ವ್ಯಾಕರಣದೋಷಗಳು ಬರವಣಿಗೆಯಲ್ಲಿ ಘಟಿಸುವದು ಸರ್ವೆಸಾಮಾನ್ಯ. ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಗಳಲ್ಲಿ ಕಲಿಯುತ್ತಿರುವಾಗ, ನಮ್ಮ ಮನದಲ್ಲಿ ಮೂಡಿದ ತಪ್ಪು ತಿಳುವಳಿಕೆಯಿಂದಾಗಿ ಇಂತಹ ವ್ಯಾಕರಣದೋಷಗಳು ಸಂಭವಿಸುತ್ತವೆ. ಇಂತಹ ದೋಷಗಳು ಅನೇಕ ಸಲ ಅಲ್ಪಪ್ರಾಣ ಹಾಗು ಮಹಾಪ್ರಾಣ ಉಚ್ಚಾರಗಳನ್ನು ಅದಲು ಬದಲಾಗಿ ಭಾವಿಸುವದರಿಂದ ಉಂಟಾಗಿರುತ್ತವೆ.
ಉದಾಹರಣೆಗೆ ‘ಶಾಕಾಹಾರ’ವೆಂದು ಬರೆಯುವ ಬದಲಾಗಿ ‘ಶಾಖಾಹಾರ’ವೆಂದು ಬರೆಯುವದು; ‘ಕಾಷ್ಠ’ ಎಂದು ಬರೆಯುವ ಬದಲಾಗಿ ‘ಕಾಷ್ಟ’ ಎಂದು ಬರೆಯುವದು ಇತ್ಯಾದಿ. ಇವು ಕ್ಷಮ್ಯ ದೋಷಗಳು. ಶಬ್ದಕೋಶವನ್ನು ಪರಿಶೀಲಿಸಿ ನಮ್ಮ ಸಂಶಯನಿವಾರಣೆ ಮಾಡಿಕೊಳ್ಳಬಹುದು.
ಇಂತಹ ದೋಷಗಳು ಸಾರ್ವಜನೀಕರಣಗೊಂಡಾಗ, ಅಪರಾಧಿಗಳನ್ನು ಕ್ಷಮಿಸುವದು ಕಷ್ಟವಾಗುತ್ತದೆ. ಆದರೂ ಸಹ, ಅಪರಾಧಿಯ ವ್ಯಾಕರಣಜ್ಞಾನವನ್ನು ಲೆಕ್ಕಿಸಿ, ಕ್ಷಮಾದಾನ ಮಾಡಬಹುದು. ಉದಾಹರಣೆಗೆ ‘ಗಿರಿಜಾ’ ಎನ್ನುವ ಯುವತಿಗೆ ದ್ವಾರಕೀಶರು ‘ಶೃತಿ’ ಎಂದು ನಾಮಕರಣ ಮಾಡಿ, ಚಿತ್ರರಂಗಕ್ಕೆ ಪ್ರವೇಶ ನೀಡಿದಾಗ, ಆದಂತಹ ವ್ಯಾಕರಣ ದೋಷಕ್ಕಾಗಿ, ದ್ವಾರಕೀಶರನ್ನು ಕ್ಷಮಿಸಬಹುದು. ‘ಶ್ರುತಿ’ ಎನ್ನುವದು ಸರಿಯಾದ ಪದವೆನ್ನುವದು ದ್ವಾರಕೀಶರಿಗೆ ಗೊತ್ತಿಲ್ಲ. ಬಹುಶಃ ಆ ಪದದ ಅರ್ಥವೂ ಅವರಿಗೆ ಗೊತ್ತಿರಲಿಕ್ಕಿಲ್ಲ. ಸಂಸ್ಕೃತ ಪದವೆಂದ ಮೇಲೆ ‘ರು’ಕಾರ ತಪ್ಪು, ‘ಋ’ಕಾರವೇ ಸರಿ ಎಂದು ಅವರು ಭಾವಿಸಿರಬಹುದು. ಇದೀಗ ಈ ವ್ಯಾಕರಣದೋಷವು ಸಾರ್ವಜನೀಕರಣಗೊಂಡು ಬಿಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಸಹ ‘ಶೃತಿ’ ಎನ್ನುವ ಬರವಣಿಗೆ ಅಂಗೀಕೃತವಾಗಿಬಿಟ್ಟಿದೆ. [ಕೆಲವೊಂದು ವರ್ಷಗಳ ಹಿಂದೆ ರಾಯಚೂರಿನಲ್ಲಿ (ಅಥವಾ ಕಲಬುರ್ಗಿಯಲ್ಲಿ?) ಬನ್ನಂಜೆ ಗೋವಿಂದಾಚಾರ್ಯರು ಭಾಗವಹಿಸಿದ ಸಮಾರಂಭವೊಂದರಲ್ಲಿ, ನೇಪಥ್ಯದಲ್ಲಿ ತೂಗಾಡುತ್ತಿದ್ದ ತೆರೆಯ ಮೇಲೆ ‘ಶೃತಿ’ ಎನ್ನುವ ಪದವಿದ್ದಿತು.] ಬನ್ನಂಜೆ ಗೋವಿಂದಾಚಾರ್ಯರು ಆ ವ್ಯಾಕರಣದೋಷವನ್ನು ಗಮನಿಸಿ ಸಂಘಟಕರ ಗಮನಕ್ಕೆ ತಂದರೋ, ಇಲ್ಲವೋ ಎನ್ನುವದು ತಿಳಿಯದು.
ಜೈ ದ್ವಾರಕೀಶ!
ಆದರೆ, ಹುಬ್ಬಳ್ಳಿಯ ಪ್ರಮುಖ ವಾರ್ತಾಪತ್ರಿಕೆಯಾದ ‘ಸಂಯುಕ್ತ ಕರ್ನಾಟಕ’ವು ಎಸಗುತ್ತಿರುವ ವ್ಯಾಕರಣ ದೋಷಗಳನ್ನು ಕ್ಷಮಿಸುವದು ಅಸಾಧ್ಯ. ‘ಉಚ್ಚ’ ನ್ಯಾಯಾಲಯ ಅಥವಾ ‘ಸರ್ವೋಚ್ಚ’ ನ್ಯಾಯಾಲಯ ಎಂದು ಬರೆಯಬೇಕಾದ ಸಂದರ್ಭಗಳಲ್ಲಿ, ಈ ಪತ್ರಿಕೆಯು (ಇತ್ತೀಚಿನ ವರ್ಷಗಳಲ್ಲಿ) ‘ಉಚ್ಛ’ ಮತ್ತು ‘ಸರ್ವೋಚ್ಛ’ ಎಂದೇ ಬರೆಯುತ್ತ ಬಂದಿದೆ. ಪತ್ರಿಕೆಯ ಈ ವ್ಯಾಕರಣದೋಷವು ಅಕ್ಷಮ್ಯ. ಶಾಲಾಹಂತದ ಬಾಲಕರು ಇವೇ ಸರಿಯಾದ ಪದಗಳು ಎಂದು ತಿಳಿದು ಇವನ್ನೇ ನಕಲು ಮಾಡಿದರೆ ಆಶ್ಚರ್ಯವಿಲ್ಲ. ಸಾರ್ವಜನಿಕರಿಂದ ಪ್ರಮಾಣ ಎಂದು ಭಾವಿಸಲ್ಪಟ್ಟಿರುವ ಸಂಸ್ಥೆಗಳು, ಪತ್ರಿಕೆಗಳು ಹಾಗು ವ್ಯಕ್ತಿಗಳು ವ್ಯಾಕರಣದೋಷಗಳ ಬಗೆಗೆ ಬಲು ಎಚ್ಚರವಹಿಸಬೇಕು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಓದಲಾದ ಇಂತಹ ಕೆಲವು ಅಲ್ಪ/ಮಹಾ ಪ್ರಾಣಘಾತಕ ಪದಗಳನ್ನು ಇಲ್ಲಿ ಕೊಟ್ಟಿದೆ:
ತಪ್ಪು ………..ಒಪ್ಪು
ನಿಚ್ಛಳ ……ನಿಚ್ಚಳ
ಸಮುಚ್ಛಯ ….ಸಮುಚ್ಚಯ
ಅಲ್ ಖೈದಾ…….ಅಲ್ ಕೈದಾ
ಧೃವ……………ಧ್ರುವ
ಧೃವೀಕರಣ……..ಧ್ರುವೀಕರಣ
ಅನುಗೃಹ………ಅನುಗ್ರಹ
ಶಿಲನ್ಯಾಸ……...ಶಿಲಾನ್ಯಾಸ
ಕಳ್ಳಬಟ್ಟಿ……...ಕಳ್ಳಭಟ್ಟಿ
ಭೋಗಸ್………ಬೋಗಸ್
ಖೂಟ………….ಕೂಟ
ಥಳಕು ಹಾಕಿದ……ತಳಕು ಹಾಕಿದ
ಸೌಹಾರ್ದೃ………ಸೌಹಾರ್ದ
ಪ್ರಾಂಥ……… .ಪ್ರಾಂತ
ಛಾಳಿ…………. ಚಾಳಿ
ಉಮ್ಮಸ್ಸು…… ಹುಮ್ಮಸ್ಸು
ಸೋಲ್ಲು……… ಸೊಲ್ಲು
ನೈರುತ್ಯ....ನೈಋತ್ಯ
ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಶ್ ಪದಗಳ ಬರವಣಿಗೆಯಲ್ಲಿಯೂ ಸಹ ಈ ಪತ್ರಿಕೆಯು ಘೋರ ಅಪರಾಧವನ್ನು ಮಾಡಿದೆ. ಕಳೆದ ವರ್ಷದಲ್ಲಿ(೨೦೦೭ರಲ್ಲಿ), CET ‘ಕೌನ್ಸೆಲಿಂಗ್ ’ ಅನ್ನುವ ಪದವನ್ನು ಈ ಪತ್ರಿಕೆ ‘ಕೌನ್ಸಿಲಿಂಗ್’ ಎಂದು ಸತತವಾಗಿ ಬರೆಯುತ್ತ ನಡೆದಿದೆ. COUNSEL ಹಾಗು COUNCIL ಎನ್ನುವ ಪದಗಳ ನಡುವಿನ ಅಂತರ ತಿಳಿಯದ ಪತ್ರಿಕೆ, ಅದೆಂತಹ ಪತ್ರಿಕೆ?
ನನ್ನ ತಾಯಿ ನನಗೆ ಚಿಕ್ಕಂದಿನಲ್ಲಿ ಅಕ್ಷರ ಕಲಿಸುವಾಗ, ‘ಸಂಯುಕ್ತ ಕರ್ನಾಟಕ’ ದಲ್ಲಿಯ ಪದಗಳನ್ನು ತೋರಿಸಿ ಅಕ್ಷರ ಕಲಿಸಿದಳು. Thank God, ಆ ಸಮಯದಲ್ಲಿ ವ್ಯಾಕರಣ ಬಲ್ಲ ಸಂಪಾದಕರು ಅಲ್ಲಿದ್ದರು. ಹೀಗಾಗಿ ‘ಸಂಯುಕ್ತ ಕರ್ನಾಟಕ’ ನನ್ನ ನೆಚ್ಚಿನ ಪತ್ರಿಕೆಯಾಗಿತ್ತು. ಈಗ ನಾನು ನನ್ನ ಮಕ್ಕಳಿಂದ ಈ ಪತ್ರಿಕೆಯನ್ನು ಅಡಗಿಸಿ ಇಡುವ ಪ್ರಸಂಗ ಬಂದಿದೆ (ತಪ್ಪು ಪದಪ್ರಯೋಗಗಳಿಂದ ಅವರನ್ನು ರಕ್ಷಿಸಲು).
ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ವ್ಯಾಕರಣ ದೋಷಗಳನ್ನು ಏಕೆ ಮಾಡುತ್ತಿದೆ? ಇದಕ್ಕೆ ಮೂರು ಕಾರಣಗಳಿರಬಹುದು:
೧) ಸಂಪಾದಕ ಮಂಡಲಿಯಲ್ಲಿ ಕನ್ನಡ ಬಾರದ ಪಂಡಿತರಿದ್ದಾರೆ.
೨) ಅಖಿಲ ಕರ್ನಾಟಕ ಪತ್ರಿಕೆಯಾಗುವ ಹುಮ್ಮಸ್ಸಿನಲ್ಲಿ, ಕೆಲವು ಪ್ರದೇಶಗಳಲ್ಲಿ ರೂಢಿಯಲ್ಲಿರುವ ಕೆಲವೊಂದು ತಪ್ಪು ಪ್ರಯೋಗಳನ್ನು ಈ ಪತ್ರಿಕೆ ರೂಢಿಸಿಕೊಳ್ಳುತ್ತಿದೆ.
೩) ತನ್ನ ಪ್ರತಿದ್ವಂದ್ವಿ ಪತ್ರಿಕೆಯ specailityಗಳನ್ನು (ತಪ್ಪಾಗಿ) ನಕಲು ಮಾಡಲು ಪ್ರಯತ್ನಿಸುತ್ತಿದೆ.
ಸ್ವಾತಂತ್ರ್ಯಪೂರ್ವದಿಂದಲೇ, ಉಚ್ಚ ಧ್ಯೇಯಗಳನ್ನಿಟ್ಟುಕೊಂಡು ಈ ಪತ್ರಿಕೆಯು ಹೋರಾಡಿದೆ. ‘ಪ್ರಮಾಣ ಕನ್ನಡ’ದ ನಿರ್ಮಾಣಕ್ಕಾಗಿ ಈ ಪತ್ರಿಕೆಯು ಪರಿಶ್ರಮಪಟ್ಟಿದೆ. ಇಂತಹ ಉಜ್ವಲ ಇತಿಹಾಸವುಳ್ಳ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಪದಪ್ರಯೋಗದಲ್ಲಿ ಸುಧಾರಿಸುವದೆಂದು ಹಾರೈಸೋಣ.
ಇದಿಷ್ಟು ವ್ಯಾಕರಣದೋಷದ ಬಗೆಗೆ. ಆದರೆ, ಭಾಷಾದೋಷದ ಬಗೆಗೆ ಬರೆಯುವದು ಕತ್ತಿಯ ಮೇಲೆ ನಡೆದಂತೆ. Regional sentimentsಗಳಿಂದಾಗಿ ನಮ್ಮ ಮನಸ್ಸು ಪ್ರಭಾವಿತವಾಗಬಹುದು.
ಈ ವಿಷಯವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
Subscribe to:
Post Comments (Atom)
19 comments:
ಸುನಾಥರೇ, ತಪ್ಪು-ಒಪ್ಪುಗಳ ಪಟ್ಟಿಯನ್ನು ಹೀಗೆ ಬೆಳೆಸುತ್ತಾ ಹೋದರೆ ಅನುಕೂಲವಾಗುತ್ತದೆ. ನನಗೂ ಕೆಲವು ಪದಗಳನ್ನು ಬರೆಯುವಾಗ ಯಾವುದು ಸರಿ ಎಂದು ಗೊಂದಲವಾಗುವುದುಂಟು. ಆಗ ನಿಮ್ಮ ಪೋಸ್ಟನ್ನು ಚಾರ್ಟಿನಂತೆ ಉಪಯೋಗಿಸಿಕೊಳ್ಳಬಹುದು. ಈಗ ನಿಘಂಟನ್ನು ಉಪಯೋಗಿಸುತ್ತಿದ್ದೇನೆ.
ಅಂದ ಹಾಗೆ, ದ್ವಾರಕೀಶ್ ಶೃತಿ ಎಂದು ನಾಮಕರಣ ಮಾಡಿದ್ದು "ಕಾವೇರಿ" ಎನ್ನುವ ಯುವತಿಗಲ್ಲ. "ಗಿರಿಜಾ" ಎನ್ನುವ ಯುವತಿಗೆ. ನಿಮ್ಮದೂ ಕ್ಷಮಾರ್ಹ ಅಪರಾಧವೇ. :)
ಸುನಾಥರೆ,
ಉತ್ತಮ ಲೇಖ. ನಿಜ. ಇತ್ತೀಚಿಗೆ ಪತ್ರಿಕೆಯವರು ತಮ್ಮ ಹೊಣೆಯನ್ನರಿಯದೇ ಕೇವಲ ವ್ಯಾಪಾರೀಕರಣ ದೃಷ್ಟಿಯಿಂದ ಮಾತ್ರ ನೋಡುತ್ತಿದ್ದಾರೆ. ಈ ವ್ಯಾಕರಣ, ನೈತಿಕತೆ ಇವೆಲ್ಲಾ ಅವರಿಗೆ ಮುಖ್ಯ ಅಲ್ಲಾ..ಇಂತಹ ತಪ್ಪುಗಳು ಸಂಯುಕ್ತ ಕರ್ನಾಟಕ ಪತ್ರಿಕೆಯೊಂದರಿಂದ ಮಾತ್ರ ಆಗುತ್ತಿಲ್ಲ.. ಸಾಮಾನ್ಯ ಎಲ್ಲಾ ಪತ್ರಿಕೆಗಳೂ ನಿರ್ಲಕ್ಷಿಸುತ್ತಿವೆ. ಇನ್ನು ನಾನೆಲ್ಲೋ ಕೇಳಿದ್ದು.. ಸಂಖ್ಯಾಶಾಸ್ತ್ರದ ಪ್ರಕಾರ, ಶೃತಿ ಬರೆದರೇ ದ್ವಾರಕೀಶ್ ಹಾಗೂ ನಟಿಗೆ ಒಳ್ಳೆಯದೆಂದಿದ್ದರು ಅದಕ್ಕೇ ಹಾಗೆ ಹಾಕಿಕೊಂಡಿರುವರೆಂದು... ಇದ್ದರೂ ಇರಬಹುದು..;-) ಹಾಗೆಯೇ ತುಳಸಿಯಮ್ಮಾ ಹೇಳಿದಂತೆ ಆ ನಟಿಯ ಮೂಲ ಹೆಸರು ಕಾವೇರಿಯಲ್ಲ.. ಗಿರಿಜಾ ಎಂದು.. ;-) (ನನ್ನ ಪ್ರತಿಕ್ರಿಯೆಯಲ್ಲಿ ಎಲ್ಲಾದರೂ ವ್ಯಾಕರಣದೋಷಗಳಿದ್ದರೆ ತಿಳಿಸಿ.. ಅವಸರದಲ್ಲಾಗಿದ್ದಿರಲೂ ಬಹುದು..)
ಸಾರ್ವಜನೀಕರಣ ಸರಿಯೋ? ಅಥವಾ ಸಾರ್ವಜನಿಕೀಕರಣ?
ಆಧುನೀಕರಣ ಪದ ತಪ್ಪೆಂದು ಪಾ.ವೆಂ.ಆಚಾರ್ಯರ ಪುಸ್ತಕದಲ್ಲಿ ಓದಿದ ನೆನಪು
ನಮಸ್ತೆ,
ಶೃತಿ ಮತ್ತು ಶ್ರುತಿಗೆ ವ್ಯತ್ಯಾಸವೇನು? ನಾನು ಈ ವರೆಗೂ ಶೃತಿಯೇ ಸರಿ ಎಂದು ತಿಳಿದಿದ್ದೆ. ಅದೆ ರೀತಿ ಧೃವ ಕೂಡ. ಸ್ವಲ್ಪ ವಿವರಿಸಿದ್ದರೆ ಸಹಾಯವಾಗುತ್ತಿತ್ತು.
ಇತ್ತೀಚೆಗೆ ಪತ್ರಿಕೆಗಳಲ್ಲಂತೂ ಅರೆಬರೆ ಬುದ್ಧಿಯವರೇ ತುಂಬಿಕೊಂಡು ಹಾಳು ಮಾಡುತ್ತಿರುವುದು ನಿಜ. ನೀವು ಈ ನಿಟ್ಟಿನಲ್ಲಿ ಸಂಬಂಧಿಸಿದ ಪತ್ರಿಕೆಗೇ ಒಮ್ಮೆ ಪತ್ರ ಬರೆದಿದ್ದರೆ ಚೆನ್ನಾಗಿರುತ್ತಿತ್ತು.ಈಗಾಗಲೇ ಬರೆದಿದ್ದರೆ ಒ.ಕೆ.
ಸುನಾಥರೇ,
ನಾನು "ಶೃತಿ" ಪದದ ವ್ಯಾಕರಣ ಸರಿಯಾಗಿದೆ ಎಂದೆ ತಿಳಿದಿದ್ದೆ,ಈ ತರಹದ ಪದಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ.
-ಅಮರ
ತ್ರಿವೇಣಿಯವರೆ,
ತಿದ್ದುಪಡಿಗಾಗಿ ಧನ್ಯವಾದಗಳು. ಲೇಖನದಲ್ಲಿಯೂ ಸಹ ’ಕಾವೇರಿ’ಯನ್ನು ಬದಲಾಯಿಸಿ ’ಗಿರಿಜಾ’ ಮಾಡಿದ್ದೇನೆ.
ನನ್ನ ಅಪರಾಧವನ್ನು ಕ್ಷಮಿಸಿದ್ದಕ್ಕಾಗಿ ವಂದನೆಗಳು.
ತೇಜಸ್ವಿನಿ,
ನೀವು ಹೇಳಿದಂತೆ, ಎಲ್ಲಾ ಪತ್ರಿಕೆಗಳೂ ವ್ಯಾಕರಣ ದೋಷವನ್ನು ಮಾಡುತ್ತಲೇ ಇವೆ.
’ಕಾವೇರಿ’ಯನ್ನು ’ಗಿರಿಜಾ’ ಎಂದು ಬದಲಾಯಿಸಿದ್ದೇನೆ. ಸೂಚನೆಗೆ ವಂದನೆಗಳು.
ಸಂಖ್ಯಾಶಾಸ್ತ್ರವು ಚಿತ್ರರಂಗದ ಅವಿಭಾಜ್ಯ ಅಂಗವಾಗಿರುವದರಿಂದ,
’ಶ್ರುತಿ’ಯನ್ನು ’ಶೃತಿ’ಯನ್ನಾಗಿ ಮಾಡಿದ್ದರೆ, ದ್ವಾರಕೀಶರನ್ನು ಕ್ಷಮಿಸಬಹುದು. ಆದರೆ ’ಯಡಿಯೂರಪ್ಪ’ನವರು ’ಯಡ್ಯೂರಪ್ಪ’ ಆಗಿದ್ದು ಹಾಸ್ಯಾಸ್ಪದ ಮತ್ತು ಭಾಷಾದೃಷ್ಟಿಯಿಂದ ಅಕ್ಷಮ್ಯ.
ಕನ್ನಡ ಕುಲಪುಂಗವರೆ,
ಸರ್ವಜನ ಪದದಿಂದಲೇ ಸಾರ್ವಜನೀಕರಣವನ್ನು first derivative ಆಗಿ ಸಾಧಿಸಬಹುದು. ಆದುದರಿಂದ ಸಾರ್ವಜನಕೀಕರಣ ಎನ್ನುವ second derivative ಅನ್ನು ಬಳಸುವ ಅವಶ್ಯಕತೆ ಇಲ್ಲ ಎಂದು ತೋರುತ್ತದೆ. ಇದಕ್ಕೆ ವಿರುದ್ಧವಾದ ಅಭಿಪ್ರಾಯಗಳಿದ್ದರೆ, ದಯವಿಟ್ಟು ತಿಳಿಸಿ.
ಆಧುನಿಕ ಪದದ ಮೂಲಪದ ನನಗೆ ತಿಳಿಯದು. ಆಚಾರ್ಯರು ಹೇಳುವಂತೆ, ಆಧುನಿಕೀಕರಣವೇ ಸರಿಯೆಂದು ಭಾಸವಾಗುತ್ತದೆ.
ವಿಕಾಸ,
ಶೃತಿ ಎನ್ನುವ ಪದ ನನಗೆ ತಿಳಿದ ಮಟ್ಟಿಗೆ ಸಂಸ್ಕೃತದಲ್ಲಿ ಇಲ್ಲ.
ಶ್ರುತಿ ಎಂದರೆ ’ಕೇಳಿದಂತಹ’ ಎನ್ನುವ ಅರ್ಥ ಬರುತ್ತಿದ್ದು, ಸಂಗೀತದಲ್ಲಿ ಶ್ರುತಿ ಎಂದರೆ tune ಎನ್ನುವ ಅರ್ಥವಿದೆ.
ಇನ್ನು ಲಿಪಿಯ ಬಳಕೆಗೂ ಮುನ್ನ, ವೇದಗಳನ್ನು ಸಾಮುದಾಯಿಕವಾಗಿ ಉಚ್ಚರಿಸಿ ತಿಳಿಸುತ್ತಿದ್ದರು. ಈ ಕಾರಣಕ್ಕಾಗಿ ಶ್ರುತಿ(=heard) ಎಂದು ವೇದಗಳಿಗೆ ಕರೆಯಲಾಗುತ್ತಿದೆ. ವೇದಾಧ್ಯಯನ ಮಾಡಿದ ಬ್ರಾಹ್ಮಣರಿಗೆ ಈ ಕಾರಣಕ್ಕಾಗಿ ’ಶ್ರೌತೇಯ ಬ್ರಾಹ್ಮಣ’ ಎನ್ನುತ್ತಾರೆ.
ಸ್ಮೃತಿ ಎಂದರೆ ನೆನಪು. ಲಿಪಿಯ ಬಳಕೆಗೂ ಮುನ್ನ ಸಾಮಾಜಿಕ ಕಟ್ಟುಪಾಡುಗಳನ್ನು ನೆನಪಿನಿಂದಲೇ ಮುಂದುವರಿಸಬೇಕಾಗುತ್ತಿತ್ತು. ಆದುದರಿಂದ ಈ ಕಟ್ಟುಪಾಡುಗಳಿಗೆ 'ಸ್ಮೃತಿ'ಎನ್ನುವ ಹೆಸರು ಬಂದಿತು. ಉದಾಹರಣೆಗೆ ಮನುಸ್ಮೃತಿ. ಸ್ಮೃತಿಯನ್ನು ತಿಳಿದ ಬ್ರಾಹ್ಮಣರು
’ಸ್ಮಾರ್ತ ಬ್ರಾಹ್ಮಣರು’.
ಧ್ರುವ ಎಂದರೆ ಶಾಶ್ವತವಾದ ಎನ್ನುವ ಅರ್ಥವಿದೆ. ಭೂಮಂಡಲದ ಉತ್ತರ ದಿಕ್ಕು ಯಾವಾಗಲೂ ಒಂದೇ ನಕ್ಷತ್ರವನ್ನು
ತೋರಿಸುವದರಿಂದಲೇ ಆ ನಕ್ಷತ್ರಕ್ಕೆ ’ಧ್ರುವ ನಕ್ಷತ್ರ’ ಎನ್ನುತ್ತಾರೆ. ಇಂಗ್ಲೀಶಿನಲ್ಲಿ ಭೂಗೋಲದ ಧ್ರುವಗಳಿಗೆ (North)Pole ಹಾಗು (South)Pole ಎನ್ನುವದು ನಿಮಗೆ ಗೊತ್ತಿದೆ. ಇವೆರಡೂ ಧ್ರುವಗಳು ವಿರುದ್ಧ ದಿಕ್ಕಿನಲ್ಲಿ ಇರುವದರಿಂದಲೇ ಇಂಗ್ಲೀಶಿನಲ್ಲಿ Polarisation ಎನ್ನುವ ಪದದ ನಿರ್ಮಾಣವಾಯಿತು. ಇದರ ಕನ್ನಡೀಕರಣವೇ
’ಧ್ರುವೀಕರಣ’. ಇದು ಸಂಸ್ಕೃತ ಧ್ರುವದಿಂದ ತಯಾರಾದ ಪದವಲ್ಲ.
ಧೃವ ಎನ್ನುವ ಪದ ಸಂಸ್ಕೃತದಲ್ಲಿ ಇಲ್ಲ.
ಅಮರ,
ಧ್ರುವ ಪದದ ಬಗೆಗೂ ಬರೆದಿದ್ದೇನೆ. ಇಂತಹ ಪದಗಳು ಗಮನಕ್ಕೆ ಬಂದಂತೆ ಬರೆಯುತ್ತೇನೆ. ನಿಮ್ಮ ಗಮನಕ್ಕೆ ಬಂದ ಪದಗಳ ಬಗೆಗೆ ದಯವಿಟ್ಟು ನೀವೂ ತಿಳಿಸಿರಿ.
ಅಮರ,
ಗ್ರಹ ಹಾಗು ಗೃಹ ಪದಗಳನ್ನೂ ಸಹ ಕೆಲವರು ತಪ್ಪಾಗಿ ಬಳಸುತ್ತಿರುವದು ನೆನಪಿಗೆ ಬಂದಿತು.
ಗೃಹ= ಮನೆ
ಆದುದರಿಂದ 'ಗೃಹಿಣೀ ಗೃಹಮುಚ್ಯತೆ'.
ಗ್ರಹ ಎಂದರೆ ’planet’.
ಎರಡನೆಯ ಅರ್ಥ ಗ್ರಹ ಎಂದರೆ 'ಹಿಡಿಯುವದು'
ಆದುದರಿಂದ 'ಗ್ರಹಣ'ಎಂದರೆ ಹಿಡಿದುಕೊಳ್ಳುವಿಕೆ.
'ಪಾಣಿಗ್ರಹಣ' ಎಂದರೆ 'ಕೈಹಿಡಿಯುವದು'.
ಹಾಗು 'ಅನುಗ್ರಹ' ಎಂದರೆ blessing
ಸುನಾಥರೇ,
ಪ್ರೊ. ಜಿ. ವೆಂಕಟಸುಬ್ಬಯ್ಯ ಪ್ರಿಸಂ ಕನ್ನಡ, ಇಂಗ್ಲಿಷ್ ನಿಘಂಟಿನಲ್ಲಿ "ಶೃತಿ" ಪದವನ್ನ ಬಳಸಿದ್ದಾರೆ .... ಒಮ್ಮೆ ನೋಡಿ, ನನ್ಗೆ ಸರಿಯಾಗಿ ತಿಳಿಯಲಿಲ್ಲ.
http://www.baraha.com/kannada/index.php
ಸುನಾಥ ಅವರ:
’ಉಚ್ಚಾರ’ ಮತ್ತು ’ಉಚ್ಚ’ ಶಬ್ದಗಳ ತಪ್ಪು ಬಳಕೆ ಹೆಚ್ಚಾಗುತ್ತಿದೆ. ನಾನು ಗಮನಿಸಿದ್ದು ತಪ್ಪಾಗಿರದಿದ್ದ ಪಕ್ಷದಲ್ಲಿ ನಮ್ಮ ಬೆಂಗಳೂರು ರಾಜ್ಯದ ಹೈಕೋರ್ಟಿನ ಮೇಲೆ ’ಉಚ್ಛ ನ್ಯಾಯಾಲಯ’ ಎಂದು ಬರೆಯಲಾಗಿದೆ. ಕೆಲ ವರ್ಷಗಳ ಹಿಂದೆ ಅದನ್ನು ನೋಡಿ ಶಾಕ್ ಆಗಿತ್ತು. (ಈ ಮಾಹಿತಿ ತಪ್ಪಾಗಿದ್ದಲ್ಲಿ, ಗೊತ್ತಿದ್ದವರು ತಿದ್ದಬೇಕು.)
ಅಮರ,
ಸಂಸ್ಕೃತದಲ್ಲಿ 'ಶೃ'ಎನ್ನುವ ಧಾತುವಿಗೆ 'ಕುದಿಸು'ಎನ್ನುವ ಅರ್ಥವಿದೆ.'ಶೃತ'ಎನ್ನುವ ವಿಶೇಷಣಕ್ಕೆ ತುಂಡು ತುಂಡಾದ, ನಷ್ಟವಾದ, ಜೀರ್ಣವಾದ ಎನ್ನುವ ಅರ್ಥವಿದೆ.ಆದರೆ, 'ಶೃತಿ'ಎನ್ನುವ ಪದವಿಲ್ಲ. ವೆಂಕಟಸುಬ್ಬಯ್ಯನವರು 'ಶೃತಿ'ಎನ್ನುವ ಅಪ್ದವನ್ನು ಎಲ್ಲಿಂದ ಹುಡುಕಿದರು ಹಾಗು ಅದಕ್ಕೆ 'ಏಕತಾನತೆ'ಅನ್ನುವ ಅರ್ಥವನ್ನು ಹೇಗೆ ನೀಡಿದರು ಎನ್ನುವದು ಅರ್ಥವಾಗುತ್ತಿಲ್ಲ.
Anyway, ಹುಡುಕಿ, point out ಮಾಡಿದ್ದಕ್ಕೆ ಧನ್ಯವಾದಗಳು.
ಚಕೋರ,
ಉಚ್ಚ ನ್ಯಾಯಾಲಯದ ಮೇಲೆ 'ಉಚ್ಛ'ಎಂದು ಬರೆದ 'ಹುಚ್ಛ'ರು ಯಾರೊ ಅಂತ ಆಶ್ಚರ್ಯವಾಗುತ್ತಿದೆ.
ಕಾಕಾ, ನಾನೂ ಇದುವರೆಗೆ, ಅದು ಹೇಗೋ, "ಉಚ್ಛಾರ"ವೇ ಸರಿಯೆಂದು ತಿಳಿದಿದ್ದೆ. ತಪ್ಪು ತೋರಿಸಿದ್ದಕ್ಕೆ ಧನ್ಯವಾದಗಳು.
ನೀವು ಹೇಳಿರುವ ಸಮಸ್ಯೆಗಳಿಗೆಲ್ಲ ಒಂದೆ ಪರಿಹಾರ.
ನಾವು ಕನ್ನಡದಿಂದ ಮಹಾಪ್ರಾಣವನ್ನು ತೆಗೆದುಹಾಕುವುದೇ ಒಳ್ಳೆಯದು ಯಾಕಂದರೆ ದೊಡ್ಡ ದೊಡ್ಡ ಕಲಿತ ಮಂದಿಯೇ ಈ ತರ ಮಹಾಪ್ರಾಣ, ಅಲ್ಪಪ್ರಾಣ ಬದಲಿಸಿ ಬರೆದು ತಪ್ಪುಗಳನ್ನು ಎಸಗುತ್ತಿದ್ದಾರೆ.
ಮಾದರಿ:
೧. ಶುಭಾಷಯ
೨. ಹಾರ್ಧಿಕ
ಯಾರಿಗೆ ಬೇಕು ಈ ಸಕ್ಕದ ವ್ಯಾಕರಣ?? ನಮಗೆ ಗೊತ್ತಿರುವ ನುಡಿಬಿಟ್ಟು ಯಾರದನ್ನೊ ಕಲಿಯ ಹೊರಟರೆ ಈಗೆ ಆಗುವುದು. ಅಲ್ಪ ಪ್ರಾಣ ಮಪ್ರಾಣ ಅದು ಆ ಸಕ್ಕಕ್ಕೆ ಸೇರಿದ ನಿಯಮ. ಸುಲಿದ ಬಾಳೆಹಣ್ಣಿನಮತಿರುವ ಕನ್ನಡವನ್ನು ಬಳಸಿತರೆ ಈ ಪಡಿಪಾಟಲವೇ ಇಲ್ಲ. ಹೌದು ನೀವು ಪುರೋಹಿತರೆ? ನಿಮ್ಮ ಬ್ಲಾಗ್ ತುಂಬಾ ಬರೀ ಸಕ್ಕ. ಕನ್ನಡ ಗೊತ್ತಿಲ್ಲವೆ ನಿಮಗೆ? ಇನ್ನು ಇದೇ ರೀತಿ ಸಕ್ಕದ ನುಡಿ ಕನ್ನಡದಲ್ಲಿ ಸೇರಿಸಿ ಕೊಳಕಿಡಿಸ ಬೇಡಿ.
ಕನ್ನಡಿಗ ..........
Post a Comment