Friday, June 6, 2008

ಸ್ಥಳನಾಮ ಮಾರ್ಪಾಟುಗಳು

ಭಾರತ ದೇಶದಲ್ಲಿ ಆರ್ಯರು ಪ್ರವೇಶಿಸಿದ ಸಂದರ್ಭದಲ್ಲಿ ಅವರು ನುಡಿಯುತ್ತಿದ್ದ ಭಾಷೆಗೆ ಆರ್ಯಭಾಷೆ ಎಂದು ಕರೆಯೋಣ. ವ್ಯಾಕರಣದ ಕಟ್ಟುಪಾಡು ಇಲ್ಲದಿರುವ ಕಾಲದ ಈ ಭಾಷೆ ಪ್ರಾಕೃತ ಭಾಷೆ (=ಪ್ರಕೃತಿಸಹಜವಾದದ್ದು=natural). ಈ ಭಾಷೆಯನ್ನು ವ್ಯಾಕರಣದ ಶಿಸ್ತಿಗೆ ಒಳಪಡಿಸಿ, ಸಂಸ್ಕರಿಸಿದಾಗ ಇದು ಸಂಸ್ಕರಣಗೊಂಡ ಭಾಷೆ ಆಯಿತು (=ಸಂಸ್ಕರಿತ, ಸಂಸ್ಕೃತ, processed, refined). ‘ಸಂಸ್ಕೃತ’ವೆನ್ನುವದು ಭಾಷೆಯ ಹೆಸರಲ್ಲ, ಭಾಷೆಯ ಸ್ಥಿತಿ. ಪ್ರಾಕೃತ ಅಂದರೆ natural tongue; ಸಂಸ್ಕೃತ ಅಂದರೆ grammered tongue.

ಆರ್ಯರು ಅನಾರ್ಯ ಭಾಷೆಗಳನ್ನು ಪೈಶಾಚಿ ಭಾಷೆ ಎಂದು ಕರೆದರು. ಪೂರ್ವದ್ರಾವಿಡ ಭಾಷೆಗಳೇ ಈ ಪೈಶಾಚಿ ಭಾಷೆಗಳು. ಆರ್ಯರು ಅನಾರ್ಯದೇಶಗಳಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸತೊಡಗಿದಂತೆ, ಆರ್ಯಭಾಷೆ (ಅಥವಾ ದೇವಭಾಷೆ) ಹಾಗೂ ಪೈಶಾಚಿ ಭಾಷೆಗಳಲ್ಲಿ ಕೊಡುಕೊಳ್ಳುವಿಕೆ ಪ್ರಾರಂಭವಾಯಿತು. ಹೀಗಾಗಿ ಆರ್ಯಭಾಷೆಯಲ್ಲಿ ಹಾಗು ಆರ್ಯಭಾಷೆಯಿಂದ ಉದ್ಭವಿಸಿದ ಭಾಷೆಗಳಲ್ಲಿ ಪೂರ್ವದ್ರಾವಿಡ ಭಾಷೆಯ ಪದಗಳನ್ನು ಕಾಣಬಹುದು. ಗುಜರಾತಿ ಭಾಷೆಗೆ ದ್ರಾವಿಡ ತಳಹದಿ ಇದೆ ಎಂದು ಹೇಳಲಾಗುತ್ತಿದೆ. ಸ್ವತಃ ಸಂಸ್ಕೃತದಲ್ಲಿಯೇ ಅನೇಕ ದ್ರಾವಿಡ ಪದಗಳನ್ನು ಗುರುತಿಸಲಾಗುತ್ತಿದೆ. ಇದರಂತೆಯೇ ಅನಾರ್ಯ ಭಾಷೆಗಳಲ್ಲೂ ಸಹ ಅನೇಕ ಬದಲಾವಣೆಗಳಾದವು.

ಅನಾರ್ಯ ಪ್ರದೇಶಗಳಲ್ಲಿ ನೆಲೆಸಿದ ಆರ್ಯರಿಂದಾಗಿ ಇಲ್ಲಿಯ ಸ್ಥಳನಾಮಗಳು ಅವರ ಉಚ್ಚಾರಣೆಗೆ ತಕ್ಕಂತೆ ಬದಲಾದವು. ಆಂಗ್ಲ ಉಚ್ಚಾರಣೆಯಲ್ಲಿ ‘ಬೆಂಗಳೂರು’ ‘ಬ್ಯಾಂಗ್ಲೋರ್’ ಆದಂತೆ, ‘ಕಡೇವಾಡ’ವು ‘ಕಾರ್ವಾರ್’ ಆದಂತೆ, ಅನೇಕ ಅನಾರ್ಯ ಸ್ಥಳನಾಮಗಳೂ ಸಹ ಗುರುತು ಹತ್ತದಂತೆ ಬದಲಾದವು.

ಕೆಲವು ಉದಾಹರಣೆಗಳು:
೧) ಕಾಳಿ ನದಿಯ ದಂಡೆಯ ಮೇಲಿರುವ ‘ದಂಡಿಹಳ್ಳಿ’ >>>>ದಾಂಡೇಲಿ
೨) ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಚಾಪಿಹಳ್ಳಿ>>>>ಚಾಪೋಲಿ
೩) -----------“”------------------- ಮೀರಹಳ್ಳಿ >>>>>ಮಿರ್ಲೆ
೪) -------------“”---------------- ನಾರುವಳ್ಳಿ >>>>>ನಾರ್ವೆ
೫) ಚೋರಹಳ್ಳಿ >>>>ಚೋರ್ಲೆ
೬) ಸಂಗೊಳ್ಳಿ >>>>ಸಾಂಗ್ಲಿ (ಮಹಾರಾಷ್ಟ್ರ)
೭) ಕಂದವಳ್ಳಿ >>>>>ಕಾಂದೀವ್ಲಿ (ಮುಂಬಯಿ ನಗರದ ಭಾಗ)
೮) ಕಂದಹಾಳ >>>>ಖಂಡಾಲಾ (ಮುಂಬಯಿ ನಗರದ ಹತ್ತಿರ)
೯) ಕಂದಹಾರ >>>ಗಾಂಧಾರ (ಸಂಸ್ಕೃತೀಕರಣ, ಅಫಘಾನಿಸ್ತಾನದಲ್ಲಿ)
೧೦) ಡೊಂಬವಳ್ಳಿ >>>>ಡೊಂಬೀವಲಿ (ಮುಂಬಯಿ ನಗರದ ಭಾಗ)
೧೧) ಡೊಂಬಹಾಳ >>>>ಡಂಬಳ (ಗದಗ ಶಹರದ ಹತ್ತಿರ)
೧೨) ಹೊಂಬಹಾಳ >>> ಹೊಂಬಳ (ಗದಗ ಶಹರದ ಹತ್ತಿರ)
೧೩) ಮೀರಜಿ >>>> ಮಿರಜ (ಮಹಾರಾಷ್ಟ್ರ)
೧೪) ಕೋಲಪುರ >>>ಕೊಲ್ಹಾಪುರ (ಮಹಾರಾಷ್ಟ್ರ)
೧೫) ಕೋಲಕಟ್ಟೆ >>>ಕೊಲ್ಕತ್ತಾ (ಪ.ಬಂಗಾಲ)
೧೬) ಕನ್ನದೇಶ >>> ಖಾನದೇಶ (ಗುಜರಾತ-ರಾಜಸ್ಥಾನ)
೧೭) ಕಾಟವಾಡ >>>ಕಾಠೇವಾಡ ( ಗುಜರಾತ)

ಕನ್ನಡ ಸ್ಥಳನಾಮಗಳಷ್ಟೇ ಅಲ್ಲ, ಕನ್ನಡ ವ್ಯಕ್ತಿನಾಮಗಳೂ ಸಹ ಮಾರ್ಪಾಡಾದವು.
ಉದಾಹರಣೆಗಳು:
ಕರಗ >>>ಖಾರಗೆ, ಘಾರಗಿ
ಕನ್ನ >>>ಖನ್ನಾ
ಕಾತ,ಕಾಟ >>> ಕಾಠೆ, ಕಾಟವೆ
ಕನ್ನಡ >>> ಕಾನಡೆ
ಲಾತ, ಲಾಟ >>> ಲಾಢ, ಲದ್ವಾ

ಬದಲಾಗಲಿ ಬಿಡಿ, ತಪ್ಪೇನೂ ಇಲ್ಲ. ಆದರೆ, ಈ ಮಾರ್ಪಾಡಿಗೆ ಒಳಗಾದವರು ತಮ್ಮ ಪೂರ್ವಸ್ಮೃತಿಯನ್ನು ಪೂರ್ಣವಾಗಿ ಮರೆತಿರುವದು ದುರ್ದೈವದ ಸಂಗತಿ. ಇದು unfortunate racial amnesia!
ಕನ್ನರು ಖನ್ನಾ ಆಗಿ, ತಾವು ಪಂಜಾಬಿಗಳು ಎಂದು ಹೆಮ್ಮೆಪಡುತ್ತಾರೆ. ಕಾನಡೆ ಎನ್ನುವ ಹೆಸರೇ ಸೂಚಿಸುವಂತೆ, ಈ ಜನರು ಕನ್ನಡಿಗರು ಎಂದು (ಮರಾಠಿಗರಿಂದ) ಗುರುತಿಸಲ್ಪಡುತ್ತಿದ್ದರು. ಇವರಲ್ಲೇಕರು ಈಗ ಮರಾಠಿ ಭಾಷಿಕರೇ ಆಗಿ ಬಿಟ್ಟಿದ್ದಾರೆ.

ಸೋತ ಜನಾಂಗಗಳಿಗೆ ಇತಿಹಾಸವಿರುವದಿಲ್ಲ!

10 comments:

sritri said...

"ಸೋತ ಜನಾಂಗಗಳಿಗೆ ಇತಿಹಾಸವಿರುವುದಿಲ್ಲ"! - ಸರಿಯಾಗಿ ಹೇಳಿದ್ದೀರಿ.

ಸುನಾಥರೇ, ಹುಬ್ಬಳ್ಳಿಯ ಮೂಲವೇನು? ತಿಳಿಸಿ. "ಹೂಬಳ್ಳಿ" ಎಂದು ಕೇಳಿದ್ದೇನೆ. ನಿಜವೇ?

ಕಡೂರಿನ ಬಗೆಗಿನ ದೀರ್ಘ ವಿವರಗಳಿಗೆ ಕೃತಜ್ಞತೆಗಳು.

ಅಂತರ್ವಾಣಿ said...

ಸುನಾಥರವರೆ,
ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

sunaath said...

ತ್ರಿವೇಣಿಯವರೆ,
ಹುಬ್ಬಳ್ಳಿ ಈ ಸ್ಥಳನಾಮವನ್ನು ಐದು ರೀತಿಯಲ್ಲಿಅರ್ಥೈಸಬಹುದು:
೧) ಹುಬ್ಬನಹಳ್ಳಿ
೨) ಪೂರ್ವಳ್ಳಿ >>ಪುಬ್ಬಳ್ಳಿ >> ಹುಬ್ಬಳ್ಳಿ
೩) ಪುರವಳ್ಳಿ >> ಪುರ್ವಳ್ಳಿ >> ಪುಬ್ಬಳ್ಳಿ >> ಹುಬ್ಬಳ್ಳಿ
೪) ಪೂವಳ್ಳಿ
೫) ಉಬ್ಬುಹಳ್ಳಿ >> ಉಬ್ಬಳ್ಳಿ >> ಹುಬ್ಬಳ್ಳಿ

ಮೊದಲನೆಯ ಸಾಧ್ಯತೆ:
ಕರ್ನಾಟಕದಲ್ಲಿ ಹುಬ ಅಥವಾ ಹುಬ್ಬ ಪದದಿಂದ ಪ್ರಾರಂಭವಾಗುವ ಎಂಟು ಸ್ಥಳಗಳಿವೆ:
೧) ಹುಬನೂರು (ವಿಜಾಪುರ ತಾಲೂಕು / ವಿಜಾಪುರ ಜಿಲ್ಲೆ)
೨) ಹುಬ್ಬನಗೇರಿ (ಕುಮಟೆ ತಾಲೂಕು / ಉತ್ತರ ಕನ್ನಡ ಜಿಲ್ಲೆ)
೩) ಹುಬ್ಬನಹಳ್ಳಿ (ಕೃಷ್ಣರಾಜಪೇಟೆ ತಾಲೂಕು / ಮಂಡ್ಯ ಜಿಲ್ಲೆ)
೪) ಹುಬ್ಬನಹಳ್ಳಿ (ಶಿವಮೊಗ್ಗ ತಾಲೂಕು / ಶಿವಮೊಗ್ಗ ಜಿಲ್ಲೆ)
೫) ಹುಬ್ಬರವಾಡಿ ( ರಾಯಬಾಗ ತಾಲೂಕು / ಬೆಳಗಾವಿ ಜಿಲ್ಲೆ)
೬) ಹುಬ್ಬಳ್ಳಿ (ಹುಬ್ಬಳ್ಳಿ ತಾಲೂಕು / ಧಾರವಾಡ ಜಿಲ್ಲೆ)
೭) (ದೇವರ)ಹುಬ್ಬಳ್ಳಿ (ಹುಬ್ಬಳ್ಳಿ ತಾಲೂಕು / ಧಾರವಾಡ ಜಿಲ್ಲೆ)
೮) (ಗಿಡದ)ಹುಬ್ಬಳ್ಳಿ (ಹುಬ್ಬಳ್ಳಿ ತಾಲೂಕು / ಧಾರವಾಡ ಜಿಲ್ಲೆ)
೯) (ಮುಗುಟಖಾನ)ಹುಬ್ಬಳ್ಳಿ (ಬೈಲಹೊಂಗಲ ತಾಲೂಕು / ಬೆಳಗಾವಿ ಜಿಲ್ಲೆ)

ಆದುದರಿಂದ ಹುಬ ಎನ್ನುವದು ಒಂದು ವ್ಯಕ್ತಿನಾಮವಿರಬಹುದು. ಕುಬ ಎನ್ನುವ ವ್ಯಕ್ತಿನಾಮದಿಂದ ಕುಬನೂರು ಎನ್ನುವ ಸ್ಥಳನಾಮ ಬಂದಿರುವದನ್ನು ಗಮನಿಸಿರಿ. ಕುಪ ಎನ್ನುವ ವ್ಯಕ್ತಿನಾಮವು (ಉದಾ: ಕುಪೇಂದ್ರ) ಕುಬ ಎನ್ನುವ ವ್ಯಕ್ತಿನಾಮಕ್ಕೆ ಮೂಲವಾಗಿರಬಹುದು. (ಸ್ಥಳನಾಮ: ಕುಪ್ಪಳ್ಳಿ). ಆದರೆ ಹುಬ ಇದಕ್ಕೆ ಮೂಲಪದ ಇದೆಯೆ ಎನ್ನುವದು ನನಗೆ ಗೊತ್ತಿಲ್ಲ. (ಬಹುಶ: ‘ಹುಂಬ’ ಎನ್ನುವದು ಹುಬ ಪದದ ಮೂಲವೆಂದು ನಾವು ಹೇಳಿದರೆ, ಹುಬ್ಬಳ್ಳಿಯ ಮಂದಿ ಸಿಟ್ಟಾಗಬಹುದು.) ಒಟ್ಟಿನಲ್ಲಿ ‘ಹುಬ’ ವ್ಯಕ್ತಿನಾಮದಿಂದ ಹುಬ್ಬಳ್ಳಿ ಬಂದಿರಬಹುದು.

ಎರಡನೆಯ ಸಾಧ್ಯತೆ:
ಇನ್ನು ಪೂರ್ವಳ್ಳಿ ಎನ್ನುವ ಪದದಿಂದ ಹುಬ್ಬಳ್ಳಿ ಬರುವ ಸಾಧ್ಯತೆಯೂ ಇದೆ. ಬನವಾಸಿ, ಹಾನಗಲ್ ಮೊದಲಾದ ರಾಜ್ಯಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಅನೇಕ ವಿದೇಶಿ ಪ್ರವಾಸಿಗಳು ಈ ರಾಜ್ಯಗಳ ಪೂರ್ವದ ಗಡಿ ಎಂದು ಗುರುತಿಸಲಾದ ಈ ಊರಲ್ಲಿ ಹಾಯ್ದು ಹೋಗಿದ್ದಾರೆ. ಆದುದರಿಂದ ಇದು ಪೂರ್ವಳ್ಳಿ>>ಹುಬ್ಬಳ್ಳಿಯಾಗಿರುವ ಸಂಭಾವ್ಯತೆಯೂ ಇದೆ.

ಮೂರನೆಯ ಸಾಧ್ಯತೆ:
ಕರ್ನಾಟಕದಲ್ಲಿ ೪ ಪುರವಳ್ಳಿಗಳು ಹಾಗೂ ೧ ಪುರಹಳ್ಳಿ ಇವೆ. ಪುರ ಎಂದರೆ ಪಟ್ಟಣ. ಹುಬ್ಬಳ್ಳಿ ಎನ್ನುವ ಪದ ಪುರವಳ್ಳಿ ಪದದಿಂದ ಬರುವ ಸಾಧ್ಯತೆಯೂ ಇದೆ.
ಪುರವಳ್ಳಿ >>ಪುರ್ವಳ್ಳಿ>>ಹುಬ್ಬಳ್ಳಿ

ನಾಲ್ಕನೆಯ ಸಾಧ್ಯತೆ:
ನಾಲ್ಕನೆಯದಾಗಿ, ಹೂವಿನಹಳ್ಳಿಯಿಂದ ಹೂವಳ್ಳಿ, ಹುಬ್ಬಳ್ಳಿ ಬರುವ ಸಾಧ್ಯತೆಯೂ ಇದೆ. ಒಬ್ಬ ವಿದೇಶಿ ಪ್ರವಾಸಿಗನು (--ಅವನ ಹೆಸರು ನೆನಪಿನಲ್ಲಿಲ್ಲ--), ಹುಬ್ಬಳ್ಳಿಯನ್ನು ಪ್ರವೇಶಿಸಿದಾಗ, ಸೂರ್ಯಕಿರಣಗಳು ಭೇದಿಸದಂತಹ ಅಲ್ಲಿರುವ ತೋಟಪಟ್ಟಿಗಳ ನಡುವೆ ಸಿಕ್ಕಿಹಾಕಿಕೊಂಡೆನೆಂದು ವರ್ಣಿಸಿದ್ದಾನೆ. ಅಂದ ಮೇಲೆ ಅಲ್ಲಿ ಹೂವಿನ ತೋಟಗಳೂ ಸಹ ಇದ್ದು ಹುಬ್ಬಳ್ಳಿ ಸ್ಥಳನಾಮಕ್ಕೆ ಕಾರಣವಾಗಿರಬಹುದು.

ಐದನೆಯ ಸಾಧ್ಯತೆ:
ಐದನೆಯ ಸಾಧ್ಯತೆ ಎಂದರೆ ಉಬ್ಬುಹಳ್ಳಿ>> ಹುಬ್ಬಳ್ಳಿ. ಹುಬ್ಬಳ್ಳಿಯು ಉಬ್ಬು ಜಾಗದಲ್ಲಿ ಇರುವದರಿಂದ ಇದು ಉಬ್ಬಳ್ಳಿ>>ಹುಬ್ಬಳ್ಳಿ ಎಂದು ಕೆಲವರು ವಾದಿಸುತ್ತಾರೆ. ಅದರೆ ಹುಬ್ಬಳ್ಳಿಯು ಉಬ್ಬು ಜಾಗದಲ್ಲಿ ಇಲ್ಲದಿರುವದು ಮೇಲ್ನೋಟಕ್ಕೇ ಗೊತ್ತಾಗುತ್ತದೆ.

ಇದಿಷ್ಟು statistics ಹಾಗು ಭಾಷಾಸಾಧ್ಯತೆಯ ಮೇಲೆ ಆಧರಿಸಿದ ಅನುಮಾನ. ಶಾಸನಗಳು ಹಾಗು ಹಳೆಯ ಕಡತಗಳು ಲಭ್ಯವಿದ್ದರೆ ಹುಬ್ಬಳ್ಳಿಗೆ ಸರಿಯಾದ ದಾರಿ ದೊರೆತೀತು.

sunaath said...

ಅಂತರ್ವಾಣಿಯವರೆ,
ಸುಸ್ವಾಗತ!

ಮನಸ್ವಿನಿ said...

ಕಾಕಾ

"ಸೋತ ಜನಾಂಗಗಳಿಗೆ ಇತಿಹಾಸವಿರುವುದಿಲ್ಲ"!---ಹೌದಲ್ಲ!

"ಖಂಡಾಲಾ", "ಕಂದಹಾರ" ದ ಬಗ್ಗೆ ನಾನು ಯಾಕೋ ಇದೇ ತರಹ ಯೋಚನೆ ಮಾಡಿದ್ದೆ.ನಿಮ್ಮ ಈ ಪೋಸ್ಟ್ ಓದಿ ಅದು ಈಗ confirm ಆಯಿತು.
ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು.

You rock.

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಬ್ಲಾಗ್ ಕನ್ನ-ವಿಶ್ವ-ಕೋಶ.
ಭಾಷೆ, ಪ್ರಾಂತ್ಯ, ನಡೆ-ನುಡಿ, ಹೆಸರುಗಳ ಮೇಲಿನ ಮಾಹಿತಿಗಳನ್ನು ನೀಡುತ್ತಿರುವುದಕ್ಕಾಗಿ ಧನ್ಯವಾದಗಳು.

sunaath said...

ಮನಸ್ವಿನಿ,
We are on the same vibe.
-ಕಾಕಾ

sunaath said...

ಜ್ಯೋತಿ,
ಧನ್ಯವಾದಗಳು.
ನಾನು ಓದಿದ್ದನ್ನು, ತಿಳಿದಿದ್ದನ್ನು ಬರೆಯುತ್ತಿದ್ದೇನೆಯೆ ಹೊರತು, ಇದೇನೂ ವಿಶ್ವಕೋಶವಲ್ಲ. ಕಾಕಾನ ಮೇಲೆ ಮಗಳಿಗಿರುವ ಪ್ರೀತಿಯಿಂದ ನಿನಗೆ ಹಾಗೆ ತೋರುತ್ತಿದೆ.
-ಕಾಕಾ

Shriniwas M Katti said...

ಸ್ಥಳ ಇತಿಹಾಸಗಳನ್ನು ಓದುವಾಗ ನನಗೆ "ಲಾಂಗೂಲಾಚಾರ್ಯ"ರ ಒಂದು ಲೇಖನ ನೆನಪಾಗುತ್ತಿದೆ. ಇದು ಬಹುಶಃ 1964ರಲ್ಲಿ ಕರ್ಮವೀರದಲ್ಲಿ ಪ್ರಕಟವಾಗಿತ್ತು. ಚೀನಿಯರು ಹಿಮಾಲಯವನ್ನು "ಚೋಮಲುಂಗಾ" ಎಂದು ಕರೆಯುತ್ತಾರೆ. ಈ ಶಬ್ದ ಶುದ್ಧ ಕನ್ನಡದ್ದು ಎಂದು ಅವರ ವಾದ (?)ವಾಗಿತ್ತು. ಚೋಮ ಎಂಬುದು ನಿಸ್ಸಂಶಯವಾಗಿ ಕನ್ನಡದ ಹೆಸರು. ಕನ್ನಡದ ಚೋಮ ಅತ್ಯಂತ ಶುಭ್ರವಾದ ಲುಂಗಿಯನ್ನು ತೊಡುತ್ತಿದ್ದ. ಚೋಮನ ಲುಂಗಿಯಂತೆ ಶುಭ್ರವಾದ ಹಿಮಾಲಯವನ್ನು "ಚೋಮಲುಂಗಾ" ಎಂದು ಕರೆಯಲಾಯಿತು. ಚೀನದ ಭಾಷೆ ಕನ್ನಡವೇ ಆಗಿತ್ತು ಮತ್ತು ಚೀನ ದೇಶ ಕರ್ನಾಟಕದ ಭಾಗವಾಗಿತ್ತು ಎಂದು ಇದರಿಂದ ಸಿದ್ಧವಾಗುತ್ತದೆ. ಸ್ಥಳೇತಿಹಾಸಗಳು ಈ ರೀತಿ ಬಂದಿರಲೂ ಬಹುದಲ್ಲವೆ ?

sunaath said...

ಕಟ್ಟಿಯವರೆ,
ಲಾಂಗೂಲಾಚಾರ್ಯರು ನಮಗೆಲ್ಲರಿಗೂ ಆಚಾರ್ಯರು. ಅವರು ಹಾರುವ ಎತ್ತರಕ್ಕೆ ನಾವು ಹಾರಬಲ್ಲೆವೆ?
ನಮ್ಮ ನಿಲುವು ನಮ್ಮ ನೆಲವಿಗಷ್ಟೆ ಸೀಮಿತ!