆ ಸಿಡಿಯನು ಸಣ್ಣದೆನ್ನಬಹುದೇ?
ಕರಿಕಾವಳು ಕಿಡಿಯನು ಕಿರಿದೆನ್ನಬಹುದೆ?

"ದಿಂಡಿನಂತಾನೆ ಆರೆಯನು ತುಂಡೆನ್ನ ಬಹುದೇ?
ದಟ್ಟ ಕಗ್ಗತ್ತಲು ಕಿಚ್ಚನು ಕಿರಿದೆನ್ನ ಬಹುದೆ?

ಈಗೆ ಇನ್ನು ಹತ್ತಾರು ಬಗೆಯಲ್ಲಿ ಬರೆಯಬಹುದು. ನಿಮ್ಮ ಈ ತಿಳಿಗೇಡಿತನಕ್ಕೆ ಏನನ್ನ ಬೇಕೋ.
ಇನಿತಾದರು ಕಣ್ಣುಬಿಟ್ಟು ನೋಡಿ. ಎಲ್ಲೋ ಹಲಕೆಲವರು ಸೈ ಸೈ ಎಂದದಕ್ಕೆ ತೈ ತೈ ಎಂದು ಕುಣಿಯುದಲ್ಲ. ಏನು ನೀವು ಶಂಕರ ಬಟ್ಟರ ಜೊತೆ ಮಲ್ಲ ಯುದ್ದ ಮಾಡಿರುವುದು? ಬಡಬಡ ಅಂತ ಬಡಾಯಿ ಕೊಚಚ್ಚಿಕೊಳ್ಳುವುದು ಬಿಟ್ಟು ಏನು ಮಾಡಿದಿರಿ? ನಿಮ್ಮ ತರ್ಕ ಸರಿಯಾಗಿ ಶಾಸ್ತ್ರೀಯವಾಗಿ ಸಾದಿಸಿ ತೋರಿಸಿ. ನೆಟ್ಟಗೆ ಒಂದು ವಚನ ಬಿಡಿಸಿ ಸರಿಯಾಗಿ ತಿಳಿಯುವಂತೆ ಬರೆಯಲು ಬರುವುದಿಲ್ಲ. ಜೊತೆಗೆ ತನಗೆ ಎಲ್ಲ ತಿಳಿದವರಂತೆ ಮಾತನಾಡುವುದಲ್ಲ. ನೀವು ಇಲ್ಲಿ ಹೇಳಿರುವ ಒಂದೊಂದು ಮಾತಿಗೂ ಆ ಹೊತ್ತಿಗೆಯಲ್ಲಿ ಅವರಾಗಲೆ ಉತ್ತರ ಕೊಟ್ಟಿದ್ದಾರೆ. ನಿಮ್ಮ ಬಾಯಿ ಬಡುಕ ಜನಗಳ ಬಗ್ಗೆ, ನಿಮ್ಮಂತ ಜನಗಳ ಮೊಂಡುತನದ ಬಗ್ಗೆ, ತಿಳಿಗೇಡಿ ತನದಬಗ್ಗೆ ಅವರು ಮೊದಲೇ ಆ ಹೊತ್ತಿಗೆಯಲ್ಲಿ ಹೇಳಿ ಬರೆದಿದ್ದಾರೆ. ದಿಟವನ್ನು ಒಪ್ಪಿಕೊಳ್ಳುವ ಗುಂಡಿಗೆ ಇಲ್ಲದ ಹೆಣ್ಣುಗರು ನೀವೆಲ್ಲ. ಕೊನೆಯದಾಗಿ ನಿಮಗೆ ಬೇಕಿರುವುದು ಕನ್ನಡವಲ್ಲ. ಸಕ್ಕ. ಇದು ಬ್ರಾಂಬ್ರರು ಹಾಕಿಕೊಂಡಿರುವ ಹೊಂಚು.