Sunday, June 15, 2008

ಅಲ್ಪಪ್ರಾಣ--ಮಹಾಪ್ರಾಣ

ಬಂಗಾಲಿಗಳು ‘ಪಂಚವಟಿ’ ಎನ್ನುವ ಪದವನ್ನು ‘ಪೊಂಚೊಬೊಟಿ’ ಎಂದು ಉಚ್ಚರಿಸುತ್ತಾರೆ. ‘ಕಂಕಣಾ’ ಪದವನ್ನು
‘ಕೊಂಕಣಾ’ ಎಂದು ಉಚ್ಚರಿಸುತ್ತಾರೆ. ಅವರ ಉಚ್ಚಾರಣಾ ಶೈಲಿಯೇ ಹಾಗಿದೆ. ಇಂಗ್ಲಿಶ್ ಜನಗಳಿಗೆ ‘ಬೆಂಗಳೂರು’ ಎನ್ನಲು ಬಾರದೆ, ‘ಬ್ಯಾಂಗ್ಲೋರ್’ ಎಂದೂ ‘ಶಿಂಧೆ’ ಎನ್ನಲು ಬಾರದೇ, ‘ಸಿಂದ್ಯಾ’ ಎಂದೂ ಅಂದಿರಬಹುದು.

ಕನ್ನಡಿಗರಿಗೆ ಉಚ್ಚಾರಣಾ ಸಮಸ್ಯೆ ಇಲ್ಲವೇ ಇಲ್ಲ. ಕನ್ನಡಿಗರು ಸಂಸ್ಕೃತ ಪದಗಳನ್ನು ಶುದ್ಧವಾಗಿ ಉಚ್ಚರಿಸಬಲ್ಲರು, ಅಮೇರಿಕನ್ನರು ನಾಚುವಂತೆ ಅಮೇರಿಕನ್-ಇಂಗ್ಲಿಶ್ ಮಾತನಾಡಬಲ್ಲರು. ಇದೆಲ್ಲ ಸರಿಯೇ. ಆದರೆ, ಕನ್ನಡದಲ್ಲಿಯೇ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳನ್ನು ಅದಲು ಬದಲು ಮಾಡುವದರಲ್ಲಿ ಕನ್ನಡಿಗರು ವಿಶೇಷ ಆಸಕ್ತಿಯನ್ನು ಪ್ರದರ್ಶಿಸುತ್ತಾರೆ. ಹೀಗಾಗಿ ಸಿನೆಮಾದ ‘ಮಧ್ಯಾಂತರವು’ ಕೆಲವು ಕನ್ನಡಿಗರಿಗೆ ‘ಮದ್ಯಾಂತರ’ವಾಗಿ ಬಿಡುವದು. ಉಚ್ಚಾರಣೆ ಹೋಗಲಿ ಬಿಡಿ, ಬರೆಯುವದೂ ಹೀಗೆ ಆದರೆ ತಪ್ಪಲ್ಲವೆ?

ಮಹಾತ್ಮಾ ಗಾಂಧಿಯವರು ಖಾನ ಸಹೋದರರ ಜೊತೆಗೆ ‘ ಖುದಾಯೀ ಖಿದ್ಮತ್‌ಗಾರ ’ ಚಳುವಳಿಯಲ್ಲಿ ಭಾಗವಹಿಸಿದ್ದರು. ಚಳುವಳಿಯ ಪ್ರವರ್ತಕರು ಯಾವ ರೀತಿಯಲ್ಲಿ ಈ ಪದಪುಂಜವನ್ನು ಬರೆಯುತ್ತಾರೊ ಹಾಗು ಉಚ್ಚರಿಸುತ್ತಾರೊ, ಅದೇ ರೀತಿಯಲ್ಲಿ ತನ್ನ ಭಾಷೆಯಲ್ಲಿ ಬರೆಯುವದು ಹಾಗು ಉಚ್ಚರಿಸುವದು ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯ ಹೊಣೆಗಾರಿಕೆ.
ಆದರೆ, ಕನ್ನಡ ವಿಕಿಪೀಡಿಯಾದಲ್ಲಿ ‘ಖುದಾಯೀ ಖಿದ್ಮತ್‌ಗಾರ’ ಪದವು ‘ಕುದಾಯಿ ಕಿದ್ಮತ್ಗಾರ್’ ಆಗಿದೆ. ಅದರಂತೆ ‘ಝಾರಖಂಡ’ ಪದವು ‘ಜಾರ್ಕಂಡ್’ ಅಗಿತ್ತು. ಇದರ ಬರಹಗಾರರು, “ಮಹಾಪ್ರಾಣ ಉಚ್ಚಾರವು ಕನ್ನಡಕ್ಕೆ ಸಹಜವಲ್ಲವೆಂದು”, justify ಮಾಡುವರೇನೊ?

ಯಾರು ನಿಮಗೆ ಈ ತಪ್ಪು ಗ್ರಹಿಕೆಯನ್ನು ಕೊಟ್ಟವರು ಎಂದು ಕೇಳುತ್ತೇನೆ. ಇದು ನಿಜವಲ್ಲ. ಒಂದು ವೇಳೆ, ಮಹಾಪ್ರಾಣ ಪದಗಳು ಸಂಸ್ಕೃತ ಭಾಷೆಯಿಂದಲೇ ಕನ್ನಡಕ್ಕೆ ಬಂದಿದ್ದರೂ ಸಹ, ಈಗ ಅವು ಕನ್ನಡದಲ್ಲಿ ಒಂದಾಗಿ ಬೆರೆತುಕೊಂಡಿವೆ. ದೈನಂದಿನ ವ್ಯಾಪಾರದಲ್ಲಿ ಅವುಗಳನ್ನು ಬಿಡುವದು ಸಾಧ್ಯವೇ ಆಗದು. ಈ ಲೇಖನದಲ್ಲಿ ಇಲ್ಲಿಯವರೆಗೆ ೧೫೦ ಪದಗಳು ಬಂದಿವೆ. ಅವುಗಳಲ್ಲಿ ೧೨ ಪದಗಳಲ್ಲಿ ಮಹಾಪ್ರಾಣ ಅಕ್ಷರಗಳಿವೆ. ಅಂದರೆ ಶೇಕಡಾ ೮ ಪದಗಳಲ್ಲಿ ಮಹಾಪ್ರಾಣ ಅಕ್ಷರಗಳು ಬಂದಿವೆ.

ಈಗ ಒಂದು ಉದಾಹರಣೆ ಗಮನಿಸಿರಿ:
‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಘೋರ್ಪಡೆಯವರು ಶ್ರೀ ಭೀಮಣ್ಣ ಖಂಡ್ರೆಯವರ ಜೊತೆಗೆ, ಮಧ್ಯದಲ್ಲಿ ಆಸೀನರಾಗಿದ್ದಾರೆ.’
ಈ ವಾಕ್ಯವನ್ನು ‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಗೋರ್ಪಡೆಯವರು ಶ್ರೀ ಬೀಮಣ್ಣ ಕಂಡ್ರೆಯವರ ಜೊತೆಗೆ, ಮದ್ಯದಲ್ಲಿ ಆಸೀನರಾಗಿದ್ದಾರೆ. ’ ಎಂದು ಬರೆದರೆ ಹಾಗೂ ಉಚ್ಚರಿಸಿದರೆ ಸರಿಯಾಗಿರುತ್ತದೆಯೆ?

ಕನ್ನಡದಲ್ಲಿ ಮಹಾಪ್ರಾಣ ಪದಗಳೇ ಇಲ್ಲವೆಂದು ಹೇಳುವ ಕೆಲವು ಅಲ್ಪಪ್ರಾಣಿಗಳಿಗೆ ನಾವು “ ಛೀ, ಥೂ!” ಎನ್ನದೆ ಗತ್ಯಂತರವಿಲ್ಲ. ಇವೆಲ್ಲ ಸಂಸ್ಕೃತ ಪದಗಳು ಎನ್ನುವ ಇವರಿಗೆ ಸಂಸ್ಕೃತ ಹಾಗು ಕನ್ನಡ ಭಾಷೆಗಳ ಅನ್ಯೋನ್ಯ ಸಂಬಂಧವೇ ಗೊತ್ತಿಲ್ಲ. ಖಂಡಿತವಾಗಿಯೂ ಸಂಸ್ಕೃತವು ಕನ್ನಡದ ತಾಯಿಯಲ್ಲ. ಅದರೆ, ಅವುಗಳ ಸಂಬಂಧ ಸಾವಿರಾರು ವರ್ಷಗಳ ಪ್ರೇಮಿಗಳ ಸಂಬಂಧ.

ಮಹಾಪ್ರಾಣಗಳ ವಿರುದ್ಧ ಕತ್ತಿ ಮಸೆಯುತ್ತಿರುವವರಲ್ಲಿ, ಶ್ರೀ ಶಂಕರ ಭಟ್ಟರು ಮುಖ್ಯರು. “ಕನ್ನಡ ಬರಹವನ್ನು ಸರಿಪಡಿಸೋಣ” ಎನ್ನುವ ಅವರ ಪುಸ್ತಕದಲ್ಲಿ ಕನ್ನಡಿಗರು ಮಹಾಪ್ರಾಣವನ್ನು ನಿಜವಾಗಿಯೂ ಉಚ್ಚರಿಸುವದೇ ಇಲ್ಲ; ಆದರೆ ಹಾಗೆ ತಿಳಿದುಕೊಂಡಿರುತ್ತಾರೆ ಎಂದು ಬರೆದಿದ್ದಾರೆ. (ಪುಟ ೬೦ ) “ಮುಖ್ಯ ಮಂತ್ರಿ” ಎಂದು ಉಚ್ಚರಿಸುತ್ತಿದ್ದೇವೆಂದು ನಾವು ಅಂದುಕೊಂಡರೂ ಸಹ, ನಿಜವಾಗಲೂ ನಾವು ಉಚ್ಚರಿಸುತ್ತಿರುವದು “ಮುಕ್ಯ ಮಂತ್ರಿ” ಎಂದು ಇವರು ತಿಳುವಳಿಕೆ ಕೊಟ್ಟಿದ್ದಾರೆ. (ಪುಟ ೬೦ ).
ಈ ಮಾತು ಕನ್ನಡಿಗರಿಗೆ ಅವಮಾನವಲ್ಲವೆ? ಕನ್ನಡಿಗರು ಅಷ್ಟು ದಡ್ಡರೆ?

ಇದು ಒಂದು Theoryಯಾದರೆ, ಉತ್ತರ ಕರ್ನಾಟಕದ ಜನರು ಮರಾಠಿ ಭಾಷೆಯ ಪ್ರಭಾವದಿಂದಾಗಿ, ಅಲ್ಪಪ್ರಾಣಗಳನ್ನು ಮಹಾಪ್ರಾಣವಾಗಿ ಬದಲಾಯಿಸುತ್ತಾರೆ ಎನ್ನುವದು ಮತ್ತೊಂದು theory.
ಧಾರವಾಡ ಜಿಲ್ಲೆಯ ಕುಂದಗೋಳ ಊರಿನಲ್ಲಿಯೇ ಬೆಳೆದು ಈಗ ಮೈಸೂರು ಸೇರಿದ ಶ್ರೀ ರಾಜಪುರೋಹಿತ ಎನ್ನುವ ಭಾಷಾಶಾಸ್ತ್ರಜ್ಞರ ಘೋಷಣೆಯನ್ನಷ್ಟು ಗಮನಿಸಿರಿ. ಇವರ ಲೇಖನ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಘೋಷಣೆಯ implication ಹೀಗಿದೆ:
ಗಡಿಯಾರ’ ಅನ್ನುವ ಪದವನ್ನು ಉತ್ತರ ಕರ್ನಾಟಕದವರು ತಪ್ಪಾಗಿ ‘ಘಡಿಯಾರ’ ಎಂದು ಗರ್ಜಿಸಿ ಉಚ್ಚರಿಸುತ್ತಾರೆ!
ವಾಹ್ ವಾ!! ರಾಜಪುರೋಹಿತರೆ, ನಿಮ್ಮ ಭಾಷಾಪಾಂಡಿತ್ಯಕ್ಕೆ ನನ್ನ ದೀಡ ನಮಸ್ಕಾರ!
ಸಂಸ್ಕೃತದಲ್ಲಿ ‘ಘಟೀ’ ಎಂದರೆ ಸಮಯದ ಒಂದು unit. ಈ ಪದದಿಂದ ಹಿಂದಿಯಲ್ಲಿ ‘ಘಡೀ’ ಎನ್ನುವ ಪದವು ಬಂದಿದೆ. ಹಿಂದಿಯಲ್ಲಿ ‘ಯಾರ’ ಅಂದರೆ ‘ಮಿತ್ರ’ ಅನ್ನುವ ಅರ್ಥವಿದೆ. ಆದುದರಿಂದ ‘ಘಡೀಯಾರ’ ಅಂದರೆ ‘ಸಮಯ ಮಿತ್ರ’; ನಿಮಗೆ ವೇಳೆಯನ್ನು ತಿಳಿಸುವವನು. ‘ಘಡಿಯಾರ’ ಎಂದು ಸರಿಯಾಗಿ ಉಚ್ಚರಿಸುವ ಉತ್ತರ ಕರ್ನಾಟಕದವರಿಗೇ ನೀವು ತಪ್ಪಿತಸ್ಥರ ಪಟ್ಟ ಕಟ್ಟಿದಿರಲ್ಲ , ಸ್ವತಃ ಉತ್ತರ ಕರ್ನಾಟಕದ ಕುಂದಗೋಳದಲ್ಲಿ ಶಾಲೆಯನ್ನು ಕಲಿತವರಾಗಿ! ಇದಕ್ಕೆ ಅಜ್ಞಾನವೆನ್ನೋಣವೆ ಅಥವಾ ಭಾಷಾದ್ರೋಹವೆನ್ನೋಣವೆ?

ನಿಜ ಹೇಳಬೇಕೆಂದರೆ, ಮೈಸೂರು ಸಂಸ್ಥಾನವು ಅನೇಕ ವರ್ಷಗಳವರೆಗೆ ತಮಿಳು ದಿವಾನರ ಆಳಿಕೆಯಲ್ಲಿ ಇದ್ದುದರಿಂದ ಹಾಗೂ ತಮಿಳು ನಾಡಿಗೆ ಹತ್ತಿರವಾಗಿ ಇದ್ದುದರಿಂದ, ಆ ಪ್ರದೇಶದಲ್ಲಿ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನು ಉಪಯೋಗಿಸುವದು ರೂಢಿಯಾಗಿ ಬಿಟ್ಟಿದೆ. ಇದಕ್ಕೆ ಕಾರಣವೇನು? Very simple. ತಮಿಳಿನಲ್ಲಿ ಒಂದು ವರ್ಗದ ವ್ಯಂಜನಗಳಿಗೆ ಒಂದೇ ಅಕ್ಷರಸಂಕೇತ ಇರುವದರಿಂದ, ತಮಿಳಿನಲ್ಲಿ ಮಹಾಪ್ರಾಣವೇ ಇಲ್ಲ. (ಜಗಳಕ್ಕೆ ಬಂದರೆ ಮಾತ್ರ ತಮಿಳರಂತಹ ಮಹಾಪ್ರಾಣಿಗಳೇ ಇಲ್ಲವೆನ್ನಿ).

ತಮಿಳಿನಲ್ಲಿ ಕ, ಖ, ಗ, ಘ ಈ ಧ್ವನಿಗಳಿಗೆ ಒಂದೇ ಸಂಕೇತಾಕ್ಷರ. ಅದರಂತೆ ಟ, ಠ ಇತ್ಯಾದಿಗಳಿಗೆ. ಹೀಗಾಗಿ ತಮಿಳಿನಲ್ಲಿ ‘ಘೋರ್ಪಡೆ’ ‘ಕೋರ್ಪತೆ’ ಅಥವಾ ‘ಖೋರ್ಫಠೆ’ ಆಗಬಹುದು. ‘ಭಟ್ಟ’ರು ‘ಬಟ್ಟ’ರಾಗುತ್ತಾರೆ , ‘ಬತ್ತ’ರೂ ಆಗಬಹುದು. ಈ ಪ್ರಭಾವದಲ್ಲಿ ಬೆಳೆದ ಹಳೆ ಮೈಸೂರಿನಲ್ಲಿ ಸಹ ಅಲ್ಪಪ್ರಾಣದ ರೂಢಿ ಬಲವತ್ತರವಾಯಿತು. ಹಳೆ ಮೈಸೂರಿಗರು ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರನ್ನೂ ಹೀಗಳೆಯುವದು ಈ ಲೇಖನದ ಉದ್ದೇಶವಲ್ಲ. ಕನ್ನಡವನ್ನು ಸರಿಯಾಗಿ ಬರಿಯುವ ಹಾಗು ಉಚ್ಚರಿಸುವ ಉದ್ದೇಶದಿಂದ ಇದನ್ನೆಲ್ಲ ಬರೆಯುತ್ತಿದ್ದು, ಯಾರಿಗಾದರೂ ನೋವೆನಿಸುತ್ತಿದ್ದರೆ, ಈ ದಡ್ಡನನ್ನು ದಯವಿಟ್ಟು ಕ್ಷಮಿಸಿರಿ.

ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ತಪ್ಪುಗಳನ್ನು ನೋಡೋಣ, ತಿದ್ದಿಕೊಳ್ಳಲು ಮನಸ್ಸು ಮಾಡೋಣ.

ಸರಿಗನ್ನಡಮ್ ಗೆಲ್ಗೆ!

19 comments:

Harisha - ಹರೀಶ said...

ಸುನಾಥರೆ, ನನ್ನ ಅಭಿಪ್ರಾಯವೂ ನಿಮ್ಮದರಂತೆಯೇ ಇದೆ. ಹೀಗೆಯೇ ಬಿಟ್ಟರೆ ಕನ್ನಡ ಉಳಿಯುವುದಿಲ್ಲ... ಈಗ ಮಹಾಪ್ರಾಣ ಉಪಯೋಗಿಸುವುದಿಲ್ಲ, ಬೇಡ ಎನ್ನುತ್ತಿರುವವರು ಇನ್ನೂ ಸ್ವಲ್ಪ ದಿನ ಹೋದರೆ ಒತ್ತಕ್ಷರಗಳೂ ಬೇಡ ಎನ್ನಬಹುದು. "ಕನ್ನಡ" ಎನ್ನುವವರಿಗಿಂತ "ಕನಡಾ" ಎನ್ನುವವರೇ ಹೆಚ್ಚಿಗೆ ಇದ್ದಾರಲ್ಲ?!

sunaath said...

ಹರೀಶ,
ನಿಮ್ಮ blogನಲ್ಲಿಯ ಲೇಖನ ಓದಿದೆ. ಕನ್ನಡವನ್ನು ಹಾಳು ಮಾಡಲು ಎಂಥಾ concerted efforts ನಡೀತಾ ಇವೆ ಅನ್ನೋದು ಗೊತ್ತಾಯ್ತು.ಇದನ್ನು ವಿರೋಧಿಸುವದು ಅತಿ ಜರೂರಿನ ಕೆಲಸ.
ಶಂಕರ ಭಟ್ಟರ ಪುಸ್ತಕವನ್ನು ಓದಿದ ಮೇಲೆ, ನನ್ನ ತಲೆ ಚಿಟ್ಟು ಹಿಡಿದು ಹೋಗಿತ್ತು.
ಇದಿಗ "ಶಂಕರ ಭಟ್ಟ ಹಾಗು ಕಿ.ರಂ.ನಾಗರಾಜರಿಂದ ಕನ್ನಡ ಉಳಿಸಿ" ಅನ್ನುವ ಚಳುವಳಿ ಪ್ರಾರಂಭಿಸುವದು ಅವಶ್ಯ ಎಂದು ತೋರುತ್ತದೆ.

ಅಂತರ್ವಾಣಿ said...

sunaath avare,
nimma ee lEkhana chennaagide. mundina lEkhanada nireekSheyalli....

hamsanandi said...

ಸುನಾಥರೆ,

ನೀವು ಹೀಗಂದಿರಿ:
[quote] ನಿಜ ಹೇಳಬೇಕೆಂದರೆ, ಮೈಸೂರು ಸಂಸ್ಥಾನವು ಅನೇಕ ವರ್ಷಗಳವರೆಗೆ ತಮಿಳು ದಿವಾನರ ಆಳಿಕೆಯಲ್ಲಿ ಇದ್ದುದರಿಂದ ಹಾಗೂ ತಮಿಳು ನಾಡಿಗೆ ಹತ್ತಿರವಾಗಿ ಇದ್ದುದರಿಂದ, ಆ ಪ್ರದೇಶದಲ್ಲಿ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನು ಉಪಯೋಗಿಸುವದು ರೂಢಿಯಾಗಿ ಬಿಟ್ಟಿದೆ. ಇದಕ್ಕೆ ಕಾರಣವೇನು? Very simple. ತಮಿಳಿನಲ್ಲಿ ಒಂದು ವರ್ಗದ ವ್ಯಂಜನಗಳಿಗೆ ಒಂದೇ ಅಕ್ಷರಸಂಕೇತ ಇರುವದರಿಂದ, ತಮಿಳಿನಲ್ಲಿ ಮಹಾಪ್ರಾಣವೇ ಇಲ್ಲ.

ತಮಿಳಿನಲ್ಲಿ ಕ, ಖ, ಗ, ಘ ಈ ಧ್ವನಿಗಳಿಗೆ ಒಂದೇ ಸಂಕೇತಾಕ್ಷರ. ಅದರಂತೆ ಟ, ಠ ಇತ್ಯಾದಿಗಳಿಗೆ. ಹೀಗಾಗಿ ತಮಿಳಿನಲ್ಲಿ ‘ಘೋರ್ಪಡೆ’ ‘ಕೋರ್ಪತೆ’ ಅಥವಾ ‘ಖೋರ್ಫಠೆ’ ಆಗಬಹುದು. ‘ಭಟ್ಟ’ರು ‘ಬಟ್ಟ’ರಾಗುತ್ತಾರೆ , ‘ಬತ್ತ’ರೂ ಆಗಬಹುದು. ಈ ಪ್ರಭಾವದಲ್ಲಿ ಬೆಳೆದ ಹಳೆ ಮೈಸೂರಿನಲ್ಲಿ ಸಹ ಅಲ್ಪಪ್ರಾಣದ ರೂಢಿ ಬಲವತ್ತರವಾಯಿತು

[/quote]

ನೀವು ಹೇಳಿದ್ದು ಪೂರ್ತಿ ಸರಿಯಿಲ್ಲ.

೧. ಹಳೆಯ ಮೈಸೂರಿನಲ್ಲಿ ತಮಿಳಿನ ಪ್ರಭಾವದಿಂದ ಮಹಾಪ್ರಾಣಗಳು ಹೊರಟುಹೋಗಿವೆ ಅನ್ನುವುದು ನನಗೆ ಅಷ್ಟು ಸರಿ ಕಾಣುತ್ತಿಲ್ಲ. ತಮಿಳನ್ನೂ ಚೆನ್ನಾಗಿ ಬಲ್ಲ ಕಾರಣ ನಾನು ಈ ಮಾತನ್ನು ಹೇಳುವೆ. ಇದಕ್ಕೆ ಇನ್ನೂ ಆಧಾರಗಳನ್ನು ಕೊಡಲು ಸ್ವಲ್ಪ ಯೋಚಿಸಿ ಬರೆಯಬೇಕಾಗುತ್ತೆ.

೨. ತಮಿಳಿನಲ್ಲಿ, ಕ-ಖ-ಗ-ಘ ಗಳಿಗೆ ಒಂದೇ ಸಂಕೇತ ಅಲ್ಲ - ಮೂಲ ತಮಿಳಿನ ಪದಗಳಲ್ಲಿ ಕ-ಗ ಗಳು ಮಾತ್ರ ಬರಬಹುದು. ಹಾಗಾಗಿ ಕ-ಗ ಗಳಿಗೆ ಒಂದು ಸಂಕೇತ ಅನ್ನುವುದು ಹೆಚ್ಚು ಸರಿಯಾದ್ದು. ಬೇರೆ ಭಾಷೆಯ ಪದಗಳಲ್ಲಿ ಬರುವ ಖ, ಘ ಗಳನ್ನೂ ಅವರು ಇದೇ ಅಕ್ಷರದಿಂದ ಸೂಚಿಸುತ್ತಾರೆ ಅನ್ನುವುದು, ನಂತರ ಅವರು ಇರುವ ಲಿಪಿಯನ್ನೇ ಅಳವಡಿಸಿಕೊಂಡಿರುವುದರ ಪರಿಣಾಮ.

೩. ಒಟ್ಟಿನಲ್ಲಿ, ಲಿಪಿಯಲ್ಲಿ ಮಹಾಪ್ರಾಣವಿಲ್ಲ ಅನ್ನುವ ಕಾರಣಕ್ಕೆ ತಮಿಳಿನಲ್ಲಿ ಮಹಾಪ್ರಾಣ ಶಬ್ದಗಳಿಲ್ಲದೇ ಹೋಗಿಲ್ಲ. ಭಾಷೆಯಲ್ಲಿ ಆ ಶಬ್ದಗಳು ಇಲ್ಲದೆ ಹೋಗಿರುವುದರಿಂದ (ಅಥವ ಬಹಳ ಕಡಿಮೆ ಬರುವುದರಿಂದ) ಲಿಪಿಯಲ್ಲಿ ಅದನ್ನು ಅವರು ಸೇರಿಸಿಕೊಂಡಿಲ್ಲ ಎನ್ನಬಹುದು - ಏಕೆಂದರೆ ಲಿಪಿಯಲ್ಲಿ ಇಲ್ಲದೇ ಇರುವುದರಿಂದ ಶಬ್ದವಿಲ್ಲ ಅನ್ನುವುದಾದರೆ, ಎಲ್ಲ ಮಹಾಪ್ರಾಣಗಳನ್ನು ಬರೆಯುವ ಕನ್ನಡಿಗರೂ ಉಚ್ಚಾರದಲ್ಲಿ ಕೆಲವೊಮ್ಮೆ ತಪ್ಪುವುದನ್ನು ವಿವರಿಸಲು ಸಾಧ್ಯವಿಲ್ಲ.ಅಲ್ಲವೇ?

೪. ಮತ್ತೆ ಒಂದು ಪದವನ್ನು ಹಲವು ಬಗೆಯಲ್ಲಿ (ಉದಾ: ಕಾಂತಿ ಎನ್ನುವ ಪದವನ್ನು "ಕಾಂತಿ" "ಗಾಂದಿ" "ಗಾಂಧಿ" "ಘಾಂದಿ", "ಘಾಂಧಿ" ಎಂದು ಬಗೆಬಗೆಯಾಗಿ ಓದಬಹುದು ಎಂದು ಕೆಲವರು ಅರ್ಥಮಾಡಿಕೊಳ್ಳುವರಾದರೂ, ಇದು ಬಹುಮಟ್ಟಿಗೆ ತಪ್ಪು ಅಭಿಪ್ರಾಯ. ಏಕೆಂದರೆ, ಪದದ ಮೊದಲೂ, ನಡುವೆಯೂ ಕೆಲವು ಅಕ್ಷರಗಳು (ತಮಿಳು ಭಾಷೆಯ) ನಿಯಮಗಳ ಪ್ರಕಾರ ಬರುವುದಿಲ್ಲ. ಹಾಗಾಗಿ, ಕಾಂತಿ ಎನ್ನುವ ಪದವನ್ನು ಕಾಂದಿ, ಗಾಂದಿ ಈ ಎರಡು ಬಗೆಯಲ್ಲಿ ಮಾತ್ರ ಓದಬಹುದು.ಅದೂ ಕಾಂದಿ ಎನ್ನುವ ಪದಕ್ಕೆ ಅರ್ಥವಿಲ್ಲದೇ ಇರುವಾಗ, ಮತ್ತು ಗಾಂಧಿ ಎನ್ನುವ ಹೆಸರು ಅರಿತ ತಮಿಳರೆಲ್ಲಾ ಇದನ್ನು ಗಾಂದಿ ಎಂದೇ ಓದುವರು. ಕಾಂತಿ ಎಂಬ ಉಚ್ಚಾರವೇ ಬೇಕಿದ್ದಾಗ ಅದನ್ನು ಕಾಂತ್ತಿ ಎಂದು ಬರೆಯುವರು.

ಕೊನೆಯ ಕೊಸರು: ಗಾಂದಿಯ ಮಹಿಮೆಯಿಂದ, ಹಲವು ಸ್ತ್ರೀಯರು "ಗಾಂದಿಮದಿ"ಯರಾಗಿದ್ದಾರೆ, ಮತ್ತೆ ಮುಂಬಯಿಯಲ್ಲಿ "ಗಾಂದಿವಿಲಿ" ಅನ್ನುವ ಬಡಾವಣೆ ಇದೆ ತಮಿಳು ಭಾಷಿಕರ ಬಾಯಲ್ಲಿ ಅನ್ನುವುದು ಮಾತ್ರ ಸತ್ಯ :)

ಸುಪ್ತದೀಪ್ತಿ suptadeepti said...

ಈ ಅಲ್ಪಪ್ರಾಣ-ಮಹಾಪ್ರಾಣ ಗೊಂದಲ ಬಹಳವೇ ಹೆಚ್ಚಾಗಿದೆ. ಅದರಲ್ಲೂ ಕೀಲಿಮಣೆ ಕುಟ್ಟಲು ಶುರುಮಾಡಿ ಇನ್ನೂ ಹೆಚ್ಚಿದೆ (ಮೊದಲಾದರೆ ಬೆರಳುಗಳಿಗೇ ನೆನಪಿನ ಶಕ್ತಿಯಿತ್ತು, ವಿಚಿತ್ರ ಆದರೂ ನಿಜ).

Anonymous said...

ಮಹಾಪ್ರಾಣಗಳನ್ನು ಉಚ್ಚರಿಸಲು ಅಸಮರ್ಥರಾಗಿರುವ "ಅಲ್ಪ"ರು "ಕನ್ನಡದಲ್ಲಿ ಮಹಾಪ್ರಾಣಗಳೇ ಇಲ್ಲ, ಅವು ಸಂಸ್ಕೃತದಿಂದ ಎರವಲಾಗಿ ಬಂದದ್ದು " ಎಂಬ ಸುಳ್ಳು ವಾದವನ್ನು ಮುಂದಿಟ್ಟಿದ್ದಾರೆ. ಕನ್ನಡದ ಆದಿಗ್ರಂಥವೆನ್ನಿಸಿಕೊಳ್ಳುವ "ಕವಿರಾಜಮಾರ್ಗ"ದಲ್ಲಿಯೂ ಮಹಾಪ್ರಾಣದ ಶಬ್ದಗಳಿವೆ.ಅಥವಾ "ಶಬ್ದಮಣಿದರ್ಪಣ"ವನ್ನೂ ನೋಡಬಹುದು.

sunaath said...

ಹಂಸಾನಂದಿಯವರೆ,
ತಮಿಳು ಲಿಪಿ ಹಾಗು ಭಾಷೆಯ ಬಗೆಗೆ ಹೆಚ್ಚಿನ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ಒಂದು ವಿಷಯವೆಂದರೆ, ಕೆಲವೊಂದು ಪದಗಳನ್ನು ತಿಳಿಯಲಾದರೂ ಸಂದರ್ಭಕ್ಕೆ ಮೊರೆ ಹೋಗಬೇಕಾಗುತ್ತದೆ ಹಾಗು ಕೆಲವೊಂದು ಪದಗಳು ತಿಳಿಯದೇ ಹೋಗಬಹುದು.
ಎರಡನೆಯದಾಗಿ, ತಮಿಳು ಲಿಪಿ inadequate ಇರಬಹುದು.ಆದರೆ ತಮಿಳು ಸಾಹಿತ್ಯ ಶ್ರೇಷ್ಠ ಸಾಹಿತ್ಯವೇ ಇದೆ.
ಇದು ಯಾವುದೇ ಭಾಷೆಗೂ apply ಆಗುವಂತಹ ಮಾತು.
ಯಾವುದೇ

sunaath said...

ಅಂತರ್ವಾಣಿಯವರೆ,
ಶಂಕರ ಭಟ್ಟರ ಪುಸ್ತಕವನ್ನು ಮತ್ತೆ ಓದುತ್ತಿರುವೆ.ಅದರ ಬಗೆಗೆ
ಬರೆಯುವೆ.

sunaath said...

ಜ್ಯೋತಿ,
ಕೀಲಿ ಕುಟ್ಟುವಾಗ ಎಷ್ಟೊ ಸಲ ನನ್ನ ಮಹಾಪ್ರಾಣ ಹಾರಿ ಹೋಗಿ
ಅಲ್ಪಪ್ರಾಣವಾದದ್ದಿದೆ!
-ಕಾಕಾ

sunaath said...

ಗೀತಾ,
'ಅಲ್ಪ'ರ ಊಳುವಿಕೆ ಎನ್ನೋಣವೆ?

ಸುನಿಲ್ ಜಯಪ್ರಕಾಶ್ said...

ಸುನಾಥರೆ, ಚರ್ಚೆಯಲ್ಲಿ ಉಪಯುಕ್ತ ವಿಷಯಗಳಿವೆಯಾದರೂ ಕೆಲವೊಂದು ವಿಚಾರಗಳಲ್ಲಿ ಸ್ಪಷ್ಟತೆ ಸಿಗುತ್ತಿಲ್ಲ. ನೀವು ನೀಡಬೇಕೆಂದಿರುವ ಮತ್ತಷ್ಟು ಲೇಖನಗಳಲ್ಲಿ ದಯವಿಟ್ಟು ಇವುಗಳನ್ನು ಮನದಲ್ಲಿಟ್ಟುಕೊಂಡಿರಿ. ಇವೆರಡನ್ನು ಕೋರಿಕೆ ಎಂಬುದಾಗಿ ತೆಗೆದುಕೊಳ್ಳಿ.

೧. ಕನ್ನಡದ ನೆಲೆಗಟ್ಟನ್ನು ಆದಷ್ಟು ಹೆಚ್ಚಾಗಿ ಕನ್ನಡದಲ್ಲಿಯೇ ಹೇಳಿ. ಅಂದರೆ, ಅಲ್ಲಲ್ಲಿ ತಮಿಳಿಗೆ ಕಂಪೇರ್ ಮಾಡಿಕೊಂಡು ಉದಾಹರಣೆಗಳನ್ನು ನೀಡುವುದು ಸಮಂಜಸವಲ್ಲ. ಕನ್ನಡಿಗರಾಗಿ ನಾವು, "ತಮಿಳಲ್ಲಿ ಅದಿಲ್ಲ, ಇದಿಲ್ಲ, ಅವರು ಅದನ್ನು ಹಾಗೆ ಓದ್ತಾರೆ, ಇದನ್ನು ಹೀಗೆ ಓದ್ತಾರೆ" ಎಂದುಕೊಳ್ಳೋದು ಸರಿಯಲ್ಲ. ಏಕೆಂದರೆ ಒಬ್ಬ ತಮಿಳಿಗನಿಗೆ ಯಾವಾಗ, ಕ ಓದಿಕೊಳ್ಳಬೇಕು, ಯಾವಾಗ ಗ ಓದಿಕೊಳ್ಳಬೇಕು ಎಂಬುದು ತಿಳಿದಿದೆ.
೨. ಮತ್ತೊಂದು ನೀವು ನೀಡುತ್ತಿರುವ ಉದಾಹರಣೆಗಳು. ಇಲ್ಲಿ ಗಮನಿಸಿ. ನೀವು ನೀಡಿದ ಒಂದು ಬಳಕೆ.

"ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಘೋರ್ಪಡೆಯವರು ಶ್ರೀ ಭೀಮಣ್ಣ ಖಂಡ್ರೆಯವರ ಜೊತೆಗೆ, ಮಧ್ಯದಲ್ಲಿ ಆಸೀನರಾಗಿದ್ದಾರೆ.’"

ಇದನ್ನು ಈ ರೀತಿ ಬರೆದರೆ ಅಭಾಸವಾಗುತ್ತದೆ ಎಂದು ಹೇಳಿದಿರಷ್ಟೇ.

‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಗೋರ್ಪಡೆಯವರು ಶ್ರೀ ಬೀಮಣ್ಣ ಕಂಡ್ರೆಯವರ ಜೊತೆಗೆ, ಮದ್ಯದಲ್ಲಿ ಆಸೀನರಾಗಿದ್ದಾರೆ. ’

ಆದರೆ ಅಲ್ಲಿ, ನೀವು ಮರೆತದ್ದು. ಮೇಲಿನ ವಾಕ್ಯವನ್ನು ‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಗೋರ್ಪಡೆಯವರು ಶ್ರೀ ಬೀಮಣ್ಣ ಕಂಡ್ರೆಯವರ ಸಂಗಡ, ನಡುವಿನಲ್ಲಿ ಕುಳಿತಿದ್ದಾರೆ’ ಎಂದೂ ಕೂಡ ಹೇಳಬಹುದು. ಯಾವುದೇ ಅಭಾಸ(=ಮುಜುಗರ)ಕ್ಕೆಡೆಮಾಡಗೊಡದೆ.

ಶಂಕರಭಟ್ಟರು ತಮ್ಮ ಪುಸ್ತಕಗಳಲ್ಲಿ, ಸಾವಿರಾರು ವರ್ಷಗಳಿಂದ ಇರುವ ಮಹಾಪ್ರಾಣವನ್ನು ಕಿತ್ತುಹಾಕುವುದು ಸಮಂಜಸವಲ್ಲ ಎಂತಲೂ ಹೇಳಿದ್ದಾರೆ!!! ಬೇಕಿದ್ದರೆ ಅವರ ಪುಸ್ತಕಗಳನ್ನು ಪೂರ್ತಿಯಾಗಿ ಓದಿ. ಆದರೆ ಅವರು ಹೇಳಿರುವುದು,
೧. ಕನ್ನಡದ ಪದಗಳನ್ನು ಮುಂದೆತರೋಣ. ಈಗ ನೀವೇ ನೋಡಿದಂತೆ "ಮಧ್ಯದಲ್ಲಿ - ನಡುವೆ".
೨. ಕನ್ನಡದ ಪದಗಳನ್ನು ಬಳಸುವಾಗ ಇರಬಹುದಾದ ಮುಜುಗರವನ್ನು ಮೀರಿನಿಲ್ಲೋಣ. ನಿತಂಬ - ಕುಂಡಿ. ಈ ರೀತಿಯಾದವು. ಮನೆ - ಗೃಹ.
೩. ಪರಭಾಷೆಯ ಪದಗಳನ್ನು ಬಳಸುವಾಗ, ಮೂಲರೂಪಕ್ಕಿಂತ ತದ್ಭವಗಳು "ಕನ್ನಡ ಸೊಗಡಿಗೆ ಹೊಂದಿಕೊಳ್ಳುವಂತಿದ್ದರೆ", ತದ್ಭವಗಳನ್ನು ಬಳಸೋಣ. ತಟಸ್ಥ - ತಟಸ್ತ, ಛತ್ರ - ಚತ್ರ, ಈ ರೀತಿ.
೪. ಹೊಸ ಪದಗಳನ್ನು ಹುಟ್ಟಿಸಬೇಕಾದ ಸಂದರ್ಭದಲ್ಲಿ ಹೆಚ್ಚು ಕನ್ನಡದ ಪದಗಳನ್ನು ಮುಂದೆತರೋಣ. (ಹಳೆಗನ್ನಡದಲ್ಲಿ ಅನೇಕ ಧಾತುಗಳು ಸಿಕ್ಕುತ್ತವೆ).
ಕುಕ್ಕುಟ-ಉದ್ಯಮ(ಇದು ಯಾವ ಸೀಮೆ ಕನ್ನಡ ಹೇಳಿ ನೋಡೋಣ. ಯಾರಿಗೂ ಅರ್ಥವಾಗದು).

"ಅಲ್ಪಪ್ರಾಣ ಮಹಾಪ್ರಾಣಗಳು" ಶಂಕರಭಟ್ಟರು ಹೇಳಹೊರಟ ವಿಷಯಗಳ ನಡುವೆ ಪ್ರಾಸ್ತಾವಿಕವಾಗಿ ಸಿಗುತ್ತವೆಯೇ ಹೊರತು ಅದೇ ಪ್ರಮುಖ ಸ್ಥಾನವನ್ನು ಪಡೆದಿಲ್ಲ.

ಸುನಿಲ್ ಜಯಪ್ರಕಾಶ್ said...

ಗೀತಾ ಮತ್ತು ಸುನಾಥ, ದಯವಿಟ್ಟು, ಈ ಶಾಸ್ತ್ರೀಯವಾದ ವಿಷಯದಲ್ಲಿ, ವ್ಯಕ್ತಿಗತವಾಗಿ ಚರ್ಚೆ ಮಾಡೋದು ಬೇಡ. ಶಂಕರಭಟ್ಟರಾಗಲೀ (ಹಾಗೆ ಹಿಂದೆ ಹೋದರೆ ಬಿ.ಎಂ.ಶ್ರೀಯವರಾಗಲೀ) ಭಾವುಕತೆಯಿಂದ ಪುಸ್ತಕಗಳನ್ನು ಬರೆದಿಲ್ಲ ಎಂಬುದನ್ನು ನೆನಪಿಡಿ.

ನೋಡಿ ಈ ರೀತಿಯ ಕಾಮೆಂಟುಗಳು, ಚರ್ಚೆಯ ಹಾದಿಯನ್ನು ತಪ್ಪಿಸುತ್ತದೆ.
>> ಮಹಾಪ್ರಾಣಗಳನ್ನು ಉಚ್ಚರಿಸಲು ಅಸಮರ್ಥರಾಗಿರುವ "ಅಲ್ಪ"ರು ....
>> 'ಅಲ್ಪ'ರ ಊಳುವಿಕೆ ಎನ್ನೋಣವೆ?

sunaath said...

joey,
ನಿಮ್ಮ ಹೇಳಿಕೆಯನ್ನು ಒಪ್ಪಿಕೊಳ್ಳಿತ್ತೇನೆ ಹಾಗು ಸ್ವಾಗತಿಸುತ್ತೇನೆ.
ಮೊದಲನೆಯದಾಗಿ ವ್ಯಕ್ತಿಗತ ಟೀಕೆ ಮಾಡಕೂಡದು ಎನ್ನುವದು.
ನನ್ನ ಹಾಗು ಗೀತಾ ಅವರ ವ್ಯಕ್ತಿಗತ ಟೀಕೆ ಕೇವಲ ಒಂದು point
ಅನ್ನು highlight ಮಾಡುವ ಸಲುವಾಗಿ ಮಾಡಿದ ಟೀಕೆಯೇ ಹೊರತು, ಕುಹಕ ಬುದ್ಧಿಯ ಟೀಕೆ ಅಲ್ಲವೆಂದು ನಿಮ್ಮ
ಎದುರಿಗೆ ಇಡಬಯಸುತ್ತೇನೆ. ಏನೆ ಆಗಲಿ, I shall refrain.
ಎರಡನೆಯದಾಗಿ, ಕನ್ನಡ ಭಾಷೆಯ ವಾಕ್ಯಗಳನ್ನು ತಮಿಳು ಲಿಪಿಯಲ್ಲಿ ಬರೆದರೆ ಹೇಗಿರುತ್ತದೆ ಎಂದು ನಾನು ಕೊಡುತ್ತಿರುವ
ಹೋಲಿಕೆ. ತಮಿಳಿನ ಲಿಪಿದೌರ್ಬಲ್ಯವನ್ನು ಉದಾಹರಿಸಬೇಕೆಂದರೆ,ನನಗೆ ತಮಿಳು ಬರುವದಿಲ್ಲ. ಹೀಗಾಗಿ ಸುತ್ತುಬಳಸಿನ ದಾರಿಯನ್ನು ಹಿಡಿಯಬೇಕಾಯಿತು. ದಯವಿಟ್ಟು ಕ್ಷಮಿಸಿ.
ಮೂರನೆಯದಾಗಿ ಸಾಧ್ಯವಾದಷ್ಟು ಕನ್ನಡದ್ದೇ ಪದಗಳನ್ನು
ಉಪಯೋಗಿಸಬೇಕು ಅನ್ನುವದಕ್ಕೆ ನಾನು ಸಹಮತನೇ ಆಗಿದ್ದೇನೆ.
Openminded ವಿಮರ್ಶೆಗಾಗಿ ಧನ್ಯವಾದಗಳು.

Anonymous said...

"ಹಲ್ಪಪ್ರಾಣ" ಕ್ರಾಂತಿಯಿಂದಾಗಿ ಕನ್ನಡ ಸೊರಗುತ್ತಿದೆ. ಇದರ ಬಗ್ಗೆ ಒಂದು ಸಂದರ್ಭೋಚಿತ, ಸೂಕ್ತ ಲೇಖನ.
ಧನ್ಯವಾದಗಳು.

ನನ್ನ ಬ್ಲಾಗನ್ನ ಭೇಟಿ ಮಾಡಿದಕ್ಕೆ ಧನ್ಯವಾದಗಳು. ಬ್ಲಾಗು ಪಟ್ಟಿ ಮಾಡಿದಲ್ಲಿ ನನ್ನ ಬ್ಲಾಗನ್ನೂ ಸೇರಿಸಿಕೊಳ್ಳಿ.

:-)
ಗಣೇಶ್.ಕೆ

Anonymous said...

ಮಾನ್ಯ ಸುನಾತರೆ,
ಕನ್ನಡದಲ್ಲಿ ಮಹಾಪಿರಾಣ ಇಲ್ಲ. ನೀವು ದಾರವಾಡದವರು ಕೂಡ 'ಬೆಟ್ಟಿ' ಅನ್ನುತ್ತೀರೆ ಹೊರತು 'ಭೇಟಿ'(ಹಿಂದಿಯಲ್ಲಿ ಭೇಂಟ್) ಅನ್ನುವುದಿಲ್ಲ.

ಬರೀ ಸಕ್ಕದದ ಮೇಣ್(ಅತವ) ಮರಾಟಿ ಪರಿಸರದಲ್ಲಿ ಬೆಳೆದಿರುವ/ಓದಿರುವ ಬಡಗು-ಕನ್ನಡ ಮಂದಿ ಮಹಾಪ್ರಾಣ ಉಲಿಯಬಲ್ಲರು. ಇವರ ಅಂಕೆ ತುಂಬ ಕಡಿಮೆ.

ಅಶ್ಟೇ ಏಕೆ ಬಡಗು-ಕನ್ನಡ ಮಂದಿ 'ಎಶ್ಟು' ಅನ್ನುವುದಕ್ಕೆ 'ಏಸು'/'ಏಸ್' ಅನ್ನುತ್ತಾರೆ. ಇದು ನಾನು ನನ್ನ ಕಿವಿಯಾರೆ ರೋಣದಲ್ಲಿ ಮಂಡಕ್ಕಿ ಕೊಳ್ಳುವಾಗ ಕೇಳಿದ್ದೇನೆ.

ಮಹಾಪ್ರಾಣಕ್ಕೆ ಹೋದ್ರಿ ನಮ್ಮಲ್ಲಿ (ಬಡಗು-ಕನ್ನಡಿಗರು ಕೂಡ) 'ಶ' ಕೂಡ ಉಲಿಯಲ್ಲ.

ಇವೆಲ್ಲವುದರ ಬಗ್ಗೆ ಕೀಳಿರಿಮೆ ಪಡುವುದು ಬೇಕಾಗಿಲ್ಲ. ಇವು ನಮ್ಮ ಕನ್ನಡ ಬುಡುಕಟ್ಟಿನ ಗುರುತುಗಳು(ethnic identities).

ನಮ್ಮ ಕನ್ನಡದ್ದೇ ಆದ ಉಲಿಯುವಿಕೆಯ ಬಗ್ಗೆ ಹೆಮ್ಮೆ ಪಡೋಣ.
ನಮ್ಮ ತೆಂಕು-ಕನ್ನಡ ನಾಡಿನ ಈ ಮಹಾಪ್ರಾಣದಿಂದ ತುಂಬ ಎಡವಟ್ಟಾಗುತ್ತಿದೆ.
ಶುಭಾಷಯ, ಹಾರ್ಧಿಕ ಎಂಬ ಕಡೆ ಮಾಪ್ರಾಣ ಇಲ್ಲದೇ ಇರುವ ಕಡೆ ಮಾಪ್ರಾಣ ಹಾಕಿ ಬರೆಯಲಾಗುತ್ತಿದೆ. ಯಾಕಂದ್ರೆ ನಮ್ಮ ಕಡೆ ಅಲ್ಪ ಪ್ರಾಣ ಮಹಾಪ್ರಾಣ ಉಲಿಯುವಿಕೆಯಲ್ಲಿ ಯಾವ ಬೇರೆತನವಿಲ್ಲ.

Karthik Kamanna said...

'ಕನ್ನಡ'ವನ್ನು ಹೀಗಳೆಯುವ 'ದುರಭಿಮಾನಿ' ತಮಿಳರ ಕುಹಕಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ಕೊಡಲೋಸುಗ ನಾನು ಸ್ವಪ್ರಯತ್ನದಿಂದ ತಮಿಳು ಕಲಿತೆ. ನಂತರ ನನಗೆ ಅರಿವಾದ ವಿಚಾರವೆಂದರೆ 'ಕನ್ನಡ ಸುಲಿದ ಬಾಳೆಯಹಣ್ಣೇ ಸರಿ'!

'ಕೃಷ್ಣ' ಎನ್ನುವುದನ್ನು ತಮಿಳಿನಲ್ಲಿ ಹೀಗೆ ಬರೆಯಬೇಕಾಗುತ್ತದೆ - 'ಕಿರುಷ್-ಣ'!
'ಗುರುಪ್ರಕಾಶ್' ಅಥವಾ 'ಗುರುಪ್ರಸಾದ್' - 'ಗುರುಪಿರಕಾಶ್' - 'ಗುರುಪಿರಸಾದ್' (ತಮಿಳಿನಲ್ಲಿ ಕ-ಗ ಅಕ್ಷರಗಳೆರಡೂ ಒಂದೇ ಆದ್ದರಿಂದ, 'ಕುರುಪಿರಕಾಶ್-ಕುರುಪಿರಸಾದ್' ಆದರೂ ಆಶ್ಚರ್ಯವೇನಿಲ್ಲ.)
'ಹರಿಹರ' - 'ಗರಿಗರ' (ಕ-ಗ-ಹ ಎಲ್ಲಕ್ಕೂ ಒಂದೇ ಅಕ್ಷರ ಉಪಯೋಗಕ್ಕೆ ಬರುತ್ತದೆ, 'ಹ' ಅಕ್ಷರ ಇದ್ದರೂ ಕೂಡ)
'ಕಪಾಲಿ' - 'ಕಬಾಲಿ'

ತಮಿಳು ತಾಯ್ನುಡಿಯ ಕರ್ಣಾಟಕ ಸಂಗೀತಗಾರರೊಬ್ಬರ ಕಚೇರಿಯಲ್ಲೊಮ್ಮೆ ಹೀಗೆ ಕೇಳಬೇಕಾಗಿ ಬಂದದ್ದು ನನ್ನ ದುರ್ದೈವವೇ ಸರಿ - "ಬಿಬರೇ ರಾಮರಸಮ್, ರಸನೇ, ಬಿಬರೇ ರಾಮರಸಮ್..ಜನನ ಮರಣ ಬಯ ತೋಸ ವಿತೂರಮ್.." (ಪಿಬರೇ ರಾಮ ರಸಮ್, ರಸನೇ ಪಿಬರೇ ರಾಮ ರಸಮ್, ಜನನ ಮರಣ ಭಯ ದೋಷ ವಿದೂರಮ್..), "ಜಕತೋದ್ದಾರನ..ಜಗತೋ ಉದ್ದಾರನ..ಮಕುಕಳ.."!
ಸಂಗೀತಕ್ಕೆ ನುಡಿಯ ಕಟ್ಟಳೆಯಿಲ್ಲದಿರಬಹುದು, ಆದರೆ, ಹಾಡುಗಾರ ಜಾಗರೂಕತೆಯಿಂದ ಸಾಹಿತ್ಯ ಅಭ್ಯಾಸ ಮಾಡುವುದು ಕೃತಿ ರಚನೆ ಮಾಡಿದವರಿಗೆ ತೋರುವ ಕನಿಷ್ಠ ಗೌರವ ಅಲ್ಲವೇ!

ಹೇಳಿದ್ದನ್ನು ಯಥಾವತ್ತಾಗಿ ಬರೆಯುವ, ಬರೆದದ್ದನ್ನು ಯಥಾವತ್ತಾಗಿ ಓದುವ ಗುಣವಿರುವ ಕನ್ನಡ ಅದ್ಭುತ ನುಡಿ!

sunaath said...

ಕಾರ್ತೀಕರೆ,
ಗೋಕರ್ಣದ ಗಣಪತಿಯು ತಮಿಳಿನಲ್ಲಿ ಕೋಗರ್ಣದ ಕಣಪದಿಯಾಗುತ್ತಾನೆ! ಕನ್ನಡವೂ ಈ ಹಾದಿಯನ್ನು ಹಿಡಿಯದಿದ್ದರೆ ಸಾಕು.

Unknown said...

ಶಂಕರ ಭಟ್ಟರು ತಮ್ಮ
ಹೆಸರಿನಲ್ಲಿರುವ ಮಹಾ ಪ್ರಾಣವನ್ನೂ ಕೆಡಿಸಿ, ಕನ್ನಡದ ಸಹಜತೆಯನ್ನು ಹಾಳು ಮಾಡುತ್ತಿದ್ದಾರೆ. ಕನ್ನಡದಲ್ಲಿ ಮಹಾಪ್ರಾಣಗಳು ಸಹಜವಾಗಿ, "ನಿಜೋಜ್ವಳಮಾಗಿವೆ" ಎಂದು ಕೇಶಿರಾಜನೇ ಘಂಟಾ ಘೋಷವಾಗಿ ಹೇಳಿದ್ದಾನೆ.

sunaath said...

ಕೇಶಿರಾಜನನ್ನು ಉದ್ಧರಿಸಿದ್ದಕ್ಕಾಗಿ ಧನ್ಯವಾದಗಳು, Unknownರೆ!