Tuesday, June 17, 2008

ಕನ್ನಡಕ್ಕೆ ಬಂದ ಕುತ್ತು

ಈ ಲೇಖನದ ಹಿಂದಿನ ಲೇಖನದ ಬಗೆಗೆ ಶ್ರೀ ಹರೀಶರು ತಮ್ಮ commentನಲ್ಲಿ ನೀಡಿದ ಅಭಿಪ್ರಾಯದ ಜೊತೆಗೆ ಒಂದು ಕೊಂಡಿಯನ್ನು ಕೊಟ್ಟಿದ್ದಾರೆ. ಈ ಕೊಂಡಿಗೆ ಹೋದಾಗ, ಶ್ರೀ ಕಿ.ರಂ.ನಾಗರಾಜರು ಕನ್ನಡವನ್ನು ಮಾರ್ಪಡಿಸಲು ನೀಡಿದ ಅಮೂಲ್ಯ ಸಲಹೆಗಳನ್ನು ಓದಿ ನನ್ನ ಕಣ್ಣಾಲಿಗಳು ತುಂಬಿ ಬಂದವು. ಆ ಲೇಖನದಲ್ಲಿ ದೊರೆತ ಕೊಂಡಿಯ ಮೂಲಕ ‘ಕೆಂಡಸಂಪಿಗೆ’ಯಲ್ಲಿ ಪ್ರಕಟವಾದ ಶ್ರೀ ಡಿ.ಎನ್.ಶಂಕರ ಭಟ್ಟರ ಪುಸ್ತಕದ ಭಾಗವನ್ನು ಓದಿದೆ. ಈ ಪುಸ್ತಕವನ್ನು ಈಗಾಗಲೇ ನಾನು ಓದಿದ್ದೆ. ಓದಿ ಹೈರಾಣಾಗಿದ್ದೆ. ಶ್ರೀ ಡಿ.ಎನ್. ಶಂಕರಭಟ್ಟರು ಬಯಸಿದಂತೆ ನಡೆದರೆ, ಕನ್ನಡ ನುಡಿಯು ಕುಲಗೆಟ್ಟು ಹೋಗುವದರಲ್ಲಿ ಸಂಶಯವಿಲ್ಲ.

ಭಾಷೆ ನಿಂತ ನೀರಲ್ಲ; ಬದಲಾಗುತ್ತಲೇ ಇರಬೇಕು. ಬದಲಾವಣೆ ಎಂದರೆ ವಿಕಾಸಗೊಳ್ಳಬೇಕೆ ಹೊರತು, ಕುಂಠಿತವಾಗುತ್ತ ಹೋಗುವದಲ್ಲ. ಯಾವ ಭಾಷೆಯೂ ತನ್ನಷ್ಟಕ್ಕೇ ವಿಕಾಸಗೊಳ್ಳುವದಿಲ್ಲ. ಪರಭಾಷೆ ಹಾಗು ಪರಕೀಯ ಸಂಸ್ಕೃತಿಗಳ ಸಂಪರ್ಕದಿಂದಲೇ ಭಾಷೆಯ ವಿಕಾಸ ಸಾಧ್ಯವಾಗುವದು.

ಸಂಸ್ಕೃತ ಭಾಷೆಯ ಸಂಪರ್ಕದಿಂದ ಕನ್ನಡಕ್ಕೆ ಲಾಭವಾದಂತೆ, ಸಂಸ್ಕೃತಕ್ಕೂ ಆಗಿದೆ. ಭಾರತೀಯ ಭಾಷೆಗಳ ಸಂಪರ್ಕದಿಂದ, ಹಾಗೂ ತನ್ನ ಕೊಲೊನಿಯ ಭಾಷೆಗಳ ಸಂಪರ್ಕದಿಂದ ಇಂಗ್ಲೀಶಿಗೂ ಲಾಭವಾಗಿದೆ. ಆದುದರಿಂದ ಸಂಕುಚಿತ ಮನಸ್ಸನ್ನು, ಸಂಕುಚಿತ ಬುದ್ಧಿಯನ್ನು ತೊರೆದು, ಸಂಸ್ಕೃತ, ಇಂಗ್ಲಿಶ್ ಹಾಗು ಇತರ ಭಾಷೆಗಳ ಸಂಪರ್ಕದಿಂದ ಕನ್ನಡ ವಿಶಾಲವಾಗುವಂತೆ, ಕನ್ನಡಕ್ಕೆ ಲಾಭವಾಗುವಂತೆ ಪ್ರಯತ್ನಿಸುವದರಲ್ಲಿಯೇ ಜಾಣತನವಿದೆ.

ಕನ್ನಡದಲ್ಲಿ ಶಂಕರಭಟ್ಟರು ತರಬಯಸುವ ಕ್ರಾಂತಿಯಲ್ಲಿ ಎರಡು ಹೆಜ್ಜೆಗಳಿವೆ:
೧) ಲಿಪಿಕ್ರಾಂತಿ
೨) ಪದಕ್ರಾಂತಿ

ಶಂಕರಭಟ್ಟರು ವಿವರಿಸುವ ಪ್ರಕಾರ ಕನ್ನಡದಲ್ಲಿ ೫೨ ಅಕ್ಷರಗಳು ಇದ್ದದ್ದು ಹೆಚ್ಚಾಯಿತು; ೩೨ ಅಕ್ಷರಗಳೇ ಸಾಕು; ಬಾಕಿ ೨೦ ಅಕ್ಷರಗಳು ಅನವಶ್ಯಕ ಎಂದು ಅವರ ಅಭಿಪ್ರಾಯ. ಈ ವಿಷಯದಲ್ಲಿ ಅವರಿಗೆ role model ಅಂತ ಇರುವದು ತಮಿಳು ಲಿಪಿ. ತಮಿಳು ಲಿಪಿಯು inadequate ಇದ್ದದ್ದು ಅವರಿಗೆ ಶ್ರೇಷ್ಠತೆಯಾಗಿ ಕಾಣುತ್ತಿರುವದು, ಕನ್ನಡದ ದುರ್ದೈವ. ಕಡಿಮೆ ಧ್ವನಿಸಂಕೇತಗಳು ಇರುವದರಿಂದ ತಮಿಳು ಭಾಷೆಗೆ ಆದ ಹಾನಿಯ ಬಗೆಗೆ ಅವರ ಗಮನವಿಲ್ಲ.

ಈಗ ನೋಡಿ, ಕನ್ನಡದಲ್ಲಿ ಗೆಳತಿ ಹಾಗು ಕೆಳದಿ ಎನ್ನುವ ಎರಡು ಪದಗಳಿವೆ. ಗೆಳತಿ ಎಂದರೆ friend, ಕೆಳದಿ ಎಂದರೆ ಮಡದಿ. ತಮಿಳಿನಲ್ಲಿ ಗೆಳತಿ ಹಾಗು ಕೆಳದಿ ಪದಗಳನ್ನು ಒಂದೇ ರೀತಿಯಾಗಿ ಬರೆಯುತ್ತಾರೆ. (---I believe). ಶಂಕರಭಟ್ಟರ ಸಮರ್ಥನೆ ಏನೆಂದರೆ, ಸಂದರ್ಭದ ಪ್ರಕಾರ ಅರ್ಥ ಮಾಡಿಕೊಳ್ಳಲು ತಮಿಳು ಬುದ್ಧಿಗೆ ಸಾಧ್ಯವಿದೆ ಎನ್ನುವದು. OK,ಕೆಳಗಿನ ಪ್ಯಾರಾ ಓದಿರಿ:

“ರಮಾ ರಾಜನ ಕೆ(ಗೆ)ಳದಿ(ತಿ). ಇಬ್ಬರೂ ಜೊತೆಯಾಗಿ ಹೊಟೆಲ್ಲಿನಲ್ಲಿ ಮಸಾಲೆ ದೋಸೆ ತಿಂದು, ಪಾರ್ಕಿನಲ್ಲಿ ಸರಸವಾಡಿದರು…….”.
ಇದೇ ರೀತಿಯಾಗಿ ಒಂದು ಇಡೀ ಅಧ್ಯಾಯವನ್ನೇ ಬರೆಯಬಹುದು. ಓದುಗರಿಗೆ ರಮಾ ಹಾಗು ರಾಜನ ಸಂಬಂಧ ಏನೆಂಬುದು ಗೊತ್ತಾಗುವದೇ ಇಲ್ಲ,….ಸಂದರ್ಭ ಬರುವವರೆಗೂ. ಆದುದರಿಂದ ತಮಿಳು ಭಾಷೆ suspense novels ಬರೆಯಲು ಯೋಗ್ಯವಾದೀತೆ ಹೊರತು, ಸರಾಗ ಓದಿಗಲ್ಲ.

ಆದರೆ ನನ್ನ point ಇದಲ್ಲ. ಧ್ವನಿಸಂಕೇತಗಳು ಕಡಿಮೆಯಾಗಿದ್ದರಿಂದ ಪದಗಳ ಸಂಖ್ಯೆ ಕಡಿಮೆಯಾಗುವದು ಎನ್ನುವದು ಗಣಿತದಲ್ಲಿಯ permutations and combinations ಬಲ್ಲ ಯಾರಿಗಾದರೂ ಗೊತ್ತಾಗುವದು.
ಇಂಗ್ಲಿಶ್ ಲಿಪಿ non-phonetic ಇರುವದರಿಂದ ಅದೇ ಆ ಭಾಷೆಗೆ ಒಂದು advantage ಆಗಿಬಿಟ್ಟಿದೆ. ಬೇಕಾಬಿಟ್ಟಿಯಾಗಿ ಅಕ್ಷರ ಜೋಡಣೆ ಮಾಡುವದರಿಂದ ಅವರು ಯಾವ ಧ್ವನಿಯನ್ನಾದರೂ ಪದವನ್ನಾಗಿ ಬರೆಯಬಲ್ಲರು. ಆದರೆ phonetic script ಹೊಂದಿರುವ ತಮಿಳಿನಲ್ಲಿ, ಕಡಿಮೆ ಅಕ್ಷರಗಳಿರುವದರಿಂದ ಅದರ ಪದಸಂಪತ್ತೂ ಸಹ ಕಡಿಮೆಯಾಗುತ್ತದೆ ಎನ್ನುವದು just a mathematical understanding.

ಇಂತಹ ಅನಾಗರಿಕ ಲಿಪಿಯನ್ನು ಅನುಸರಿಸಲು, ಶಂಕರಭಟ್ಟರು ಕನ್ನಡಿಗರಿಗೆ ಯಾಕೆ ಸಲಹೆ ನೀಡುತ್ತಿದ್ದಾರೆ? ಕನ್ನಡದ ಮೇಲಿನ ದ್ವೇಷದಿಂದಲೆ? ಸಂಸ್ಕೃತದ ಮೇಲಿನ ದ್ವೇಷದಿಂದಲೆ? ಅಥವಾ ಲಿಪಿ ಅನಾಗರಿಕವಾದಾಗ, ಆ ಭಾಷೆಗೆ Classical Status ಸಿಗುವದು ಎನ್ನುವ ಕಲ್ಪನೆಯಿಂದಲೆ?

ಊಂ.. ಹೂಂ…. ಅಲ್ಲ. ತಮಗೆ ‘ಕೆಳವರ್ಗ’ದ ಬಗೆಗೆ ಇರುವ ಕಳಕಳಿಯಿಂದ ಎಂದು ಶಂಕರ ಭಟ್ಟರು ತಮ್ಮ ಪುಸ್ತಕದಲ್ಲಿ ಘೋಷಿಸಿದ್ದಾರೆ. ಅದರ ಸತ್ಯಾಸತ್ಯತೆಯನ್ನು ಮುಂದಿನ ಲೇಖನದಲ್ಲಿ ಪರಿಶೀಲಿಸೋಣ.

15 comments:

ತೇಜಸ್ವಿನಿ ಹೆಗಡೆ said...

ಕಣ್ತೆರೆಸುವ ಲೇಖನ. ಅದೇಕೋ ಕಾಣೆ ಕೆಲವು ಕನ್ನಡ ಭಕ್ತರಿಗೆ(ಅವರೇ ಹೇಳಿಕೊಳ್ಳುವಂತೆ) ಸಂಸ್ಕೃತವನ್ನು ಕಂಡರೆ ಆಗದು. ಇಂತಹ ಕೂಪಮಂಡೂಕಗಳಿಂದಲೇ ಬಹುಶಃ ಕನ್ನಡ ಇಂದು ‘ಎನ್ನಡ’ವಾಗುತ್ತಿರುವುದು!

sunaath said...

ಸರಿಯಾಗಿ ಹೇಳಿದಿರಿ, ತೇಜಸ್ವಿನಿ!

ಅಂತರ್ವಾಣಿ said...

school nalli grammar nalli kalidE irodanna nim lEkhanadinda kaliya bahudu

Anonymous said...

ಸುನಾಥ ಗುರುಗಳ:
ನಿಮ್ಮ ಈ ಲೇಖನ ಸರಣಿ ಸ್ಪಷ್ಟವಾಗಿಯೂ ಖಂಡತುಂಡವಾಗಿಯೂ ಇದೆ. ವಿಶೇಷವಾಗಿ ಹಿಂದಿನ ಲೇಖನ ಮತ್ತು ಇದು. ಇವು ಅನೇಕ ಸ್ತರಗಳಲ್ಲಿ ನನಗೆ ಮೆಚ್ಚಿಗೆಯಾದುವು. ಎರಡಕ್ಕೂ ಇಲ್ಲೇ ಕಮೆಂಟು ಬರೆಯುತ್ತಿದ್ದೇನೆ. ಉದ್ದ ಕಮೆಂಟಿಗೆ ಮೊದಲೇ ಕ್ಷಮೆ ಕೇಳುತ್ತೇನೆ.

ಮೊದಲಿಗೆ, ಸಂಸ್ಕೃತವೇ ಎಲ್ಲ ಭಾರತೀಯ ಭಾಷೆಗಳ ಮೂಲ ಎಂದು ಸುಮ್ಮನೆ ವಾದ ಮಾಡುವವರು ಹಾಗೂ ಕನ್ನಡವನ್ನು ಸಂಸ್ಕೃತದಿಂದ "ಮುಕ್ತ"ಗೊಳಿಸಬೇಕು ಎಂದು ಹಲುಬುವವರು -- ಇಬ್ಬರ ವಾದದಲ್ಲೂ ಹುರುಳಿಲ್ಲವೆಂದು ನೀವು ಸ್ಪಷ್ಟವಾಗಿ ಹೇಳಿದ್ದು ತುಂಬ ಸೂಕ್ತ. ಒಂದು ಭಾಷೆಯನ್ನು ಶಬ್ದಸಂಪತ್ತು (ಹಾಗೂ ಅದು ಒದಗಿಸುವ ಧ್ವನಿಗಳು) ಹೆಚ್ಚಿದ್ದಷ್ಟು ಅದು ಹೆಚ್ಚು expressive ಆಗುತ್ತದೆ ಅನ್ನುವುದು ಸರಳ ವಿಚಾರ. ಭಾಷೆಯ ಶಬ್ದಗಳನ್ನೂ ಧ್ವನಿಗಳನ್ನೂ ತೆಗೆದುಹಾಕಿ ಭಾಷೆಯನ್ನು ಬೆಳೆಸುತ್ತೇನೆ ಎಂಬ ಹುಂಬತನಕ್ಕೇನು ಹೇಳುವುದು? ಕನ್ನಡ ಭಾಷೆಯನ್ನು ಸುಲಭಗೊಳಿಸುವ ಉದ್ದಿಶ್ಯವಿದ್ದಲ್ಲಿ ಅದಕ್ಕೆ ಸ್ವಾಗತವಿದೆ: ಮೂಲತಃ ಕನ್ನಡ ಶಬ್ದಗಳು ಸರಳ ಹಾಗೂ ಸುಂದರ; ಅಂಥವನ್ನು ಹೆಚ್ಚು ಹೆಚ್ಚು ಬಳಸಿ, ಅಥವಾ ಹೊಸವನ್ನು ರಚಿಸಿ ಪ್ರಸರಿಸಿದರೆ, ಅದು ಬೇರೆ ಮಾತು. ಅಥವಾ ಕಳೆದು ಹೋಗುತ್ತಿರುವ ಕನ್ನಡ ಶಬ್ದಗಳನ್ನು ಚಲಾವಣೆಗೆ ತಂದರೆ ಅದಕ್ಕೆ ಮಹತ್ವವಿರುತ್ತದೆ. ಆದರೆ ಕನ್ನಡದ್ದೇ ಆಗಿಬಿಟ್ಟಿರುವ ಶಬ್ದಗಳನ್ನು ತೆಗೆದು ಏನು ಸಾಧಿಸಿವವರು? ಶಂಕರಭಟ್ಟರ ಪುಸ್ತಕ ಓದಿಲ್ಲ. (ಕ್ಷಮಿಸಿ, ಅವರ ಹೆಸರನ್ನು "ಕನ್ನಡ"ದಲ್ಲಿ ಹೇಗೆ ಬರೆಯುವುದು ಗೊತ್ತಿಲ್ಲ.) ಓದುವ ಮನಸ್ಸೂ ಇಲ್ಲ. ಓದಿದರೆ ನನ್ನ ಕಣ್ಣಾಲಿಗಳೂ ತುಂಬಿಬರುತ್ತವೆ. ನಕ್ಕು ನಕ್ಕು!

ಎರಡನೆಯದಾಗಿ, ಪ್ರಾದೇಶಿಕ ಆಡುಮಾತಿನಲ್ಲಿ ಶಬ್ದಗಳು ಅಪಭ್ರಂಶವಾಗುವುದಕ್ಕೂ (ಅಥವಾ ಶಬ್ದಗಳು ಪುಸ್ತಕೀಯವಲ್ಲದಿರುವುದಕ್ಕೂ) ಮತ್ತು blatant ತಪ್ಪುಗಳಾದ ಮಹಾಪ್ರಾಣ ಮೊದಲಾದ ದೋಷಗಳಿಗೂ ಹೋಲಿಸುವುದು ಇನ್ನೊಂದು ಹುಂಬತನ. ಆಡುಮಾತಿನಲ್ಲಿ ’ಬಹಳ’ ಹೋಗಿ ’ಭಾಳ’ ಆಗಬಹುದು; ’ನಸುಕಿನಲ್ಲಿ’ ಎನ್ನುವುದು ’ನಶೀಕ್ಲೆ’ ಆಗಬಹುದು; (ಅಥವಾ ’ಒತಾರೆ’ ’ಬಡ್ಡೆತ್ತುದ್ದು’). ಇವು ತಪ್ಪೆಂದರೆ ಪ್ರಾದೇಶಿಕ ನುಡಿಗಟ್ಟೆ ತಪ್ಪು! ಪ್ರಾದೇಶಿಕ idiom ಇಲ್ಲದಲ್ಲಿ ಮಾತ್ರ ಆಡುಮಾತು ಬರೆಹದ ಭಾಷೆಗೆ ಅತ್ಯಂತ ಸಮೀಪದಲ್ಲಿರುತ್ತದೆ. ನಮ್ಮಲ್ಲೂ ಕೆಲ ಪ್ರದೇಶಗಳಲ್ಲಿ ಹೀಗೆ ಇದೆ. ಅದು ಸರಿಯೂ ಅಲ್ಲ, ತಪ್ಪೂ ಅಲ್ಲ. ಕೇವಲ ವಸ್ತುಸ್ಥಿತಿ.

ಆದರೆ, ತಪ್ಪೆನ್ನುವುದು ತಪ್ಪೇ. ಮೇಲಿನ ’ತಪ್ಪು’ಗಳಿಗೂ ’ಜನಾರ್ಧನ’ ’ಧಾಳಿ’ ’ಉಚ್ಛಾರ’ ಇವಕ್ಕೂ ಹೋಲಿಸಲು ಸಾಧ್ಯವಿಲ್ಲ. ಎಲ್ಲ ಕಡೆ ತಪ್ಪು ಪ್ರಯೋಗಗಳು ನಡೆಯುತ್ತಲೇ ಇವೆ. ಉತ್ತರ ಕರ್ನಾಟಕದಲ್ಲಿ ಎಲ್ಲೆಡೆ ’ತಂಗುದಾನ’ ಎಂದು ಬರೆಯಲಾಗುತ್ತಿದೆ. ಇದು ಭಾಷೆಯ ಬಳಕೆಯಲ್ಲಿ ಮಾಡಿದ ತಪ್ಪು. ಮೇಲೆ ಹೇಳಿದ ಕೆಟಗರಿಯಲ್ಲಿ ಬರುವುದಿಲ್ಲ ಇಂಥವು.

ಈಗೀಗ ಬರೆಹದಲ್ಲಿ ಕೂಡ ’ಎ’ ಮತ್ತು ’ಯೆ’ ಇವುಗಳ ವ್ಯತ್ಯಾಸವೂ ಮರೆಯುತ್ತಿದೆ: ’ಯೆಲ್ಲಿ’ ’ಯೇನು’ ’ಯೆಷ್ಟು’! ಕನ್ನಡವನ್ನು ಇಂಗ್ಲಿಶ್‍ನಲ್ಲಿ transliterate ಮಾಡುವಾಗಲಂತೂ ಹೆಚ್ಚಾಗಿ ’yenu' 'yelli' ಇವೇ ಬಳಕೆಯಾಗುತ್ತಿವೆ.

***

ಕೊನೆಯಲ್ಲಿ, ತಮಿಳಿನ ಅಕ್ಷರಗಳ ಬಗ್ಗೆ ಮಾತಾಗುತ್ತಿದೆಯಾದ್ದರಿಂದ, ಒಂದು ಹಾಸ್ಯ ಪ್ರಸಂಗ. ತಮಿಳರಲ್ಲಿ ’ಕಿರುಬಾ ಶಂಕರ್’ ಎನ್ನುವುದು ಸಾಕಷ್ಟು ಜನಪ್ರಿಯ ಹೆಸರು. ನಾನು ಇದೇನಿದು, ಇವರೇನು ಕಿರುಬರೋ ಎಂದು ಮಜಾ ಅನುಭವಿಸಿದ್ದೆ. ಬಹಳ ದಿನಗಳ ನಂತರ ತಮಿಳು ಬಲ್ಲ ನನ್ನ ಗೆಳೆಯನಿಂದ ತಿಳಿದುಬಂದದ್ದೆಂದರೆ, ’ಕಿರುಬಾ’ ಇದು ’ಕೃಪಾ’ ಶಬ್ದದ ತಮಿಳು ರೂಪ! ಇದು ಕೃಪಾಶಂಕರನು ಕಿರುಬನಾದ ಬಗೆ.

ಸುನಿಲ್ ಜಯಪ್ರಕಾಶ್ said...

>> ಆದುದರಿಂದ ತಮಿಳು ಭಾಷೆ suspense novels ಬರೆಯಲು ಯೋಗ್ಯವಾದೀತೆ ಹೊರತು, ಸರಾಗ ಓದಿಗಲ್ಲ.

ಇದು ತುಂಬಾ ತಪ್ಪು, ಸುನಾಥರೆ. ನೀವು ಯಾಕೆ ಹೀಗೆ ತಿಳಿದುಕೊಂಡಿದ್ದೀರೋ ನನಗೆ ತಿಳಿಯಲೊಲ್ಲದು. ಒಬ್ಬ ತಮಿಳಿಯನ್ನಿಗೆ ಹೇಳಿ ಈ ರೀತಿ.

>> ಶಂಕರಭಟ್ಟರು ---'ಕೆಳವರ್ಗದ'--
ಇದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾನು ನನ್ನ ಅನುಭವದಲ್ಲಿ ಆಗಿರುವ/ಆಗುತ್ತಿರುವ ಒಂದು ಪ್ರಾಕ್ಟಿಕಾಲ್ ಉದಾಹರಣೆ ನೀಡಬಲ್ಲೆ. ನೋಡಿ, ನನಗೆ ಒಬ್ಬ ಗೆಳೆಯನಿದ್ದಾನೆ. ಅವರ ಮನೆಗಳಲ್ಲಿ "ಓಯ್ತದೆ", "ಬತ್ತದೆ", "ಬತ್ತಾ ಅಯ್ತೆ" ಈ ರೀತಿಯ ಕನ್ನಡವನ್ನು ಮಾತನಾಡುತ್ತಾರೆ. ಆದರೆ ನಮ್ಮ ಮನೆಯ "ಸುಸಂಸ್ಕೃತ" ಕನ್ನಡಕ್ಕಿಂತ ಎಷ್ಟೋ ಹೆಚ್ಚು ಕನ್ನಡ ಪದಗಳನ್ನು (ಧಾತುಗಳನ್ನು) ಬಳಸುತ್ತಾರೆ. ಆದರೆ ಅವನಿಗೆ ತುಂಬಾ ಚೆನ್ನಾಗಿ ಇಂಗ್ಲೀಷ್ ಬರುತ್ತೆ. ಟೆಕ್ನಿಕಲಿ ತುಂಬಾ ಅಚೀವ್ ಮಾಡಿದ್ದಾನೆ. ಆಫೀಸಿನಲ್ಲಿ ಒಳ್ಳೆಯ ಸ್ಥಾನವನ್ನು ಪಡೆದಿದ್ದಾನೆ. ಆದರೆ ಅವನೂ ಕನ್ನಡಿಗನೇ ಆದರೂ ನಮ್ಮಗಳೊಡನೆ(=ಕನ್ನಡಿಗರೊಡನೆ) ಮಾತನಾಡಲು ಅವನಿಗೆ ಮುಜುಗರ. ಏಕೆಂದರೆ ಅವನನ್ನು ನಾವು ಆಡಿಕೊಳ್ತೀವಿ ಅಂತ. ಹಾಗಾಗಿ ಅವನು ನಮ್ಮೊಡನೆ ಇಂಗ್ಲೀಷಿನಲ್ಲಿ ಮಾತಾಡ್ತಾನೆ. ಇಲ್ಲಿ, ಕೆಳವರ್ಗ, ಮೇಲುವರ್ಗ ಮುಂತಾದ್ದನ್ನು ಪಕ್ಕಕ್ಕಿಡಿ. ಆದರೆ ಒಬ್ಬ ಕನ್ನಡಿಗ, ಮತ್ತೊಬ್ಬ ಕನ್ನಡಿಗನ ಜೊತೆ ಇಂಗ್ಲೀಷಲ್ಲಿ ಮಾತಾಡುವುದನ್ನು ಪ್ರೇರೇಪಿಸುತ್ತಿರುವದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ ? ಇದು ಒಟ್ಟಾರೆ ಕನ್ನಡಸಮಾಜದ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರತ್ತೆ ಅನ್ನೋದನ್ನು ಯೋಚಿಸಿ ಹೇಳಿ.

ಇಲ್ಲಿ ನಾನು ಪ್ರಸ್ತಾಪಿಸಿರುವುದು ಉದಾಹರಣೆಯಾಗಲೀ, ಕಪೋಲಕಲ್ಪಿತವಾದ್ದದಾಗಲೀ ಅಲ್ಲ. ನನ್ನ ದಿನನಿತ್ಯದಲ್ಲಿ ಆಗುತ್ತಿರುವ ಒಂದು ಅನುಭವ.

ಸುಪ್ತದೀಪ್ತಿ suptadeepti said...

ಯೋಚನೆಗೆ ಹಚ್ಚುವ ಬರಹ, ಕಾಕಾ.
ಪ್ರಾದೇಶಿಕ ಭಿನ್ನತೆಗಳನ್ನು ಒಳಗೂಡಿಸಿಕೊಂಡೂ ಒಂದು ಭಾಷೆ ಬೆಳೆಯಬೇಕಾದರೆ ಅದರಲ್ಲಿನ ಅಕ್ಷರ, ಪದ, ಪ್ರಯೋಗಗಳನ್ನು ಬೆಳೆಸಬೇಕು, ಕೀಳುವುದಲ್ಲ. "ಆ ಪದ ಸಂಸ್ಕೃತ, ಈ ಪದ ಆಂಗ್ಲ, ಇದು ದೇಶೀಯ, ಅದು ಆರ್ಯ" ಅನ್ನುವ ವಾದಗಳೆಲ್ಲ ಕೂಪಮಂಡೂಕಗಳದ್ದು. ಕನ್ನಡವನ್ನು (ಯಾವುದೇ ಭಾಷೆಯನ್ನು) ಉಳಿಸಿ ಬೆಳೆಸುವತ್ತ ನೋಟ ಹರಿಸುವವರು ಇಂಥ ಕ್ಷುಲ್ಲಕ ಮೊಂಡುವಾದ ಮಾಡದೆ ವಿಶಾಲದೃಷ್ಟಿ ಬೆಳೆಸಿಕೊಂಡರೆ ಉತ್ತಮ.

ಮತ್ತೊಮ್ಮೆ, ನಿಮ್ಮ ಲೇಖನಗಳಿಗೆ ಧನ್ಯವಾದಗಳು, ಕಾಕಾ.

Anonymous said...

ಕನ್ನಡಕ್ಕೆ 52 ಅಕ್ಷರಗಳೇ ಚಂದ. ಯಾವದೇ ಭಾಷೆಗೆ ಎಷ್ಟೇ ಇರಲಿ. ನಮಗೇನು ? ಮಹಲಿಂಗರಂಗ ಕವಿಯು ಎಂದೋ ಹೇಳಿದ್ದಾನೆ "ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ, ಸುಲಭವಹ ಕನ್ನಡದ ನುಡಿಯದು ಸಾಲದೇ, ಸಂಸ್ಕೃತದಲಿನ್ನೇನು ? " ಇದಕ್ಕೆ ಸಂಸ್ಕೃತದ ಬದಲು "ಬೇರೆ ಯಾವದೇ ಭಾಷೆಯಲ್ಲೇನು" ಎಂದೂ ಹೇಳಬಹುದು.

sunaath said...

ಅಂತರ್ವಾಣಿಯವರೆ,
ಕೇಶಿರಾಜನ 'ಶಬ್ದಮಣಿ ದರ್ಪಣ'ಕಠಿಣ ಕೃತಿಯಾಗಿರುವದರಿಂದ ಅದನ್ನು ಪಠ್ಯಪುಸ್ತಕವನ್ನಾಗಿ ಮಾಡಕೂಡದೆಂದು, ಸ್ವಲ್ಪ ಕಾಲದ ಹಿಂದೆ, ಕನ್ನಡ ಕಾಲೇಜು ವಿದ್ಯಾರ್ಥಿಗಳು ಗಲಾಟೆ ಮಾಡಿದ್ದರು. ಕನ್ನಡ ವ್ಯಾಕರಣವನ್ನು ಕಲಿಯಲು ಒಲ್ಲದ ಇವರು, ತಾವೇ ಶಿಕ್ಷಕರಾದರೆ ತಮ್ಮ ವಿದ್ಯಾರ್ಥಿಗಳಿಗೆ ಏನು ವ್ಯಾಕರಣ ಕಲಿಸಿಯಾರು?

sunaath said...

ಚಕೋರ,
ಬಹಳ ಸರಿಯಾಗಿ ವ್ಯಾಖ್ಯಾನಿಸಿದ್ದೀರಿ.
ಪ್ರಾದೇಶಿಕ ಆಡುಮಾತುಗಳ ಬಗೆಗೆ ನೀವು ಕೊಟ್ಟ ಉದಾಹರಣೆ ಔಚಿತ್ಯಪೂರ್ಣವಾಗಿದೆ. ಪ್ರಾದೇಶಿಕ ಆಡುಮಾತುಗಳು ಕನ್ನಡಮ್ಮನ ಕಂಠಾಭರಣಗಳಿದ್ದಂತೆ. ಅಥವಾ ಬೇರೊಂದು ಉದಾಹರಣೆ ಕೊಡುವದಾದರೆ, ಒಂದು ಉಪವನದಲ್ಲಿ ನೂರು ಬಗೆಯ ಹೂವುಗಳಿದ್ದಂತೆ, ಕನ್ನಡದ ಉಪವನದಲ್ಲಿ ನೂರು ಬಗೆಯ ಆಡುಮಾತುಗಳಿವೆ.
ಇದೆಲ್ಲ ಸಾಧ್ಯವಾಗುವದು ಕನ್ನಡದ ಧ್ವನಿಸಂಪತ್ತಿನಿಂದ ಹಾಗು ಕನ್ನಡದ ಲಿಪಿಸಂಪತ್ತಿನಿಂದ.ಕನ್ನಡದಲ್ಲಿ ಕನ್ನಡದವೇ ಆದ ಹೊಸ ಪದಗಳನ್ನು ಸೃಷ್ಟಿಸುವದಕ್ಕೆ ಸ್ವಾಗತ. ಆದರೆ ನಮ್ಮಲ್ಲಿ ಬಳಕೆಯಲ್ಲಿದ್ದ ಭಾಷಾ ಸಂಪತ್ತನ್ನು ಕುರುಡರಂತೆ ತೂರಿಬಿಡುವದು ದೌರ್ಭಾಗ್ಯದ ಸಂಗತಿಯೇ ಸರಿ.

sunaath said...

joey,
ತಮಿಳು ಲಿಪಿ suspense novels ಬರೆಯಲು ಮಾತ್ರ ಯೋಗ್ಯವೆಂದು ನಾನು ಅಂದಿದ್ದು lighter veinದಲ್ಲಿ. ಅದರೆ ಇದರ ಹಿಂದೆ ಕಟಿಯುತ್ತಿರುವ ಒಂದು ಮನೋವೇದನೆಯೂ ಇದೆ.
ಲಿಪಿಯ ದೃಷ್ಟಿಯಿಂದ ಕನ್ನಡವು ತಮಿಳಿಗಿಂತ ಹೆಚ್ಚು ವಿಕಾಸಗೊಂಡ ಲಿಪಿ. ಇದರಲ್ಲಿ ಇರುವ ಧ್ವನಿಸಂಪತ್ತೂ ಹೆಚ್ಚಿನದು. ಇಷ್ಟಾದರೂ ಸಹ, ತಮಿಳು ಉಳಿದ ದ್ರಾವಿಡ ಭಾಷೆಗಳ ಮೆಲೆ ಒಂದು ರೀತಿಯ 'ದಾದಾಗಿರಿ' ಮಾಡುತ್ತಿದೆ.
ತಾನು ಸಂಸ್ಕೃತವನ್ನು ಧಿಕ್ಕರಿಸಿ ನಿಂತ ಭಾಷೆ ಎನ್ನುವ ಪೋಜು
ಕೊಡುತ್ತದೆ. (ತಮಿಳು ಜ್ಞಾನವಿಲ್ಲದ ನನಗೆ ಇದು ಸರಿಯೊ ತಪ್ಪೊ ಗೊತ್ತಿಲ್ಲ).

ಚಕೋರರವರು 'ಕೃಪಾ'ಹೋಗಿ 'ಕಿರುಬಾ' ಆಗಿದ್ದನ್ನು ಉದಾಹರಿಸಿದ್ದಾರೆ. ಅಂದಮೇಲೆ, ತಮಿಳು ಸಂಸ್ಕೃತ ಪದಗಳನ್ನು ತಿರುಚಿ ಹಾಕಿದೆಯೇ ಹೊರತು, ತೆಗೆದು ಹಾಕಿಲ್ಲ ಎಂದೆನ್ನಬಹುದಲ್ಲವೆ?
Such factors have prompted me to tease Tamil!

ಇನ್ನು ಕೆಳವರ್ಗದವರೆಂದು ಕರೆಯಿಸಿಕೊಳ್ಳುವ ಜನರ ಆಡುನುಡಿಯ ಬಗೆಗೆ. ಈ ಆಡುನುಡಿಯ ಬಗೆಗೆ ನನಗೆ ಯಾವುದೇ
ತಕರಾರೂ ಇಲ್ಲ. In fact, I love all varieties of spoken Kannada including anglicised Kannada!
ನನ್ನ ವಿರೋಧವಿರುವದು ತಪ್ಪು ಬರಹದ ಬಗೆಗೆ. ಈ ತಪ್ಪು ಬರಹದ ಬಗೆಗೆ ಶ್ರೀ ಕೇಶವ ಕುಲಕರ್ಣಿಯವರು ಕೆಲವು technical information ಕೊಟ್ಟಿದ್ದಾರೆ.
ಇದಲ್ಲದೆ, ಶ್ರೀ ಶಂಕರ ಭಟ್ಟರ ಲಿಪಿಕ್ರಾಂತಿ ಹಾಗು ಪದಕ್ರಾಂತಿಯ ಬಗೆಗೂ ಚರ್ಚಿಸಬೇಕಾಗಿದೆ.

sunaath said...

ಜ್ಯೋತಿ,
ಇದೀಗ ಸರಿಯಾದ ಧೋರಣೆ!
-ಕಾಕಾ

sunaath said...

ಗೀತಾ,
"ಸುಲಭವಹ ಕನ್ನಡದ ನುಡಿ" ಎಂದು ನೀವು ಹೇಳಿದಿರಿ.
ಶಂಕರ ಭಟ್ಟರು "ಇದೂ ಸಹ ತುಂಬಾ ಕಠಿಣವಾಗಿದೆ; ಇದನ್ನು ಆದಿವಾಸಿಗಳಿಗೆ ಯೋಗ್ಯವಾದ ಭಾಷೆ ಮಾಡೊಣ", ಎನ್ನುತ್ತಿದ್ದಾರೇನೊ?

Anonymous said...

"ಶ್ರೀ ಡಿ.ಎನ್. ಶಂಕರಭಟ್ಟರು ಬಯಸಿದಂತೆ ನಡೆದರೆ, ಕನ್ನಡ ನುಡಿಯು ಕುಲಗೆಟ್ಟು ಹೋಗುವದರಲ್ಲಿ ಸಂಶಯವಿಲ್ಲ"

ಬೇಜವಾಬ್ದಾರಿ ಹೇಳಿಕೆ...

ಮಾನ್ಯರು ಬಾಶಾವಿಜ್ನಾನಿ ಅಲ್ಲ ಅನ್ನೋದನ್ನು ನೆನೆಪಿನಲ್ಲಿಟುಕೊಳ್ಳಬೇಕು...

ಸರ್ವವಿಶಯವಿಶಾರದರ ಎಂದುಕೊಂಡಂತೆ.. ಎಲ್ಲ ವಿಶಯಗಳ ಬಗ್ಗೆಯೂ ಇವರ ಟಿಪ್ಪಣಿ ಇದೆ.

’ಕನ್ನಡದ ಮೇಲೆ ಸಂಸ್ಕೃತದ ಸವಾರಿ’ ಎಂದು ಗೂಗಲಲ್ಲಿ ಹುಡುಕಿದರೆ, ಇನ್ನೊಬ್ಬ ಹೆಸರುವಾಸಿ ವ್ಯಾಕರಣಬಲ್ಲರ ಬರಹವೂ ಸಿಗುವುದು..

ಮಾನ್ಯರು ಸರ್ವಜ್ನಪೀಟಾರೋಣ ಸ್ವಯಂ ಮಾಡಿಕೊಂಡ ಹಾಗಿದೆ.

Anonymous said...

http://wordworth.sampada.net/node/11

ಇದೋ ಕೆ.ವಿ.ನಾರಯಣ ಎಂಬ ದೊಡ್ಡ ಕನ್ನಡ ವ್ಯಾಕರಣಕಾರರ ಬರಹ.

"ಕನ್ನಡದ ಮೇಲೆ ಸಂಸ್ಕೃತದ ಸವಾರಿ"

ಮಾನ್ಯರಂತೆ ಇವರೂ ಕನ್ನಡ ವ್ಯಾಕರಣವನ್ನು ಅದ್ಯಯನ ಮಾಡಿ, ಕನ್ನಡವನ್ನು ಕುಲಗೆಡೆಸುವವರು..

ಮಾನ್ಯರು ಮಾತ್ರ ಬಾಶಾವಿಜ್ನಾನ ಓದದೇನೇ ಕನ್ನಡದ ಉದ್ದಾರಕರು.. :)

Anonymous said...

ಮಾನ್ಯ ಸುನಾತರೆ,

ಇಲ್ಲಿ ಒಂದು ವಿಶಯ ತಿಳಿಯಾಗಲಿ.
ಶಂಕರಬಟ್ಟರು ತಮಿಳನ್ನು ಒಂದು ಉದಾಹರಣೆಯಾಗಿ ಕೊಟ್ಟಿದ್ದಾರೆ. ಅಶ್ಟೇ .ಇದನ್ನ ಒತ್ತಿ ಹೇಳಬಯಸುತ್ತೇನೆ.

ಶಂಕರಬಟ್ಟರ ಹೇಳಿರುವುದು
೧. ನಮ್ಮ ಮಾತು-ಬರಹ ಹತ್ತಿರವಿರಲಿ. ಎರಡು ಬೇರೆ ಬೇರೆ ಕಡೆ ಹೋಗುವುದು ಬೇಡ
೨. IT ಯಿಂದಾಗಿ ಈಗ ಮಾತಿಗಿಂತ ಬರಹಕ್ಕೆ ಹೆಚ್ಚು ಬೆಲೆ ಮತ್ತು ಒತ್ತು. ನಾವು ನಮ್ಮ ಬರಹವನ್ನು ಮಾತಿನಂತೆ ಸರಿಪಡಿಸಕೊಳ್ಳದಿದ್ದರೆ ಬರೀ ಮಾತೇ ಗೊತ್ತಿರುವ ಬರಹ ಗೊತ್ತಿರದ/ಸೊಲ್ಪ ಗೊತ್ತಿರುವ ಮಂದಿಗೆ ತುಂಬ ಕಶ್ಟ ಆಗುತ್ತೆ.

ಈಗ ಹೇಳಿ ಇದರಲ್ಲಿ ಏನು ತಪ್ಪು. ಚರ್ಚೆ ಮಾಡೋಣ.